ನೀರಿನ ಬಡತನ ನೀಗುವ ಹಾದಿಯಲಿ ತೇವದ ಹೆಜ್ಜೆ ಗುರುತುಗಳು ಮೂಡಲಿ…. ಕೆ.ಎಸ್.ರವಿಕುಮಾರ್,
ಹಸಿವು ನೀಗಿಸಿಕೊಳ್ಳಲಾಗದ ಬಡತನದ ಬಗ್ಗೆ ಕೇಳಿದ್ದೆವು. ಖಾಯಿಲೆಗೆ ಔಷಧಿ ಖರೀದಿಸಲಾಗದ ಬಡತನದ ಬಗ್ಗೆ ಕೇಳಿದ್ದೆವು. ಉದ್ಯೋಗವಿಲ್ಲದೆ ಚಡಪಡಿಸುವ ಬಡತನದ ಬಗ್ಗೆ ಕೇಳಿದ್ದೆವು. ಫೀಜು ಕಟ್ಟಲಾಗದೆ ಅರ್ಧದಲ್ಲೇ ಮಕ್ಕಳು ಶಾಲೆ ಬಿಡುವ ಬಡತನದ ಬಗ್ಗೆ ಕೇಳಿದ್ದೆವು. ಸಂಪನ್ಮೂಲ ಕೊರತೆ ಮತ್ತು ಬರಗಾಲಗಳು ಸೃಷ್ಟಿಸುವ ಆರ್ಥಿಕ ಬಡತನದ ಬಗ್ಗೆ ಕೇಳಿದ್ದೆವು. ಯುದ್ಧ, ಜನಾಂಗೀಯ ಕಲಹ, ಭ್ರಷ್ಟ ಆಡಳಿತ ವ್ಯವಸ್ಥೆ ಇತ್ಯಾದಿ ಕೃತಕ ಕಾರಣಗಳು ತಂದೊಡ್ಡುವ ದಾರಿದ್ರ್ಯದ ಬಗ್ಗೆ ಕೇಳಿದ್ದೆವು. ಇಂತಹವುಗಳ ಪಟ್ಟಿಗೆ ಸೇರಿಸಲು ಇನ್ನೂ ಒಂದು ಬಡತನವಿದೆಯೆ? ಹೌದೆನ್ನಬೇಕು. ನೀರಿನ ಬಡತನವೆನ್ನುವುದು ವಾಸ್ತವದಲ್ಲಿ ನೀರನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ತಿಳುವಳಿಕೆಯ ಬಡತನವಾಗಿದೆ.
ಒಂದು ದೇಶದ ಅಭಿವೃದ್ಧಿಯನ್ನು ಕೃಷಿ ಉತ್ಪನ್ನಗಳು, ರಫ್ತಿನ ಪ್ರಮಾಣ, ಖನಿಜ ಸಂಪತ್ತು, ಕೈಗಾರಿಕೋತ್ಪನ್ನಗಳು, ತಲಾವಾರು ಆದಾಯ, ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಜ್ಞಾನದ ಪ್ರಗತಿ, ಮಾನವಾಭಿವೃದ್ಧಿ, ದುಡಿವ ಜನರ ಕಾರ್ಯಕ್ಷಮತೆ, ಕಾನೂನು ಪಾಲನೆಯಲ್ಲಿ ಪ್ರಾಮಾಣಿಕತೆ, ಲಂಚರಹಿತ ಸೇವಾ ಮನೋಭಾವನೆ, ನಾಗರೀಕ ಪ್ರಜ್ಞೆ ಹೀಗೆ ಹಲವು ಅಂಶಗಳ ತಳಹದಿಯ ಮೇಲೆ ತಜ್ಞರು ತೀರ್ಮಾನಿಸುತ್ತಾರೆ ಎಂದು ನಮಗೆ ತಿಳಿದಿದೆ. ಆದರೆ 2000ದ ಇಸವಿಯಿಂದ ಈಚೆಗೆ ಮೇಲೆ ವಿವರಿಸಿದ ಮಾನದಂಡಗಳ ಸಾಲಿಗೆ ಇನ್ನೂ ಒಂದು ಮಾನದಂಡ ಸೇರ್ಪಡೆಯಾಗಿದೆ. ಅದುವೇ ‘ನೀರಿನ ಬಡತನದ ಸೂಚ್ಯಂಕ’ (Water Poverty Index). ಹಾಗೆ ನೋಡಿದರೆ ಎಲ್ಲ ಕಾಲಕ್ಕೂ ಬೇಸಾಯ, ಕೈಗಾರಿಕೆ, ಜನರ ಆರೋಗ್ಯ, ಪಶುಸಂಗೋಪನೆ ಹೀಗೆ ಎಲ್ಲ ಅವಲಂಬಿಸಿರುವುದೇ ನೀರಿನ ಲಭ್ಯತೆಯ ಮೇಲಲ್ಲವೆ? ಬಹಳ ತಡವಾಗಿಯಾದರೂ ಜಗತ್ತು ನೀರಿನ ಮಹತ್ವವನ್ನು ಪ್ರಗತಿಗೆ ಪೂರಕಾಂಶವಾಗಿ ಪರಿಗಣಿಸುತ್ತಿದೆ ಎಂಬುದೇ ಸಮಾಧಾನದ ವಿಚಾರವಾಗಿದೆ. ಒಂದು ದೇಶ ಅಥವಾ ಪ್ರದೇಶದ ಜನತೆ ನೀರನ್ನು ಎಷ್ಟು ಅವಲಂಬಿಸಿದೆ, ಎಷ್ಟನ್ನು ಪಡೆಯುವುದರ ಜೊತೆಗೆ ಎಷ್ಟನ್ನು ಪೋಲು ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೀರಿನ ಬಡತನದ ಸೂಚ್ಯಂಕ ನೆರವಾಗುತ್ತದೆ. ಈ ಸೂಚ್ಯಂಕದ ಜೊತೆಗೆ ಒಟ್ಟಾರೆ ಒಂದು ಸಮಾಜದ ಪ್ರಗತಿ ಹೇಗೆ ತಳಕು ಹಾಕಿಕೊಂಡಿದೆ ಎಂಬುದನ್ನೂ ತಿಳಿಯಬಹುದಾಗಿದೆ.
ನೀರಿನ ಬಡತನದ ಸೂಚ್ಯಂಕ ಅಥವಾ ನೀ.ಬ.ಸೂ.ವನ್ನು ನಿರ್ಧರಿಸುವ ಅಂಶಗಳಾವುವು? ಐದು ಅತಿ ಮುಖ್ಯ ಅಂಶಗಳನ್ನು ಗುರ್ತಿಸಲಾಗಿದೆ. ಒಂದೊಂದಾಗಿ ಪರಿಶೀಲಿಸೋಣ.
1. ನೀರಿನ ಸಂಪನ್ಮೂಲಗಳು (Resources) : ಒಂದು ದೇಶದ ಭೌಗೋಳಿಕ ವ್ಯಾಪ್ತಿಯಲ್ಲಿ ಮೇಲ್ಮೈ ನೀರು ಮತ್ತು ಅಂರ್ತಜಲಗಳ ಲಭ್ಯತೆಯ ಪ್ರಮಾಣ, ಮೇಲು ನೀರು (ಮುಖ್ಯವಾಗಿ ಮಳೆ ನೀರು) ಭೂಮಿಗೆ ಇಂಗುವ ಪ್ರಮಾಣ, ನೀರಿನ ನಿರಂತರ ಲಭ್ಯತೆಯ ಖಾತರಿ ಮತ್ತು ವ್ಯತ್ಯಯಗಳನ್ನು ಗುಣಾತ್ಮಕ ಹಾಗೂ ಪರಿಮಾಣಾತ್ಮಕ ಮಾಪನಗಳಿಗೆ ಒಳಪಡಿಸುವುದು ಮತ್ತು ಲಭ್ಯ ನೀರಿನ ಬಳಕೆಯ ಗುಣಮಟ್ಟವನ್ನು ನಿರ್ಧರಿಸುವುದು ಈ ಅಂಶದಡಿ ಪ್ರಮುಖ ವಿಚಾರಗಳಾಗಿರುತ್ತವೆ.
2. ನೀರನ್ನು ಪಡೆದುಕೊಳ್ಳುವ ಸಾಧ್ಯತೆ [Accessibility) : ಶುದ್ದ ಅಥವಾ ಮಾಲಿನ್ಯರಹಿತ ನೀರನ್ನು ಪಡೆದುಕೊಳ್ಳುವ ನಮಗಿರುವ ಅವಕಾಶಗಳೆಡೆಗೆ ಬೆಳಕು ಚೆಲ್ಲುವುದು ಈ ಅಂಶದ ತಿರುಳು. ನೀರಿನ ಮೂಲ ನೈಸರ್ಗಿಕವಾಗಿರಬಹುದು ಅಥವಾ ಆಡಳಿತ ವ್ಯವಸ್ಥೆಗಳು ಕೊಡಮಾಡಿದಂತಹುದೂ ಆಗಿರಬಹುದು. ಒಟ್ಟು ಜನಸಂಖ್ಯೆಯಲ್ಲಿ ಕೊಳಾಯಿ ಮೂಲಕ ಶುದ್ಧ ನೀರು ಪಡೆಯಬಲ್ಲ ಮನೆ ಅಥವಾ ಕುಟುಂಬಗಳ ಶೇಕಡಾವಾರು ಅಂಕಿ ಅಂಶ, ನೀರನ್ನು ಪಡೆಯುವ ಸಂದರ್ಭಗಳಲ್ಲಿ ಬಳಕೆದಾರರ ನಡುವೆ ಸಂಭವಿಸುವ ಘರ್ಷಣೆಗಳ ವರದಿಗಳು, ಒಟ್ಟು ಜನಸಂಖ್ಯೆಯಲ್ಲಿ ನೈರ್ಮಲ್ಯ(sanitation)ವನ್ನು ಸಾಧಿಸಿರುವ ಶೇಕಡಾವಾರು ಲೆಕ್ಕ, ನೀರು ಹೊತ್ತು ತರುವ ಮಹಿಳೆಯರ ಶೇಕಡಾವಾರು ಸಂಖ್ಯೆ, ನೀರನ್ನು ಪಡೆದುಕೊಳ್ಳಲು ವಿನಿಯೋಗಿಸುವ ಸಮಯ (ಇದರಲ್ಲಿ ಕೊಳವೆಬಾವಿ, ನಲ್ಲಿ ಮತ್ತು ಟ್ಯಾಂಕರ್ಗಳೆದುರು ಸರದಿಯಲ್ಲಿ ಕಾಯುವುದೂ ಸೇರಿದೆ) ಮತ್ತು ಕೊನೆಯದಾಗಿ ಹವಾಮಾನದ ಏರುಪೇರಿಗೆ ತಕ್ಕಂತೆ ನೀರಾವರಿ ಸೌಲಭ್ಯಗಳನ್ನು ನಿರ್ಧರಿಸುವ ದತ್ತಾಂಶಗಳೂ ಈ ಅಂಶದಡಿ ಕ್ರೋಢಿಕರಣಗೊಳ್ಳುತ್ತವೆ.
3. ಸಾಮರ್ಥ್ಯ ಅಥವಾ ಧಾರಣಶಕ್ತಿ (Capacity) : ನೀರು ಪಡೆಯಲು ಕೈಗೊಳ್ಳುವ ಒಟ್ಟಾರೆ ವೆಚ್ಚದಾಯಕ ಕ್ರಮಗಳ ಮಾಹಿತಿ, ನಿರ್ಜಲೀಕರಣ ಮತ್ತು ನೀರಿನ ಸಂಬಂಧಿ ಸಾಂಕ್ರಾಮಿಕಗಳಿಂದ ಐದು ವರ್ಷದೊಳಗಿನ ಮಕ್ಕಳು ಮರಣಿಸುವ ಅಂಕಿಅಂಶಗಳು, ಜನತೆಯ ಶಿಕ್ಷಣದ ಮಟ್ಟ, ನಿಗದಿತ ಸಂಬಳ/ಪಿಂಚಣಿ ಪಡೆಯುವ ಮತ್ತು ನೀರಿನ ವೆಚ್ಚ ಭರಿಸಬಲ್ಲ ಕುಟುಂಬಗಳ ಶೇಕಡಾವಾರು ಅಂಕಿಅಂಶಗಳನ್ನು ಈ ಅಂಶದಡಿ ಚರ್ಚಿಸಲಾಗುತ್ತದೆ. ಜನಸಂಖ್ಯೆಯ ಎಷ್ಟು ಪಾಲು ಮಂದಿಗೆ ನೀರನ್ನು ಕೊಂಡು ಬಳಸುವ ಸಾಮಥ್ರ್ಯವಿದೆ ಎಂಬ ಮಾಹಿತಿ ಬಹಳ ಅಗತ್ಯ. ಕೊಂಡು ಬಳಸುವವರ ಸಂಖ್ಯೆ ಹೆಚ್ಚಿದಷ್ಟೂ ನೀರಿನ ಕೊರತೆಯ ಬವಣೆ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ ಎಂದು ತಿರ್ಮಾನಿಸಬೇಕಾಗುತ್ತದೆ.
4. ಬಳಕೆ (Usage) : ಮನೆ ಅಥವಾ ಕುಟುಂಬಗಳಲ್ಲಿ, ಕೃಷಿಯಲ್ಲಿ ನೀರಿನ ಬಳಕೆಯ ಪ್ರಮಾಣ, ಮಳೆಯ ಹೊರತಾಗಿ ನೀರಾವರಿ ಸೌಲಭ್ಯವನ್ನು ಅವಲಂಬಿಸಿದ ಕೃಷಿ ಭೂಮಿಯ ಶೇಕಡಾವಾರು ವಿಸ್ತೀರ್ಣದ ಲೆಕ್ಕ, ಸಾಕುಪ್ರಾಣಿಗಳ ಸಂಖ್ಯೆ ಮತ್ತು ಅವುಗಳಿಗೆ ಲಭ್ಯವಿರುವ ನೀರಿನ ಪ್ರಮಾಣ ಮತ್ತು ಉದ್ದಿಮೆಗಳು ಬಳಸುವ ನೀರಿನ ಪ್ರಮಾಣವನ್ನು ಈ ಮಾನದಂಡದಡಿ ನಿರ್ಧರಿಸಲಾಗುತ್ತದೆ.
5. ಪರಿಸರ(Environment) : ನೀರಿನ ಬಳಕೆಯ ಮೇಲೆ ಬೀಳುವ ಬೇಡಿಕೆಯ ಒತ್ತಡ, ನೀರಿನ ಮರುಪೂರಣಕ್ಕೆ ಸುತ್ತಲಿನ ಪರಿಸರ ಎಷ್ಟರಮಟ್ಟಿಗೆ ಪೂರಕವಾಗಿದೆ, ನೀರಿಗೂ, ಜೀವ ವೈವಿಧ್ಯಕ್ಕೂ ಇರುವ ಸಂಬಂಧ, ಜನಸಂಖ್ಯೆ ಅವಲಂಬಿಸಿರುವ ನೀರಿನ ಹೊರತಾದ ಸಂಪನ್ಮೂಲಗಳ ವಿವರ, ಹಿಂದಿನ 5 ವರ್ಷಗಳ ಬೆಳೆ ನಷ್ಟದ ವರದಿಗಳು ಮತ್ತು ಕೃಷಿ ಭೂಮಿಯ ಮಣ್ಣಿನ ಸವಕಳಿಯ ಮಾಹಿತಿಗಳನ್ನು ಈ ಅಂಶದಡಿ ಪರಿಗಣಿಸಲಾಗುವುದು.
ಅಂತರ್ ಸಂಬಂಧ ಹೊಂದಿರುವ ಈ ಎಲ್ಲ ಐದು ಅಂಶಗಳನ್ನು ಅವುಗಳ ಉಪಾಂಶಗಳೊಂದಿಗೆ ನಿರ್ದಿಷ್ಟ ಪ್ರದೇಶದಲ್ಲಿ ಸರ್ವೆ ಮೂಲಕ ಪಡೆದ ದತ್ತಾಂಶಗಳನ್ನು ಆಧರಿಸಿ ವಿಶ್ಲೇಷಿಸಿದರೆ ನೀ.ಬ.ಸೂ. ತಿಳಿದು ಬರುತ್ತದೆ. ಈ ಸೂಚ್ಯಂಕ ಶೇಕಡಾವಾರು ಮಾಹಿತಿಯನ್ನು ಅವಲಂಬಿಸುವುದರಿಂದ ಯಾವಾಗಲೂ ಅಂದಾಜು ಮೌಲ್ಯವಾಗಿರುತ್ತದೆ. ಪ್ರತಿ ಅಂಶಕ್ಕೂ 20 ಗರಿಷ್ಟ ಅಂಕಗಳಿರುತ್ತವೆ.
ನೀರಿನ ಬಡತನದ ಸೂಚ್ಯಂಕವು ನೀರಿನ ಲಭ್ಯತೆ, ಬಳಕೆಯ ವ್ಯಾಪ್ತಿ ಮತ್ತು ದಕ್ಷತೆಗಳಡಿ ದೇಶಗಳನ್ನು ವರ್ಗೀಕರಿಸಲು ನೆರವಾಗುವುದರ ಜೊತೆ ನೀರಿನ ಬವಣೆ ನೀಗುವ ನಿಟ್ಟಿನಲ್ಲಿ ಸಂಭವನೀಯ ಯೋಜನೆಗಳಿಗೆ ದಿಕ್ಸೂಚಿಯಾಗಬಲ್ಲುದು. ಜಲಮೂಲಗಳ ಸಂರಕ್ಷಣೆ, ಪೊರೈಕೆಯಲ್ಲಿ ಸಮರ್ಥ ನಿರ್ವಹಣೆ, ನೀರು ಪೋಲಾಗುವುದನ್ನು ತಡೆಯಬಲ್ಲ ಹೊಸ ಹೊಸ ಸಾಧ್ಯತೆಗಳ ಅನ್ವೇಷಣೆ, ಮರು ಬಳಕೆಯನ್ನು ಪ್ರಚೋದಿಸುವ ಪರಿಣಾಮಕಾರಿ ಕಾರ್ಯಾಚರಣೆ ಇತ್ಯಾದಿಗಳಿಗೆ ಮಾರ್ಗದರ್ಶಿಯಾಗಬಲ್ಲುದು.
ನೀ.ಬ.ಸೂ. : ಯಾರ ಸ್ಥಾನ ಎಲ್ಲೆಲ್ಲಿ? ಯಾರ ಯೋಗ್ಯತೆ ಏನೇನು?
2003ರಲ್ಲಿ ಜಪಾನಿನ ಕ್ಯೋಟೋದಲ್ಲಿ ಜರುಗಿದ 3ನೇ ವಿಶ್ವ ನೀರಿನ ವೇದಿಕೆ(WWF)ಯ ಸಮಾವೇಶಕ್ಕೆ ಕೊಂಚ ಮುಂಚೆ ಆಕ್ಸಫರ್ಡ್ ವಿಶ್ವವಿದ್ಯಾನಿಲಯದ ಡಾ. ಕೆರೋಲಿನ್ ಸಲಿವಾನ್ ಅವರ ನೇತೃತ್ವದಲ್ಲಿ 31 ಸಂಶೋಧಕರ ತಂಡವು 100 ದೇಶಗಳ ತಜ್ಞರ ಜೊತೆ ಕಾರ್ಯಾಚರಿಸಿ 147 ದೇಶಗಳಿಗೆ ಸಂಬಂಧಿಸಿದ ನೀ.ಬ.ಸೂ.ವಿನ ಕೋಷ್ಟಕವನ್ನು ಸಿದ್ಧಪಡಿಸಿತು. ಈ ಕೋಷ್ಟಕದಲ್ಲಿ 78 ಗರಿಷ್ಟ ರಾಷ್ಟ್ರೀಯ ಅಂಕಗಳೊಂದಿಗೆ ಫಿನ್ಲ್ಯಾಂಡ್ ಮೊದಲ ಸ್ಥಾನ ಪಡೆದಿದೆ. ನಂತರದಲ್ಲಿ ಕೆನಡಾ, ಐಸ್ಲ್ಯಾಂಡ್, ನಾರ್ವೆ, ಗಯಾನ, ಸೂರಿನಾಮ್, ಆಸ್ಟ್ರಿಯಾ, ಐರ್ಲೆಂಡ್, ಸ್ವೀಡನ್ ಮತ್ತು ಸ್ವಿಡ್ಜ್ರ್ಲ್ಯಾಂಡ್ಗಳಿವೆ. 138ರಿಂದ 147ರವರೆಗಿನ ಕಡೆಯ ಹತ್ತು ಸ್ಥಾನಗಳಲ್ಲಿ ಬುರುಂಡಿ, ರ್ವಾಂಡಾ, ಬೆನಿನ್, ಚಾದ್, ದ್ಜಿಬೂಟಿ, ಮಲಾವಿ, ಎರಿಟ್ರಿಯ, ಇಥಿಯೋಪಿಯ, ನೈಜರ್ ಮತ್ತು ಹೈಟಿ (ಕನಿಷ್ಟ ಅಂಕ 35) ಇವೆ. ನೀ.ಬ.ಸೂ.ವಿನ ಕೋಷ್ಟಕವನ್ನು ಗಮನಿಸಿದಾಗ ಯೋಜನಾಬದ್ಧವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದ ದೇಶಗಳು ಮೇಲಿನ ಸ್ಥಾನಗಳನ್ನು ಪಡೆದಿದ್ದರೆ ಅತಿ ಬಡ ದೇಶಗಳು ಕೋಷ್ಟಕದ ಕಡೆ ಕಡೆಯ ಸ್ಥಾನಗಳ ಕಡೆಗೆ ಸರಿದಿವೆ.
ಡೊಮಿನಿಕನ್ ಗಣರಾಜ್ಯ ಮತ್ತು ಹೈಟಿ ಅಕ್ಕಪಕ್ಕದ ದೇಶಗಳು. ಹೈಟಿ ಕಡೆಯ ಸ್ಥಾನದಲ್ಲಿದ್ದರೆ ಡೊಮಿನಿಕನ್ ಗಣರಾಜ್ಯ 64ನೇ ಸ್ಥಾನದಲ್ಲಿದೆ. ಎರಡೂ ದೇಶಗಳಲ್ಲಿ ನೀರಿನ ಲಭ್ಯ ಪ್ರಮಾಣ ಹೆಚ್ಚು ಕಡಿಮೆ ಒಂದೇ ಇದೆ. ಆದರೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯಿಂದಾಗಿ ಡೊಮಿನಿಕನ್ ಗಣರಾಜ್ಯವು ನೀರಿನ ನಿರ್ವಹಣೆಯ ವಿಷಯದಲ್ಲಿ ಹೈಟಿಗಿಂತ ಎಷ್ಟೋ ಉತ್ತಮ ಸ್ಥಿತಿಯಲ್ಲಿದೆ. ಹೈಟಿ ಡೊಮಿನಿಕನ್ ಗಣರಾಜ್ಯದಿಂದ ನೀರಿನ ನಿರ್ವಹಣೆಯ ಕುರಿತು ಮಾರ್ಗದರ್ಶನ ಪಡೆದು ತನ್ನ ಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಬಹುದಾಗಿದೆ.
ನೀರನ್ನು ಪಡೆದುಕೊಳ್ಳುವಲ್ಲಿ ಆಸ್ಟ್ರಿಯಾದ ದಕ್ಷತೆ ಹೆಚ್ಚು. ನೀರಿನ ಅತಿ ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಇಸ್ರೇಲ್, ಕುವೈತ್ ಮತ್ತು ಸೌದಿ ಅರೆಬಿಯಾಗಳು ಕೋಷ್ಟಕದ ಮೊದಲ ಐವತ್ತು ಸ್ಥಾನಗಳ ಒಳಗಿರಲು ಕಾರಣ ಅವು ಸಿಕ್ಕಷ್ಟು ನೀರನ್ನು ಅತ್ಯಂತ ದಕ್ಷ ನಿರ್ವಹಣಾ ಕ್ರಮಗಳ ಮೂಲಕ ನಿರ್ವಹಿಸುವುದೇ ಆಗಿದೆ. ಮರುಭೂಮಿಯನ್ನೇ ಹೆಚ್ಚು ಹೊಂದಿದ್ದರೂ ಎಲ್ಲ ಐದು ಅಂಶಗಳಲ್ಲಿ ಗಮನಾರ್ಹ ಸಾಧನೆ ಮಾಡಿ 13ನೇ ಸ್ಥಾನ ಗಳಿಸಿರುವ ತುರ್ಕಮೆನಿಸ್ತಾನ್ ನಿತ್ಯ ಬಳಕೆಯೂ ಅಲ್ಲದೆ ನೀರಾವರಿಗೂ ಅಗತ್ಯವಿರುವಷ್ಟು ನೀರನ್ನು ಕೌಶಲ್ಯದಿಂದ ನಿರ್ವಹಿಸಿ ಮಾದರಿ ದೇಶ ಎನಿಸಿದೆ.
ಬಳಕೆಯ ದಕ್ಷತೆಯಲ್ಲಿ ಅತಿ ಕಳಪೆ ಸಾಧನೆ ಯಾರದ್ದು ಗೊತ್ತೇ? ಅಮೆರಿಕಾದ್ದು. ನಿತ್ಯ ಜೀವನದಲ್ಲಿ ನೀರನ್ನು ತಲಾವಾರು ಪೋಲು ಮಾಡುವ ಪ್ರಮಾಣದಲ್ಲಿ ಅಮೆರಿಕನ್ನರನ್ನು ಯಾರೂ ಮೀರಿಸಲಾರರು (ಅಮೆರಿಕಾದಲ್ಲಿ ನೀರಿನ ತಲಾವಾರು ಲಭ್ಯತೆ ಜಗತ್ತಿನಲ್ಲೆ ಹೆಚ್ಚು). ಬೇರೆಲ್ಲ ಅಂಶಗಳಲ್ಲಿ ಅವರ ದಕ್ಷತೆ ಹೆಚ್ಚಿದ್ದರೂ ಬಳಸುವ ವಿಚಾರದಲ್ಲಿ ಅವರು ಇನ್ನೂ ಶಿಸ್ತನ್ನು ರೂಢಿಸಿಕೊಂಡಿಲ್ಲ. ಒಬ್ಬ ಅಮೆರಿಕನ್ 5 ನಿಮಿಷಗಳ ಕಾಲ ಷವರ್ ಸ್ನಾನ ಮಾಡಿದರೆ ಆತ/ಆಕೆ ಭಾರತೀಯನೊಬ್ಬನ ಇಡೀ ದಿನದ ಅವಶ್ಯಕತೆಗೆ ಸಮನಾಗುವಷ್ಟು ನೀರನ್ನು ಬಳಸಿರುತ್ತಾನೆ/ಳೆ. ಜಗತ್ತಿನ ಜನರೆಲ್ಲ ಅಮೆರಿಕನ್ನರಂತೆ ನೀರನ್ನು ಪೋಲು ಮಾಡುವುದನ್ನು ಅಭ್ಯಾಸ ಮಾಡಿಕೊಂಡರೆ ಶುದ್ಧ ನೀರನ್ನು ಪೊರೈಸಲು ಮೂರುವರೆ ಭೂಮಿಗಳು ಬೇಕಾಗುತ್ತವೆ! 32ನೇ ಸ್ಥಾನದಲ್ಲಿರುವ ಅಮೆರಿಕಾಕ್ಕೆ ಹೋಲಿಸಿದರೆ 15ನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಎಷ್ಟೋ ಉತ್ತಮ. ಅಲ್ಲಿ ಜನರ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದ ನೀರು ಲಭ್ಯವಿದೆ. ಅದನ್ನು ಅವರು ಅಮೆರಿಕನ್ನರಿಗಿಂತ ಹೆಚ್ಚು ದಕ್ಷವಾಗಿ ಎಲ್ಲ ಅಗತ್ಯಗಳಿಗೆ ಸರಿದೂಗಿಸಬಲ್ಲರು. 2ನೇ ಸ್ಥಾನದಲ್ಲಿರುವ ಕೆನಡಾ ನೀರಿನ ಬಳಕೆಯ ಅದಕ್ಷತೆಯಲ್ಲಿ ಅಮೆರಿಕಾದ ತಮ್ಮನೇ ಸರಿ. ಆದರೆ ಉಳಿದೆಲ್ಲ ನಾಲ್ಕು ಅಂಶಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಜಗತ್ತಿನ ಪಾಲಿನಲ್ಲಿ ಶೇಕಡಾ 9ರಷ್ಟು ಪ್ರಮಾಣದ ಶುದ್ಧ ನೀರನ್ನು ಕೆನಡಾ ಹೊಂದಿದೆ. 11ನೇ ಸ್ಥಾನದಲ್ಲಿರುವ ಬ್ರಿಟನ್ ಸಾಧನೆ ಉತ್ತಮವೇ. ಅದರ ನೀ.ಬ.ಸೂ.ವನ್ನು ತಿಳಿಯ ಹೊರಟಾಗ ಯಥೇಚ್ಛ ಹಿಮಪಾತ ಮತ್ತು ತಂಪು ಹವಾಮಾನವಿದ್ದೂ ಬ್ರಿಟನ್ ಸಾಕಷ್ಟು ಒಣಪ್ರದೇಶವನ್ನು ಹೊಂದಿರುವ ವಿಚಾರ ಅಚ್ಚರಿ ಮೂಡಿಸುತ್ತದೆ. ಬ್ರಿಟನ್ ಅಲ್ಲದೆ ಫ್ರಾನ್ಸ್ (18ನೇ ಸ್ಥಾನ) ಮತ್ತು ಜರ್ಮನಿ(35ನೇ ಸ್ಥಾನ)ಗಳು ನೀರಿನ ವ್ಯರ್ಥಬಳಕೆಯನ್ನು ಎಲ್ಲ ರಂಗಗಳಲ್ಲೂ ತಗ್ಗಿಸಲು ಉತ್ತಮ ಯೋಜನೆಗಳನ್ನು ರೂಪಿಸುತ್ತ ಬಂದಿವೆ.
44ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಅಸಹಾಯಕತೆ ಅದರ ಭೌಗೋಳಿಕ ಲಕ್ಷಣದಲ್ಲಿದೆ. ಬಹುಪಾಲು ಬರಡು ಭೂಮಿಯನ್ನು ಹೊಂದಿರುವ ಅದು ಕಡಿಮೆ ಮಳೆ ಮತ್ತು ನೀರಿನ ಮರುಪೂರಣಕ್ಕೆ ಸಹಕಾರಿಯಾದ ಪರಿಸರವನ್ನು ಹೊಂದಿಲ್ಲದ ಕಾರಣ ನೀರಿನ ಕೊರತೆಯನ್ನು ಅನುಭವಿಸುತ್ತಿದೆ. 50ನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ ನೀರಿಗೆ ಕೊರತೆಯಿಲ್ಲ (ಅಮೆಜಾನ್ ನದಿಯಿದೆಯಲ್ಲ). ಆದರೆ ಅಲ್ಲಿ ಅರಣ್ಯನಾಶದ ವೇಗ ನೋಡಿದರೆ ಅದು ಮುಂದೊಂದು ದಿನ ನೀರಿನ ಕೊರತೆಗೆ ಮುಖಾಮುಖಿಯಗಬಹುದು ಎಂದು ಅಂದಾಜಿಸಲಾಗಿದೆ. 16ನೇ ಸ್ಥಾನದಲ್ಲಿರುವ ಚಿಲಿಯ ಸಾಧನೆ ಆಶಾದಾಯಕವಾಗಿದೆ. ಬೆಂಗಾಡುಗಳು ಮತ್ತು ಪ್ರತಿಕೂಲ ಹವಾಮಾನದಲ್ಲೂ ಅದು ನೀರನ್ನು ಸಮರ್ಥವಾಗಿ ನಿರ್ವಹಿಸುತ್ತದೆ.
34ನೇ ಸ್ಥಾನದಲ್ಲಿರುವ ಜಪಾನ್ ಅನ್ನು ಅನೇಕ ವಿಚಾರಗಳಲ್ಲಿ ಮಾದರಿ ಎಂದು ಪರಿಗಣಿಸುವುದುಂಟು. ಅದು ನಿಜವೂ ಇರಬಹುದು. ಆದರೆ ನೀರಿನ ಬಳಕೆಯ ವಿಚಾರ ಬಂದಾಗ ಜಪಾನ್ ನೀರಿಗೆ ಪೂರಕವಾದ ಪರಿಸರವನ್ನು ಕಾಪಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿದೆ ಎನ್ನಬಹುದು. ಆದರೆ ದಕ್ಕಿದಷ್ಟು ನೀರನ್ನು ಪಡೆದುಕೊಳ್ಳುವ ಅದರ ಕೌಶಲ್ಯ ಮೆಚ್ಚುವಂತಹುದೇ. 43ನೇ ಸ್ಥಾನದಲ್ಲಿರುವ ದಕ್ಷಿಣ ಕೊರಿಯ ಕಡಿಮೆ ನೀರಿನ ಮೂಲಗಳನ್ನು ಹೊಂದಿದ್ದಾಗ್ಯೂ ನೀರನ್ನು ಪಡೆದುಕೊಳ್ಳುವ ಅರ್ಥಾತ್ ಖರೀದಿಸುವ ಕೊರಿಯನ್ನರ ಸಾಮರ್ಥ್ಯ ದಂಗುಬಡಿಸುತ್ತದೆ. 106ನೇ ಸ್ಥಾನದಲ್ಲಿರುವ ಚೀನಾದ ಚಿತ್ರಣ ಅಷ್ಟೇನೂ ಆಶಾದಾಯಕವಲ್ಲ. ನೀರಿನ ಮೂಲಗಳ ಪ್ರಮಾಣ, ಪಡೆದುಕೊಳ್ಳುವ ಜಾಣ್ಮೆ ಮತ್ತು ಪೂರಕ ಪರಿಸರದ ಸಂರಕ್ಷಣೆಯಲ್ಲಿ ಅದು ಹಿಂದುಳಿದಿದೆ.
ದೊಡ್ಡ ನದಿಗಳು ಹರಿದು ಹೋಗುವ ಕೆಲವೇ ಪ್ರದೇಶಗಳನ್ನು ಹೊರತುಪಡಿಸಿ ಆಫ್ರಿಕಾದ ಬಡ ದೇಶಗಳು ನೀರಿಗೆ ಸಂಬಂಧಿಸಿದ ಎಲ್ಲ ಅಂಶಗಳಲ್ಲೂ ಹಿಂದೆ ಬಿದ್ದಿವೆ. ಹಲವೆಡೆ ಸಿಕ್ಕುವ ಅತಿ ಕಡಿಮೆ ಪ್ರಮಾಣದ ನೀರೂ ಶುದ್ಧವಾಗಿರುವುದಿಲ್ಲ. ನೀರಿನ ಮೂಲಗಳ ಕಳಪೆ ನಿರ್ವಹಣೆಗೆ ಆರ್ಥಿಕ ಸಾಮಥ್ರ್ಯದ ಕೊರತೆ ಮೂಲ ಕಾರಣವಾದರೆ ನೀರನ್ನು ಕುರಿತ ತಿಳುವಳಿಕೆಗೆ ಸೂಕ್ತ ಶಿಕ್ಷಣವಿಲ್ಲದಿರುವುದು ಇನ್ನೊಂದು ಕಾರಣ. ಈ ಗುಂಪಿನಲ್ಲಿ ಎರಿಟ್ರಿಯ, ಚಾದ್, ಇಥಿಯೋಪಿಯ, ಮಲಾವಿ ಮತ್ತು ರ್ವಾಂಡಾಗಳದು ಅತಿ ಕಳಪೆ ಸಾಧನೆ. ನೀರಿನ ಬಡತನ ತಿಳಿಯಹೋಗಿ ನಾವು ಒಂದು ದೇಶದ ಬಡತನದ ಸಮಗ್ರ ಸ್ವರೂಪವನ್ನೇ ತಿಳಿಯಬಹುದಾಗಿದೆ.
103ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಭಾರತಕ್ಕಿಂತಲೂ ಮೂರು ಸ್ಥಾನ ಕೆಳಗಿದೆ. ಆದರೆ ದಕ್ಕಿದಷ್ಟು ನೀರನ್ನು ಸಮರ್ಥವಾಗಿ ಬಳಸುವ(usage) ವಿಚಾರದಲ್ಲಿ ಅಲ್ಲಿನವರು ನಮಗಿಂತ ನಿಸ್ಸೀಮರು. ಉಳಿದೆಲ್ಲ ನಾಲ್ಕು ಅಂಶಗಳಲ್ಲಿ ಅವರು ಬಹಳ ಹಿಂದಿದ್ದಾರೆ. 100ನೇ ಸ್ಥಾನದಲ್ಲಿರುವ ಭಾರತದ ಮಾದರಿ ನಮ್ಮ ಮಟ್ಟಿಗಂತೂ ನಿರಾಶದಾಯಕವೇ ಸರಿ. ಭಾರತದಲ್ಲಿ ತಲಾವಾರು ಬಳಕೆಗೆ ನೀರಿನ ಲಭ್ಯತೆಯೂ ಕಡಿಮೆ, ಲಭ್ಯ ನೀರನ್ನು ಬಳಸುವಲ್ಲಿ ದಕ್ಷತೆಯೂ ಕಡಿಮೆ. ನೀರನ್ನು ನಿರ್ವಹಿಸುವ ಕೌಟುಂಬಿಕ ಹಾಗೂ ಆಡಳಿತಾತ್ಮಕ ವೈಖರಿಗಳಲ್ಲಿ ನಿರ್ಲಕ್ಷ್ಯತೆ ಹೆಪ್ಪುಗಟ್ಟಿದೆ. ಕರ್ತವ್ಯ ಭ್ರಷ್ಟತೆ, ಅಪ್ರಾಮಾಣಿಕತೆ, ದೂರದೃಷ್ಟಿರಹಿತ ನೀತಿಗಳು, ಸ್ವಜನ ಪಕ್ಷಪಾತ, ಚುನಾವಣೆಗಳು ಸನಿಹವಾದಾಗ ಮಾತ್ರ ರೂಪಿಸಲ್ಪಡುವ ಅಗ್ಗದ ಯೋಜನೆಗಳ ಜಾರಿಯಲ್ಲಿ ಅನಪೇಕ್ಷಣೀಯ ರಾಜಕೀಯ ಬೆರೆತುಕೊಳ್ಳುವುದು ಹೀಗೆ ಹಲವು ನಕಾರಾತ್ಮಕ ಅಂಶಗಳಿಂದಾಗಿ ನಮ್ಮ ದೇಶಕ್ಕೆ ಸಾರ್ವತ್ರಿಕವಾದ, ಸಾರ್ವಕಾಲಿಕವಾದ ಒಂದು ದಕ್ಷ ನೀರಿನ ನೀತಿ(Water Policy)ಯನ್ನು ರೂಪಿಸಲು ಇನ್ನೂ ಸಾಧ್ಯವಾಗಿಲ್ಲ. ನಮ್ಮಲ್ಲಿ ಈ ತನಕ ನೀರು ಒಂದು ಗುರುತರವಾದ ವಿಚಾರ ಎಂದು ಪರಿಗಣಿಸಲ್ಪಟ್ಟಿಲ್ಲ. ಹೀಗಾಗಿ ಗುಜರಾತ್, ರಾಜಸ್ಥಾನದಲ್ಲಿ ಮಹಿಳೆಯರು ಕಿಲೋಮೀಟರ್ಗಟ್ಟಲೆ ದೂರದಿಂದ ಅಡುಗೆಗೆ ಮತ್ತು ಕುಡಿಯಲು ನೀರು ಹೊತ್ತು ತರುವ ದಯನೀಯ ದೃಶ್ಯ ಒಂದೆಡೆ ಇದ್ದರೆ, ವಾಟರ್ ಪಾರ್ಕ್ಗಳಲ್ಲಿ ನೀರು ಧಾರಾಳ ಮಲಿನವಾಗುವ, ದುರ್ಬಳಕೆಯಾಗುವ ದಿವ್ಯ ನಿರ್ಲಕ್ಷ್ಯದ ದೃಶ್ಯ ಇನ್ನೊಂದೆಡೆ ಕಾಣಬರುತ್ತದೆ.
ನೀರಿನ ಬಡತನದ ಸೂಚ್ಯಂಕವನ್ನು ತರ್ಕಿಸುವ ವೈಜ್ಞಾನಿಕ ವಿಧಾನ ಜಾರಿಗೆ ಬಂದು ಹದಿಮೂರು ವರ್ಷಗಳು ಕಳೆದಿದ್ದರೂ ಸಮೀಕ್ಷೆಗೆ ಒಳಪಟ್ಟ ಬಹುಪಾಲು ದೇಶಗಳಲ್ಲಿ ಗಮನಾರ್ಹವಾದಂತಹ ಗುಣಾತ್ಮಕ ಬದಲಾವಣೆ ಮತ್ತು ಭರವಸೆಯೇನೂ ಕಾಣಬಂದಿಲ್ಲ. ಜಾಗತಿಕ ತಾಪ ಏರಿಕೆ ನೀರಿನ ಮೂಲಗಳನ್ನು ಬತ್ತಿಸುತ್ತಿರುವುದರ ನಡುವೆ ಎಲ್ಲೆಡೆ ಪ್ರಭುತ್ವಗಳ ನಿರ್ಲಕ್ಷ್ಯತೆ ಗಾಬರಿ ಹುಟ್ಟಿಸುವಂತಿದೆ. ನೀರನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕಾದ ಕಡೆ ಕೋಮುವಾದ, ಭಯೋತ್ಪಾದನೆ, ಯುದ್ಧೋನ್ಮಾದ, ಸರ್ಕಾರಗಳ ಅರಾಜಕತೆ ಮತ್ತು ಪರಿಸರ ನಾಶಕ್ಕೆ ಪ್ರೇರಣೆಯ ರಾಜಕೀಯವೇ ಹೆಚ್ಚಿನ ಸಮಯವನ್ನು ತಿಂದು ಬರಗಾಲದಂತಹ ಸನ್ನಿವೇಶಗಳನ್ನು ಇನ್ನಷ್ಟು ರೂಪಿಸತೊಡಗಿವೆ.
ಬೇಡಿಕೆಯ ಒತ್ತಡ
ಪ್ರತಿದಿನ ಪ್ರತಿ ವ್ಯಕ್ತಿಗೂ ಸರಾಸರಿ 50 ಲೀಟರ್ಗಳಷ್ಟು ನೀರು ಬೇಕು. ಅಂದರೆ ವರ್ಷಕ್ಕೆ 18,250 ಲೀಟರ್ಗಳು. ಆ ವ್ಯಕ್ತಿಯ 70 ವರ್ಷದ ಜೀವಿತಾವಧಿಗೆ ಲೆಕ್ಕ ಹಾಕಿದರೆ 12,77,000 ಲೀಟರ್ಗಳು ಬೇಕು. ಅಲ್ಲಿಗೆ ನಾಲ್ಕು ಜನರ ಒಂದು ಕುಟುಬಕ್ಕೆ 70 ವರ್ಷಗಳಿಗೆ 51,10,000 ಲೀಟರ್ಗಳು! ಇನ್ನು 750 ಕೋಟಿ ಜನಸಂಖ್ಯೆಗೆ ಬಡಪಾಯಿ ಭೂಮಿ ಅದೆಷ್ಟು ನೀರನ್ನು ಒದಗಿಸಬೇಕು, ನೀವೇ ಲೆಕ್ಕ ಹಾಕಿ? 2000ದ ಇಸವಿಯಲ್ಲಿ ಜಗತ್ತಿನ ಮೂವತ್ತು ದೇಶಗಳ (ಜಗತ್ತಿನ ಒಟ್ಟು ಜನಸಂಖ್ಯೆಯ ಶೇಕಡಾ 20ರಷ್ಟು) ಜನತೆ ನೀರಿನ ತೀವ್ರ ಕೊರತೆಗೆ ಸಿಲುಕಿದ್ದರು. 2025ನೇ ಇಸವಿಯ ಹೊತ್ತಿಗೆ 50 ದೇಶಗಳ ಜನತೆ ಈ ಬವಣೆಗೆ ಸಿಲುಕುವುದಲ್ಲದೆ ಒಟ್ಟಾರೆ 250 ಕೋಟಿ ಜನ ನೀರಿನ ಭೀಕರ ಕ್ಷಾಮಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಅಂದಾಜು ಮಾಡಲಾಗಿದೆ. 2050ನೇ ಇಸವಿಯ ಹೊತ್ತಿಗೆ ಜಗತ್ತಿನ ಜನಸಂಖ್ಯೆ 900 ಕೋಟಿಯನ್ನು ತಲುಪುವ ಸೂಚನೆ ಇರುವುದರಿಂದ ನೀರಿಗೆ ಹೆಚ್ಚುವ ಬೇಡಿಕೆಯ ಸ್ವರೂಪ ಊಹಾತೀತವೇ ಸರಿ. ಮನುಕುಲ ಈ ಪಾರಿಸಾರಿಕ ಮತ್ತು ಆಡಳಿತಾತ್ಮಕ ಸವಾಲನ್ನು ಹೇಗೆ ಎದುರಿಸುವುದೋ ಈಗಲೇ ಮುನ್ಸೂಚಿಸುವುದು ದುಸ್ತರವೇ ಸರಿ.
ಪ್ರಯತ್ನ ಸಣ್ಣದೇ ಆದರೂ ಈಗಿನಿಂದಲೇ ಕ್ರಿಯಾಶೀಲರಾಗಬೇಕಾದ ಅನಿವಾರ್ಯತೆ ನಮ್ಮೆದುರಿಗಿದೆ. ನಮ್ಮ ಮನೆಗಳಿಂದಲೇ ನೀರಿನ ಮಿತ ಬಳಕೆ ಮತ್ತು ಮರು ಬಳಕೆಯ ಬಗ್ಗೆ ವಿಧಾನಗಳನ್ನು ಆವಿಷ್ಕರಿಸಿಕೊಳ್ಳಬೇಕಿದೆ. ಮನೆಯಿಂದ ಆರಂಭವಾಗುವ ಸುಧಾರಣೆಯನ್ನು ಸಾಮುದಾಯಿಕ ಪ್ರಯತ್ನವಾಗಿಸುವ ನಿಟ್ಟಿನಲ್ಲಿ ಆಡಳಿತಗಳು ಗಂಭೀರವಾಗಿ ಚಿಂತಿಸಬೇಕಿದೆ. ನೀರನ್ನು ಕುರಿತು ಹೆಚ್ಚು ಆಪ್ತವಾದ, ಹೆಚ್ಚು ಆಸಕ್ತಿದಾಯಕವಾದ, ಚಟುವಟಿಕೆಗಳಿಂದ ಕೂಡಿದ ವಿಶಿಷ್ಟ ಪಠ್ಯಕ್ರಮವೊಂದು ನಮ್ಮ ಮಕ್ಕಳಿಗೆ ಅಗತ್ಯವಿದೆ. ಯುವಜನರಿಗೆ ಮಳೆನೀರಿನ ಕೊಯಿಲು ಮತ್ತು ನೀರಿಗೆ ಸಂಬಂಧಿಸಿದ ಎಲ್ಲ ಬಗೆಯ ಸಣ್ಣ ದೊಡ್ಡ ತಾಂತ್ರಿಕ ಮಗ್ಗಲುಗಳನ್ನು ಒಳಗೊಂಡ ಉನ್ನತ ಪದವಿಯ ಕೋರ್ಸುಗಳನ್ನು ಆರಂಭಿಸಬೇಕಿದೆ. ಬಾಲ್ಯ ಮತ್ತು ಯೌವನದಲ್ಲಿ ನೀರನ್ನು ಗೆಳೆಯ/ಗೆಳತಿಯಂತೆ ನೋಡುವ ಪ್ರವೃತ್ತಿ ಬೆಳೆಸುವುದು ಈಗ ನಮ್ಮೆದುರಿಗಿರುವ ಸವಾಲು. ಭವಿಷ್ಯದಲ್ಲಿ ಹೆಚ್ಚು ಸಮರ್ಥವಾಗಿ ನೀರಿಗಾಗಿ ರಚನಾತ್ಮಕ ಕ್ರಿಯೆಗಳಲ್ಲಿ ತೊಡಗಬಲ್ಲ ಜಲಸಾಕ್ಷರರ ಸಂಖ್ಯೆ ಹೆಚ್ಚಿಸಲು ಈಗಿಂದೀಗಲೇ ಮೈಕೊಡವಿಕೊಳ್ಳಬೇಕಾಗಿದೆ.
ನಾವೀಗ ನೀರಿನ ಬಗ್ಗೆ ಗಹನವಾದ ಆಲೋಚನೆಯನ್ನು ಆರಂಭಿಸಲೇಬೇಕಿದೆ. ಇಡೀ ಸಮಾಜವನ್ನು ಅಸದೃಶ ಬಿಕ್ಕಟ್ಟಿಗೆ ಸಿಕ್ಕಿಸಬಲ್ಲ ನೀರಿನ ಅಗಾಧ ಶಕ್ತಿಯ ಬಗ್ಗೆ ಅರಿಯಬೇಕಿದೆ. ನೀರಿನ ಮೂಲಗಳಿಗೆ ಮರುಪೂರಣ ಮಾಡುವ ನಿರಂತರ ಯೋಜನೆಗಳಿಗೆ ಚಾಲನೆ ನೀಡದೇ ಹೋದರೆ ನೀರಿನ ಬಡತನ ಮರುಭೂಮಿಗಳನ್ನು ಸೃಷ್ಟಿಸಬಲ್ಲುದು. ನೀರಿನ ಮೂಲಗಳನ್ನು ಎಲ್ಲ ಬಗೆಯ ನಿರ್ಲಕ್ಷ್ಯ ಮತ್ತು ಅತಿಕ್ರಮಣಗಳಿಂದ ರಕ್ಷಿಸುವುದು ವರ್ತಮಾನದ ಅತಿ ತುರ್ತಿನ ಕಾಳಜಿಯಾಗಬೇಕಿದೆ. ಮಳೆನೀರಿನ ಹರಿವಿನ ಜಾಡುಗಳನ್ನು ಯಥಾವತ್ ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯವಾಗಿದೆ.
ನೀರಿರುವುದು ನಮಗಾಗಿ ಎಂಬ ಅಹಂಕಾರ ಇಲ್ಲಿಯವರೆಗೆ ನಮ್ಮದಾಗಿತ್ತು. ಇನ್ನು ಮುಂದೆ ನೀರಿಗಾಗಿ ಮತ್ತು ನಮ್ಮ ಮಕ್ಕಳಿಗಾಗಿ ನಾವಿದ್ದೇವೆ ಎಂಬ ವಿನಮ್ರತೆ ಕಾರ್ಯರೂಪಕ್ಕೆ ಬರಬೇಕಿದೆ. ಇದಕ್ಕೆಲ್ಲ ನಾವು ಸಿದ್ಧರಾಗಿದ್ದೇವೆಯೆ?
‘ಮಳೆ ಒಂದೇ ಛಾವಣಿಯ ಮೇಲೆ ಬೀಳುವುದಿಲ್ಲ’- ಇದು ಕ್ಯಾಮೆರೂನಿನ ಗಾದೆ. ಛಾವಣಿಯ ಮೇಲೆ ಬಿದ್ದ ಮಳೆಯನ್ನು ಎಲ್ಲರೂ ಸಂಗ್ರಹಿಸುವುದಿಲ್ಲ ಇದು ಇಂದಿನ ವಿಪರ್ಯಾಸ.