ದೇವನೂರರ ; “ಮೂಡಲಸೀಮೇಲಿ ಕೊಲೆಗಿಲೆ ಮುಂತಾಗಿ” ಕುರಿತು – ಅರವಿಂದ ಮಾಲಗತ್ತಿ

[ದೇವನೂರರ ; ‘ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’ ಕಥೆ ಕುರಿತು ಅರವಿಂದ ಮಾಲಗತ್ತಿ ಅವರು ಬರೆದ ಈ ಲೇಖನ ಅವರ ‘ಸಾಹಿತ್ಯ ಸಾಕ್ಷಿ’ ಲೇಖನಗಳ ಸಂಗ್ರಹದಲ್ಲಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ.]

odalala
ದೇವನೂರ ಮಹದೇವ ಅವರನ್ನು ದಲಿತ – ಬಂಡಾಯದ ಪಂಥದಲ್ಲಿ ಗುರುತಿಸಿದರೂ ಅವರ ಅಧಿಕೃತ ಹೆಜ್ಜೆಗಳು ನವ್ಯಕ್ಕೆ ಸಂಬಂಧಪಟ್ಟವು. ಅವರ ದ್ಯಾವನೂರು ಕಥಾ ಸಂಕಲನದ ಕಥೆಗಳಲ್ಲಿ ಹೆಚ್ಚಿನ ಕಥೆಗಳೆಲ್ಲ ನವ್ಯರ ಕಥೆಗಳೇ ಆಗಿವೆ. ‘ದತ್ತ’, ‘ಗ್ರಸ್ಥರು’, ‘ಡಾಂಬರು ಬಂದುದು’, ‘ಮಾರಿಕೊಂಡವರು’, ‘ಒಂದು ದಹನದ ಕಥೆ’- ಈ ಕಥೆಗಳೆಲ್ಲ ನವ್ಯದ ನೆರಳಿಂದ ಬಿಡಿಸಿಕೊಳ್ಳುವುದಿಲ್ಲ. ನವ್ಯದ ಸ್ವಾನುಭವಕ್ಕೆಆದ್ಯತೆ ಬೇಕು ಎಂದು ಹೇಳಿದ್ದರ ಪರಿಣಾಮದಿಂದಾಗಿ ಅದರೊಂದಿಗೆ ದಲಿತೀಯತೆಯ ಸಂವೇದನೆ ಬರಲು ಸಾಧ್ಯವಾಗಿದೆ. ದಲಿತ ಬಂಡಾಯದ ಸಂದರ್ಭದಲ್ಲಿ ಈ ಸಂವೇದನೆ ಮಹತ್ವ ಪಡೆದುಕೊಂಡು ಚರ್ಚೆಗೆ ಒಳಗಾದರೂ ಅನಂತರದ ಬರಹದಲ್ಲಿ ಆ ಗುಣ ಅದೇ ಸ್ವರೂಪದಲ್ಲಿ ಮುಂದುವರೆದಿರುವುದು ಕಂಡು ಬರುತ್ತದೆ. ನವ್ಯರೊಂದಿಗೆಆರಂಭವಾದ ದೇವನೂರರ ಕತೆಯ ಪಯಣ, ದಲಿತ – ಬಂಡಾಯದ ಹೊಸ ತಲೆಮಾರಿನ ಆರಂಭಿಕ ಬರಹದೊಂದಿಗೆ ಹೋಲಿಸಿದಾಗ ಭಿನ್ನ ಮತ್ತು ಪ್ರಬುದ್ಧ ಕತೆಗಳೆನಿಸುವುದು ಸಹಜ.ಆದರೆ ಇಂದಿನ ಸಂದರ್ಭದಲ್ಲಿ ಹೊಸಕತೆಗಾರರಾಗಿ ಕಾಣಿಸಿಕೊಂಡಿರುವ ಮಂಜುನಾಥ ಲತಾ, ಗಂಗಾಧರ ಸೋಸಲೆ ಅಂಥವರ ಬರಹದೊಂದಿಗೆ ನೋಡಿದಾಗ ಮೊದಲು ವ್ಯಕ್ತವಾದ ಅಭಿಪ್ರಾಯ ತಾನೇತಾನಾಗಿ ಹಿಂದೆ ಸರಿಯುತ್ತದೆಯಾದರೂ ಚಾರಿತ್ರಿಕ ನೆಲೆಯಿಂದ ದೇವನೂರರ ಕತೆಗಳಿಗೆ ತನ್ನದೇ ಆದ ಸ್ಥಾನವಿದೆ.

ದೇವನೂರರ ‘ಮೂಡಲಸೀಮೇಲಿ ಕೊಲೆಗಿಲೆ ಮುಂತಾಗಿ’ ಎಂಬ ಕತೆಯನ್ನು ಪ್ರಧಾನವಾಗಿ ವಿಮರ್ಶೆಗೆ ಎತ್ತಿಕೊಳ್ಳಬಯಸುವೆ. ಈ ಕತೆಯ ಬಗ್ಗೆ ಹಲವಾರು ವಿಮರ್ಶಕರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ವಿಮರ್ಶಕರ ವಿಮರ್ಶೆ ಅಭಿಮಾನದ ಪ್ರತೀಕವಾಗಿಯೇ ಮೂಡಿ ಬಂದದ್ದು ಅಧಿಕ. ವಸ್ತುನಿಷ್ಠ ವಿಮರ್ಶೆಯನ್ನು ಅರಸುವುದು ಸಾಧ್ಯವಾಗದು. ಇಂಥದ್ದರ ನಡುವೆಯೇ ಮಾಧವಕುಲಕರ್ಣಿಯವರು ಈ ಕತೆಯ ಬಗ್ಗೆ ಬರೆಯುತ್ತ ‘ಆರಂಭದಲ್ಲಿ ಹೊಸದೇನನ್ನೊ ಹೇಳುವಂತೆ ಕಂಡರೂ ಮುಕ್ತಾಯವಾದಾಗ ತೀರ ಸರಳ ಅನುಭವದ ಬಡತನದ ಬಗೆಗಿನ ಕತೆ ಎನಿಸಿಬಿಡುತ್ತದೆ’ ಎಂದು ಹೇಳುತ್ತಾರೆ. ಈ ಮಾತುಕತೆಯ ವಸ್ತುವಿನ ಹಿನ್ನೆಲೆಯಲ್ಲಿ ಪ್ರಸ್ತಾಪಿಸಿದಾಗ ವ್ಯತಿರಿಕ್ತವಾದ ಹೇಳಿಕೆಯೆನಿಸದು. ಏಕೆಂದರೆ, ನವೋದಯ ಮತ್ತು ಪ್ರಗತಿಶೀಲ ಲೇಖಕರು ಬಡತನದ ಬಗ್ಗೆ ಬರೆದಿರುವ ಕತೆಗಳನ್ನು ನೋಡಿದರೆ, ಬಡತನದ ಹಸಿವಿನ ಪರಮಾವಧಿಯನ್ನುಗುರುತಿಸಲು ಪ್ರಯತ್ನಿಸಿದ್ದು ಗಮನಿಸುತ್ತೇವೆ. ಹಾಗೆಯೇ ಹಸಿವಿನೊಂದಿಗೆ ವ್ಯಕ್ತವಾಗಿರುವ  ಅಸ್ಪೃಶ್ಯತೆಯ ಸ್ವರೂಪವೂ ಕೂಡ ಜನಪ್ರಿಯ ಮಾದರಿಗಳನ್ನು ಮೀರಿ ಬಂದಿಲ್ಲ. ಇಂಥ ಪ್ರಸಂಗಗಳು ಹಲವೆಡೆ ವ್ಯಕ್ತವಾಗಿವೆ. ಎಂದರೆ ಅಸ್ಪೃಶ್ಯತೆಯ ದಟ್ಟ ಅನುಭವವನ್ನು ಕೊಡುವಲ್ಲಿ ಸೋಲುತ್ತವೆ. ಪ್ರಾಸಂಗಿಕವಾಗಿ ವ್ಯಕ್ತವಾದ ಇಲ್ಲಿಯ ಸಂದರ್ಭಗಳು ಮಂಡಿಸುವ ರೀತಿಯಲ್ಲಿರುವ ಭಿನ್ನತೆಯಿಂದಾಗಿ ಗಮನವನ್ನು ಸೆಳೆಯುತ್ತವೆ. ಒಂದು ಭಾಷಾ ಸಂಸ್ಕೃತಿಯ ಮೂಲಕ, ಮತ್ತೊಂದು ಸಣ್ಣ ಸಣ್ಣ ವಿಫಲ ಸಂಗತಿಗಳ ನಿರೂಪಣೆಯ ಹಾಗೂ ಎರಡು ಪರಸ್ಪರ ಸಮಾನ ಘಟನೆಗಳ ಸನ್ನಿವೇಶವನ್ನು ಮುಖಾಮುಖಿಗೊಳಿಸಿ ಅರ್ಥವನ್ನು ಸೇರಿಸುವ ಸ್ವರೂಪದಿಂದಾಗಿದೆ.

ಬಡತನವನ್ನು ಬಿಂಬಿಸುವ ಸಂದರ್ಭದಲ್ಲಿ ‘ಒಂದು ಜೋಪಡಿ. ಒಂದು ಹೆಂಡತಿ ಒಂದು ಆರೇಳು ವರ್ಷದ ಮಗ ಅದಷ್ಟುಇದ್ದು ಅದಷ್ಟೇ ಅವನ ಆಸ್ತಿ ಎಂಬಂತಿದೆ. ಎಂದು ರಂಗಪ್ಪನನ್ನು ಪರಿಚಯಿಸಿದರೆ, ಗೌಡರ ಹಟ್ಟಿಯ ಪರಿಚಯ ಕಣ್ಣಿಗೆ ರಾಚುವಂತೆ ಬರುತ್ತದೆ. ಗೌಡರ ಹಟ್ಟಿ… ಅರೆ ಊರ ಅವರಿಸಿಕೊಂಡು ನಿಂತಿದೆ. ನಿಂತ ನಿಲುವಿಗೆ ಗುಡುಗು ಸಿಡಿಲು ಅಂಜುವುವು’ ಎಂದು ವಿವರಿಸಿದರೆ, ಚಡ್ಡಿಯಿಲ್ಲದ ರಂಗ ತನ್ನ ಮಗ ಚಂಡಿ ಮಾಡುವುದು ಗೌಡರ ಮಡದಿ ತೊಟ್ಟ ಗರಿಗರಿ ಸೀರೆಯ ಪ್ರಖರತೆ, ಸೇದಲು ಬೀಡಿಯೂ ಇಲ್ಲದ  ತಿನ್ನಲು ಅನ್ನವೂ ಇಲ್ಲದ ರಂಗಪ್ಪ, ಏನೆಲ್ಲವೂ ಇದ್ದ ಗೌಡರು ಹೀಗೆ ಎರಡು ಕುಟುಂಬಗಳ ಇರುವಿಕೆಯ ವಿವರಣೆಯ ಮೂಲಕವೇ ಶೋಷಕ ಹಾಗೂ ಶೋಷಿತ ಎಂಬ ಎರಡು ವರ್ಗದ ಬಿಂಬವನ್ನುರೂಪಿಸುತ್ತದೆ. ಗೌಡರು ಅವರ ಬಗ್ಗೆ ಇದ್ದ ಕತೆಗಳು ತಲೆಮಾರಿನ ಶ್ರೀಮಂತಿಕೆ ಇದ್ದಾಗಲೂ ಆತನಿಂದಾಗಿ ಊರಿಗೆ ಆದ ಲಾಭಗಳ ಬಗ್ಗೆ ಹೇಳಿದರೂ ಕೊನೆಗೆ ‘ಕಿರುಬನ ಮುಚ್ಚಿ ಗೌಡರ ತೋರಿಸಬಹುದು; ಗೌಡರ ಮುಚ್ಚಿ ಕಿರುಬನ ತೋರಿಸಬಹುದು’ ಎಂಬ ವ್ಯಂಗ್ಯದ ಮೂಲಕ ಆತನ ಇನ್ನೊಂದು ಮುಖವನ್ನು ತೋರಿಸುತ್ತದೆ. ವಾಸ್ತವವೇ ಬೇರೆ ಕಲ್ಪಿತ ಕತೆಗಳೇ ಬೇರೆ ಎನ್ನುವುದನ್ನು ನಿರೂಪಿಸುತ್ತದೆ.

ಹೀಗೆ ವರ್ಗಪ್ರಜ್ಞೆಯನ್ನು ಬಿಂಬಿಸುತ್ತಲೇ ಕತೆ ಅದಕ್ಕೆ ಕಾರಣವನ್ನು ಕೊಡಲು ಪ್ರಯತ್ನಿಸಿದಂತಿದೆ. ‘ಗೌಡರು ಕಣ್ಣು ಬುಟ್ಟರೆ ತನ್ನ ಹೊಟ್ಟೆ ಒಳಗೆ ಜೀವ ಆಡುತ್ತೆ’ ಎಂದು ರಂಗಪ್ಪ ತಿಳಿದಿದ್ದರೆ ‘ಅವನು ಮಾಡೊ ಉಳುಮೆಗೆ ಗೌಡರ ಹಟ್ಟಿ ಕಂಬ ನಿಂತದೆ ನೋಡಿ’ ಅಂತ ಊರವರು ಅಂತಾರೆ. ಈ ಎರಡು ತಿಳುವಳಿಕೆಗಳ ಅಂತರವನ್ನು ಗ್ರಹಿಸಿದಾಗ ರಂಗಪ್ಪನಿಗೆ ತನ್ನ ಶ್ರಮದ ಬಗ್ಗೆ ಅರಿವಿದ್ದರೂ ಆತನ ಸಂಕೋಚ, ಸಂದಿಗ್ಧತೆಯ ಮನೋಭಾವ ಹಾಗೂ ತನ್ನ ದೃಷ್ಟಿಯಿಂದ ತನ್ನ ಬದುಕನ್ನು ಗ್ರಹಿಸದೆ ಯಜಮಾನರ ದೃಷ್ಟಿಕೋನದಿಂದಲೇ ತನ್ನ ಬದುಕನ್ನು ಗ್ರಹಿಸುವಂತಾದುದರಿಂದ ಇಂಥ ದಯನೀಯ ಬದುಕನ್ನು ಎದುರಿಸುವಂತಾಗಿದೆ ಎನ್ನುವುದರೆಡೆಗೆ ಬೆರಳು ಮಾಡಿದಂತಿದೆ. ಅಧೀನತೆಯ ಬದುಕು ಕೇವಲ ಅವನನ್ನು ಹದಗೆಡಿಸದೆ ಆತನ ಕುಟುಂಬವನ್ನೂ ಹದಗೆಡಿಸುತ್ತದೆ.‘ನನಗೆ ಸ್ವಂತ ಭೂಮಿ ಇಲ್ಲ’ ಎಂಬ ಪ್ರಜ್ಞೆ ಇದ್ದಾಗಲೂ ಆತನ ಸಂಕೋಚದ ಸ್ವಭಾವವೇ ಆತನ ಶತ್ರುವಾಗಿದೆ ಎನ್ನುವುದು ಸ್ಪಷ್ಟ.

ರಂಗಪ್ಪನ ಬದುಕಿಗೆ ಬಡತನವೊಂದೇ ಶಾಪವಾಗಿಲ್ಲ. ಇದರ ಜೊತೆಗೆ ಜಾತಿಯ ಮೇಲು ಕೀಳೆಂಬ ಭಾವನೆ, ಅಸ್ಪೃಶ್ಯತೆಯ ಭಾವನೆಗಳೂ ಅವನೊಂದಿಗೆ ಸುತ್ತಿಕೊಂಡಿವೆ. ಇದು ವರ್ಗ ಪ್ರಜ್ಞೆಗಿಂತ ಅತಿಯಾಗಿ ಕಾಡಿರುವುದು ಚಿತ್ರಿಸಲಾಗಿದೆ. ಈ ಕತೆಯಲ್ಲಿ ಎರಡು ಪ್ರಸಂಗಗಳು ಅಂಥವು ಎದುರಾಗುತ್ತವೆ. ಒಂದು; ರಂಗಪ್ಪನ ಮಗ ‘ರಾಜ’ನಿಗೆ ಶಾಲೆಯಲ್ಲಿ ಪಟೇಲರ ಶಂಭಪ್ಪ ‘ನೀವು ವಲಾರ್ರೂ ಕಲಾ ಅದ್ಕ ನಿನ್ನ ರಾಜ ಅನ್ನಾಕಿಲ್ಲ ‘ಗೀಜ’ ಅಂತಿನಿ ಅಂದದ್ದು. ಎರಡನೆಯದು; ಶಾಸ್ತ್ರಿ ಮೇಷ್ಟ್ರು ಹತ್ತಿರ ಬಂದು ಕುಡಿಯಲು ನೀರು ಕೇಳಿದಾಗ ‘ನೋಡೆ ಶಾರ್ದು ಸ್ವಲ್ಪು ನೀರಂತೆ ರಂಗನಿಗಂತೆ ಕುಡಿಯಾಕಂತೆ’ ಅಂತಂತ ಮಾತ ಹಿಡ್ಡು ಹಿಡ್ಡು ಆಡಿದರು. ಎನ್ನುವಾಗ ಮತ್ತು ಶಾರದೆ ನೀರು ತಂದು ಎತ್ತಿ ಹಾಕಿದ್ದು ಹಾಗೂ ರಂಗಪ್ಪ ಬೊಗಸೆಯೊಡ್ಡಿ ಕುಡಿದದ್ದು ದಾಖಲಿಸುತ್ತದೆ. ಮೇಸ್ಟ್ರುತಡೆದು ತಡೆದು ಹೇಳುವಲ್ಲಿಯೇ ಮಗಳಿಗೆ ಕೆಲ ಸೂಚನೆಗಳಿವೆ ಎಂಬುದನ್ನು ತಿಳಿಸಿದರೆ, ಮುಂದೆ ಅದು ಕ್ರಿಯೆಯಲ್ಲಿ ವಾಚ್ಯವಾಗಿ ಪ್ರಕಟಿಸುತ್ತದೆ. ಮೊದಲನೆಯದರಲ್ಲಿ- ಹೊಲೆಯರ ಜಾತಿಯವನಿಗೆ ‘ರಾಜ’ ಎಂಬ ಹೆಸರಿರಬಾರದು ಎಂಬ ಗ್ರಹಿಕೆಯ ಮೂಲಕ ಬದಲಾಗುವ ಆತನ ಹೆಸರು ಮೇಲು ಜಾತಿಯವರ ಪ್ರತಿಷ್ಠೆಗೆ ಪ್ರತೀಕ ಎಂಬಂತೆ ಬಂದಿದೆ. ಈ ಪ್ರಸಂಗವನ್ನು ಕನಸಿನಲ್ಲಿ ನಡೆಯುವ ಘಟನೆಯಂತೆ ತೋರಿಸಲಾಗಿದೆ. ಹೀಗೆ ಕನಸಿನಲ್ಲಿ ತೋರಿಸುವುದು ವಾಸ್ತವದ ಸಾಮಾಜಿಕ ನಿಂದನೆಯ ಕ್ರಿಯೆಗಳನ್ನು ವಾಸ್ತವದಲ್ಲಿ ಹೇಳದೆ ಅವಾಸ್ತವದ ಪರಿಕಲ್ಪನೆಯ ಮೂಲಕ ಅದೊಂದು ಕನಸು ಎಂಬಂತೆ ತೋರಿಸುವ ಅಗತ್ಯವಿರಲಿಲ್ಲ ಎನಿಸಿದರೂ, ಮಕ್ಕಳ ಮನಸ್ಸಿನಲ್ಲಿ ಇಂಥ ಘಟನೆಗಳು ಕನಿಸಿನಲ್ಲಿಯೂ ಹೇಗೆ ಬೆನ್ನಟ್ಟಿ ಕಾಡುತ್ತವೆ ಎಂದು ಹೇಳಲು ಸಾಧ್ಯವಾಗಿದೆ ಎಂದು ಅರ್ಥೈಸಬಹುದಾಗಿದೆ.
ಈ ಕತೆಯಲ್ಲಿಯೇ ಈ ಅಸ್ಪೃಶ್ಯತೆಗೆ ಸಂಬಂಧಿಸಿದಂತೆ ಅದರ ಪರಿಹಾರದ ಮಾರ್ಗದ ಬಗ್ಗೆ ಕೆಲ ಸೂಚನೆಗಳನ್ನು ಕೊಡುವಂತೆ ಮೂಡಿಬಂದಿದೆ. ‘ರಾಜ’ ಅಚ್ಚರಿಯ ಸಂಗತಿ ಎನ್ನುವಂತೆ ಹೊಸದಾಗಿ ಬಂದ ಮೇಸ್ಟ್ರು ನಮ್ಮ ಜಾತಿಯವನಂತೆ ಎಂದು ಹೇಳಿಕೊಳ್ಳುತ್ತ, ಅವರು ದೊಡ್ಡ ಮೇಸ್ಟ್ರ ಹಟ್ಟೀಲಿ ‘ಅವ್ರು ಗಳಾಸ್ಲೆ ನೀರ್ನುಕುಡಿತಾರೆ. ಅಮೇಲ ಆಮೇಲ ಅವರ ಜಗಲಿ ಮುಕ್ಕು ಹೋಯ್ತಾರೆ’ ಎಂದು ಹೇಳುತ್ತಾನೆ. ಇದಲ್ಲದೆ ರಂಗಪ್ಪ ಶಾಸ್ತ್ರಿ ಮೇಸ್ಟ್ರ ಹಟ್ಟಿಗೆ ಬಂದು ನೀರು ಕೇಳುವ ಸಂದರ್ಭದಲ್ಲಿ ಈ ಹೊಸ ಮೇಸ್ಟ್ರು ಶಾಸ್ತ್ರಿ ಮೇಸ್ಟ್ರ ಜೊತೆಗೆ ಕುಳಿತಿದ್ದಾನೆ. ಬಿಳಿ ಬಟ್ಟೆ ಧರಿಸಿ ಕುಳಿತಿದ್ದಾನೆ. ಕೈಯಲ್ಲಿ ಸಿಗರೇಟ್ ಹಿಡಿದು ಸೇದುತ್ತಲೂ ಇರುವುದನ್ನು ಗಮನಿಸುತ್ತಾನೆ. ಹೊಸ ಮೇಸ್ಟ್ರು ಹೊಲೆಯರವನಾದರೂ ಶಾಸ್ತ್ರಿ ಮೇಸ್ಟ್ರ ಜೊತೆ ಕುಳಿತು ಮಾತನಾಡುವ ಸಾಧ್ಯತೆ ಹೇಗೆ ಸಾಧ್ಯವಾಯಿತು ಎಂಬುದನ್ನೂ ಅಪ್ರತ್ಯಕ್ಷವಾಗಿ ಸೂಚಿಸುತ್ತದೆ. ಶಿಕ್ಷಣ ಇದ್ದುದರಿಂದ ಉದ್ಯೋಗ ಪಡೆದುಕೊಂಡು ಸಮಾನತೆ ಸಾಧಿಸಲು ಸಾಧ್ಯವಾಗಿದೆ. ಶಿಕ್ಷಣವಿಲ್ಲದ್ದರಿಂದ ರಂಗಪ್ಪನಂಥವರು ಶಾಸ್ತ್ರಿ ಮನೆಗೆ ಹೋದರೆ ಅಸ್ಪೃಶ್ಯತೆಗೆ ತುತ್ತಾಗುತ್ತಾರೆ ಎಂಬ ಸಂದೇಶವನ್ನೂ ನೀಡುತ್ತದೆ.

ಇದಲ್ಲದೆ ‘ನರ್ಸಮ್ಮ ಬಂದಾಗ ಕಿರಸ್ತಾನದವಳು ಅಂತ ಯಾರೂ ಮನೆ ಕೊಡದಿದ್ದ ಪ್ರಸಂಗ ಬಂದಾಗ ಗೌಡರೇ ಬಾಡಿಗೇನೂ ಇಲ್ಲದೆ ಜಗಲಿ ಮನೆಯನ್ನೂ ಬಿಟ್ಟುಕೊಡುವ ಪ್ರಸಂಗ’ ಇವೆಲ್ಲವೂ ಶಿಕ್ಷಣದಿಂದ ಏನೆಲ್ಲಾ ಪಡೆಯಲು ಸಾಧ್ಯ ಎಂಬುದನ್ನೂ ಕತೆ ಬಿಂಬಿಸಲು ಪ್ರಯತ್ನಿಸಿದೆ. ಕಥೆ ತಾತ್ವಿಕತೆಯ ದೃಷ್ಟಿಯಿಂದ ಇದೆಲ್ಲವೂ ಸರಿ ಎನಿಸಿದಾಗಲೂ ಆರು-ಏಳು ವರ್ಷದ ಬಾಲಕನ ಮೂಲಕ ಹೊಸ ಮೇಸ್ಟ್ರ ಬಗೆ ಅಸ್ಪೃಶ್ಯತೆ ಆಚರಣೆ ನಡೆದಿರುವ ಪ್ರಸಂಗವನ್ನು ಹೇಳಿಸುವುದು ವಾಸ್ತವಕ್ಕೆ ಹತ್ತಿರವೆನಿಸದು. ಇದು ಬಾಲಕನ ವಯಸ್ಸಿಗೆ ಮೀರಿದ ಚಿಂತನೆಯಾಗಿದ್ದು ಎನಿಸುತ್ತದೆ ಮತ್ತು ಶಿಕ್ಷಣ ಸಿಕ್ಕಾಕ್ಷಣವೇ ಏಕಕಾಲಕ್ಕೆ ಬಂದು ಮನೆಯೆದುರು ಹೊಸ ಮೇಸ್ಟ್ರ ಹಾಗೂ ರಂಗಪ್ಪನ ವಿರೋಧಾಭಾಸದ ದೃಶ್ಯ ನೋಡಲು ಸಾಧ್ಯ ಎಂಬುದು ಒಂದು ಭ್ರಮೆಯಾದರೂ ಕತೆಯ ನೆಲೆಯಲ್ಲಿ ಒಂದು ಸುಂದರ ಕಲ್ಪನೆ ಎನಿಸುತ್ತದೆ. ಇಲ್ಲಿ ಅಸ್ಪೃಶ್ಯತೆಯ ಪ್ರಸಂಗಗಳು ಸಾಂದರ್ಭಿಕವಾದವುಗಳಾದರೂ ತೀರ ಸಾಮಾನ್ಯವಾದ ಪ್ರಸಂಗಗಳಾಗಿದ್ದು, ಅಸ್ಪೃಶ್ಯತೆಯ ದಟ್ಟ ಅನುಭವವನ್ನು ಕೊಡುವಲ್ಲಿ ಸೋಲುತ್ತವೆ. ಆದರೆ ಕತೆ ಹೇಳುವ ರೀತಿ ಮತ್ತು ದಲಿತ ಕಾವ್ಯಾತ್ಮ ಭಾಷೆಯ ಮೂಲಕ ವಿಷಯವನ್ನು ಅಡಕವಾಗಿಸಿ ಹೇಳುವ ರೀತಿ ಓದುಗನಿಗೆ ಮೈ ಮರೆಸಿ ಬಿಡುತ್ತವೆ. ಕಿರಸ್ತಲದವರು ಅಸ್ಪೃಶ್ಯರೇ ಆಗಿದ್ದಾಗಲೂ ರಂಗಪ್ಪನಿಗೆ ಒಂದು ನೀತಿ ನರಸಮ್ಮನಿಗೆ ಒಂದು ನೀತಿಯನ್ನು ಅನುಸರಿಸುವ ಗೌಡರ ದ್ವಂದ್ವ ನೀತಿಯ ಹೆಜ್ಜೆ ಹೆಜ್ಜೆಗೆ ಭಿನ್ನ ರೀತಿಯಲ್ಲಿ ಟೀಕೆಗೆ ಒಳಗಾಗುತ್ತದೆ. ಇಂಥ ಸೂಕ್ಷ್ಮ ಸನ್ನಿವೇಶಗಳು ಗಮನ ಸೆಳೆಯುತ್ತವೆ.

ಕತೆಗೆ ಲವಲವಿಕೆಯ ಭಾಗವಾಗಿ ಬಂದದ್ದು, ಹೈಕಳ ಬಾಯಿಯಲ್ಲಿ ಎಂದರೆ ಶಿವರಾಮ, ರಾಮಣ್ಣ ಮತ್ತವರ ಉಂಡಾಡಿ ಸ್ನೇಹಿತರಲ್ಲಿ ಸುತ್ತುವ ನರಸಮ್ಮನ ಪುರಾಣ. ಕಲಿತ ಹೆಣ್ಣೊಂದು ಹಳ್ಳಿಗೆ ಬಂದರೆ ಹುಟ್ಟಿ ಕೊಳ್ಳುವ ಕತೆಗಳು ಅನಗತ್ಯ ಆಸಕ್ತಿಗಳು ಕತೆಗಾರರು ಅಷ್ಟೇ ಶ್ರದ್ಧೆಯಿಂದ ಚಿತ್ರಿಸಿದ್ದಾರೆ. ಇದು ಕತೆಯ ಅನ್ಯ ಸಂಗತಿಯಾಗಬಹುದುದಾಗಿದ್ದ ರೀತಿಯನ್ನು ತನ್ನ ಒಡಲಲ್ಲಿ ತುಂಬಿಕೊಂಡದ್ದು ರಂಗಪ್ಪ ನರಸಮ್ಮರ ಕತೆಯನ್ನು ಊರಿನ ಕತೆಯಾಗಿಸಿದ್ದು ವಿಶೇಷವಾಗಿದೆ. ನರಸಮ್ಮ ಮತ್ತು ಗೌರಮ್ಮರ ಮಾತಿನ ಮಂಟಪದಲ್ಲಿ ಸಿರಿತನದ ಆಡಂಬರದಲ್ಲಿ ಜೋಳ ಕೇಳೋಕೆ ಬಂದ ರಂಗಪ್ಪ ದನಿ ಅಡಗಿ ಹೋಗುವ ರೀತಿಯನ್ನೂ ತುಂಬ ಕಲಾತ್ಮಕವಾಗಿ ಚಿತ್ರಿಸಿದ್ದು ಹೈಕಳುಗಳನ್ನೂ ಕತೆಯ ಒಂದು ಭಾಗವಾಗಿಸಿಕೊಂಡದ್ದು ವಿಮರ್ಶಕನ ದೃಷ್ಟಿಕೋನಕ್ಕೆ ರಾಚದಿರದು.
ಮೂಡಲ ಸೀಮೆಯ ಕೊಲೆಗೂ ದರೋಡೆಗೂ ಪ್ರಸಿದ್ಧಿಯಾಗಿದೆ ಎಂದು ವಾಚ್ಯವಾಗಿಯೇ ಕತೆಯನ್ನು ಪ್ರಾರಂಭಿಸಿದರೂ ಕತೆಯಲ್ಲಿ ಯಾವ ಕೊಲೆಗಳಾಗಲಿ ದರೋಡೆಗಳಾಗಲಿ ನಡೆಯುವುದಿಲ್ಲ. ಶೀರ್ಷಿಕೆಗಿಂತ ಕತೆ ವ್ಯತಿರಿಕ್ತ ಎನಿಸುವ ರೀತಿಯಲ್ಲಿ ಬಿಂಬಿಸಿದ್ದು ಒಂದು ಕಥನತಂತ್ರವೆನಿಸುತ್ತದೆ. ರಂಗಪ್ಪನ ಹಾಗೂ ಆತನ ಕುಟುಂಬದ ಹಸಿವನ್ನು ಕುರಿತ ಈ ಕಥೆ ದುಡಿಸಿಕೊಂಡು ಅನ್ನ– ಕೂಲಿ ಕೊಡದೆ ಅಪ್ರತ್ಯಕ್ಷವಾಗಿ ದಿನವೂ ಕೊಲ್ಲುವ ಬಗೆಯನ್ನು ಅಥವಾ ದಿನವೂ ಸತ್ತು ಹುಟ್ಟುವ ಬಗೆಯನ್ನು ಕೊಲೆಯ ಪರಿಭಾಷೆಯಲ್ಲಿ ನಿರೂಪಿಸಿದಂತಿದೆ.

ದಲಿತ ಕತೆಗಳ ಭಾಷೆ ಕಾವ್ಯತ್ಮಕವಾಗಿದ್ದು ದಲಿತ ಪಂಥಕ್ಕೆ ಈ ಭಾಷೆಯೇ  ಒಂದು ಆಯಾಮವಾಗಿ ಪರಿಗಣಿಸುವಂತೆ ಮಾಡಿತು. ಅಷ್ಟೇ ಅಲ್ಲ, ಕನ್ನಡದ ಕಥಾನಕಕ್ಕೂ ಇದು ವ್ಯಾಪಿಸಿದ್ದು ವಿಶೇಷ. ಅನಂತರದಲ್ಲಿ ಈ ಭಾಷೆ ಅಷ್ಟೇ ಟೀಕೆಗೆ ಒಳಗಾಗಿದ್ದು ಹೇಳದಿರಲಾಗದು. ಭಾಷೆಯ ಲೋಲುಪತೆಯಲ್ಲಿ ಸಮಸ್ಯೆಯ ನಿಜ ಸ್ವರೂಪ ಹಿಂದೆ ಸರಿಯುತ್ತದೆ ಎಂಬ ಆರೋಪದೊಂದಿಗೆ ಈ ಪ್ರಾದೇಶಿಕ ಭಾಷೆ ಓದುವುದಕ್ಕೆ ತೊಡಕು ಎಂದು ವಾದಿಸಲಾಗಿದೆ. ಮೊದಲ ಸಂಗತಿ ಪರಿಶೀಲಿಸಬಹುದಾದುದು ಎನಿಸಿದರೂ ಎರಡನೆಯ ಸಂಗತಿ ಅರ್ಥವಿಲ್ಲದ್ದು ಎನಿಸುತ್ತದೆ. ಒಂದು ಭಾಷೆಯ ಶ್ರೀಮಂತಿಕೆ ಪ್ರಾದೇಶಿಕತೆಯಲ್ಲಿಯೇ ಅಡಗಿರುತ್ತದೆ. ಭಾಷೆಯೊಂದಿಗೆ ಸಂಸ್ಕೃತಿಯೂ ಕೂಡ ಸುತ್ತಲಿನ ಕೊಂಬೆ ರೆಂಬೆಗಳನ್ನು ಕಡಿದು ಮರವನ್ನು ಸಬೂಳಾಗಿಸಿದಂತೆ ಅದೇ ನಿಜವಾದ ಭಾಷೆಯೆಂದು ಭ್ರಮಿಸಿ ಪ್ರಾದೇಶಿಕ ಭಾಷೆಗಳನ್ನು ನಿರಾಕರಿಸುವುದು ಸಮರ್ಥನೀಯವಲ್ಲ.