ದೇವನೂರ ಮಹಾದೇವ ಅವರ “ಒಡಲಾಳ”-ಟಿ.ಪಿ.ಅಶೋಕ
[ದೇವನೂರರ ‘ಒಡಲಾಳ’ ಕುರಿತು ವಿಮರ್ಶಕ ಟಿ.ಪಿ.ಅಶೋಕ ಅವರು ಬರೆದಿರುವ ಒಂದು ಹಳೆಯ ಬರಹ ನಮ್ಮ ಮರು ಓದಿಗಾಗಿ.]
ದೇವನೂರರು ದಲಿತ ಬದುಕನ್ನು ಚಿತ್ರಿಸುವಾಗ ದಲಿತರನ್ನು ಕೇವಲ ಪಾಪದ ಪ್ರಾಣಿಗಳೆಂಬಂತೆ ಚಿತ್ರಿಸದೆ ಅವರ ಬದುಕಿನ ವಿವಿಧ ಸಾಧ್ಯತೆಗಳನ್ನು ಪರಿಶೀಲಿಸುತ್ತ ಹೋಗುತ್ತಾರೆ. ಇವರ ಬರವಣಿಗೆಯಲ್ಲಿ ಪಾತ್ರಗಳು ಕೇವಲ “ನೆರಳು” ಗಳಾಗದೆ ರಕ್ತಮಾಂಸಗಳಿಂದ ಕೂಡಿದ ಪೂರ್ಣ ಪಾತ್ರಗಳೇ ಅಗಿರುವುದರಿಂದ ಅವರ ದೈನಂದಿನ ಚಟುವಟಿಕೆಗಳು ಆ ಜನಾಂಗದ ಒಟ್ಟು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಗಳೇ ಆಗುತ್ತವೆ. ಈ ಚಿತ್ರಗಳನ್ನು ಕಟ್ಟಿಕೊಡುವಾಗ ದೇವನೂರ ಮಹಾದೇವ ತೋರುವ ಸಂಯಮ, ಯಾವ ವಿವರಗಳನ್ನು ಎಲ್ಲಿ ಇಡಬೇಕೆಂಬ ಕಲಾತ್ಮಕ ನಿಖರತೆ, ಆ ಚಿತ್ರಗಳ ಹಿಂದಿನ ವಿಷಾದ ದನಿ, ಯಾವಾಗ ಸಿಡಿಯುವುದೋ ಹೇಳಲಾಗದ ಮೂಕ ಸಿಟ್ಟು, ಗುಪ್ತವಾಗಿ ಮೊಳೆಯುವ ಬಂಡಾಯ, ಇವು ಯಾವುದರಲ್ಲೂ ವೈಯಕ್ತಿಕ “ಹಸ್ತಕ್ಷೇಪ” ಮಾಡದೆ ತಿಳಿಹಾಸ್ಯ, ವಿನೋದಗಳಿಂದ ಕಾಯ್ದುಕೊಂಡಿರುವ ತಾಂತ್ರಿಕ ಅಂತರ ಇವುಗಳಿಂದಾಗಿ ದೇವನೂರರ ಸಾಹಿತ್ಯ ಸಂಕೀರ್ಣವೂ, ಪ್ರಬುದ್ಧವೂ ಆಗಿದೆ. ದಲಿತ ಸಂಘರ್ಷ ಸಮಿತಿಯ ಸಕ್ರಿಯ ಕಾರ್ಯಕರ್ತರು ಅವರು. ಹಾಗೆ ತಮ್ಮ ಅಂತರಂಗದ ಅನುಭವದ ಮೂಸೆಯೊಳಗೆ ಅತ್ಯಂತ ಏಕಾಗ್ರತೆಯಿಂದ ಕಲಾಸೃಷ್ಟಿಯಲ್ಲಿ ತೊಡಗಿಕೊಳ್ಳುವವರು. ಅಂದರೆ ಬಹಿರಂಗದ ಅನುಭವ ಅಂತರಂಗದ ಸೃಷ್ಟಿಯ ಪ್ರೇರಣೆಯಾಗುವಂತೆ ಅಂತರಂಗದ ಚಿಂತನೆ ಬಹಿರಂಗದ ಚಟುವಟಿಕೆಗೆ ಅಗತ್ಯವಾದ ತಾತ್ತ್ವಿಕತೆಯನ್ನು ಕೊಡುತ್ತದೆ. ಆದ್ದರಿಂದಲೇ ಕ್ರಾಂತಿ-ಧ್ಯಾನ ಎರಡೂ ಮಹಾದೇವರಿಗೆ ಒಟ್ಟೊಟ್ಟಿಗೇ ಸಾಧ್ಯವಾಗುತ್ತದೆ. ಹಾಗಾಗಿ ಮಹಾದೇವ ದಲಿತ ಬದುಕಿನ ವಿವರಗಳನ್ನು ಕೇವಲ ಮಧ್ಯಮವರ್ಗದ ಓದುಗರನ್ನು ತಣಿಸುವಂಥ ಮಾರಾಟದ ಸರಕುಗಳನ್ನಾಗಿ ಮಾಡದೆ ಕೃತಿಯಿಂದ ಕೃತಿಗೆ ಮಾಗುತ್ತಾ, ಬೆಳೆಯುತ್ತಾ ಬಂದಿದ್ದಾರೆ.
ಮೊದಮೊದಲು ನವ್ಯ ಸಾಹಿತ್ಯ ಸಂದರ್ಭದಲ್ಲಿ ಆ ಚಳುವಳಿಯಿಂದ ಪ್ರಭಾವಿತರಾಗಿದ್ದು ನಂತರ ಕ್ರಮೇಣ ಅದರಿಂದ ಬಿಡಿಸಿಕೊಂಡು ಮಹಾದೇವ ಮುನ್ನಡೆದಿದ್ದಾರೆ. ಮೊದಮೊದಲು ವ್ಯಕ್ತಿ ವಿಶಿಷ್ಟ ಪ್ರಜ್ಞೆಯಲ್ಲಿ ಅನಂತರ ಪ್ರಾತಿನಿಧಿಕ ಪಾತ್ರಗಳಲ್ಲಿ ಮುಂದೆ ಪ್ರಾತಿನಿಧಿಕ ದಲಿತ ಚಿತ್ರಣಗಳಲ್ಲಿ ಅವರು ತಮ್ಮ ಕಥನಗಳನ್ನು ವಿಸ್ತರಿಸಿಕೊಂಡಿದ್ದಾರೆ. ಕೆಲವು ಘಟನೆಗಳು, ಕೆಲವು ಭಾವಸ್ಥಿತಿಗಳಿಂದ ಮುಂದುವರೆದು ದಲಿತ ಬದುಕಿನ ಒಟ್ಟು ವಿನ್ಯಾಸವನ್ನು ಹಿಡಿದಿಡುವ ಮಹಾತ್ವ್ತಾಕಾಂಕ್ಷೆಯಲ್ಲಿ ಅವರ ಕಥನ ಬೆಳೆದಿದೆ. ದಲಿತ ಬದುಕಿನ ಸಮಕಾಲೀನ ವಾಸ್ತವಿಕ ವಿವರಗಳಿಂದ ಮಾತ್ರವಲ್ಲ, ಅದರ ಸ್ಮೃತಿಗಳಲ್ಲಿ, ನಂಬಿಕೆ- ಕನಸುಗಳ ಮಟ್ಟದಲ್ಲಿಯೂ ಗ್ರಹಿಸುವ ಅಪೇಕ್ಷೆಯನ್ನು ಮಹಾದೇವ ತೋರುತ್ತಿದ್ದಾರೆ. ದೈನಂದಿನ ಜೀವನದ ವಿವರಗಳನ್ನು ಮಾತ್ರವಲ್ಲದೆ, ಜಾನಪದ, ಪುರಾಣ, ಹಾಡು, ನೀತಿಕಥೆ, ಮಂತ್ರ ತಂತ್ರ, ಗಾದೆಮಾತು ಮುಂತಾಗಿ ಮನುಷ್ಯನ ಅಭಿವ್ಯಕ್ತಿಯ ಸಕಲ ಸ್ತರಗಳನ್ನು ಒಳಗೊಳ್ಳಲು ಅವರು ಯತ್ನಿಸುತ್ತಿದ್ದಾರೆ. ದಲಿತರ ಸ್ಧಿತಿಯನ್ನು ದಾಖಲಿಸುವುದು ಮಹಾದೇವರ ಏಕಮಾತ್ರ ಉದ್ದೇಶವಾಗಿರುವುದಿಲ್ಲ. ದಲಿತರ ಬದುಕಿನ ಸಾಧ್ಯತೆಗಳ ಕಾಣ್ಕೆಯೂ ಅವರ ಕೃತಿಗಳ ಮಹತ್ವದ ಅಂಶ. ದೇವನೂರರ ಕಾಣ್ಕೆಗಳು ಕೇವಲ ಕ್ರಾಂತಿಕಾರೀ ಕನಸುಗಾರಿಕೆಯ ಫಲಗಳಲ್ಲ. ದಲಿತ ಬದುಕಿನ ನಿಷ್ಠುರ ಗ್ರಹಿಕೆಗಳಿಂದ ಮತ್ತು ಐತಿಹಾಸಿಕ ಸಂದರ್ಭಗಳಿಂದ ಈ ಕಾಣ್ಕೆಗಳು ಮೂಡಿಬಂದಿವೆ.
“ ದ್ಯಾವನೂರು” ಕಥೆಗಳಲ್ಲಿ ದಲಿತ ಸ್ಥಿತಿಯ ವರ್ಣನೆಗಳಿಗೆ ಹೆಚ್ಚಿನ ಪ್ರಾಮುಖ್ಯವಿದ್ದರೆ “ಒಡಲಾಳ”ದಲ್ಲಿ ಸಾಧ್ಯತೆಗಳ ಸೂಚನೆಗಳೂ ಇವೆ. ಈ ಸಾಧ್ಯತೆಗಳು ಸಾಕವ್ವನ ಇರುವಿಕೆಯ ಸಾಮರ್ಥ್ಯದಲ್ಲಿ ಒಂದು ನಿಟ್ಟಿನಲ್ಲಿಯೂ, ಪುಟಗೌರಿ ನವಿಲುಗಳ ಪ್ರಪಂಚದಲ್ಲಿ ಇನ್ನೊಂದು ನಿಟ್ಟಿನಲ್ಲಿಯೂ ಗೋಚರವಾಗುತ್ತದೆ. ಶಿವೂನ ವಿಧ್ಯಾಭ್ಯಾಸದಲ್ಲೂ, ಗುರುಸಿದ್ದನ ಪ್ರತಿಭಟನೆಯ ರಾಜಕೀಯದಲ್ಲೂ ಇವು ಇನ್ನಷ್ಟು ನಿಚ್ಚಳವಾಗಿ ಸೂಚಿತವಾಗುತ್ತವೆ. ದಲಿತರ ವಿಮೋಚನೆಯ ಎರಡು ಮಾರ್ಗಗಳು ಇವು ಎಂದು ಯೋಚಿಸಲು ಸಾಧ್ಯವಿದೆ. ಸುಧಾರಣೆಯ ಮಾರ್ಗ-ಬಂಡಾಯದ ಮಾರ್ಗ, ಗಾಂಧಿಮಾರ್ಗ- ಅಂಬೇಡ್ಕರ್ ಮಾರ್ಗ ಎಂದು ತರ್ಕಿಸಲು ಅವಕಾಶಗಳಿವೆ. ಈ ಸೂಚನೆಗಳು “ಕುಸುಮಬಾಲೆ”ಯಲ್ಲಿ ಇನ್ನಷ್ಟು ನಿಷ್ಠುರವಾದ ಪರಿಶೀಲನೆಗಳಿಗೆ ಒಳಗಾಗುತ್ತವೆ. ಶಿವೂ ಬೆಳೆದು ದೊಡ್ಡವನಾದ ಮೇಲೆ “ಕುಸುಮ ಬಾಲೆ”ಯ ಚನ್ನನ ಹಾಗಾಗುತ್ತಾನೆಯೇ? ಗುರುಸಿದ್ದನ ಪ್ರತಿಭಟನೆಯ ಪರಿಷ್ಕೃತ ರೂಪವೇ ದಲಿತ ಸಂಘರ್ಷ ಸಮಿತಿ ಚಳುವಳಿಯೇ? ಈ ಎರಡೂ ಸಾಧ್ಯತೆಗಳು ದಲಿತರ ಬದುಕಿನಲ್ಲಿ ಪೂರ್ಣವಾಗಿ ಫಲಿಸಿಲ್ಲ; ಅವು ಒಂದು ಜನಾಂಗದ ವಿಮೋಚನೆಯನ್ನು ಸಂಪೂರ್ಣವಾಗಿ ಸಾಧಿಸಲು ಬೇಕಾದ ಸಾಮರ್ಥ್ಯವನ್ನು ಇನ್ನೂ ಪೂರ್ಣವಾಗಿ ಮೈಗೂಡಿಸಿಕೊಂಡಿಲ್ಲ. ಅಂದರೆ ಹಿಂದೆ ಸೂಚನೆಗಳ ಮಟ್ಟದಲ್ಲಿ ಧ್ಯಾನಿಸಿದ್ದನ್ನು ಈಗ “ಕುಸುಮಬಾಲೆ”ಯಲ್ಲಿ ಇನ್ನಷ್ಟು ಆಳವಾಗಿ ವ್ಯಾಪಕವಾಗಿ ಎದುರಿಸುತಿದ್ದಾರೆಯೇ? ಮಹಾದೇವರ ಕಾಣ್ಕೆಗಳು ದಲಿತರ ಬದುಕಿನ ಸೋಲಿನ ಕಾಣ್ಕೆಗಳು ಎಂದು ನನ್ನ ಮಾತಿನ ಅರ್ಥವಲ್ಲ ಅವು ದಲಿತರ ಕ್ರಾಂತಿಯ ಮುನ್ನಾ ದಿನದ ತಲ್ಲಣಗಳು , ಗೊಂದಲಗಳು ಮತ್ತು ಪ್ರಯತ್ನಗಳು. “ದ್ಯಾವನೂರು” ಕಥೆಗಳಲ್ಲಿ ಈ ಅಂಶಗಳನ್ನು ಮುಖ್ಯವಾಗಿ ದಲಿತರ ಬದುಕಿನ ವರ್ತಮಾನದಲ್ಲಿ ಗ್ರಹಿಸುವ ಪ್ರಯತ್ನ ಮಾಡಿದ್ದರು. “ಒಡಲಾಳ”ಕ್ಕೆ ಇತಿಹಾಸದ ಆಯಾಮವೂ ದೊರಕಿದೆ. “ಕುಸುಮ ಬಾಲೆ”ಯಲ್ಲಿ ದಲಿತರ ಸ್ಧಿತಿ ಸಾಧ್ಯತೆಗಳ ಲೋಕ ಒಂದು ಪುರಾಣವಾಗುತ್ತ ಬೆಳೆಯುತ್ತದೆ.
ಮಹಾದೇವರು “ಒಡಲಾಳ” ವನ್ನು ಬರೆದದ್ದು 1979ರಲ್ಲಿ. ಇದೊಂದು ನೀಳ್ಗತೆಯೋ ಅಥವಾ ಕಿರು ಕಾದಂಬರಿಯೋ ಎಂಬ ಚರ್ಚೆ ಇನ್ನೂ ನಿಂತಿಲ್ಲ. ಅದೇನೇ ಇರಲಿ. “ಒಡಲಾಳ” ಪ್ರಕಟಣೆಯ ನಂತರ ಕನ್ನಡ ಸಾಹಿತ್ಯದಲ್ಲಿ ಮಹಾದೇವರ ಸ್ಥಾನ ಭದ್ರವಾಯಿತು. ಇಲ್ಲಿ ಅವರು ದಲಿತ ಪ್ರಪಂಚವನ್ನು ಕಂಡರಸಿರುವ ರೀತಿ ಆಧುನಿಕ ಭಾರತೀಯ ಸಾಹಿತ್ಯ ಸಂದರ್ಭದಲ್ಲೇ ಅಪೂರ್ವವಾದದ್ದು ಎಂಬ ಮನ್ನಣೆಯನ್ನು ಅದು ಪಡೆಯಿತು. ಒಂದು ಕೌಟುಂಬಿಕ ಆವರಣದ ಕಿರು ಚೌಕಟ್ಟಿನಲ್ಲೇ ದಲಿತರ ಸ್ಥಿತಿ- ಸಾಧ್ಯತೆಗಳನ್ನು ಈ ಕೃತಿ ಧ್ವನಿಪೂರ್ಣವಾಗಿ ಸೂಚಿಸುತ್ತದೆ. ಒಂದು ದಲಿತ ಕುಟುಂಬದ ದೈನಂದಿನ ಬದುಕಿನ ಸಣ್ಣ ಸಣ್ಣ ವಿವರಗಳಲ್ಲೇ ಅವರಲ್ಲಿ ಅಂತರ್ಗತವಾಗಿರುವ ಅಪಾರ ಶಕ್ತಿಯನ್ನೂ, ಪ್ರತಿಭೆಯನ್ನೂ “ಒಡಲಾಳ” ಕಾಣಿಸುತ್ತದೆ. ಈ ಶಕ್ತಿ ಮತ್ತು ಪ್ರತಿಭೆಗಳು ಅವರ ಇರುವಿಕೆಗೆ ಒದಗಿಬರುತ್ತವೆ; ಎಂಥ ಕಷ್ಟ ಕಾರ್ಪಣ್ಯಗಳು ಎದುರಾದರೂ ಅವುಗಳಲ್ಲಿ ಅವರು ಕೊಚ್ಚಿಹೋಗದಂತೆ ತಡೆಯುತ್ತವೆ. ತಮ್ಮ ವರ್ಣ ಮತ್ತು ವರ್ಗ ಸ್ಥಿತಿಗಳ ಎಲ್ಲ ಅನಾನುಕೂಲತೆಗಳನ್ನು ತನ್ನ ಬೆನ್ನಿಗೇ ಕಟ್ಟಿಕೊಂಡು ಬಂದಿದ್ದರೂ ಈ ಜನಾಂಗ ಇನ್ನೂ ಚೈತನ್ಯಶಾಲಿಯಾಗಿ ಬದುಕಿ ಉಳಿದಿರುವುದೇ ಅದರ ಯಾವತ್ತೂ ಸ್ಥೆರ್ಯಕ್ಕೂ ಬದುಕುಳಿಯುವ ಛಲಕ್ಕೂ ಸಾಕ್ಷಿಯಾಗಿದೆ. “ಒಡಲಾಳ” ದಲ್ಲಿ ದಲಿತರ ಸಾಧ್ಯತೆಗಳನ್ನು ಮಹಾದೇವರು ಹಲವು ನಿಟ್ಟಿನಲ್ಲಿ ಸೂಚಿಸುತ್ತಾರೆ. ದಲಿತರ ಬವಣೆಯ ಚಿತ್ರಣಗಳ ಹಿಂದಿನ ಮಾದರಿಗಳಿಗಿಂತ ಮಹಾದೇವರ ಮಾದರಿ ನಿರ್ಣಯಾತ್ಮಕವಾಗಿ ಭಿನ್ನವಾಗುವುದು ಹೀಗೆ.
“ಒಡಳಾಳ”ದ ಸಾಕವ್ವ ಕಾರಂತರ ಕಾದಂಬರಿಗಳ ಮುದುಕಿಯರನ್ನು ನೆನಪಿಸಿಯೂ ಅವರಿಗಿಂತ ತುಂಬ ಬೇರೆಯಾಗಿ ಕಾಣುತ್ತಾಳೆ. ಕಾರಂತರ ಕಾದಂಬರಿಯ ಮುದುಕಿಯರು ಮೇಲ್ವರ್ಣದವರು, ಬ್ರಾಹ್ಮಣರು, ನಿಜ. ಆದರೆ ಅವರ ವರ್ಣ ಸ್ಥಿತಿ ಅವರ ಸಾಧ್ಯತೆಗಳನ್ನು ಮುರುಟಿಸಿದೆ ಎನಿಸುತ್ತದೆ. ಅವರ ವರ್ಣದ ಕಟ್ಟುಪಾಡುಗಳೇ ಅವರಿಗೆ ತೊಡಕಾಗಿ ಪರಿಣಮಿಸಿರುವ ವ್ಯಂಗ್ಯವನ್ನು ಗಮನಿಸದೇ ಇರಲು ಸಾಧ್ಯವಾಗುವುದಿಲ್ಲ. ಎಂ.ಕೆ.ಇಂದಿರಾ ಅವರ ಫಣಿಯಮ್ಮನ ಬಗ್ಗೆಯೂ ಹೀಗೆಯೇ ಹೇಳಬಹುದು. ಈ ದೃಷ್ಟಿಯಿಂದ ಸಾಕವ್ವ ಲಂಕೇಶರ “ಮುಸ್ಸಂಜೆಯ ಕಥಾ ಪ್ರಸಂಗ”ದ ಆಣೆಬಡ್ಡಿ ರಂಗವ್ವನಿಗೆ ಹೆಚ್ಚು ಸಮೀಪ. ಈ ಸಾಕವ್ವ ಮನೆಯನ್ನು ಕಟ್ಟಿಕೊಂಡಿರುವ, ಅದನ್ನು ಪೊರೆಯುತ್ತಿರುವ, ನಿಭಾಯಿಸುತ್ತಿರುವ ರೀತಿಯಲ್ಲೇ ಅವಳ ಸಾಮರ್ಥ್ಯ ಬಿಂಬಿತವಾಗುತ್ತದೆ. ಎರಡನೆಯ ಮಗ ಆಸ್ತಿ ಬಗ್ಗೆ ಕ್ಯಾತೆ ತೆಗೆದಾಗ:
“ಗಡುಗೇಲಿ ನಾಕು ನೀರು ಕುಡುದು ಮಗನ ದಿಕ್ಕ ಕಣ್ಣ ಮೆಡರಿಸಿ-‘ಕೇಳವ್ನು ನೀಯಾರ?’ ಅಂದಳು. ಸಣ್ಣಯ್ಯ ಕಡ್ಡಿ ಮುರುದಂತೆ ‘ನಾ ಅಕ್ಕುದಾರ’ ಅಂದ. ಸಾಕವ್ವಗೂ ಕಮ್ಮಿ ಕಾನೂನು ಗೊತ್ತಿರಲಿಲ್ಲ. ‘ಏನಂದೆ ಇನ್ನೊಂದ್ಸಲ ಅನ್ನು…ಅಕ್ಕದಾರನಾ ನೀನು? ಹುಟ್ಟುದ್ದು ಹೆಣ್ಣೆಂಗ್ಸಾದರೂ ಗಂಡ್ಸ ಮೀರ್ಸಿ ಕಚ್ಚಕಟಗೊಂಡು ಗೈದು ಸಂಪಾದ್ಸಿವ್ನಿಕನೊ ಭೂಪತಿ. ಆಸ್ತಿ ನನ್ನ ಸ್ವಾರ್ಜತ ಸ್ವಾರ್ಜತ…’ ಅಂದಳು. ಸಣ್ಣಯ್ಯನಿಗೆ ಒಂದು ಚಣ ಅದೂ ದಿಟ ಅನ್ನಿಸಿ ದಿಗುಲುಂಟಾಯ್ತು.”.
ಕುಟುಂಬದ ಯಜಮಾನಿತಿಯಾಗಿ ಸಾಕವ್ವನ ಸ್ವಭಾವವನ್ನು ಸೂಚಿಸುವ ಇನ್ನೊಂದು ಸ್ವಾರಸ್ಯಕರ ವಿವರವನ್ನೂ ಗಮನಿಸಬಹುದು: ಮನೆಮಂದಿಯೇಲ್ಲಾ ಒಟ್ಟಿಗೆ ಕೂತು ಕಡಲೇಕಾಯಿಯ ಊಟ ಮಾಡುತ್ತಿದ್ದಾಗ ಪಕ್ಕದ ಮನೆಯವಳು ಬಂದು ಏನಾದ್ರು ಒಂದಷ್ಟು ಕೊಡಿ ಎಂದು ಕೇಳಿದಾಗ ಸಾಕವ್ವನ ಹಿರಿ ಸೊಸೆ “ಕರಗುತ್ತಿದ್ದ ಕಡಲಕಾಯ ಗುಡ್ಡದಿಂದ ಸೆರಗ್ಗ ನಾಕು ಬೊಗ್ಯಸ ಹಾಕ್ಕೊಂಡು ಎದ್ದಳು. ಸಾಕವ್ವ ಕೈಸನ್ನೆ ಮಾಡಿ ಸೊಸೆ ಕರೆದು ಅವಳ ಮಡ್ಳಿಂದ ಒಂದು ಬೊಗಸ ತಗದು ಗುಡ್ಡಕ್ಕಾಕಿದಳು”.
ಇರವಿನಲ್ಲೇ ಸಹಜವಾಗಿ, ಅದಮ್ಯವಾಗಿ, ಇರುವ ಶಕ್ತಿಯನ್ನು ಅನಾವರಣಗೊಳಿಸುವಂತೆ, “ಒಡಲಾಳ” ಅರಿವಿನಿಂದ ಬರುವ ಹೊಸ ಚೈತನ್ಯವನ್ನೂ ಗುರುತಿಸುತ್ತದೆ. ಸಾಕವ್ವನ ಮೊಮ್ಮಗ ಶಿವೂ ಸ್ಕೂಲಿಗೆ ಹೋಗಲಾರಂಭಿಸಿದ್ದಾನೆ. ಆಧುನಿಕ ವಿದ್ಯಾಭ್ಯಾಸದ ಮೂಲಕ ದಲಿತರ ಭವಿಷ್ಯದ ಒಂದು ಮುಖ್ಯ ಸಾಧ್ಯತೆ ಇಲ್ಲಿ ಕಾಣುತ್ತದೆ. ಈ ಸಾಧ್ಯತೆ ಸಾಕವ್ವನ ಕನಸಿನಲ್ಲಿ ಇನ್ನಷ್ಟು ಉಜ್ವಲವಾಗಿ ಮಿಂಚುತ್ತದೆ. “ದಲಿತರು ಬರುವರು ದಾರಿ ಬಿಡಿ ದಲಿತರ ಕೈಗೆ ರಾಜ್ಯ ಕೊಡಿ” ಎಂಬ ಸಿದ್ದಲಿಂಗಯ್ಯನವರ ಕವಿವಾಣಿಯ ಕಾಲಜ್ಞಾನ ಸಾಕವ್ವನ ಕನಸೂ ಹೌದು. ಮಹಾದೇವರ ಬರವಣಿಗೆಯೂ ಇಲ್ಲಿ ಇನ್ನಷ್ಟು ಕಾವ್ಯಗಂಧಿಯಾಗುತ್ತದೆ; ಕಥನ ವಾಸ್ತವದ ನೆಲೆಯಿಂದ ವಾಸ್ತವೇತರ ನೆಲೆಗೆ ಜಿಗಿದು ಬಿಡುತ್ತದೆ:
‘ನೀ ಇದ್ರ?’
‘ಯಮದೇವರೂ ಓಡೋಯ್ತರ!’
ಶಿವೂಗೆ ಅದನು ತನ್ನ ಕಣ್ಣುಗಳಿಗೆ ತಂದುಕೊಳ್ಳಲು ಸಿಗಲಿಲ್ಲ. ಬೆಪ್ಪುಗಣ್ಣು ಬುಟ್ಟು ನೋಡಿತು. ಸಾಕವ್ವ ಅಂದಳು :
‘ಅವರ್ಗ ಆಲ್ದ ಮರ್ದ ಗಾತ್ರ ಮೀಸ…ದಾರಂದದಗಲ ಹಲ್ಲು…’
‘ಅವು ನಿನ್ನ ಎಳ್ಕೊಂಡೋದ್ರ…’
‘ಅಯ್ ತಗ ತಗಾ…ನನ್ನ್ಯಾಕ ಎಳ್ಕಂಡುವೋದೀರಿ ಮೂದೇವ್ಗಳ…ನಾನೇ ಬತ್ತೀನಿ ನಡೀರಿ ಅಂತೀನಿ’
ಅಮೇಲ…’
‘ಆಮೇಲ ಅವರ್ಗಿಂತ, ಮೊದ್ಲು ನಾನೀಯ ಯಮ ಧರ್ಮರಾಜ್ನ ತವುಕ ವೊಯ್ತೀನಿ…’
ಸಾಕವ್ವನ ಬಾಯಿಂದ ಮಾತುಗಳು ಬರುತ್ತಿದ್ದಂತೆ…ಅವಳ ಸುಕ್ಕಿಂದ ಮಾಡಿದ ಅಲ್ಲಾಡುವ ಚರ್ಮ, ಅವಳ ಮೊಖದ ಹಲ್ಲಿಲ್ಲದ ಬಾಯಿ, ತಲೇಯ ನರಕೂದಲು ಮಾಯವಾದವು. ಸಾಕವ್ವನೊಳಗ ಪುಟಗೌರಿ ಚಿಕ್ಕಿ ಮೂಡಿದಳು.
‘ಯಮ ಧರ್ಮರಾಜ ಏನ್ಮಾಡೀನು…?’
‘ಅವ್ನಾ…ನಮ್ಮ ಹಟ್ಟೀ ಗಾತ್ರದ ಸಿಮ್ಮಾಸನದ ಮೇಲ ಕೂತ್ಕಂಡು…ಯಮದೂತರು ಕರ್ಕ ಬತ್ತಾರಲ್ಲ…ಅವರ್ಗ ಸೀಕ್ಸ ಕೊಡ್ತಾನ…’
‘ಅದ್ಕೂನು ನಿಂಗ ಹೆದ್ರಕ ಇಗಲ್ವಾ…?’
‘ಅಯ್…ನರ ಲೋಕದಲಿ ನಾನು ಪಟ್ಟಂಥ ಕಷ್ಟಕ ಆ ಸೀಕ್ಸ ಎಲ್ಗಾದ್ದು ತಗಾ…ಅವ್ನ ಜೊತೇಲೂ ಅದ್ನೆ ಅಂತೀನಿಕನಾ…’
ಪುಟಗೌರಿ ಚಿಕ್ಕಿಯಾಗಿದ್ದ ಸಾಕವ್ವ ಈಗ ಬಿಳೀ ಸೀರೆ ಉಟ್ಟು ಹಾರಾಡುವ ಕೂದುಲ ಗಾಳೀಗೆ ಬಿಟ್ಟು ಬಳುಕುತ್ತ ದೇವಕನ್ನಿಕ ಆದಳು.
‘ಅವ್ನು ಅದ್ಕೇನಂದನು?’
‘ಅದ್ಕ ಅವ…ಅಯ್ತು ಮುದ್ಕಿ, ನಿನ್ನ ಧೈರಕ ಮೆಚ್ದಿ…ಏನ್ ವರ ಬೇಕು ಕೇಳ್ಕ ಅಂತಾನ.’
ಬಿಳಿ ಸೀರೆ ಉಟ್ಟು ಹಾರಾಡುವ ಕೂದುಲ ಗಾಳೀಗೆ ಬಿಟ್ಟು ಬಳುಕುತ್ತ ದೇವಕನ್ನಿಕೆಯು ತನ್ನ ಕಿರುಬೆರಳಲಿ ಭೂಲೋಕನ ಆಡಿಸತೊಡಗಿದಳು.
‘ವರ ಕೇಳ್ಕ ಅಂದ್ಮೇಲ’
‘ಅದ್ಕ ನಾನು, ನೋಡು ಸ್ವಾಮಿ… ನನ್ನ ಮೊಮ್ಗೂಸು ನರಲೋಕದಲಿ ರಾಜ್ಭಾರ ಮಾಡುವಂಥ ವರಕೊಡು…ಅಷ್ಟು ಸಾಕು ಅಂತೀನಿ.’
ದಲಿತರ ವಿಮೋಚನೆಯ ಮತ್ತೊಂದು ಸಾಧ್ಯತೆ ಬದಲಾಗುತ್ತಿರುವ ಸಾಮಾಜಿಕ ವಾಸ್ತವತೆಯಲ್ಲಿ ಸೂಚಿತವಾಗುತ್ತದೆ. ಗುರುಸಿದ್ದುನ ಮಾತುಗಳಲ್ಲಿ ಅದು ವ್ಯಕ್ತವಾಗುತ್ತದೆ:
“ಅಣ್ಣೊ ನೆನ್ನೆ ತಗಡೂರ್ಗ ವೋಗಿದ್ದಿ. ಅಲ್ಲಿ ನಮ್ಮವರು ಸಿವಬಸಪ್ನ ಹೋಟಲ್ಗ ನುಗ್ಗುದ್ದೂ ಅಂದ್ರ…ಸಿವಸಿವಾ ಆಪಾಟಿ ಜನ…ನಾವೇನ ಕಾಸ ಕೊಟ್ಟವೊ ಕಲ್ಲ ಕೊಟ್ಟವೊ ಕಾಪಿ ತಿಂಡಿ ಕೊಡ್ರಿ ಅನ್ನೋರು. ಸಿವಬಸಪ್ಪ ಅನ್ನೋವ ಬೆವುತೋದ. ಆಮೇಲ ಪೊಲೀಸ್ನವರು ಇಳುದ್ರು. ನಾವು ಕೊಡ್ಸತೀವಿ ಸುಮ್ನಿರಿ ಸುಮ್ನಿರಿ ಅನ್ನೋರು. ಜನ ಅನ್ನೋದು ಪೋಜು ನೋಡೊ ಥರ ನಿಂತಿರೋದು. ತಕ್ಕಳಪ್ಪ, ನಾನ್ಯಾಕ ಸುಮ್ಕಿರೋದು ಅಂದುಬುಟ್ಟು ನಾನೂವಿ ಕಾಸ ಬಿಸಾಕಿ ‘ ದೋಸ ಟೀ ಕೊಡ್ರಿ’ ಅಂದೆ. ಸಿವಬಸಪ್ಪ ಅನ್ನೋನು ನನ್ನೇ ದುರುಗುಟ್ಕಂಡು ನೋಡ್ತ ತಂದ್ಕೊಟ್ಟನು”.
ಸಹಿಷ್ಣುತೆ ಮಾತ್ರ ದಲಿತರ ಏಕ ಮಾತ್ರ ಶಕ್ತಿಯಲ್ಲ. ಅವರ ಸಿಡಿಯಬಲ್ಲ ಶಕ್ತಿಯನ್ನೂ ಕಥೆ ಕಾಣಿಸುತ್ತಿದೆ. ನಮ್ಮ ಸ್ವಾತಂತ್ರ್ಯೋತ್ತರ ಭಾರತವು ಕಟ್ಟಿಕೊಂಡಿರುವ ಸಾಂವಿಧಾನಿಕ ವ್ಯವಸ್ಥೆಯೂ ದಲಿತರ ಹೊಸ ಭರವಸೆ, ಆತ್ಮವಿಶ್ವಾಸಗಳಿಗೆ ಪ್ರೇರಣೆಯಾಗಿರಬಹುದು ಎಂಬ ಸೂಚನೆಯೂ ಇಲ್ಲಿದೆ. ಹಳೆಯ ವ್ಯವಸ್ಥೆಯ ಕ್ರೌರ್ಯದ ನೇರ ಅನುಭವ ಇರುವ ಜನಾಂಗವೊಂದು ಹೊಸ ವ್ಯವಸ್ಥೆ ಯತ್ತ ನಿರೀಕ್ಷೆಯ ನೋಟ ಇಟ್ಟುಕೊಂಡಿದ್ದರೆ ಅದು ಸಹಜವೇ ಆಗಿದೆ. ಆದರೆ “ಒಡಲಾಳ” ಈ ಅಂಶವನ್ನು ಉತ್ಪ್ರೇಕ್ಷಿಸುವುದಿಲ್ಲ. ಪೊಲೀಸು ವ್ಯವಸ್ಥೆಯ ಕ್ರೌರ್ಯವನ್ನೂ ಅದು ದಟ್ಟವಾಗಿ ಚಿತ್ರಿಸಿದೆ. ಅಷ್ಟೇ ಅಲ್ಲ; ಪೊಲೀಸು ದಬ್ಬಾಳಿಕೆಯನ್ನೂ ಎಚ್ಚೆತ್ತ ದಲಿತ ಸಹಿಸುವುದಿಲ್ಲ ಎಂಬ ಸೂಚನೆಯೂ ಕಥೆಯಲ್ಲಿ ಸ್ಪಷ್ಟವಾಗಿಯೇ ಇದೆ:
“ಇನ್ಸ್ಪೆಕ್ಟರ ರೂಲುಗೋಲು ಪುಟಗೌರಿ ಗಲ್ಲವನ್ನು ಸವರುತ್ತಿತ್ತು. ಪುಟಗೌರಿ ಮಾತುಗಳು ಹೊಟ್ಟ ಒಳ್ಗ ಅವುತುಕೊಳ್ಳುತ್ತಿದ್ದವು. ಗುರುಸಿದ್ದು ಇನ್ಸ್ಪೆಕ್ಟರ ದುರುಗುಟ್ಟಿ ನೋಡುತ್ತಿದ್ದನು. ಸಾಹೇಬರು ರೂಲುಗೋಲನ್ನು ಪುಟಗೌರಿ ಗಲ್ಲದಿಂದ ತಗುದು ಗುರುಸಿದ್ದೂನ ಕಣ್ದಿಕ್ಕ ಚಾಚಿ ‘ಮಗ ನೋಡದ್ ನೋಡು ನೋಡದ, ಕಣ್ಗುಡ್ಡೆ ಮೀಟಾಕ್ತೀನಿ ಹೇ’ ಎಂದು ಹಲ್ಲ ನೊರುಗುಟ್ಟಿದರು. ಗುರುಸಿದ್ದೂ ನೋಟಕ್ಕೆ ಸಾಹೇಬರ ಒಂದೆರಡು ರೋಮಗಳು ಅಳುಕುಪಟ್ಟಿದ್ದವು.”
ಸಾಕವ್ವನ ಪಾಲಕ ಶಕ್ತಿ ಮತ್ತು ಕನಸು, ಶಿವೂನ ವಿದ್ಯಾಭಾಸ, ಗುರುಸಿದ್ದುನ ಪ್ರತಿಭಟನೆಗಳ ನೆಲೆಗಳಂತೆ ಪುಟಗೌರಿ ಹಟ್ಟಿಯ ಗೋಡೆಯ ಮೇಲೇ ಬಿಡಿಸುವ ನವಿಲಿನ ಚಿತ್ರವೂ ದಲಿತ ಬದುಕಿನ ಮತ್ತೂ ಒಂದು ಸಾಧ್ಯತೆಯನ್ನು ತೋರುವಂತಿದೆ. ಈ ಸಾಧ್ಯತೆಯನ್ನು ಕಥೆ ಬೇಕೆಂದೇ ವಾಚ್ಯಗೊಳಿಸುವುದಿಲ್ಲ. ಕಡಲೇಕಾಯಿ ಕಳ್ಳರನ್ನು ಹಿಡಿಯಲು ಪೊಲೀಸರು ಸಾಕವ್ವನ ಹಟ್ಟಿಗೆ ನುಗ್ಗಿ ಹಲ್ಲೆ ಮಾಡುತ್ತರಷ್ಟೆ. “ಯಾರ ಜಪ್ತಿಗೂ ಸಿಗದೆ ಗೋಡೆ ಮೇಲಿನ ನವುಲುಗಳು ಕುಣಿಯುತ್ತಿದ್ದವು” ಎಂದು ನವುರಾಗಿ ದಾಖಲಿಸಿ ಲೇಖಕರು ದಲಿತರ ಚೈತನ್ಯದ ಅದಮ್ಯತೆಯನ್ನು ಉನ್ನತೀಕರಿಸುತ್ತಾರೆ. ಮಹಾಶ್ವೇತಾದೇವಿಯವರ “ರುಡಾಲಿ” ಕೆಳ ಜಾತಿ ಹೆಣ್ಣುಮಕ್ಕಳ ಬಡತನದ, ಜೀವನ ಹೋರಾಟದ, ಬವಣೆಯ, ಪರಿಣಾಮಕಾರೀ ಕಥನವಷ್ಟೆ. ಈ ಕತೆಯ ಕೇಂದ್ರ ವ್ಯಕ್ತಿಯಾದ ಶನಿಚರಿಯ ಗುಡಿಸಿಲಿನ ವರ್ಣನೆಯಲ್ಲಿ ಒಂದು ವಾಕ್ಯ ಸೇರಿಕೊಳ್ಳುತ್ತದೆ: “ಅವಳು ಗೋಡೆಗಳನ್ನು ಬಣ್ಣ ಬಣ್ಣದ ಚಿತ್ತಾರಗಳಿಂದ ಅಲಂಕರಿಸಿದ್ದಳು.” ಈ ವಾಕ್ಯ ಎಲ್ಲ ಕಷ್ಟ ಕಾರ್ಪಣ್ಯಗಳ ಮಧ್ಯೆಯೂ ಮಿನುಗುವ ಜೀವಶಕ್ತಿಯನ್ನು ಹೊಳೆಯಿಸುವ ಹಾಗೆ “ಒಡಲಾಳ”ದ ನವಿಲಿನ ಚಿತ್ರವು ಇಡಿ ಹಟ್ಟಿಯ ಇರುವಿಕೆಗೇ ಒಂದು ವಿಶಿಷ್ಟವಾದ ಶೋಭೆಯನ್ನು ತಂದುಬಿಡುತ್ತದೆ. ಶಿವರಾಮ ಕಾರಂತರು ತಮ್ಮ “ಚೋಮನ ದುಡಿ”ಯಲ್ಲಿ ಚೋಮನ ಕೈಗೆ ಒಂದು ದುಡಿಯನ್ನು, “ಮರಳಿ ಮಣ್ಣಿಗೆ”ಯಲ್ಲಿ ರಾಮನ ಕೈಗೆ ಒಂದು ಪಿಟೀಲನ್ನು ಕೊಡುವುದರ ಮೂಲಕ ಆ ಪಾತ್ರಗಳ ಬಡತನದ ಆಚೆಗೂ ಇರುವ ಹೊರಚಾಚುಗಳನ್ನು ಸ್ಪರ್ಶಿಸುವ ಉಪಕ್ರಮಗಳನ್ನೂ ಇಲ್ಲಿ ನೆನೆಯಬಹುದಾಗಿದೆ.