‘ಮಹಾಮೈತ್ರಿಯ ಮುಂದಿನ ಹೆಜ್ಜೆಗಳು– ಸಮಾಲೋಚನಾ ಸಭೆ’ಯಲ್ಲಿ ದೇವನೂರ ಮಹಾದೇವ

  ಮೈಸೂರಿನಲ್ಲಿ 7.10.2016 ಶುಕ್ರವಾರ ಜನಾಂದೋಲನ ಮಹಾಮೈತ್ರಿ ಆಯೋಜಿಸಿದ್ದ ‘ಮಹಾಮೈತ್ರಿಯ ಮುಂದಿನ ಹೆಜ್ಜೆಗಳು– ಸಮಾಲೋಚನಾ ಸಭೆ ಹಾಗೂ ಮೈಸೂರು ಜಿಲ್ಲಾ ಘಟಕ ರಚನಾ ಸಭೆ’ಯ ಉದ್ಘಾಟನಾ ಸಮಾರಂಭದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಪ್ರಜಾವಾಣಿ ವರದಿ.              maha maitri mysur

                                                                         ಸಾಮಾಜಿಕ ಸರಕಾದ ನೀರು; ಆತಂಕ

ಮೈಸೂರು: ‘ಜೀವಜಲ ಎಂದುಕೊಂಡಿದ್ದ ನೀರನ್ನು ಸಾಮಾಜಿಕ ಸರಕು ಎಂದು ಕರೆದಿದ್ದಾರೆ’ ಎಂದು ಸಾಹಿತಿ ದೇವನೂರ ಮಹಾದೇವ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಜನಾಂದೋಲನ ಮಹಾಮೈತ್ರಿ ಆಯೋಜಿಸಿದ್ದ ‘ಮಹಾಮೈತ್ರಿಯ ಮುಂದಿನ ಹೆಜ್ಜೆಗಳು– ಸಮಾಲೋಚನಾ ಸಭೆ ಹಾಗೂ ಮೈಸೂರು ಜಿಲ್ಲಾ ಘಟಕ ರಚನಾ ಸಭೆ’ಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜಲವಿವಾದ ಸಮಿತಿಯ ಜಲನೀತಿ ತಜ್ಞರು ನೀರನ್ನು ಸಾಮಾಜಿಕ ಸರಕು ಎಂದು ಕರೆದಿದ್ದಾರೆ. ನೀರನ್ನು ದೇವತೆ ಎಂದುಕೊಂಡಿದ್ದು, ನಮ್ಮನ್ನು ಕಾಪಾಡುವ ತಾಯಿ ಎಂದುಕೊಂಡಿದ್ದು ಈಗ ಸಾಮಾಜಿಕ ಸರಕು ಎಂದು ಕರೆಯುತ್ತಿದ್ದಾರೆ. ಸಂಕಟವವಾಗುತ್ತದೆ. ಸರಕು ಎಂದಾದಲ್ಲಿ ಮಾರಾಟಕ್ಕೆ ಒಳಗಾಗುತ್ತದೆ. ಇವತ್ತು ಮಾರಾಟಗಾರರು ಯಾರು? ನಾವು ಮರ ಎಣಿಸುತ್ತ ಕೂತಿದ್ದೇವೆ. ಅಲ್ಲಿ ಕಾಡನ್ನು ಹೊತ್ತುಕೊಂಡು ಹೋಗುತ್ತಿದ್ದಾರೆ. ಕಾಡೇ ಕಣ್ಮರೆಯಾಯಿತು, ಕಾಡೇ ನಾಶವಾಯಿತು’ ಎಂದು ಕಳವಳ ವ್ಯಕ್ತಪಡಿಸಿದರು.
‘ಈ ಯುಗದ ನಡಿಗೆ ನೋಡಿದರೆ ಪ್ರತಿಯೊಂದು ಕೂಡಾ ಸರಕು ಅಥವಾ ಮಾರಾಟದ ವಸ್ತುವಾಗಿವೆ. ಸಾರ್ವಜನಿಕ ಸಂಪತ್ತು ಕೂಡಾ ಖಾಸಗಿಯವರ ಪಾಲಾಗಿದೆ. ಭೂಸ್ವಾಧೀನ ಕಾಯ್ದೆ ಗಮನಿಸಿ. ನಿಧಾನಕ್ಕೆ ಭೂಮಿ ಖಾಸಗಿಯವರ ಪಾಲಾಯಿತು. ನಂತರ ಪ್ರತಿಭಟನೆಗಳು ನಡೆದವು. ಸದ್ಯಕ್ಕೆ ಆ ಪ್ರಕ್ರಿಯೆ ನಿಂತಿದೆ. ಹಾಗೆಯೇ ರೈಲ್ವೆ ಖಾತೆಯನ್ನು ಏಕಬಜೆಟ್‌ನಿಂದ ತೆಗೆದು ಪ್ರತ್ಯೇಕ ಬಜೆಟ್‌ ಮಾಡಲಾಗಿದೆ. ಇದನ್ನು ಕೂಡಾ ಖಾಸಗಿಯವರಿಗೆ ವಹಿಸುವ ಮೂಲಕ ಸರಕು ಮಾಡುವ ಹುನ್ನಾರ ಇರಬೇಕು’ ಎಂದು ಎಚ್ಚರಿಸಿದರು.
‘ಶಿಕ್ಷಣನೀತಿ ರೂಪಿಸುತ್ತಿರುವವರು ಖಾಸಗಿ ಸಂಸ್ಥೆಯವರು. ಶಿಕ್ಷಣ, ಆರೋಗ್ಯ, ನೀರು ವ್ಯಾಪಾರವಾಯಿತು. ಈಗ ನಮ್ಮನ್ನು ಕೂಡಾ ವ್ಯಾಪಾರ ಮಾಡಲು ನಿಂತಿದ್ದಾರೆ. ಮನುಷ್ಯರನ್ನೂ ಮಾರಾಟದ ಸರಕಾಗಿ ನೋಡುವ ದೃಷ್ಟಿಕೋನ ಉಲ್ಬಣವಾಗುತ್ತಿದೆ. ಇದು ತುಂಬ ಆತಂಕಕಾರಿ’ ಎಂದರು.
‘ಇಂದಿನ ಸಮಾರಂಭವನ್ನು ಮಹಿಳೆಯರು ಉದ್ಘಾಟಿಸಿದ್ದು ಖುಷಿಯಾಯಿತು. ಹೋರಾಟ, ಸಂಘರ್ಷ, ಪ್ರತಿಭಟನೆ, ಧರಣಿ, ಮುತ್ತಿಗೆ ಇವೆಲ್ಲವೂ ಗಂಡುಸ್ವಭಾವಗಳು. ಇದೇ ರೀತಿ ಹೆಣ್ಣುಸ್ವಭಾವದ ಹೋರಾಟಗಳು ಇರುತ್ತವೆ. ಅಸಹಕಾರ, ಪ್ರತಿರೋಧ, ಮುನಿಸು ತೋರಿಸುವುದು, ಪಾಲನೆ ದೃಷ್ಟಿ ಇರುವಂಥ ಮಹಿಳೆಯರಿಂದ ಉದ್ಘಾಟಿಸಿದ್ದು ಸಂತೋಷವಾಯಿತು. ಹೆಣ್ಣಿನ ಈ ದೃಷ್ಟಿಕೋನವನ್ನು ಅಳವಡಿಸಿಕೊಳ್ಳದಿದ್ದರೆ ನಮಗೆ ಉಳಿಗಾಲವಿಲ್ಲ’ ಎಂದು ಕಿವಿಮಾತು ಹೇಳಿದರು.
‘ಪ್ರೌಢಶಾಲೆಯಲ್ಲಿ ಓದುವಾಗ ಭೂಪಟವನ್ನು ಚಿಂದಿ ಮಾಡಿಕೊಟ್ಟು ಕೂಡಿಸಿ ಎನ್ನುತ್ತಿದ್ದರು. ಎಷ್ಟು ಮಾಡಿದರೂ ಭೂಪಟ ಸೇರಿಸಲು ಆಗುತ್ತಿರಲಿಲ್ಲ. ಭೂಪಟದ ಹಿಂದೆ ಮನುಷ್ಯನ ಚಿತ್ರವಿತ್ತು. ಅದನ್ನು ಕೂಡಿಸುವುದು ಸುಲಭ. ಅದನ್ನು ಕೂಡಿಸಿ ಉಲ್ಟಾವಾಗಿ ನೋಡಿದರೆ ಭೂಪಟ ಸರಿಯಾಗಿರುತ್ತಿತ್ತು. ಅಂದರೆ ಇಡೀ ಭೂಮಿಯೆಂದರೆ ಮನುಷ್ಯ, ಪ್ರಕೃತಿ, ಸರ್ವವೂ ಹೌದು. ಮನುಷ್ಯ ಸರಿಯಾದರೆ ಭೂಮಿ, ಪ್ರಕೃತಿ ಸರಿಯಾಗುತ್ತದೆ. ಇದನ್ನು ಪ್ರಸ್ತಾಪಿಸಲು ಕಾರಣ; ಒಂದು ದೇಹ, ದೇಶ ಕೂಡಾ ಮುಖ್ಯ. ದೇಹದಲ್ಲಿ ಬಿಳಿರಕ್ತಕಣ ಹಾಗೂ ಕೆಂಪು ರಕ್ತಕಣ ಇರುತ್ತವೆ. ಬಿಳಿರಕ್ತಕಣ ಹೆಚ್ಚಾದರೆ ಕ್ಯಾನ್ಸರ್‌ ಆಗುತ್ತದೆ. ಹೀಗೆ ರಕ್ತಕಣಗಳು ಎಷ್ಟಿರಬೇಕೊ ಅಷ್ಟಿರಬೇಕು. ಇದೇ ಪರಿಕಲ್ಪನೆಯನ್ನು ನಮ್ಮ ಸಮಾಜಕ್ಕೆ ತೆಗೆದುಕೊಂಡರೆ, ಕೆಲವೇ ಶ್ರೀಮಂತರು ಬಿಳಿರಕ್ತ ಕಣದ ರೀತಿಯ ಬಂಡವಾಳಶಾಹಿಗಳಾಗಿ ಬೆಳೆಯುತ್ತಿದ್ದಾರೆ. ಅಂದರೆ, ಕೆಲವೇ ಶ್ರೀಮಂತರ ಕೈಯಲ್ಲಿ ಸಂಪತ್ತು ಕ್ರೋಡೀಕರಣವಾಗುತ್ತಿದೆ. ಬಿಳಿರಕ್ತ ಕಣ ದೇಶದ ಬಿಳಿರಕ್ತ ಕಣದಲ್ಲಿ ಒಂದಾಗಿದೆ. ಕೆಂಪುರಕ್ತ ಕಣ ತತ್ತರಿಸುತ್ತಿದೆ. ಇದು ಕ್ಯಾನ್ಸರ್‌ ಅಭಿವೃದ್ಧಿಯೆಂದು ಕರೆಯಬೇಕು. ಇದನ್ನು ಪ್ರಚಾರಗೊಳಿಬೇಕು’ ಎಂದು ವಿವರಿಸಿದರು.
‘ಸಮಾನತೆ ಮತ್ತು ಅಭಿವೃದ್ಧಿ ಸಮತೋಲನವಾಗಿದ್ದಾಗ ಮಾತ್ರ ಅಭಿವೃದ್ಧಿಯೆಂದು ಕರೆಯಬೇಕು, ಕ್ಯಾನ್ಸರ್‌ ಅಭಿವೃದ್ಧಿಯಲ್ಲ. ಪ್ರತಿಯೊಬ್ಬರು ಕೂಡಾ ಅವರವರ ಆಂದೋಲನಗಳನ್ನು ಸಮರ್ಪಕವಾಗಿ ಮಾಡುತ್ತ, ಪರಸ್ಪರ ಸ್ಪಂದಿಸಿಕೊಂಡು, ಕೂಡಿಕೊಂಡು ಒತ್ತಾಸೆಯಾಗಿ ಪ್ರಗತಿಯ ಕಡೆಗೆ ಹೆಜ್ಜೆ ಇಡಲು ಸಮಾನತೆ ಕಡೆ ಸಾಗುವುದು ಜನಾಂದೋಲನದ ಮಹಾಮೈತ್ರಿಯ ಗುರಿಯಾಗಬೇಕು’ ಎಂದು ಕರೆ ನೀಡಿದರು.