ಅಸ್ಪೃಶ್ಯ ಕೇಂದ್ರಿತ ಗ್ರಾಮ ನಿರ್ಮಾಣವಾಗಲಿ-ದೇವನೂರ ಮಹಾದೇವ

[ನ್ಯಾಯಮೂರ್ತಿ ಶ್ರೀ ಹೆಚ್.ಎಸ್. ನಾಗಮೋಹನ್ ದಾಸ್ ರಚಿತ ‘ಡಾ.ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನು’ ಪುಸ್ತಕ ಬಿಡುಗಡೆ ಕಾರ್ಯಕ್ರಮವು 10.9.2016ರಂದು ಬೆಂಗಳೂರಿನಲ್ಲಿ ನಡೆಯಿತು. ಪುಸ್ತಕವನ್ನು ಸಾಹಿತಿ ದೇವನೂರ ಮಹಾದೇವ ಅವರು ಬಿಡುಗಡೆ ಮಾಡಿದರು. ಅದರ ಪ್ರಜಾವಾಣಿ ಪತ್ರಿಕಾ ವರದಿ ಇಲ್ಲಿದೆ.]

ಬೆಂಗಳೂರು: ‘ಅಸ್ಪೃಶ್ಯರನ್ನು ಊರಿನ ಹೊರಗೆ ಇಟ್ಟಿದ್ದೇವೆ, ಬದಲಿಗೆ ಅವರನ್ನು ಊರು, ಮನಸ್ಸಿನ ಒಳಗೆ ಬಿಟ್ಟುಕೊಂಡಾಗ ಆರೋಗ್ಯಯುತ ಗ್ರಾಮ ನಿರ್ಮಾಣವಾಗುತ್ತದೆ’ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ಸೆಂಟರ್ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜನ್ಮದಿನದ ಪ್ರಯುಕ್ತ ನಗರದಲ್ಲಿ ಶನಿವಾರ  ಹಮ್ಮಿಕೊಂಡಿದ್ದ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಅವರ ‘ಡಾ.ಬಿ.ಆರ್‌.ಅಂಬೇಡ್ಕರ್‌ ಮತ್ತು ಕಾರ್ಮಿಕ ಕಾನೂನು’ ಕಿರುಹೊತ್ತಿಗೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಊರಿನಿಂದ ಆಚೆಗೆ ಅಸ್ಪೃಶ್ಯರನ್ನು ಎಸೆದಿದ್ದೇವೆ. ಅವರನ್ನೂ ಮನಸ್ಸಿನೊಳಗೆ ಇಟ್ಟುಕೊಂಡರೆ ಅಸ್ಪೃಶ್ಯ ಕೇಂದ್ರಿತ ಗ್ರಾಮ ಕಟ್ಟಬಹುದು, ಆಗ ಗ್ರಾಮ ಆರೋಗ್ಯವಾಗಿರುತ್ತದೆ’ ಎಂದರು. ‘ಗಾಂಧಿ ಅವರು ಗ್ರಾಮ ಸ್ವರಾಜ್‌ ಬಗ್ಗೆ ಹೇಳುತ್ತಾರೆ, ಅಸ್ಪೃಶ್ಯ ಕೇಂದ್ರದ ಬಗ್ಗೆ ಹೇಳುವುದಿಲ್ಲ. ಅಸ್ಪೃಶ್ಯ ಕೇಂದ್ರಿಯ ಗ್ರಾಮ  ಆದಾಗ ಗ್ರಾಮ ಕೇಂದ್ರಿತವಾದ ನಾಡನ್ನು ಕಟ್ಟಬಹುದು’ ಎಂದು ಸಲಹೆ ನೀಡಿದರು.

‘1893ರಲ್ಲಿ ಗಾಂಧಿ ಅವರು ಆಫ್ರಿಕಾದಲ್ಲಿ ರೈಲಿನಿಂದ ಕರಿಯ ಎಂದು ದಬ್ಬಿಸಿಕೊಳ್ಳುತ್ತಾರೆ, 1917ರಲ್ಲಿ ಅಂಬೇಡ್ಕರ್‌ ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿ ಬರೋಡದಲ್ಲಿ ವಕೀಲಿ ವೃತ್ತಿ ಮಾಡಲು ಬಂದಾಗ ಬಾಡಿಗೆ ಮನೆ ಸಿಗದೆ ಜಾತಿ ಹೆಸರು ಹೇಳಿಕೊಳ್ಳದೇ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಾರೆ.

ಜಾತಿ ಗೊತ್ತಾದಾಗ ಅಲ್ಲಿಯೂ ಇಟ್ಟುಕೊಳ್ಳದೇ ಬೀದಿಗೆ ತಳ್ಳುತ್ತಾರೆ, ಆಗ ಮನಸ್ಸು ಖಾಲಿಯಾಗಿತ್ತು ಎಂದು ಹೇಳುತ್ತಾರೆ ಅಂಬೇಡ್ಕರ್‌. ಗಾಂಧಿಯನ್ನು ರೈಲಿನಿಂದ ದಬ್ಬಿದ ಘಟನೆಯನ್ನು ನಮಗೇ ಆದ ಅವಮಾನ ಎಂದು ಭಾರತ ಭಾವಿಸಿದೆ.

ಆದರೆ ಅಂಬೇಡ್ಕರ್‌ ಜಾತಿ ಕಾರಣಕ್ಕೆ ದಬ್ಬಿಸಿಕೊಂಡು ಬೀದಿಗೆ ಬಂದಿದ್ದಾರೆ, ಇದನ್ನು ತನ್ನದೇ ಅವಮಾನ ಎಂದು ದೇಶ ಭಾವಿಸಿಲ್ಲ. ಅದು ದೊಡ್ಡದು, ಇದು ಚಿಕ್ಕದು ಎಂದು ಹೇಳುವುದಿಲ್ಲ. ಭಾರತೀಯ ಮನಸ್ಥಿತಿ ಅರ್ಥಮಾಡಿಕೊಳ್ಳಲು ನೋಡುತ್ತಿದ್ದೇನೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಎಚ್‌.ಎನ್‌. ನಾಗಮೋಹನ ದಾಸ್‌ ಮಾತನಾಡಿ, ‘ಜಾತ್ಯತೀತತೆ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವವನ್ನು ನಾನು ಅನೇಕ ವರ್ಷಗಳ ಕಾಲ ಅರ್ಥಮಾಡಿಕೊಂಡಿದ್ದೇ ಬೇರೆ ರೀತಿ, ಹೆಚ್ಚೆಚ್ಚು ಅಂಬೇಡ್ಕರ್‌ ಅವರನ್ನು ಓದಿಕೊಂಡಾಗ ಈ ಪದಗಳಿಗೆ ಸಿಕ್ಕ ಅರ್ಥವೇ ಬೇರೆ.  ಅದನ್ನು ಈ ಪುಸ್ತಕದಲ್ಲಿ ತಿಳಿಸಿದ್ದೇನೆ’ ಎನ್ನುತ್ತಾರೆ.

‘ಈ ವಿಷಯಗಳ ಬಗ್ಗೆ ಅಂಬೇಡ್ಕರ್‌ ಅವರು ತೆಳೆದಿದ್ದ ಚಿಂತನೆಯನ್ನು  ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ  ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಿತ್ತು’ ಎಂದು ಸಲಹೆ ನೀಡಿದರು. ಸಿಐಟಿಯು ಅಧ್ಯಕ್ಷ ಕೆ.ಪ್ರಕಾಶ್‌, ವಕೀಲ ಎಸ್‌.ಸುಬ್ಬರಾವ್‌, ವಿ.ಜೆ.ಕೆ. ನಾಯರ್, ವಸಂತಕುಮಾರ್ ಹಿಟ್ಟಣಗಿ ಇದ್ದರು.