ಸರಳ ರೇಖೆ – ಸುಬ್ಬು ಹೊಲೆಯಾರ್
[ಸುಬ್ಬು ಹೊಲೆಯಾರ್ ಅವರ “ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ…” ಕೃತಿಯಲ್ಲಿ ದೇವನೂರ ಮಹಾದೇವ ಅವರನ್ನು ಕುರಿತು ಬರೆದ ಈ ರಚನೆ ಇದೆ.)
ಅವ್ವ ಸಾಕವ್ವ
ಸುಮ್ಮಗೆ ಕೂತಿದ್ದಾಗ
ತೋರು ಬೆರಳಲ್ಲಿ ನೆಲದ ಮೇಲೆ ಹಂಗೆ ಎಳೆದ ಗೆರೆ
ಮಣ್ಣಿವೆಯಲ್ಲಿ ಎರೆಹುಳ
ಹರಿದು ಹೋದಂತೆ
ನೆಲವೇ ಬರೆಯಿಸಿಕೊಂಡ ಚಿತ್ರ
ಮೊದಲ ಮಳೆಗೆ
ಬಿದ್ದ ಹನಿ ನೀರು ಹರಿದು
ಜಲ ಚಿನ್ಹೆಯ ತನು
ದೇವನೂರಿನ ದೊಡ್ಡ ಮಗುವೊಂದು
ಕಡ್ಡಿಯನ್ನು ಬಸ್ಸ್ ಮಾಡಿಕೊಂಡು
ಗೆರೆ ಎಳೆದುಕೊಂಡು ಹೋದ
ಸಮಗೆರೆಯ ಮೇಲೆ ನಮ್ಮೆಲ್ಲರ ಬೆರಳುಗಳ ಪಯಣ
ಸರಳರೇಖೆ ಎಂದರೆ ಸರಳ ರೇಖೆಯೇ
ಮಾತಿಲ್ಲ ಆಳ. ಅರ್ಥಗಳ ಮೌನವೇ ಎಲ್ಲ
ಸರಳ ರೇಖೆ ಎಂದರೆ ಅಗಣಿತ ಅಣುಗಳ ಅನಂತ ಚಲನೆ…
ರೇಖೆಯೆಂದರೆ ಮುಗುಳ್ನಗೆ. ಅಂತಃಕರಣದ ಧ್ಯಾನ
ಇದಕ್ಕಿಂತ ಹೆಚ್ಚು ಅಲ್ಲ
ಕಡಿಮೆಯೂ ಅಲ್ಲ. ಅಲ್ಲಮ ಪ್ರಭುವೇ….