ಬಾಳಿಕೆಯ (Sustainable) ಬಾಳ್ವೆಗಾಗಿ ಒಂದಿಷ್ಟು ಮಾತುಗಳು-ದೇವನೂರ ಮಹಾದೇವ

[ದೇವನೂರ ಮಹಾದೇವ ಅವರ ಈ ಲೇಖನ ಪ್ರಜಾವಾಣಿ 17.7.2016 ರ ಮುಕ್ತಛಂದ ಪುರವಣಿಯಲ್ಲಿ ಪ್ರಕಟವಾಗಿದೆ.]

 

1
ಹಿಂದೊಮ್ಮೆ ನಾನಾಡಿದ ಮಾತುಗಳು – ಅವು ನನ್ನನ್ನು ಹಿಂಬಾಲಿಸುತ್ತಿದ್ದಾವೊ ಅಥವಾ ನಾನೇ ಆ ಮಾತುಗಳನ್ನು ಹಿಂಬಾಲಿಸುತ್ತಿದ್ದೇನೊ ತಿಳಿಯದು. ಆ ಮಾತುಗಳನ್ನಾಡಿದ ಮೇಲೆ ನಾನೇ ನನ್ನ ಮಾತುಗಳಿಗೆ ದಿಗಿಲುಗೊಂಡೆ. ಆ ಮಾತುಗಳಿವು: ಚರಿತ್ರೆಯ ಪಾಠಗಳಲ್ಲಿ ನಾವು ಮೊದಲನೆಯ ಮಹಾಯುದ್ಧದ ಬಗ್ಗೆ ಓದಿದ್ದೇವೆ, ಕೇಳಿದ್ದೇವೆ. ಎರಡನೆ ಮಹಾಯುದ್ಧದ ಬಗೆಗೂ ಓದಿದ್ದೇವೆ, ಕೇಳಿದ್ದೇವೆ. ಚಲನಚಿತ್ರಗಳನ್ನೂ ನೋಡಿದ್ದೇವೆ. ಆ ಜಮಾನದವರು ಈಗ ಬದುಕಿದ್ದರೂ ಬೆರಳೆಣಿಕೆಯಷ್ಟು ಜನ ಮಾತ್ರ ಬದುಕಿರಲೂಬಹುದು. ಈಗ ಪ್ರಪಂಚದ ಬುದ್ಧಿವಂತರು, ಜ್ಞಾನಿಗಳು, ತರ್ಕಿಗಳು ಮೂರನೇ ಮಹಾಯುದ್ಧ ಜರುಗಬಹುದೇ ಹೇಗೆ? ಎಂಬ ಲೆಕ್ಕಾಚಾರದಲ್ಲಿ ಕುಳಿತಿದ್ದಾರೆ. ಮೂರನೇ ಮಹಾಯುದ್ಧ ಜರುಗಿದಲ್ಲಿ ಜೀವಸಂಕುಲ ಉಳಿಯಬಹುದೇ? ಉಳಿದರೆ ಎಷ್ಟು? ಹೇಗೆ? ಈ ಕಷ್ಟನಷ್ಟಗಳ ಡ್ಯಾಮೇಜ್ ಲೆಕ್ಕಾಚಾರದಲ್ಲಿದ್ದಾರೆ, ಅವರು ಮಾಡುತ್ತಿರಲಿ.

ಮಾನವಕುಲದ ನೆನಪಲ್ಲಿ ಎರಡನೇ ಮಹಾಯುದ್ಧ ಎಂದಾಕ್ಷಣ ಇನ್ನೂ ಒಣಗದ ಗಾಯದಂತಿರುವುದು – ಒಂದು ಜರ್ಮನಿ ಹಿಟ್ಲರ್‌ನ ಗ್ಯಾಸ್ ಚೇಂಬರ್. ಇನ್ನೊಂದು ಜಪಾನಿನ ಹಿರೋಶಿಮಾ ನಾಗಾಸಾಕಿಗಳ ಮೇಲೆ ಬಿದ್ದ ವಿನಾಶಕಾರಿ ಅಣುಬಾಂಬ್. ಗೊತ್ತಿದೆ ನಮಗೆ, ಹಿಟ್ಲರ್‌ ಒಂದು ನಿಗದಿತ ಸ್ಥಳದಲ್ಲಿ ಗಾಳಿಯಾಡದ ಒಂದು ಬೃಹತ್ ಕಟ್ಟಡ ಕಟ್ಟಿಸಿದ್ದ. ಅದರೊಳಕ್ಕೆ ತನ್ನ ಶತ್ರುಗಳನ್ನು ಕುರಿಮಂದೆ ಎಂಬಂತೆ ತುಂಬುತ್ತಿದ್ದ. ಬಾಗಿಲು ಮುಚ್ಚಿ ಆ ಚೇಂಬರಿಗೆ ವಿಷಗಾಳಿ ಬಿಡುತ್ತಿದ್ದ. ಆಮೇಲೆ ಬಾಗಿಲು ತೆಗೆದಾಗ ಆ ಕೂಡಿ ಹಾಕಿದ್ದ ಜನಮಂದೆಯ ದೇಹದ ಉಸಿರುಗಾಳಿ ನಿಂತಿರುತ್ತಿತ್ತು. ಜೀವವಾಗಿ ಒಳಹೋದವರು ಹೆಣವಾಗಿ ಹೊರಬರುತ್ತಿದ್ದರು.

ಇದನ್ನು ಕಷ್ಟಪಟ್ಟು ಮರೆಯೋಣ. ವರ್ತಮಾನಕ್ಕೆ ಬರೋಣ. ನೋಡಿದರೆ ಕಾಣುವುದೇನು? ಇತ್ತೀಚೆಗೆ ಡೆಲ್ಲಿಯಲ್ಲಿ ವಾಯುಮಾಲಿನ್ಯ ತಡೆಗಟ್ಟಲು ವಾಹನಗಳಿಗೆ ಸಮಸಂಖ್ಯೆ, ಬೆಸಸಂಖ್ಯೆ ಯೋಜನೆ ಬಂತು. ಒಂದು ವರದಿ ಪ್ರಕಾರ ಜಗತ್ತಿನ ಶೇಕಡ ೮೦ರಷ್ಟಕ್ಕೂ ಹೆಚ್ಚು ನಗರಗಳಲ್ಲಿ ಗಾಳಿ ವಿಷಮಯವಾಗುತ್ತಿದೆಯಂತೆ. ಇದೇನು ಪಿಸುಗುಡುತ್ತಿದೆ? ಜಗತ್ತಿನ ನಗರಗಳೇ ಇಂದು ಹಿಟ್ಲರ್‌ನ ಗ್ಯಾಸ್‌ಚೇಂಬರ್ ಆಗುವತ್ತ ಧಾವಿಸುತ್ತಿವೆ ಎಂದಲ್ಲವೆ? ಅಂದು ಹಿಟ್ಲರ್‌ನ ಗ್ಯಾಸ್‌ಚೇಂಬರ್ ಒಂದು ನಿಗದಿತ ಸ್ಥಳದಲ್ಲಿದ್ದರೆ ಇಂದು ಇಡೀ ನಗರಗಳು ಗ್ಯಾಸ್‌ಚೇಂಬರ್ ಆಗುವಕಡೆಗೆ ಚಲಿಸುತ್ತಿವೆ.

ಇದಕ್ಕೆ ಪೂರಕವಾಗಿ ಇತ್ತೀಚೆಗೆ ನಾನೊಂದು ಸಾಕ್ಷ್ಯಚಿತ್ರ ನೋಡಿದೆ. ಚಂದ್ರಪ್ರಭಾ ಅವರು ಚಿತ್ರಿಸಿರುವ ಈ ಸಾಕ್ಷ್ಯಚಿತ್ರದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಗೇರು ಮರಗಳಿಗೆ ಎಂಡೋಸಲ್ಫಾನ್ ಎಂಬ ವಿಷ ರಾಸಾಯನಿಕ ಸಿಂಪಡಿಸಿ ನಾವು ತಿನ್ನುವ ಗೋಡಂಬಿ ಬೆಳೆಯುತ್ತಾರೆ. ಹೆಲಿಕಾಫ್ಟರ್, ಆ ಗೇರುಮರಗಳ ಪ್ರದೇಶಕ್ಕೆಲ್ಲಾ ಎಂಡೋಸಲ್ಫಾನ್ ರಾಸಾಯನಿಕ ವಿಷ ಸಿಂಪಡಿಸುತ್ತಾ ಸಾಗುವ ವೈಖರಿ ಹಿರೋಶಿಮಾ–ನಾಗಾಸಾಕಿ ಮೇಲೆ ಹಾಕಿದ ಅಣುಬಾಂಬನ್ನು ನೆನಪಿಸುವಂತಿತ್ತು. ಪರಿಣಾಮದಲ್ಲೂ ಕೂಡ ಎಂಡೋಸಲ್ಫಾನ್ ಸಿಂಪಡಿಸಿದ ಸುತ್ತಲಿನ ಪ್ರದೇಶದಲ್ಲಿ ಅಣುಬಾಂಬನ್ನು ಹಾಕಿದ್ದರ ಪರಿಣಾಮದಂತೆಯೇ – ಮಾರಕ ಕಾಯಿಲೆಗಳು, ಬುದ್ಧಿಮಾಂದ್ಯತೆ, ಅಂಗವಿಕಲತೆ ಇತ್ಯಾದಿ ಇತ್ಯಾದಿಗಳು ಗರ್ಭದೊಳಗಿನ ಶಿಶುವನ್ನೂ ಬಿಡದೆ ಜಖಂ ಮಾಡಿಬಿಟ್ಟಿದೆ. ಆದರೆ ನಾವು? ನಮ್ಮ ಸಹಜೀವಿಗಳು ವಿಕಲಚೇತನರಾಗಲು ಕಾರಣರಾಗಿ ವಿಕಲಚೇತನರಂತೆಯೇ ಇರುವ ಗೋಡಂಬಿಯನ್ನು ಸೇವಿಸುತ್ತಿದ್ದೇವೆ. ತಲ್ಲಣವಾಗುತ್ತಿದೆ. ಇದೇನು? ಇದು ಹಿರೋಶಿಮಾ–ನಾಗಾಸಾಕಿಗಳ ಮೇಲೆ ಬಿದ್ದ ಆ ಅಣುಬಾಂಬ್‌ನ ಮಾರುವೇಷವಲ್ಲವೇ?

ಕೇವಲ 250 ವರ್ಷಗಳ ಆಜುಬಾಜಲ್ಲಿ ಆಸ್ಟ್ರೇಲಿಯಾಕ್ಕೆ ಪಾದಾರ್ಪಣೆ ಮಾಡಿದ ಐರೋಪ್ಯರು ಅಲ್ಲಿನ ಮೂಲನಿವಾಸಿಗಳನ್ನು ಮನುಷ್ಯರು ಎಂದು ಪರಿಗಣಿಸದೆ ಆ ಭೂಪ್ರದೇಶವನ್ನು ನಿರ್ಜನ ಪ್ರದೇಶ ಎಂದು ಘೋಷಿಸುತ್ತಾರೆ! ಅಲ್ಲಿನ ಮೂಲನಿವಾಸಿಗಳನ್ನು ಜಾನುವಾರುಗಳು ಎಂಬಂತೆ ಅಟ್ಟಾಡಿಸಿಕೊಂಡು ಧ್ವಂಸಮಾಡುತ್ತಾರೆ. ಆ ಮೂಲನಿವಾಸಿಗಳು ಕುಡಿಯುವ ನೀರಿನ ಕೊಳಗಳಿಗೆ ವಿಷವನ್ನೂ ಹಾಕುತ್ತಾರೆ. ಆದರೆ ಇಂದು? ಅಂತರ್ಜಲ ಪಾತಾಳ ತಲುಪಿ ನೀರೇ ವಿಷಮಯವಾಗುತ್ತಿದೆ. ಜೀವಜಲ ಎಂದು ಕರೆಸಿಕೊಳ್ಳುತ್ತಿದ್ದ ಜೀವಜಲವು, ಜೀವ ತೆಗೆಯುವ ಜಲವಾಗಿ ಪರಿಣಮಿಸುತ್ತಿದೆ. ಜೊತೆಗೆ ಆಹಾರವೂ ಕೂಡ.

ಈ ಹಿಂದೆ ಸಂಪತ್ತಿನ ಲೂಟಿಗೋ ಜನಾಂಗೀಯ ಶ್ರೇಷ್ಠತೆ ಸ್ಥಾಪಿಸಲೋ ಅಥವಾ ಒಂದು ಪ್ರದೇಶವನ್ನು ವಶಪಡಿಸಿಕೊಂಡು ಪಾರುಪತ್ಯವನ್ನು ನಡೆಸಲೋ ಯುದ್ಧಗಳು ಜರುಗುತ್ತಿದ್ದವು. ಆಗ ಯುದ್ಧಗಳು ಕಣ್ಣಿಗೆ ಗೋಚರಿಸುತ್ತಿದ್ದವು, ಕಾಣುತ್ತಿತ್ತು. ಕಾಣುತ್ತ ಇದ್ದುದರಿಂದ ನಾವು ಯುದ್ಧ ನಡೆಯಿತು ಎಂದು ಅಂದುಕೊಳ್ಳುತ್ತಿದ್ದೆವು. ಆದರೆ ಈಗ? ಯುದ್ಧದ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ. ಆದರೆ ಯುದ್ಧ ಕಾಣುತ್ತಿಲ್ಲ!
ಹಾಗಾದರೆ ಸೇವಿಸುವ ಗಾಳಿ, ಕುಡಿಯುವ ನೀರು, ತಿನ್ನುವ ಅನ್ನಕ್ಕೆಲ್ಲ ವಿಷವನ್ನಿಕ್ಕುತ್ತಿರುವವರು ಯಾರು? ಯಾವ, ಯಾರ ಸಾಮ್ರಾಜ್ಯ ಸ್ಥಾಪನೆಗಾಗಿ ಈ ದಾಹ?

ಒಂದು ಕಾರ್ಟೂನ್ ಕತೆಯ ಸಾಕ್ಷ್ಯಚಿತ್ರವನ್ನು ಸೂಕ್ಷ್ಮವಾಗಿ ನೋಡಿದರೆ, ಇಂದು ಜರುಗುತ್ತಿರುವ ಯುದ್ಧವನ್ನು ಅದು ಕಾಣಿಸಿಬಿಡುತ್ತದೆ. 90ರ ದಶಕದಲ್ಲಿ ಅಮೆರಿಕಾದ ಉಪಾಧ್ಯಕ್ಷರಾಗಿದ್ದ ಆಲ್ಗೋರೆ ಅವರು ಚಿತ್ರಿಸಿದ ಆ ಡಾಕ್ಯುಮೆಂಟರಿ ಕತೆ ಸಾರ ಹೀಗಿದೆ: (ಆಧಾರ – ನಾಗೇಶ ಹೆಗಡೆ ಅವರ ‘ಕೋಪೆನ್ ಹೇಗೆನ್ ಋತು ಸಂಹಾರ’) ಕಥೆಯ ಹೆಸರು – ‘ಕಪ್ಪೆ ಅಲ್ಲ, ಮನುಷ್ಯನ ಕಥೆ’.

‘‘ಒಂದು ಗಾಜಿನ ಪಾತ್ರೆಯಲ್ಲಿ ಕುದಿಯುವವರೆಗೆ ನೀರನ್ನು ಕಾಯಿಸಿ, ಆ ಕುದಿಯುವ ನೀರಿಗೆ ಕಪ್ಪೆಯೊಂದನ್ನು ಹಾಕಿಬಿಟ್ಟರೆ ಹಠಾತ್ತಾಗಿ ಕುದಿಯುವ ನೀರಿಗೆ ಬಿದ್ದ ಕಪ್ಪೆ ಚಡಪಡಿಸಿ ಚಕ್ಕನೆ ಹೊರಕ್ಕೆ ಕುಪ್ಪಳಿಸುತ್ತದೆ. ಸುಟ್ಟಗಾಯಗಳಾದರೂ ಆ ಕಪ್ಪೆ ಬದುಕುಳಿಯಬಹುದು.

ಅದೇ ಕಪ್ಪೆಯನ್ನು ಮತ್ತೆ ಹಿಡಿದು ಈ ಸಲ ತಣ್ಣನೆಯ ನೀರಿನ ಪಾತ್ರೆಯಲ್ಲಿ ಮುಳುಗಿಸಿದರೆ ಆ ಕಪ್ಪೆ ಪಿಳಿಪಿಳಿ ಕಣ್ಣು ಬಿಡುತ್ತಾ ಕೂರುತ್ತದೆ. ಆಮೇಲೆ ನೀರನ್ನು ನಿಧಾನವಾಗಿ ಬಿಸಿ ಮಾಡತೊಡಗಿದರೆ ಕಪ್ಪೆಗೆ ಇದು ಗೊತ್ತಾಗುವುದೇ ಇಲ್ಲ. ಕ್ರಮೇಣ ನೀರಿನ ಉಷ್ಣತೆಯನ್ನು ಹೆಚ್ಚಿಸುತ್ತಾ ಹೋದರೂ ಕಪ್ಪೆಗೆ ಆಗಲೂ ಗೊತ್ತಾಗುವುದಿಲ್ಲ. ಉಷ್ಣತೆ ಮತ್ತಷ್ಟು ಏರಿದರೂ ಕಪ್ಪೆ ಮತ್ತೆ ತುಸು ಚಡಪಡಿಸಿ ಮತ್ತೆ ಅಲ್ಲೇ ಹೇಗೋ ಹೊಂದಿಕೊಂಡು ಕೂರುತ್ತದೆ. ಉಷ್ಣತೆ ಹೆಚ್ಚಾಗುತ್ತಾ ಹೋಗಿ ತಾಳಲಾಗದ ಒಂದು ಹಂತ ತಲುಪಿದ ಮೇಲೆ ಆ ಗಾಜಿನ ಪಾತ್ರೆಯೊಳಗಿದ್ದ ಕಪ್ಪೆ ಅಂಗಾತವಾಗುತ್ತದೆ. ಕೈಕಾಲು ಚೆಲ್ಲುತ್ತದೆ. ಕಣ್ಣು ತೇಲುತ್ತದೆ. ಅಲ್ಲಿ ಅದರ ಶವ ತೇಲುತ್ತಿರುತ್ತದೆ’’.

ಇದು ಏರುತ್ತಿರುವ ಜಾಗತಿಕ ತಾಪಮಾನವನ್ನು ಹೇಳುವ ಕತೆ. ಈ ಕತೆಯ ಒಳಹೊಕ್ಕು ನೋಡಿದರೆ ಕಾಣತೊಡಗುತ್ತದೆ –ಮೂರನೆಯ ಮಹಾಯುದ್ಧ ಈಗ ಜರುಗುತ್ತಿದೆ, ಆದರೆ ಅಗೋಚರವಾಗಿ. ಒಟ್ಟಿನಲ್ಲಿ ನಾವು ಸೇವಿಸುವ ಗಾಳಿ. ಕುಡಿಯುವ ನೀರು, ತಿನ್ನುವ ಅನ್ನ ಅಷ್ಟೇ ಅಲ್ಲ, ಈ ಭೂಮಿ ವಿಷಮಯವಾಗುತ್ತಾ ಜೊತೆಗೆ ಬೇಯುತ್ತಿದೆ. ಆದರೂ ಪರಿಸ್ಥಿತಿಗೆ ನಾವು ಹೊಂದಿಕೊಂಡು ಹೋಗುತ್ತಾ ಚಡಪಡಿಸುತ್ತಾ ಜೀವಿಸುತ್ತಿದ್ದೇವೆ, ಅಂಗಾತ ಬಿದ್ದಿಲ್ಲ ಅಷ್ಟೆ. ಹಿಂದಿನ ಯುದ್ಧಗಳಲ್ಲಿ ಒಲೆ ಹತ್ತಿ ಉರಿದಂತೆ ನಿರ್ದಿಷ್ಟ ಸ್ಥಳಗಳಲ್ಲಿ ನಡೆಯುತ್ತಿತ್ತು. ವ್ಯತ್ಯಾಸವೆಂದರೆ ಇಂದಿನ ಯುದ್ಧ ಧರೆ ಹತ್ತಿ ಉರಿದಂತೆ.

ಈ ಅನಾಹುತಕ್ಕೆಲ್ಲ ಬಹುತೇಕ ಕಾರಣ – ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳದ ಧ್ವಂಸಕ ಕಾರ್ಯಚಟುವಟಿಕೆ ಎಂಬುದು ಈಗಾಗಲೇ ಚರ್ಚಿತ ಸಂಗತಿಗಳಾಗಿದ್ದರೂ ಖಚಿತತೆಗಾಗಿ ನಾಗೇಶ ಹೆಗಡೆ ಅವರಿಗೆ ಫೋನು ಮಾಡಿ ‘ಈ ಗಾಳಿ, ಈ ನೀರು, ಆಹಾರ ವಿಷಮಯವಾಗುತ್ತಾ ಜೊತೆಗೆ ಜಾಗತಿಕ ತಾಪಮಾನ ಏರುತ್ತಿರುವುದಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಶೇಕಡ 75ರಷ್ಟಾದರೂ ಕಾರಣ ಇರಬೇಕಲ್ಲವೆ?’ ಎಂದು ಕೇಳಿದೆ. ಬಹುರಾಷ್ಟ್ರೀಯ ಕಂಪನಿಗಳೇ ಈ ಭೂಧ್ವಂಸಕ ಕೃತ್ಯಕ್ಕೆ ಶೇಕಡ 75ರಷ್ಟಾದರೂ ಕಾರಣವಾಗಿರಲಿ ಎಂಬುದು ನನ್ನ ಒಳಾಸೆಯಾಗಿತ್ತು. ಆದರೆ ಅವರು ಹೇಳಿದರು – ‘ನವೊಮಿ ಕ್ಲೈನ್ ಎಂಬ ಕೆನಡಾ ಸಂಶೋಧಕಿ ಪ್ರಕಾರ ಇಂದಿನ ಈ ಅನಾಹುತಗಳಿಗೆಲ್ಲ ಶೇಕಡ 99ರಷ್ಟು ಕಾರಣ ಬಹುರಾಷ್ಟ್ರೀಯ ಕಂಪನಿಗಳೇ’.

ನಾನೊಂದು ಸಲ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳಶಾಹಿಯನ್ನು ಬಕಾಸುರ ಬಂಡವಾಳಶಾಹಿ ಎಂದು ಕರೆದಿದ್ದೆ. ಇದರೊಳಕ್ಕೆ ಹೆಚ್ಚು ಆಳವಾಗಿ ಹೋದಷ್ಟೂ ಹೆಚ್ಚು ನಿಜ ನಿಜ ಅನಿಸತೊಡಗುತ್ತದೆ. ಬಕಾಸುರ ತನಗಾಗಿ ತಂದ ಆಹಾರವನ್ನು ತಿನ್ನುತ್ತಾನೆ. ಆಹಾರವನ್ನು ಸಾಗಾಣಿಕೆ ಮಾಡಿಕೊಂಡು ಬಂದ ಎತ್ತುಗಳನ್ನು ತಿನ್ನುತ್ತಾನೆ. ಅಷ್ಟೇ ಅಲ್ಲ, ಅವನಿಗೋಸ್ಕರ ಆಹಾರ ಸಾಗಾಣಿಕೆ ಮಾಡಿಕೊಂಡು ಬಂದ ಮನುಷ್ಯನನ್ನೂ ತಿನ್ನುತ್ತಾನೆ – ಇದನ್ನೇ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳಶಾಹಿ ಮಾಡುತ್ತಿದೆ, ಅದೂ ಅಭಿವೃದ್ಧಿಯ ಜಗದೋದ್ಧಾರಕನ ವೇಷ ಧರಿಸಿ.
ಇದಕ್ಕೆ ಹೇಗೆ ಮುಖಾಮುಖಿಯಾಗಬಹುದು?
2
ಕೇರಂ ಆಟದ ರಿಬೌಂಡ್ ವೈಖರಿಯಲ್ಲಿ ಈ ಒಂದಿಷ್ಟು ಮಾತುಗಳು: ಮೈಸೂರು ಅರಸೊತ್ತಿಗೆ ವಾರಸುದಾರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಪತ್ರಕರ್ತರೊಬ್ಬರು – ‘ಮತ್ತೆ ಅರಸೊತ್ತಿಗೆ ಬಂದರೆ ಹೇಗಿರುತ್ತದೆ?’ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಒಡೆಯರ್ ಅವರು ‘ಅಯ್ಯೋ ಅದೆಲ್ಲಿ ಸಾಧ್ಯ ಬಿಡಿ’ ಎಂದು ಅಲ್ಲಿಗೇ ನಿಲ್ಲಿಸುತ್ತಾರೆ. ಆದರೆ ಪತ್ರಕರ್ತ ಬಡಪೆಟ್ಟಿಗೆ ಬಿಡುವುದಿಲ್ಲ. ‘ಯಾವುದು ತಾನೇ ಅಸಾಧ್ಯ… ಅಕಸ್ಮಾತ್ ಬಂದರೆ?’ ಎಂದು ಮತ್ತೆ ಕೇಳುತ್ತಾರೆ. ಅದಕ್ಕೆ ಒಡೆಯರ್ ‘ಮತ್ತೆ ಬರುವುದಕ್ಕೆ ದೊಡ್ಡ ಕ್ರಾಂತಿಯೇ ಆಗಬೇಕು’ ಎನ್ನುತ್ತಾರೆ.

ಮತ್ತೆ ಅರಸೊತ್ತಿಗೆ ಬರುವುದಕ್ಕೆ ಅರಸು ಮನೆತನದ ಕುಡಿಗೆ ‘ದೊಡ್ಡ ಕ್ರಾಂತಿ’ ಆಗಬೇಕು! ಮೊದಲು ಆ ಸಂದರ್ಶನ ಓದಿದಾಗ ತಮಾಷೆ ಅನಿಸಿತು. ಆಮೇಲೆ ಕ್ರಾಂತಿಗೆ ಒದಗಿದ ದೈನೇಸಿ ಸ್ಥಿತಿ ನೋಡಿ ನಗಬೇಕೋ ಅಳಬೇಕೋ ತಿಳಿಯದಾದೆ. ಈ ಕ್ರಾಂತಿಗಾದ ದುರ್ಗತಿಯೇ ಸಂಸ್ಕೃತಿ, ನ್ಯಾಯ, ಸಮಾನತೆ ಇವುಗಳಿಗೂ ಆಗಿದೆ. ಈಗ ಸಮಾನತೆಗಾಗಿ, ಕ್ರಾಂತಿಗಾಗಿ ಎಂದು ಸೇರುವ ಸಭೆಗಳಲ್ಲೂ ಕ್ರಾಂತಿ, ಸಮಾನತೆಯೆಂದರೆ ಒಬ್ಬೊಬ್ಬರದೂ ಒಂದೊಂದು ಇರಬಹುದು. ಆದರೂ ನೆಲಕಚ್ಚಿ ಸಮಾನತೆ, ಸಮತ್ವದ ದಿಕ್ಕಲ್ಲಿ ತೆವಳುತ್ತಿರುವ ಪ್ರಗತಿಪರ ಎಂದುಕೊಂಡಿರುವ ನಮಗೆ ಏಕಧ್ವನಿಯಾಗಬಹುದಾದ ಸ್ಥಳವೊಂದು ಸ್ಥೂಲವಾಗಿಯಾದರೂ ಇರಬಹುದಲ್ಲವೇ? ಆ ಧ್ವನಿಯಾಗುವ ಸ್ಥಳವನ್ನೂ ವಹಿಸಬೇಕಾದ ಎಚ್ಚರಗಳನ್ನೂ ತುರ್ತಾಗಿ ಹುಡುಕಬೇಕಾಗಿದೆ.

ಪುರಾತನ ನಾಗರಿಕತೆಯೆ ಕಿರೀಟವಾದ ಗ್ರೀಸ್ ದೇಶದ ಇತ್ತೀಚಿನ ಏಳುಬೀಳುಗಳನ್ನು ನೋಡಿದರೂ ಒಂದಿಷ್ಟು ಸುಳಿವುಗಳೂ ನಮಗೆ ಸಿಗಬಹುದು. ಅಮೆರಿಕಾದಲ್ಲಿ 2008ರಲ್ಲಾದ ಬ್ಯಾಂಕ್ ದಿವಾಳಿಯ ಪರಿಣಾಮಕ್ಕೆ ತತ್ತರಿಸುವ ಗ್ರೀಸ್ ದೇಶವು ಅದನ್ನು ತಹಬಂದಿಗೆ ತರಲು ‘ಐಎಂಎಫ್’ ಮತ್ತು ಯೂರೋಪಿಯನ್ ಬ್ಯಾಂಕ್‌ಗಳಿಂದ ಸಾಲ ಮಾಡಿ ಬ್ಯಾಂಕ್‌ಗಳಿಗೆ ಬಂಡವಾಳ ಹಾಕಿ ಬ್ಯಾಂಕ್‌ಗಳನ್ನು ಉಳಿಸಿ ಸರ್ಕಾರವು ತಾನೇ ಸಾಲಗಾರನಾಗಬೇಕಾಗುತ್ತದೆ. ಮುಂದೆ, ಸರ್ಕಾರ ಸಾಲದ ಕಂತುಗಳನ್ನು ಕಟ್ಟಲಾಗದೇ ಸಾಲದ ಕಂತುಗಳನ್ನು ಕಟ್ಟಲು ಸಾಲ ಮಾಡುತ್ತಾ ಜಾಗತೀಕರಣದ ಪ್ರಭಾವದ ವಿರುದ್ಧ ಈಜಲಾಗದೇ ಆ ಸುಳಿಗೆ ಸಿಲುಕಿ ಗ್ರೀಸ್ ಉಸಿರಾಡಲು ಕಷ್ಟಪಡುತ್ತಿರುತ್ತದೆ. ಅದುವರೆಗೂ ಗ್ರೀಸ್ ದೇಶವನ್ನು ನುಂಗಿ ನೊಣೆಯುತ್ತಿದ್ದ ಬಹುರಾಷ್ಟ್ರೀಯ ಕಂಪನಿಗಳು ಸರ್ಕಾರಕ್ಕೆ ಸಲ್ಲಿಸಬೇಕಿದ್ದ ಲಕ್ಷಾಂತರ ಕೋಟಿ ತೆರಿಗೆ ವಂಚಿಸಿ ತಮ್ಮ ಬಂಡವಾಳದೊಡನೆ ಮುಂದಿನ ದೇಶಗಳಿಗೆ ಪರಾರಿಯಾಗಿಬಿಡುತ್ತಾರೆ. ಗ್ರೀಸ್ ದೇಶ ಸೂತ್ರವಿಲ್ಲದ ಪಟವಾಗುತ್ತದೆ. ಅಸಹಾಯಕವಾದ ಪ್ರಜಾಪ್ರಭುತ್ವ ತನ್ನನ್ನು ಮರೆತು ಬಂಡವಾಳದ ಪಾದಸೇವಕನಾಗುತ್ತದೆ.

ಇಂಥ ಸಂಕಷ್ಟದಲ್ಲಿ ಗ್ರೀಸ್ ಜನತೆ ಬದುಕುವುಳಿಯುವ ಆಸೆಯಿಂದ 2015ರಲ್ಲಿ ‘ಸಿರಿಜ್ಹ ’ (SYRIZA) ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ನವ ಕಮ್ಯೂನಿಸ್ಟ್‌ ಪರಿಸರವಾದಿಗಳು, ಅಂತರರಾಷ್ಟ್ರೀಯ ಕಾರ್ಮಿಕ ಎಡರಂಗ, ಕ್ರಿಯಾಶೀಲ ನಾಗರೀಕರ ಸಂಘಟನೆ, ಪ್ರಜಾಸತ್ತಾತ್ಮಕ ಸಾಮಾಜಿಕ ಆಂದೋಲನ ಇತ್ಯಾದಿ ಆರೇಳು ಜನಪರ ಸಂಘಟನೆಗಳು ಸೇರಿ ಒಂದು ಒಕ್ಕೂಟವಾಗಿ ಆ ಸಂಘಟನೆಗಳ ಒಂದೊಂದು ಅಕ್ಷರಗಳನ್ನು ತೆಗೆದುಕೊಂಡು ಮಾಡಿದ ಪದವೇ ‘ಸಿರಿಜ್ಹ ’. ಸಿರಿಜ್ಹ  ಎಂದರೆ From the Roots ಅಂತ, Radically ಅರ್ಥವೂ ಇದೆ. ಈ ಒಕ್ಕೂಟ ಮೊದಲು 2004ರಲ್ಲಿ ಚುನಾವಣೆಗೆ ಸ್ಪರ್ಧಿಸಿ 2009ರ ಚುನಾವಣೆಯವರೆಗೂ ಶೇಕಡ 4ರಿಂದ 6ರವರೆಗೆ ಮತ ಪಡೆಯುತ್ತಿರುತ್ತದೆ. ಯಾವಾಗ ‘ಸಿರಿಜ್ಹ ’ ಒಕ್ಕೂಟ ಒಂದು ಏಕಪಕ್ಷವಾಗಿ ನೊಂದಾಯಿಸಿಕೊಂಡು 2012ರ ಚುನಾವಣೆಯಲ್ಲಿ ಸ್ಪರ್ಧಿಸಿತೋ ಆವಾಗ 2ನೇ ದೊಡ್ಡ ಪಕ್ಷವಾಗಿ, ಪ್ರಮುಖ ವಿರೋಧಪಕ್ಷವಾಗಿ ಹೊರಹೊಮ್ಮುತ್ತದೆ. ಮುಂದೆ 2015ರಲ್ಲಿ ‘ಸಿರಿಜ್ಹ ’ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಅಷ್ಟರಲ್ಲಿ ಗ್ರೀಸ್ ಹಡಗು ಮುಳುಗುತ್ತಿರುತ್ತದೆ.

ಅಧಿಕಾರಕ್ಕೆ ಬಂದ ಆರಂಭದಲ್ಲೇ ‘ಸಿರಿಜ್ಹ’ ಪಕ್ಷದ ಸರ್ಕಾರದ ಮುಂದೆ ಐರೋಪ್ಯ ಒಕ್ಕೂಟದ ಷರತ್ತುಗಳು, ಜೊತೆಗೆ  ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ಯುರೋಪಿನ ಸೆಂಟ್ರಲ್ ಬ್ಯಾಂಕ್‌ಗಳೆಂಬ ಯಮದೂತರು ಹಳೆಯ ಸಾಲ ಚುಕ್ತ ಮಾಡಿಕೊಳ್ಳಲು ಹೊಸ ಸಾಲ ನೀಡಿ ಸಾಲದ ಸರಪಳಿಯನ್ನು ಚಾಲ್ತಿ ಮಾಡುವ Bail out (ಪಾರು ಮಾಡುವುದು!) ಬಲೆ ಹಾಕುತ್ತಾರೆ. ಗ್ರೀಸ್ ಸರ್ಕಾರಕ್ಕೆ ಆ ಒಡಂಬಡಿಕೆಗಳು ನುಂಗಲಾರದ ತುತ್ತಾಗುತ್ತದೆ. ಆಗ ಗ್ರೀಸ್ ಗುಟುಕು ಜೀವ ಹಿಡಿದುಕೊಂಡಿರುತ್ತದೆ. ಅಸಹಾಯಕನಾಗಿ ಪ್ರಧಾನಮಂತ್ರಿ ಅಲೆಕ್ಸಿಸ್ ಸಿಪ್ರಾಸ್ ಬದುಕುಳಿಯಬೇಕು ಅಥವಾ ಆತ್ಮಹತ್ಯೆ ಎರಡರಲ್ಲಿ ಒಂದು ಆಯ್ಕೆ ಮಾತ್ರ ಈಗ ಗ್ರೀಸ್ ದೇಶದ ಮುಂದಿದೆ ಎಂದು ಕೊನೆಗೆ Bail outನ ಕರಾರುಗಳಿಗೆ ಬೆಂಬಲಿಸಬೇಕಾಗಿ ಬರುತ್ತದೆ.

ಗ್ರೀಸ್ ಪಾರ್ಲಿಮೆಂಟ್ ಕೂಡ ಸಮ್ಮತಿಸುತ್ತದೆ. ಇದನ್ನೊಪ್ಪದ ‘ಸಿರಿಜ್ಹ ’ ಪಕ್ಷದ ಇಪ್ಪತ್ತೈದು ಪಾರ್ಲಿಮೆಂಟ್ ಸದಸ್ಯರು ಪಕ್ಷ ತ್ಯಜಿಸುತ್ತಾರೆ. ಪ್ರಧಾನಿ ಸಿಪ್ರಾಸ್ ರಾಜೀನಾಮೆ ನೀಡಿ ಮರುಚುನಾವಣೆ ಘೋಷಿಸುತ್ತಾನೆ. ಮುಂದೆ ನಡೆದ ಚುನಾವಣೆಯಲ್ಲಿ ಮತ್ತೇ ‘ಸಿರಿಜ್ಹ ’ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಆದರೆ ಈ ಮೊದಲೇ ಪಕ್ಷ ತ್ಯಜಿಸಿದವರು ಯಾರೂ ಗೆಲ್ಲುವುದಿಲ್ಲ. ಈ ದುರಂತ ಆಗಬಾರದಿತ್ತು. ಇನ್ನೂ ದುರಂತವೆಂದರೆ ಈ ಇಕ್ಕಟ್ಟಲ್ಲಿ ಸಾಲ ನೀಡುವ ‘ಐಎಂಎಫ್’ ಮತ್ತು ಯೂರೋಪ್ ಬ್ಯಾಂಕ್‌ಗಳು ಗ್ರೀಸ್ ದೇಶದ ಆರ್ಥಿಕ ನೀತಿ ನಿರೂಪಕರಾಗಿ ಪರಿಣಮಿಸಿಬಿಡುತ್ತಾರೆ. ಸಾಲ ಕೊಟ್ಟವರೇ ಸರ್ಕಾರ ಎಂಬಂತಾಗಿ ಗ್ರೀಸ್‌ನ ಹಣೆಬರಹ ಬರೆಯುತ್ತಾರೆ. ಪರಿಸ್ಥಿತಿಯನ್ನು ನಿಭಾಯಿಸಲಾಗದ ಸರ್ಕಾರ ತನ್ನ ಒಡೆತನದ ಸಹಸ್ರಾರು ಕಂಪನಿಗಳು ಮತ್ತು ಆಸ್ತಿಯನ್ನು ಖಾಸಗೀಕರಣಕ್ಕೆ ಒಪ್ಪಿಸತೊಡಗುತ್ತದೆ.

ಇದೆಲ್ಲದರ ಪರಿಣಾಮವಾಗಿ ಕೇವಲ ಐದು ವರ್ಷಗಳಲ್ಲಿ ಗ್ರೀಸ್ ಬಡತನ ದುಪ್ಪಟ್ಟು ಅಭಿವೃದ್ಧಿಯಾಗುತ್ತದೆ. ನಿರುದ್ಯೋಗವೂ ಅಭಿವೃದ್ಧಿಯಾಗುತ್ತದೆ. ಮಹಿಳೆಯರಿಗೆ ಪಾರ್ಟ್‌ಟೈಂ ಕೆಲಸ ಮಾತ್ರ. ಗರ್ಭೀಣಿಯರಿಗೆ ಉದ್ಯೋಗ ಕನಸಾಗುತ್ತದೆ. ಕೆಲಸದಿಂದ ತೆಗೆಯುವ ಪ್ರಕ್ರಿಯೆ ಹೆಚ್ಚುತ್ತಾ ಕೆಲಸದಲ್ಲಿ ಉಳಿದವರ ಸಂಬಳದಲ್ಲೂ ಶೇಕಡ 40 ಕಟಾವಾಗುತ್ತದೆ. ನಿವೃತ್ತಿ ವೇತನಕ್ಕೂ ಇದೇ ಗತಿಯಾಗುತ್ತದೆ. ತೆರಿಗೆ ಏರುತ್ತದೆ. ಆಮದು ಹೆಚ್ಚುತ್ತದೆ. ಸಾವಿರಾರು ಶಾಲೆಗಳು ಮುಚ್ಚುತ್ತವೆ, ಆಸ್ಪತ್ರೆಗಳೂ ಕೂಡ. ಹೀಗೆ ಹೀಗೆ ಇನ್ನೆಷ್ಟೋ. ಗ್ರೀಸ್ ಮಾರಾಟಕ್ಕಿದೆ ಎನ್ನುವಂತಾಗಿಬಿಡುತ್ತದೆ.

ಇದನ್ನೆಲ್ಲಾ ನೋಡುತ್ತಿದ್ದರೆ ಜಾಗತೀಕರಣ ಒಂದು ಜೂಜಾಟದಂತಿದೆ. ರೈಲಲ್ಲೋ ಇನ್ನೆಲ್ಲೋ ಸ್ನೇಹಿತರು ಇಸ್ಪೀಟ್ ಆಡುವಾಗ ಆಟ ಬಾರದ ನಾನು ನೋಡುತ್ತಾ ಕುಳಿತುಕೊಳ್ಳುತ್ತೇನೆ. ಸೋತವರಿಗೆ ಸಾಲ ಕೊಟ್ಟು ಜೂಜಾಡಿಸುತ್ತಾರೆ. ಆಟ ಬಿಟ್ಟು ಹೋಗದಂತೆ ನೋಡಿಕೊಳ್ಳುತ್ತಾರೆ. ತಾನೂ ಒಂದು ದಿನ ಗೆಲ್ಲಬಹುದು ಎಂಬ ಮಾಯೆಗೆ ಸಿಲುಕಿ ಸೋತವನೂ ಆಡುತ್ತಿರುತ್ತಾನೆ. ಆಟ ಬಾರದಿದ್ದರೂ ನೋಡುತ್ತಾ ಕೂರುವ ನನ್ನಂಥವರ ಮನಸ್ಸೂ ಜೂಜಾಡುತ್ತಿರುತ್ತದೆ. ಇಂದಿನ ಅಭಿವೃದ್ಧಿಯ ಮಾಯೆ ಇದಕ್ಕಿಂತ ಭಿನ್ನವೆ?

ಗ್ರೀಸ್ ದೇಶದ ಏಳುಬೀಳುಗಳನ್ನೇ ಹೆಚ್ಚಾಗಿ ವಿವರಿಸಿದೆ. ಯಾಕೆಂದರೆ, ಜಾಗತೀಕರಣದ ಅಭಿವೃದ್ಧಿ ಜಾಡಿನಲ್ಲಿ ಹೆಜ್ಜೆಯಿಡುತ್ತಿರುವ ಭಾರತಕ್ಕೆ ಮುಂದೆ ಸಂಭವಿಸಬಹುದಾದುದು ಹೆಚ್ಚುಕಮ್ಮಿ ಗ್ರೀಸ್‌ನಲ್ಲಿ ಈಗ ಜರುಗುತ್ತಿದೆ ಅನ್ನಿಸಿಬಿಟ್ಟಿತು. ಮುಂದುವರಿದ ಗ್ರೀಸ್‌ಗೆ ಆದದ್ದು ಅದೇ ಜಾಡಿನಲ್ಲಿ ಮುಂದುವರಿಯುತ್ತಿರುವ ಭಾರತಕ್ಕೆ ಆಗುವುದಿಲ್ಲವೆ? ಇದು ನನ್ನ ಪ್ರಶ್ನೆ.

ಈಗ ಭಾರತಕ್ಕೆ ಬಂದರೆ, ಜಾಗತೀಕರಣ–ಖಾಸಗೀಕರಣದ ದವಡೆಗೆ ಸಿಕ್ಕಿ ನಜ್ಜುಗುಜ್ಜಾದ ಗ್ರೀಸ್ ದೇಶದ ಸ್ಥಿತಿಯನ್ನು ಮುಟ್ಟಲು ಭಾರತವು ದಾಪುಗಾಲು ಇಡುತ್ತಿದೆ. ಸಮಾನತೆ ಕ್ರಾಂತಿ ಬಯಸುವ ನಾವುಗಳು ಗ್ರೀಸ್‌ನಲ್ಲಿ 2004ರ ಮುಂಚೆ ಇದ್ದ ಸಣ್ಣಪುಟ್ಟ ಒಂಟಿ ಹೋರಾಟಗಾರರಂತೆ ಇದ್ದೇವೆ. ನಾವೆಲ್ಲರೂ ಒಟ್ಟಾಗಿ ಗ್ರೀಸ್‌ನ ‘ಸಿರಿಜ್ಹ ’ ಪಕ್ಷದಂತೆ ಅಧಿಕಾರಕ್ಕೆ ಬರುತ್ತೇವೋ ಇಲ್ಲವೋ ಅದು ಬೇರೆ ಮಾತು. ಆದರೆ ‘ಸಿರಿಜ್ಹ ’ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅದಕ್ಕೆ ಎದುರಾದ ಬದುಕುಳಿಯುವುದು ಅಥವಾ ಆತ್ಮಹತ್ಯೆ ಈ ಎರಡರಲ್ಲಿ  ಯಾವುದಾದರೂ ಒಂದು ಆಯ್ಕೆ ಮಾತ್ರ ಎಂಬ ಘನಘೋರ ಇಕ್ಕಟ್ಟನ್ನು ಸೃಷ್ಟಿಸಿದ, ಜಾಗತೀಕರಣದ ಖಾಸಗಿ ತಿಮಿಂಗಲದ ಬಾಯಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಪಾರು ಮಾಡುವ ಬಲೆಯ Bail out ವಿರೋಧಿಸಿ ಪಕ್ಷ ತ್ಯಜಿಸಬೇಕಾಗಿ ಬಂದ ಸಮಾನತೆ ಆಶಯಗಳ ತೀವ್ರ ಸೈದ್ಧಾಂತಿಕ ಸದಸ್ಯರನ್ನು ಉಳಿಸಿಕೊಳ್ಳುವುದು ಹೇಗೆ?

ತಡವರಿಸುತ್ತಿರುವೆ, ಗೊತ್ತಿಲ್ಲ. ಈಗ ಸದ್ಯಕ್ಕೆ ಇಷ್ಟು ಹೇಳಬಹುದೆ? ಚುನಾವಣೆಯ ರಾಜಕಾರಣವನ್ನು ಸರ್ವಸ್ವವಾಗಿಸಿ ಅದಕ್ಕೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ; ಆದರೆ ಕಡೆಗಣಿಸಕೂಡದು. ಜಾಗೃತಿ, ಅಸಹಕಾರ, ಸಂಘರ್ಷ, ರಚನಾತ್ಮಕ ಕೆಲಸಗಳೊಡನೆ ಮಿಳಿತಗೊಂಡ ಚುನಾವಣಾ ರಾಜಕಾರಣಕ್ಕಾಗಿ ಇವುಗಳಲ್ಲಿ ಯಾವುದು ಮೊದಲು, ಯಾವುದು ಕೊನೆಯದು ಎನ್ನದೆ ಪರಸ್ಪರ ಪೂರಕವಾಗಿ ಒಟ್ಟೊಟ್ಟಿಗೆ ಕ್ರಿಯಾಶೀಲವಾದರೆ ಗ್ರೀಸ್ ಪ್ರಧಾನಿಗೆ ಎದುರಾದ ‘ಬದುಕುಳಿಯುವುದು ಅಥವಾ ಆತ್ಮಹತ್ಯೆ’ ಎಂಬಂಥ ಪರಿಸ್ಥಿತಿ ನಮಗೆ ಎದುರಾದರೂ ಅದನ್ನು ಸಹಿಸಿಕೊಂಡು ಬಕಾಸುರ ಬಂಡವಾಳಶಾಹಿಯ ಹೊಟ್ಟೆಗೆ ಬೀಳದೆ ನಿಭಾಯಿಸುವ ಧಾರಣ ಶಕ್ತಿ ನಮಗೆ ಬರಬಹುದೇ? ಸಂಪತ್ತು ಅಭಿವೃದ್ಧಿಗಳಿಗೆ ಸಮಾನತೆಯ ಲಗಾಮು ಇಲ್ಲದಿದ್ದರೆ ಈ ಬಕಾಸುರ ಬಂಡವಾಳಶಾಹಿಯು ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಮನುಷ್ಯತ್ವಗಳನ್ನೂ ಬಿಡದೆ ಬಲಿ ತೆಗೆದುಕೊಂಡುಬಿಡುತ್ತದೆ. ಭಾರತದಲ್ಲೂ ಈಗ ಸಾಲ ಕೊಟ್ಟವರೇ ಗೋಸ್ಟ್ ಸರ್ಕಾರವಾಗಿ ನೀತಿ ನಿರೂಪಕರಾಗುತ್ತಿದ್ದಾರೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಬಂಡವಾಳಕ್ಕೆ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಭಾರತ ಗ್ರೀಸ್ ಆಗುವ ಸರ್ವಲಕ್ಷಣಗಳು ಕಾಣತೊಡಗಿವೆ.

ಎಲ್ಲಿಂದ ಆರಂಭಿಸೋಣ? ಮೊದಲು ಪ್ರಗತಿಪರ ಸಂಘಟನೆಗಳು ತಂತಮ್ಮ ಸೀಮಿತ (ಟ್ರೇಡ್ ಯೂನಿಯನ್) ಸ್ವಭಾವಗಳ ಮಿತಿಗಳನ್ನು ಮೀರಿ ಎಲ್ಲೆ ವಿಸ್ತರಿಸಿಕೊಂಡು ಚಲನಶೀಲತೆ ಪಡೆಯಬೇಕಾಗಿದೆ. ಆಗ ಅವಕ್ಕೆ ರೆಕ್ಕೆ ಬರಬಹುದು, ಆಗ ಮುಂದಿನ ದಾರಿಗಳು ತಂತಾನೆ ಕಾಣಿಸಿಕೊಳ್ಳಲೂಬಹುದು. ಈಗ ಪ್ರತಿಯೊಬ್ಬರೂ ತಮ್ಮನ್ನು ತಾವೇ ಕೇಳಿಕೊಳ್ಳಬೇಕು  ಈಗ ನಾನು ಏನು ಮಾಡಬಹುದು?