ಅದ್ದೂರಿ ಮದುವೆ ನಿಷೇಧಿಸಿ: ದೇವನೂರ ಮಹಾದೇವ
ಚನ್ನಪಟ್ಟಣ: ‘ಅದ್ದೂರಿಯಾಗಿ ನಡೆಯುವ ಮದುವೆ ನಿಷೇಧಿಸಬೇಕು’ ಎಂದು ಸಾಹಿತಿ ದೇವನೂರ ಮಹದೇವ ಅಭಿಪ್ರಾಯಪಟ್ಟರು.
ತಾಲ್ಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಭಾನುವಾರ ನಡೆದ ರೈತಮುಖಂಡ ಎಂ.ರಾಮು ಅವರ ಪುತ್ರ ರಂಜಿತ್ ಹಾಗೂ ತೇಜಸ್ವಿನಿ ಅವರ `ಕುವೆಂಪು ಪ್ರಣೀತ ಮಂತ್ರ ಮಾಂಗಲ್ಯ’ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ‘ಅದ್ದೂರಿಯಾಗಿ ನಡೆಯುವ ಮದುವೆಗಳಿಂದಾಗಿ ಬಡವರು ಶ್ರೀಮಂತರ ನಡುವಿನ ಅಂತರ ಮತ್ತಷ್ಟು ಹೆಚ್ಚುತ್ತಿದೆ. ಸಾವಿರ ಮಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವ ಮದುವೆಗಳನ್ನು ಅದ್ದೂರಿ ಮದುವೆ ಎಂದು ಪರಿಗಣಿಸಿ ಅಂಥವನ್ನು ನಿಷೇಧಿಸುವ ಕಾನೂನು ರಚನೆಯಾಗಬೇಕು’ ಎಂದು ಆಗ್ರಹಿಸಿದರು.
ಸರಳವಾಗಿ ಮದುವೆ ಮಾಡಿಕೊಂಡವರು ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸುತ್ತಿದ್ದಾರೆ. ಆಡಂಬರದ ಮದುವೆ ಮಾಡಿಕೊಂಡರೆ
ಮಾತ್ರ ಸಮಾಜದಲ್ಲಿ ಗೌರವ ಎಂಬುದು ಎಂಬುದು ಅವಿವೇಕತನ. ಇಂದಿನ ದಿನಗಳಲ್ಲಿ ಹಣ, ಅಧಿಕಾರ, ಅಂತಸ್ತು ಶ್ರೀಮಂತರನ್ನು ದುರಹಂಕಾರಿಗಳನ್ನಾಗಿ ಮಾಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ರೈತಸಂಘದ ಚಾಮರಸ ಮಾಲಿ ಪಾಟೀಲ್, ಪಚ್ಚೆ ನಂಜುಂಡಸ್ವಾಮಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್ ಗೌಡ, ತಹಶೀಲ್ದಾರ್ ರಮೇಶ್ ಮುಂತಾದವರು ಭಾಗವಹಿಸಿ ನೂತನ ವಧುವರರಿಗೆ ಶುಭ ಕೋರಿದರು.
ನೋಟು ರದ್ದು: ಬಡವರಿಗೆ ಅನಾನುಕೂಲ
ಕೇಂದ್ರ ಸರ್ಕಾರ 500 ಹಾಗೂ 1000 ಬೆಲೆಯ ನೋಟುಗಳನ್ನು ರದ್ದು ನೇರ ಪರಿಣಾಮ ಜನಸಾಮಾನ್ಯರ ಮೇಲೆ ಬೀಳುತ್ತಿದೆ ಎಂದು ಸಾಹಿತಿ ದೇವನೂರು ಮಹದೇವ ವಿಷಾದಿಸಿದರು. ಬಡವರು ಪ್ರತಿದಿನ ಬ್ಯಾಂಕ್‌ಗಳ ಮುಂದೆ ಸರದಿ ನಿಲ್ಲುವಂತಾಗಿದೆ. ಶ್ರೀಮಂತರು ಏನೂ ಆಗಿಲ್ಲ ಎಂಬಂತೆ ನಿಶ್ಚಿಂತೆಯಿಂದಲೇ ಇದ್ದಾರೆ. ನೋಟು ರದ್ದು ಕಾರ್ಪೊರೇಟ್ ವಲಯದ ಉದ್ಯಮಿಗಳಿಗೆ ವರದಾನವಾಗಿ ಪರಿಣಮಿಸಿದೆ ಎಂದರು. ನೋಟು ರದ್ದು ಮಾಡಿದ್ದರಿಂದ ಅದ್ದೂರಿ ಮದುವೆಗಳಿಗೆ ಯಾವುದೇ ತೊಡಕಾಗುತ್ತಿಲ್ಲ. ಇತ್ತೀಚೆಗಷ್ಟೇ ನಡೆದ ಕೆಲ ರಾಜಕಾರಣಿಗಳ ಮಕ್ಕಳ ಮದುವೆ ಸಮಾರಂಭವೇ ಇದಕ್ಕೆ ಸಾಕ್ಷಿ ಎಂದು ಮಹಾದೇವ ಟೀಕಿಸಿದರು.
*
ಮದುವೆ ಮನಸ್ಸು ಮನಸ್ಸುಗಳ ನಡುವಿನ ಸಂಬಂಧವನ್ನು ಬೆಸೆಯಬೇಕೇ ವಿನಾ, ಹಣವನ್ನು ಪ್ರದರ್ಶನ ಮಾಡಿ ದುರಹಂಕಾರ ಪ್ರದರ್ಶಿಸುವ ವೇದಿಕೆಯಾಗಬಾರದು.
-ದೇವನೂರ ಮಹದೇವ,
ಸಾಹಿತಿ