ನೋಟು ರದ್ಧತಿ: ದೂರಗಾಮೀ ಹವಣಿಕೆ – ಕೆ.ಪಿ.ಸುರೇಶ
ಪ್ರಧಾನಿ ಮೋದಿ ಅವರು ಇತ್ತೀಚೆಗಿನ ದಶಕಗಳ ಅಭೂತಪೂರ್ವ ಕ್ರಮ ಕೈಗೊಂಡಿದ್ದಾರೆ. ಕಾಳಧನವನ್ನು ನಿಯಂತ್ರಿಸಲು ರೂ. 500/ಸಾವಿರ ರೂ.ಗಳ ನೋಟನ್ನು ರದ್ದು ಮಾಡಿದ್ದಾರೆ. ಅದರ ನಂತರದ ಉಪಕ್ರಮಗಳು ತಂದಿರುವ ರಗಳೆಗಳು ನಿತ್ಯ ವರದಿಯಾಗುತ್ತಿವೆ., ಪದೇಪದೇ ನೊಟು ಬದಲಾಯಿಸದಂತೆ ಶಾಯಿ ಗುರುತು ಹಾಕುವುದು ಬ್ಯಾಂಕುಗಳ ಎದುರು ಮೈಲುದ್ದದ ಕ್ಯೂ. ಬ್ಯಾಂಕಿನ ಖಾತೆಯಿಂದಲೇ ಹಣ ತೆಗೆಯಲು ಇರುವ ನಿರ್ಬಂಧಗಳು, ಎಟಿಎಮ್‍ಗಳು ಬಂದ್ ಆಗಿರುವುದು. 2 ಸಾವಿರ ರೂ.ಗಳ ಹೊಸ ನೋಟು ಪಡೆದು ಅದಕ್ಕೆ ಚಿಲ್ಲರೆ ಸಿಗದೇ ಪರದಾಡುತ್ತಿರುವುದು ಇದೆಲ್ಲಾ ನಿತ್ಯದ ವಿದ್ಯಮಾನಗಳು.
ಇದಕ್ಕೆ ಎರಡು ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಮೊದಲನೆಯದು ಹೇಗೆ ಬಡವರು ಮತ್ತು ಧರ್ಮಭೀರು ಮಧ್ಯಮವರ್ಗದವರು ಒದ್ದಾಡುತ್ತಿದ್ದಾರೆ; ಸರ್ಕಾರ ಸಂವೇದನಾ ಶೂನ್ಯವಾಗಿ ಪರಿಸ್ಥಿತಿಯನ್ನು ನಿರ್ವಹಿಸುತ್ತಿದೆ ಎಂಬ ಆಕ್ರೋಶ. ಇನ್ನೊಂದು- ಇದು ದೇಶದ ಕಪ್ಪು ಹಣವನ್ನು ನಿರ್ಮೂಲನ ಮಾಡುತ್ತದೆ. ಆದ್ದರಿಂದ ಮೋದಿಯವರು ಹೇಳಿದ ಹಾಗೆ ಸ್ವಲ್ಪ ದಿನ ಕಷ್ಟ ಅನುಭವಿಸಬೇಕು, ಆಮೇಲೆ ಎಲ್ಲಾ ಸರಿ ಹೋಗುತ್ತದೆ. ದೇಶ ಪೂರಾ ಬಿಳಿ ಆರ್ಥಿಕತೆಯಲ್ಲಿ ನಡೆಯುತ್ತದೆ ಎಂಬ ಆಶಾವಾದ. ಈ ಒದ್ದಾಟವನ್ನೂ ರಾಷ್ಟ್ರಭಕ್ತಿಯ ಸಂಕೇತ ಎಂದು ನಾಯಕರೊಬ್ಬರು ಹೇಳಿದ್ದಾರೆ!! ರಾಷ್ಟ್ರಭಕ್ತಿಯ ಸಾಬೀತಿಗೆ ಇದು ಹೊಸ ಸೇರ್ಪಡೆ. ಅದಿರಲಿ.
ಇದು ದೀರ್ಘಕಾಲೀನ ಆಟ. ಈ ಒಂದೆರಡು ತಿಂಗಳಿನಲ್ಲಿ ಏನಾಗುತ್ತದೆ ಎಂಬುದನ್ನು ನೋಡೋಣ.
1. ಭಾರತದ ಒಟ್ಟು ಚಲಾವಣೆಯಲ್ಲಿರುವ ಸುಮಾರು 17 ಲಕ್ಷ ಕೋಟಿ ವಹಿವಾಟಿನಲ್ಲಿ ಈ ದೊಡ್ಡ ಮೌಲ್ಯದ ನೊಟುಗಳ ಪ್ರಮಾಣ ಶೇ. 84 . ಹೆಚ್ಚಿನ ಎಲ್ಲಾ ಅರ್ಥಶಾಸ್ತ್ರಜ್ಞರ ಪ್ರಕಾರ ಬೃಹತ್ ಮೌಲ್ಯದ ನೋಟುಗಳೇ ಕಪ್ಪು ಹಣದ ಬೇರು. ಆದ್ದರಿಂದ ಇದನ್ನು ಬದಲಾಯಿಸುವ ಕ್ರಮ ಜಾರಿಯಲ್ಲಿದೆ. ಎಷ್ಟು ವರ್ಷಕ್ಕೊಮ್ಮೆ ಅನ್ನುವುದು ಆ ದೇಶದ ಆರ್ಥಿಕತೆಯ ಮೇಲೆ ನಿಂತಿದೆ.
2. ಈ ನೋಟು ಬದಲಾವಣೆ ಕಾರ್ಪೋರೇಟು ತಿಮಿಂಗಲಗಳ ರೋಮವನ್ನೂ ಅಲ್ಲಾಡಿಸುವುದಿಲ್ಲ. ಯಾಕೆಂದರೆ ಅವರೇನು ನಗದು ಚೀಲ ಹಿಡಿದು ವ್ಯವಹಾರ ಮಾಡುವವರಲ್ಲ. ಅವರ ಆಟಗಳೆಲ್ಲಾ ಅಂತರ್ರಾಷ್ಟ್ರೀಯ. ಇವರೆಲ್ಲಾ ಶೆಲ್ ಕಂಪೆನಿಗಳ ಮೂಲಕ, ಅಂಡರ್ ಇನವಾಯ್ಸಿಂಗ್ ತಂತ್ರದ ಮೂಲಕ, ಆಮದು ರಫ್ತು ಖೊಟ್ಟಿ ದಾಖಲೆಗಳ ಮೂಲಕ ವ್ಯವಹಾರ ಮಾಡುತ್ತಾರೆ. ಇಲ್ಲೇ ತಮ್ಮದೇ ನಿಯಂತ್ರಣದಲ್ಲಿರುವ ಅಸಂಖ್ಯಾತ ಪುಡಿ ಕಂಪೆನಿಗಳ ಮೂಲಕ ಹಣ ವರ್ಗಾಯಿಸುತ್ತಾ ಒಂದು ಆರ್ಥಿಕ ಜಾಲ ನಿರ್ಮಿಸಿಕೊಂಡಿದ್ದಾರೆ. ತೆರಿಗೆ ಅಧಿಕಾರಿಗಳು ಇದರ ಬೆನ್ನು ಹತ್ತಿದರೂ ಇದನ್ನು ಸಿದ್ಧ ಪಡಿಸಲು ವರ್ಷಾನುಗಟ್ಟಲೆ ಬೇಕು. ಆ ಮೇಲೆ ಪ್ರಕರಣ ದಾಖಲು ಮಾಡಿ.. ಅಯ್ಯಪ್ಪಾ ಇದೊಂದು ಆಟ ಅಷ್ಟೇ. ಈ ಜಾಲದಲ್ಲಿ ದೇಶೀಯವಾಗಿ ಕಪ್ಪುಹಣ ಚಾಲ್ತಿಯಲ್ಲಿರುವುದು ಕಡಿಮೆ, ದೋಸೆ ಹಿಟ್ಟು ತೆಗೆದ ಹಾಗೆ ಅಷ್ಟಷ್ಟೇ ಮೊತ್ತ ವಿದೇಶಗಳಲ್ಲಿ ಕೂತಿರುತ್ತದೆ. ಇದನ್ನು ತರುವ ಯಾವ ಅಸ್ತ್ರವೂ ಮೋದಿಯವರಲ್ಲಿಲ್ಲ. ಅವರ ಕಾರ್ಪೋರೇಟ್ ಒಡನಾಟ ನೋಡಿದರೆ, ಅವರಿಗೆ ಮನಸೂ ಇಲ್ಲ; ಇಚ್ಛಾಶಕ್ತಿಯೂ ಇಲ್ಲ..!! ಈ ದೇಶದ 57 ಕಂಪೆನಿಗಳು 5.3 ಲಕ್ಷ ಕೋಟಿ ಸಾಲ ಪಡೆದಿವೆ, ಶೇ. 53ರಷ್ಟು ಸಂಪತ್ತು ಇವರ ಕೈಯಲ್ಲಿದೆ ಎಂಬುದನ್ನು ನೆನಪಿಸಿಕೊಂಡರೆ ಈ ನೋಟು ರದ್ಧತಿ ಕ್ರಮ ಮೂಲತಃ ಗುಂಯ್ ಗುಡುವ ಸೊಳ್ಳೆಗಳನ್ನು ಬಲಿ ಹಾಕುವ ತಂತ್ರದಂತಿದೆ.
3. ಈಗ ಈ ನೋಟುಗಳನ್ನು ಬದಲಾಯಿಸಬೇಕಷ್ಟೇ. ಎಷ್ಟಾದರೂ ಬದಲಾಯಿಸಬಹುದು ಎಂದರೆ ಈ ಕ್ರಮ ಶಕ್ತಿ ಕಳಕೊಳ್ಳುತ್ತದೆ. ಆದ್ದರಿಂದ ಮಿತಿ ಅನಿವಾರ್ಯ. ಆದರೆ ಸರ್ಕಾರಕ್ಕೆ ಈ ಪರ್ಯಾಯ ವ್ಯವಸ್ಥೆಯ ಪ್ಲಾನಿಂಗ್ ಹೇಗಿದೆ? ಇತ್ತೀಚೆಗಿನ ಲೆಕ್ಕದ ಪ್ರಕಾರ ರದ್ದಾದ ನೋಟುಗಳಿಗೆ ಬದಲೀ ನೋಟು ಮುದ್ರಿಸಿ ತರಲು ಕನಿಷ್ಠ 116 ದಿನ ಬೇಕಾಗಬಹುದು..!! ಅಂದರೆ ಬಜೆಟ್ ಮಂಡನೆ ವರೆಗೂ ಈ ಪರ್ಯಾಯ ಕಷ್ಟ! ಇದರರ್ಥ; ರದ್ದು ಮಾಡುವಾಗ ಹೊಸ ನೋಟುಗಳನ್ನು ಮುದ್ರಿಸಿ ತರುವ ಕ್ಷಮತೆಯ ಲೆಕ್ಕಾಚಾರದಲ್ಲಿ ಸರ್ಕಾರ ಎಡವಿದೆ. ಅದೇನು ಶಿವಕಾಶಿಯ ಪ್ರೆಸ್‍ನಲ್ಲಿ ಮುದ್ರಿಸುವ ವಸ್ತುವಲ್ಲವಲ್ಲ!!
4. ಪ್ರತೀ ನೋಟು ಯಾರಲ್ಲಿತ್ತು ಎಂಬುದನ್ನು ಪತ್ತೆ ಮಾಡಲು ಈಗ ಆಧಾರ್ ಪಾನ್‍ಕಾರ್ಡ್ ಮುಂತಾದ ಆದುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಇದೆ. ಇದನ್ನು ಸ್ಥೂಲವಾಗಿ ನಿರ್ವಹಣಾ ಮಾಹಿತಿ ವ್ಯವಸ್ಥೆ (MIS) ಎಂದು ಕರೆಯುತ್ತಾರೆ. ಆದರೆ ಈ ದಾಖಲೆಗಳು ಸಿಕ್ಕಿದ ಮೇಲೆ ಮೋದಿ ಏನು ಮಾಡುತ್ತಾರೆ ಎಂಬುದು ಪ್ರಶ್ನೆ. ಆದರೆ ಇದು ಅರ್ಥ ಪಡೆದುಕೊಳ್ಳುವುದು ಇದನ್ನು ಆಧರಿಸಿ ಕ್ರಮ ಕೈಗೊಂಡಾಗ.
5. ಸದ್ಯಕ್ಕೆ ಇದು ಎಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ. ಭಾರತದಲ್ಲಿರುವ ಕಪ್ಪುಹಣದಲ್ಲಿ ಒಂದು ಅಂದಾಜು ಪ್ರಕಾರ ಕೇವಲ ಶೇ. 20ರಷ್ಟು ಜಿಲ್ಲಾ, ತಾಲೂಕು ಮಟ್ಟದಲ್ಲಿದೆ. ಆದರೆ ಈ ವಹಿವಾಟು ಸುಮಾರು ಶೇ.50ಕ್ಕೂ ಜನರನ್ನು ಪ್ರಭಾವಿಸುತ್ತಿದೆ. ಇವರೆಲ್ಲಾ ಯಾರು ಅಂದರೆ ಮಂಡಿ ವ್ಯಾಪಾರಿಗಳು, ತರಕಾರಿ ಹೋಲ್ ಸೇಲ್ ವ್ಯಾಪಾರಿಗಳು, ಗುತ್ತಿಗೆದಾರರು, ವೈನ್ ಅಂಗಡಿಯವರು, ರಿಯಲ್ ಎಸ್ಟೇಟ್ ಠೊಣಪಗಳು- ಹೀಗೆ ಪಟ್ಟಿ ಸಾಗುತ್ತದೆ. ಸ್ಥಳೀಯ ರಾಜಕಾರಣದಿಂದ ಹಿಡಿದು ಇಡೀ ಭಾಜಪದ ಬಹುದೊಡ್ಡ ಬೆಂಬಲಿಗರಿರುವುದೇ ಪೆಟ್ಟಿ ಟ್ರೇಡರ್ಸ್ ಎಂದು ಕರೆಯುವ ಈ ವರ್ಗದಲ್ಲಿ. ಹಾಗಿದ್ದರೆ ಮೋದಿ ಕೂತ ಕೊಂಬೆಯನ್ನು ಕಡಿವ ಕೆಲಸಕ್ಕೆ ಕೈ ಹಾಕಿದರೇ? ಹಾಗೇನಿಲ್ಲ! ಈ ವರ್ಗ ಪಾರಾಗುವ ಸರಳ ತಂತ್ರೋಪಾಯಗಳು ಈಗಿರುವ ನಿಯಮ ನಿಬಂಧನೆಗಳ ಸಡಿಲ ಕಿಂಡಿಗಳಲ್ಲೇ ಇರುವ ಕಾರಣ ಇವರು ಪಾರಾಗುತ್ತಾರೆ. ಆದ್ದರಿಂದಲೇ ರೆಡ್ಡಿಯಂಥಾ ದುಷ್ಟ ಮೇಲ್ನೋಟಕ್ಕೆ ಮೋದಿಗೇ ಸವಾಲು ಎಸೆವಂತೆ ತನ್ನ ಮಗಳ ಮದುವೆ ಮಾಡಿದ್ದು.
6. ಇವರೆಲ್ಲಾ ನಿತ್ಯ ನಮ್ಮ ಬಡವರನ್ನೂ ಕೆಳ ಮಧ್ಯಮ ವರ್ಗದವರನ್ನು ಯಾಮಾರಿಸುತ್ತಾ, ಅತ್ತ ಸರ್ಕಾರೀ ಹಣವನ್ನು ಕಬಳಿಸುತ್ತಾ ಜೇಬು ತುಂಬಿಸಿಕೊಂಡವರು. ಕಾಲಕಾಲದ ಚುನಾವಣಾ ರಾಜಕೀಯಕ್ಕೆ ಒದಗಿ ಬರುವವರು ಇವರೇ. ಮೋದಿ ಇವರ ಜುಟ್ಟು ಹಿಡಿದರೆ ಅವರ ಮುಷ್ಠಿ ಬಡ ರೈತ , ಕಾರ್ಮಿಕ, ಮಹಿಳೆಯರ ಕತ್ತು ಹಿಡಿದಿರುತ್ತದೆ. ಅರ್ಥಾತ್ ಅವರೆಲ್ಲಾ ಬ್ಯಾಂಕುಗಳ ಎದುರು ಈಗ ಕ್ಯೂ ನಿಂತಿಲ್ಲ; ನಿಲ್ಲುವುದೂ ಇಲ್ಲ. ಆರಂಭದ ಧಾಂ ಧೂಂ ಕಳೆದ ಮೇಲೆ ವ್ಯವಸ್ಥಿತವಾಗಿ ಈ ಮೊತ್ತವನ್ನು ಬಿಳಿಗೊಳಿಸುತ್ತಾ ಹೋಗುತ್ತಾರೆ. ಈಗಾಗಲೇ ಜನಧನ್ ಖಾತೆಗಳ ಮೂಲಕ ಬಿಳಿಗೊಳಿಸುವ ಪ್ರಕ್ರಿಯೆ ಶುರುವಾಗಿದೆ ಎಂಬ ವರದಿಗಳಿವೆ. ಇನ್ನೊಂದೆಡೆ ದಿಢೀರನೆ ನಮ್ಮ ಸಾಲಮಾಡಿದ ರೈತರೆಲ್ಲಾ ಅವಧಿಗೆ ಮುಂಚೆಯೇ ಅಸಲು ಪಾವತಿ ಮಾಡಿ ಬಡ್ಡಿ ವಿನಾಯಿತಿಗೆ ಭಾಜನರಾಗುವ ಸಾಧ್ಯತೆ ಇದೆ.. ( ಈ ಸಹಕಾರೀ ಬ್ಯಾಂಕುಗಳಿಗೆ ಹಳೇ ನೋಟು ತೆಗೆದುಕೊಳ್ಳುವ ಲೈಸನ್ಸ್ ಇಲ್ಲ. ಆದರೆ ಬ್ಯಾಂಕು ಸಾಲಗಳಲ್ಲಿ ಇದು ಸಾಧ್ಯ, ಬ್ಯಾಂಕುಖಾತೆಗೆ ಜಮಾ ಮಾಡಿ ಅಲ್ಲಿಂದ ಸಹಕಾರೀ ಬ್ಯಾಂಕಿಗೆ ವರ್ಗಾಯಿಸಬಹುದು!)
7. ಅರ್ಥಾತ್ ಇಲ್ಲೂ ಸಹಕಾರೀ ರಂಗ ಮುರಿದು ಬಿದ್ದು, ಬ್ಯಾಂಕು ಸಾಲಗಳು ಮರುಪಾವತಿಯಾಗಿ ಅವು ಫಳಫಳ ಹೊಳೆಯತೊಡಗುತ್ತವೆ.
8. ಆದರೆ ಈ ಗ್ರಾಮೀಣ/ ಸಣ್ಣ ಪಟ್ಟಣಗಳ ಕುಳಗಳು ಆದಾಯ ತೆರಿಗೆ ಇಲಾಖೆಯಿಂದ ಪ್ರೇಮಪತ್ರ ಬರಬಹುದು ಎಂಬ ಶಂಕೆಯಿಂದ ತಮ್ಮ ಆಟದ ನಿಯಮ ಬದಲಾಯಿಸಬಹುದು. ಈ ಕಾರಣಕ್ಕೆ ಗ್ರಾಮೀಣ ಕೈಸಾಲಕ್ಕೆ ಕುತ್ತು ಬರುವುದು ಖಚಿತ. ಗ್ರಾಮೀಣ ಸಾಲದ ಶೇ. 55ರಷ್ಟು ಕೈಸಾಲವೇ. ಅದೂ ಶೇ.36-60 ರ ದರದಲ್ಲಿ. ಮುಂದಿನ ಹಂಗಾಮಿನಲ್ಲಿ ರೈತರಿಗೆ ಕಾರ್ಮಿಕರಿಗೆ ಈ ಸಾಲ ಬತ್ತುವ ಲಕ್ಷಣ ಇದೆ. ಈ ಬಡ್ಡಿ ಕುಳಗಳಿಂದ ಬಡವರನ್ನು ಬಿಡುಗಡೆಗೊಳಿಸುವ ಸುವರ್ಣಾವಕಾಶ ಈಗ ಸರ್ಕಾರಕ್ಕಿದೆ. ಅದಕ್ಕೆ ಸಾಂಸ್ಥಿಕ ಸಾಲದ ಸಂರಚನೆಯನ್ನು ಹೆಚ್ಚಿಸಬೇಕು. ಆದರೆ ನಮ್ಮ ಸರ್ಕಾರದ ವರ್ತನೆ ನೋಡಿದರೆ ಇದನ್ನು ಮಾಡುವ ಇಚ್ಛಾಶಕ್ತಿ ಸರ್ಕಾರದಲ್ಲಿ ಕಾಣುತ್ತಿಲ್ಲ. ಅಂದರೆ ಮತ್ತೆ ರೈತರು ಇನ್ನಷ್ಟು ಸಂಕೀರ್ಣ ಕೈಸಾಲದ ಬೆಂಕಿಗೆ ಬೀಳುತ್ತಾರೆ. ಸ್ಥಳೀಯವಾಗಿ ನಮ್ಮ ಗ್ರಾಮಾಂತರದ ಮತ್ತು ನಗರಗಳ ಬಡವರು ಇನ್ನಷ್ಟು ಬಿಕ್ಕಟ್ಟು ಎದುರಿಸಬೇಕಾಗುತ್ತದೆ.
9. ಈ ಕ್ರಮದ ಹಿಂದಿರುವ ದೂರಗಾಮೀ ಗುರಿ ಇಷ್ಟೇ. ಸರ್ಕಾರ ಮತ್ತು ಕಾರ್ಪೋರೇಟ್ ಗಮನಕ್ಕೆ ಬಾರದಂತೆ ನಡೆಯುತ್ತಿರುವ informal ವಹಿವಾಟನ್ನು ಸಂಪೂರ್ಣ ನಿಗ್ರಹಿಸಿ ಇವರನ್ನೆಲ್ಲಾ ಬ್ಯಾಂಕು ಮುಂತಾದ ಸಾಂಸ್ಥಿಕ ವೇದಿಕೆಗೆ ತಂದು ನಗದುರಹಿತ ವಹಿವಾಟನ್ನು ಹೆಚ್ಚಿಸುವ ಪ್ರಯತ್ನ ಇದು. ಜಗತ್ತಿನಾದ್ಯಂತ ಈ ನಗದುರಹಿತ ವಹಿವಾಟು ಸೃಷ್ಟಿಯಾಗಿದ್ದೇ ಕಾರ್ಪೋರೇಟ್ ವಹಿವಾಟಿಗೆ ಜನಸಾಮಾನ್ಯರನ್ನು ಒಳಪಡಿಸಲು. ಎರಡನೆಯದು, ಇಡೀ ದೇಶದ ಒಬ್ಬೊಬ್ಬನ ವ್ಯವಹಾರದ ದಾಖಲೆಯೂ ದಾಖಲಾಗುವಾಗ; ಎಲ್ಲೆಲ್ಲಿ ಅಗತ್ಯವಿದೆಯೊ ಅಲ್ಲಿ ಮೋದಿಯವರು ಅಂಥಾ ವ್ಯಕ್ತಿಗಳನ್ನು ನಿಯುಂತ್ರಿಸಬಹುದು. ದೊಡ್ಡಣ್ಣನ ಸರ್ವಾಧಿಕಾರೀ ನಿಯಂತ್ರಣ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ವಿಸ್ತರಣೆ ಇವೆರಡೇ ಇದರ ಮುಖ್ಯ ಅಜೆಂಡಾ.
10. ಆದರೆ ಇದರಿಂದಾಗಿ ಸರ್ಕಾರಕ್ಕೆ ಲಕ್ಷ ಕೋಟಿಯಷ್ಟು ಆದಾಯ ಹರಿದು ಬರಬಹುದು. ಈಗಾಗಲೇ ತೈಲ ಬೆಲೆ ಇಳಿಕೆಯಿಂದ ಮೋದಿ ಲಕ್ಷ ಕೋಟಿ ರೂ.ಗಳಷ್ಟು ಉಳಿಸಿದ್ದಾರೆ. ಅಂದರೆ 2018ರ ಬಜೆಟ್ ವೇಳೆಗೆ ಮೋದಿಯರ ಬಳಿ ಏನಿಲ್ಲವೆಂದರೂ ಎರಡು ಲಕ್ಷ ಕೋಟಿಯಷ್ಟು ಅತಿರಿಕ್ತ ಧನರಾಷಿ ಇರುತ್ತದೆ. ಆಗ ದಿಢೀರನೆ ರೈತರ/ಸ್ವಸಹಾಯ ಸಂಘಗಳ ಮಹಿಳೆಯರ ಸಾಲ ಮನ್ನಾ ಘೋಷಿಸುವುದು ಖಚಿತ. ಬೇರೇನೂ ಪವಾಡ ನಡೆಯದಿದ್ದರೆ, ಮುಂದಿನ ಚುನಾವಣೆ ಗೆಲ್ಲಲು ಮೋದಿಗೆ ಮಾರ್ಗ ಸಲೀಸು. ಮುಖೇಡಿ ಕಾಂಗ್ರೆಸ್, ಭೃಷ್ಟ ಪ್ರಾಂತೀಯ ದೊಣೆನಾಯಕರಿಗೆ ಮೋದಿಯ ಈ ರಥಮುಸಲವನ್ನು ನಿಲ್ಲಿಸುವ ಶಕ್ತಿ ಇಲ್ಲ.
11. ಅಂದರೆ ನಾವು ಇನ್ನಷ್ಟು ದುಷ್ಟ ರಾಜಕೀಯದ ವಿರುದ್ಧ ಸೆಣೆಸಲು ಬುತ್ತಿ ಮತ್ತು ಬೂಟು ತಯಾರು ಮಾಡಿಕೊಳ್ಳಬೇಕು.