ಹಿಂದೆ ನಾನು ಹಲವು ಬಾರಿ ಹೇಳಿದ್ದರೂ ಮತ್ತೆ ಮತ್ತೆ ಪ್ರಸ್ತುತವಾಗುವ ಚಲವಾದಿ ಮಾದೇಗೌಡನ ಮಾತು ನೆನಪಿಗೆ ಬರುತ್ತದೆ. ಇವನು ಬಿಳಿಗಿರಿರಂಗನಬೆಟ್ಟದ ಎರಕನಗದ್ದೆ ಪೋಡಿನ ಯಜಮಾನನಾಗಿದ್ದ. ಕುಗ್ಗುತ್ತಿರುವ ನಮ್ಮ ಕಾಡುಗಳನ್ನು ಮತ್ತೆ ಬೆಳೆಸುವುದು ಹೇಗೆ ಎಂದು ಚಿಂತಿತನಾದ ನಾನು ‘ನಮ್ಮ ಕಾಡು ಸಾಕಷ್ಟು ನಾಶವಾಗಿದೆಯಲ್ಲ ಗೌಡ್ರೆ, ಅದನ್ನ ಮತ್ತೆ ಬೆಳೆಸೋದ್ ಹೇಗೆ’ ಎಂದು ಕೇಳಿದ್ದೆ. ಹಿಂದೆ ನಾನು ಹಲವು ಬಾರಿ ಹೇಳಿದ್ದರೂ ಮತ್ತೆ ಮತ್ತೆ ಪ್ರಸ್ತುತವಾಗುವ ಚಲವಾದಿ ಮಾದೇಗೌಡನ ಮಾತು ನೆನಪಿಗೆ ಬರುತ್ತದೆ. ಇವನು ಬಿಳಿಗಿರಿರಂಗನಬೆಟ್ಟದ ಎರಕನಗದ್ದೆ ಪೋಡಿನ ಯಜಮಾನನಾಗಿದ್ದ. ಕುಗ್ಗುತ್ತಿರುವ ನಮ್ಮ ಕಾಡುಗಳನ್ನು ಮತ್ತೆ ಬೆಳೆಸುವುದು ಹೇಗೆ ಎಂದು ಚಿಂತಿತನಾದ ನಾನು ‘ನಮ್ಮ ಕಾಡು ಸಾಕಷ್ಟು ನಾಶವಾಗಿದೆಯಲ್ಲ ಗೌಡ್ರೆ, ಅದನ್ನ ಮತ್ತೆ ಬೆಳೆಸೋದ್ ಹೇಗೆ’ ಎಂದು ಕೇಳಿದ್ದೆ.‘ಅಲ್ಲಾ ಸ್ವಾಮಿ, ಕಾಡನ್ನ ಯಾರಾದ್ರು ನೀರು ಹಾಕಿ ಬೆಳೆಸಕ್ಕಾಗುತ್ತ, ನೀವು ಆ ಕಡೆ ಹೋಗ್ದೇ ಇದ್ರೆ ಸಾಕು, ಕಾಡು ತಾನೇ ಬೆಳೆಯುತ್ತೆ’ ಎಂದು ಹೇಳಿದ್ದ. ಆಗ ಕಾಡಿನ ಒಂದಲ್ಲ ಒಂದು ಭಾಗಕ್ಕೆ ಬೆಂಕಿ ಬಿದ್ದು ಸುಟ್ಟು ಭಸ್ಮವಾಗುತ್ತಾ ಇತ್ತು. ಮತ್ತೆ ಮಳೆಗಾಲದಲ್ಲಿ ಮರಗಳು ಚಿಗುರೊಡೆದು ಹೂವಿನಿಂದ ತುಂಬಿ ತುಳುಕುತ್ತಿದ್ದವು. ಜೇನುತುಪ್ಪ-ನೆಲ್ಲಿಕಾಯಿಗಳು ಕಾಡಿನಲ್ಲಿ ಎಲ್ಲೆಂದರಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದವು.
ನೆಲ್ಲಿಕಾಯಿ ಮರಗಳ ಮೇಲೆ ಹಿಂದೆ ಅಪರೂಪವಾಗಿ ಕಂಡು ಬರುತ್ತಿದ್ದ ಪರಾವಲಂಬಿ ‘ಉಪ್ಪಿಲು’ ಸಸ್ಯಗಳು (Taxillus tomentosus) ಈಗ ಎಲ್ಲಾ ನೆಲ್ಲಿಮರಗಳಿಗೂ ಹರಡಿ ಅವುಗಳನ್ನು ನಾಶ ಮಾಡಿವೆ. ಕ್ರಮೇಣ ಈ ಪರಾವಲಂಬಿಗಳು ಕಾಡಿನ ಇತರ ಮರಗಳನ್ನು ಆಕ್ರಮಿಸುತ್ತಿವೆ. ಜೊತೆಗೆ ಲಂಟಾನ ಗಿಡಗಳು ಕಾಡಿನ ನೆಲವನ್ನೆಲ್ಲ ವ್ಯಾಪಿಸಿಕೊಂಡು ಹುಲ್ಲು ಕೂಡ ತಲೆ ಎತ್ತದಂತೆ ಪೊದೆಯಾಗಿ ಬೆಳೆದಿವೆ. ಹಾಗಾಗಿ ಆನೆ, ಕಾಡೆಮ್ಮೆಗಳಿಗೂ ಕಾಡಿನಲ್ಲಿ ಮೇವಿಲ್ಲ. ದಕ್ಷಿಣ ಅಮೆರಿಕ ಮೂಲದ ಲಂಟಾನ 1800ರಲ್ಲಿ, ಅಂದರೆ ಸುಮಾರು ಇನ್ನೂರು ವರ್ಷಗಳ ಹಿಂದೆ ಭಾರತಕ್ಕೆ ಬಂದಿತು. ಲಂಟಾನ ಹೂವುಗಳಲ್ಲಿ ಬೇಕಾದಷ್ಟು ಮಕರಂದವಿದ್ದರೂ ಅತಿ ಕಿರಿದಾದ ಈ ಹೂವುಗಳಿಂದ ಜೇನುಗಳು ಮಕರಂದವನ್ನು ಸಂಗ್ರಹಿಸಲಾರವು. ಲಂಟಾನದ ಉಪಟಳದಿಂದಾಗಿ ಸ್ಥಳೀಯ ಸಸ್ಯಜಾತಿಗಳು ತಲೆ ಎತ್ತಿ ಹೂವುಗಳನ್ನು ಅರಳಿಸಲಾರದೆ ನೆಲದಲ್ಲೇ ಮುರುಟಿಹೋಗಿವೆ. ಹಾಗಾಗಿ ಈಗ ಹೂವೂ ಇಲ್ಲ ಜೇನೂ ಇಲ್ಲ ಎಂಬ ಪರಿಸ್ಥಿತಿ ಬಂದಿದೆ. ಸುಮಾರು ಇನ್ನೂರು ವರ್ಷಗಳ ಕಾಲ ತಂಟೆ ತಕರಾರಿಲ್ಲದೆ ಬೆಳೆಯುತ್ತಿದ್ದ ಲಂಟಾನ ಈಗ ಮಿತಿಮೀರಿ ಬೆಳೆದು ತೊಂದರೆ ಕೊಡುತ್ತಿರುವುದೇಕೆ?
ಬಿಳಿಗಿರಿರಂಗನ ಬೆಟ್ಟದ ‘ಎಟ್ರೀ’ ಸಂಸ್ಥೆಯ ವಿಜ್ಞಾನಿಗಳ ಪ್ರಕಾರ 1997ರಲ್ಲಿ ಈ ಬೆಟ್ಟದ ಕಾಡಿನ ಶೇಕಡ 40 ಭಾಗವನ್ನು ಲಂಟಾನ ಆಕ್ರಮಿಸಿಕೊಂಡಿತ್ತು. 2008ರ ಅಧ್ಯಯನದ ಪ್ರಕಾರ ಶೇಕಡ 80 ಭಾಗ ಕಾಡನ್ನು ಲಂಟಾನ ಆಕ್ರಮಿಸಿಕೊಂಡಿದೆ. ಕಾಡಿಗೆ ರಕ್ಷಣೆ ನೀಡಿ ಹಳೆ ಸಮಸ್ಯೆಗಳನ್ನು ಪರಿಹರಿಸಿಕೊಂಡಂತೆಲ್ಲಾ ಅಪರಿಹಾರ್ಯವಾದ ಹೊಸ ಸಮಸ್ಯೆಗಳು ತಲೆ ಎತ್ತುತ್ತಿವೆಯಲ್ಲ, ಹೀಗೇಕೆ? ಈ ಕುರಿತಾಗಿ ಬಿಳಿಗಿರಿರಂಗನ ಬೆಟ್ಟದ ಕಾರನಕೇತನಗೌಡನ ಬಳಿ ಚರ್ಚೆ ಮಾಡಿದೆ. ‘ಅದೇನ್ ಸಂಸೋಧನೆ ಮಾಡ್ತಿರೋ, ನನ್ ಸಂಸೋಧನೆನೂ ಲೆಕ್ಕಕ್ ತಗೊಳ್ಳಿ ಸ್ವಾಮಿ’ ಎಂದ. ಅವನ ಪ್ರಕಾರ, ಬೆಂಕಿ ಬಿದ್ದು ಸುಟ್ಟು ಹೋದ ಕಾಡಿನ ಒಂದು ಚದರ ಮೀಟರ್ ನೆಲದಲ್ಲಿ ಹದಿನೇಳು ಬೇರೆಬೇರೆ ಜಾತಿ ಮರದ ಸಸಿಗಳು ಹುಟ್ಟಿರುವುದನ್ನು ಅವನು ಎಣಿಸಿದ್ದಾನೆ. ‘ಹೀಗೆ ಬೆಂಕಿ ಬೀಳ್ದೇ ಇದ್ದಿದ್ರೆ ಬರೀ ಲಂಟಾನ ಮೆದೆಯೇ ಮುಚ್ಚಿಕೊಂಡಿರ್ತಿತ್ತು ತಾನೆ’ ಎಂಬುದು ಅವನ ಪ್ರಶ್ನೆ.
ಮರಗಳ ಹೊಸ ಪೀಳಿಗೆಯ ಸಸಿಗಳು ಕಾಣದಿರುವುದು ಇವನಿಗೆ ಅತ್ಯಂತ ಆತಂಕದ ಸಂಗತಿ. ಕಾಲೇಜು ಓದಿದ ನಮ್ಮಂತಹ ಮಂದಿಗೆ ಇದು ಅರ್ಥವಾಗುತ್ತಿಲ್ಲ ಎಂದು ಮತ್ತೆ ತಿಳಿಯ ಹೇಳಿದ. ‘ಮರದ ಬೀಜಗಳು ಮಣ್ಣನ್ನ ಮುಟ್ಟೊಕ್ಕೇ ಆಗ್ತಾ ಇಲ್ಲ ಸ್ವಾಮಿ, ಅವು ಲಂಟಾನ ಪೊದೆ ಮೇಲೆ, ಎಲೆ ಹೊದರಿನ ಮೇಲೆ ಬಿದ್ದು ಅಲ್ಲೇ ಸಾಯ್ತ ಇವೆ. ಮಣ್ಣೊಳಗೆ ಹೂತ್ಕೊಂಡು, ವರ್ಷಗಟ್ಟಲೆ ಮಣ್ಣೊಳಗೆ ಮಲಗಿ ಆಮೇಲೆ ಮೊಳಕೆ ಒಡೀತಾವೆ ಸ್ವಾಮಿ; ಅದೇನು ಬಿನೀಸ್ ಬೀಜ ಕೆಟ್ಟೊಯ್ತ ಇವತ್ತು ನೆಟ್ಟರೆ ನಾಳೆ ಮೊಳಕೆ ಬರೋಕೆ’ ಎಂದ.ಆದರೆ ಇವನ ಮಾತಿನ ಇಂಗಿತಾರ್ಥ ನನಗೆ ಸ್ವಲ್ಪ ಗಾಬರಿ ಹುಟ್ಟಿಸಿತು. ‘ಅಲ್ಲಯ್ಯ ನಿನ್ ಮಾತ್ ಕಟ್ಕೊಂಡ್ ಕಾಡಿಗೆ ಬೆಂಕಿ ಹಾಕ್ಬೇಕ’ ಎಂದೆ. ಅವನ ಪ್ರಕಾರ ‘ತರಗು ಬೆಂಕಿ’ ಬಿದ್ದರೆ ಬೆಳೆದು ನಿಂತ ಮರಗಳಿಗೆ ಅಪಾಯವಿಲ್ಲ. ಒಣ ಹುಲ್ಲು- ತರಗೆಲೆಯನ್ನು ಮಾತ್ರ ಅದು ಸುಡುತ್ತದೆ. ಆದರೆ ಈಗ ಲಂಟಾನ ಪೊದೆಗಳು ಬಳ್ಳಿಗಳ ಹಾಗೆ ಮರದೆತ್ತರಕ್ಕೂ ದಟ್ಟವಾಗಿ ಬೆಳೆದು ನಿಂತಿವೆ.
ಕಾಡಿಗೆ ಈಗೇನಾದರೂ ಬೆಂಕಿ ಬಿದ್ದರೆ ದೊಡ್ಡ ದೊಡ್ಡ ಮರಗಳೂ ಸುಟ್ಟು ಕರಕಲಾಗಬಹುದು, ಕಾಡೇ ನಾಶವಾಗಬಹುದು. ಇದನ್ನು ವಿವರಿಸಿ ಕೇಳಿದ ‘ನೀವು ರಕ್ಸಣೆ, ರಕ್ಸಣೆ ಅಂತ ರಕ್ಸಣೆ ಮಾಡಿದ್ರಲ್ಲ ಈಗೇನ್ ಮಾಡ್ತೀರ ಸ್ವಾಮಿ’ ಎಂದ. ನಮ್ಮ ಸಂರಕ್ಷಣೆಯೇ ಕಾಡಿಗೆ ಮುಳುವಾಗುತ್ತಿದೆಯೇ ಎಂಬ ಅನುಮಾನ ನನ್ನನ್ನೂ ಕಾಡತೊಡಗಿತು. ಈ ಪ್ರಶ್ನೆಗಳಿಂದಾಗಿ ಮತ್ತಷ್ಟು ಸಂಶೋಧನೆಗಳು ನಡೆಯುತ್ತವೆ. ಈ ಸಂಶೋಧನೆಗಳ ಫಲಶ್ರುತಿ ಎಂದರೆ ಅವು ಸಮಸ್ಯೆಯ ಸ್ವರೂಪವನ್ನು ಕರಾರುವಾಕ್ಕಾಗಿ ವರ್ಣಿಸುತ್ತವೆ. ಆದರೆ ಪರಿಹಾರ? ಸದ್ಯಕ್ಕಂತೂ ಯಾವ ಪರಿಹಾರವೂ ಕಾಣಿಸುತ್ತಿಲ್ಲ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕೆಂಬ ಕಾಳಜಿ ನಗರವಾಸಿಗಳಿಗಂತೂ ಇಲ್ಲ. ಅಥವಾ ಪ್ರವಾಸೋದ್ಯಮ- ರೆಸಾರ್ಟ್ಗಳನ್ನೇ ಮುಖ್ಯ ಎಂದು ಭಾವಿಸುವ ಸರ್ಕಾರಕ್ಕೂ ಬೇಕಾಗಿಲ್ಲ. ಪರಿಹಾರಕ್ಕಾಗಿ ಚಡಪಡಿಸುತ್ತಿರುವವರು ಎಂದರೆ ನಮ್ಮ ಸೋಲಿಗ ಗಿರಿಜನರು.
ಸೋಲಿಗರ ಬೊಮ್ಮ ಹೇಳುತ್ತಾನೆ ‘ಸ್ವಾಮಿ ನೀವು ಕಾಡು ಕಾಪಾಡ್ತೀನಿ, ಕಾಡು ಕಾಪಾಡ್ತೀನಿ ಅಂತ ನಮ್ಮನ್ನೂ ಕಾಡಲ್ಲಿ ಓಡಾಡ್ದಂಗ್ ಮಾಡಿದ್ರಿ. ಈಗ ಕಾಡು ಏನಾಗಿದೆ ನೋಡಿ, ಗಿರಿಜನರಿದ್ರೆ ಕಾಡು ಹಾಳಾಗುತ್ತೆ, ಕಾಡು ಪ್ರಾಣಿಗಳಿಗೆ ತೊಂದರೆ ಆಗುತ್ತೆ ಅಂತೀರ’. ಇವನ ಪ್ರಶ್ನೆಗಳಿಗೆ ಉತ್ತರಿಸಬಲ್ಲ ನೈತಿಕ ಧೈರ್ಯ ನಮಗಾರಿಗೂ ಇಲ್ಲ. ಇದು ಬಿಳಿಗಿರಿರಂಗನ ಬೆಟ್ಟದ ಕಾಡುಗಳ ಕಥೆಯಾದರೆ ನಾಗರಹೊಳೆ- ಕೊಡಗಿನ ಕಾಡುಗಳ ಅವಸ್ಥೆಯನ್ನು ಅಲ್ಲಿಯ ಗಿರಿಜನರಾದ ಜೇನುಕುರುಬರು, ಬೆಟ್ಟಕುರುಬರು ಅಥವಾ ಎರವರ ಬಾಯಿಂದ ಕೇಳಬೇಕು. ಮಳೆಯ ಅಭಾವದಿಂದ ಕಾವೇರಿಯಲ್ಲಿ ನೀರಿಲ್ಲ ಎಂಬುದು ನಿಜವಾದರೂ ಅದರ ಉಗಮ ಸ್ಥಾನದಲ್ಲಿ ಪರಿಸ್ಥಿತಿ ಹೇಗಿದೆ ಎಂದು ತಿಳಿಯಬೇಕೆಂದು ಅ.ನ.ಯಲ್ಲಪ್ಪ ರೆಡ್ಡಿಯವರು ಆ ಪ್ರದೇಶದ ಗಿರಿಜನರನ್ನೆಲ್ಲ ಸೇರಿಸಿ ಚರ್ಚೆ ಮಾಡಿದರು.
ಗಿರಿಜನರೆಲ್ಲ ಒಕ್ಕೂರಲಿನಿಂದ ಹೇಳುವ ಮಾತೆಂದರೆ: ನಾಗರಹೊಳೆ- ಕೊಡಗು ಕಾಡುಗಳಲ್ಲಿ ಲಕ್ಷಾಂತರ ಜಲಮೂಲಗಳು ಇದ್ದವು. ದಿನಕಳೆದಂತೆ ಅವು ಬರಿದಾಗುತ್ತಾ ಇವೆ. ಇದಕ್ಕೆ ಇರಬಹುದಾದ ಕಾರಣವನ್ನು ಅವರು ತಮ್ಮ ಅನುಭವದಿಂದಲೇ ಹೇಳುತ್ತಾರೆ. ‘ಹಿಂದೆ ಬೇಸಿಗೆಯಲ್ಲಿ ನಾಗರಹೊಳೆ ನದಿಯ ಮರಳನ್ನು ಬಗೆದರೆ ನಮಗೆ ಕುಡಿಯೋಕ್ಕೆ ನೀರು ಸಿಗ್ತಾ ಇತ್ತು. ಈಗ ಸಿಗೊಲ್ಲ ಏಕೆ? ಈಗ ಕಾಡಿನಲ್ಲಿ ನೆರಳು ಕಡಿಮೆಯಾಗ್ತಾ ಇದೆ’ ಎನ್ನುತ್ತಾನೆ ಸೋಮಯ್ಯ.
ಅಷ್ಟೇ ಅಲ್ಲ, ಕಾಡಿನ ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ತೇಗದ ಮರದ ಪ್ಲಾಂಟೇಶನ್ ಬೆಳೆಸಲಾಗಿದೆ. ‘ಹೀಗೆ ಒಂದೇ ಜಾತಿಯ ಮರಗಳಿದ್ದರೆ ನೀರು ಭೂಮಿಯ ಒಳಗೆ ಇಂಗುವುದಿಲ್ಲ. ಇದೇ ಸ್ಥಳದಲ್ಲಿ ಬೇರೆ ಬೇರೆ ಜಾತಿಯ ಮರಗಳಿದ್ದರೆ, ಸಣ್ಣಪುಟ್ಟ ಗಿಡಗಳು ಬೆಳೆದಿದ್ದರೆ ಆ ಸಸ್ಯಗಳ ಬೇರಿನ ಜಾಡು ಹಿಡಿದು ಭೂಮಿಯಲ್ಲಿ ನೀರು ಇಂಗ್ತಾ ಇತ್ತು’ ಎನ್ನುತ್ತಾನೆ ನಾಗರಹೊಳೆಯ ರಾಜು. ನಾಗರಹೊಳೆ ಗಿರಿಜನರ ಪ್ರಕಾರ, ಕಾಡಿನಲ್ಲಿ ಎಲ್ಲೆಂದರಲ್ಲಿ ನೀರು ಸಿಗುತ್ತಾ ಇತ್ತು. ಚಾಪೆಹುಲ್ಲು ಬೆಳೆದ ಜೌಗು ಪ್ರದೇಶದಲ್ಲಂತೂ ಖಡಾಖಂಡಿತವಾಗಿ ನೀರು ಸಿಗುತ್ತಾ ಇತ್ತು. ಆದರೆ ಈಗ ಚಾಪೆ ಹುಲ್ಲನ್ನು ಕೊಯ್ದು ನಗರಗಳಿಗೆ ಸಾಗಿಸಲಾಗಿದೆ. ಹುಲ್ಲಿನ ಜೊತೆ ನೀರು ಕೂಡ ಮಾಯವಾಗಿದೆ.
ಇನ್ನು ಕೊಡಗಿನ ಕಾಡುಗಳ ಸಂರಕ್ಷಣೆಯ ಬಗ್ಗೆ ಮಾತನಾಡುವುದೇ ಕಷ್ಟ. ಸರ್ಕಾರಕ್ಕಾಗಲಿ ಅಲ್ಲಿಯ ಜನರಿಗಾಗಲಿ ಪ್ರವಾಸೋದ್ಯಮದಿಂದ ಹರಿಯುತ್ತಿರುವ ಹಣದ ಹೊಳೆ ಕಾವೇರಿಗಿಂತ ಮುಖ್ಯವಾಗಿದೆ. ಸಂದರ್ಶನವೊಂದರಲ್ಲಿ ಅಲ್ಲಿಯ ಜಿಲ್ಲಾಧಿಕಾರಿ ಪ್ರವಾಸೋದ್ಯಮದಿಂದ ಹೆಚ್ಚಾಗಿರುವ ಆದಾಯವನ್ನು ಸಂಭ್ರಮದಿಂದ ವರ್ಣಿಸುತ್ತಾರೆ; ಆದರೆ ಕಾವೇರಿ ಮಾಲಿನ್ಯದ ಬಗ್ಗೆ ಯಾವುದೇ ಆತಂಕವೂ ಇಲ್ಲ, ಅದನ್ನು ನಿಯಂತ್ರಿಸುವ ಉದ್ದೇಶವೂ ಇಲ್ಲ.ಕುಡಿಯರ ಮುತ್ತಪ್ಪ ಹೇಳುತ್ತಾನೆ ‘ಕೊಡಗಿನಲ್ಲಿ ಸ್ವಾಭಾವಿಕವಾಗಿ ನೀರು ನಿಲ್ಲುವ ಸ್ಥಳದಲ್ಲಿ ಭತ್ತ ಬೆಳೆಯುತ್ತಿದ್ದರು. ಹೀಗೆ ನೀರು ನಿಂತಾಗ ನಿಧಾನವಾಗಿ ಭೂಮಿಯ ಒಳಗೆ ನೀರು ಇಂಗುತ್ತಿತ್ತು. ಹೀಗೆ ಇಂಗಿದ ನೀರು ಮತ್ತೊಂದು ಭಾಗದಿಂದ ಬಸಿದು ಹೊರಬರುತ್ತಿತ್ತು. ಬೇಸಿಗೆಯಲ್ಲಿ ಕಾವೇರಿ ನೀರು ಹರಿಯೋದು ಹೀಗೆ. ಆದರೆ ಈ ಜನ ನಾಲ್ಕು ಕಾಸು ಹೆಚ್ಚು ಸಿಗುತ್ತೆ ಅಂತ ಭತ್ತ ಬೆಳೆಯೋ ಭೂಮಿಯಲ್ಲಿ ಶುಂಠಿ ಬೆಳೀತಿದ್ದಾರೆ. ನೀರು ಬಸಿದು ಹರಿದು ಹೋಗುವಂತೆ ಮಾಡಿದ್ದಾರೆ. ಹೀಗೇ ಆದರೆ ಮುಂದೆ ಮಳೆಗಾಲದಲ್ಲಿ ಮಾತ್ರ ಕಾವೇರಿ ನದಿ ನೋಡ್ಬೇಕಾಗುತ್ತೆ’.
ಮುತ್ತಪ್ಪನ ಮತ್ತೊಂದು ಸಲಹೆ ಎಂದರೆ ‘ತಡಿಯಂಡಿ ಮೋಳ್’ ಎಂಬ ಕೊಡಗಿನ ಬೆಟ್ಟಗಳಲ್ಲಿ ಧಾರಾಕಾರವಾಗಿ ಹರಿಯುವ ಐದು ಸಾವಿರ ಜಲಮೂಲಗಳಿವೆ. ಇವುಗಳಲ್ಲಿ ಬಹುಪಾಲು ಕಾವೇರಿಯನ್ನು ಕೂಡಿಕೊಳ್ಳದೆ ವ್ಯರ್ಥವಾಗಿ ಬೇರೆ ದಿಕ್ಕು ಹಿಡಿದು ಹರಿದು ಹೋಗುತ್ತಿವೆ. ಇವುಗಳನ್ನು ಕಾವೇರಿ ಕಡೆಗೆ ತಿರುಗಿಸಿ ನಮ್ಮ ಕಾವೇರಿಯ ನೀರನ್ನು ಹೆಚ್ಚಿಸಿಕೊಳ್ಳಬಹುದು. ಇದರ ಸಾಧ್ಯಾಸಾಧ್ಯತೆಗಳನ್ನು ವಿಜ್ಞಾನಿಗಳು, ಅಧಿಕಾರಿಗಳು ಪರಿಶೀಲಿಸಬೇಕು. ಗಿರಿಜನರು ಎತ್ತುತ್ತಿರುವ ಈ ಪ್ರಶ್ನೆಗಳು ನಮ್ಮ ಪುಸ್ತಕ ಆಧಾರಿತ ಸಂರಕ್ಷಣೆಯ ಪಾಠಗಳಿಗಿಂತ ಭಿನ್ನವಾಗಿವೆ. ಈ ಗಿರಿಜನರ ಜ್ಞಾನವನ್ನು ನಾವು ಸ್ವಲ್ಪವೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಯಲ್ಲಪ್ಪ ರೆಡ್ಡಿಯವರ ದುಗುಡ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಮೊದಲು ನಾಗರಿಕರಾದ ನಾವು ಎಚ್ಚೆತ್ತುಕೊಳ್ಳುವುದು ಒಳಿತು.