ಈಡೇರದ ಸಮಾನ ಶಿಕ್ಷಣದ ಆಶಯ-ದೇವನೂರ ಮಹಾದೇವ

        ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ, ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ 23.12.2016 ಶುಕ್ರವಾರ ಆಯೋಜಿಸಿದ್ದ ‘ವಿಶ್ವ ರೈತ ದಿನಾಚರಣೆ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ದೇವನೂರ ಮಹಾದೇವ ಅವರ ಮಾತುಗಳ ಪ್ರಜಾವಾಣಿ ವರದಿ.                                                     p pura

 

 

ಪಾಂಡವಪುರ: ‘ದೇಶದ ಸಂಪತ್ತನ್ನು ಕೆಲವೇ ಕೆಲವು ಮಂದಿ ಲೂಟಿ ಹೊಡೆದು ಅನುಭವಿಸುತ್ತಿದ್ದಾರೆ. ಸಾರ್ವ ಜನಿಕ ಸಂಪತ್ತು ಸಾರ್ವಜನಿಕರಲ್ಲಿಯೇ ಉಳಿದಾಗ ಮಾತ್ರ ಮುಂದಿನ ಪೀಳಿಗೆ ಉಳಿಯಬಲ್ಲದು’ ಎಂದು ಸಾಹಿತಿ ದೇವನೂರ ಮಹಾದೇವ ಹೇಳಿದರು.

ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ, ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ ಶುಕ್ರವಾರ ಆಯೋಜಿಸಿದ್ದ ‘ವಿಶ್ವ ರೈತ ದಿನಾಚರಣೆ’ ಹಾಗೂ ‘ರಾಜ್ಯಮಟ್ಟದ ಪುರುಷ ಹಾಗೂ ಮಹಿಳೆಯರ ಆಹ್ವಾನಿತ ಹೊನಲು ಬೆಳಕಿನ ಕೊಕ್ಕೊ ಟೂರ್ನಿ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಮೂರ್ನಾಲ್ಕು ಕಂಪೆನಿಗಳ ಮೂಲಕ ದೇಶವನ್ನು ಆಳುತ್ತಿದ್ದರೆ, ಇಂದು ನೂರಾರು ವಿದೇಶಿ ಕಂಪೆನಿಗಳು ದೇಶವನ್ನು ಆಳುವುದರ ಮೂಲಕ ನಮ್ಮ ಸಂಪತ್ತನ್ನು ಲೂಟಿ ಮಾಡುತ್ತಿವೆ ಎಂದರು.

ದೇಶದಲ್ಲಿ ಸಮಾನ ಶಿಕ್ಷಣ, ಸಮಾನ ಸ್ವಾತಂತ್ರ್ಯ, ಸಹೋದರತ್ವ ಇಲ್ಲವಾಗಿ ಸಂವಿಧಾನದ ಆಶಯಗಳು ಅಪಾಯದ ಅಂಚಿನಲ್ಲಿವೆ. ಈ ಹಿಂದೆ ದೇಶ ಕಟ್ಟುವ ಕಾಲಮಾನವಾಗಿತ್ತು. ಹೀಗ ಈ ಕಾಲಮಾನ ಮಾಯವಾಗಿ ಈಗ ಬರಿ ಧ್ವಂಸಗಳ ಕಾಲಮಾನವಾಗಿದೆ. ಸಮಾನ ಶಿಕ್ಷಣ ಕನಸಾಗಿದೆ. ಸ್ವಾತಂತ್ರ್ಯ ಪರ ತಂತ್ರವಾಗಿದೆ. ಸಮಾನತೆ ಅಪಾಯದಂಚಿನಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.