ನನ್ನ ಬರವಣಿಗೆಯಲ್ಲಿ ನಾನೆಲ್ಲಿದ್ದೇನೆ?-ದೇವನೂರ ಮಹಾದೇವ
[ದೇವನೂರ ಮಹಾದೇವ ಅವರು ತಮ್ಮ ಬರವಣಿಗೆಯ ಕುರಿತು 1991ರ ‘ಸಂವಾದ ಸಾಹಿತ್ಯ ಪತ್ರಿಕೆ’ಯ 19ನೇ ಸಂಚಿಕೆಯಲ್ಲಿ ದಾಖಲಿಸಿರುವುದು ‘ಎದೆಗೆ ಬಿದ್ದ ಅಕ್ಷರ’ ಕೃತಿಯಲ್ಲೂ ಸಂಯೋಜಿತವಾಗಿದೆ. ಆ ಟಿಪ್ಪಣಿ ನಮ್ಮ ಮರು ಓದಿಗಾಗಿ …]
ನಾನೊಬ್ಬ ಬರಹಗಾರ ಎಂದುಕೊಂಡಾಗ ನನಗೆ ಎರಡು ಕಥೆಗಳು ಮನಸ್ಸಿಗೆ ಬರುತ್ತವೆ. ಒಂದು, ಕ್ರ್ರಿಸ್ತ ಪೂರ್ವದಲ್ಲಿದ್ದ ಆದಿನಾಥನೆಂಬ ಜೈನ ದೊರೆಯದ್ದು. ಆತ ಒಂದು ಬೆಳಿಗ್ಗೆ ಎದ್ದು ನೋಡುತ್ತಾನೆ, ಅವನ ತಲೆಯ ಒಂದು ಕೂದಲು ನೆರೆತಿದೆ. ಅವನಿಗೆ ತಕ್ಷಣವೇ ಬದುಕಿನ ಕ್ಷಣಿಕತೆಯ, ಹುಟ್ಟು-ಸಾವು, ಎಲ್ಲದರ ದರ್ಶನವಾಯಿತು. ಅವನು ರಾಜ್ಯ, ಕೋಶ ಎಲ್ಲ ಬಿಟ್ಟು ತಪಸ್ಸು ಮಾಡಲು ಕಾಡಿಗೆ ಹೊರಟು ಹೋದ.
ಇನ್ನೊಂದು, ಸುಮಾರು ನನ್ನ ಥರದ ಮನುಷ್ಯನಿಗೆ ಸಂಬಂಧಿಸಿದ್ದು, ಅವನು ಒಂದು ದಿನ ನದಿಯೊಂದರಲ್ಲಿ ನೀರು ಕುಡಿಯುತ್ತಿದ್ದಾಗ ಅವನ ಬೊಗಸೆಯಲ್ಲಿ ಒಂದು ಉದ್ದನೆಯ ಕೂದಲು ಕಂಡಿತು. ತಕ್ಷಣ ಅವನ ಕಣ್ಮುಂದೆ ಒಬ್ಬ ಸುಂದರ ಹೆಣ್ಣಿನ ರೂಪ ಮೂಡಿತು. ಈ ಕೂದಲೇ ಇಷ್ಟೊಂದು ಮೋಹಕವಾಗಿರುವಾಗ ಈ ಕೂದಲನ್ನು ಪಡೆದ ಹೆಣ್ಣು ಇನ್ನೆಷ್ಟು ಚೆಲುವೆಯಾಗಿರಬೇಕು ಎಂದು ಆತ ಯೋಚಿಸಿದ. ಅವನು ಆ ಹೆಣ್ಣನ್ನು ಹುಡುಕಿ ಅವಳ ಒಲವನ್ನು ಗಳಿಸಲು ಹೆಣಗತೊಡಗಿದ.
ನನ್ನ ಬರವಣೆಗೆ ಈ ಎರಡರ ಮಧ್ಯೆ ಇರುವಂತಹುದು.