ಸರ್ವೋದಯ ಕರ್ನಾಟಕ ಏಕೆ? ಹೇಗೆ?-ಕಿರು ಹೊತ್ತಿಗೆ

sarvodaya

[ಪರ್ಯಾಯ ರಾಜಕಾರಣ ಕಟ್ಟುವ ಪ್ರಯತ್ನದ ಭಾಗವಾಗಿ ಸರ್ವೋದಯ ಕರ್ನಾಟಕ ಪಕ್ಷವು  2005ರಲ್ಲಿ ರಚನೆಯಾದ ಸಂದರ್ಭದಲ್ಲಿ ಹೊರತಂದ ಈ ಕಿರು ಹೊತ್ತಿಗೆಯನ್ನು ಪ್ರೊ.ನಟರಾಜ್ ಹುಳಿಯಾರ್ ಅವರು, ಸಮಾನಮನಸ್ಕರೆಲ್ಲರ ಚಿಂತನೆಯನ್ನು ಒಟ್ಟುಗೂಡಿಸಿ ರಚಿಸಿ ಕೊಟ್ಟಿದ್ದರು. ಅದು ನಮ್ಮ ಮರು ಓದಿಗಾಗಿ…..]

[ಕಿರುಹೊತ್ತಿಗೆಯ ಪೂರ್ಣಪಾಠಕ್ಕಾಗಿ ಸರ್ವೋದಯದ ಕಿರು ಹೊತ್ತಿಗೆ  ಅಥವಾ ಮುಖಪುಟದ ಮೇಲೆ ಒತ್ತಿ]

ಸರ್ವೋದಯದ ಕಿರು ಹೊತ್ತಿಗೆ

ಸರ್ವೋದಯ ಕರ್ನಾಟಕ : ಏಕೆ? ಹೇಗೆ?

 “ ಸರ್ವೋದಯ ಯುಗ ಮಂತ್ರ”

ಸರ್ವರಿಗಾಗಿಯೆ ಸರ್ವವ ತನ್ನಿಂ

ಸರ್ವರಿನೆನಗೆ! ಸರ್ವರಿಗೆನ್ನಿಂ!

ಸರ್ವರಿಗಾಗಿಯೆ ಸರ್ವಂ !” ಎನ್ನಿಂ.

ಓ ಬನ್ನಿಂ, ಓ ಬನ್ನಿಂ

ಸಾಮಾನ್ಯದ ಪೂಜೆಗೆ ಶ್ರೀ ದೀಕ್ಷೆಯ ಕೊಳ್ಳಿಂ !

*****

ಕೊನೆಗೊಂಡಿತೋ ಓರೋರ್ವರ ಗರ್ವದ ಕಾಲ

ಇದು ಸರ್ವರ ಕಾಲ

“ಸರ್ವೋದಯ!” “ಸರ್ವೋದಯ!”

ಸರ್ವೋದಯ ಯುಗ ಮಂತ್ರ !

ಸರ್ವೋದಯವೇ ಸ್ವಾತಂತ್ರ್ಯದ ಶ್ರೀತಂತ್ರ !

ಮೇಲಿಲ್ಲವೊ ಕೀಳಿಲ್ಲವೊ

ಸರ್ವ ಸಮಾನದ ರಾಜ್ಯ;

ಅಧ್ಯಕ್ಷನೋ ಸೇನಾನಿಯೋ

ಕಮ್ಮಾರನೊ ಚಮ್ಮಾರನೊ

ಕಾಯಕವೆಲ್ಲವು ಪೂಜ್ಯ !

*****

ತೊಲಗಿತು ನಿನ್ನೆಯ ನಾಯ್ ಪಾಡು:

ಇನ್ನಿದು ದಿಟಕ್ಕೂ ನಿನ್ನಯ ತಾಯ್‌ನಾಡು:

ನಿನ್ನದೆ ನೆಲ! ನಿನ್ನದೆ ಹೊಲ!

ನಿನ್ನದೆ ಕಾನ್ ! ನಿನ್ನದೆ ಬಾನ್

ನಿನ್ನದೆ ನುಡಿ ! ನಿನ್ನದೆ ಗುಡಿ !

ನಿನ್ನದ ಹೊಳೆ ! ನಿನ್ನದೆ ಬೆಳೆ !

ನಿನಗಾಗಿಯೆ ನಿನ್ನೊಲವಿಗೆ

ಇನ್ ಮೀಸಲ್ ನೀ ಬೆಳೆವ ಬೆಳೆ |

ನಿನಗಾಗಿಯೆ ನಿನ್ನೊಲವಿಗೆ

ಇನ್ ಮೀಸಲ್ ನೀ ಉಳುವ ಇಳೆ !

                                       –ಕುವೆಂಪು

[“ಶ್ರೀ ಸಾಮಾನ್ಯನ ದೀಕ್ಷಾಗೀತೆ”ಯಿಂದ]

                  

                          ಸರ್ವೋದಯ ಕರ್ನಾಟಕ : ಏಕೆ? ಹೇಗೆ?

ಕಳೆದ ಐವತ್ತು ವರ್ಷಗಳಿಂದ ನಾವು ನೋಡುತ್ತಲೇ ಇದ್ದೇವೆ.

ಆಳುವ ಪ್ರಭುಗಳು ತಮ್ಮ ಜನರ ದುಃಖ, ದುಮ್ಮಾನ ಹಾಗೂ ಕನಸುಗಳನ್ನು ನೋಡುವ ಕಣ್ಣು, ಹೃದಯಗಳನ್ನು ಕಳೆದುಕೊಂಡಿದ್ದಾರೆ.

ಇಂತಹ ಗಾಢ ನಿರಾಶೆಯ ಸನ್ನಿವೇಶದಲ್ಲಿ ಹೊಸ ತಲೆಮಾರುಗಳು, ಹಳೆಯ ತಲೆಮಾರಿನ ನ್ಯಾಯವಂತರ ಜೊತೆಗೂಡಿ ಸಮಸ್ಯೆಗಳನ್ನು ಅರಿಯುವ, ಬಗೆಹರಿಸುವ ಕರ್ತವ್ಯವನ್ನು ಕೈಗೆತ್ತಿಕೊಳ್ಳಬೇಕಾಗಿದೆ.

“ಸರ್ವೋದಯ ಕರ್ನಾಟಕ”

ನಾಡು ಕಟ್ಟುವ ಚಳವಳಿಗಳಲ್ಲಿ ತೊಡಗಿ, ಈ ನಾಡಿನ ಸಮಸ್ಯೆಗಳ ಒಳ ಹೊರಗುಗಳನ್ನು ಬಲ್ಲವರ ನಡುವಿನಿಂದ ಹಾಗೂ ವಿವಿಧ ಕ್ಷೇತ್ರಗಳ ಅನುಭವ ಪಡೆದು ಜನರ ಕೆಲಸ ಮಾಡುತ್ತಿರುವವರ ನಡುವಿನಿಂದ ನಾಯಕರು ಮೂಡಿಬರಲಿ ಎಂದು ನಾಡು ಕಾಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಪರ್ಯಾಯ ರಾಜಕಾರಣ ಕುರಿತ ಚರ್ಚೆ ಎದ್ದಿದೆ. ಈ ಅಗತ್ಯವೇ ಸರ್ವೋದಯ ಕರ್ನಾಟಕ ಪಕ್ಷದ ಹುಟ್ಟಿಗೆ ಕಾರಣವಾಗಿದೆ. ಹೀಗಾಗಿ ಇದು ಜನತೆಯ ಒಡಲಾಳದ ತುಡಿತಗಳೇ ರೂಪಿಸುವ ಪಕ್ಷವಾಗಬೇಕಾಗಿದೆ.

“ಹೊಸ ರಾಜಕಾರಣ ಎಂದರೇನು?”

ಹೊಸ ರೀತಿಯ ರಾಜಕಾರಣದ ಚರ್ಚೆ ಭಾರತದಲ್ಲಿ ಆಗಾಗ್ಗೆ ಎದ್ದಿದೆ. ಗಾಂಧೀಜಿಯವರು ಬ್ರಿಟಿಷರ ವಿರುದ್ಧ ದನಿ ರೂಪಿಸಿ, ಸ್ವಾತಂತ್ರ್ಯ ಹೋರಾಟವು ಸಮಾಜದ ಕೊಳಕುಗಳನ್ನು ತೊಡೆಯುವ ಚಳವಳಿಯೂ ಆಗಬೇಕೆಂದಾಗ ಹೊಸ ರಾಜಕಾರಣದ ಮಾತಾಡಿದ್ದಾರೆ. ಲೋಹಿಯಾ ಅವರು ಸಮಾಜವಾದಿ ಆಂದೋಲನವನ್ನು ಹುಟ್ಟು ಹಾಕಿ ‘ರಾಜಕಾರಣವು ದೀರ್ಘ ಕಾಲದ ಧರ್ಮ’ ಎಂದು ಎಲ್ಲರಿಗೆ ಮನವರಿಕೆ ಮಾಡಿಕೊಡುತ್ತಾ, ಜಾತಿವಿನಾಶದ ಆಶಯ ಹೊತ್ತು ಜನರ ಸಮಸ್ಯೆಗಳನ್ನು ನೇರವಾಗಿ ಕೈಗೆತ್ತಿಕೊಂಡು ಕೆಲಸ ಮಾಡಲು ಆರಂಭಿಸಿದಾಗ ಈ ಬಗೆಯ ರಾಜಕಾರಣವನ್ನು ನೋಡಿದ್ದೇವೆ. ಬಾಬಾ ಸಾಹೇಬರು ದಲಿತರ ದಮನವನ್ನು ಕೊನೆಗಾಣಿಸಲು ಸಿದ್ಧಾಂತ ರೂಪಿಸುತ್ತಲೇ ‘ಭಾರತೀಯ ರಿಪಬ್ಲಿಕನ್‌ ಪಕ್ಷ’ ಆರಂಭಿಸಿದಾಗ ಈ ಪ್ರಯತ್ನ ಮಾಡಿದ್ದಾರೆ. ಆಗೆಲ್ಲ ಭಾರತದ ಜಡ ರಾಜಕಾರಣ ಹೊಸ ರೂಪ ಪಡೆಯಲೆತ್ನಿಸಿದೆ. ಈಗ ನಾಡಿನ ಎಲ್ಲ ಪ್ರಗತಿಪರ ಚಳವಳಿಗಳೂ ಒಂದಾಗಿ ಹೊಸದಿಕ್ಕಿನೆಡೆಗೆ ನೋಡತೊಡಗಿರುವಾಗ ಪರ್ಯಾಯ ರಾಜಕಾರಣಕ್ಕೆ ಹೊಸ ರೂಪ ಬರತೊಡಗಿದೆ.

1956ರ ಸುಮಾರಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ರಾಮಮನೋಹರ ಲೋಹಿಯಾ ಅವರ ನಡುವೆ ಒಂದು ಚಾರಿತ್ರಿಕ ಪತ್ರ ವ್ಯವಹಾರ ನಡೆಯಿತು. ಅಂಬೇಡ್ಕರ್ ಅವರು ಇಡೀ ಭಾರತೀಯರ ನಾಯಕರಾಗಬೇಕೆಂದು ಲೋಹಿಯಾ ಬಯಸಿದ್ದರು. ಲೋಹಿಯಾ ಅವರ ಸಮಾಜವಾದಿ ಚಿಂತನೆಗಳಲ್ಲಿ ಮಹಿಳೆಯರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ರೈತರನ್ನು ಕುರಿತು ವ್ಯಕ್ತವಾಗಿರುವ ಕಾಳಜಿ ಹಾಗೂ ಅಂಬೇಡ್ಕರ್ ಅವರ ದಲಿತ ವಿಮೋಚನೆಯ ಮಾರ್ಗಗಳೆರಡೂ ಬೆರೆಯುವ ಕಾಲ ಆಗ ಬಂದಿತ್ತು. ದುರದೃಷ್ಟವಶಾತ್ ಆ ಸರಿಸುಮಾರಿನಲ್ಲೇ ಅಂಬೇಡ್ಕರ್ ನಿಧನರಾದರು. ಹೀಗಾಗಿ ಆ ಪ್ರಯತ್ನ ಅಲ್ಲಿಗೇ ನಿಂತಿತು. ಆ ಪ್ರಯತ್ನದ ಸಸಿಯನ್ನು ಸರ್ವೋದಯ ಕರ್ನಾಟಕ ನೆಟ್ಟು ಬೆಳೆಸಲು ಮುಂದಾಗಿದೆ.

“ಸಮಾನತೆ ಮತ್ತು ಏಕತೆಯತ್ತ…”

ವಚನಕಾರರು ನಡೆದಾಡಿದ ಈ ನಾಡಿನಲ್ಲಿ ಸಮಾನತೆ ಮತ್ತು ಐಕ್ಯತೆ ದೊಡ್ಡ ಮೌಲ್ಯವಾಗಿ ಬೆಳೆಯುವ ಸಾಧ್ಯತೆ ಇನ್ನೂ ಜೀವಂತವಾಗಿದೆ. ಜಾಗತೀಕರಣವನ್ನು ಗ್ರಹಿಸುವ, ವಿರೋಧಿಸುವ, ಕೋಮು ಶಕ್ತಿಗಳನ್ನು ಎದುರಿಸುವ ದೊಡ್ಡ ಚಿಂತಕರ ಪಡೆಯೇ ಇಲ್ಲಿ ಬೆಳೆಯುತ್ತಿದೆ. ಸ್ತ್ರೀವಾದಿ ಚಿಂತನೆ, ಎಡಪಂಥೀಯ ಚಿಂತನೆ, ಅಂಬೇಡ್ಕರ್ ಚಿಂತನೆಗಳು ಅನೇಕ ರೀತಿಯ ಕೊಂಬೆಗಳಾಗಿ ಹರಡಿವೆ. ಹೀಗೆ ಒಂದು ದೃಷ್ಟಿಯಿಂದ ಈ ನಾಡಿನ ಪರಿಸ್ಥಿತಿ ಆಶಾದಾಯಕವಾಗಿಯೂ ಕಾಣುತ್ತಿದೆ. ಶಾಂತವೇರಿ ಗೋಪಾಲಗೌಡರ ಈ ನಾಡಿನಲ್ಲಿ ರೈತ ಚಳವಳಿ ರಾಜ್ಯದ ಮೂವತ್ತು ಸಾವಿರ ಹಳ್ಳಿಗಳಿಗೂ ಕೊನೆಯ ಪಕ್ಷ ಪರಿಚಯವಾಗಿಯಾದರೂ ಇದೆ. ಹಾಗೆಯೇ ದಲಿತ ಚಳವಳಿ ಅನೇಕ ರೂಪಗಳಲ್ಲಿ ಕರ್ನಾಟಕದ ಮೂಲೆ ಮೂಲೆಗಳನ್ನು ಪ್ರಭಾವಿಸಿದೆ. ದುಡಿಯುವ ವರ್ಗಗಳ ಅನೇಕ ಬಗೆಯ ಸಂಘಟನೆಗಳನ್ನು ನಮ್ಮ ಕಮ್ಯೂನಿಸ್ಟರು ರೂಪಿಸಿದ್ದಾರೆ. ಈ ಎಲ್ಲ ಚಳವಳಿಗಳು ಒಂದೆಡೆ ಸೇರುವ ಪ್ರಯತ್ನ ಇದೀಗ ಶುರುವಾಗಿದೆ. ಕೋಮು ಸೌಹಾರ್ದ ಚಳವಳಿ, ಭಾಷಾ ಚಳವಳಿ, ಪರಿಸರ ಚಳವಳಿ, ಹಿಂದುಳಿದ ವರ್ಗಗಳ ಚಳವಳಿ, ಮಹಿಳಾ ಚಳವಳಿ ಹಾಗೂ ಅಲ್ಪಸಂಖ್ಯಾತ ಸಂಘಟನೆಗಳು ಇಲ್ಲಿ ಬಂದು ಸೇರುವ ಮೂಲಕ ಈ ಪ್ರಯತ್ನ ಇನ್ನಷ್ಟು ವ್ಯಾಪಕವಾಗುವತ್ತ ನಡೆಯುವಂತಾಗಲಿ.

ಇಂಥದೊಂದು ಹೊಸ ರಾಜಕಾರಣ ಕುರಿತಂತೆ ನಾಡಿನ ಚಿಂತಕರು, ಹೋರಾಟಗಾರರು ಹಾಗೂ ವಿವಿಧ ಜನವರ್ಗಗಳಿಂದ ಉತ್ತೇಜಕ ಪ್ರತಿಕ್ರಿಯೆಗಳು ಬರುತ್ತಿವೆ. ಈ ಕುರಿತು ನಾಡಿನ ಚಿಂತಕರ ಒಟ್ಟು ಚಿಂತನೆ ಹೀಗಿದೆ: ‘ದಲಿತ ಸಂಘರ್ಷ ಸಮಿತಿ ಮತ್ತು ರೈತಸಂಘ ಜೊತೆಗೂಡಿದ್ದಾದರೆ ಗಾಢವಾದ ಹೊಸದೊಂದು ರಾಜಕೀಯ ಶಕ್ತಿ ಹುಟ್ಟಿಕೊಂಡಂತಾಗುತ್ತದೆ. ಕೃಷಿಕ ವರ್ಗಕ್ಕೆ ಸೇರಿದ ಜಾತಿಗಳು ಮತ್ತು ಭೂಹೀನರೂ, ಕನಿಷ್ಠ ಭೂಮಿ ಪಡೆದವರೂ ಆದ ದಲಿತರ ನಡುವೆ ಈವರೆಗೆ ನಡೆಯುತ್ತಿದ್ದ  ಹಿಂಸಾಚಾರಗಳು ನಿಂತಂತಾಗುತ್ತದೆ. ಹೊಸ ರಾಜಕೀಯ ಶಕ್ತಿಯೊಂದು ಇದರಿಂದ ಹುಟ್ಟುವಂತಾಗಬೇಕಾದರೆ ಬಡ ಮುಸ್ಲಿಮರೂ, ಬಡ ಕ್ರಿಶ್ಚಿಯನ್ನರೂ ಈ ಒಕ್ಕೂಟದಲ್ಲಿ ಕೂಡಿದಾಗ ಇದೊಂದು ಪರ್ಯಾಯ ಶಕ್ತಿಯಾಗಿ ಮಾರ್ಪಡುತ್ತದೆ: – ಮತ್ತು ಸಮಗ್ರ ಭಾರತದ ರಾಜಕಾರಣದ ಒಂದಂಶವಾಗುತ್ತದೆ. ಎಲ್ಲ ಬಡವರು, ಭವಿಷ್ಯಕ್ಕೆ ಮುಖ ಮಾಡಿದ ಯುವಕರು, ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು, ಎಲ್ಲರೂ ಹೊಸದೊಂದು ‘ಯುಗವನ್ನು ಬಯಸಿದಾಗ, ಪರ್ಯಾಯ ರಾಜಕಾರಣ ಬಲವಾದ ಶಕ್ತಿಯಾಗುತ್ತದೆ. ಈ ಹೊಸಯುಗ ಪಾಶ್ಚಿಮಾತ್ಯ ಸಂಸ್ಕೃತಿಯ ದಾಹವನ್ನು ತೊರೆದಿರುತ್ತದೆ. ಜೀವಜಾಲವಾದ ನಿಸರ್ಗದ ಜೊತೆ ನೆಮ್ಮದಿಯ ನಂಟನ್ನು ಬಯಸುತ್ತದೆ.

ಈ ಬಗೆಯ ಆಶಯ, ಬೆಂಬಲ, ಮಾರ್ಗದರ್ಶನಗಳ ಜೊತೆಗೇ ಮುಂದೆ ಇರಿಸಬೇಕಾದ ಹೆಜ್ಜೆಗಳ ಬಗ್ಗೆ ಎಚ್ಚರಗಳೂ ಕೂಡ ಕರ್ನಾಟಕದ ಎಲ್ಲ ಮೂಲೆಗಳಿಂದ ವ್ಯಕ್ತವಾಗಿವೆ. ಬಹುತೇಕ ಜನಪರ ಚಳವಳಿಗಳ ನಾಯಕರು, ಹಿರಿಯ ಗಾಂಧೀವಾದಿಗಳು, ನಾಡಿನ ಲೇಖಕರು, ಚಿಂತಕರು ಈ ಕುರಿತ ಸಂವಾದದಲ್ಲಿ ಗಂಭೀರವಾಗಿ ಪಾಲ್ಗೊಳ್ಳಲಾರಂಭಿಸಿದ್ದಾರೆ. ಇದು ಕರ್ನಾಟಕದ ರಾಜಕಾರಣದಲ್ಲಿ ಬುದ್ಧಿಜೀವಿಗಳು ಹಮ್ಮು ಬಿಮ್ಮುಗಳಿಲ್ಲದೆ ಕ್ರಿಯಾಶೀಲವಾಗಿ ತೊಡಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ. ಪಕ್ಷದ ನೀತಿ, ನಿಲುವುಗಳನ್ನು ಸರಿಯಾದ ಹಾದಿಯಲ್ಲಿ ಇಡಬಲ್ಲ ಶಕ್ತಿ ಈ ಪಡೆಗಿದೆ. ಈ ಕುರಿತು ಪ್ರೊ|| ನಂಜುಂಡಸ್ವಾಮಿಯವರು ತಮ್ಮ ಕೊನೆಯ ಸಂದರ್ಶನದಲ್ಲಿ ಆಶಾದಾಯಕವಾದ ಮಾತುಗಳನ್ನಾಡಿದ್ದರು: “ಎರಡು ಮೂರು ವರ್ಷ ಸತತವಾಗಿ ಕೆಲಸ ಮಾಡಿದರೆ, ನಾವು ಕರ್ನಾಟಕದ ಪ್ರಜಾಪ್ರಭುತ್ವಾನ ಗುಣಾತ್ಮಕವಾಗಿ ಬದಲಾವಣೆ ಮಾಡಬಹುದು. ಅಷ್ಟು ಪ್ರಭಾವ ಬೀರಬಲ್ಲಂತಹ ಬುದ್ಧಿಜೀವಿಗಳ ಒಂದು ದೊಡ್ಡ ಸಂಖ್ಯೆ ಕರ್ನಾಟಕದಲ್ಲಿದೆ. ಆದರೆ ಈ ಕೆಲಸಾನ ಅವರು ಕೈಗೆ ತಗೊಂಡಿಲ್ಲ. ಇವತ್ತಿಗೂ ಎಲ್ಲರೂ ಈ ಒಂದು ವೈಚಾರಿಕ ಸ್ಪಷ್ಟತೆಯಿಂದ ಕೈ ಜೋಡಿಸಿದರೆ, ಆರೋಗ್ಯಕರವಾದಂತಹ ಪರ್ಯಾಯ ವ್ಯವಸ್ಥೆಯನ್ನು ನಾವು ಕರ್ನಾಟಕಕ್ಕೆ ಕೊಡಬಹುದು. ಆ ವಿಶ್ವಾಸ ನನಗಿದೆ.”

“ಅಧಿಕಾರ ರಾಜಕಾರಣ”

ತಮ್ಮ ಜೀವಮಾನದುದ್ದಕ್ಕೂ ಚಳವಳಿಗಳನ್ನು ನಡೆಸಿದ ಬಿ.ಕೃಷ್ಣಪ್ಪನವರಾಗಲೀ, ನಂಜುಂಡಸ್ವಾಮಿಯವರಾಗಲೀ ತಮ್ಮ ಕೊನೆಯ ಕೆಲ ವರ್ಷಗಳಲ್ಲಿ ಚಳವಳಿ ರಾಜಕಾರಣದಿಂದ ಅಧಿಕಾರ ರಾಜಕಾರಣದ ಕಡೆಗೆ ನಡೆಯುವ ಬಗ್ಗೆ ಗಂಭೀರವಾಗಿ ಆಲೋಚಿಸಿದ್ದರು. ಬಿ.ಕೃಷ್ಣಪ್ಪನವರು ಬಹುಜನ ಸಮಾಜಪಕ್ಷವನ್ನು ಮುನ್ನಡೆಸಿದರು. ಇದೀಗ ನಾವೆಲ್ಲ ವ್ಯಕ್ತಿಗತ ಅಹಂಕಾರಗಳನ್ನು ತೊಡೆದು, ಕರ್ನಾಟಕದಲ್ಲಿ ವ್ಯಾಪಕ ಮಟ್ಟದಲ್ಲಿ ಚಳವಳಿಗಳನ್ನು ಒಂದುಗೂಡಿಸಲು ಇದು ಸಕಾಲ, ಈ ಚಳವಳಿಗಳ ನಾಯಕರು, ಕಾರ್ಯಕರ್ತರು ಪಡೆದಿರುವ ಅಪಾರ ಸಾಮಾಜಿಕ ಅನುಭವ ಮತ್ತು ಸಮಸ್ಯೆಗಳಿಗೆ ಅವರು ಕಂಡುಕೊಂಡಿರುವ ಪರಿಹಾರಗಳು ಕಾರ್ಯರೂಪಕ್ಕೆ ಬರುವಂತೆ ಮಾಡಬೇಕಾದ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಎದುರಿಗಿದೆ. ಅದರ ಜೊತೆಗೇ ಸರ್ವೋದಯ ಕರ್ನಾಟಕದ ಪದಾಧಿಕಾರಿಗಳ ಪೈಕಿ ಶೇ ೫೦ ರಷ್ಟನ್ನು ಮಾತ್ರ ಚಳವಳಿ ಹಿನ್ನೆಲೆಯ ಸಂಘಟನೆಗಳಿಗೆ ಪ್ರಾತಿನಿಧ್ಯ ಕೊಟ್ಟು, ಇನ್ನುಳಿದ ಶೇ ೫೦ ರಷ್ಟನ್ನು ಎಲ್ಲಾ ಬಗೆಯ ಹಿನ್ನೆಲೆಯಿಂದ ಬಂದವರಿಗೆ ಕೊಡಬೇಕಾದದ್ದೂ ಕೂಡ ಅವಶ್ಯಕ. ಇದು ಸಾಧ್ಯವಾದಲ್ಲಿ ಚಳವಳಿಗಾರರ ಕಾಳಜಿ ಹಾಗೂ ಅದೇ ಬಗೆಯ ಕಾಳಜಿಯಲ್ಲಿ ಇನ್ನಿತರ ವಲಯಗಳಲ್ಲಿ ಕೆಲಸ ಮಾಡುತ್ತಿರುವವರ ಒಂದು ಆದರ್ಶ ವೇದಿಕೆ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ, ಎಲ್ಲಾ ವಲಯಗಳಲ್ಲಿ ಸಮಾಜದ ಬಗ್ಗೆ ಕಾಳಜಿ ಇರಿಸಿಕೊಂಡಿರುವವರನ್ನು ಪಕ್ಷವು ಒಳಗೊಳ್ಳಲಿದೆ.

“ಮಹಿಳಾ ನಾಯಕತ್ವ ಕಾಲದ ಅಗತ್ಯ”

ಈಗಲಾದರೂ ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರು ತೋರುತ್ತಿರುವ ಮತ ಹಾಕುವ ಹಾಗೂ ಸ್ಪರ್ಧಿಸುವ ರಾಜಕೀಯ ಉತ್ಸಾಹವನ್ನು ಊರು ಕಟ್ಟುವ ಕೆಲಸದೆಡೆಗೆ ಕೊಂಡೊಯ್ಯಬೇಕಾಗಿದೆ. ಚುನಾವಣೆಯಲ್ಲಿ ಹೆಂಡ, ಹಣದ ಆಮಿಷಗಳನ್ನು ಎದುರಿಸಲು ಕೂಡ ಮಹಿಳಾ ನಾಯಕತ್ವವೇ ಮುಂಚೂಣಿಯಲ್ಲಿರಬೇಕಾಗುತ್ತದೆ. ಮಂಡ್ಯ ಜಿಲ್ಲೆಯ ಗೋಪಾಲಪುರ ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ಮಹಿಳೆಯರೇ ಸದಸ್ಯರಾಗಿರುವ ಗ್ರಾಮ ಪಂಚಾಯಿತಿಯು ಸೌರಶಕ್ತಿಯನ್ನು ಬಳಸಿ ಇಡೀ ಗ್ರಾಮವನ್ನು ಸೋಲಾರ್ ಹಳ್ಳಿಯನ್ನಾಗಿ ಪರಿವರ್ತಿಸಿದೆ: ಕರ್ನಾಟಕಕ್ಕೇ ಮಾದರಿ ಗ್ರಾಮ ಪಂಚಾಯಿತಿಯೆಂದು ಹೆಸರು ಪಡೆದಿದೆ. ಈ ಪ್ರಯತ್ನ ಕರ್ನಾಟಕದ ಎಲ್ಲಾ ಪಂಚಾಯಿತಿಗಳಿಗೆ ಆರಿಸಿ ಬಂದಿರುವ ನಮ್ಮ ಮಹಿಳೆಯರಿಗೆ ಹಾಗೂ ಪುರುಷರಿಗೆ ಮಾದರಿಯಾಗಬೇಕು. ಸ್ತ್ರೀ ನಾಯಕತ್ವದ ಸಾಧ್ಯತೆಗಳೇನು ಎನ್ನುವುದನ್ನು ಖಾಸಗಿ ಕ್ಷೇತ್ರಗಳು ಈಗಾಗಲೇ ಕಂಡುಕೊಂಡಿವೆ. ಆದರೆ ನಮ್ಮ ಸರ್ಕಾರಿ ರಂಗವಾಗಲೀ, ರಾಜಕಾರಣವಾಗಲೀ ಸ್ತ್ರೀಗೆ ಸಂಪೂರ್ಣ ನಾಯಕತ್ವ ಕೊಡುವಲ್ಲಿ ಹಿಂದೆ ಮುಂದೆ ನೋಡುತ್ತಿವೆ. ಕರ್ನಾಟಕದ ಸ್ತ್ರೀವಾದಿ ಚಿಂತನೆ, ಮಹಿಳಾ ಚಳವಳಿಗಳು, ಸ್ತ್ರೀ ಶಕ್ತಿ ಗುಂಪುಗಳು -ಇವುಗಳನ್ನು ಒಗ್ಗೂಡಿಸಿದಾಗ ಹುಟ್ಟುವ ಹೊಸ ವಿವೇಕ, ಹೊಸ ರೀತಿಯಲ್ಲಿ ನಾಡನ್ನು ರೂಪಿಸುವ ಕನಸುಗಳಿಂದ ನಾವು ಕಲಿಯಬೇಕಾಗಿದೆ. ಜೊತೆಗೆ ನಮ್ಮ ಅನೇಕ ಜಗಳಗಳು ಹಾಗೂ ಕೋಮುಹಿಂಸೆಗಳ ಎದುರು ತಾಯ್ತನದಿಂದ ಹುಟ್ಟುವ ಪರಿಹಾರಕ್ಕಾಗಿ ಕೂಡ ನಾವು ಮಹಿಳಾ ನಾಯಕತ್ವದತ್ತ ನೋಡಲೇಬೇಕಾಗಿದೆ.

“ಜಾಗತೀಕರಣದ ಎದುರು ಸ್ಥಳೀಕರಣ”

ನಗರಗಳ ದೈತ್ಯ ಬೆಳವಣಿಗೆಯಿಂದ ಹಳ್ಳಿಗಳು ಅಂಚಿಗೆ ಒತ್ತರಿಸಲ್ಪಟ್ಟಿವೆ. ವ್ಯವಸಾಯದಿಂದ ಯಾವ ಫಲವೂ ಇಲ್ಲದೆ ಕೃಷಿಕರು ಕೂಲಿಕಾರರಾಗುತ್ತಿದ್ದಾರೆ. ನಮ್ಮಲ್ಲಿ ಲಭ್ಯವಿರುವಷ್ಟು ನೀರು, ಮಣ್ಣಿನ ಬಳಕೆ ಹೇಗಾಗಬೇಕು, ಮಳೆ ನೀರಿನ ಸಂಗ್ರಹ ಹೇಗಿರಬೇಕು ಎಂಬ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೆ ಕೂಡ ನಮ್ಮ ಹಳ್ಳಿಗರು ದಿಕ್ಕೆಟ್ಟಿದ್ದಾರೆ. ಆದ್ದರಿಂದ ಮಡಗಾಸ್ಕರ್ ಪದ್ಧತಿಯಂತೆ ಕಡಿಮೆ ನೀರಿನ ವೆಚ್ಚದಲ್ಲಿ ಮಣ್ಣು ಹಾಳಾಗದಂತೆ ಹೆಚ್ಚು ಉತ್ಪಾದನೆ ಮಾಡುವ ಯೋಜನೆಯನ್ನು ಎಲ್ಲೆಡೆ ಹಬ್ಬಿಸಬೇಕು. ಹಾಗೆಯೇ ಸುಭಾಷ್ ಪಾಳೇಗಾರ್ ಅವರಂಥವರು ತೋರಿಸಿಕೊಟ್ಟಿರುವ ನೈಸರ್ಗಿಕ ಕೃಷಿಯನ್ನು ಎಲ್ಲೆಡೆ ಜಾರಿಗೆ ತರಬೇಕು. ಕ್ರಿಮಿನಾಶಕಗಳು, ಹೈಬ್ರಿಡ್ ತಳಿಗಳ ಮೂಲಕ ನಮ್ಮ ಕೃಷಿಯನ್ನು ನಾಶ ಮಾಡುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೆ ಈ ಮೂಲಕವೇ ಉತ್ತರ ಕೊಡಬೇಕು. ಅದರ ಜೊತೆಗೆ ದೇಶೀ ತಳಿಗಳನ್ನು ಉಳಿಸುವುದು ಹಾಗೂ ನಮ್ಮ ಆಹಾರ ಸಂಸ್ಕೃತಿಯನ್ನು ರಕ್ಷಿಸುವುದು ಕೂಡ ಮುಖ್ಯವಾಗಿದೆ. ನಮ್ಮ ಸಂಸ್ಕೃತಿಗೆ ಬೇಕಾದ ಬೀಜಗಳನ್ನು ಕಂಡುಹಿಡಿಯುವಲ್ಲಿ ಸೋತಿರುವ ನಮ್ಮ ಕೃಷಿ ವಿಶ್ವವಿದ್ಯಾನಿಲಯಗಳಿಗೂ ಜೀವ ತುಂಬಬೇಕಾಗಿದೆ. ತೋಟಗಾರಿಕೆ ಬೆಳೆಗಳ ಹಾಗೂ ಹಣ್ಣು ಸಂಸ್ಕರಣಾ ಘಟಕಗಳ ಸೃಷ್ಟಿ ಹಾಗೂ ಕಬ್ಬು, ರೇಷ್ಮೆ, ಹತ್ತಿ ಮುಂತಾದ ವಾಣಿಜ್ಯ ಬೆಳೆಗಳ ಉತ್ತಮ ನಿರ್ವಹಣೆಯಿಂದ ಹೊಸ ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು. ಆ ಮೂಲಕ ಮಾರಾಟಗಾರ-ದಲ್ಲಾಳಿ-ವಿಜ್ಞಾನಿ’ -ಈ ವಿಷವರ್ತುಲದಲ್ಲಿ ಸಿಕ್ಕಿಕೊಂಡಿರುವ ಕೃಷಿ ಮತ್ತು ನಮ್ಮ ಹಳ್ಳಿಗಳನ್ನು ಪಾರು ಮಾಡಬೇಕಾಗಿದೆ. ಜೊತೆಗೆ, ನಮ್ಮ ಗ್ರಾಮಗಳು ಸ್ಥಳೀಯ ಸಂಪನ್ಮೂಲಗಳನ್ನು ಹೇಗೆ ರೂಢಿಸಿಕೊಳ್ಳಬೇಕು ಎಂಬ ಬಗೆಗೂ ಕೆಲಸ ಶುರು ಮಾಡಬೇಕಿದೆ.

“ನನ್ನ ಗ್ರಾಮಕ್ಕೆ ನನ್ನ ಕೈಲಾದಷ್ಟು…”

ಬುಡಮಟ್ಟದ ಸರ್ವೋದಯ ರಾಜಕಾರಣ ಹಳ್ಳಿಗಳಿಂದ ಶುರುವಾಗಬೇಕು. ಗ್ರಾಮ ಪಂಚಾಯಿತಿಗಳನ್ನು ನಾವು ಸುಧಾರಣೆ ಮಾಡಿದರೆ, ಊರಿನ ಒಳಗೇ ಸಣ್ಣ ಘಟಕ ಯಂತ್ರಗಳ ಮೂಲಕ ಉದ್ಯೋಗ ಸೃಷ್ಟಿ ಮಾಡುವುದು ತೀರ ಕಷ್ಟವೇನಲ್ಲ. ನಮ್ಮ ಊರಿನ ಮೇಣದ ಬತ್ತಿಯನ್ನು ಪಕ್ಕದ ಊರಿನಲ್ಲಿ ತಯಾರಾಗುವ ಸೋಪಿಗೆ ಪ್ರತಿಯಾಗಿ ನಾವು ಮಾರುವುದಾದರೆ ಏಕಕಾಲಕ್ಕೆ ಜಾಗತೀಕರಣವನ್ನೂ ಎದುರಿಸಿದಂತಾಯಿತು; ದೇಶೀ ವ್ಯವಸ್ಥೆಯನ್ನೂ ಬಲಪಡಿಸಿದಂತಾಯಿತು, ನಮ್ಮೂರಿನ ದುಡಿಯುವ ಕೈಗಳಿಗೆ ಕೆಲಸವನ್ನೂ ಒದಗಿಸಿದಂತಾಯಿತು.
ನಮ್ಮ ಇಡೀ ರಾಜಕಾರಣದ ಗಮನ ಹೀಗೆ ಗ್ರಾಮದಿಂದ ಶುರುವಾಗದಿದ್ದರೆ ನಾವು ಏನನ್ನೂ ಮಾಡುವುದು ಸಾಧ್ಯವಿಲ್ಲ. ಪಂಚಾಯತ್‌ ವ್ಯವಸ್ಥೆಗೆ ಸ್ವಾಯತ್ತತೆ ನೀಡಿ, ಗ್ರಾಮ ಪಂಚಾಯತಿಯನ್ನು ಸರಿಪಡಿಸಿದರೆ ನಮ್ಮ ಸಮಾಜದ ಶೇ.೭೦ ಭಾಗ ತಂತಾನೇ ಸರಿಯಾಗುತ್ತದೆ. ಊರೊಟ್ಟಿನ ಕೆಲಸ ಹಾಗೂ ಗ್ರಾಮ ಪಂಚಾಯಿತಿಯ ಕೆಲಸ ಎರಡೂ ಒಂದೇ ಆದರೆ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ. ಪಕ್ಷ ರಾಜಕಾರಣವನ್ನು ಮೀರಿ ಊರೊಟ್ಟಿನ ಕೆಲಸ ಮಾಡುವುದು ಹೇಗೆ ಎಂಬುದನ್ನೂ ನಾವು ಯೋಚಿಸಬೇಕಾಗಿದೆ. ಇದರ ಮೊದಲ ಹೆಜ್ಜೆಯಾಗಿ ಚುನಾವಣೆಯನ್ನು ವಿವಿಧ ಜನವರ್ಗಗಳ ನಡುವಣ ಯುದ್ಧಭೂಮಿಯನ್ನಾಗಿ ಮಾಡುವ ಅನಿಷ್ಠ ಪದ್ಧತಿಯನ್ನು ಮೊದಲು ಕೊನೆಗಾಣಿಸಬೇಕಾಗಿದೆ. ಚುನಾವಣೆಯ ಆಟ ಮುಗಿದ ತಕ್ಷಣ ಎಲ್ಲರೂ ಒಗ್ಗೂಡಿ, ಊರು ಕಟ್ಟುವುದು ಹೇಗೆ ? ಎಂಬ ದಿಕ್ಕಿನಲ್ಲಿ ನಡೆಯುವ ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಾಗಿದೆ.

ನಮ್ಮ ಹಳ್ಳಿಗಾಡಿನ ಜನ ಮೂಲತಃ ಒಂದೇ

ನಮ್ಮ ಹಳ್ಳಿಗಾಡಿನ ಜನತೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಒಂದೇ. ಆದರೆ ಬೇರೆ ಬೇರೆ ಅನ್ನುವಂತೆ ವರ್ತಿಸುತ್ತಿದ್ದಾರೆ: ಬೇರೆ ಬೇರೆ ಆಗಿದ್ದಾರೆ. ರಾಜಕೀಯ ನೆಪದಲ್ಲಿ ಅವರನ್ನು ಒಂದುಗೂಡಿಸಿ ಸಾಂಸ್ಕೃತಿಕವಾಗಿಯೂ, ರಾಜಕೀಯವಾಗಿಯೂ ಏಕತೆ ತರುವುದು ನಮ್ಮ ರಾಜಕಾರಣದ ಗುರಿಯಾಗಬೇಕು. ಪಂಚಾಯತ್‌ನ ಕೆಲಸ ಊರೊಟ್ಟಿನ ಕೆಲಸ ಎಂಬ ತಿಳಿವಳಿಕೆ ಬಂದ ತಕ್ಷಣ ನಮ್ಮ ರಸ್ತೆ, ಸ್ಕೂಲು, ಆಸ್ಪತ್ರೆ, ನೀರು ಎಲ್ಲವೂ ರಿಪೇರಿಯಾಗತೊಡಗುತ್ತವೆ. ಎಲ್ಲಾ ಜಾತಿಗಳೂ ಒಂದಾಗಿ ಕೆಲಸ ಮಾಡುವ ಮೂಲಕವೇ ಜಾತಿ ಜಗಳಗಳನ್ನು ಇಲ್ಲವಾಗಿಸುವ ಕೆಲಸ ಶುರುವಾಗಬೇಕಾಗಿದೆ. ಕಿಶನ್ ಪಟ್ನಾಯಕ್ ಅವರು ಒಮ್ಮೆ ಹೇಳಿದ ಹಾಗೆ, ರೈತ ಸಂಘ ಎತ್ತುವ ಪ್ರಶ್ನೆಯನ್ನು ದಲಿತ ಚಳವಳಿಯೂ, ದಲಿತ ಚಳವಳಿ ಎತ್ತುವ ಪ್ರಶ್ನೆಯನ್ನು ರೈತ ಚಳವಳಿಯೂ ಎತ್ತಬೇಕಾಗಿದೆ. ಜೊತೆಗೆ, ನಾವು ನಮ್ಮ ಮಹಿಳೆಯರ ಬಗೆಗೆ ತೋರುತ್ತಿರುವ ಭೀಕರ ಅನಾದರಗಳನ್ನು ಕುರಿತು ಎಲ್ಲೆಡೆ ಅರಿವು ಮೂಡಿಸಬೇಕಾಗಿದೆ. ಅಸ್ಪೃಶ್ಯತೆ ಇಲ್ಲದ ಹಳ್ಳಿಗಳನ್ನು ನಿರ್ಮಾಣ ಮಾಡುವುದು ನಮ್ಮ ಮುಖ್ಯ ಕರ್ತವ್ಯವಾಗಬೇಕಾಗಿದೆ. ಭೂಮಿಯ ಒಡೆತನದ ಪ್ರಶ್ನೆಯನ್ನು ಎಲ್ಲ ಖಾಸಗಿ ಆಸ್ತಿಯ ಪ್ರಶ್ನೆಯಂತೆಯೇ ಬಗೆಹರಿಸಿಕೊಳ್ಳಬೇಕಿದೆ. ಕರ್ನಾಟಕದಲ್ಲಿ ಭೂ ನಿಯಂತ್ರಣ ಕಾಯ್ದೆ ಬಂದ ಮೇಲೆ ಭೂಮಿಯನ್ನು ಕೊಂಡು ದಲಿತರಿಗೆ ಕೊಡುವ ಸರ್ಕಾರಿ ಯೋಜನೆಯೂ ಇದೆ. ಅದಕ್ಕೆ ಆಯವ್ಯಯ ಪಟ್ಟಿಯಲ್ಲಿ ಹಣವನ್ನೂ ತೆಗೆದಿರಿಸಲಾಗುತ್ತಿದೆ. ಆದರೆ ಯೋಜನೆ ಮಾತ್ರ ಜಾರಿಗೆ ಬರುತ್ತಿಲ್ಲ. ಹೀಗಾಗಿ ದಲಿತರಿಗೆ ಭೂಮಿ ಸಿಗುತ್ತಿಲ್ಲ. ಜೊತೆಗೆ ಎಲ್ಲ ಬಡವರನ್ನೂ ಖಾಸಗಿ ಸಾಲದಿಂದ ಬಿಡುಗಡೆಗೊಳಿಸಲು ಡಿ.ಐ.ಆರ್. ಯೋಜನೆಯನ್ನು ಜಾರಿಗೊಳಿಸಿ ಬ್ಯಾಂಕುಗಳು ಅಲ್ಪ ಬಡ್ಡಿಯಲ್ಲಿ ಸಾಲ ಕೊಡಲಾರಂಭಿಸಿದರೆ ನಮ್ಮ ಹಳ್ಳಿಗಳ ಲಕ್ಷಾಂತರ ಕುಟುಂಬಗಳು ಬಡ್ಡಿಯ ನೊಗದಿಂದ ಬಿಡುಗಡೆಗೊಳ್ಳುತ್ತವೆ. ಆ ಮೂಲಕ ಕರ್ನಾಟಕದ ಒಂದೂವರೆ ಕೋಟಿ ಅಸಂಘಟಿತ ಕೃಷಿ ಕಾರ್ಮಿಕರ ಸಮಸ್ಯೆಯನ್ನು ಒಂದು ಮಟ್ಟದವರೆಗಾದರೂ ಬಗೆಹರಿಸಬಹುದು. ಜೊತೆಗೆ, ಖಾಸಗಿ ರಂಗಗಳಲ್ಲಿ ಮೀಸಲಾತಿಯ ಪ್ರಶ್ನೆಯನ್ನು ದೊಡ್ಡ ಮಟ್ಟದಲ್ಲಿ ಕೈಗೆತ್ತಿಕೊಳ್ಳದಿದ್ದರೆ ನಮ್ಮ ಸಾಮಾಜಿಕ ನ್ಯಾಯದ ಕಲ್ಪನೆಯೇ ಬುಡಮೇಲಾಗಲಿದೆ.

“ಎಲ್ಲರಿಗೂ ಒಂದೇ ಬಗೆಯ ಶಿಕ್ಷಣ”

ಲೋಹಿಯಾ ಅವರು ಹೇಳಿದಂತೆ ೫ ರಿಂದ ೧೦ ವರ್ಷದ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಪ್ರಾಥಮಿಕ ಶಾಲೆಗಳು ಒಂದೇ ಮಾದರಿಯವಾದರೆ ದಲಿತ, ಕಮ್ಮಾರ, ಬ್ರಾಹ್ಮಣ, ರೈತ, ಪ್ರಧಾನಿ ಎಲ್ಲರ ಮಕ್ಕಳೂ ಒಂದೇ ಥರದ ಶಿಕ್ಷಣ ಪಡೆಯುತ್ತವೆ. ಇದು ಭಾರತಕ್ಕೆ ಅತಿ ಅವಶ್ಯವಿರುವ ಪ್ರಾಥಮಿಕ ಸುಧಾರಣೆ’. ಅಗತ್ಯವಿದ್ದರೆ ಎಲ್ಲ ಮಕ್ಕಳಿಗೂ ಒಂದನೇ ತರಗತಿಯಿಂದ ಇಂಗ್ಲಿಷನ್ನೂ ಕನ್ನಡದ ಜೊತೆಗೇ ಒಂದು ಭಾಷೆಯನ್ನಾಗಿ ಕಲಿಸೋಣ : ಆದರೆ ಕರ್ನಾಟಕದಲ್ಲಿ ಬೋಧನೆಯ ಮಾಧ್ಯಮ ಮಾತ್ರ  ಕನ್ನಡವೇ ಆಗಿರಬೇಕು ಎಂಬ ಶಿಕ್ಷಣ ನೀತಿ ಜಾರಿಯಾಗಬೇಕು. ನಮ್ಮ ಭಾಷಾ ಚಳವಳಿಗಳು ಸಂಘಟಿತವಾಗಿ ಈ ಕೆಲಸ ಶುರು ಮಾಡಬೇಕಾಗಿದೆ. ಸರ್ಕಾರಿ ಶಾಲೆಗಳನ್ನು ನಾವು ಹೊಸ ಕಾಲಕ್ಕೆ ಸಜ್ಜುಗೊಳಿಸದಿದ್ದರೆ, ನಮ್ಮ ಗ್ರಾಮಗಳ ಹುಡುಗ ಹುಡುಗಿಯರಿಗೆ ಮುಂದೆ ಭವಿಷ್ಯವೇ ಇಲ್ಲದಂತಾಗುವ ಭೀಕರ ಸ್ಥಿತಿಯನ್ನು ನಾವು ಮನಗಾಣಲೇಬೇಕು.

“ಸಾಮಾಜಿಕ ನ್ಯಾಯದ ಜವಾಬ್ದಾರಿ”

ಈ ಜಾಗತೀಕರಣದ ಕಾಲದಲ್ಲಿ ನಮ್ಮ ಸರ್ಕಾರಗಳು ಜನರಿಗೆ ಒದಗಿಸಬಹುದಾಗಿದ್ದ ಅಷ್ಟಿಷ್ಟು ನೌಕರಿಗಳನ್ನೂ ಖಾಸಗಿಯವರಿಗೆ ವಹಿಸಿಕೊಟ್ಟು ತಮ್ಮ ಸಣ್ಣ ಪುಟ್ಟ ಜವಾಬ್ದಾರಿಗಳಿಂದಲೂ ತಪ್ಪಿಸಿಕೊಳ್ಳುತ್ತಿವೆ. ಇನ್ನು 10 ವರ್ಷಗಳಲ್ಲಿ ಬಡಗಿ, ಕಮ್ಮಾರ, ಚಮ್ಮಾರ, ನೇಕಾರ, ಅಗಸರ ಮಕ್ಕಳಿಗಾಗಲೀ, ದಲಿತ, ರೈತರ ಮಕ್ಕಳಿಗಾಗಲೀ ಯಾವುದೇ ನೌಕರಿಯೂ ಸಿಗದೆ ಭೀಕರ ಅಸಮಾನತೆಯ ಯುಗ ಆರಂಭವಾಗುತ್ತದೆ. ಶ್ರೀಮಂತರು ಮತ್ತು ಬಡವರ ಮಧ್ಯೆ ಇಷ್ಟೊಂದು ದೊಡ್ಡ ಕಂದರ ನಿರ್ಮಾಣವಾದರೆ, ಅಂಥ ಸಮಾಜ ನರಕಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ. ಉತ್ತಮ ಶಿಕ್ಷಣ, ಆಸ್ಪತ್ರೆ, ಜೀವರಕ್ಷಕ ಔಷಧಿಗಳು ಬಡವರಿಗೆ ಸಿಗುತ್ತಲೇ ಇಲ್ಲ. ನಾವು ಯಾವು ದಿಕ್ಕಿನಲ್ಲಿ ಚಲಿಸುತ್ತಿದ್ದೇವೆ ?

“ಚುನಾವಣೆಗಳಿಗೆ ಚಿಕಿತ್ಸೆ ಬೇಕು

ನಮ್ಮ ಪ್ರತಿನಿಧಿಗಳನ್ನು ಆರಿಸುವ ಚುನಾವಣೆಗಳನ್ನು ಜನಪರ ಚಳವಳಿಗಳ ಭಾಗವಾಗಿ ಕಾಣದೆ ಅದೊಂದು ಯಾಂತ್ರಿಕ ಆಚರಣೆಯಂತೆ, ಅನಿವಾರ್ಯ ಪೀಡೆಯೆಂಬಂತೆ ಕಂಡು ನಮ್ಮೆಲ್ಲ ಚಳವಳಿಗಳೂ ತಪ್ಪು ಮಾಡಿವೆ. ನಮ್ಮ ರಾಜಕೀಯ ಪಕ್ಷಗಳು ಅಭ್ಯಾಸಬಲದಿಂದೆಂಬಂತೆ ಚುನಾವಣೆಯ ಜಾತ್ರೆಗೆ ಬರುವುದು, ಮುಗಿದ ನಂತರ ವಿಧಾನಸೌಧಕ್ಕೆ ತೆರಳುವುದು, ಮತ್ತೆ ಸರ್ಕಾರ ಬಿದ್ದ ನಂತರ ಊರಿಗೆ ಮರಳಿ ಮತ ಕೇಳುವುದು… ಇವನ್ನೆಲ್ಲಾ ನೋಡಿ ನೋಡಿ ಜನರಿಗೆ ವಿಷಾದ, ದುಃಖ, ದಿಗ್ಭ್ರಮೆ, ಸಿನಿಕತೆ ಹಾಗೂ ವಿಚಿತ್ರ ಅಸಹಾಯಕತೆ ಆವರಿಸತೊಡಗಿದೆ. ಆದ್ದರಿಂದಲೇ ಚುನಾವಣೆಯ ಸುಧಾರಣೆಯ ಪ್ರಶ್ನೆ ಬಹಳ ಮುಖ್ಯವಾದುದು. ನಮ್ಮ ರಾಜಕೀಯ ಪಕ್ಷಗಳು ಹಣ, ಹೆಂಡ, ಜಾತಿಗಳ ಮೂಲಕ ನಡೆಸುವ ಚಿಲ್ಲರೆ ವ್ಯಾಪಾರದಿಂದ ನಮ್ಮ ಜನರ ಅಮೂಲ್ಯ ಮತಕ್ಕೆ ಹಾಗೂ ಆತ್ಮಗೌರವಕ್ಕೆ ಭಯಂಕರ ಅವಮಾನ ಮಾಡುತ್ತಿವೆ. ನಮ್ಮ ಮತದಾರನೇ ಕೊನೆಯ ಪಕ್ಷ ಒಂದು ರೂಪಾಯಿಯನ್ನಾದರೂ ನೀಡಿ ತಾನೇ ಚುನಾವಣೆಯನ್ನು ನಿರ್ವಹಿಸುವ ರೀತಿ ಮಾಡಬೇಕಾಗಿದೆ. ಮೌನವಾಗಿರುವ, ನಿರ್ಲಿಪ್ತವಾಗಿರುವ ಜನಸಮುದಾಯದ ಶಕ್ತಿಯನ್ನು ಬಳಸಿಯೇ ಸರ್ವೋದಯ ರಾಜಕಾರಣ ಆರಂಭವಾಗಬೇಕಾಗಿದೆ. ಜನಸಮುದಾಯದ ಈ ಮೌನದ ಆಳದಲ್ಲಿರುವ, ತಮ್ಮನ್ನು ತಾವೇ ಆಳಿಕೊಳ್ಳುವ ತವಕವನ್ನೂ ನಾವು ಗಮನಿಸಬೇಕು. ಈ ಅಂಶವನ್ನು ಅಂಬೇಡ್ಕರ್ ಅವರು ಬಹಳ ಹಿಂದೆಯೇ ಗುರುತಿಸಿದ್ದರು : “ನಮ್ಮ ದೇಶದಲ್ಲಿ ರಾಜಕೀಯಾಧಿಕಾರವು ಕೆಲವೇ ಜನರ ಸ್ವತ್ತಾಗಿದ್ದು ಇನ್ನುಳಿದ ಬಹುಸಂಖ್ಯಾತರು ಪಶುಗಳಂತೆ ಜೀವಿಸುತ್ತಿದ್ದಾರೆ ಎಂಬ ಸಂಗತಿಯನ್ನು ಒತ್ತಿ ಹೇಳಬೇಕಾಗಿಲ್ಲ. ಅಧಿಕಾರವು ಕೆಲವೇ ಕೆಲವರ ಸ್ವತ್ತಾಗಿರುವ ಕಾರಣ ಬಹುಜನರಿಗೆ ತಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಅವಕಾಶವೂ ಇಲ್ಲದಂತಾಗಿದೆ. ಪದದಲಿತರಾದ ಈ ಬಹುಜನರು ತಮ್ಮನ್ನು ತಾವೇ ಆಳಿಕೊಳ್ಳುವ ಅವಕಾಶವನ್ನು ಅರಸುವ ತವಕದಲ್ಲಿದ್ದಾರೆ”.

“ಅನುಭವ ಮಂಟಪ”

ಚುನಾವಣೆಯ ರಾಜಕಾರಣದಿಂದ ಹೊರಗೆ ಹಲವಾರು ವರ್ಷಗಳಿಂದ ತಮ್ಮ ಪಾಡಿಗೆ ತಾವು ಜನರ ಕೆಲಸ ಮಾಡುತ್ತಿರುವವರ ಕಡೆಗೂ ನಾವು ನೋಡಬೇಕಾಗಿದೆ. ನಮ್ಮ ಕೆರೆಗಳಿಗೆ ಜೀವ ತುಂಬಲು ಭಾರತದುದ್ದಕ್ಕೂ ಅಡ್ಡಾಡುತ್ತಿರುವ ರಾಜೇಂದ್ರಸಿಂಗ್, ಆದಿವಾಸಿಗಳ ಹಕ್ಕಿಗಾಗಿ ಹೋರಾಡುತ್ತಿರುವ ಮೇಧಾ ಪಾಟ್ಕರ್, ಸಹಕಾರ ಚಳವಳಿಯ ಮೂಲಕ ಗ್ರಾಮಗಳು ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿರುವ ಅಣ್ಣಾ ಹಜಾರೆ, ಹಾಲಿನ ಉತ್ಪಾದನೆಯ ಹೊಸ ಮಾರ್ಗ ತೋರಿದ ಕುರಿಯನ್, ಆರೋಗ್ಯದ ಬಗೆಗೆ ಅರಿವು ಮೂಡಿಸುವ ಬಾಬಾ ಆಮ್ಟೆ, ಅನಕ್ಷರಸ್ಥ ರೈತರಲ್ಲಿ ತಮ್ಮ ಹಕ್ಕುಗಳ ಬಗ್ಗೆ ಎಚ್ಚರ ಮೂಡಿಸಿದ ಪ್ರೊ.ನಂಜುಂಡಸ್ವಾಮಿ, ದಲಿತರನ್ನು ಸಂಘಟಿಸಿದ ಪ್ರೊ. ಬಿ.ಕೃಷ್ಣಪ್ಪ -ಇಂಥ ನಿಜವಾದ ಜನನಾಯಕರ ಮಾದರಿಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರ ರಾಜಕಾರಣದ ಹೊರಗೆ ಸ್ವಾರ್ಥವಿಲ್ಲದೆ ಜನರ ಕೆಲಸ ಮಾಡುತ್ತಿರುವ ನಮ್ಮ ಸುತ್ತಮುತ್ತಲಿನ ನಾಯಕರ, ಜ್ಞಾನಿಗಳ ಅನುಭವವನ್ನು ಸರ್ವೋದಯ ಕರ್ನಾಟಕ ಒಳಗೊಳ್ಳಬೇಕಾಗಿದೆ. ನಮ್ಮಲ್ಲಿರುವ ಇಂಥ ನೂರಾರು ಅನುಭವಶಾಲಿಗಳ ಜ್ಞಾನವನ್ನು ನಾವು ವ್ಯರ್ಥಮಾಡದೆ ಬಳಸಿಕೊಳ್ಳಲು, ಪಕ್ಷದಲ್ಲಿ ‘ಅನುಭವ ಮಂಟಪ’ ಎಂಬ ವೇದಿಕೆಯನ್ನು ಸ್ಥಾಪಿಸಬೇಕು. ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ, ದಲಿತ ಸಮಸ್ಯೆ, ಸಾಮಾಜಿಕ ನ್ಯಾಯ, ಮೀಸಲಾತಿ, ಮಹಿಳಾ ಸಮಸ್ಯೆ, ವಿಜ್ಞಾನ, ಪಂಚಾಯತ್ ವ್ಯವಸ್ಥೆ, ಪರಿಸರ, ಸಾಹಿತ್ಯ, ಕಲೆ, ಕೋಮು ಸಾಮರಸ್ಯ, ನಮ್ಮ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಪಾಡುವುದು ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿ ಅನುಭವವಿರುವ ತಜ್ಞರೇ ಪಕ್ಷದ ಕಾರ್ಯಕ್ರಮಗಳನ್ನು ರೂಪಿಸಬೇಕೆಂಬುದು ಅನುಭವ ಮಂಟಪದ ಆಶಯ.

ನಮ್ಮ ಅರ್ಥಶಾಸ್ತ್ರಜ್ಞರು, ವಿಜ್ಞಾನಿಗಳು, ನಿವೃತ್ತರಾಗಿರುವ ಆಡಳಿತತಜ್ಞರು, ಅನೇಕ ಪ್ರಯೋಗಗಳನ್ನು ಮಾಡುತ್ತಿರುವ ರೈತರು, ಸಣ್ಣ ಉದ್ಯಮಿಗಳು ಇವರನ್ನೆಲ್ಲಾ ನಮ್ಮ ರಾಜಕಾರಣ ಹಾಗೂ ಸರ್ಕಾರಗಳು ಲೆಕ್ಕಕ್ಕೆ ತೆಗೆದುಕೊಳ್ಳುತ್ತಲೇ ಇಲ್ಲ. ನಮ್ಮ ವಿಧಾನ ಪರಿಷತ್ತುಗಳಿಗೆ ಕನಿಷ್ಠ ಈ ವಲಯಗಳ ಜ್ಞಾನಿಗಳನ್ನೂ ಆಯ್ಕೆ ಮಾಡುತ್ತಿಲ್ಲ. ಹೀಗೆ ವಿವಿಧ ಕ್ಷೇತ್ರಗಳ ಅನುಭವಶಾಲಿಗಳನ್ನು ಆಧರಿಸಿದ ಅನುಭವ ಮಂಟಪವನ್ನು ಸರ್ವೋದಯ ಕರ್ನಾಟಕ ರೂಪಿಸುತ್ತದೆ. ಅಧಿಕಾರ ಹಿಡಿಯುವುದಷ್ಟೇ ಮುಖ್ಯವಲ್ಲ; ಅಧಿಕಾರದ ಹೊರಗೆ ಈ ಎಲ್ಲಾ ಅನುಭವಗಳನ್ನು ಒಗ್ಗೂಡಿಸಿ ಮಾಡಬೇಕಾದ ಸಮಾಜವನ್ನು ಕಟ್ಟುವ ಕೆಲಸವೂ ಬಹುಮುಖ್ಯವಾದುದು. ಜೊತೆಗೆ ನಮ್ಮ ಲಕ್ಷಾಂತರ ಜನ ನಿವೃತ್ತ ಪ್ರಜೆಗಳಿಗೆ ಬಂದಿರುವ ತಾವು ವ್ಯರ್ಥ’ ಎಂಬ ಭಾವನೆಯನ್ನು ಹೋಗಲಾಡಿಸಬೇಕಾಗಿದೆ. ಅವರಲ್ಲಿರುವ ಆಡಳಿತ ಜ್ಞಾನ, ಸಮಾಜ ನಿರ್ವಹಣೆಯ ಜ್ಞಾನ ಮರುಬಳಕೆಯಾಗಬೇಕಾಗಿದೆ. ಸಮಾನತೆಗಾಗಿ ಹಸಿದಿರುವ, ನಿಜಕ್ಕೂ ಜಾತ್ಯತೀತರಾದ ತರುಣ, ತರುಣಿಯರಿಗೆ ಕುವೆಂಪು ಅವರ ‘ಗುಡಿ, ಮಸೀದಿ, ಚರ್ಚುಗಳ ಬಿಟ್ಟು ಬನ್ನಿ’ ಸಂದೇಶವನ್ನು ಮನದಟ್ಟು ಮಾಡಿ ಅವರ ಶಕ್ತಿಯನ್ನು ಸರಿದಾರಿಯಲ್ಲಿ ಹರಿಸಬೇಕಾಗಿದೆ. ಹಾಗೆಯೇ ನಮ್ಮ ಎಲ್ಲಾ ಜಿಲ್ಲಾ ಕೇಂದ್ರಗಳು ಹಾಗೂ ನಗರಗಳ ಸುಮಾರು ಒಂದು ಕೋಟಿ ವಿದ್ಯಾವಂತ ಅಸಂಘಟಿತ ಕಾರ್ಮಿಕರ ಜೀವನ ಹಾಗೂ ಭವಿಷ್ಯದ ಭದ್ರತೆಗೆ ಹಾಗೂ ಅವರ ವಿಮಾ ಯೋಜನೆಗಳಿಗೆ ಕಾರ್ಯಕ್ರಮ ರೂಪಿಸಬೇಕಾಗಿದೆ.

“ಸರ್ವರಿಗೆ ಸಮಪಾಲುಸರ್ವರಿಗೆ ಸಮಬಾಳು”

“ಶಕ್ತಿಶಾಲಿಗಳಿಗೆ ಎಷ್ಟು ಅವಕಾಶಗಳಿವೆಯೋ ಅಷ್ಟೇ ಅವಕಾಶ ದುರ್ಬಲರಿಗೂ ಇದ್ದಾಗ ಮಾತ್ರ ಅದು ಪ್ರಜಾಪ್ರಭುತ್ವವಾಗುತ್ತದೆ’ ಎಂದ ಗಾಂಧೀಜಿಯವರ ಮಾತನ್ನು ಈಗಿನ ಸನ್ನಿವೇಶದಲ್ಲಿ ಮತ್ತೆ  ನೆನಪಿಸಿಕೊಳ್ಳಬೇಕು. ಗ್ರಾಮಗಳ ಹಕ್ಕನ್ನು ನಗರಗಳ ಬೆಳವಣಿಗೆ ಕಸಿದುಕೊಳ್ಳುತ್ತಿದೆ. ಗ್ರಾಮದ ಬಡಮಕ್ಕಳು ಹಾಗೂ ನಗರದ ಬಡಮಕ್ಕಳಿಬ್ಬರೂ ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಆಹಾರ ಉತ್ಪಾದನೆಯ ಭೂಮಿಯನ್ನು ಕೈಗಾರಿಕೆಗಳು ವಶಮಾಡಿಕೊಳ್ಳುತ್ತಿವೆ. ನಮ್ಮ ರೈತರ ಬಿತ್ತನೆಯ ಬೀಜದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ನಮ್ಮ ಹಳ್ಳಿಗಳಲ್ಲಿ ಕುಡಿಯುವ ನೀರೇ ಇರದೆ ಖಾಯಿಲೆಗಳು ಹೆಚ್ಚಾಗುತ್ತಿವೆ. ಗ್ರಾಮೀಣ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಕೋಶದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಗ್ರಾಮೀಣ ಜನಕ್ಕೆ ಇನ್ನೂ ಮತದಾನದ ಹಕ್ಕು ಇದೆ ಎಂಬ ಕಾರಣಕ್ಕೆ ನಮ್ಮ ಹಳ್ಳಿಗಳ ಬಗ್ಗೆ ಅಷ್ಟಿಷ್ಟು ಗಮನವನ್ನು ಆಳುವವರು ಕೊಡುತ್ತಿದ್ದಾರೆ, ಅಷ್ಟೆ.

ಹೀಗಾಗಿ, ಸುಮ್ಮನೆ ಮೂಕವಾಗಿ ಎಲ್ಲವನ್ನೂ ನೋಡುತ್ತಿರುವ, ಒಟ್ಟು ಜನಸಂಖ್ಯೆಯಲ್ಲಿ ಮುಕ್ಕಾಲು ಭಾಗದಷ್ಟಿರುವ ಜನ ಸಮುದಾಯವನ್ನು ತಲುಪುವುದು ಹಾಗೂ ತೊಡಗಿಸುವುದು ನಿರ್ಮಾಣ ರಾಜಕಾರಣದ ಮುಖ್ಯ ಗುರಿಯಾಗಬೇಕಾಗಿದೆ. ‘ರಾಜಕಾರಣವೆಂದರೆ, ಐದು ವರ್ಷಕ್ಕೊಮ್ಮೆ ತಲೆಗೆ ಐನೂರು ರೂಪಾಯಿ ಚೆಲ್ಲಿ ಅಧಿಕಾರ ಹಿಡಿಯುವ ಆಟ ಅಲ್ಲ; ಅದು ಊರು ಕಟ್ಟುವ ಪವಿತ್ರ ಕರ್ತವ್ಯ’ ಎಂಬ ತಿಳಿವಳಿಕೆ ಬೆಳೆಸಬೇಕಾಗಿದೆ. ಈಗಿನ ರಾಜಕೀಯ ಪಕ್ಷಗಳಿಗೆ ರಾಜಕಾರಣವನ್ನು ಮೀರಿ ಒಂದು ಸಮಾಜ ಕಟ್ಟುವ ಶಕ್ತಿಯೇ ಇಲ್ಲ. ಆದರೆ ಒಂದು ರಾಷ್ಟ್ರ ಕಟ್ಟಲು ರಾಜಕಾರಣವನ್ನು ಮೀರಿ ನೋಡಲೇಬೇಕು. ರಾಜಕಾರಣ ಎನ್ನುವುದು ಜಾತಿಪದ್ಧತಿ, ವರದಕ್ಷಿಣೆಯ ಪಿಡುಗು, ಅಸ್ಪೃಶ್ಯತೆ, ಗಂಡು-ಹೆಣ್ಣುಗಳ ನಡುವೆ ಭೇದ, ಅಸಮಾನತೆ, ಜನಸಂಖ್ಯಾ ನಿಯಂತ್ರಣ, ಶಿಕ್ಷಣ ಇತ್ಯಾದಿಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಾಧನ ಎಂಬುದನ್ನು ನಮ್ಮ ಪಕ್ಷಗಳು ಹೆಚ್ಚುಕಡಿಮೆ ಮರೆತೇಬಿಟ್ಟಿವೆ.

ಆದ್ದರಿಂದ ಎಲ್ಲರನ್ನೂ ತಲುಪುವ, ಒಳಗೊಳ್ಳುವ ಸರ್ವರ ಉದಯವಾಗುವ ನಿರ್ಮಾಣ ರಾಜಕಾರಣವನ್ನು ನಾವಿಂದು ಆರಂಭಿಸಲೇಬೇಕಾಗಿದೆ. ಬುದ್ಧ, ಬಸವ, ಗಾಂಧೀಜಿಯವರ ಸ್ಫೂರ್ತಿಯಲ್ಲಿ ಅಂಬೇಡ್ಕರ್ ಹಾಗೂ ಲೋಹಿಯಾ ಮಾರ್ಗದ ಜೊತೆಗೆ ಸಮಾನತೆ, ಐಕ್ಯತೆಗಾಗಿ ತುಡಿಯುವ ಎಲ್ಲಾ ಚಿಂತನಾ ಪರಂಪರೆಗಳನ್ನು ಬೆಸೆದು ಸರ್ವೋದಯ ಸಾಧಿಸಲು ಸರಳ ಮನಸ್ಸಿನಿಂದ ಸಿದ್ಧರಾಗಬೇಕಾಗಿದೆ.

sarvoodaya-cover1