ಹೆಣ್ಣುನೋಟದ ವಿರಳ ಪ್ರಯೋಗ – ಡಿ.ಉಮಾಪತಿ
ಲಿಂಗತಾರತಮ್ಯ ನಿವಾರಣೆಗೆ ಶ್ರಮಿಸುತ್ತಿರುವ ದಿಲ್ಲಿಯ ‘ನಿರಂತರ’ ಎಂಬ ಸ್ವಯಂಸೇವಾ ಸಂಸ್ಥೆ ಈ ಪತ್ರಿಕೆಯನ್ನು ರೂಪಿಸಿ, ಗ್ರಾಮೀಣ ದಲಿತ ಹೆಣ್ಣುಮಕ್ಕಳ ತಂಡವನ್ನು ಆಯ್ದು ತರಬೇತಿ ನೀಡಿ ಅವರ ಬೆನ್ನಿಗೆ ನಿಂತಿದೆ. ದೊಡ್ಡ ಪತ್ರಿಕೆಗಳು, ದೊಡ್ಡ ಪೇಟೆ–ಪಟ್ಟಣಗಳ ಸುದ್ದಿ ಪ್ರಕಟಿಸುತ್ತವೆ. ಅವುಗಳ ಸಂಪಾದಕೀಯ ಸಿಬ್ಬಂದಿ ವಿಶ್ವವಿದ್ಯಾಲಯ ಶಿಕ್ಷಣ ಉಳ್ಳವರು, ಇಂಗ್ಲಿಷ್ ಬಲ್ಲವರು. ಬುಂದೇಲ್ಖಂಡದ ಈ ಹಳ್ಳಿಗಾಡಿನ ಜನರ ಪಾಲಿಗೆ ಇಂಗ್ಲಿಷ್ ಮಾತ್ರವಲ್ಲ, ಹಿಂದಿ ಕೂಡ ಕುಲೀನ ಭಾಷೆ. ದಲಿತ ಮಹಿಳೆಯರು ದುಪ್ಪಟ್ಟು ಶೋಷಣೆ ಎದುರಿಸಿ ಅಂಚಿಗೆ ಬಿದ್ದವರು. ನಿಜವಾಗಿಯೂ ಬೇರುಮಟ್ಟದ ಅಪ್ಪಟ ಸ್ಥಳೀಯ ಸುದ್ದಿಯನ್ನು ಅವರು ಹೆಕ್ಕಿ ತೆಗೆಯಬಲ್ಲರು.
ಹೀಗೆಂದು ಪ್ರಜ್ಞಾಪೂರ್ವಕವಾಗಿಯೇ ಅವರನ್ನು ಸಂಪಾದಕೀಯ ಬಳಗಕ್ಕೆ ಆರಿಸಿಕೊಂಡಿದ್ದೇವೆ ಎನ್ನುತ್ತಾರೆ ‘ನಿರಂತರ’ದ ಶಾಲಿನಿ ಜೋಷಿ
ಹದಿನೈದು ವರ್ಷಗಳ ಹಿಂದೆ ಈ ಪತ್ರಿಕೆ ಕಣ್ಣು ಬಿಟ್ಟಿದ್ದ ಸೀಮೆಯನ್ನು ಉತ್ತರಪ್ರದೇಶದಲ್ಲಿ ಬುಂದೇಲ್ಖಂಡ ಎಂದು ಕರೆಯುತ್ತಾರೆ. ಅನಕ್ಷರತೆ, ಬಂಜರು, ಬಡತನ, ಬರಗಾಲ, ಬವಣೆಗಳನ್ನೇ ಹಾಸಿ ಹೊದ್ದು ಮಲಗುವ ಈ ಖಂಡವನ್ನು ಉತ್ತರಪ್ರದೇಶದ ಕತ್ತಲ ಖಂಡ ಎನ್ನುವುದುಂಟು.
ಉಪ್ಪು-ರೊಟ್ಟಿ, ಹುಲ್ಲುಬೀಜಗಳ ಬೀಸಿದ ಹಿಟ್ಟಿನ ರೊಟ್ಟಿಯನ್ನು ತಿಂದು ಜೀವ ಹಿಡಿದು ಸುದ್ದಿಯಾದವರು ಇಲ್ಲಿನ ಜನ. ಬೆಂಬಿಡದ ಬರಗಾಲಕ್ಕೆ ಸಾವಿರಾರು ಸಣ್ಣ ಹಿಡುವಳಿದಾರರು ಪ್ರಾಣಬಲಿ ನೀಡಿದ್ದರು. ಹಸಿದ ಮಕ್ಕಳ ಸಂಕಟ ನೋಡಲಾಗದೆ ರಕ್ತ ಮಾರಿ ಹೊಟ್ಟೆ ಹೊರೆದ ಕುಟುಂಬಗಳೂ ಉಂಟು.
ಕ್ಷೇತ್ರಕ್ಕೆ ತೆರಳಿ ಸುದ್ದಿ ಸಂಗ್ರಹಿಸುವವರು, ಬರೆಯುವವರು, ಪರಿಷ್ಕರಿಸಿ ತಲೆಬರಹ ನೀಡುವವರು, ಪತ್ರಿಕೆಯ ವಿನ್ಯಾಸ ಮಾಡುವವರು, ಮುದ್ರಣ ಮಾಡಿಸಿ ತರುವವರು, ಹಳ್ಳಿಗಳಿಗೆ ಹಂಚುವವರು ಎಲ್ಲ ಹೆಂಗಳೆಯರು ಸೇರಿ ಒಟ್ಟು 40 ಮಂದಿ. ವರದಿಗಾರ್ತಿಯರು 22 ಮಂದಿ. ಒಂಟಿಯಾಗಿ ಹಳ್ಳಿ ಹಳ್ಳಿ ಸುತ್ತಿ ಸುದ್ದಿ ಹೆಕ್ಕುತ್ತಾರೆ. ನಕಾಶೆಯಲ್ಲೇ ಇಲ್ಲದ, ನೀರು ದೀಪಗಳಿರದ, ಅಂಚೆಪೇದೆಯೂ ಕಾಲಿಡದ ಕೊಂಪೆಯಂತಹ ಜನವಸತಿಗಳನ್ನೂ ಬಿಟ್ಟಿಲ್ಲ ಇವರು. ದೊಡ್ಡ ಪತ್ರಿಕೆಗಳ ವರದಿಗಾರರು ಅನುಭವಿಸುವ ಸೌಲಭ್ಯಗಳು ಇವರಿಗಿಲ್ಲ. ಹಸಿವಾದರೆ ಮನೆಯಿಂದ ಒಯ್ದ ಬುತ್ತಿಯೇ ಗತಿ. ಬಸ್ಸು, ಸೈಕಲ್ಲು, ಕಿಲೊಮೀಟರುಗಟ್ಟಲೆ ಕಾಲ್ನಡಿಗೆ ಮಾಮೂಲು. ಎಲ್ಲ ಪ್ರತಿಕೂಲಗಳಿಗೆ ಕಳಶವಿಟ್ಟಂತೆ ಪುಂಡು ಪೋಕರಿಗಳನ್ನೂ ಪುರುಷಪ್ರಧಾನ ವ್ಯವಸ್ಥೆಯ ಕಿರುಕುಳಗಳನ್ನೂ ನಿತ್ಯ ನುಂಗಿ ನಡೆಯಬೇಕು.
ಒಂದು ಕಾಲಕ್ಕೆ ಕಂಪ್ಯೂಟರನ್ನು ಮುಟ್ಟುವುದಿರಲಿ, ನೋಡುವುದೂ ದುಸ್ಸಾಧ್ಯವಿದ್ದ ಹಿನ್ನೆಲೆಯಿಂದ ಬಂದ ಬಡ ಯುವತಿಯರ ಆತ್ಮವಿಶ್ವಾಸ ಕುದುರಿದೆ. ಸಮಾಜ, ಸರ್ಕಾರ, ಸರೀಕ ಪತ್ರಕರ್ತರು ಗುರುತಿಸಿ ನಡೆಸಿಕೊಳ್ಳುವ ಪರಿ ಹೊಸ ಹುಮ್ಮಸ್ಸು ನೀಡಿದೆ ಎನ್ನುತ್ತಾರೆ ಪತ್ರಿಕೆಯ ಮುಖ್ಯ ವರದಿಗಾರ್ತಿ ಮೀರಾ. ಹೆಸರಿಗಂಟಿಕೊಂಡು ಬಂದ ತಳಸಮುದಾಯದ ಅಡ್ಡಹೆಸರುಗಳನ್ನು ಈ ಯುವತಿಯರು ಕಿತ್ತೆಸೆದಿದ್ದಾರೆ.
ಬುಂದೇಲ್ ಖಂಡದ ಚಿತ್ರಕೂಟ, ಫೈಜಾಬಾದ್, ಝಾನ್ಸಿ, ಲಲಿತಪುರ, ಅಂಬೇಡ್ಕರ್ ನಗರ, ಬಾಂದಾ ಜಿಲ್ಲೆಗಳಲ್ಲಿ ಲಹರಿಯಾ ಹೆಜ್ಜೆ ಗುರುತುಗಳು ಪಡಿಮೂಡಿವೆ. 600 ಕುಗ್ರಾಮಗಳ ಬದುಕಿನ ಹಾಸು ಹೊಕ್ಕಾಗಿದೆ ಈ ವಾರಪತ್ರಿಕೆ. ಈ ಪೈಕಿ ಬಹುತೇಕ ಹಳ್ಳಿಗಳು ಮುಖ್ಯವಾಹಿನಿಯ ಯಾವ ಸುದ್ದಿಪತ್ರಿಕೆಯನ್ನೂ ಕಂಡಿಲ್ಲ. ದೊಡ್ಡ ಪತ್ರಿಕೆಗಳು ಹೆಚ್ಚೆಂದರೆ ತಾಲ್ಲೂಕು, ಹೋಬಳಿಯ ದೊಡ್ಡ ಸುದ್ದಿಗಳಿಗೆ ಕಣ್ಣು ತೆರೆದಾವು. ಹಳ್ಳಿ ಹಳ್ಳಿಗಳ ಕುಡಿವ ನೀರು, ರಸ್ತೆ, ಶಾಲೆ, ಆಸ್ಪತ್ರೆ, ಮನರೇಗ ಯೋಜನೆಯಲ್ಲಿ ಕೂಲಿ ನಿರಾಕರಿಸಿ ಬಡಪಾಯಿಗಳ ವಂಚಿಸುವ ಪಂಚಾಯಿತಿ ಪ್ರಧಾನ, ರೇಷನ್ ಕಾರ್ಡ್ ಸಮಸ್ಯೆ, ಕಳವು, ಕೊಲೆ, ದಬ್ಬಾಳಿಕೆ, ಅಧಿಕಾರಿಗಳ ನಿರ್ಲಕ್ಷ್ಯದ ವ್ಯಥೆಯ ಕತೆಗಳಿಗೆ ದೊಡ್ಡ ಪತ್ರಿಕೆಗಳಲ್ಲಿ ಜಾಗವೆಲ್ಲಿಯದು? ಉತ್ತರಪ್ರದೇಶವಲ್ಲದೆ ಮಧ್ಯಪ್ರದೇಶದ ಹಲವು ಜಿಲ್ಲೆಗಳಿಗೂ ಚಾಚುವ ಬುಂದೇಲ್ಖಂಡ ಸೀಮೆಯಲ್ಲಿ ಡಕಾಯಿತರ ಕಾರುಬಾರು ಈಗಲೂ ಅಳಿದಿಲ್ಲ. ಹಳ್ಳಿಗೆ ಹಳ್ಳಿಗಳೇ ಡಕಾಯಿತರ ಒತ್ತೆಯಲ್ಲಿ ತೊಳಲುವ ಪ್ರಕರಣಗಳು ಉಂಟು. ಬೇರುಮಟ್ಟದ ಈ ಎಲ್ಲ ಕತೆಗಳು-ವ್ಯಥೆಗಳಿಗೆ ‘ಲಹರಿಯಾ’ದಲ್ಲಿ ಜಾಗ ಉಂಟು.
‘ಖಬರ್ ಲಹರಿಯಾ’ದಲ್ಲಿ ಸುದ್ದಿ ಬಂದರೆ ತಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ವಿಶ್ವಾಸವನ್ನು ಮೂಡಿಸಿದೆ. ಹೀಗಾಗಿಯೇ ಈ ಪತ್ರಿಕೆ ಬುಂದೇಲ್ಖಂಡದ ಪ್ರಭಾವಶಾಲಿ ಶಕ್ತಿ. ಹಿಂದಿನ ವರ್ಷ ಡಿಜಿಟಲ್ ದಾರಿ ಹಿಡಿದ ನಂತರ ‘ಖಬರ್ ಲಹರಿಯಾ’ ಓದುಗರ ಪೈಕಿ ಹೆಣ್ಣುಮಕ್ಕಳ ಪ್ರಮಾಣ ಶೇ 3 ರಿಂದ ಶೇ 33ಕ್ಕೆ ದೊಡ್ಡ ಜಿಗಿತ ಕಂಡಿದೆ. ಸ್ಮಾರ್ಟ್ ಫೋನ್ ಮತ್ತು ಸೆಲ್ಫಿ ಸ್ಟಿಕ್ ಬಳಸಿ ಫೋಟೊ ಮತ್ತು ವಿಡಿಯೊ ತೆಗೆದು ವರದಿ ಸಂದರ್ಶನಗಳನ್ನು ವಾಟ್ಸ್ಆ್ಯಪ್ನಲ್ಲಿ ಕಚೇರಿಗೆ ರವಾನಿಸುತ್ತಿದ್ದಾರೆ ವರದಿಗಾರ್ತಿಯರು. ಹೀಗಾಗಿ ಪತ್ರಿಕೆಯಲ್ಲಿ ಅಚ್ಚಾಗುವ ವರದಿಗಳು ದೃಶ್ಯರೂಪದಲ್ಲಿ ಅಂತರ್ಜಾಲ ತಾಣ, ಫೇಸ್ಬುಕ್, ಟ್ವಿಟರ್ ವೇದಿಕೆಗಳನ್ನೂ ಏರಿ ನೋಡುಗರ ಸೆಳೆಯುತ್ತಿವೆ.
ಮುದ್ರಿತ ಪತ್ರಿಕೆಯ ಓದುಗರ ಸಂಖ್ಯೆ ಲಕ್ಷವನ್ನೂ ಮುಟ್ಟಿರಲಿಲ್ಲ. ಆದರೆ ಡಿಜಿಟಲ್ ರೂಪ ತಳೆದ ನಂತರ ಈ ಸಂಖ್ಯೆ ಏಳು ಲಕ್ಷ ದಾಟಿದೆ. ಪತ್ರಿಕೆಯ ಡಿಜಿಟಲ್ ವ್ಯವಹಾರಗಳನ್ನು ಮುದ್ರಣದಿಂದ ಪ್ರತ್ಯೇಕಿಸಿ ಚಂಬಲ್ ಮೀಡಿಯಾ ಎಂಬ ಹೊಸ ಕಂಪೆನಿಯ ಕೈಗೆ ಒಪ್ಪಿಸಲಾಗಿದೆ. ದಾರಿದ್ರ್ಯದ ನಡುವೆಯೂ ಫೇಸ್ಬುಕ್ ಖಾತೆ ಹೊಂದಿದ ಒಂದೂವರೆ ಲಕ್ಷ ಇಂಟರ್ನೆಟ್ ಬಳಕೆದಾರರನ್ನು ಚಂಬಲ್ ಮೀಡಿಯಾ ಗುರುತಿಸಿದೆ. ದೊಡ್ಡ ಪತ್ರಿಕೆಗಳು ತಮ್ಮ ಡಿಜಿಟಲ್ ಆವೃತ್ತಿಗಳಿಗೆ ಸಿದ್ಧಪಡಿಸುವ ಹೂರಣ ಹೆಚ್ಚೆಂದರೆ ಜಿಲ್ಲಾ ಮಟ್ಟಕ್ಕಿಂತ ಕೆಳಗೆ ಇಳಿಯುವುದಿಲ್ಲ. ಆದರೆ ಬೇರುಮಟ್ಟದಲ್ಲಿ ತಯಾರಾಗುವ ಖಬರ್ ಲಹರಿಯಾ ಉತ್ಪನ್ನಕ್ಕೆ ಅಪ್ಪಟ ಸ್ಥಳೀಯತೆಯ ಗಾಢ ಗುಣವಿರುತ್ತದೆ. ಪರಿಣಾಮವಾಗಿ ಲಹರಿಯಾದ ಹೂರಣ ಗ್ರಾಮೀಣರಿಗೆ ಹೆಚ್ಚು ಸ್ವೀಕೃತ. ಡಿಜಿಟಲ್ ಆವೃತ್ತಿಗೆ ರೆಕ್ಕೆ ಪುಕ್ಕ ಬಲಿತಿಲ್ಲ. ಪರಿಣಾಮವಾಗಿ ಮೇಲೆ ಮೇಲಕ್ಕೆ ಹಾರಲಾಗುತ್ತಿಲ್ಲ. ಸಾಧನ ಸಲಕರಣೆಗಳಿಗೆ ಮಾಡಿರುವ ಹೂಡಿಕೆ ಸಾಲದು. ದೇಣಿಗೆಗಳೇ ಆಧಾರ. ಇಷ್ಟಾಗಿಯೂ ಡಿಜಿಟಲ್ ಆವೃತ್ತಿಯ ವಾರ್ಷಿಕ ವೆಚ್ಚ
2 ಲಕ್ಷ ದಾಟಿಲ್ಲ. ಪತ್ರಿಕೆಯ ಧ್ಯೇಯೋದ್ದೇಶಗಳಿಗೆ ಧಕ್ಕೆ ಬಾರದಂತೆ ಜಾಹೀರಾತಿನ ವರಮಾನದಿಂದ ಸ್ವಂತ ಕಾಲ ಮೇಲೆ ನಿಲ್ಲುವ ನಕಾಶೆ ಸಿದ್ಧವಾಗಿದೆ.