ನೀರ ದೀವಿಗೆಯ ಹಿಡಿದು-ಕೆ. ವೈ. ನಾರಾಯಣಸ್ವಾಮಿ
ಜೀವ ವಿಕಾಸಕ್ಕೂ ನೀರಿಗೂ ಹೊಕ್ಕುಳ ಬಳ್ಳಿಯ ನಂಟು. ಭೂಮಿಯ ಮೇಲೆ ಜೀವ ಸೃಷ್ಟಿಯಾಗಿದ್ದೇ ನೀರು ಇದ್ದಿದ್ದರಿಂದ. ಎಂಥದ್ದೇ ಜೀವವಿರಲಿ, ಅದರ ಜೈವಿಕತೆಯನ್ನು, ಅದರ ಅಸ್ತಿತ್ವವನ್ನು ನಿರೂಪಿಸುವುದೇ ಅದರೊಳಗಿರುವ ಜಲದ ಅಂಶ. ಜಲತತ್ವ ಎನ್ನುವುದು ಭೂಮಿಯ ಜೀವತತ್ವಕ್ಕೆ ಇರುವ ಇನ್ನೊಂದು ಹೆಸರು. ಅದಕ್ಕಾಗಿ ಜನಪದದಲ್ಲಿ ಈ ಸಂಬಂಧವನ್ನು ಜಲಬಂಧ ಎಂದು ಕರೆಯುತ್ತಾರೆ. ಇಡೀ ಲೋಕವೇ ಜಲಬಂಧದಿಂದ ತುಂಬಿದೆ. ಇಡೀ ಲೋಕ ಇಡಿಯಾಗಿರುವುದೂ, ಚೈತನ್ಯರೂಪಿಯಾಗಿರುವುದು ಮತ್ತು ಅದಕ್ಕೆ ಪುನರಾವರ್ತನೆಯ ಸಾಮರ್ಥ್ಯವಿರುವುದು ಜಲದಿಂದಾಗಿ ಎಂಬುದನ್ನು ಈ ಪದ ಹೇಳುತ್ತದೆ. ಭಾರತದ ಸಂಸ್ಕೃತಿಯಲ್ಲಷ್ಟೇ ಅಲ್ಲ, ಜಗತ್ತಿನ ಯಾವುದೇ ಮೂಲೆಯಲ್ಲಿರುವ ಆದಿಮ ಸಂಸ್ಕೃತಿಗಳನ್ನು ನೋಡಿದರೂ ಜಲಪ್ರಜ್ಞೆ ಹೊಂದಿರುವುದನ್ನು ಕಾಣುತ್ತೇವೆ. ಈ ಜಲ ಪ್ರಜ್ಞೆ ವಿವಿಧ ರೂಪಗಳಲ್ಲಿ ನಮ್ಮ ಬದುಕಿನಲ್ಲಿ ಅನಾದಿ ಕಾಲದಿಂದಲೂ ಸಾಗಿ ಬಂದಿವೆ. ಮೂಲಮಾತೃಕೆಯ ರೂಪದಲ್ಲಿ ಸಂಸ್ಕೃತಿಯ ಭಾಗವಾಗಿವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಕರಗ ಉತ್ಸವ ಕೂಡ ಜಲದೇವತೆಯ ಮೂಲ ಮಾತೃಕೆಯ ಸಂಕೇತ. ಉತ್ಸವದಲ್ಲಿ ಬಳಸುವ ನೀರು ತುಂಬಿದ ಮಡಕೆ ಭೂಮಿಯನ್ನು, ನೀರು ಅದರ ಒಡಲಲ್ಲಿರುವ ಜಲವನ್ನು ಸೂಚಿಸುತ್ತದೆ. ಇದು ಗರ್ಭಕೋಶದಲ್ಲಿರುವ ಜೀವವನ್ನೂ ಸಂಕೇತಿಸುತ್ತದೆ. ಜೀವ ಸೃಷ್ಟಿಯಾಗಬೇಕಾದರೆ ಗರ್ಭದೊಳಗೆ ನೀರಿರಬೇಕು. ಹಾಗೆಯೇ ಜೀವ ಪೋಷಣೆಯಾಗಬೇಕೆಂದರೂ ಭೂಮಿಯ ಮೇಲೆ ನೀರು ಇರಬೇಕು. ಜೀವದ ಮೂಲತತ್ವವನ್ನು ಹೇಳುವ ಇಂಥ ಜಲಬಂಧದಿಂದಲೇ ಭೂಮಿಯ ಮೇಲೆ ಸಂಬಂಧಗಳು ಹುಟ್ಟಿಕೊಂಡವು. ಇದು ನಾಗರಿಕತೆಯ ಹುಟ್ಟಿಗೆ, ನಂತರದ ದಿನಗಳಲ್ಲಿ ವಿಜ್ಞಾನದ ಹುಟ್ಟಿಗೆ, ತಂತ್ರಜ್ಞಾನದ ಬೆಳವಣಿಗೆಗೆ ಕಾರಣವಾಗಿದೆ. ಕಾಲದಿಂದ ಕಾಲಕ್ಕೆ ಮನುಷ್ಯ ಮತ್ತು ಸಮಾಜ ಸಾಕಷ್ಟು ಬದಲಾಗಿದ್ದರೂ ಅದರ ಮೂಲ ಅಗತ್ಯ ಮಾತ್ರ ನೀರೇ. ಹೊಸ ಕಾಲದ ಜ್ಞಾನ ಎಲ್ಲವನ್ನೂ ಸೃಷ್ಟಿಸಿಕೊಳ್ಳುವ ಉತ್ಸಾಹ ಮತ್ತು ಅಹಂಕಾರ ಮನುಷ್ಯನಿಗೆ ದಕ್ಕಿದ್ದರೂ ಆತನ ನೀರಿಗಾಗಿ ನಡೆಸುವ ಹುಡುಕಾಟವನ್ನು ನಿಲ್ಲಿಸಿಲ್ಲ. ಅಷ್ಟು ದೂರದ ಮಂಗಳ ಗ್ರಹಕ್ಕೆ ಕಾಲಿಟ್ಟಿರುವುದೂ ಅಲ್ಲಿ ನೀರಿದೆಯೇ ಎಂಬುದನ್ನು ತಿಳಿಯುವುದಕ್ಕೆ! ಆದಿಮ ಹುಡುಕಾಟವೂ ನೀರಿಗೇ ಆಗಿತ್ತು, ಆತ್ಯಂತಿಕ ಶೋಧವೂ ನೀರು ಇರುವ ಗ್ರಹ ಇದೆಯೇ ಎಂಬುದೇ ಆಗಿದೆ. ಇಡೀ ಪ್ರಪಂಚವೇ ಕುತೂಹಲದಿಂದ ನೋಡುತ್ತಿರುವ ಸಂಶೋಧನೆ ಇದು.
ಈ ಭೂಮಿ ಪಂಚಭೂತಗಳಿಂದ ಆಗಿದ್ದು ಎನ್ನುತ್ತೇವೆ. ಗಾಳಿ, ನೀರು, ಬೆಳಕು, ಮಣ್ಣು, ಬೆಂಕಿ ಮತ್ತು ಆಕಾಶ. ಇವುಗಳಲ್ಲೇ ಎರಡು ವಿಭಾಗಗಳಿವೆ ಪ್ರಾಥಮಿಕವಾಗಿ ನೀರು ಗಾಳಿ ಬೆಳಕು, ನಂತರದಲ್ಲಿ ಬೆಂಕಿ ಮತ್ತು ಆಕಾಶಕ್ಕೆ ಸ್ಥಾನವಿದೆ. ಪ್ರಾಥಮಿಕ ಅಂಶಗಳಲ್ಲೇ ನೀರಿಗೆ ಮೊದಲ ಆದ್ಯತೆ. ಇಷ್ಟು ಮಹತ್ವ ಪಡೆದಿರುವ ನೀರು ಮನುಷ್ಯನ ಪಾಲಿಗೆ ಚೈತನ್ಯವೂ ಆಗಿದೆ, ಎದುರಿಸಲೇ ಬೇಕಾದ ಸವಾಲೂ ಆಗಿದೆ. ಪ್ರಪಂಚದ ಎಲ್ಲ ನಾಗರಿಕತೆಗಳು ತಲೆ ಎತ್ತಿದ್ದು ನದಿ ದಂಡೆಗಳಲ್ಲೇ. ಹಾಗಾಗಿ ನೀರಿನ ಮೂಲವನ್ನು ತಾಯಿಯಂತೆ ಕಂಡಿವೆ. ಮನುಷ್ಯನ ಆದಿಮ ದೇವತೆಗಳೆಂದರೆ ಜಲದೇವತೆಗಳೇ. ಭಾರತದ ವಿಷಯದಲ್ಲಿ ಅದು ಗಂಗೆ. ಆಕೆ ಜೀವ ಪೋಷಿಸುವವಳು ಎಂಬ ನಂಬಿಕೆಗಳನ್ನು ಕಟ್ಟಿಕೊಂಡರು. ಈಗಲೂ ಈಜಲೂ ಬಾರದವರು ಗಂಗೆಗೆ ಅಂದರೆ ನೀರಿಗೆ ಬಿದ್ದರೆ ಮೂರು ಸಾರಿ ತೇಲಿಸುತ್ತಾಳೆ ಎಂಬ ನಂಬಿಕೆ ಜನಜನಿತ. ಆ ಮೂರು ಅವಕಾಶಗಳಲ್ಲಿ ಯಾರಾದರೂ ಆತನನ್ನು ಕಾಪಾಡಬಹುದು, ನೀರಿನಲ್ಲಿರುವವನೇ ಬದುಕಲು ಪ್ರಯತ್ನಿಸಬಹುದು. ಹೀಗೆ ನೀರು ಭೂಮಿಯ ಅಸ್ತಿತ್ವ ಕಾಲದಿಂದ ಜೀವವನ್ನು ಪೊರೆಯುತ್ತಲೇ ಬಂದಿದೆ ಎಂಬುದು ಜನಪದರ ಪ್ರತಿಪಾದನೆ.
ಆದರೆ ನಾಗರಿಕತೆಗಳನ್ನು, ಸಂಸ್ಕೃತಿಗಳನ್ನು ಕಟ್ಟಿ ಬೆಳೆಸಿದ ನದಿಗಳೇ ಅವುಗಳನ್ನು ಮುಳುಗಿಸಿವೆ. ಚೀನಾದ ಯಾಂಗ್ಸಿ ನದಿ, ರಷ್ಯಾದ ವೋಲ್ಗಾ ಆಗಬಹುದು, ಈಜಿಪ್ತಿನ ನೈಲ್ ನದಿ ಇರಬಹುದು, ಇವೆಲ್ಲವೂ ಜಲಪ್ರವಾಹದಿಂದ ಒಂದು ಕಾಲದ ನಾಗರಿಕತೆಯನ್ನು ಅಳಿಸಿ ಹಾಕಿವೆ. ಹಾಗೆಯೇ ಅವೇ ಜೀವವನ್ನು ಪೋಷಿಸಿಯೂ ಇವೆ. ಆದರೆ ಇವೆಲ್ಲವೂ ಪ್ರಾಕೃತಿಕವಾಗಿಯೇ ಆದದ್ದು. ಆದರೆ ಬರ ಪ್ರಕೃತಿಯ ಸೃಷ್ಟಿಯಲ್ಲ. ಮನುಷ್ಯ ಕಾಲದಿಂದ ಕಾಲಕ್ಕೆ ತನ್ನ ಜೀವನಕ್ರಮವನ್ನು ನಿಸರ್ಗದಿಂದ ವಿದೂರವಾಗಿ ಸೃಷ್ಟಿಸಿಕೊಂಡ ಬರ. ವರ್ಷದ ಮಳೆಯ ವಾಡಿಕೆಯ ತೀರ ವ್ಯತ್ಯಾಸವೇನೂ ಆಗಿಲ್ಲ. ಆದರೆ ಮಳೆ ಮತ್ತು ನೀರಿನ ಜೊತೆಗೆ ಹಿಂದೆ ಇಟ್ಟುಕೊಂಡಿದ್ದ ಸಂಬಂಧ ಬದಲಾಗಿದೆ. ನಾವು ನೀರನ್ನು ಸಕಲ ಜೀವರಾಶಿಗೆ ಸಿಗಬೇಕಾದ ಅಗತ್ಯವೆಂದು ಪ್ರಾಕೃತಿಕವಾದ ಒಪ್ಪಂದವೊಂದನ್ನು ಹಿಂದೆ ಮಾಡಿಕೊಂಡಿದ್ದೆವು. ಅದನ್ನು ಒಡೆದು ಹಾಕಿದ್ದು ಎಲ್ಲ ಸಮಸ್ಯೆಗಳಿಗೆ ಕಾರಣ.
ಬೆಂಗಳೂರಿನಂಥ ನಗರಗಳಲ್ಲಿ ಉದ್ಯಾನ ನಿರ್ವಹಣೆಗೆ, ಶೌಚ ವ್ಯವಸ್ಥೆ, ಈಜುಕೊಳ ಮುಂತಾದ ಐಷಾರಾಮಿ ಜೀವನ ಪದ್ಧತಿಗೆ ಬಹುಪಾಲು ನೀರು ಬಳಕೆಯಾಗುತ್ತದೆ. ಸಂಪನ್ಮೂಲವಾಗಿದ್ದ ನೀರು ಹಣವಿದ್ದವರೂ ಹೊಂದುವ ಸರಕಾಗಿ ಮಾರ್ಪಟಿದ್ದನ್ನು ನಾವು ನೋಡುತ್ತಿದ್ದೇವೆ. ಇದೆಲ್ಲವೂ ಸ್ವಾತಂತ್ರ್ಯ ನಂತರದಲ್ಲಿ ಅಭಿವೃದ್ಧಿಗಾಗಿ ಅನುಸರಿಸಿದ ಆರ್ಥಿಕ ನೀತಿ ಮತ್ತು ತದನಂತರದಲ್ಲಿ ಬದಲಾವಣೆ ಕಂಡ ಕೃಷಿ ಪದ್ಧತಿಗಳೇ ಒಂದು ರೀತಿಯಲ್ಲಿ ಈ ಎಲ್ಲ ಬದಲಾವಣೆಗಳಿಗೆ ಕಾರಣ. ಇವೇ ಬರದ ಬೀಜಗಳನ್ನು ಬಿತ್ತಿದ ಬೆಳವಣಿಗೆಗಳು. ಭೂಮಿ ಹೆಚ್ಚು ಉತ್ಪಾದನೆ ಮಾಡಬೇಕು ಎಂಬ ಕಡೆಗೆ ಹೆಚ್ಚು ಆಸಕ್ತಿವಹಿಸಿದೆವೇ ಹೊರತು, ಹೇಗೆ ಉತ್ಪಾದಿಸಬೇಕು ಎಂಬ ಕ್ರಮದ ಬಗ್ಗೆ ಹೆಚ್ಚು ಆಸ್ಥೆ ವಹಿಸಲಿಲ್ಲ. ಭೂಮಿಯ ಆರೋಗ್ಯ ಹೇಗೆ ಕಾಪಾಡಬೇಕೆಂಬ ಕಾಳಜಿ ವಹಿಸಲಿಲ್ಲ. ವೈಜ್ಞಾನಿಕ ಆವಿಷ್ಕಾರಗಳಿಂದಾಗಿ ಭೂಮಿಯ ಒಳಗಿನ ನೀರನ್ನು ಮತ್ತು ಅವಿವೇಕತನದಿಂದಾಗಿ ಭೂಮಿಯ ಹೊರಗಿನ ನೀರಿನ ಮೂಲಗಳನ್ನು ಕಳೆದುಕೊಂಡೆವು.
ನಮ್ಮ ಅವಿವೇಕ ಎಷ್ಟರಮಟ್ಟಿನದ್ದು ಎಂಬುದಕ್ಕೊಂದು ಉದಾಹರಣೆ ಹೇಳಿಬಿಡುತ್ತೇನೆ. ಕೋಲಾರದಲ್ಲಿ ಕೆರೆಗಳ ಸರಪಳಿಯೊಂದಿತ್ತು. ಒಂದು ಕೆರೆಯಿಂದ ಇನ್ನೊಂದು ಕೆರೆಗೆ ತುಂಬಿದ ನೀರು ಹರಿದು ಎಲ್ಲ ಕೆರೆಗಳು ಭರ್ತಿಯಾಗಿರುತ್ತಿದ್ದವು. ನೀಲಗಿರಿ ತೋಪುಗಳು ತಲೆ ಎತ್ತಿದ ಮೇಲೆ ನೀರಿನ ಸೆಲೆಯೇ ಬತ್ತಲಾರಂಭಿಸಿತು. ನೀಲಗಿರಿಯ ತೋಪು ಯಾವ ರೀತಿಯಲ್ಲೂ ಆ ಊರುಗಳಿಗೆ ನೆರವಾಗದೆ, ಊರಿಗೆ ಜೀವ ಸೆಲೆಯಾಗಿರುವ ಕೆರೆಗಳನ್ನೇ ಬರಿದು ಮಾಡುತ್ತಿವೆ. ಇಂಥ ಅವಿವೇಕದ ಉದಾಹರಣೆಗಳು ಎಲ್ಲೆಡೆಯೂ ಸಿಗುತ್ತವೆ. ಗಣಿಗಾರಿಕೆ ನಡೆಯುತ್ತಿದೆ. ಎಗ್ಗಿಲ್ಲದೆ ಕೊಳವೆ ಬಾವಿಗಳನ್ನು ಕೊರೆಯುತ್ತಿದ್ದೇವೆ. ಇವೆಲ್ಲವೂ ನೀರಿನ ಸೆಲೆಯನ್ನು ಇಲ್ಲವಾಗಿಸುತ್ತಿವೆ. ಬರ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧ ವ್ಯಾಪಾರದ ರೂಪ ಪಡೆದುಕೊಂಡಿರುವುದು ಎಲ್ಲ ದುರಂತಗಳಿಗೆ ಕಾರಣ.
ನೀರಿನ ನೆನಪುಗಳು
ಬರವನ್ನು ನಿರ್ವಹಿಸುವುದಕ್ಕೆ ನಮ್ಮ ಪೂರ್ವಜರು ಬಿಟ್ಟು ಹೋದ ನೀರಿನ ನೆನಪುಗಳನ್ನು ಪುನರುಜ್ಜೀನಗೊಳಿಸುವ ಮೂಲಕವೇ ಬರವನ್ನು ಎದುರಿಸುವುದಕ್ಕೆ ಸಾಧ್ಯ. ನೀರಿಗೆ ಸಂಬಂಧಿಸಿದ ಸಾಂಸ್ಕೃತಿಕವಾದ ನೆನಪುಗಳನ್ನು ಮರಳಿ ಪಡೆಯುವ ಮೂಲಕ ಬರವನ್ನು ನಾವು ಮೀರಲು ಸಾಧ್ಯವೆನಿಸುತ್ತದೆ. ಹಿಂದೆ ಹಳ್ಳಿಗಳಲ್ಲಿ ಕೆರೆ ಹಬ್ಬಗಳನ್ನು ನಡೆಸುತ್ತಿದ್ದರು. ತೆಪ್ಪೋತ್ಸವಗಳು ನಡೆಯುತ್ತಿದ್ದವು. ಕೆರೆ ಒಣಗಿದಾಗಲೂ ಹಬ್ಬಗಳು ನಡೆಯುತ್ತಿದ್ದವು. ಕೆರೆಗಳ ಬಳಿ ಎಲ್ಲ ಮನೆಯಿಂದ ಆಹಾರ ತಂದು ಸಾಮೂಹಿಕ ಭೋಜನ ನಡೆಸಿ ಮಳೆರಾಯನಿಗೆ ಪ್ರಾರ್ಥಿಸುತ್ತಿದ್ದರು. ಈ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದ ವಿವಿಧ ತಲೆಮಾರಿನ ಜನರಿಗೆ ನೀರಿನ ಮಹತ್ವ ತಿಳಿಯುತ್ತಿತ್ತು. ಅದರಿಂದಲೇ ಗಂಗೆ ದೇವತೆಯಾಗಿದ್ದಳು. ಮನುಷ್ಯ ಮತ್ತು ಮನುಷ್ಯನ ನಡುವಿನ ಜೀವಕ್ರಮವಿರುವಂತೆಯೇ ಭೂಮಿ ಮತ್ತು ನೀರಿನ ಜೊತೆಗಿನ ಸಂಬಂಧವನ್ನು ಹೊಂದಿದ್ದ ಕಾಲವದು. ಋತುವಿನ ವಾರ್ಷಿಕ ನಡೆಯೂ ಒಂದು ಬದುಕಿನ ನಡೆಯೂ ಜೊತೆ ಜೊತೆಗೇ ಸಾಗುತ್ತಿದ್ದವು. ವಿಜ್ಞಾನ, ತಂತ್ರಜ್ಞಾನದ ಹೊಸ ತಿಳಿವಳಿಕೆ ಇವೆಲ್ಲವನ್ನೂ ಒಡೆದು ಹಾಕಿವೆ. ಜನಪದ ಲೋಕದೃಷ್ಟಿ, ಬದುಕಿನ ಅನುಭವದ ಮೂಲಕ ಕಟ್ಟಿಕೊಂಡ ಜ್ಞಾನವನ್ನು ಅಲ್ಲಗಳೆದು ಬಿಟ್ಟವು. ಆದರೆ ಈ ಜನಪದ ಜ್ಞಾನವೇ ನೀರನ್ನು ನಿರ್ವಹಿಸುವ ಸರಳವಾದ ಸಾಧ್ಯತೆಗಳನ್ನು ನೀಡುವ ಶಾಖೆಯಾಗಿತ್ತು. ನೀರಿನೊಂದಿಗೆ ಭಾವನಾತ್ಮಕವಾದ ಸಂಬಂಧವನ್ನು ಬೆಸೆದ ತಿಳಿವಳಿಕೆ ಬರದಂಥ ಸಂಕಟಗಳನ್ನು ಮೀರುವುದಕ್ಕೆ ಶಕ್ತಿ ಕೊಡುತ್ತಿತ್ತು. ಈ ನೀರು ಮತ್ತು ಮನುಷ್ಯನ ನಡುವಿನ ದೈವೀಕವಾದ ಒಪ್ಪಂದ ನವೀಕರಣಗೊಳ್ಳಬೇಕಿದೆ.
ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಗುತ್ತಿಯ ನಾಯಿ ಹುಲಿಯನಿಗೆ ಒಂದು ಕಣ್ಣು ಹೋಗಿ ಬಿಡುತ್ತದೆ. ಅದೇ ಹೊತ್ತಿಗೆ ಗುತ್ತಿ ಪೊಲೀಸರ ವಶವಾಗುತ್ತಾನೆ. ಅಲ್ಲಿಯವರೆಗೆ ಗುತ್ತಿ ಮತ್ತು ಹುಲಿಯ ನಡುವಿನ ಪ್ರಾಕೃತಿಕ ದೃಷ್ಟಿಕೋನವನ್ನು ಬಿಂಬಿಸುತ್ತದೆ. ನಾವೀಗ ಎರಡು ಕಣ್ಣುಗಳನ್ನು ಕಳೆದುಕೊಂಡ ಹುಲಿಯಂತಾಗಿದ್ದೇವೆ. ನಮಗೆ ಘೋರ ಕಾಡಿನಿಂದ ಹೊರ ಹೋಗುವ ದಾರಿಯೇ ಗೊತ್ತಿಲ್ಲ. ಅಂಥದ್ದೊಂದು ದಾರಿ ಹೊಳೆಯುವುದಿದ್ದರೆ ಅದು ಸಾಂಸ್ಕೃತಿಕವಾದ ನೆನಪುಗಳಲ್ಲಿವೆ.
ನಮ್ಮದೇ ಊರಿನಲ್ಲಿ ಬೇಸಿಗೆ ನೀರಿನ ಸಮಸ್ಯೆಯಾಗಬಹುದು ಎಂದು ಸಾಮಾನ್ಯವಾಗಿ ಹರಿಬಿಡಲಾಗುತ್ತಿದ್ಧ ನೀರನ್ನು ತಡೆ ಹಿಡಿದಿದ್ದಾರೆ. ಕೆರೆಯಲ್ಲಿ ಈಗಲೂ ನೀರಿದೆ. ಇದರಿಂದಾಗಿ ದನಕರುಗಳಿಗೆ ನೀರಿದೆ. ಇದರಿಂದ ಊರಿನ ಅಂತರ್ಜಲ ಮಟ್ಟ ಸುಸ್ಥಿತಿಯಲ್ಲಿದೆ. ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳುವುದಕ್ಕೆ ಯಾವುದೇ ದೊಡ್ಡ ಬೆಳವಣಿಗೆಯೇನು ಆಗಬೇಕಿರಲಿಲ್ಲ.
ರಾಜಸ್ಥಾನದಲ್ಲಿ ಒಣಗಿ ಹೋಗಿದ್ದ ನದಿಯೊಂದು ರಾಜೇಂದ್ರ ಸಿಂಗ್ ಅವರಿಂದ ಜೀವ ಪಡೆದುಕೊಂಡಿತು. ಅದೇ ತೋರಿಸುತ್ತದೆ ಭೂಮಿ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಮರು ಸ್ಥಾಪಿಸಬೇಕಾದ ಅಗತ್ಯವನ್ನು ಹೇಳುತ್ತದೆ.
ಅಭಿವೃದ್ಧಿಯ ನೆಪದಲ್ಲಿ ನಾವು ನಮ್ಮ ಪಾರಂಪರಿಕವಾಗಿ ಬಂದ ನೆನಪುಗಳನ್ನು ಕಳೆದುಕೊಂಡಿದ್ದೇವೆ. ಅದರೊಂದಿಗೆ ಬರುವ ವಿವೇಕವನ್ನು ಕಳೆದುಕೊಂಡಿದ್ದೇವೆ. ನಾವಿಂದು ಎದುರಿಸುತ್ತಿರುವ ಬರಕ್ಕಿಂತ ಘೋರ ಸಂದರ್ಭಗಳನ್ನು ನಮ್ಮ ಹಿಂದಿನ ತಲೆಮಾರಿನ ಜನ ಎದುರಿಸಿದ್ದಾರೆ. ಹೇಗೆ ಸಾಧ್ಯವಾಯಿತು. ಆ ಸ್ಮೃತಿ ನಮಗೆ ದಾರಿ ದೀಪ. ಅದರೆ ಅಂಥ ಸಾಂಸ್ಕೃತಿಕವಾದ ನೆನಪುಗಳನ್ನು ಉಪೇಕ್ಷಿಸುತ್ತಿದ್ದೇವೆ.
ಯಾವುದೇ ಸಂಪನ್ಮೂಲವನ್ನು ಖಾಲಿ ಮಾಡಬಾರದು ಎಂಬದೊಂದು ಪ್ರಜ್ಞೆಯಾಗಿತ್ತು. ಹೊಂಡದಲ್ಲಿ ಒಂದಿಷ್ಟು ನೀರು ಉಳಿದಿದ್ದರೆ, ಅದನ್ನು ಹಾಗೇ ಬಿಡುತ್ತಿದ್ದರು. ಭೂಮಿಯ ಪಾಲು, ದೇವರ ಪಾಲಿನ ಹೆಸರಿನಲ್ಲಿ ಹಾಗೇ ಉಳಿಸುತ್ತಿದ್ದರು. ಅಲ್ಲಿ ಮೀನುಗಳನ್ನು ಬಿಟ್ಟು, ನೀರು ಉಳಿಸುವುದಕ್ಕೆ ಉಪಾಯ ಮಾಡುತ್ತಿದ್ದರು. ಆದರೆ ಇಂಥ ಸಂಪನ್ಮೂಲ ಸರಕಾಗಿ ಅವುಗಳ ಬೌಗೋಳಿಕ ಮಹತ್ವವನ್ನು ಕಳೆದುಕೊಳ್ಳಲಾರಂಭಿಸಿದವು. ಸ್ವಾವಲಂಬಿಯಾಗಿ, ಪ್ರತಿಯೊಬ್ಬರೂ ಉತ್ಪಾದಕರಾಗಿದ್ದ ಕಾಲದವರೆಗೆ ಎಲ್ಲವೂ ಸರಿಯಾಗಿಯೇ ಇತ್ತು. ಉತ್ಪಾದಕರ ಜಾಗದಲ್ಲಿ ಅನುಭೋಗಿಗಳ ಸಂಖ್ಯೆ ಹೆಚ್ಚಿದ್ದು ಸಾಂಸ್ಕೃತಿಕ ಪಲ್ಲಟಕ್ಕೆ ಕಾರಣವಾಗಿದ್ದು, ವಿಸ್ಮೃತಿ ಆವರಿಸುವುದಕ್ಕೆ ಕಾರಣವಾಯಿತು. ಆದರೆ ನಿನ್ನೆಯ ವಿವೇಕದಲ್ಲೇ ನಾಳೆಯ ಬೆಳಕು ಕಾಣಿಸುತ್ತದೆ. ನಾವು ಹಿಂದಿನ ನೆನಪುಗಳಿಗೆ ಮರಳುವ ಮೂಲಕ ನಾವು ಹಿಮ್ಮುಖವಾಗಿ ಹೆಜ್ಜೆ ಹಾಕುತ್ತಿದ್ದೇವೆ ಎಂದು ಭಾವಿಸುತ್ತಿದ್ದಾರೆ. ನಮ್ಮ ಭವಿಷ್ಯ ಇರುವುದು ನಿನ್ನೆಗಳಲ್ಲೇ. ಅದನ್ನು ವರ್ತಮಾನದ ತೊಡಕುಗಳ ಮೂಲಕ ದಾಟಿಸಿ ಭವಿಷ್ಯವಾಗಿಸಿಕೊಳ್ಳಬೇಕಿದೆ.
ದಮಾಶಾ ಪದ್ಧತಿ
ಕೆರೆಯ ನೀರನ್ನು ಬೇಸಿಗೆಯಲ್ಲಿ ನಿರ್ವಹಿಸುವ ವಿಧಾನವಿದು. ಮಳೆಗಾಲದಲ್ಲಿ ಒಳ್ಳೆಯ ಬೆಳೆ ಬರುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಅಷ್ಟು ಪ್ರಮಾಣದಲ್ಲಿ ಕೃಷಿ ಮಾಡಲಾಗುವುದಿಲ್ಲ. ಮಳೆಗಾಲದಲ್ಲಿ ಕೆರೆಯನ್ನು ಆಧರಿಸಿ 500 ಎಕರೆ ಸಾಗುವಳಿ ಮಾಡಲಾಗುತ್ತಿದೆ ಎಂದರೆ ಬೇಸಿಗೆಯಲ್ಲಿ 100 ಎಕರೆಯಷ್ಟು ಮಾಡಲು ಕೆರೆಯಲ್ಲಿ ನೀರು ಇರುತ್ತದೆ. ಹಾಗಾಗಿ ಹಳ್ಳಿಗರೇ ಯಾರ ಮಧ್ಯಸ್ಥಿಕೆ, ಉಸ್ತುವಾರಿ ಇಲ್ಲದೆ ಕೆರೆಯಲ್ಲಿರುವ ನೀರಿನ ಪ್ರಮಾಣವನ್ನು ಆಧರಿಸಿ ಎಷ್ಟು ಎಕರೆ ಭೂಮಿಯಲ್ಲಿ ಕೃಷಿ ಮಾಡಬಹುದು ಎಂದು ಅಂದಾಜು ಮಾಡುವುದು ಅಷ್ಟು ಎಕರೆ ಭೂಮಿಯನ್ನು ಗುರುತಿಸಿ ಅದನ್ನು ಸಾಗುವಳಿ ಪ್ರದೇಶದ ಎಲ್ಲರಿಗೂ ಸಮಾನವಾಗಿ ಹಂಚಿ ಕೃಷಿಗೆ ಅವಕಾಶ ಮಾಡಿಕೊಡುವುದು. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆದುಕೊಳ್ಳುವರು. ಇದು ಕೋಲಾರ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದೆ. ಇದು ನೀರು ನಿರ್ವಹಿಸಲು ಜನಪದರು ಕಂಡುಕೊಂಡ ಸರಳ ಮಾರ್ಗ.