ಬಡವರ ಬದುಕಿನ ಮೇಲೆ ಬೆಳಕು ಚೆಲ್ಲುವ ‘ಬಂಗಾರದ ಮನುಷ್ಯ’-ಸತೀಶ್ ಚಪ್ಪರಿಕೆ

hande

ಹುಬ್ಬಳ್ಳಿಯ ‘ದೇಶಪಾಂಡೆ ಫೌಂಡೇಷನ್’ ಆವರಣ, ಕಬ್ಬನ್ ಪಾರ್ಕ್‌ನ ‘ಸೆಂಚುರಿ ಕ್ಲಬ್’, ಜೆ.ಪಿ.ನಗರದ ‘ಸೆಲ್ಕೋ ಕಚೇರಿ’ ಅಥವಾ ನವದೆಹಲಿಯ ತಾಜ್ ಮಹಲ್ ಹೊಟೇಲ್‌ನ ಭವ್ಯವಾದ ಲಾಬಿಯಾಗಲೀ… ಎಲ್ಲೇ ಸಿಕ್ಕರೂ ಈ ಬಂಗಾರದ ಮನುಷ್ಯನದ್ದು ಮಾತ್ರ ಒಂದೇ ಅಪ್ಪಟ–ಅಚ್ಚಳಿಯದ ರೂಪ. ಅದೇ ಹಳೆಯ ಮಾಸಿದ ಪ್ಯಾಂಟು, ಅದರ ಮೇಲೊಂದು ಕುಳ್ಳ ಜುಬ್ಬ.ಕೆಲವೊಮ್ಮೆ ಅದರ ಮೇಲೊಂದು ಖಾದಿ ಮೇಲಂಗಿ. ಕೆದರಿದ ಗುಂಗುರು ಕೂದಲಿರುವ ತಲೆಯ ತುಂಬೆಲ್ಲ ಸೂರ್ಯನ ಬೆಳಕನ್ನು ಹಿಡಿದು ಬೆಳಕು ಚೆಲ್ಲಿ ಬಡವರ ಬದುಕನ್ನು ಬಂಗಾರ ಮಾಡುವ ಎಂದೂ ಬತ್ತದ ಹುಮ್ಮಸ್ಸು. ಗಂಟೆಗಟ್ಟಲೇ ಇಂಧನ ವಿಕೇಂದ್ರೀಕರಣ, ಸ್ವಸ್ಥ ಸಮಾಜದ ನಿರ್ಮಾಣದ ಕುರಿತು ಅರ್ಥಪೂರ್ಣ ಚರ್ಚೆ ನಡೆಸುವ ನಡೆದಾಡುವ ಬಡವರ ವಿಶ್ವವಿದ್ಯಾಲಯ.

‘ಸೆಲ್ಕೊ’ ಮೂಲಕ ಭಾರತದ ಹಳ್ಳಿಗಳಲ್ಲಿರುವ 2 ಲಕ್ಷ ಮನೆಗಳಲ್ಲಿ ಬೆಳಕು ತುಂಬಿದ, ಆ ಮನೆಗಳ ಭವಿಷ್ಯವನ್ನೇ ಬದಲಿಸಿದ ಡಾ. ಹರೀಶ್ ಹಂದೆ ಎದುರು ಸಿಕ್ಕಾಗಲೆಲ್ಲಾ ಪ್ರತಿ ಬಾರಿಯೂ ಎವರೆಸ್ಟ್ ಎದುರು ನಿಂತಂತೆ ಭಾಸವಾಗುತ್ತದೆ. ಜಾಗತಿಕ ನೆಲೆಯಲ್ಲಿ ಸಾಂಪ್ರದಾಯಿಕವಲ್ಲದ ಇಂಧನ ಮತ್ತು ಸೌರಶಕ್ತಿಲೋಕದಲ್ಲಿ ಹರೀಶ್ ಚಿರಪರಿಚಿತವಾದರೂ, ಭಾರತದ ಜನಸಾಮಾನ್ಯರ ಪಾಲಿಗೆ ರಾಮೊನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ. ಆದರೆ ಎಲ್ಲ ಪ್ರಶಸ್ತಿಗಳನ್ನು ಮೀರಿದ, ಬಡವರ ಬಗ್ಗೆ ಅಪ್ಪಟ ಕಾಳಜಿಯುಳ್ಳ, ಸಾಮಾಜಿಕ–ಆರ್ಥಿಕ ಅಸಮಾನತೆ ಹೋಗಲಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವ ಮಗುವಿನಂತಹ ಮನಸ್ಸಿನ ಮನುಷ್ಯ ಹರೀಶ್.

ಹರೀಶ್ ಮತ್ತು ನನ್ನ ಭೇಟಿಯಾಗಿದ್ದು ಹಲವು ವರ್ಷಗಳ ಹಿಂದೆ. ಆ ದಿನ ಈಗಲೂ ಸ್ಪಷ್ಟವಾಗಿ ನೆನಪಿದೆ. ಜೆ.ಪಿ.ನಗರದ ಅವರ ಹಳೆಯ ಕಚೇರಿಯಲ್ಲಿ ಬೆಳಿಗ್ಗೆ ಎಂಟೂವರೆಗೆ ಭೇಟಿಯಾಗುವುದು ಎಂದು ಮೊದಲೇ ನಿರ್ಧಾರವಾಗಿತ್ತು.  ಅದು ದೀಪಾವಳಿಯ ಮುಂಜಾವು. ಬೆಂಗಳೂರು ಇನ್ನೂ ಎದ್ದೇಳುವ ಮೊದಲು ಅವರ ಕಚೇರಿ ತಲುಪಿದ್ದೆ.ಕಚೇರಿಗೆ ಬೀಗ ಹಾಕಿತ್ತು. ಅಲ್ಲಿದ್ದ ಕಾವಲುಗಾರ, ‘ಈವತ್ತು ರಜಾ. ಹರೀಶ್ ಸರ್ ಬರೋದಿಲ್ಲ’ ಎಂದು ಆವರಣ ಪ್ರವೇಶಿಸುವ ಮೊದಲೇ ಹೊರಹಾಕುವ ಯತ್ನ ಮಾಡಿದರು.‘ಇಲ್ಲಪ್ಪಾ, ಹರೀಶ್ ಸರ್ ಬರ್ತೀನಿ ಅಂದಿದಾರೆ. ನಾನು ಹೊರಗೆ ಕೂತು ಕಾಯ್ತೀನಿ’ ಎಂದು ಅವರನ್ನು ಒಪ್ಪಿಸಿ ಕಚೇರಿಯ ಹೊರ ಆವರಣದಲ್ಲಿದ್ದ ಕುರ್ಚಿಯ ಮೇಲೆ ಕೂತೆ. ಎಂಟೂವರೆ, ಒಂಬತ್ತೂವರೆಯಾಗಿ ಹತ್ತಾದರೂ ಹರೀಶ್ ನಾಪತ್ತೆ.

ಮೊಬೈಲ್‌ನಲ್ಲಿ ಒಂದಾದ ಮೇಲೊಂದರಂತೆ ಕಳುಹಿಸಿದ ಸಂದೇಶಗಳಿಗೆ ಯಾವುದೇ ಉತ್ತರ ಇಲ್ಲ. ಮಾಡಿದ ಕರೆಗಳಿಗೂ ಯಾವುದೇ ಸ್ಪಂದನೆಯಿಲ್ಲ. ಬೇರೆ ಯಾರೇ ಆಗಿದ್ದರೂ, ದೂರ್ವಾಸನ ರೂಪ ತಳೆದು ಅಲ್ಲಿಂದ ಹೊರಟುಬಿಡುತ್ತಿದ್ದೆ. ಆದರೆ, ಹರೀಶ್ ವಿಷಯದಲ್ಲಿ ಹಾಗೆ ಮಾಡಲು ಮನಸ್ಸು ಒಪ್ಪಲಿಲ್ಲ. ಕಾದು ನೋಡೋಣ ಎಂಬ ನಿರ್ಧಾರಕ್ಕೆ ಬಂದೆ. ಏಕೆಂದರೆ, ಆ ಮನುಷ್ಯನ ಬಗ್ಗೆ ಇದ್ದ ಅಪಾರ ಗೌರವ. ಜೊತೆಗೆ ಕುಂದಾಪುರವೆಂಬ ಕರಳುಬಳ್ಳಿಯ ಸಂಬಂಧ ಬೇರೆ!

ಕುಂದಾಪುರದ ಕೋಟತಟ್ಟುವಿನ ಹಂದಟ್ಟು ಹರೀಶ್ ಹುಟ್ಟಿದ ಊರು. ಹುಟ್ಟಿದ್ದು ಅಜ್ಜಿಯ ಮನೆಯಲ್ಲಿ. ಬೆಳೆದದ್ದು ಮಾತ್ರ ಒರಿಸ್ಸಾದ ರೂರ್ಕೆಲಾದಲ್ಲಿ. ತಂದೆ ಅಲ್ಲಿನ ಉಕ್ಕಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಹರೀಶ್ ಮತ್ತು ಅವರ ಅಕ್ಕ ಇಬ್ಬರೂ ಓದಿದ್ದು, ಬೆಳೆದದ್ದು ಒರಿಸ್ಸಾದಲ್ಲಿ. ಆಗ ಪ್ರತಿಯೊಬ್ಬ ತಂದೆ–ತಾಯಿಯೂ ತನ್ನ ಮಗ–ಮಗಳು ಒಂದೋ ಎಂಜಿನಿಯರ್ ಆಗಬೇಕು ಅಥವಾ ಡಾಕ್ಟರ್ ಆಗಬೇಕು ಎಂದು ಬಯಸುತ್ತಿದ್ದರು. ‘ನನ್ನ ಅಕ್ಕ ಕಷ್ಟು ಪಟ್ಟು ಫೇಲ್ ಆಗಿ ಅವಳ ಇಷ್ಟದ ಕಲಾಲೋಕ ಪ್ರವೇಶಿಸಿದಳು.ಶಾಂತಿನಿಕೇತನದಲ್ಲಿ ಓದಿ ಕಲಾವಿದೆಯಾದಳು. ನಾನು ಕಷ್ಟು ಪಟ್ಟು ಓದಿ ಪಾಸಾದ ಕಾರಣ ತಂದೆ–ತಾಯಿಯ ಒತ್ತಾಯಕ್ಕೆ ಮಣಿದು ಎಂಜಿನಿಯರಿಂಗ್ ಪದವಿ ಪಡೆಯಲು ಹೊರಟೆ’. ಹರೀಶ್ ನಗುನಗುತ್ತಲೇ ಹೇಳುತ್ತಾರೆ. ಐಐಟಿ ಖರಗ್‌ಪುರದಲ್ಲಿ ಹರೀಶ್ ಇಂಧನ ತಂತ್ರಜ್ಞಾನದಲ್ಲಿ ಪದವಿ ಪಡೆಯಲು ಓದುತ್ತಿದ್ದಾಗ, ಸಹಪಾಠಿಗಳಾಗಿದ್ದವರು ಈಗ ದೆಹಲಿಯ ಮುಖ್ಯಮಂತ್ರಿಯಾಗಿರುವ ಅರವಿಂದ್ ಕೇಜ್ರಿವಾಲ್ ಅವರಂತಹ ಘಟಾನುಘಟಿಗಳು.

ಸದಾ ಸಮಾಜವಾದಿಗಳ ಗುಂಪಿನ ನಡುವೆಯೇ ಇದ್ದು ಪದವಿ ಪಡೆದ ಹರೀಶ್, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್‌ಗಾಗಿ ತೆರಳಿದ್ದು ಮಸಾಚುಸೆಟ್ಸ್ ಲೊವೆಲ್ ವಿಶ್ವವಿದ್ಯಾಲಯಕ್ಕೆ. 1991. ಹರೀಶ್ ಅವರ ಗುರುಗಳಾಗಿದ್ದ ಡಾ. ಮಾರ್ಟಿನ್ ಮತ್ತು ಡಾ. ಜಾನ್ ಡಫಿ ಭಾರತದ ಈ ಅಪ್ಪಟ ಸಮಾಜವಾದಿಯನ್ನು ಡಾಮಿನಿಕ್ ರಿಪಬ್ಲಿಕ್‌ನಲ್ಲಿ ನಡೆಯುತ್ತಿದ್ದ ಸೌರಕ್ರಾಂತಿಯನ್ನು ಅನುಭವಿಸಲು ಕಳುಹಿಸಿದರು. ಆ ಒಂದು ಭೇಟಿ ಹರೀಶ್ ಬದುಕನ್ನೇ ಬದಲಾಯಿಸಿಬಿಟ್ಟಿತು. ಅದರಿಂದ ನಮ್ಮ ದೇಶಕ್ಕೊಬ್ಬ ‘ಬಂಗಾರದ ಮನುಷ್ಯ’ ಸಿಕ್ಕಿದ.

ಸೌರಶಕ್ತಿಯಂತಹ ಸಾಂಪ್ರದಾಯಿಕವಲ್ಲದ ಇಂಧನ ವಿಕೇಂದ್ರೀಕರಣದ ಮೂಲಕ ಮಾತ್ರ ಬಡತನ ಹೋಗಲಾಡಿಸಿ, ಸಾಮಾಜಿಕ–ಆರ್ಥಿಕ ಸಮಾನತೆ ಸಾಧಿಸಲು ಸಾಧ್ಯ ಎಂದು ಅರಿವಾದ ಕೂಡಲೇ ಹರೀಶ್ ಭಾರತ ಮತ್ತು ಶ್ರೀಲಂಕಾದ ಹಳ್ಳಿಗಳನ್ನು ಸೇರಿಬಿಟ್ಟರು. ಸುಮಾರು ಎರಡು ವರ್ಷಗಳ ಕಾಲ ವಿದ್ಯುಚ್ಛಕ್ತಿ ಇಲ್ಲದ ಹಳ್ಳಿಗಳಲ್ಲಿ ಜೀವನ ಸಾಗಿಸಿದ ಹರೀಶ್, ‘ಒಂಬತ್ತು ವರ್ಷಗಳ ಕಾಲ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾನು ಕಲಿತದ್ದನ್ನು ಮರೆಯಲು, ನಿಜವಾದ ವಿದ್ಯೆಯನ್ನು ಪಡೆಯಲು ಹಳ್ಳಿಯ ಜೀವನ ಸಹಾಯಕವಾಯಿತು’ ಎನ್ನುತ್ತಾರೆ.

1995ರಲ್ಲಿ ಹರೀಶ್ ‘ಸೆಲ್ಕೊ’ ಎಂಬ ಸಾಮಾಜಿಕ ಉದ್ಯಮ ಸ್ಥಾಪಿಸುವ ಸಂದರ್ಭದಲ್ಲಿ ಭಾರತ ಮಾತ್ರವಲ್ಲ ವಿಶ್ವದ ಎಲ್ಲೆಡೆ ಸೌರಶಕ್ತಿ ಅತ್ಯಂತ ದುಬಾರಿ ಮತ್ತು ಬಡಗರ ಕೈಗೆಟುಕದ ತಂತ್ರಜ್ಞಾನ ಎಂಬ ಭಾವನೆಯಿತ್ತು. ಆದರೆ, ಹರೀಶ್ ಮತ್ತು ಅವರ ಸೆಲ್ಕೊ ತಂಡ ಆ ಭಾವನೆಯನ್ನು ತಲೆಕೆಳಗು ಮಾಡಲು, ಬಡವರ ಮನೆ ಬೆಳಗಲು, ಬದುಕು ಹಸನಾಗಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಮೊದಲ ದಶಕದಲ್ಲಿ ಕರ್ನಾಟಕದ ಹಳ್ಳಿಗಳಲ್ಲಿ ಸೌರಶಕ್ತಿ ಕ್ರಾಂತಿಗೆ ಮುನ್ನುಡಿ ಬರೆದ ‘ಸೆಲ್ಕೊ’ ತಂಡ ನಂತರ ತನ್ನ ಯೋಜನೆಗಳನ್ನು ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಮತ್ತು ಒರಿಸ್ಸಾಗಳಿಗೆ ವಿಸ್ತರಿಸಿತು. ರಾಮೊನ್ ಮ್ಯಾಗ್ಸೆಸ್ಸೆ ಹುಡುಕಿಕೊಂಡು ಬಂತು.

ನಮ್ಮ ಭೇಟಿ ನಿಗದಿಯಾಗಿದ್ದ ದೀಪಾವಳಿಯ ಬೆಳಿಗ್ಗೆ ಹರೀಶ್ ಪತ್ತೆಯೇ ಇರಲಿಲ್ಲ. ಇನ್ನೇನು ನಾನು ತಾಳ್ಮೆ ಕಳೆದುಕೊಂಡೆ ಎನ್ನುವಾಗಲೇ ಹಳೆಯದಾದ ಒಂದು ‘ಮಾರುತಿ 800’ ಕಾರು ‘ಸೆಲ್ಕೊ’ ಗೇಟ್ ಮುಂಭಾಗ ಬಂದು ನಿಂತಿತು. ಅಲ್ಲಿಯವರೆಗೆ ಮೂಲೆಯಲ್ಲಿ ಕೂತು ತೂಕಡಿಸುತ್ತಿದ್ದ ಕಾವಲುಗಾರ ಚಕ್ಕೆಂದು ಎದ್ದು ಹೋಗಿ ಗೇಟು ತೆರೆದರು. ಕಚೇರಿಯ ಆವರಣದಲ್ಲಿ ಕಾರು ನಿಂತಿತು. ಹರೀಶ್ ಕೆಳಗಿಳಿದರು.

‘ಮುಂಜಾನೆ ದೆಹಲಿಯಿಂದ ಬಂದೆ. ಅದಕ್ಕೆ ತಡವಾಯಿತು. ದಯವಿಟ್ಟು ಕ್ಷಮಿಸಿ’ ಎಂದು ಮಾತಿಗೆ ಕೂತರು. ಮುಂದಿನ ಮೂರು ಗಂಟೆಗಳ ಕಾಲದ ಆ ಮಾತುಕತೆ ನನ್ನ ಬದುಕಿನ ಅತ್ಯುತ್ತಮ ಗಳಿಗೆಯಾಯಿತು. ‘‘ಸೌರಶಕ್ತಿ ದುಬಾರಿ ಎಂಬ ಸಾಮಾನ್ಯ ಭಾವನೆಯಿದೆ. ಹೌದು, ಅದು ಶ್ರೀಮಂತರ ಪಾಲಿಗೆ ಮಾತ್ರ ದುಬಾರಿ. ಬಡವರ ಪಾಲಿಗಿಲ್ಲ.

ಈ ಪ್ರಪಂಚದಲ್ಲಿ ಈಗ 700 ಕೋಟಿ ಜನರಿದ್ದಾರೆ. ಆ ಪೈಕಿ 500 ಕೋಟಿ ಬಡತನದ ರೇಖೆಯಿಂದ ಕೆಳಗಿದ್ದು ಜೀವನ ತಳ್ಳುತ್ತಿದ್ದಾರೆ. ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್‌ ಸಂಶೋಧಿಸಿ 130 ವರ್ಷ ಕಳೆದುಹೋಗಿವೆ. ಆದರೂ 160 ಕೋಟಿ ಜನರು ವಿದ್ಯುಚ್ಛಕ್ತಿಯ ಕೊರತೆಯಿಂದಾಗಿ ಕತ್ತಲಲ್ಲಿ ಬದುಕು ಸಾಗಿಸುತ್ತಿದ್ದಾರೆ. 200 ಕೋಟಿ ಜನರು ಇನ್ನೂ ಗುಡಿಸಲಿನ ಮುಚ್ಚಿದ ಕೋಣೆಯಲ್ಲಿ ಅಥವಾ ಬಯಲಲ್ಲಿ ಕಟ್ಟಿಗೆಯ ಮೂಲಕ ಅಡುಗೆ ಮಾಡುತ್ತಾರೆ. ಬಡತನ ರೇಖೆಯ ಮೇಲಿರುವ 200 ಕೋಟಿ ಜನರಿಗೆ ಮಾತ್ರ ಶುದ್ಧವಾದ ಇಂಧನ ನಿರಂತರವಾಗಿ ದೊರಕುತ್ತಿದೆ. ಆ ಕಾರಣದಿಂದಲೇ ಅವರ ಬದುಕು ಹಸನಾಗಿದೆ ಮತ್ತು ಇನ್ನೂ ಹಸನಾಗುತ್ತಿದೆ. ಇಂಧನ, ಬೆಳಕು ಇಲ್ಲದ ಬಡವರ ಬದುಕು ಸೊರಗುತ್ತಿದೆ.

ಪ್ರಪಂಚದೆಲ್ಲೆಡೆ ಶ್ರೀಮಂತರು ಬಡವರಿಗೆ ಸಬ್ಸಿಡಿ ನೀಡಿದಾಗ ಮಾತ್ರ ಅವರ ಬದುಕು ಹಸನಾಗುತ್ತದೆ ಎಂದು ಭಾವಿಸಿದ್ದಾರೆ. ‘ಸೆಲ್ಕೊ’ ಇದುವರೆಗೆ ಸುಮಾರು 2 ಲಕ್ಷಕ್ಕಿಂತ ಹೆಚ್ಚು ಮನೆಗಳಿಗೆ ಸೌರಶಕ್ತಿ ಅಳವಡಿಸಿದೆ. ಒಬ್ಬನೇ ಒಬ್ಬ ಬಡವ ಕೂಡ ಸಬ್ಸಿಡಿ ಬೇಕು ಎಂದು ಕೇಳಿಲ್ಲ. ಒಂದೇ ಬಾರಿಗೆ ಹಣ ಕೊಟ್ಟು ಸೌರ ವಿದ್ಯುದ್ದೀಪಗಳನ್ನು ಕೊಂಡುಕೊಳ್ಳಲು ಬಡವರಿಗೆ ಸಾಧ್ಯವಿಲ್ಲ ಎಂದು ಅರಿವಾದ ಕೂಡಲೇ, ಅದಕ್ಕೆ ತಕ್ಕ ರೀತಿಯಲ್ಲಿ ಅವರಿಗೆ ಹೊಂದುವಂತೆ ಸಾಲದ ವ್ಯವಸ್ಥೆ ಮಾಡಿದೆವು.

ಒಂದೇ ಒಂದು ಪೈಸೆ ಬಾಕಿ ಇಟ್ಟುಕೊಳ್ಳದೇ ಆ ಬಡವರು ಸಾಲ ತೀರಿಸಿದ್ದಾರೆ. ಇದು ವಿಚಿತ್ರ ಎನ್ನಿಸಬಹುದು. ಆದರೆ ನಿಜ. ಯಾವುದೇ ಬಡವ ಅವನ ಬಳಿ ಹಣವಿದ್ದರೆ, ತೆಗೆದುಕೊಂಡ ಸಾಲ ತೀರಿಸದೇ ಇರುವುದಿಲ್ಲ. ಆದರೆ, ಶ್ರೀಮಂತ ಮಾತ್ರ ಸಾಲದ ಮೇಲೆಯೇ ಅವನ ಸಾಮ್ರಾಜ್ಯ ಸ್ಥಾಪಿಸುವುದು. ಸರಳವಾಗಿ ಹೇಳಬೇಕೆಂದರೆ ಬಡವರಿಗೆ ಇರುವ ನಿಯತ್ತು ಶ್ರೀಮಂತರಿಗೆ ಇರುವುದಿಲ್ಲ. ಈ ಮಾತು ಭಾರತಕ್ಕೆ ಮಾತ್ರ ಸೀಮಿತವಾದುದಲ್ಲ. ಇಡೀ ಪ್ರಪಂಚಕ್ಕೆ ಸಲ್ಲುವಂತದ್ದು’’ ಹರೀಶ್ ಹೇಳುತ್ತಾ ಹೋದರು.

ಹರೀಶ್ ಅನುಭವದಲ್ಲಿ ಮೇಲಿನ ಮಾತಿಗೆ ಪುಷ್ಟಿ ನೀಡುವ ಹಲವು ಜೀವಂತ ಉದಾಹರಣೆಗಳಿವೆ. ಕೆಲವು ವರ್ಷಗಳ ಹಿಂದೆ ‘ಸೆಲ್ಕೊ’ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಜನಾಂಗದ ಒಂದು ಹಾಡಿಗೆ ಸೌರಶಕ್ತಿ ಆಧಾರಿತ ದೀಪಗಳನ್ನು ಅಳವಡಿಸಲು ಮುಂದಾಯಿತು. ಒಂದೊಂದು ಮನೆಗೆ ಒಂದೊಂದು ಬಲ್ಬ್‌ ಅಳವಡಿಸಿಕೊಳ್ಳುವಷ್ಟು ಕೂಡ ಆರ್ಥಿಕ ಶಕ್ತಿ ಅಲ್ಲಿನ ಕುಟುಂಬಗಳಿಗೆ ಇರಲಿಲ್ಲ. ಸಿದ್ಧಿ ಕುಟುಂಬದ ಯಜಮಾನರನ್ನು ಬ್ಯಾಂಕ್‌ಗೆ ಕರೆದುಕೊಂಡು ಹೋದಾಗ, ವ್ಯವಸ್ಥಾಪಕರು ನೀವು ಶೇಕಡಾ ನೂರರಷ್ಟು ಗ್ಯಾರಂಟಿ ಕೊಟ್ಟರೆ ಮಾತ್ರ ನಾವು ಸಿದ್ಧಿಗಳಿಗೆ ಸಾಲ ಕೊಡುತ್ತೇವೆ ಎಂಬ ಷರತ್ತು ಹಾಕಿದರು.

‘ಸೆಲ್ಕೊ’ ಗ್ಯಾರಂಟಿ ನೀಡಿತು. ಬ್ಯಾಂಕ್ ಸಿದ್ಧಿ ಕುಟುಂಬಗಳಿಗೆ ಸಾಲ ನೀಡಿತು. ಅವರ ಮನೆ ಬೆಳಗಿತು. ಆರು ತಿಂಗಳ ನಂತರ ಹರೀಶ್ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿ, ‘ನಿಮ್ಮ ಹಣ ನಿಮಗೆ ವಾಪಸು ಬರುತ್ತಿದೆಯೇ?’ ಎಂದು ಕೇಳಿದಾಗ, ‘ನಮ್ಮ ನಿರೀಕ್ಷೆಗೆ ಮೀರಿ ಸಾಲ ಪಡೆದ ಸಿದ್ಧಿ ಕುಟುಂಬಗಳು ಪ್ರಾಮಾಣಿಕವಾಗಿ ಕಂತು ಕಟ್ಟುತ್ತಿದ್ದಾರೆ’ ಎಂಬ ಉತ್ತರ ಸಿಕ್ಕಿತಂತೆ.

ಸಿದ್ಧಿ ಕುಟುಂಬದ ಯಜಮಾನರೊಬ್ಬರ ಬಳಿ, ‘ನಿಮ್ಮ ಮನೆಗಳಿಗೆ ಬೆಳಕು ಬಂದದ್ದರಿಂದ ಯಾವ ಪರಿಣಾಮವಾಗಿದೆ?’ ಎಂದು ಕೇಳಿದಾಗ, ‘ಬೆಳಕು ಬಂದದ್ದರಿಂದ ಮಕ್ಕಳಿಗೆ ರಾತ್ರಿ ಕೂಡ ಓದಲು ಸಾಧ್ಯವಾಗಿದೆ ಎನ್ನುವುದು ಸತ್ಯ. ಅದಕ್ಕಿಂತ ಹೆಚ್ಚಾಗಿ ಬ್ಯಾಂಕ್‌ನವರಿಗೆ ನಮ್ಮ ಮೇಲೆ ಈಗ ನಂಬಿಕೆ ಹೆಚ್ಚಿದೆ. ಈ ಸಾಲವನ್ನು ಆದಷ್ಟು ಬೇಗ ತೀರಿಸಿ, ಹೊಲಿಗೆ ಯಂತ್ರ ಕೊಂಡುಕೊಳ್ಳಲು ಮತ್ತೆ ಸಾಲ ಪಡೆಯುತ್ತೇವೆ. ಕೃಷಿಗೆ ಕೂಡ ಸಾಲ ಪಡೆಯುವ ಯತ್ನ ಮಾಡುತ್ತೇವೆ’ ಎಂಬ ಉತ್ತರ ಬಂತು.

‘‘ಬಡವರ ಮನೆಯಲ್ಲಿ ಒಂದು ಬಲ್ಬ್‌ ಬೆಳಗುತ್ತಿದೆಯೆಂದರೆ ಅದು ಕೇವಲ ಬೆಳಕಲ್ಲ. ಅದು ಸಾಮಾಜಿಕ–ಆರ್ಥಿಕವಾಗಿ ಒಂದು ಕುಟುಂಬದ ಮನಸ್ಥಿತಿಯನ್ನೇ ಬದಲಿಸುವ ಸಾಧನ. ‘ಸೆಲ್ಕೊ’ ಸೇವೆ ಸಲ್ಲಿಸಿದ ಹೆಚ್ಚಿನೆಲ್ಲ ಬಡ ಕುಟುಂಬಗಳು ಇಂದು ಆ ಸಾಮಾಜಿಕ ಸ್ವೀಕೃತಿಯ ಸುಖ ಅನುಭವಿಸುತ್ತಿದ್ದಾರೆ’’ ಎನ್ನುತ್ತಾರೆ ಹರೀಶ್.

‘ಐಐಟಿ ಖರಗ್‌ಪುರದ ಪದವಿ, ಅಮೆರಿಕದ ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಡಾಕ್ಟರೇಟ್. ನಿಮ್ಮದೇ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಗೆಳತಿ ರೂಪಾಲ್ ತ್ರಿವೇದಿ ಜೊತೆ ಮದುವೆ. ಒಬ್ಬಳು ಮುದ್ದಾದ ಮಗಳು ಆದಿಶ್ರೀ ಹಂದೆ. ಕುಟುಂಬ ಅಮೆರಿಕದಲ್ಲಿ ನೆಲೆನಿಂತಿದೆ. ಒಮ್ಮೆ ಕೂಡ ನಿಮಗೆ ವಾಪಸು ಹೋಗಿ ಅಲ್ಲಿ ನೆಲೆ ನಿಲ್ಲಬೇಕು ಎಂದೆನ್ನಿಸಲಿಲ್ಲವೇ?’ ಎಂಬ ಪ್ರಶ್ನೆ ಕೇಳಿದಾಗ ಸಿಕ್ಕ ಉತ್ತರ, ‘‘ಇದೇ ಪ್ರಪಂಚದ ಎಲ್ಲ ವಿದ್ಯಾವಂತರ ಸಮಸ್ಯೆ. ನಾವು ವಿದ್ಯೆ ಪಡೆಯುವುದು ಕೇವಲ ನಮಗಾಗಿಯೇ? ಅಥವಾ ಸೌಲಭ್ಯವಂಚಿತರನ್ನು ನಮ್ಮ ಮಟ್ಟಕ್ಕೆ ಮೇಲೆಳೆದು ತರುವುದಕ್ಕಾಗಿಯೇ? ನನ್ನನ್ನೇ ತೆಗೆದುಕೊಳ್ಳಿ.ನನಗೆ ಐಐಟಿ ಖರಗ್‌ಪುರದಲ್ಲಿ ಸೀಟು ಸಿಕ್ಕಿದ್ದು ನಾನು ನೂರಕ್ಕೆ ನೂರರಷ್ಟು ಬುದ್ಧಿವಂತ ಎಂದಲ್ಲ. ಈ ಪ್ರಪಂಚದಲ್ಲಿರುವ 500 ಕೋಟಿ ಬಡವರ ಪೈಕಿ ನನಗಿಂತ ಬುದ್ಧಿವಂತರು ಒಂದೆರಡು ಕೋಟಿಯಾದರೂ ಇದ್ದಾರೆ. ನನಗೆ ಸೂಕ್ತ ಅವಕಾಶ ಇತ್ತು. ಎಲ್ಲ ಸೌಲಭ್ಯಗಳು ಇದ್ದವು. ಆ ಕಾರಣದಿಂದ ನನಗೆ ಐಐಟಿಯಲ್ಲಿ ಸೀಟು ದೊರಕಿತು. ಇದರರ್ಥ ನಾನು ಆ ಎಲ್ಲ ಸಮರ್ಥ ಬಡವರು ನೀಡಿದ ಸಬ್ಸಿಡಿಯಿಂದಾಗಿ ಐಐಟಿ ಸೀಟು ಪಡೆದೆ. ಅವರಿಂದಾಗಿ ಈವತ್ತು ಈ ಹಂತಕ್ಕೆ ಬಂದೆ. ಈಗ ಆ 500 ಕೋಟಿ ಮಂದಿಯ ಸೇವೆ ಮಾಡುವುದು, ಆ ಪೈಕಿ ಒಂದಿಷ್ಟು ಮನೆಗಳಲ್ಲಿ ಬೆಳಕು ಬೆಳಗಿಸುವುದು, ಅವರ ಮಕ್ಕಳಿಗೆ ವಿದ್ಯಾಭ್ಯಾಸ ದೊರಕುವಲ್ಲಿ ನೆರವು ನೀಡುವುದು ನನ್ನ ಕರ್ತವ್ಯ. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ ಅಷ್ಟೆ. ಅದಕ್ಕಾಗಿ ಅಂತರ್ ಖಂಡಗಳ ಸಂಸಾರ ನಡೆಸುತ್ತಿದ್ದೇನೆ. ಅದರಲ್ಲೇನು ತಪ್ಪು?’’ – ಹರೀಶ್ ನಗುತ್ತಲೇ ಮರು ಪ್ರಶ್ನೆ ಹಾಕಿದರು. ಮೂರು ಗಂಟೆಗಳ ಕಾಲ ಎಗ್ಗಿಲ್ಲದೇ ಮಾತುಕತೆ ನಮ್ಮ ಸ್ನೇಹವನ್ನು ಗಟ್ಟಿ ಮಾಡಿತು.

ಇತ್ತೀಚೆಗೆ ಬೆಂಗಳೂರಿನ ‘ಸೆಂಚುರಿ ಕ್ಲಬ್‌’ನಲ್ಲಿ ನಡೆದ ಸಮಾರಂಭವೊಂದರಲ್ಲಿ ಹರೀಶ್ ಸಿಕ್ಕಿದ್ದರು. ಆ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ವಿಶೇಷ ಸಾಮರ್ಥ್ಯವುಳ್ಳ ಅಥ್ಲೀಟ್ ಮಾಲತಿ ಹೊಳ್ಳ ಆಗಮಿಸಿದ್ದರು. ಗಾಲಿಕುರ್ಚಿಯಲ್ಲಿ ಬಂದ ಮಾಲತಿ ಬಹಳ ಕಷ್ಟಪಟ್ಟು ಸಮಾರಂಭ ನಡೆಯುತ್ತಿದ್ದ ಜಾಗ ತಲುಪಿ ಮುಂದಿನ ಸಾಲಿನಲ್ಲಿ ಕೂತಿದ್ದರು. ಮುಖ್ಯ ಅತಿಥಿಯಾಗಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹರೀಶ್, ‘‘ಎಲ್ಲಿಯವರೆಗೆ ನಾವು ಪತ್ರಿಯೊಬ್ಬರೂ ನಮ್ಮ ಒಳಗಿನ ಕಣ್ಣುಗಳನ್ನು ತೆರೆಯುವುದಿಲ್ಲವೋ, ಅಲ್ಲಿಯವರೆಗೆ ಇಂತಹ ಪ್ರಮಾದಗಳು ನಡೆಯುತ್ತಲೇ ಇರುತ್ತೇವೆ. ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಇಂತಹ ಸಾಮಾಜಿಕ ಅಸಮಾನತೆ ಇರುತ್ತದೋ ಅಲ್ಲಿಯವರೆಗೆ ಅದಕ್ಕೆ ಕಾರಣರಾದ ನಾವೆಲ್ಲರೂ ದೇಶದ್ರೊಹಿಗಳೇ ಸರಿ. ಸೆಂಚುರಿ ಕ್ಲಬ್‌ನಂತಹ ಒಂದು ವಿದ್ಯಾವಂತರೇ ಬಂದು ಹೋಗುವ ಸ್ಥಳದಲ್ಲಿ ಗಾಲಿಕುರ್ಚಿಗಾಗಿ ರ‍್ಯಾಂಪ್‌ಗಳು ಇಲ್ಲ ಎಂದರೆ ನಮ್ಮಲ್ಲಿ ಮನುಷ್ಯತ್ವದ ಬಗೆಗಿನ ಸೂಕ್ಷ್ಮತೆಗಳು ಇಲ್ಲ ಎಂದು ಅರ್ಥ.
ಬಡವರು, ವಿಶೇಷ ಸಾಮರ್ಥ್ಯವುಳ್ಳವರು, ಅಗತ್ಯವುಳ್ಳವರ ಬಗ್ಗೆ ಎಲ್ಲಿಯವರೆಗೆ ನಮಗೆ ಕಾಳಜಿ ಹುಟ್ಟುವುದಿಲ್ಲವೋ, ಅಲ್ಲಿಯವರೆಗೆ ದೇಶಭಕ್ತಿಯ ಬಗ್ಗೆ ಯಾವುದೇ ತಮಟೆ ಹೊಡೆದರೂ ಪ್ರಯೋಜನ ಇಲ್ಲ’’ ಎಂದು ಅವರ ಎಂದಿನ ಶೈಲಿಯಲ್ಲಿ ತಣ್ಣಗೆ ಹೇಳಬೇಕಾದದ್ದನ್ನು ಹೇಳಿಯೇಬಿಟ್ಟರು. ಹರೀಶ್ ಆವತ್ತು ಮಾತನಾಡಿದ್ದು ಕೇವಲ ಆರೇಳು ನಿಮಿಷಗಳು ಮಾತ್ರ. ಆದರೆ, ಆ ಆರೇಳು ನಿಮಿಷಗಳೂ ಎದುರು ಕುಳಿತಿದ್ದವರ ಪಾಲಿಗೆ ಅತ್ಯಂತ ಅಮೂಲ್ಯಾಗಿ ಬಿಟ್ಟವು. ಇಂತಹ ನೇರ ನುಡಿಯ, ಸರಳ ಮನಸ್ಸಿನ ಹರೀಶ್ ಅವರನ್ನು ಪ್ರತಿ ಬಾರಿ ಭೇಟಿಯಾದಾಗಲೂ ಕಣ್ಣ ಮುಂದೆ ಬಂದು ನಿಲ್ಲುವ ಮತ್ತೊಂದು ಮುಖವೆಂದರೆ ಶಿವರಾಮ ಕಾರಂತರು. ಹಾ! ಇಬ್ಬರೂ ಕೋಟದವರೇ!