ಮಹಿಳಾ ‘ಅಭಿವೃದ್ಧಿ’ ಮತ್ತು ‘ಸಬಲೀಕರಣ’ದ ಪ್ರಶ್ನೆಗಳು -ಎಚ್.ಡಿ.ಪ್ರಶಾಂತ್
‘ಅಭಿವೃದ್ಧಿ’ ಮಹಿಳೆಯರನ್ನು ನೋಡುತ್ತಿರುವ ಕ್ರಮಗಳನ್ನು ಅರ್ಥಮಾಡಿಕೊಳ್ಳುವುದು ಈ ಲೇಖನದ ಆಶಯ. ವಿಶ್ವದಲ್ಲೆಡೆ ‘ಅಭಿವೃದ್ಧಿ ಪರಿಕಲ್ಪನೆ ಕುರಿತು ಕಳೆದೆಂಟು ದಶಕಗಳಿಂದ ಅವ್ಯಾಹತವಾಗಿ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಈ ಪರಿಕಲ್ಪನೆ ಹೆಚ್ಚಿನ ಪ್ರಶಂಸೆಗೂ ಹಾಗೂ ಅದೇ ತರಹದಲ್ಲಿ ವಸ್ತುನಿಷ್ಠ ವಿಮರ್ಶೆಗೂ ಒಳಗಾಗಲ್ಲಿಲ್ಲ. ಈಗಾಗಲೇ ನಡೆದುಹೋದ ಮೊದಲೆರಡು ಮಹಾಯುದ್ಧಗಳ ಸಂದರ್ಭದಲ್ಲಿ ಈ ಕುರಿತ ಚರ್ಚೆಗಳು ‘ಅಭಿವೃದ್ಧಿ’ ಪರಿಕಲ್ಪನೆಗೆ ಹೆಚ್ಚಿನ ಶಕ್ತಿ ಬರುವಂತೆ ಮಾಡಿವೆ. ಅದರಲ್ಲಿಯೂ ಎರಡನೆಯ ಮಹಾಯುದ್ಧದ ಕೊನೆಗೆ, ‘ಅಭಿವೃದ್ಧಿ’ ಪರಿಕಲ್ಪನೆಯು ಬಡವರನ್ನು ಹಸಿವು ಮತ್ತು ಶೋಷಣೆಯಿಂದ ಬಿಡುಗಡೆ ಮಾಡುವ ಕನಸನ್ನು ಸಂಕೇತಿಸುತ್ತಿತು. ಒಂದನೆಯ ಹಾಗೂ ಎರಡನೆಯ ಮಹಾಯುದ್ಧದಲ್ಲಿ ಸೋತವರಿಗೆ ಮತ್ತು ಗೆದ್ದವರಿಗೆ ಇನ್ನು ಮುಂದೆ ಶಕ್ತಿಯ ಮೂಲಕ ಸಾಮ್ರಾಜ್ಯ ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎನ್ನುವುದು ಅನುಭವಕ್ಕೆ ಬರುತ್ತದೆ. ಯುದ್ಧದ ಅನುಭವ ಬಂಡವಾಳಶಾಹಿ ರಾಷ್ಟ್ರಗಳಿಗಾಗಿದ್ದರೂ ಬಂಡವಾಳದ ವಿಸ್ತರಣೆ ಮೂಲಕ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ ಯೋಚನೆಗಳನ್ನು ಬೇರೆ ರೂಪದಲ್ಲಿ ಪ್ರಾರಂಭಿಸಿದವು. ಇದರ ಭಾಗವಾಗಿಯೇ ‘ಅಭಿವೃದ್ಧಿ’ ಪರಿಕಲ್ಪನೆ ಎಂಬುದು ಬಹುದೊಡ್ಡ ಜ್ಞಾನ ಶಿಸ್ತಾಗಿ ಬೆಳೆದು ಹಲವಾರು ಬದಲಾವಣೆಗೆ ಕಾರಣವಾಗಿದೆ. ಆದರೆ ಇಂದು ‘ಅಭಿವೃದ್ಧಿ’ ಎನ್ನುವುದು ಕೇವಲ ಸ್ಥಳೀಯ ಜನ ಸಮುದಾಯಗಳ ಮೂಲ ನೆಲೆಯಿಂದ ಸಾರಾಸಗಟಾಗಿ ಒಕ್ಕಲೆಬ್ಬಿಸಿ, ಅವರನ್ನು ನಿರ್ಗತಿಕರನ್ನಾಗಿ ಮಾಡುವುದು ಅದರ ಪ್ರಮುಖ ಪರಿಣಾಮವಾಗಿದೆ ಎಂಬ ಅಭಿಪ್ರಾಯಗಳಿವೆ. ಅದು ಕೇವಲ ಬಹುಜನರಲ್ಲಿ ನಿರಾಸೆಯನ್ನು ಮಾತ್ರ ಹುಟ್ಟಿಸಿದೆ ಎಂಬುದರ ಜೊತೆ ಜೊತೆಗೆ ಹಲವು ಸಾಮಾಜಿಕ ಸಂಘರ್ಷಗಳನ್ನು ಹುಟ್ಟುಹಾಕಿದೆ ಎಂದು ಹೇಳಬಹುದು. ಅಭಿವೃದ್ಧಿ ಎನ್ನುವುದು ಈ ದಿನಗಳಲ್ಲಿ ಬಹುಜನರಿಗೆ ಒಂದು ಕೆಟ್ಟ ಕನಸಾಗಿ ಕಾಡುತ್ತಿದೆ. ಹಾಗಾದರೆ, ‘ಅಭಿವೃದ್ಧಿ ಪ್ರಕ್ರಿಯೆಗಳು ಯಾರ ಪರವಾಗಿವೆ? ಅದರ ರಾಜಕೀಯ ಆರ್ಥಿಕತೆ ಯಾವುದು? ಎನ್ನುವ ಪ್ರಶ್ನೆಗಳನ್ನು ಅರ್ಥೈಸಿ ವಿಶ್ಲೇಷಿಸುವ ಪ್ರಯತ್ನ ಈ ಲೇಖನದ ಮುಖ್ಯ ಉದ್ದೇಶವಾಗಿದೆ.
‘ಅಭಿವೃದ್ಧಿ’ ಪದವು ಪ್ರಾರಂಭದಲ್ಲಿ ಬಡತನ ನಿರ್ಮೂಲನೆ, ಹಸಿವು-ಶೋಷಣೆ, ಅಪೌಷ್ಟಿಕತೆ, ಅನಾರೋಗ್ಯ, ಅನಕ್ಷರತೆ ಮುಕ್ತ ಸಮಾಜದ ನಿರ್ಮಾಣ ಮಾಡುವ, ಆರ್ಥಿಕ-ಸಾಮಾಜಿಕ ಹಾಗೂ ಲಿಂಗ ಅಸಮಾನತೆಯು ಸೇರಿದಂತೆ ಇನ್ನೂ ಹಲವು ಸಾಮಾಜಿಕ ಬಿಕ್ಕಟ್ಟುಗಳಿಗೆ ಪರಿಹಾರೋಪಾಯ ಸೂಚಿಸುವ ಶಬ್ದವಾಗಿತ್ತು. ಇಂದು ‘ಅಭಿವೃದ್ಧಿ’ಯು ಒಂದು ಅರ್ಥಹೀನ ವಿಚಾರವಾಗಿದೆ. ಪ್ರಾರಂಭದಲ್ಲಿ ನೀಡಿದ ಭರವಸೆಗಳಿಗೆ ಭಿನ್ನವಾಗಿ ಮುಕ್ತ ಮಾರುಕಟ್ಟೆಯು ರೂಪಿಸುತ್ತಿರುವ ಹೊಸ ಬಗೆಯ ಅಸಮಾನತೆಗೆ ಅಂಗೀಕಾರ ನೀಡುವ ಕೆಲಸವನ್ನು ‘ಅಭಿವೃದ್ಧಿ’ ಮಾಡುತ್ತಿದೆ. ‘ಅಭಿವೃದ್ಧಿ’ ತಾನು ಬದುಕಲು ಸಮಯ ಸಂದರ್ಭಕ್ಕೆ ತಕ್ಕಂತೆ ಬಣ್ಣವನ್ನು ಬದಲಾಯಿಸಿಕೊಳ್ಳಬಲ್ಲ ಗೋಸುಂಬೆಯಂತೆ ಕಾಣುತ್ತಿದೆ. ‘ಅಭಿವೃದ್ಧಿ ಪದ ಕೂಡ ಕಾಲ, ದೇಶ, ಸಂದರ್ಭ ಮತ್ತು ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಬೇರೆ ಬೇರೆ ಅರ್ಥಗಳನ್ನು (ಬಹುತೇಕ ಸಂದರ್ಭಗಳಲ್ಲಿ ಬಂಡವಾಳಶಾಹಿ/ ಉಳ್ಳವರ ಪರವಾಗಿ) ರೂಪಿಸಿಕೊಳ್ಳುಬಲ್ಲ ಒಂದು ರಾಜಕೀಯ ಪ್ರೇರಿತ ಪರಿಕಲ್ಪನೆಯಾಗಿದೆ ಎಂದರೆ ತಪ್ಪಾಗಲಾರದು.
18ನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರಾರಂಭವಾದ ‘ಅಭಿವೃದ್ಧಿ’ ಪರಿಕಲ್ಪನೆಗಳಿಗೆ ಬಹಳ ದೊಡ್ಡ ಚರಿತ್ರೆ ಇದೆ. ಇದಕ್ಕೆ ಯಾವುದೇ ಗೌಪ್ಯ ಯೋಜನೆಗಳಿರಲಿಲ್ಲ. ಆದರೆ ದುಷ್ಟಬುದ್ಧಿಯ ರಾಜಕಾರಣಿಗಳು, ಕೆಟ್ಟ ಮನಸ್ಸಿನ ಆಡಳಿತಶಾಹಿಗಳು ಮತ್ತು ಬಂಡವಾಳಶಾಹಿಗಳ ಕುಟಿಲೋಪಾಯಗಳ ಮೂಲಕ ‘ಅಭಿವೃದ್ಧಿ’ ಪ್ರಕ್ರಿಯೆಗಳು ಜಗತ್ತಿನಾದ್ಯಂತ ಬೇರೆ ಬೇರೆ ತಿರುವು ಪಡೆದು ಜಾರಿಗೊಳ್ಳಲಾರಂಭಿಸಿದವು. ಹೀಗಾಗಿಯೇ ಜೀವ ವಿರೋಧಿ ಅಭಿವೃದ್ಧಿಗೆ ಪ್ರತಿಯಾಗಿ, ಇಂದು ಜೀವಪರ ಅಭಿವೃದ್ಧಿಯನ್ನು ಸಾರ್ವತ್ರಿಕ ಪರಿಕಲ್ಪನೆ ರೂಪಿಸಿಕೊಳ್ಳುವುದು ಅಸಾಧ್ಯವಾಗಿದೆ. ಪ್ರಸ್ತುತ ‘ಅಭಿವೃದ್ಧಿ’ ರೂಪಾವಳಿಯು ಸಹಜ ಸ್ವಾಭಾವಿಕ ಪರಿಸರವೂ ಸೇರಿದಂತೆ ಸಾಮಾಜಿಕ ಸಂಬಂಧಗಳನ್ನೂ ಆರ್ಥಿಕ ಪ್ರಗತಿಯ ನೆಲೆಯಲ್ಲಿ ವ್ಯಾಪಾರ ವಸ್ತು ಪದಾರ್ಥವನ್ನಾಗಿಸಿದೆ. ಅಂದರೆ ಯಾವುದು ಸಂಪೂರ್ಣವಾಗಿ ಮಾರುಕಟ್ಟೆಯಿಂದ ದೂರ ಉಳಿಯಬೇಕೋ, ಅದೆಲ್ಲವೂ ಮಾರುಕಟ್ಟೆಯಲ್ಲಿ ಪಾವತಿಸಿದರೆ ಸೇವೆಯ ಭಾಗವಾಗಿ ದೊರಕುತ್ತದೆ.
ಮಾರುಕಟ್ಟೆಯು ತನಗೆ ಬೇಕಾದ ವಿಷಯಗಳನ್ನು ಆಯ್ಕೆಮಾಡಿಕೊಂಡು, ಉಳಿದ ವಿಷಯಗಳನ್ನು ಸಂಪೂರ್ಣವಾಗಿ ತಿರುಚಿ ಕಡೆಗಣಿಸುತ್ತದೆ ಅಥವಾ ತನಗೆ ಬೇಕಾದಂತೆ ಬಳಸುವ ಪರಿಸರ ನಿರ್ಮಿಸುತ್ತದೆ. ಇಂತಹ ಪರಿಣಾಮಗಳಿಗೆ ಹೆಚ್ಚು ಘಾಸಿಗೊಂಡಿರುವುದು ಅಸಹಾಯಕ ಹೆಣ್ಣು ಮಕ್ಕಳು ಮತ್ತು ಮಹಿಳೆಯರದ್ದೇ ದೊಡ್ಡ ಗುಂಪು. ಮುಕ್ತ ಮಾರುಕಟ್ಟೆಯ ‘ಅಭಿವೃದ್ಧಿ’ ಪ್ರಕ್ರಿಯೆಯು ನಾವು ಬದುಕುತ್ತಿರುವ ಪ್ರಪಂಚವನ್ನು ಹೆಚ್ಚು ಸಂಕೀರ್ಣ ಮಾಡಿದೆ. ಧ್ವಂಸವಾಗುತ್ತಿರುವ ಪ್ರಕೃತಿ/ಪರಿಸರ ಮತ್ತು ಒತ್ತಾಯ ಪೂರಕವಾಗಿ ಹೇರುತ್ತಿರುವ ಜೀವನ ಕ್ರಮದ ವಿರುದ್ಧ ಪ್ರಪಂಚದ ಎಲ್ಲಾ ಭಾಗಗಳಲ್ಲಿ ಹೆಚ್ಚಿನ ಜನರು ಬೀದಿಗಿಳಿದು ಪ್ರತಿಭಟನೆಗಳನ್ನು ಮಾಡುತ್ತಿದ್ದರೆ. ಜಾಗತಿಕ ಮಾದರಿಗಳಿಗೆ ಪ್ರತಿಯಾಗಿ ಜನರು ತಮ್ಮ ಸ್ವಂತ ಸಾಮರ್ಥ್ಯ ಸಂಪನ್ಮೂಲ, ಮೌಲ್ಯ ಹಾಗೂ ತಮ್ಮ ಕನಸು-ಕಲ್ಪನೆಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ಅರ್ಥಮಾಡಿಕೊಳ್ಳಲಾಗದ ಕೇಳಿಸಿಕೊಳ್ಳಲಾಗದ ಸ್ಥಿತಿಗೆ ತಲುಪುವಂತೆ ಜಾಗತಿಕ ‘ಅಭಿವೃದ್ಧಿ’ ಪ್ರಕ್ರಿಯೆಗಳು ಮಾಡಿವೆ.
ಪ್ರಸ್ತುತ ಸರ್ಕಾರಗಳು (ಕೇಂದ್ರ ಮತ್ತು ರಾಜ್ಯ) ಇದಕ್ಕೆ ಹೊರತಾದ ಅಭಿವೃದ್ಧಿ ಮಾದರಿಯನ್ನು ರೂಪಿಸುತ್ತಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರಬಲವಾಗಿರುವ ಪ್ರಮುಖ ರಾಷ್ಟ್ರಗಳಿಗೆ ಭೇಟಿ ನೀಡಿ, ನಮ್ಮ ‘ಅಭಿವೃದ್ಧಿ’ಗೆ ಸಹಕಾರ ನೀಡುವಂತೆ ವಿನಂತಿಸಲಾಗುತ್ತಿದೆ. ಭವ್ಯ ಭಾರತದ ‘ಅಭಿವೃದ್ಧಿ’ಗೆ ಬಂಡವಾಳ ಸೇರಿದಂತೆ ಎಲ್ಲಾ ಬಗೆಯ ತಾಂತ್ರಿಕ ಸಹಯೋಗ ನೀಡುವಂತೆ ಜಾಗತಿಕ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿರುವ ಕಾರ್ಪೋರೇಟ್ ಜಗತ್ತಿನ ದಿಗ್ಗಜರನ್ನು ಸರ್ಕಾರಗಳು ಮಂಡಿಯೂರಿ ಕೇಳುತ್ತಿವೆ. ಇದೇ ಸಂದರ್ಭದಲ್ಲಿ, ನಮ್ಮ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು, ಸಂವಿಧಾನದ ಕಲಂ-25 ನೀಡಿರುವ ಎಲ್ಲಾ ಹಕ್ಕುಗಳನ್ನು ದಮನ ಮಾಡುವ/ಕಸಿದುಕೊಳ್ಳುವ ಪ್ರಯತ್ನವನ್ನು ಕೆಲವು ರಾಜಕೀಯ ಪೋಷಿತ ಧಾರ್ಮಿಕ ಸಂಘಟನೆಗಳು ಮಾಡುತ್ತಿವೆ. ಈ ಕುರಿತು ನೇರವಾಗಿ ಮಾತನಾಡದ ನಮ್ಮ ರಾಜಕೀಯ ನಾಯಕರುಗಳು ತಮ್ಮ ತಮ್ಮ ಪಕ್ಷದ ನೆರಳಿನಲ್ಲಿಯೇ ನಟಿಸುತ್ತಿದ್ದಾರೆ. ಯಾರು ಯಾವ ಆಹಾರ ತಿನ್ನಬೇಕು, ಯಾವ ರೀತಿ ಬಟ್ಟೆಗಳನ್ನು ತೊಡಬೇಕು, ಯಾವ ಆಚರಣೆಗಳನ್ನು ಮಾಡಬೇಕು/ಮಾಡಬಾರದು, ಯಾವ ವಿಷಯವನ್ನು ಮಾತನಾಡಬೇಕು, ಯಾವುದು ಪವಿತ್ರ, ಯಾವುದು ಅಪವಿತ್ರ ಇತ್ಯಾದಿಗಳನ್ನು ಕುರಿತು ಫರ್ಮಾನುಗಳನ್ನು ಹೊರಡಿಸುತ್ತಿದ್ದಾರೆ. ಇಂತಹ ಫರ್ಮಾನುಗಳನ್ನು ಯಾರು ಏಕೆ ಹೊರಡಿಸುತ್ತಿದ್ದಾರೆ? ಎನುವುದನ್ನು ಸೂಕ್ಷ್ಮವಾಗಿ ಯೋಚಿಸಿದ್ದರೆ, ಬಹುಷಃ ಇವರು ಭಾರತದ ಸಾಂಪ್ರದಾಯಿಕ ಶ್ರೇಣಿಕೃತ ಸಮಾಜದಲ್ಲಿ ಎಲ್ಲವನ್ನು ನಿಯಂತ್ರಣ ಮಾಡಿದವರಾಗಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆ ಇದೇ ಗುಂಪಿಗೆ ಮತ್ತು ಮನೋಭಾವನೆಗಳಿಗೆ ಸೇರಿದವರು ಬೇರೆ ಬೇರೆ ನೆಲೆಯಲ್ಲಿ ತಮ್ಮ ಶ್ರೇಣಿಕೃತ ಸಮಾಜದ ಸಾಂಪ್ರದಾಯಿಕ ನಂಬಿಕೆ ಆಶಯಗಳನ್ನು ಪ್ರತಿಪಾದಿಸುವ ಮೂಲಕ ಜನರ ಭಾವನೆಗಳನ್ನು ಕೆರಳಿಸುವ ಮತ್ತು ನಿಯಂತ್ರಣ ಮಾಡುವ ಕೆಲಸ ಮಾಡುತ್ತಿದ್ದಾರೆ.
ಇಂತಹ ಸಂದರ್ಭಗಳನ್ನೇ ಬಂಡವಾಳ ಮಾಡಿಕೊಂಡಿರುವ ನವ-ಉದಾರವಾದಿ ‘ಅಭಿವೃದ್ಧಿ’ ಪ್ರತಿಪಾದಕರು ಮುಕ್ತ ಮಾರುಕಟ್ಟೆಯ ವಿಸ್ತರಣೆಯ ಮೂಲಕ ಶ್ರೀಮಂತರ ಆಸ್ತಿಯು ಟ್ರಿಲಿಯನ್ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ/ಳ್ಳುತ್ತಿದ್ದರೆ. ಇದರ ಪರಿಣಾಮಗಳಿಂದ ಉಂಟಾಗಿರುವ ಸಾಮಾಜಿಕ ಬಿಕ್ಕಟ್ಟುಗಳನ್ನು ಮುಚ್ಚಿಡಲು ಧರ್ಮ ಮತ್ತು ಧಾರ್ಮಿಕ ಭಾವನೆಗಳನ್ನು ಹಿಡನ್ ಅಜೆಂಡಾ ಆಗಿ ಬಳಸಲಾಗುತ್ತಿದೆ. ಏಕೆಂದರೆ ಅಂತಾರಾಷ್ಟ್ರೀಯ ಬಂಡವಾಳಶಾಹಿ ವರ್ಗಕ್ಕೆ ಭಾರತದ ಮಕ್ಕಳು, ಮಹಿಳೆಯರು, ಯುವಕರು (ಅಂದರೆ ಪ್ರಶ್ನೆ ಮಾಡದೆ ದುಡಿಯುವ ಜನರು) ಅತ್ಯಂತ ಕಡಿಮೆ ಕೂಲಿಗೆ/ಬೆಲೆಗೆ (ಸಾಧ್ಯವಾದರೆ ಉಚಿತವಾಗಿ) ದೊರಕಬೇಕು. ಉದಾಹರಣೆಗೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಮಧ್ಯಾಹ್ನದೂಟದ ಕಾರ್ಮಿಕರು, ರೈತ ಮಿತ್ರರು, ಅರೆಕಾಲಿಕ ಶಿಕ್ಷಕರು, ಇತ್ಯಾದಿ. ಇವರು ಮಾಡುತ್ತಿರುವ ಕೆಲಸಗಳನ್ನು ಸರ್ಕಾರವೇ ಗಮನಿಸುತ್ತದೆ. ತಪ್ಪು ಮಾಡಿದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುತ್ತದೆ. ಆದರೆ ಅವರನ್ನು ಸರ್ಕಾರಿ ನೌಕರರು ಎಂದು ಸರ್ಕಾರವು ‘ಅಭಿವೃದ್ಧಿ’ ಯೋಜನೆಗಳಲ್ಲಿ ಮಾನ್ಯ ಮಾಡುವುದಿಲ್ಲ. ವೇತನ ಸೇರಿದಂತೆ ಇತರೆ ಸೇವಾ ಸೌಲಭ್ಯಗಳನ್ನು ನೀಡುವ ಬಗ್ಗೆ ಯಾವುದೇ ಭದ್ರತೆಗಳನ್ನು ಸರ್ಕಾರಗಳು ನೀಡುವುದಿಲ್ಲ. ಮೇಲೆ ತಿಳಿಸಿದ ಯೋಜನೆಗಳಲ್ಲಿ ಕೆಲಸಮಾಡುತ್ತಿರುವವರನ್ನು ನೌಕರರು ಎಂದು ಕರೆಯದೆ ‘ಸಾಮಾಜಿಕ ಕಾರ್ಯಕರ್ತರು’, ‘ಆಶಾ ಕಾರ್ಯಕರ್ತೆಯರು’, ‘ಅತಿಥಿ ಕಾರ್ಯಕರ್ತರು’, ‘ಮಿತ್ರರು’, ‘ಸ್ವಯಂ ಸೇವಕರು’, ‘ಯಶೋಧೆಯರು’ ‘ಮಮತೆಯರು’ ಇನ್ನೂ ಮುಂತಾದ ಹೆಸರುಗಳಿಂದ ಆಲಂಕಾರಿಕವಾಗಿ ಸರ್ಕಾರವೇ ಕರೆಯುತ್ತದೆ. ಇವರಿಗೆ ನೀಡುವ ಸಂಭಾವನೆಯನ್ನು ‘ವೇತನ’ ಎಂದು ಕರೆಯದೇ, ‘ಗೌರವಧನ’ ಎಂದು ಕರೆಯಲಾಗುತ್ತದೆ. ಈಗಲೂ ಭವ್ಯ ಭಾರತ ಸರ್ಕಾರವು ಅಂಗನವಾಡಿ ಸಹಾಯಕರಿಗೆ ನೀಡುತ್ತಿರುವ ಸಂಭಾವನೆ, ಕಾನೂನು ನಿಗದಿ ಪಡಿಸಿರುವ ಕನಿಷ್ಠ ವೇತನದಲ್ಲಿ ಕಾಲುಭಾಗಕ್ಕಿಂತಲೂ ಕಡಿಮೆ. ಅದನ್ನು ಸಹಾ ಅನುದಾನ ಕೊರತೆ ಹೇಳಿ 7-8 ತಿಂಗಳುಗಳ ಕಾಲ ನಿರಾಕರಿಸಲಾಗುತ್ತಿದೆ. ಇಂತಹ ಬಹುತೇಕ ಯೋಜನೆಗಳಲ್ಲಿ ದುಡಿಯುತ್ತಿರುವರು ಮಹಿಳೆಯರು. ಈ ಮಹಿಳೆಯರು ಸರ್ಕಾರದ ದೃಷ್ಠಿಯಲ್ಲಿ “ಬಳಸಿ ಬಿಸಾಡುವ” ವಸ್ತುಗಳು. ಇವರನ್ನು ಮನುಷ್ಯರಂತೆ ಸರ್ಕಾರಗಳ ‘ಅಭಿವೃದ್ಧಿ’ ನೋಡುತ್ತಿಲ್ಲ.
ಸಮಾಜದಲ್ಲಿ ಮಕ್ಕಳ, ವೃದ್ಧರ ಮತ್ತು ರೋಗಿಗಳ ಆರೈಕೆ, ಪಾಲನೆ ಮತ್ತು ಪೋಷಣೆ ಮಹಿಳೆಯರ ಜವಾಬ್ದಾರಿಗಳು. ಮನೆ ಕೆಲಸವೂ ಸೇರಿದಂತೆ ಮಹಿಳೆಯರ ಎಲ್ಲಾ ದುಡಿಮೆ ಭವ್ಯ ಭಾರತದಲ್ಲಿ ‘ಉಚಿತವಾಗಿ ದೊರಕುವ ಸೇವೆ’. ಇದಕ್ಕೆ ಯಾವುದೇ ಬೆಲೆ ಇಲ್ಲ. ದೇಶದಲ್ಲಿರುವ ನಿರುದ್ಯೋಗ, ಕುಟುಂಬಕ್ಕೋಸ್ಕರ ಏನಾದರೂ/ಹೇಗಾದರೂ ಸಂಪಾದನೆ ಮಾಡಬೇಕೆಂಬ ಅನಿವಾರ್ಯತೆಯನ್ನು ಜಾಗತಿಕ ‘ಅಭಿವೃದ್ಧಿ’ ಕ್ರಮಗಳು ನಿರ್ಮಾಣ ಮಾಡಿವೆ. ಅಲ್ಲದೇ ಮೇಲೆ ತಿಳಿಸಿದ ಯೋಜನೆ/ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿರುವರು ಬಹುತೇಕರು ಬಡ ಮಹಿಳೆಯರು. ಇನ್ನು ಮನಗಂಡಿರುವ ಹೊಸ ಆರ್ಥಿಕ ನೀತಿಯು ವಿವಿಧ ‘ಅಭಿವೃದ್ಧಿ ಯೋಜನೆ’ಗಳ ಮೂಲಕ ಮಹಿಳೆಯರು ತಮ್ಮ ಕುಟುಂಬಗಳಿಗೆ ಸಲ್ಲಿಸುತ್ತಿರುವ ‘ವೇತನ ರಹಿತ ಉಚಿತ ಸೇವೆ’ಯನ್ನು ಸಮಾಜಕ್ಕೆ ವಿಸ್ತರಿಸಿದೆ. ಅಂದರೆ ಸಮಾಜ ಮಹಿಳೆಯ ದುಡಿಮೆಯನ್ನು ಕುರಿತು ಹೊಂದಿರುವ ಮನೋಭಾವನೆಯನ್ನು ಬಳಸಿಕೊಂಡ ಸರ್ಕಾರ ಮಹಿಳೆಯರ ದುಡಿಮೆಯನ್ನು ವಿವಿಧ ಯೋಜನೆಗಳ ಮೂಲಕ ಶೋಷಿಸುತ್ತಿದೆ. ಆ ಮೂಲಕ ಮಹಿಳೆಯ ಬೆವರು, ರಕ್ತ, ದೇಹ ಮತ್ತು ಅವರ ಬದುಕನ್ನು ಜಾಗತಿಕ ಬಂಡವಾಳಶಾಹಿ ವರ್ಗ ಶೋಷಿಸುತ್ತಿದೆ.
ಹೀಗಾಗಿ ನಾವು ‘ಅಭಿವೃದ್ಧಿ’ ಎಂದರೆ ಮೇಲ್ನೋಟಕ್ಕೆ ಕಾಣುವ ವೈಜ್ಞಾನಿಕ ಹಾಗೂ ತಂತ್ರಜ್ಞಾನವನ್ನು ಒಳಗೊಂಡ ಯೋಜನೆ ಎಂದು ಪರಿಭಾವಿಸಬೇಕಿಲ್ಲ. ‘ಅಭಿವೃದ್ಧಿ’ ಪಶ್ಚಿಮದ ಪ್ರಬಲ ರಾಷ್ಟ್ರಗಳ ಮಧ್ಯವರ್ತಿ ಸಂಸ್ಥೆಯಂತೆ ಕೆಲಸ ಮಾಡುವ ಬಹುರಾಷ್ಟ್ರೀಯ ಬಂಡವಾಳಶಾಹಿ ವರ್ಗದ ತಾಳಕ್ಕೆ ತಕ್ಕಂತೆ ಕುಣಿಯುವ ಪರಿಕಲ್ಪನೆ. ವಿಶ್ವಬ್ಯಾಂಕಿನ ಸಾಲದ ನೀತಿಯ ಪ್ರವೃತ್ತಿಯನ್ನು ರೂಪಿಸುವ ಜಾಗತಿಕ ಸರ್ಕಾರ ವ್ಯವಸ್ಥೆಯು ವಿಶ್ವಬ್ಯಾಂಕಿನ ಸಹಯೋಗದೊಂದಿಗೆ ಪ್ರಾರಂಭವಾದ ಅನೇಕ ಅಭಿವೃದ್ಧಿ ಯೋಜನೆಗಳು ಅನಂತರ ರಾಜಕೀಯ ಸ್ವರೂಪವನ್ನು ಪಡೆದು ಯಜಮಾನಿಕೆ ಪ್ರವೃತ್ತಿಯನ್ನು ಪ್ರತಿಪಾದಿಸಿದ ಅನುಭವಗಳು ನಮ್ಮ ಮುಂದಿವೆ. ಇಂತಹ ಯಜಮಾನಿಕೆ ಆಧಾರಿತ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುವ ಸಂಘಟನೆಗಳ ಉದಯಕ್ಕೂ ಇದು ಕಾರಣವಾಗಿದೆ. ಅಷ್ಟು ಮಾತ್ರವಲ್ಲದೆ, ಇಂತಹ ಚಳವಳಿಗಳು ಛಿದ್ರಗೊಳ್ಳುವಂತೆ, ಸಾಮಾಜಿಕ ಸಂಸ್ಥೆಗಳು ಮತ್ತು ಸಾಮಾಜಿಕ ಸಂಬಂಧಗಳು (ರಕ್ತ ಸಂಬಂಧವೂ ಸೇರಿದಂತೆ) ಛಿದ್ರಗೊಳ್ಳುವಂತೆ ಮಾಡಿ, ಹಣ ಪ್ರಧಾನವಾದ ‘ಅಭಿವೃದ್ಧಿ’ಯನ್ನು ಸ್ವೀಕರಿಸುವಂತೆ ಮಾಡಿದೆ.
ಅಭಿವೃದ್ಧಿ ಮತ್ತು ಸಾಮಾಜಿಕ ಸಂಘರ್ಷಗಳು :
ಕಳೆದ ಎರಡು ದಶಕಗಳಲ್ಲಿ ಮುಕ್ತ ಮಾರುಕಟ್ಟೆಯ ‘ಅಭಿವೃದ್ಧಿ’ ಮಾದರಿಯು ಜನರಲ್ಲಿ ಅದರಲ್ಲಿಯೂ ಹೊಸ ತಲೆಮಾರಿನ ಯುವಕರಲ್ಲಿ ಹಣದ ಮೇಲೆ ಅತಿಯಾದ ಮೋಹವನ್ನು ಹುಟ್ಟಿಸಿದೆ. ಯಾವ ದಾರಿ/ಮಾರ್ಗದಲ್ಲಾದ್ದರೂ ಸರಿಯೇ, ಯಾರ ತಲೆಯನ್ನು ಒಡೆದಾದರೂ ಸರಿಯೇ ಹಣ ಮಾಡಬೇಕು. ಹಣದಿಂದಲೇ ಎಲ್ಲವೂ ಸಿಗುತ್ತದೆ ಎನ್ನುವ ಹುಸಿ ನಂಬಿಕೆಯನ್ನು ಜಾಗತಿಕ ಮಾರುಕಟ್ಟೆ ಬಿತ್ತಿದೆ. ಈ ಬೆಳೆವಣಿಗೆಯು ನಮ್ಮ ನಡುವೆ ಅನೇಕ ಸಾಮಾಜಿಕ ಬಿಕ್ಕಟ್ಟುಗಳನ್ನು, ಆರ್ಥಿಕ ಗಂಡಾಂತರಗಳನ್ನು ಮತ್ತು ಸಾಂಸ್ಕೃತಿಕ ಸಂಘರ್ಷಗಳನ್ನು ಹುಟ್ಟುಹಾಕುತ್ತಿದೆ. ಇಂತಹ ಸಂಘರ್ಷಗಳು ತಲೆಮಾರುಗಳ ನಡುವೆ, ಲಿಂಗಗಳ (ಹೆಣ್ಣು-ಗಂಡು)ನಡುವೆ, ಧರ್ಮಗಳ ನಡುವೆ, ಜಾತಿಗಳ ನಡುವೆ, ಪ್ರದೇಶಗಳ ನಡುವೆ ನಡೆಯುತ್ತಿದೆ. ಈ ರೀತಿಯ ಸಾಮಾಜಿಕ ಸಂಘರ್ಷಗಳು ವಿಶೇಷ ಆರ್ಥಿಕ ವಲಯಗಳು (ಎಸ್.ಇ.ಜಡ್) ಸ್ಥಾಪನೆಯಾದ/ಅದರ ಸಲುವಾಗಿ ಕೃಷಿ ಭೂಮಿಯನ್ನು ವಶಪಡಿಕೊಳ್ಳುವ ಪ್ರಕ್ರಿಯೆ ನಡೆದ/ನಡೆಯುತ್ತಿರುವ ಪ್ರದೇಶಗಳಲ್ಲಿ ಹೇಗೆ ನಡೆಯುತ್ತಿದೆ ಎನ್ನುವುದನ್ನು ಸ್ವಲ್ಪ ನೊಡೋಣ.
ಎರಡನೆಯ ಕೈಗಾರೀಕರಣ ಯುಗ ಎಂದು ಎಸ್.ಇ.ಜಡ್ ಸ್ಥಾಪನೆಯನ್ನು ಬಿಂಬಿಸಲಾಗುತ್ತಿದೆ. ಎಸ್.ಇ.ಜಡ್. ಹೆಸರಿನಲ್ಲಿ ಕೃಷಿ ಭೂಮಿಯನ್ನು ಕನಿಷ್ಠ ದರದಲ್ಲಿ ಕಾರ್ಪೋರೇಟ್ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ವಿದೇಶಿ ನೇರ ಬಂಡವಾಳದ (ಎಫ್.ಡಿ.ಐ) ಹೂಡಿಕೆಗೆ ನಮ್ಮ ಹಳ್ಳಿಗರನ್ನು ಮತ್ತು ಕೃಷಿ ಭೂಮಿಯನ್ನು ಮುಕ್ತ ಮಾರುಕಟ್ಟೆಗೆ ತೆರೆಯುವ ‘ಅಭಿವೃದ್ಧಿ’ ನೀತಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಥಮ ಆದ್ಯತೆಯಾಗಿವೆ. ಭೂಮಿಯ ಖಾಸಗಿ ಮತ್ತು ಕಾರ್ಪೋರೇಟೀಕರಣ ಪ್ರಕ್ರಿಯೆಯ ಮೂಲಕ ಜಾಗತಿಕ ಮಾರುಕಟ್ಟೆಯು ಭಾರತ ಮತ್ತು ಕರ್ನಾಟಕದಲ್ಲಿ ರೂಪಿಸುತ್ತಿರುವ ವಿಶೇಷ ಆರ್ಥಿಕ ವಲಯಗಳು ನಮ್ಮ ಕಣ್ಮುಂದಿವೆ.
ಕರ್ನಾಟಕದಲ್ಲಿ ಕಳೆದ ಹತ್ತು ವರ್ಷಗಲ್ಲಿ ಟೌನ್‍ಶಿಪ್‍ಗಳು, ಗ್ರೇಟರ್ ಬೆಂಗಳೂರು, ಕೈಗಾರಿಕಾ ವಲಯಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ರಸ್ತೆಗಳ ಅಭಿವೃದ್ಧಿಗಾಗಿ ಸುಮಾರು 928 ಗ್ರಾಮಗಳ ವ್ಯಾಪ್ತಿಯಲ್ಲಿ 11 ಲಕ್ಷ (2011) ಎಕರೆಗಳಿಗೂ ಹೆಚ್ಚಿನ ಭೂಮಿಯನ್ನು ಖಾಸಗಿಯವರಿಗೆ ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಅತ್ಯಂತ ಕಡಿಮೆ ಬೆಲೆಗೆ ನೀಡಲಾಗಿದೆ. ಅಲ್ಲದೇ ಪ್ರತಿವರ್ಷ ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಮತ್ತು ವಿದೇಶಿ ನೇರ ಬಂಡವಾಳ ಹೊಡಿಕೆಗೆ ವಿಶೇಷ ಪ್ರಯತ್ನ ಮಾಡುವ ಮೂಲಕ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ರೂಪಾಂತರ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯ ಯೋಜನಾ ಮಂಡಳಿಯು ‘ಕರ್ನಾಟಕದ ಒಂದು ದೃಷ್ಠಿಕೋನ: 20-20’ ಎನ್ನುವ ಹೆಸರಿನಲ್ಲಿ ಸಿದ್ಧಪಡಿಸಿರುವ ವರದಿಯಲ್ಲಿ, ಕೃಷಿ ಸಮಾಜದ ಬಿಕ್ಕಟುಗಳನ್ನು ಚರ್ಚಿಸದೇ ಯೋಚಿಸದೇ ಕೃಷಿಯ ಅವಲಂಬನೆಯನ್ನು ಶೇ. 61 ರಿಂದ 2020ರ ವೇಳೆಗೆ ಶೇ. 35-40ಕ್ಕೆ ಇಳಿಸಬೇಕೆಂಬ ಶಿಫಾರಸ್ಸನ್ನು ಮಾಡಿದೆ. ಇದರಲ್ಲಿ ಹೊಸ ತಯಾರಿಕಾ ವಲಯಗಳಿಗೆ ಸ್ಥಳೀಯರು ಹಾದಿ ಮಾಡಿಕೊಡಬೇಕೆಂದು ನಿರೀಕ್ಷಿಸಲಾಗಿದೆ.
ಬಳ್ಳಾರಿ ಜಿಲ್ಲೆಯು ಗಣಿಗಾರಿಕೆಯಿಂದಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡಿದೆ. ಈ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ, ವಿಮಾನ ನಿಲ್ದಾಣ ಇತ್ಯಾದಿಗಳಿಗೆ ಸಮಾರು 20,000 ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿದೆ. ಹೀಗೆ ಕೃಷಿಭೂಮಿ ವಶಪಡಿಸಿಕೊಳ್ಳುವಾಗ ಚೌಕಾಶಿಯು ಕೊಳ್ಳುವವರು-ಸ್ಥಳೀಯರು-ಆಳುವವರ್ಗ-ಆಡಳಿತಶಾಹಿಗಳ ನಡುವೆ ನಡೆಯಿತು. ಈ ಪ್ರಕ್ರಿಯೆ ನಡೆಯುವಾಗಲೇ ಹಳ್ಳಿಗಳ ಹಿರಿಯರು, ಮಧ್ಯಮ ವಯಸ್ಸಿನವರು ಮತ್ತು ಮಹಿಳೆಯರು ತಮ್ಮ ಭೂಮಿಯನ್ನು ಎಷ್ಷೇ ಹಣ ನೀಡಿದರು ಕೊಡುವುದಿಲ್ಲ ಎನ್ನುವ ನಿರ್ಧಾರ ಮಾಡುತ್ತಾರೆ.
ಆದರೆ ಹೊಸ ತಲೆಮಾರಿನ ಯುವಕರು ಇದಕ್ಕೆ ವಿರುದ್ಧವಾಗಿ, ಮುಂದಿನ ದಿನಗಳಲ್ಲಿ ಕೃಷಿ ಮಾಡುವುದು ಕಷ್ಟ. ಇನ್ನೂ ಹೆಚ್ಚಿನ ಬೆಲೆಯನ್ನು ನೀಡುವಂತೆ ಒತ್ತಾಯ ಮಾಡಿ ಭೂಮಿ ನೀಡುವುದು ಉಚಿತ. “ಬಂದ ಹಣದಲ್ಲಿ ರಿಯಲ್ ಏಸ್ಟೇಟ್, ಗಣಿ, ಸಾರಿಗೆ ಇತ್ಯಾದಿ ಯಾವುದಾದರೂ ಒಂದು ವ್ಯವಹಾರ ಮಾಡಿದರೆ, ಹತ್ತು ವರ್ಷ ಕೃಷಿಯಲ್ಲಿ ದುಡಿಯುವುದನ್ನು ಒಂದೇ ವರ್ಷದಲ್ಲಿ ದುಡಿಯಬಹುದು” ಎಂದು ಸಿರವಾರ ಎನ್ನುವ ಹಳ್ಳಿಯ ಯುವಕರು ಹೇಳುತ್ತಾರೆ. ಇದಕ್ಕೆ ಅಲ್ಲಿನ ಹಿರಿಯರ ಸಂಪೂರ್ಣ ಒಪ್ಪಿಗೆ ಇಲ್ಲ. ಯಾಕೆಂದು ಹಿರಿಯರನ್ನು ಮತ್ತು ಮಹಿಳೆಯರನ್ನು ಪ್ರಶ್ನೆ ಮಾಡಿದ್ದರೆ, ನಾವು ಹುಟ್ಟಿ ಬೆಳೆದ ಭೂಮಿ, ನಮ್ಮ ಹಿರಿಯರು ಬದುಕಿದ್ದು ಇಲ್ಲೇ. ಇದನ್ನು ಹೇಗೆ ಬಿಡುವುದು? ಎಂದು ಮರುಪ್ರಶ್ನೆ ಮಾಡಿ, ಮಾತು ಮುಂದುವರಿಸುತ್ತಾರೆ. “ಗಣಿಗಾರಿಕೆ ಬಂದ ಅನಂತರ ನಮ್ಮ ಹಳ್ಳಿಗಳಲ್ಲಿ ನಾವು ನಿದ್ದೆ ಮಾಡಲಾಗದ ಸ್ಥಿತಿ ತಲುಪಿದ್ದೇವೆ. ಗಣಿ ಮಾಫಿಯಾ ನಮ್ಮ ಹಳ್ಳಿಗಳ ಯುವಕರನ್ನು ತಮ್ಮ ದಂಧೆಗೆ ಬಳಸಿಕೊಂಡು ಅವರಿಗೆ ಬ್ರಾಂಡಿ, ವಿಸ್ಕಿ, ಇತರೆ (ಬಾಯಿಯಲ್ಲಿ ಹೇಳಲಾಗದ) ರುಚಿ ತೋರಿಸಿ ನಮ್ಮ ಮಕ್ಕಳನ್ನು ಹಾಳುಮಾಡಿದೆ. ಅವರಿಗೆ ಅವರ ತಂದೆ-ತಾಯಿ, ಹೆಂಡತಿ ಮಕ್ಕಳು ಬೇಡವಾಗಿದ್ದಾರೆ. ಕುಡಿತ ಇಂದು ಚಟವಾಗಿದೆ. ಈ ಪರಿಯ ಕುಡಿತ ಮೊದಲು ನಮ್ಮ ಹಳ್ಳಿಗಳಲ್ಲಿರಲ್ಲಿಲ್ಲ.” “ಸಂಜೆ 7ರ ಅನಂತರ ನಮ್ಮ ಹೆಣ್ಣು ಮಕ್ಕಳು (ಸೊಸೆಯರು-ಹೆಣ್ಣು ಮಕ್ಕಳು) ಮತ್ತು ಮಹಿಳೆಯರು ಮನೆಯಿಂದ ಹೊರಗೆ ಕಾಲಿಡಲಾಗದ ಸ್ಥಿತಿ ನಿರ್ಮಾಣವಾಗಿದೆ”. ನೈತಿಕವಾಗಿ ಸರಿಯಲ್ಲದ ದಾರಿಯಲ್ಲಿ ಸರಳವಾಗಿ ಹರಿದಾಡುತ್ತಿರುವ ಹಣವು “ನಮ್ಮ ಹೆಣ್ಣು ಮಕ್ಕಳನ್ನು ಬಹಳ ಕೇವಲವಾಗಿಸಿ, ಬಳಕೆಯ ವಸ್ತುವಂತೆ ನೋಡುತ್ತಿದೆ… ನಮ್ಮ ಸಾಮಾಜಿಕ-ಸಾಂಸ್ಕೃತಿಕ-ರಕ್ತ ಸಂಬಂಧಗಳು ಸೇರಿದಂತೆ ಎಲ್ಲವನ್ನು ಹಣ ಧ್ವಂಸ ಮಾಡಿದೆ,” ಎನ್ನುವುದು ಸುಮಾರು 62 ವರ್ಷ ವಯಸ್ಸಿನ ಹಿರಿಯರ ಅಳಲು.
ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಕೃಷಿ ಭೂಮಿ ವಶಪಡಿಸಿಕೊಳ್ಳುವ ಕುರಿತು ನಮ್ಮ ಒಂದಿಂಚು ಭೂಮಿಯನ್ನು ನೀಡುವುದಿಲ್ಲ ಎನ್ನುವ ನಿರ್ಧಾರವನ್ನು ಚಾಗನೂರು ಗ್ರಾಮ ಸಭೆಯಲ್ಲಿ ಜನರು ಮಾಡುತ್ತಾರೆ. ನಾಲ್ಕು ದಿನಗಳ ಅನಂತರ ಅದೇ ಗ್ರಾಮದಲ್ಲಿ ಮತ್ತೊಂದು ಗ್ರಾಮಸಭೆ ನಡೆಯುತ್ತದೆ. ಆ ಸಭೆಯಲ್ಲಿ ಹಳ್ಳಿಯ ಹಿರಿಯರು ಭೂಮಿ ನೀಡುವುದಿಲ್ಲ ಎಂದು ಸಭೆಯಲ್ಲಿ ಹೇಳಲು ಪ್ರಾರಂಭಿಸಿದ ತಕ್ಷಣವೇ, ಮದ್ಯಪಾನ ಮಾಡಿದ ಕೆಲವು ಯುವಕರು ಹಿರಿಯರ ಮೇಲೆ ಮುಗಿಬಿದ್ದು, ನಾವು ಭೂಮಿ ನೀಡುತ್ತೇವೆ ಎಂದು ಹೇಳುತ್ತಾರೆ. ಆಗ ಅಲ್ಲಿ ಹಿರಿಯ ಮತ್ತು ಕಿರಿಯ ತಲೆಮಾರುಗಳ ನಡುವೆ ಗದ್ದಲ-ಗಲಾಟೆ ನಡೆಯುತ್ತದೆ. ಇದೇ ಸಮಯವನ್ನು ಬಳಸಿಕೊಂಡ ಆಡಳಿತಶಾಹಿ, ಭೂಮಿ ನೀಡುವುದಾಗಿ ಜನರು ಗ್ರಾಮ ಸಭೆಯಲ್ಲಿ ತಿಳಿಸಿದ್ದರು ಎಂದು ದಾಖಲಿಸುತ್ತದೆ. ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಈ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯ ಹಿಂದೆ ಕಾಣದ ಕೈಗಳಂತೆ ಸ್ಥಳೀಯ ರಾಜಕಾರಣಿಗಳು, ರಾಜಕೀಯ ಪುಢಾರಿಗಳು ಮತ್ತು ಬಂಡವಾಳಶಾಹಿಗಳು ಕೆಲಸ ಮಾಡಿದ್ದಾರೆ. ಇದನ್ನು ಇಲ್ಲಿ ವಿವರಿಸುವುದಿಲ್ಲ. ಇದು ಕೇವಲ ಒಂದು ಪುಟ್ಟ ಪ್ರಕರಣ ಮಾತ್ರವಲ್ಲ. ‘ಅಭಿವೃದ್ಧಿ’ ಹೆಸರಿನಲ್ಲಿ ಹೆಚ್ಚು ಪ್ರಕ್ರಿಯೆಗಳು ನಡೆಯುತ್ತಿರುವ ಎಲ್ಲಾ ಹಳ್ಳಿಗಳು, ಪಟ್ಟಣಗಳು, ನಗರಗಳ ಸುತ್ತಮುತ್ತ ಬಹುತೇಕ ಹಿರಿಯರು, ಮಹಿಳೆಯರು ಮತ್ತು ಹೆಣ್ಣು ಮಕ್ಕಳು, ಮಕ್ಕಳು ಎದುರಿಸುತ್ತಿರುವ ಸಾಮಾಜಿಕ ಸಂಘರ್ಷಗಳ ಸ್ವರೂಪವಿದು. ಒಂದೇ ವಾಕ್ಯದಲ್ಲಿ ಹೇಳುವುದಾರೆ ಈಸ್ಟ್ ಇಂಡಿಯಾ ಕಂಪನಿಯ ಒಡೆದು ಆಳುವ ನೀತಿಯನ್ನು ರೂಪಾಂತರಿಸಿದ ಮುಕ್ತ ಮಾರುಕಟ್ಟೆಯು ತನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಂಡು ಬೇಡವಾದದ್ದನ್ನು ಗಣಿಗಳಲ್ಲಿ ಬುಲ್ಡೋಜರ್ ಅನುಪಯುಕ್ತ ಮಣ್ಣನ್ನು ತಳ್ಳುವಂತೆ ತಳ್ಳಿಹಾಕುತ್ತಿದೆ. ಇಂತಹ ಅಭಿವೃದ್ಧಿ ಪ್ರಕ್ರಿಯೆಗಳು ಮಹಿಳೆಯರು ಮತ್ತು ಅಸಹಾಯಕರನ್ನು ಹೊರಹಾಕುವುದಲ್ಲದೆ, ಪುಕ್ಕಟೆಯಾಗಿ ಅವರನ್ನು ಬಳಸುವುದು ಮಾತ್ರವಲ್ಲದೆ, ಅವರ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಅಲ್ಲದೆ ತನಗೆ ಬೇಕಾದಂತೆ ‘ಅಭಿವೃದ್ಧಿ’ಯನ್ನು ಪರಿಭಾವಿಸಿಕೊಳ್ಳುತ್ತಲೇ ಇರುತ್ತದೆ.
ಈ ರೀತಿಯ ಸಾಮಾಜಿಕ ಸಂಘರ್ಷ ವೈಯಕ್ತಿಕ ಹಾಗೂ ಕುಟುಂಬ ಹಂತದಲ್ಲಿ ಪ್ರಾರಂಭವಾಗಿ, ಗುಂಪು ಸಂಘರ್ಷಗಳಾಗಿ, ಅನಂತರ ಜಾತಿ, ಧರ್ಮ, ಪ್ರದೇಶ(ಗ್ರಾಮ-ನಗರ) ಹಾಗೂ ಲಿಂಗಗಳ ನಡುವೆ ಹೆಚ್ಚು ವಿಸ್ತರಣೆ ಆಗುತ್ತಿವೆ. ಇಂತಹ ಸಂಘರ್ಷಗಳನ್ನು ಹೆಚ್ಚು ಸಂಕೀರ್ಣಗೊಳಿಸುವ, ವಿಸ್ತರಿಸುವ ಕೆಲಸವನ್ನು ಜಾಗತಿಕ ಮಾರುಕಟ್ಟೆಯ ಪ್ರಬಲರು ಮಾಡುತ್ತಿದ್ದಾರೆ. ಇದು ಮುಕ್ತ ಮಾರುಕಟ್ಟೆ ರಾಜಕಾರಣ. ಏಕೆಂದರೆ ಬಹುರಾಷ್ಟ್ರೀಯ ಬಂಡವಾಳಶಾಹಿ ವರ್ಗದ ಲೂಟಿಕೊರತನದ ವಿರುದ್ಧ ಎಲ್ಲಾ ಸ್ಥಳೀಯ ಜನರು ಒಂದಾಗಿ ತಿರುಗಿ ಬೀಳುವ ಎಚ್ಚರ ಕೂಡ ಬಂಡವಾಳಶಾಹಿ ವರ್ಗಕ್ಕಿರುವುದು ಚರಿತ್ರೆ. ಬಂಡವಾಳಶಾಹಿ ಕೈಗಾರಿಕೀಕರಣವು 1800ರ ಮಧ್ಯ ಅವಧಿಯಲ್ಲಿ ರೈತರು ಹಾಗೂ ಸಣ್ಣ ಪ್ರಮಾಣದ ಉತ್ಪಾದಕರಿಗೆ ಹಾನಿಯನ್ನುಂಟು ಮಾಡುತ್ತದೆ. ಕೈಗಾರಿಕೀಕರಣದ ವಿರುದ್ಧ ಯುರೋಪಿನಾದ್ಯಾಂತ ಪ್ರತಿರೋಧದ ಅಲೆಯೇಳುತ್ತದೆ. ಈ ಪ್ರತಿರೋಧದ ಮಾದರಿಯಲ್ಲಿಯೇ ಇಂಗ್ಲೆಂಡ್ ದೇಶದಲ್ಲಿ ನಡೆದ ಕ್ರಾಂತಿಗಳು, ಪ್ರಜಾಪ್ರಭುತ್ವವಾದಿ ಚಳವಳಿಗಳ ಮೂಲಕ ಆದರ್ಶ ಸಮಾಜದ ಪರಿಕಲ್ಪನೆಗಳುಳ್ಳ ಸಮಾಜವಾದ ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲೆ ‘ಆರ್ಥಿಕ ಉದಾರೀಕರಣ’ ಹಾಗೂ ‘ಸಮಾಜ ಕಲ್ಯಾಣದ’ ಪರಿಕಲ್ಪನೆಗಳು ಅಭಿವೃದ್ಧಿ ಯೋಜನೆಗಳಲ್ಲಿ ಅಡಕವಾಗಿರಬೇಕೆಂಬ ಹೊಸ ಹೊಸ ‘ಅಭಿವೃದ್ಧಿ’ ಸಿದ್ಧಾಂತಗಳು ಸಹ ರೂಪಗೊಳ್ಳುತ್ತವೆ. ಕಾರ್ಮಿಕರ ಒತ್ತಾಯದ ಮೂಲಕ ಪ್ರಾರಂಭವಾದ ಈ ಬದಲಾಣೆಯನ್ನು ಕಾರ್ಲ್ ಪೊಲಾನೈಯ್ ‘ಹೊಸ ಸಮಾಜದ ಉದಯ’ ಎಂದು ಕರೆದಿದ್ದಾರೆ.
ಹೊಸ ಸಮಾಜದ ಉದಯವು ಬ್ರಿಟಿಷ್ ಆಡಳಿತವನ್ನು ಬಂಡವಾಳಶಾಹಿ ಆಧಾರಿತ ಕೈಗಾರೀಕರಣದಿಂದ ಉಂಟಾದ ಘರ್ಷಣೆಗಳಿಂದ ಹೊರಬರಲು ‘ಅಭಿವೃದ್ಧಿ’ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಗತ್ಯತೆಯನ್ನು ಸೃಷ್ಠಿಸುತ್ತದೆ. ಆ ಸಂದರ್ಭದಲ್ಲಿ ಹಲವು ವಿಭಿನ್ನ ಪ್ರಕಾರದ ತಜ್ಞರಿಂದ ಅನೇಕ ರೀತಿಯ ‘ಅಭಿವೃದ್ಧಿ’ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಈ ಕಾರ್ಯಕ್ರಮಗಳ ಅನುಷ್ಠಾನ ಮಾಡಲು ವಿಭಿನ್ನ ರೀತಿಯ ಕಾರ್ಯತಂತ್ರಗಳನ್ನು ಅನುಸರಿಸಬೇಕಾದ ಸಂದರ್ಭವೂ ಆಳುವ ವರ್ಗಕ್ಕೆ ಎದುರಾಗುತ್ತದೆ. ಅಭಿವೃದ್ಧಿ ಯೋಜನೆಗಳು ರಾಜಕೀಯ ಹೋರಾಟಗಳಿಂದಾಗಿ ನಿರಂತರವಾಗಿ ಹೊಸ ರೂಪವನ್ನು ಪಡೆದುಕೊಳ್ಳುತ್ತವೆ ಎನ್ನುವ ಎಚ್ಚರ ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿರುವ ಆಳುವ ವರ್ಗಕ್ಕೆ ಯಾವಾಗಲು ಇರುತ್ತದೆ. ಆದರೆ ವಸಾಹತು ಪ್ರದೇಶದಲ್ಲಿನ ‘ಅಭಿವೃದ್ಧಿ’ ಯೋಜನೆಗಳ ಬದಲಾವಣೆಯ ಹೋರಾಟವನ್ನು ಜಾಗತಿಕ ಸ್ವರೂಪದ ಆರ್ಥಿಕ ಉದಾರೀಕರಣ ಹಾಗೂ ಸಾಮಾಜಿಕ ರಕ್ಷಣೆಯ ಕಾನೂನುಗಳ ಪರಿಧಿಯ ಹೊರಗಿಟ್ಟು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಈ ಹೋರಾಟಗಳು ರೂಪಿತವಾಗಿದ್ದೇ ಸಾಮ್ರಾಜ್ಯಶಾಹಿ ಹಾಗೂ ವಸಾಹತುಶಾಹಿ ರಾಜಕೀಯ ವ್ಯವಸ್ಥೆಯ ಸಂಘರ್ಷದ ಮೂಲಕ.
ಪ್ರಸ್ತುತ ಜಾರಿಯಲ್ಲಿರುವ ಅಭಿವೃದ್ಧಿ ನೀತಿಗಳಾದ ಹೊಸ ಆರ್ಥಿಕ ನೀತಿಯ ಉದಾರೀಕರಣ, ಸುರಕ್ಷತೆ ವ್ಯವಸ್ಥೆಯುಳ್ಳ ಜನಕಲ್ಯಾಣ ದಕ್ಷ ಆಡಳಿತ, ಮುಕ್ತ ಮಾರುಕಟ್ಟೆ, ಜಾಗತಿಕ ಸಮನ್ವಯತೆ, ನಿಯಂತ್ರಿತ ಸರ್ಕಾರ, ಸಾಮಾಜಿಕ ವಲಯಗಳಲ್ಲಿ ಬಹುರಾಷ್ಟ್ರೀಯ ಬಂಡವಾಳಶಾಹಿ ವರ್ಗದ ಬಂಡವಾಳದ ಹೂಡಿಕೆ ಇನ್ನು ಮುಂತಾದ ಲಕ್ಷಣಗಳನ್ನು ವಸಾಹತು-ನಗರ ಸಂಬಂಧಗಳಲ್ಲೇ ನಾವು ಗಮನಿಸಬಹುದು. ಇಂತಹ ಹೊಸ ಅಭಿವೃದ್ಧಿ ನೀತಿಗಳು ಇದ್ದಕಿದ್ದಂತೆ ವಸಾಹತುಶಾಹಿ ಅಧಿಕಾರಿಯ ಮನಸ್ಸಿನಲ್ಲಿ ಮೂಡಿದವು. ಇದಕ್ಕೆ ಕಾರಣ ಜನತೆಯ ಪ್ರಬಲವಾದ ಪ್ರತಿರೋಧ. ಜನರ ಪ್ರತಿರೋಧವನ್ನು ದಮನ ಮಾಡಲು ರಾಜ್ಯವ್ಯವಸ್ಥೆ ಕೈಗೊಂಡ ತೀವ್ರತರವಾದ ಕ್ರಮಗಳಲ್ಲಿಯೂ ‘ಅಭಿವೃದ್ಧಿ’ಯ ಎಳೆಗಳು ಕಾಣಸಿಗುತ್ತವೆ. ಈಸ್ಟ್ ಇಂಡಿಯಾ ಕಂಪನಿಯು ಅನುಸರಿಸಿಕೊಂಡು ಬಂದಿದ್ದ ಜನವಿರೋಧಿ ನೀತಿಯನ್ನು ‘ವಿಶ್ವಬ್ಯಾಂಕ್’, ‘ಐ.ಎಂ.ಎಫ್’ ಮತ್ತು ‘ವಾಷಿಂಗ್‍ಟನ್ ಸಹಮತ’ ಮೂಲಕ ರೂಪುಗೊಂಡ ‘ಅಭಿವೃದ್ಧಿ’ ಯೋಜನೆಗಳು ಬೇರೆ ರೂಪದಲ್ಲಿ ಮುಂದುವರಿಸುತ್ತಿದೆ .
‘ಸಬಲೀಕರಣ’ ಪದವೇ ಅರ್ಥಹೀನ :
ಭಾರತದ ಅಭಿವೃದ್ಧಿ ಯೋಜನೆಗಳ ರೂಪುಗೊಳ್ಳುವಿಕೆ ಮತ್ತು ಅನುಷ್ಠಾನದಲ್ಲಿ ಅನೇಕ ಗೊಂದಲಗಳನ್ನು ಸೃಷ್ಠಿಸಲಾಗುತ್ತಿದೆ. ಹಕ್ಕು ಆಧಾರಿತ ಅಭಿವೃದ್ಧಿಯನ್ನು, ಪ್ರತಿಪಾದಿಸುವಾಗಲೇ ಅನಗತ್ಯ ಚಾರಿತ್ರಿಕ ವಿಷಯಗಳನ್ನು (ಮಂದಿರ, ಮಸೀದಿ, ಧರ್ಮ, ಪರಂಪರೆ, ನಂಬಿಕೆ, ಧಾರ್ಮಿಕತೆ, ಆಹಾರ ಪದ್ಧತಿ [ವಿಶೇಷವಾಗಿ ಮಾಂಸಾಹಾರ] ಇತ್ಯಾದಿ) ಪ್ರಸ್ತಾಪಿಸಿ, ಜೀವ ವಿರೋಧಿ ಚಟುವಟಿಕೆಗಳು ಹೆಚ್ಚಾಗುವಂತೆ ನೋಡಿಕೊಳ್ಳಲಾಗುತ್ತದೆ. ಜನರ ನಡುವೆ ಅಸಮಾನತೆಯನ್ನು ಹೆಚ್ಚಿಸುವ, ಶೋಷಣೆ ಮತ್ತು ದೌರ್ಜನ್ಯವನ್ನು ಪ್ರತಿಪಾದಿಸುವ ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ, ಅಂತಾರಾಷ್ಟ್ರೀಯ ನೇರ ಬಂಡವಾಳ ಹೂಡಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಮಾನವ ಅಭಿವೃದ್ಧಿ ಸೂಚಕಗಳಾದ, ಲಿಂಗ ಸಮಾನತೆ, ಸಮತೆ, ಸಾಮಾಜಿಕ ನ್ಯಾಯ, ಸಾಮಾಜಿಕ ಭದ್ರತೆ, ಆಹಾರ ಭದ್ರತೆ, ಆರೋಗ್ಯದ ಭದ್ರತೆಗಳು ಯಾವಾಗಲೂ ಬಂಡವಾಳ ಹೂಡಿಕೆಯಿಂದಲೇ ಸಾಧಿಸಿಕೊಳ್ಳಲು ಸಾಧ್ಯವಿಲ್ಲ. ಮಾನವ ಅಭಿವೃದ್ಧಿಗೆ ಬಂಡವಾಳವೆ ಸಾಧನವಲ್ಲ ಎನ್ನುವುದನ್ನು ಜೀವಪರವಾಗಿ ಯೋಚಿಸುತ್ತಿರುವ ವೈಜ್ಞಾನಿಕ ಸಮುದಾಯ ಈಗಾಗಲೇ ದಾಖಲಿಸಿದೆ. ಆದರೂ ಯಾಕೆ ಬಂಡವಾಳ ಪ್ರೇರಿತ, ಅದರಲ್ಲೂ ಎಫ್.ಡಿ.ಐ. ‘ಅಭಿವೃದ್ಧಿ’ಯ ಮೂಲ ಮಂತ್ರವಾಗಿದೆ? ಏಕೆಂದರೆ ಬಂಡವಾಳ ಇಲ್ಲದ ಅಭಿವೃದ್ಧಿಯನ್ನು ಪ್ರತಿಪಾದಿಸಿದರೆ ಆಳುವ ವರ್ಗಕ್ಕೆ ಲಂಚ ನೀಡುವವರು ಯಾರು ಇಲ್ಲದಂತಾಗುತ್ತಾರೆ. ಇದರಿಂದ ರಾಜಕಾರಣಿಗಳಿಗೆ, ಆಡಳಿತಶಾಹಿಗಳಿಗೆ ತಲೆಮಾರುಗಳು ತಿಂದು ತೇಗಲು ಬೇಕಾಗುವಷ್ಟು ಆಸ್ತಿ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ರಾಷ್ಟ್ರೀಯ ಬಂಡವಾಳಶಾಹಿಗಳು ಮತ್ತು ಅಂತಾರಾಷ್ಟ್ರೀಯ ಬಂಡವಾಳಶಾಹಿ ವರ್ಗಕ್ಕೆ ನಮ್ಮ ರಾಜಕೀಯ(ಎಲ್ಲಾ ಪಕ್ಷದ) ನಾಯಕರು ಮತ್ತು ನಮ್ಮ ಆಡಳಿತಶಾಹಿಗಳು ದಲ್ಲಾಳಿಗಳಾಗಿದ್ದಾರೆ. ಇವರಿಗೆ ಸಾಮಾನ್ಯ ಜನರ ಬದುಕು ಬೇಕಾಗಿಲ್ಲ ಮತ್ತು ಅವರು ಜೀವಂತವಾಗಿ ಬದುಕುವುದು ಬೇಕಾಗಿಲ್ಲ.
ಒಂದು ಕಡೆ ಆಳುವ ವರ್ಗ ಮತ್ತು ಅದರ ದಲ್ಲಾಳಿಗಳು ಹೊಸ ಆರ್ಥಿಕ ನೀತಿಯ ಅನಂತರ, ‘ಆಭಿವೃದ್ಧಿ’ಗೆ ವಿದೇಶಿ ನೇರ ಬಂಡವಾಳ ಹೂಡಿಕೆ ತುಂಬಾ ಅಗತ್ಯ ಎಂಬ ವಾತಾವರಣವನ್ನು ರೂಪಿಸಿದ್ದಾರೆ. 1992ರ ವಿಶ್ವಬ್ಯಾಂಕು ವರದಿಯು ಮಹಿಳೆಯರ ಆದಾಯದಲ್ಲಿನ ಹೆಚ್ಚಳವು ಕೌಟುಂಬಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪ್ರಭಾವವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ಬಡತನ ಇಳಿಮುಖವಾಗಿ ಮಾನವ ಬಂಡವಾಳದ ಗುಣಮಟ್ಟವು ಸುಧಾರಣೆಯಾಗುವುದು ಎಂದು ತಿಳಿಸುತ್ತದೆ. ಇಂತಹ ಅನೇಕ ವರದಿಗಳು ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳ ರೂಪಿಸುವಿಕೆಯಲ್ಲಿಯೂ ಪ್ರಭಾವವನ್ನು ಬೀರುತ್ತಿವೆ. ಅದರ ಭಾಗವಾಗಿ ವಿಶ್ವಬ್ಯಾಂಕಿನ ಹಣಕಾಸಿನ ಸಹಾಯದಿಂದ ಸರ್ಕಾರಗಳು ಮಹಿಳೆಯರ ಉದ್ಯಮಶೀಲ ಚಟುವಟಿಕೆಗಳ ಹೆಚ್ಚಳಕ್ಕೆ ಪ್ರಾದೇಶಿಕ, ರಾಜ್ಯಮಟ್ಟದ ಮಹಿಳೆಯರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿವೆ. ಈ ನಿಗಮಗಳು ಮಹಿಳೆಯರಿಗೆ ಸಾಲವನ್ನು ಮಾತ್ರ ಕೊಡದೆ, ಮಾರುಕಟ್ಟೆಯ ತಂತ್ರಗಳನ್ನು ರೂಪಿಸಿಕೊಳ್ಳುವ ತರಬೇತಿಗಳನ್ನು ಒದಗಿಸುತ್ತಿವೆ. ಆದರೆ ಮಹಿಳೆ ಮತ್ತು ಮಕ್ಕಳ ಹಸಿವು, ಅಪೌಷ್ಠಿಕತೆ, ಶಿಕ್ಷಣ, ಆರೋಗ್ಯ ಇತ್ಯಾದಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ನಿವಾರಿಸಲು ಬೇಕಾದ ಹಣವನ್ನು ಇದುವರೆಗೂ ಯಾವುದೇ ಸರ್ಕಾರ ನೀಡಲಿಲ್ಲ. ಮತ್ತೊಂದು ಕಡೆ ಸರ್ಕಾರಗಳು ತನ್ನ ಬಜೆಟ್‍ಗಳಲ್ಲಿ ಸಾಮಾಜಿಕ ಕ್ಷೇತ್ರಗಳಿಗೆ ಹಣಕಾಸಿನ ಹಂಚಿಕೆಯನ್ನು ಕಡಿತಗೊಳಿಸುತ್ತಿರುವಾಗ, ನಾವು ಮಹಿಳೆಯರ ಸಂಬಂಧಿಸಿದಂತೆ ಮಾತಾಡುತ್ತಿರುವ ‘ಸಬಲೀಕರಣ’ ಎಂಬ ಪದವೇ ಅರ್ಥಹೀನವಾಗಿದೆ.
2011ರ ಸಾಮಾಜಿಕ-ಆರ್ಥಿಕ ಜಾತಿ ಗಣತಿಯು(ಎಸ್.ಐ.ಸಿ.ಸಿ.) ಗ್ರಾಮೀಣ ಪ್ರದೇಶ(ಗ್ರಾ.ಪ್ರ.)ದಲ್ಲಿ ಇರುವ ಶೇ. 49 ರಷ್ಟು ಕುಟುಂಬಗಳು ಬಡತನದಲ್ಲಿವೆ. ಶೇಕಡ 51 ರಷ್ಟು ಕುಟುಂಬಗಳು ಬದುಕಿಗೆ ಪ್ರತಿದಿನವೂ ಕೂಲಿ ಕೆಲಸವನ್ನು ಅವಲಂಬಿಸಿವೆ, ಶೇಕಡ 30 ಕುಟುಂಬಗಳು ಭೂಮಾಲೀಕತ್ವವನ್ನು ಹೊಂದಿಲ್ಲ, ಹಳ್ಳಿಗಳಲ್ಲಿ ಇರುವ ಶೇಕಡ 77 ಕುಟುಂಬಗಳು ಪ್ರತಿದಿನ ದುಡಿಮೆಗಾಗಿ 5 ಕಿ.ಮೀ ಪ್ರಯಾಣ ಮಾಡಲೇಬೇಕಾಗಿದೆ. ಕಳೆದ ಮೂರು ಜನಗಣತಿ (1991-2011) ಅವಧಿಯಲ್ಲಿ ಭೂ ರಹಿತ ಕೃಷಿ ಕೂಲಿ ಕಾರ್ಮಿಕರ ಸಂಖ್ಯೆ (ಶೇ. 26 ರಿಂದ ಶೇ. 30) ಹೆಚ್ಚಾಗಿದೆ. ಆದರೆ ಕೂಲಿಯು 1980ರಲ್ಲಿ ಶೇಕಡ5 ಪ್ರಮಾಣದಲ್ಲಿ ಹೆಚ್ಚಳ ಕಂಡರೆ, 1990ರಲ್ಲಿ ಶೇ.2ರಷ್ಟು ಬೆಳವಣಿಗೆ ಸಾಧಿಸಿ, 2000ರ ಮೊದಲ ಅರ್ಧದಲ್ಲಿ ಶೂನ್ಯವಾಗಿದೆ. ಹೀಗಾಗಿ ಅರ್ಧದಷ್ಟು ಜನರ ಮಾಸಿಕ ತಲಾ ಅನುಭೋಗ ವೆಚ್ಚ ರೂ.1030ಕ್ಕಿಂತಲೂ ಕಡಿಮೆ. ಸ್ವಲ್ಪ ಹೆಚ್ಚು ಕಡಿಮೆ ಶೇ.40 ರಷ್ಟು ಜನರ ಮಾಸಿಕ ತಲಾ ಅನುಭೋಗ ವೆಚ್ಚ ರೂ.922/-ಕ್ಕಿಂತಲೂ ಕಡಿಮೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಪಡಿತರ ವ್ಯವಸ್ಥೆಗಳ ಸವಕಳಿಯು ಆಹಾರ ಪದಾರ್ಥಗಳ ಬೆಲೆಯ ಹೆಚ್ಚಳವು ಅಪೌಷ್ಟಿಕ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಲು ಕಾರಣವಾಗಿದೆ. ಉದಾಹರಣೆಗೆ 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 (ಎಚ್.ಎಫ್.ಎಚ್.ಎಸ್.-4) ಪ್ರಕಾರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿರು ಶೇ. 24.3 ರಷ್ಟು ಮಹಿಳೆಯರ ಮತ್ತು ನಗರ ಪ್ರದೇಶದ ಶೇಕಡ 162 ಮಹಿಳೆಯರ ಬಾಡಿ ಮಾಸ್ ಸೂಚಿ (ಬಿ.ಎಂ.ಐ.) ಕನಿಷ್ಠ ಮಟ್ಟಕ್ಕಿಂತಲೂ ಕಡಿಮೆ ತೂಕ ಹೊಂದಿದ್ದರೆ, 06ರಿಂದ 56 ತಿಂಗಳ ಮಕ್ಕಳಲ್ಲಿ ಶೇ. 60.9 ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಗರ್ಭೀಣಿಯರಲ್ಲಿ ಶೇ. 45.2 ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಮದುವೆಯಾಗಿರುವ ಶೇಕಡ 80.4 ರಷ್ಟು ಮಹಿಳೆಯರು ಅತ್ಯಂತ ವಿರಳವಾಗಿ ಕೌಟುಂಬಿಕ ನಿರ್ಧಾರಗಳಲ್ಲಿ ಭಾಗವಹಿಸುತ್ತಿದ್ದರೆ, ಶೇ. 79.5 ಮಹಿಳೆಯರು ತನ್ನ ಗಂಡನಿಂದಲೇ ಹಿಂಸೆಗೆ ಒಳಪಡುತ್ತಿದ್ದಾಳೆ ಎಂದು ಎಚ್.ಎಫ್.ಎಚ್.ಎಸ್.-4 ವರದಿ ತಿಳಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಬದುಕುತ್ತಿರುವಾಗ, ಇವರಿಗೆ ಆಹಾರ, ಆರೋಗ್ಯ ಮತ್ತು ಪೌಷ್ಠಿಕತೆಯಲ್ಲಿ ಭದ್ರತೆಯನ್ನು, ಕಲಿಕೆಗೆ ಶೈಕ್ಷಣಿಕ ಬೆಂಬಲವನ್ನು ನೀಡುವ ಮೂಲಕ ‘ಅಭಿವೃದ್ಧಿ’ ಮಹಿಳೆಯರನ್ನು ಒಳಗೊಳಬೇಕು. ಆದರೆ ಇದಕ್ಕೆ ಬೇಕಾದ ಹಣವನ್ನು ನೀಡದೆ ಅವರು ‘ಅಭಿವೃದ್ಧಿ’ ಪ್ರಕ್ರಿಯೆಯಿಂದ ಹೊರಗಿರುವಂತೆ ನೋಡಿಕೊಳ್ಳಲಾಗುತ್ತಿದೆ.
ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯನ್ನು ಸುಧಾರಿಸುವ ದೃಷ್ಠಿಯಿಂದ ನಲವತ್ತು ವರ್ಷಗಳ ಹಿಂದೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐ.ಸಿ.ಡಿ.ಎಸ್) ಯನ್ನು ಆಚರಣೆಗೆ ತರಲಾಗಿತ್ತು. ಇದಕ್ಕೆ ಅಂದು ಅಂತಾರಾಷ್ಟ್ರೀಯ ಸಂಸ್ಥೆಗಳ ಬೆಂಬಲ ಕೂಡ ದೊರೆಯಿತು. ಇದರ ಜೊತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ, ಸರ್ವ ಶಿಕ್ಷಣ ಅಭಿಯಾನ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮ ಇನ್ನೂ ಮುಂತಾದ ಯೋಜನೆಗಳು ಮಹಿಳೆಯ ಒಟ್ಟಾರೆ ‘ಅಭಿವೃದ್ಧಿ’ ಮತ್ತು ‘ಸಬಲೀಕರಣ’ದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿವೆ. ಈ ಯೋಜನೆಗಳ ಅನುಷ್ಠಾನದ ಅನಂತರ ಕಡಿಮೆ ತೂಕದ ಶಿಶು ಜನನವನ್ನು, ಅಪೌಷ್ಠಿಕತೆಯನ್ನು, ಶಿಶು ಮರಣ ಪ್ರಮಾಣವನ್ನು, ಮಕ್ಕಳು ಶಾಲೆಗಳಿಂದ ಹೊರಗಿರುವುದನ್ನು, ಪ್ರಸೂತಿ ಸಮಯದಲ್ಲಿ ತಾಯಿಯರ ಮರಣ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿಯಲ್ಲದಿದ್ದರೂ ಕಡಿಮೆ ಮಾಡಿದೆ ಎಂದು ಅನೇಕ ಅಧ್ಯಯನಗಳ ವರದಿಗಳು ತಿಳಿಸುತ್ತಾ ಬಂದಿವೆ. ಇಂತಹ ಯೋಜನೆಗಳು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕು ಮತ್ತು ಇದಕ್ಕೆ ಹೆಚ್ಚಿನ ಹಣವನ್ನು ರಾಷ್ಟ್ರೀಯ ಆದಾಯದಲ್ಲಿಯೇ ನೀಡಬೇಕು ಎಂದು ನಾಗರಿಕ ಸಮಾಜದ ಚಳವಳಿಗಳು ಒತ್ತಾಯಿಸುತ್ತಲೆ ಬಂದಿವೆ.
ಆದರೂ ಈ ಯೋಜನೆಗಳಿಗೆ ಅಗತ್ಯವಾದಷ್ಟು ಹಣವನ್ನು ಯಾವಾಗಲೂ ಸರ್ಕಾರಗಳು ನೀಡದಿದ್ದರೂ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೆಚ್ಚಳವಾಗುತಿತ್ತು. ಆದರೆ 2014-15 ಮತ್ತು 2015-16 ಹಣಕಾಸು ವರ್ಷಗಳ ನಡುವಿನ ಅವಧಿಯಲ್ಲಿ ಐ.ಸಿ.ಡಿ.ಎಸ್. ಯೋಜನೆಗೆ ಕಡಿತವಾದ ಅನುದಾನ ರೂ.9637/- ಕೋಟಿ. ಇದೇ ಅವಧಿಯಲ್ಲಿ ಸರ್ವ ಶಿಕ್ಷಣ ಅಭಿಯಾನಕ್ಕೆ ಯೋಜನೆಗೆ ರೂ.5758/-ಕೋಟಿ ಅನಿದಾನ ಕಡಿತ ಮಾಡಿದ್ದರೆ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ರೂ.3979/- ಕೋಟಿ ರೂಪಾಯಿಗಳನ್ನು ಕಡಿತ ಮಾಡಲಾಗಿದೆ. ಹಾಗೆಯೇ ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ ರೂ.3900/- ಕೋಟಿಗಳಷ್ಟು ಅನುದಾನವನ್ನು ಕಡಿತ ಮಾಡಲಾಗಿದೆ. ಈ ಎಲ್ಲಾ ಯೋಜನೆಗಳಿಗೆ ನೀಡಲಾಗುತ್ತಿದ್ದ ಅನುದಾನದಲ್ಲಿನ ತೀವ್ರ ಕಡಿತವು, ಪೌಷ್ಠಿಕಾಂಶಗಳು, ಆರೋಗ್ಯ ಮತ್ತು ಶಿಕ್ಷಣಕ್ಕೆ ಈ ಯೋಜನೆಯನ್ನೇ ಅವಲಂಬಿಸಿದ್ದ, ಲಕ್ಷಾಂತರ ಬಡ ಕುಟುಂಬಗಳ ಮಹಿಳೆಯರು, ಅದರಲ್ಲಿಯೂ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳ ಆರೋಗ್ಯದ ಮೇಲೆ ಅತ್ಯಂತ ಗಂಭೀರವಾದ ಪರಿಣಾಮವನ್ನು ಉಂಟುಮಾಡುತ್ತದೆ.
ಆದರೆ ಭಾರತದ ರಾಷ್ಟ್ರೀಯ ಉತ್ಪನ್ನದ (ಜಿ.ಡಿ.ಪಿ.) ಬೆಳೆವಣಿಗೆ ದರವು, 2014-15ರಲ್ಲಿ ಶೇಕಡ 7.6 ಬೆಳೆವಣಿಗೆಯನ್ನು ಕಂಡರೆ ಶೇಕಡ 10 ರಷ್ಟು ಬೆಳೆವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವಾಲಯ ಹೇಳುತ್ತಿದೆ. ಈ ಬೆಳೆವಣಿಗೆಯ ದರವು ಒಟ್ಟು ಜನಸಂಖ್ಯೆಯಲ್ಲಿ ಇರುವ ಶೇಕಡ 20 ರಷ್ಟು ಮಧ್ಯಮವರ್ಗದ ನಿರೀಕ್ಷೆಗಳು ಮತ್ತು ಅಗತ್ಯಗಳನ್ನು ಸ್ವಲ್ಪಮಟ್ಟಿಗೆ ಒಳಮಾಡಿಕೊಂಡಿದೆ. ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಮಹಿಳೆಯರ, ಭೂರಹಿತ ಮಹಿಳಾ ಕೃಷಿ ಕಾರ್ಮಿಕರ, ಮಹಿಳಾ ಮನೆ ಕೆಲಸಗಾರ, ಮಹಿಳಾ ಕಟ್ಟಡ ಕೆಲಸಗಾರರ, ಇಟ್ಟಿಗೆ ಭಟ್ಟಿಗಳಲ್ಲಿ ದುಡಿಯುವವರ ಮಕ್ಕಳು ಮತ್ತು ಮಹಿಳೆಯ ಬದುಕಿನಲ್ಲಿ ಯಾವುದೇ ಬದಲಾವಣೆಗಳನ್ನು ತಂದಿಲ್ಲ. ಆದರೆ ಭಾರತ ಆರ್ಥಿಕ ಬೆಳವಣಿಗೆಯೂ ಶ್ರೀಮಂತರ ಆಸ್ತಿ ಮಾತ್ರ 1.76 ಟ್ರಿಲಿಯನ್‍ನಷ್ಟು ಹೆಚ್ಚಾದರೆ, ಬಡವರ ಆಸ್ತಿ ಶೇಕಡ 41 ರಷ್ಟು ಕಡಿಮೆಯಾಗಿದೆ. ನಮ್ಮ ಆರ್ಥಿಕ ಬೆಳೆವಣಿಗೆಯು ಕೇವಲ ಆರ್ಥಿಕ ಅಸಮಾನತೆಗಳನ್ನು ಮಾತ್ರ ಹಲವು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಉಂಟುಮಾಡಿರುವುದನ್ನು ಜೀವಪರವಾಗಿ ಯೋಚಿಸುತ್ತಿರುವವರು ದಾಖಲಿಸುತ್ತಿದ್ದಾರೆ.
ಅದರೆ ಜಗತ್ತಿನಲ್ಲಿಯೇ ಅತ್ಯಂತ ವೇಗವಾದ ಆರ್ಥಿಕ ಬೆಳೆವಣಿಗೆಯನ್ನು ಸಾಧಿಸುತ್ತಿರುವ ಎರಡನೆಯ ರಾಷ್ಟ್ರವಾದ ಭಾರತದ ಆರ್ಥಿಕ ಪ್ರಗತಿಗೆ ಮಹಿಳೆಯ ‘ಅಭಿವೃದ್ಧಿ’ ವಿಷಯಗಳು ಒಳಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಯಾಕೆ? ಯಾಕೆ ಬಡ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿಲ್ಲ? ಏಕೆಂದರೆ ಜಾಗತಿಕ ಬಂಡವಾಳಶಾಹಿ ವರ್ಗದ ‘ಅಭಿವೃದ್ಧಿ’ ತಂತ್ರಗಳು ನವ ಸಮಾಜಗಳಲ್ಲಿ ಕಾರ್ಮಿಕರು ಕಲ್ಪಿತ ಸರಕುಗಳ ಉತ್ಪಾದನೆಯಲ್ಲಿ ಒಂದು ಭಾಗವಾದುದರಿಂದ, ಕಾರ್ಮಿಕರು ಮತ್ತು ಅವರ ಹಕ್ಕುಗಳನ್ನು ನಿಧಾನವಾಗಿ ಕಿತ್ತುಕೊಳ್ಳಲಾಗುತ್ತಿದೆ. ಕಾರ್ಮಿಕರು ಯಾವುದೇ ಸಾಮಾಜಿಕ ಭದ್ರತೆಯಿಲ್ಲದೆ, ಕಡಿಮೆ ಕೂಲಿಗೆ ಹೆಚ್ಚು ಸಮಯ ದುಡಿಯುವ ಮತ್ತು ಅದಕ್ಕೆ ಯಾವುದೇ ಹೆಚ್ಚುವರಿ ಭತ್ಯೆ ನೀಡದೆ ಇರುವಂತೆ ಕಾನೂನು ಮಾಡಲಾಗುತ್ತಿದೆ. ಮಹಿಳಾ ಕಾರ್ಮಿಕರನ್ನು ರಾತ್ರಿ ಪಾಳಿಯ ಕೆಲಸಕ್ಕೆ ನಿಯೋಜಿಸುವಾಗ ಅನುಸರಿಸಬೇಕಾದ ನಿಯಂತ್ರಣಗಳನ್ನು ಉದಾರೀಕರಿಸಿ ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಲಾಗುತ್ತಿದೆ. ಆ ಮೂಲಕ ಬಹುರಾಷ್ಟ್ರೀಯ ಬಂಡವಾಳಶಾಹಿ ವರ್ಗಕ್ಕೆ ಭಾರತ ಮಾನವ ಸಂಪತ್ತು ಅತ್ಯಂತ ಕಡಿಮೆ ಬೆಲೆಗೆ (ಸಾಧ್ಯವಿರುವ ಕಡೆ ಉಚಿತವಾಗಿ) ದೊರಕುವಂತೆ ಮಾಡಲಾಗುತ್ತಿದೆ.
‘ಅಭಿವೃದ್ಧಿ’ ಹೆಸರಿನಲ್ಲಿ ಯಾವುದು ಕುಟುಂಬದಲ್ಲಿ ಮತ್ತು ನೆರೆಹೊರೆಯಲ್ಲಿ ಬದಲಾವಣೆಯ ಮೂಲಕ ಬಳಕೆಯಲ್ಲಿತ್ತೋ(ದೈಹಿಕ ಶ್ರಮ- ಶ್ರಮ ವಿಭಜನೆ) ಅದು ವೇತನ ತರುವ ಉದ್ಯೋಗವಾಗಿ (ಕೂಲಿ) ಬದಲಾಯಿಸಲ್ಪಟ್ಟಿತು. ಒಂದು ಪೂರ್ಣ ‘ಅಭಿವೃದ್ಧಿ’ ಹೊಂದಿದ ಪ್ರದೇಶದಲ್ಲಿ ಅಜ್ಜ ಅಜ್ಜಿಯ ಬದಲಾಗಿ ಅಂಗನವಾಡಿಗಳು ಮಕ್ಕಳ ಪೋಷಣೆಯಲ್ಲಿ ತೊಡಗುವುದು. ಕುಟುಂಬಕ್ಕೆ ಬದಲಾಗಿ ವಧು-ವರರ ವೇದಿಕೆಗಳು ಸಂಗಾತಿಗಳ ಆಯ್ಕೆ ಮತ್ತು ಮದುವೆಗಳು ನಡೆಯುವುದು. ನಾಯಿಯ ವಾಯು ವಿಹಾರಕ್ಕೆ ಬೇರೊಬ್ಬ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳುವುದು. ಈ ಉದಾಹರಣೆಗಳು ನಗೆ ವಸ್ತುಗಳಂತೆ ಕಾಣಬಹುದು. ಆದರೆ ಅವು ಅಪಾಯಕ್ಕೆ ಸಿಲುಕಿರುವ, ಬದಲಾಗುತ್ತಿರುವ ಸಾಮಾಜಿಕ ಸಂಬಂಧಗಳ ಬೆಸುಗೆಗಳನ್ನು ಗುರುತಿಸುತ್ತಿವೆ. ಯಾವುದೆಲ್ಲಾ ವೈಯಕ್ತಿಕವಾಗಿತ್ತೊ, ಸಂಪೂರ್ಣವಾಗಿ ಮಾರುಕಟ್ಟೆಯಿಂದ ದೂರ ಉಳಿಯಬೇಕೋ ಇಂದು ಅದೆಲ್ಲವು ಪಾವತಿಸಿ ಪಡೆಯುವ ಸೇವೆಗಳಾಗಿವೆ. ಜಾಗತಿಕ ಬಂಡವಾಳಶಾಹಿ ಅಭಿವೃದ್ಧಿ ಮಾದರಿಗಳಿಂದ ನಿರ್ಗತಿಕ ಸ್ಥಿತಿಗೆ ದೂಡಲ್ಪಟ್ಟಿರುವ ದಕ್ಷಿಣದ ರಾಷ್ಟ್ರಗಳ ಅಸಹಾಯಕ ಮಹಿಳೆಯ ಗರ್ಭಕೋಶ (ಬಾಡಿಗೆ ಗರ್ಭಕೋಶ/ಬಾಡಿಗೆ ತಾಯಿ), ಮೂತ್ರಪಿಂಡವು ಸೇರಿದಂತೆ ಮಾನವರ ಅಂಗಾಂಗಗಳ ಖರೀದಿ ಮತ್ತು ಮಾರಾಟವು, ಅಂತಿಮವಾಗಿ ‘ಅಭಿವೃದ್ಧಿ’ ಹೊಂದಿದ ದೇಶದಲ್ಲಿ ಸಂಪನ್ಮೂಲಗಳಾಗಿ ಪರಿವರ್ತನೆಗೊಳ್ಳುತ್ತಿದೆ. ‘ಅಭಿವೃದ್ಧಿ’ ಎಂದರೆ ಜನರು ತಮ್ಮನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳುವ ಬಂಡವಾಳಶಾಹಿಗೆ ಮಾರಿಕೊಳ್ಳುವ ಕ್ರಮ ಎಂದು ಬಹುರಾಷ್ಟ್ರೀಯ ಬಂಡವಾಳಶಾಹಿ ವರ್ಗ ಬಹುಜನರನ್ನು ನಂಬಿಸಿದೆ. ಇಲ್ಲಿ ಮಹಿಳೆ ಸೇರಿದಂತೆ ಎಲ್ಲರೂ ವ್ಯಾಪಾರದ ವಸ್ತುಗಳಾಗಿ ಮಾರುಕಟ್ಟೆಯಲ್ಲಿ ನಿಲ್ಲುವುದು ಮತ್ತು ದೊರಕುವುದು.
ಈ ರೀತಿ ‘ಅಭಿವೃದ್ಧಿ’ ಪ್ರವೃತಿಗಳು ವ್ಯಾಪಕವಾದಂತೆ ಮಹಿಳೆಯರ ಹಕ್ಕುಗಳು ಬೆಲೆ ಕಳೆದುಕೊಳ್ಳುತ್ತವೆ. ಯಾವುದೇ ಹಕ್ಕುಗಳಿಲ್ಲದೆ ಈಗಾಗಲೇ ಇವರು ಶೋಷಣೆ, ತಾರತಮ್ಯ ಮತು ದೌರ್ಜನ್ಯ ಇರುವ ಆಡಳಿತದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಮಹಿಳೆ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯನ್ನು ರೂಪಿಸಲಾಗುತ್ತದೆ. ಮಾರುಕಟ್ಟೆಯ ತರ್ಕ ಮತ್ತು ತಂತ್ರದ ಮೇಲೆ ರೂಪಿತವಾಗುತ್ತಿರುವ ನಮ್ಮ ಸರ್ಕಾರಗಳ ‘ಅಭಿವೃದ್ಧಿ’ ಮತ್ತು ‘ಸಬಲೀಕರಣ’ ಮಂತ್ರಗಳು ಮಹಿಳೆಯರ ಸಾಮಾಜಿಕ ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳನ್ನು ರಕ್ಷಿಸಲು ಸಂರ್ಪೂಣವಾಗಿ ವಿಫಲವಾಗುತ್ತಿವೆ. ಇಂತಹ ಬೆಳೆವಣಿಗೆಗಳು ಮಹಿಳೆಯರ ಮುಂದೆ ಹೊಸ ಹೊಸ ಸಾಮಾಜಿಕ ಸವಾಲುಗಳನ್ನು ಸೃಷ್ಠಿಸುತ್ತಿವೆ. ಇವುಗಳ ಪರಿಣಾಮವಾಗಿಯೇ ಈಗಾಗಲೇ ದ್ವಿಮುಖ/ಅದಕ್ಕಿಂತಲೂ ಹೆಚ್ಚು ತೊಂದರೆಗಳನ್ನು ಅನುಭವಿಸುತ್ತಿರುವ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಬಹಳ ಸಂಕೀರ್ಣವಾದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಬಡ ಮಹಿಳೆಯರು ಎದುರಿಸುತ್ತಿರುವ ಸವಾಲುಗಳನ್ನು ಉದಾರವಾಗಿ ಸಿದ್ಧಾಂತ ಹೇಳುವ ‘ಅಭಿವೃದ್ದಿ’ ಕೇವಲ ಆರ್ಥಿಕ ಅಂಶಗಳ ‘ಸಬಲೀಕರಣ’ಕ್ಕೆ (ಬಂಡವಾಳ, ಬಡ್ಡಿ, ಲಾಭ, ಉಳಿತಾಯ) ಮಾತ್ರ ಸಂಬಂಧಿಸಿದ ವಿಷಯವಾಗಿ ಪರಿಗಣಿಸಿದೆ. ಆ ಮೂಲಕವೇ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ಬಂಧಿಸಿ, ನಿಯಂತ್ರಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರವೃತ್ತಿಗಳು ‘ಅಭಿವೃದ್ಧಿ’ ಹೆಸರಿನಲ್ಲಿ ರೂಪತಾಳುತ್ತಿವೆ. ಇದು ನಮ್ಮ ಸಮಕಾಲೀನ ‘ಅಭಿವೃದ್ಧಿ’ ಮಹಿಳೆಯರನ್ನು ನೋಡುತ್ತಿರುವ ದೃಷ್ಠಿಕೋನ. ಇದು ಮುಕ್ತ ಮಾರುಕಟ್ಟೆಯನ್ನು ನಿಯಂತ್ರಣ ಮಾಡುತ್ತಿರುವ ಬಹುರಾಷ್ಟ್ರೀಯ ಬಂಡವಾಳಶಾಹಿ ವರ್ಗದ ಪ್ರಮುಖ ಅಜೆಂಡಾ ಕೂಡ. ಇಂತಹ ಸಮಯದಲ್ಲಿ ಸರ್ಕಾರಗಳು ಮಹಿಳೆಯರ ‘ಅಭಿವೃದ್ಧಿ’ ನೀತಿ ಮತ್ತು ಕಾರ್ಯಕ್ರಮಗಳಿಗೆ ನೀಡಬೇಕಾದ ರಚನಾತ್ಮಕ ಬೆಂಬಲ ಇಲ್ಲವಾಗಿದೆ. ಹೀಗಾಗಿ ನಾವು ಅನುಸರಿಸುತ್ತಿರುವ ‘ಅಭಿವೃದ್ಧಿ’ ನೀತಿಗಳಿಂದ ಮಹಿಳೆಯರೂ ಮತ್ತು ಹೆಣ್ಣು ಮಕ್ಕಳಿಗೆ ಸಮಾನತೆಯ ನೆಲೆಯಲ್ಲಿ ನ್ಯಾಯ, ಆಸ್ತಿಯ ಹಕ್ಕು, ಸಮಾನ ಅವಕಾಶ, ಸಮಾನ ವೇತನ, ಗೌರವಯುತ ಜೀವನ ಮತ್ತು ಅಧಿಕಾರ… ಭವ್ಯ ಭಾರತದಲ್ಲಿ ದೊರಕುವುದು ಕಷ್ಟ. ಯಾಕೆಂದರೆ ನಾವು ಅನುಸರಿಸುತ್ತಿರುವ ‘ಅಭಿವೃದ್ಧಿ’ಗೆ ಮಹಿಳೆಯರು ಎದುರಿಸುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯೇ ಇಲ್ಲ.