ದೇವನೂರ ಮಹಾದೇವಗೆ ಕುವೆಂಪು ರಾಷ್ಟ್ರೀಯ ಪ್ರಶಸ್ತಿ

[ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು 2016ನೇ ಸಾಲಿನ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಸುದ್ದಿಯನ್ನು 5.10.2016 ರಂದು ಘೋಷಿಸಲಾಯ್ತು]

ನವದೆಹಲಿ: ಹಿರಿಯ ಸಾಹಿತಿ ದೇವನೂರ ಮಹಾದೇವ ಅವರನ್ನು 2016ನೇ ಸಾಲಿನ ಪ್ರತಿಷ್ಠಿತ  ಕುವೆಂಪು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕುವೆಂಪು ಪ್ರತಿಷ್ಠಾನ ನೀಡುವ ಈ ಪ್ರಶಸ್ತಿಯನ್ನು ಕನ್ನಡನಾಡಿನ ಖ್ಯಾತ ಕವಿ ಕುವೆಂಪು ಅವರ ಜನ್ಮದಿನವಾದ ಅಂಗವಾಗಿ ಡಿ.29ರಂದು ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರೋ.ಹಂಪ ನಾಗರಾಜಯ್ಯ ಅವರು ಬುಧವಾರ ಹೇಳಿದ್ದಾರೆ. 5 ಲಕ್ಷ ರೂ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡ ಈ ಪ್ರಶಸ್ತಿಯನ್ನು ಕುಪ್ಪಳ್ಳಿಯಲ್ಲಿ ಪ್ರದಾನ ಮಾಡಲಾಗುವುದು. ಹಿಂದಿಯ ಹಿರಿಯ ಲೇಖಕ ಗಂಗಾಪ್ರಸಾದ್ ವಿಮಲ್, ಜವಾಹರಲಾಲ್ ವಿಶ್ವವಿದ್ಯಾಲಯದ ಉರ್ದು ವಿಭಾಗದ ಮುಖ್ಯಸ್ಥ ಅನ್ವರ್ ಪಾಷಾ, ಮಧ್ಯಪ್ರದೇಶ ವಿವಿಯ ಕುಲಪತಿ ಪ್ರೊ ಕಟ್ಟೀಮನಿ , ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ ಪುರುಷೋತ್ತಮ ಬಿಳಿಮಲೆ, ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರನ್ನೊಳಗೊಂಡ ಸಮಿತಿ ಈ ಆಯ್ಕೆಯನ್ನು ಮಾಡಿದೆ. ನಾಡೋಜ ಹಂಪನಾ ಅವರು ಸಮಿತಿಯ ಅಧ್ಯಕ್ಷರಾಗಿದ್ದರು.

ಮೈಸೂರು ಜಿಲ್ಲೆಯ ನಂಜನಗೂಡಿನ ದೇವನೂರ ಮಹಾದೇವ ಅವರು, ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಕೆಲಕಾಲ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃಷಿಯಲ್ಲಿ ವಿಶೇಷವಾದ ಆಸಕ್ತಿ ಹೊಂದಿರುವ ದೇವನೂರ ಮಹಾದೇವ ಅವರ ಕಿರು ಕಾದಂಬರಿ ‘ಒಡಲಾಳ’ ಕೃತಿಯನ್ನು ಕೋಲ್ಕತದ ಭಾರತೀಯ ಪರಿಷತ್ 1984ರಲ್ಲಿ ಉತ್ತಮ ಶೃಜನಶೀಲ ಕೃತಿ ಎಂದು ಗೌರವಿಸಿದೆ. 1991ರಲ್ಲಿ ಅವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.