ವಿಧೇಯ ಪ್ರಜೆಯಾಗುವುದೇ ನಾಗರಿಕ ಲಕ್ಷಣ -ಕೆ.ಪಿ.ಸುರೇಶ
ನೋಟು ರದ್ಧತಿಯ ಬಳಿಕ ಹೊಸ ನೋಟುಗಳು ಖದೀಮರ ಕೈಲಿ ಸಲೀಸಾಗಿ ನರ್ತಿಸುತ್ತಿರುವುದು ಹಾಗೂ ಅಧಿಕಾರಸ್ಥ ಉಳ್ಳವರ ಆಢ್ಯ ಮದುವೆಗಳನ್ನು ಕಂಡಾಗ ಒಂದಂತೂ ಸ್ಪಷ್ಠವಾಗುತ್ತಿದೆ. ಭೃಷ್ಟಾಚಾರದ ಹಾಸುಹೊಕ್ಕಿನ ಹೆಣಿಗೆಯಲ್ಲಿ ಏನೂ ವ್ಯತ್ಯಾಸವಾಗಿಲ್ಲ!
ಈ ಮಧ್ಯೆ ಕರ್ನಾಟಕದ ನೈಸ್ ಸಂಸ್ಥೆ ಅಕ್ರಮದ ಕುರಿತು ಸದನ ಸಮಿತಿ ವರದಿ ಮಂಡಿಸಲಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯ ಮುಖ್ಯಾಂಶಗಳನ್ನು ನೋಡಿದರೆ ಎದೆ ಹಾರುತ್ತದೆ. ಈ ದೇಶದ ಜನದ್ರೋಹದ ಕಥೆಯಂತಿದೆ ಇದು. ಕಳೆದ 15 ವರ್ಷಗಳಲ್ಲಿ ಬಂದ ಎಲ್ಲಾ ಪಕ್ಷಗಳೂ ನಿರುಮ್ಮಳವಾಗಿ ಈ ಭೃಷ್ಟಾಚಾರದ ಜೊತೆ ಕೈ ಜೋಡಿಸಿ ಮೇಯಲು ಅನುವು ಮಾಡಿಕೊಟ್ಟಿರುವುದು ಕನ್ನಡಿಯಷ್ಟೇ ಸ್ಪಷ್ಠವಾಗಿದೆ. ಸದನ ಸಮಿತಿ ವರದಿಯ ಕೆಲವು ವಿವರ ನೋಡಿ: ಈ ಯೋಜನೆಗೆ ಅಗತ್ಯವಿದ್ದ 20ಸಾವಿರ ಚಿಲ್ಲರೆ ಭೂಮಿಗೆ ಬದಲಾಗಿ ಇನ್ನೂ ಸಾವಿರಾರು ಎಕರೆಗಳನ್ನು ಪರೋಕ್ಷವಾಗಿ ಈ ಯೋಜನೆಗೆ ಸೇರಿಸಲಾಯಿತು. ಆಮೇಲೆ 2728 ಎಕರೆಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಯಿತು ಈ ಭೂಮಿಯ ಬಹುಭಾಗ ಯಾರೋ ಒಬ್ಬರ ಬೇನಾಮಿ ಸೊತ್ತಾಗಿದೆ.. ಹೀಗೆ ಇದು ಮುಂದುವರಿಯುತ್ತದೆ. ಈ ಯೋಜನೆ ಅನುಷ್ಠಾನಗೊಳಿಸಲು ಮುಂದೆ ಬಂದ ಸಂಸ್ಥೆ ಮಾಡಿದ ಹೂಡಿಕೆ ಕೇವಲ 110 ಕೋಟಿ. ಇತರೇ ಸಾಲ ಎಲ್ಲಾ ಸೇರಿದರೆ ಕೇವಲ 800 ಚಿಲ್ಲರೆ ಕೋಟಿ.!
ಇದಾದ ಮೇಲೆ ಈ ಸಂಸ್ಥೆ ಕಂಡಕಂಡ ರೀತಿಯಲ್ಲಿ ಸುಮಾರು 750 ಎಕರೆಯಷ್ಟನ್ನು ವಿವಿಧ ಒಪ್ಪಂದಗಳ ಮೂಲಕ ಮಾರಿ ಏನಿಲ್ಲವೆಂದರೂ 7000 ಕೋಟಿ ರೂ. ಕಮಾಯಿಸಿದೆ. ಇದಲ್ಲದೇ ರಸ್ತೆ ಟೋಲ್ ಸಂಗ್ರಹದ ಮೂಲಕ 1375 ಕೋಟಿ ಸಂಗ್ರಹಿಸಿದೆ. ಇದರೊಂದಿಗೆ ಕಲ್ಲು ಗಣಿಗಾರಿಕೆಯಲ್ಲಿ ಏನಿಲ್ಲವೆಂದರೂ ಸಾವಿರ ಕೊಟಿ ಸಂಪಾದಿಸಿದೆ ಎಂದೂ ವರದಿ ಹೇಳಿದೆ.. ಇದಕ್ಕೆ ಅನುಮೋದನೆ ಕೊಟ್ಟ ಲೋಕೋಪಯೊಗಿ ಇಲಾಖೆ ಅಧಿಕಾರಿ ಮೆತ್ತಗೆ ಈ ಕಡೆ ಬಂದು ಸದರಿ ಸಂಸ್ಥೆಯ ನಿರ್ದೇಶಕನಾಗಿದ್ದಾನೆ. ಜಾಗತೀಕರಣದ ಅಕ್ರಮಸಂತಾನಗಳು ಹೇಗಿರುತ್ತವೆ ಎಂಬುದಕ್ಕೆ ಇದು ಸಾಕ್ಷಿ.
ಜಾಗತೀಕರಣದ ಬಳಿಕ ವಿಶ್ವಬ್ಯಾಂಕು ನಮ್ಮ ಸರ್ಕಾರ ಹೇಗೆ ನಡೆದುಕೊಳ್ಳಬೇಕು ಎಂದು ಪಾಠ ಹೇಳಿತು. ಸರ್ಕಾರ ಹತ್ತು ಹಲವು ಜನ ಕಲ್ಯಾಣದ ದೀರ್ಘಕಾಲಿಕ ಯೋಜನೆಗಳಿಂದ ಹಿಂದೆ ಸರಿಯಬೇಕು. ಅದಕ್ಕೆಲ್ಲಾ ಬಂಡವಾಳ ಹಾಕುವಷ್ಟು ಬಂಡವಾಳ ಸರ್ಕಾರದಲ್ಲಿಲ್ಲ. ಉದಾ: ಇಂಧನ, ರಸ್ತೆ, ಮೂಲಭೂತ ಸೌಕರ್ಯ ಹೀಗೆ. ಇವನ್ನೆಲ್ಲಾ ಖಾಸಗಿಯವರು ನಿರ್ವಹಿಸಲು ಅವಕಾಶ ಮಾಡಬೇಕು. ಅವರಿಗೆ ಬೇಕಾದ ನೆಲ ನೀರು ಸೌಕರ್ಯ ಸರ್ಕಾರ ಮಾಡಿಕೊಡಬೇಕು-ಹೀಗೆ. ಇದಕ್ಕೆ ಖಾಸಗೀ- ಸಾರ್ವಜನಿಕ ಪಾಲುದಾರಿಕೆ ಎಂಬ ಆಕರ್ಷಕ ಹೆಸರನ್ನೂ ಚಾಲ್ತಿಗೆ ತರಲಾಯಿತು.ಈ ಪಿಪಿಪಿ ಎಂಬುದು ಮೂಲತಃ ಖಾಸಗೀ ಲಾಭಕ್ಕೆ ಸಾರ್ವಜನಿಕವಾದದ್ದೆನ್ನೆಲ್ಲಾ ಒತ್ತೆ ಇಡುವ ತಲೆಹಿಡುಕ ಕೆಲಸ ಎಂಬುದು ಅಲಿಖಿತ.
ಸರ್ಕಾರೀ ಯೋಜನೆಗಳಲ್ಲೇ ಲೂಟಿ ಮಾಡಿ ‘ಸೋರುವ ಕಾಲುವೆ, ಹಳ್ಳ ಹಿಡಿದ ರಸ್ತೆಗಳಿಂದ’ ಹೆಸರು ಕೆಡುವ ಬದಲು ಈ ಹೊಸ ಹಿಕಮತ್ತು ಎಲ್ಲರಿಗೂ ಒಪ್ಪಿತವಾಯಿತು. ನಮ್ಮ ಹತ್ತು ಹಲವು ರಸ್ತೆಗಳೆಲ್ಲಾ ಈ ರೀತಿ ನಿರ್ಮಾಣವಾದವು. ಇದಕ್ಕೆ ಕಿ.ಮೀ. ಒಂದಕ್ಕೆ ಎಷ್ಟು ಬಿತ್ತು ಎಂದು ಕೇಳುವ ಆಸಕ್ತಿ ಹೇಗಿದ್ದರೂ ನಮ್ಮ ಜನಗಳಿಗಿಲ್ಲವಾದ ಕಾರಣ ಇದರ ಅನುಷ್ಠಾನಕ್ಕೇನೂ ತೊಂದರೆ ಆಗಲಿಲ್ಲ!! ಒಂದು ವಾರ್ಡ್ ರಸ್ತೆ ರಿಪೇರಿಗೇ ಎಷ್ಟು ಬಿತ್ತು? ಯಾಕೆ ಚೆನ್ನಾಗಿರುವ ಫುಟ್ ಪಾತಿನ ಕಲ್ಲು ಕಿತ್ತು ಇಂಟರ್ ಲಾಕ್ ಅಳವಡಿಸುತ್ತಿದ್ದಾರೆ ಎಂದು ಯಾರೂ ಕೇಳಿದ ಉದಾಹರಣೆಯೇ ಇಲ್ಲ.!!
ಬೆಂಗಳೂರಿನಂಥಾ ನಗರ ಈ ಜಾಗತೀಕರಣದ ಎಲ್ಲಾ ವಿಕೃತಿಗಳ ಉದಾಹರಣೆಯಂತಿದೆ. ಬೆಂಗಳೂರು ನಗರವೊಂದರಲ್ಲೇ ಎಗ್ಗಿಲ್ಲದೇ ಸರ್ಕಾರೀ ಜಾಗ ಒತ್ತುವರಿ ಮಾಡಿರುವಷ್ಟು ದೇಶದ ಯಾವ ರಾಜ್ಯದಲ್ಲೂ ಆಗಿಲ್ಲವೇನೋ. ಇದರೊಂದಿಗೇ ಅಧಿಕಾರಸ್ಥರ ನೇರ ಶೀಫಾರಸ್ಸಿನ ಡಿನೋಟಿಫಿಕೇಶನ್ ಪ್ರಕರಣಗಳನ್ನು ನೋಡಿದರೆ ಹೌಹಾರುತ್ತದೆ. ಬೆಂಗಳೂರಿನ ಸುತ್ತ ಮುತ್ತ ಯಾವ ಸರ್ಕಾರೀ ಕಾಯಿದೆ, ಅನುಮತಿಯಿಲ್ಲದೇ ಕೇಕು ಕತ್ತರಿಸಿ ಹಂಚಿದ ಹಾಗೆ ಜಮೀನುಗಳನ್ನು ಸೈಟು ಮಾಡಿ ಅಮಾಯಕರಿಗೆ ಮಾರಿರುವ ಸಾವಿರಾರು ಪ್ರಕರಣಗಳಿವೆ. ಸರ್ಕಾರವೊಂದು ಎಲ್ಲಾ ಹಂತಗಳಲ್ಲೂ ಈ ಅರಾಜಕ ಭೃಷ್ಟ ಮಾರ್ಗಕ್ಕೆ ಕೈಜೋಡಿಸಿದಾಗ ಮಾತ್ರಾ ಇಂಥಾ ದ್ರೋಹದ ಕೆಲಸ ನಡೆಯಲು ಸಾಧ್ಯ. ಬಿ.ಬಿ.ಎಂ.ಪಿ. ಎಂಬ ನಗರಾಡಳಿತದ ಚುಕ್ಕಾಣೀ ಹಿಡಿದಿರುವ ಸಂಸ್ಥೆಯ ಖರ್ಚು ನೋಡಿದರೆ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿಯೂ ರೋಮ ಕೊಂಕದಂತೆ ಸಾರ್ವಜನಿಕ ಜೀವನದಲ್ಲಿ ಮುಂದುವರಿಯುವುದು ಹೇಗೆ ಸಾಧ್ಯ ಎಂಬುದಕ್ಕೆ ತಕ್ಕ ಸಾಕ್ಷಿ ದೊರೆಯುತ್ತದೆ.
ಬೆಂಗಳೂರಿಗೆ ನಿಯಮಬದ್ಧ ವಸತಿ ಒದಗಿಸಲು ಅಸ್ತಿತ್ವಕ್ಕೆ ಬಂದ ಬಿಡಿಎ ಎಂಬ ಸಂಸ್ಥೆಯ ಕರ್ಮ ಕಾಂಡ ದೆಹಲಿಯ ಮಂದಿಯಲ್ಲೂ ಹೊಟ್ಟೆ ಕಿಚ್ಚು ತರಿಸೀತು!! ಸಾವಿರ ಕೋಟಿಯಷ್ಟು ಠೇವಣಿಯನ್ನು ಅನಾಮತ್ತು ಎತ್ತಿ ಖಾಸಗಿಯಾಗಿ ಬಂಡವಾಳ ಹೂಡುವ ಕಾನೂನು ಬಾಹಿರ ಕೆಲಸ ಊಹಿಸಲೂ ಅಸಾಧ್ಯ.
ಇದರಿಂದಾಚೆ ನಮ್ಮ ಗ್ರಾಮೀಣಾಭಿವೃದ್ಧಿಯ ಚುಕ್ಕಾಣೀ ಹಿಡಿದಿರುವ ಗ್ರಾಮೀಣಾಭಿವೃದ್ಧಿ ಇಲಾಖೆಯ ಹತ್ತು ಸಾವಿರ ಕೋಟಿ ಅನುದಾನದ ಮೊತ್ತವನ್ನು ಇದೇ ರೀತಿ ಖಾಸಗಿ ಖಾತೆಗೆ ವರ್ಗಾಯಿಸಿದರೂ ಸರ್ಕಾರಕ್ಕೆ ಅದು ಗೊತ್ತಾಗಲು ವರ್ಷಗಟ್ಟಲೆ ಹಿಡಿಯುತ್ತೆ..!! ಅದರ ಬಗ್ಗೆ ಕ್ರಮ ಕೈಗೊಳ್ಳುವ ಮನಸ್ಸು ಬರುವುದಿಲ್ಲ ಎಂದರೆ ಏನರ್ಥ?
ದೇಶದಲ್ಲೇ ಕ್ರಿಯಾಶೀಲವಾಗಿದ್ದ ಲೋಕಾಯುಕ್ತ ಒಂದು ನಮ್ಮಲ್ಲಿತ್ತು. ಅದರ ಬಗ್ಗೆ ಎಲ್ಲಾ ಪಕ್ಷಗಳಿಗೂ ಅದೆಷ್ಟು ಅಧೈರ್ಯ ಇತ್ತೆಂದರೆ ಒಬ್ಬರಾದ ಮೇಲೆ ಒಬ್ಬರು ಪಾಳಿಯಲ್ಲಿ ಅದರ ಸಮಾಧಿ ಕಟ್ಟುವ ಕೆಲಸ ಮಾಡಿದರು. ಭೃಷ್ಟಾಚಾರವೇ ಪ್ರಮುಖ ಇಶ್ಯೂ ಆಗಿ ದೆಹಲಿಯಲ್ಲಿ ಆರಂಭವಾದ ಚಳವಳಿಯ ಹೆಗಲೇರಿಯೇ ಮೋದಿ ಅಧಿಕಾರಕ್ಕೆ ಬಂದಿದ್ದು. ಆದರೆ ಸ್ವತಃ ಮೊದಿ ಕೂಡಾ ಲೋಕಪಾಲ್ ಬಗ್ಗೆ ತೀವ್ರ ಅನಾಸಕ್ತಿ ತೋರುತ್ತಿದ್ದಾರೆ. ಅಷ್ಟೇಕೆ ತಿಂಗಳ ಹಿಂದೆ ‘ಕಪ್ಪುಹಣದ ವಿರುದ್ಧ ಯುದ್ಧ’ ಎಂಬ ವೀರೋದಾತ್ತ ಘೋಷಣೆಯೊಂದಿಗೆ ನೋಟು ರದ್ಧತಿ ಮಾಡಿ ಕಳ್ಳರನ್ನು ಬಲಿ ಹಾಕುತ್ತೇನೆ ಎಂದು ಗುಡುಗಿದ್ದನ್ನು ನಂಬಿ ಕಾಳಧನದ ಕಳ್ಳರನ್ನು ಮೋದಿ ಹಿಡಿದು ಬೀದಿ ಕಂಬಕ್ಕೆ ನೇತು ಹಾಕುವ ರಮ್ಯ ಚಿತ್ರವನ್ನು ಕಲ್ಪಿಸಿಕೊಳ್ಳುತ್ತಾ ನಾವೆಲ್ಲಾ ಎರಡು ಸಾವಿರ ರೂ. ಪಡೆಯಲು ದಿನವಿಡೀ ಕ್ಯೂನಲ್ಲಿ ನಿಂತರೆ; ಅತ್ತ ಅಧಿಕಾರಿಗಳು ಸಲೀಸಾಗಿ ಹೊಸ ನೋಟಿಗೆ ತೇರ್ಗಡೆಯಾದ ಪುರಾವೆಗಳು ದಿನ ದಿನ ಬೆಳಕಿಗೆ ಬರುತ್ತಿದೆ. ಇನ್ನೊಂದೆಡೆ ಮದುವೆಗೆ ರೂ. 2.5 ಲಕ್ಷ ಎಂದು ತಾಕೀತು ಮಾಡಿರುವ ಪ್ರಧಾನಿಯವರನ್ನೇ ಗೇಲಿ ಮಾಡುವಂತೆ ರಾಜಕಾರಣಿಗಳ ಮನೆ ಮದುವೆಗಳು ಇಡೀ ಪ್ರಕ್ರಿಯೆಯನ್ನೇ ಅಸಂಬದ್ಧಗೊಳಿಸಿವೆ. ಇಂಥಾ ನಿರ್ಲಜ್ಜ ಪ್ರದರ್ಶನಕ್ಕೆ ಅಧಿಕಾರಸ್ಥರೇ ಹಾಜರಿ ಹಾಕಿ ಅದಕ್ಕೊಂದು ಸಮ್ಮತಿಯ ಮೊಹರು ಹಾಕಿದ ಮೇಲೆ ಇನ್ನೇನು ಉಳಿಯಿತು?
ಬಡಪಾಯಿ ಚಾಲಕನೊಬ್ಬ ಮೊನ್ನೆ ಆತ್ಮಹತ್ಯೆ ಮಾಡಿಕೊಂಡಾಗ ಬರೆದಿಟ್ಟ ವಿವರಗಳು ನಮ್ಮ ಕಾಲದ ಪ್ರಜಾಸತ್ತೆಯ ಚುಕ್ಕಾಣಿ ಹಿಡಿದವರ ದ್ರೋಹದ ದಾಖಲೆಯಂತಿದೆ. ಸ್ವತಃ ಆತನ ಸಾವು ನಮ್ಮ ಭಯಭೀತ ಸಾಕ್ಷಿ ಪ್ರಜ್ಞೆಯ ಸಾವಿನಂತಿದೆ. ಗಣಿಗಾರಿಕೆಯಲ್ಲಿ ಲೂಟಿಹೊಡೆಯಲು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಲೋಕಾಯುಕ್ತ ಶಿಫಾರಸ್ಸು ಮಾಡಿದರೆ ಸ್ವತಃ ಮುಖ್ಯಮಂತ್ರಿ ನೇತೃತ್ವ ವಹಿಸುವ ಸಚಿವ ಸಂಪುಟದ ಸಭೆಯಲ್ಲಿ ಇವರ ವಿರುದ್ಧದ ಆಪಾದನೆಗಳನ್ನು ಕೈಬಿಡುವ ಟಿಪ್ಪಣಿಯೂ ಇರುತ್ತದೆ. ಅಂದರೆ ಈ ಭೃಷ್ಟ ಅಧಿಕಾರಿ ವರ್ಗ ಮುಖ್ಯಮಂತ್ರಿಗಳನ್ನೇ ನಿಯಂತ್ರಿಸುವಷ್ಟು ಪ್ರಭಾವಿಯಾಗಿದೆ ಎಂದರ್ಥ. ಒಂದಿಬ್ಬರು ಕೊಂಚ ಮಾನವಂತ ಹಿರಿಯ ಸಚಿವರ ಆಕ್ಷೇಪದ ಕಾರಣ ಇದು ಸದ್ಯಕ್ಕೆ ನಿಂತಿದೆಯಂತೆ..!!
ಸಾಮಾಜಿಕ ಸಾಂಸ್ಕೃತಿಕ ಬೌದ್ಧಿಕ ವಲಯದೊಂದಿಗೆ ಒಡನಾಟ ಇರುವ ಸರ್ಕಾರವೆಂದು ಬಿಂಬಿತವಾಗಿರುವ ಕರ್ನಾಟಕದಲ್ಲೇ ಈ ಪರಿ ನಿರ್ಲಜ್ಜ ನಡವಳಿಕೆ ಇದ್ದರೆ ಉಳಿದ ರಾಜ್ಯಗಳ ಸ್ಥಿತಿ ಊಹಿಸಲೂ ಅಸಾಧ್ಯ. ಒಡನಾಟ ಇರುವ ಮಂದಿಯೂ ಇದೆಲ್ಲಾ ಗೊತ್ತೇ ಇಲ್ಲವೆಂಬಂತೆ ವರ್ತಿಸುವುದು ನಮ್ಮ ಕಾಲದ ಬೌದ್ಧಿಕ ವರ್ಗದ ನೈತಿಕ ನೆಲೆ ಅಳ್ಳಕವಾಗಿರುವುದಕ್ಕೆ ಸಾಕ್ಷಿ. ಜನರನ್ನು ಸಶಕ್ತಗೊಳಿಸುವ ಬದಲು; ಜನ ಆಯ್ಕೆ ಮಾಡಿದವರನ್ನು ಯಾವ ತಡೆಯೂ ಇಲ್ಲದಂತೆ ಸಶಕ್ತಗೊಳಿಸುವ ವಿಕೃತ ಮಾದರಿಯೊಂದು ಪ್ರಜಾಸತ್ತೆಯ ಹೆಸರಿನಲ್ಲಿ ಸೃಷ್ಟಿಯಾಗಿದೆ. ಅವರ ಮೇಲೆ ನಿಗಾ ಇಡುವ ಸಂಸ್ಥೆಯೂ ಇಲ್ಲ. ಇದ್ದರೂ ಕಾನೂನುಗಳನ್ನು ಅಳ್ಳಕಗೊಳಿಸುವತ್ತ ಮೊದಲು ಗಮನ ಹರಿಸುವ ಶಾಸಕ ವರ್ಗ ಕ್ರಮೇಣ ಅಸಹಾಯಕ ಪ್ರಜೆಗಳನ್ನೇ ಅಪಹಾಸ್ಯ ಮಾಡುವಷ್ಟು ಭಂಡತನದ ಅಕ್ರಮದಲ್ಲಿ ತೊಡಗುವ ಬಗೆ ಗಮನಿಸಬೇಕು.
ಇದರ ಆತ್ಯಂತಿಕ ಪರಿಣಾಮ ಏನು? ಜನ ಬಂಡೇಳುತ್ತಾರೆ ಎಂಬ ಆಶಯದಲ್ಲಿ ನಮ್ಮ ಹಲವು ಹೋರಾಟಗಾರರಿದ್ದಾರೆ. ಆದರೆ ನಮ್ಮ ಗ್ರಾಮೀಣ ಪ್ರದೇಶ ನೋಡಿದರೆ ವೈಫಲ್ಯದ ವಿರುದ್ಧ ಪ್ರತಿಭಟನೆ ಮಾಡುವ ಬದಲು, ತಲೆ ಗೋಜಲಾದ ಸ್ಥಿತಿಯಲ್ಲಿ ಮತ್ತೆ ಜಾತಿಯ ಚಿಕ್ಕಪುಟ್ಟ ಸುಳಿಗಳಲ್ಲಿ ಬೀಳುವ ನಡಾವಳಿಗಳೇ ಕಾಣುತ್ತಿದೆ. ನಗರಗಳಲ್ಲೋ ಜಾಗತೀಕರಣ, ಅದು ಸೃಷ್ಟಿಸಿದ ಹೊಸ ಉದ್ಯೋಗಾವಕಾಶ ಮತ್ತು ಹಣದ ಚಲಾವಣೆಯಿಂದ ಸಮುದಾಯ ಪ್ರಜ್ಞೆ ಸಂಪೂರ್ಣ ನಶಿಸಿ ‘ತನ್ನ ಪಾಡಿಗೆ ಬದುಕಿದರೆ ಸಾಕು, ಯಾರು ಏನಾದರೂ ಮಾಡಿಕೊಳ್ಳಲಿ’ ಎಂಬ ಪ್ರತಿಕ್ರಿಯೆಯೇ ಹೆಚ್ಚುತ್ತಿದೆ. ಜಾಗತೀಕರಣ ಮತ್ತು ಅದು ಸೃಷ್ಟಿಸಿರುವ ರಾಜಕಾರಣ ಬಯಸುವುದೂ ಇದನ್ನೇ. ಕಸ ಎತ್ತುವ ಸಾಂಕೇತಿಕ ಹುಲು ಹೆಜ್ಜೆಯಿಂದಾಚೆ ನಾಗರಿಕ ಪ್ರಜ್ಞೆ ಬೆಳೆಯದಂತೆ ಅದು ನೋಡಿಕೊಳ್ಳುತ್ತದೆ. ವಿಧೇಯ ಪ್ರಜೆಯಾಗುವುದೇ ನಾಗರಿಕ ಲಕ್ಷಣ ಎಂಬುದನ್ನು ಒತ್ತಿ ಹೇಳುತ್ತಿರುತ್ತದೆ.
ಪ್ರಜಾಸತ್ತೆಯ ಆತ್ಮವಾದ ರಾಜಕಾರಣ ಜನರಿಂದ ದೂರ ಸರಿದು ಆರ್ಥಿಕ ವ್ಯವಹಾರದ ಉದ್ಯಮಿ, ವ್ಯಾಪಾರಿಗಳ ಜೊತೆ ಮಿಲಾಕತ್ ಆದಾಗ ಈ ಕೊಳೆಯುವಿಕೆ ಆರಂಭವಾಗುತ್ತದೆ. ಇಲ್ಲಿ ಯಾರ ಬೆಲೆ ಎಷ್ಟು ಎಂಬುದಷ್ಟೇ ಗುಸುಗುಸು ಚರ್ಚೆಯ ವಿಷಯವೇ ಹೊರತು, ನೈತಿಕ ತಕ್ಕಡಿಯಲ್ಲ. ಇದಕ್ಕೆ ತೆರುವ ಬೆಲೆ? ಮೂಲತಃ ಇದು ಸಾಮಾಜಿಕ ಜೀವನದ ನೈತಿಕ ಮೌಲ್ಯಗಳನ್ನು ಗೌಣವಾಗಿಸುತ್ತದೆ. ಒಂದಷ್ಟು ಬೇಡಿಕೆಗಳನ್ನೇ ಆದ್ಯಂತ ಪ್ರಶ್ನೆಯಾಗಿಸಿ ಅದನ್ನು ಪೂರೈಸುವುದೇ ಜನಪರ ಆಡಳಿತವೆಂಬಂತೆ ಬಿಂಬಿಸುತ್ತದೆ. ಪೈಪೋಟಿಯ ಜನಪ್ರಿಯ ಯೋಜನೆಗಳಿಗೆ ಸರ್ಕಾರಗಳು ಮುಂದಾಗುವುದೂ ಇದೇ ಕಾರಣಕ್ಕೆ. ‘ನಿನಗೆ ಬೇಕಾದ್ದು ಕೊಟ್ಟಾಯಿತಲ್ಲ. ಈಗ ನಮ್ಮ ವ್ಯವಹಾರದ ಬಗ್ಗೆ ತೆಪ್ಪಗಿರು’ ಎಂಬ ಧೋರಣೆ ಅದು.
ಜನರೂ ಅಷ್ಟೇ. ಸರಕು ಬೇಡಿಕೆಗಳ ಪೂರೈಕೆಯಾದಾಗ ತಣ್ಣಗಾಗುವ ಸ್ವಭಾವ ಬೆಳೆಸಿಕೊಂಡರೆ ಅಲ್ಲಿಗೆ ಈ ವೃತ್ತ ಪೂರ್ಣವಾಗುತ್ತದೆ. ಉಕ್ಕುವ ಹಾಲಿಗೆ ನೀರು ಚುಮುಕಿಸಿದ ಹಾಗೆ ಯೋಜನೆಗಳು. ಇನ್ನೊಂದು ಮೃಗಾಲಯದ ಹುಲಿ ಗರ್ಜಿಸುವ ರೀತಿ. ಅದಕ್ಕೆ ಹೊತ್ತು ಹೊತ್ತಿನ ಮಾಂಸ ಬಂದು ಬಿದ್ದ ತಕ್ಷಣ, ಸಾಕು ನಾಯಿಯಂತೆ ಕಡಿಯುತ್ತಾ ಕೂತು ತೂಕಡಿಸುತ್ತದೆ. ಇದೊಂದು ಭವಿಷ್ಯದ ಅಸ್ತಿತ್ವದ ಪ್ರಶ್ನೆ ಅನ್ನಿಸದಿದ್ದರೆ ಇಡೀ ದೇಶವೇ ಒಂದು ಮೃಗಾಲಯವಾಗುತ್ತದೆ.
. ಹೊಟ್ಟೆ ಬಟ್ಟೆ ಸರ್ಕಾರ ಕೊಟ್ಟ ಮೇಲೆ ನಿಮಗೆಂಥಾ ದರ್ದು ಅಂದಿದ್ದಕ್ಕೆ, ದಕ್ಷಿಣ ಅಮೆರಿಕಾದ ಕವಿಯೊಬ್ಬ ಹೇಳಿದ್ದ ಅಲ್ಲ ನಾವು ಹೋರಾಡುತ್ತಿರುವುದು ನಮ್ಮನ್ನು ಜಾನುವಾರುಗಳಾಗಿ ಪರಿವರ್ತಿಸುವುದರ ವಿರುದ್ಧ.