ನದಿಯ ನೀರನು ಕೆರೆಗೆ ತುಂಬಿದ ಹಠಗಾಥೆ-ಓಂಕಾರ್ ಪಿ
ಮೈಸೂರು ಪ್ರದೇಶದಲ್ಲಿ ಬರ ಎಂದಾಕ್ಷಣ ಮೊದಲು ಗಮನ ಹರಿಯುವುದು ದೊಡ್ಡ ಕವಲಂದೆ ಹೋಬಳಿಯತ್ತ. ಗಡಿ ಜಿಲ್ಲೆ ಚಾಮರಾಜನಗರ ಕೂಡ ಬರ ತಾಪಕ್ಕೆ ಗುರಿಯಾಗುತ್ತಲೆ ಇರುತ್ತದೆ. ಅತ್ಯಂತ ಕಡಿಮೆ ಮಳೆ. ಪಾತಳ ಸೇರಿದ ಅಂತರ್ಜಲ. ಬೇಸಿಗೆಯಲ್ಲಷ್ಟೆ ಅಲ್ಲ, ಮಳೆಗಾಲದಲ್ಲು ನೀರಿಗೆ ಪರದಾಟ. ಹೇರಳ ಕೃಷಿ ಭೂಮಿ ಇದ್ದರು ಏನನ್ನೂ ಬೆಳೆಯಲಾಗದ; ಕಲ್ಪವೃಕ್ಷವೆಂದು ಬಗೆದ ತೆಂಗಿನ ತೋಟಗಳೆ ಸಾರಾ ಸಗಟು ತಲೆ ಕಳಚಿಕೊಂಡು ರೈತನನ್ನು ಶಾಶ್ವತ ಸಂಕಟಕ್ಕೆ ತಳ್ಳಿರುವ ಸ್ಥಿತಿ. ಒಂದರ ಮೇಲೊಂದು ಬೋರು ಕೊರೆಯಿಸಿ ಲಕ್ಷಾಂತರ ಸಾಲಗಾರರಾದವರು; ಸಾಲ ತೀರಿಸಲಾಗದೆ ಜೀವ ಬಿಟ್ಟವರು; ಜಮೀನ್ದಾರಿಕೆ ವೈಭವ ಮರೆತು ಊರು ತೊರೆದು ಪಟ್ಟಣದಲ್ಲಿ ಕೂಲಿಗಳಾದವರು… ಬರ ಪೀಡಿತ ಪ್ರದೇಶ ತೆರೆದಿಡುವ ಚಿತ್ರಣಗಳು ಒಂದಕ್ಕಿಂತ ಒಂದು ಭೀಕರ. ಆದರೀಗ, ವರ್ಷದಿಂದೀಚೆಗೆ ಕೆಲವು ಭಾಗದಲ್ಲಿ ತುಸು ಭರವಸೆ ಮೂಡುತ್ತಿದೆ. ದೊಡ್ಡ ಕವಲಂದೆಯಲ್ಲಿ ನಿಂತು, ಕುಡಿಯುವ ನೀರಿನ ಸ್ಥಿತಿ ಹೇಗಿದೆ ಅಂತ ಕೇಳಿದರೆ,‘‘ಸಮಸ್ಯೆಯೇನಿಲ್ಲ.ದಿನಕ್ ಎರಡು ಸಾರಿ ನೀರು ಬಿಡ್ತಾರೆ. ಕೆರೆ ತುಂಬಿರೋದ್ರಿಂದ ದನ ಕರುಗಳಿಗೂ ಸಮಸ್ಯೆಇಲ್ಲ.ಬತ್ತಿದ್ದ ಬೋರ್ವೆಲ್ಗಳಲ್ಲಿ ನೀರು ಬರ್ತಿದೆ’’ ಎಂಬ ಉತ್ತರ ದೊರೆಯುತ್ತದೆ. ನಂಜೇದೇವನಪುರದ ತೆಂಗಿನ ತೋಟಗಳಲ್ಲಿ ಹಸಿರು ಜೀವ ಸಂಚಾರವಾಗಿದೆ. ಬೇಗೆ ಪೂರ್ತಿ ನೀಗದಿದ್ದರೂ, ತುಸು ತೃಪ್ತಿ ನೆಲೆಸುತ್ತಿದೆ.
–
ಕೆರೆಗಳಿಗೆ ಕಪಿಲಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದರ ಫಲವಾಗಿ, ಹನಿ ಮಳೆ ಬೀಳದ ‘ಬರ’ಕಾಲದಲ್ಲೂ ಈ ಭಾಗದ ಇಪ್ಪತ್ತು ಕೆರೆಗಳು ತುಂಬಿರುವುದು ಆಶಾದಾಯಕ ಬದಲಾವಣೆಗೆ ಕಾರಣ. ಅದಕ್ಕಾಗಿ ಯೋಜನೆ ಮಂಜೂರು ಮಾಡಿದ ಸರ್ಕಾರವನ್ನು ಶ್ಲಾಘಿಸಬೇಕು.ಅದಕ್ಕಿಂತ ಮುಖ್ಯ,ಯೋಜನೆಯ ರೂಪುರೇಷೆ,ನದಿಯಿಂದ ಕೆರೆಗಳಿಗೆ ನೀರು ತುಂಬಿಸಿದರಷ್ಟೆ ಬರಪೀಡಿತ ಜಿಲ್ಲೆ ಎಂಬ ಕಳಂಕ ಕಳಚುವುದು ಸಾಧ್ಯ ಎಂಬ ವಿಶ್ವಾಸದಾಯಕ ಕನಸನ್ನು ಹೊತ್ತು ಅದರ ಅನುಷ್ಠಾನಕ್ಕೆ ನಿರಂತರ ಶ್ರಮಿಸಿದ ಕಾಳನಹುಂಡಿ ಗುರುಸ್ವಾಮಿ ಎಂಬ ಸ್ಥಳೀಯ ಹೋರಾಟಗಾರನಿಗೆ ಇದರ ಅಗ್ರ ಶ್ರೇಯ ಸಲ್ಲಬೇಕು. ಆಪ್ತರು,ಶಾಸಕರು,ಮಂತ್ರಿಗಳ ಬಳಿಗೆ ನೂರಾರು ಬಾರಿ ಎಡೆತಾಕಿ, ಯೋಜನೆಯ ಪರಿಕಲ್ಪನೆಯನ್ನು ವಿವರಿಸಿದರೆ ಬಹುತೇಕ ಎಲ್ಲರೂ ನಕ್ಕು,ವಾಪಸ್ ಕಳುಹಿಸುತ್ತಿದ್ದರಂತೆ. ವ್ಯಂಗ್ಯ ಮಾಡಿದವರು,‘ಇದೆಲ್ಲ ಆಗದ ಹೋಗದ ಸಂಗತಿ. ನದಿಯಿಂದ ನೀರು ಹರಿಸಿ,ಕೆರೆ ತುಂಬಿಸುವುದು ಸಾಧ್ಯವಾ’’ ಎಂದು ಪ್ರಶ್ನಿಸಿದವರೂ ಇದ್ದರು. ಆದರೆ, ಈ ಆಸಾಮಿ ಹಿಂದೆಗೆಯಲಿಲ್ಲ. 2007ರಲ್ಲಿ ಏಳೆಂಟು ಗೆಳೆಯರನ್ನು ಕಟ್ಟಿಕೊಂಡು,‘ಕುಡಿಯುವ ನೀರಿಗಾಗಿ ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಸಮಿತಿ’ ರಚಿಸಿ, ಕರಪತ್ರ ಮುದ್ರಿಸಿ ಹಳ್ಳಿಹಳ್ಳಿಯಲ್ಲಿ ಹಂಚಿದರು. ಸಿಕ್ಕ ಎಲ್ಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರಿದರು. ಸುತ್ತೂರು ಮಠದ ಸ್ವಾಮೀಜಿ ಮೂಲಕ ಆಗಿನ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಯೋಜನೆಯ ಮನದಟ್ಟು ಮಾಡಿಸಿದರು. ಅಸಾಧ್ಯ ಎನ್ನುತ್ತಿದ್ದ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಕೂಡ ಸ್ವಾಮೀಜಿ ಮಾತಿಗೆ ಕಟ್ಟುಬೀಳುವಂತೆ ಮಾಡಿದರು.
–
ಅಂತೂ, ಈ ಭಾಗದ ಇಪ್ಪತ್ತು ಕೆರೆಗಳನ್ನು ತುಂಬಿಸುವ ಯೋಜನೆಗೆ ಯಡಿಯೂರಪ್ಪ ಸರ್ಕಾರ ಬಜೆಟ್ನಲ್ಲಿ ನೂರು ಕೋಟಿ ರೂಪಾಯಿ ಘೋಷಿಸಿತು. ಆದರೆ,ಅಷ್ಟಕ್ಕೆ ಮುಗಿಯಲಿಲ್ಲ. ನೀರಾವರಿ ಇಲಾಖೆ ಅಧಿಕಾರಿ, ಎಂಜಿನಿಯರುಗಳ ಬಳಿ ಪ್ರಸ್ತಾಪ ಮುಂದಿಟ್ಟರೆ,‘ಸಾಧ್ಯವೇ ಇಲ್ಲ. ಕೊಟ್ಯಂತರ ರೂ ವ್ಯರ್ಥ ಪೋಲಾಗುತ್ತದಷ್ಟೆ ’ಎಂದು ತಲೆ ಒಗೆದರು. ಕಾವೇರಿ ನ್ಯಾಯಾಧಿಕರಣದ ಗುಮ್ಮ ಬೆಂಬತ್ತಿ ಕಾಡುತ್ತಲೆ ಇತ್ತು. ಕಾವೇರಿ ಕೊಳ್ಳದಲ್ಲಿ ಯಾವುದೆ ನೀರಾವರಿ ಕಾಮಗಾರಿಗೆ ಮುಂದಾದರೆ ನ್ಯಾಯಾಧಿಕರಣದೆದುರು ತಮಿಳುನಾಡು ಕ್ಯಾತೆ ತೆಗೆಯಬಹುದು; ಸಚಿವರೆ ತೀರ್ಪು ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಬೇಕಾದೀತೆಂಬ ಆತಂಕಗಳನ್ನು ಹರಿಯಬಿಡಲಾಯಿತು. ಪರಿಣಾಮ, ಘೋಷಣೆ ಆದರೂ ಸಂಬಂಧಿಸಿದ ಕಡತ ಎರಡೂವರೆ ವರ್ಷ ಇಟ್ಟಲ್ಲಿಂದ ಜರುಗಲಿಲ್ಲ. ಆದರೆ,ಗುರುಸ್ವಾಮಿ ಪಟ್ಟು ಸಡಿಲಿಸುವ ಜಾಯಮಾನದವರಲ್ಲ. ಖಾಸಗಿ ಎಂಜಿನಿಯರ್ ನೆರವಿನಿಂದ ತಯಾರಿಸಿದ ನೀಲನಕ್ಷೆ ಹಿಡಿದು ‘ಸ್ವಂತ ಕೆಲಸ’ ಎಂಬಂತೆ ನೀರಾವರಿ ಇಲಾಖೆಗೆ ಅಲೆದರು. ಸಾಧ್ಯವೇ ಇಲ್ಲ ಎನ್ನುತ್ತಿದ್ದ ಅಧಿಕಾರಿಗಳು ಗುರುಸ್ವಾಮಿಯ ನಿರಂತರ,ಸಾತ್ವಿಕ ‘ಉಪಟಳ’ಕ್ಕೆ ಮಣಿದು,ಕ್ರಿಯಾಯೋಜನೆ ರೂಪಿಸಿದರು.ಅದೇ ಹೊತ್ತಿಗೆ ಕಾವೇರಿ ನ್ಯಾಯಾಧಿಕರಣದ ಐ-ತೀರ್ಪು ರಾಜ್ಯದ ಪಾಲಿಗೆ ತುಸು ಸಡಿಲ ಎನ್ನಿಸಿತು. ಆ ಅವಕಾಶ ಬಳಸಿಕೊಂಡ ಗುರುಸ್ವಾಮಿ ಪಡೆ ಪ್ರಯತ್ನವನ್ನು ಬಿರುಸುಗೊಳಿಸಿತು.
–
ಈ ಮಧ್ಯೆ,ರಾಜ್ಯದಲ್ಲಿ ರಾಜಕೀಯ ವಿಪ್ಲವಗಳು ಘಟಿಸಿ,ಅಧಿಕಾರ ಸ್ಥಾನ ಅದಲು ಬದಲಾಯಿತು. ಅದೇನಾದರೂ,ಸತತ ಪ್ರಯತ್ನದ ಫಲ ಯೋಜನೆ ಅನುಷ್ಠಾನಕ್ಕೆ ಬಂದು,2014ರ ಆ.15ರಂದು ಚಾಲನೆ ಪಡೆಯಿತು. ನಂಜನಗೂಡಿಗೆ 4 ಕಿಮೀ ದೂರದ ಆಲಂಬೂರು ಬಳಿ ಕಪಿಲಾ ನದಿಯಿಂದ ತಲಾ 2 ಸಾವಿರ ಅಶ್ವ ಶಕ್ತಿಯ 3ಯಂತ್ರಗಳು ನೀರೆತ್ತಿ ಪೈಪ್ಲೈನ್ ಮೂಲಕ ಕೋಣನೂರು ಕೆರೆ ತುಂಬಿಸುತ್ತವೆ. ಅಲ್ಲಿಂದ ಗುರುತ್ವ ಶಕ್ತಿ ಮೂಲಕ ನೀರು ಬೆಂಡರವಾಡಿ-ಕೆರೆಹಳ್ಳಿ ,ನಂಜನಗೂಡು ತಾಲೂಕು ದೊಡ್ಡ ಕವಲಂದೆ ಸಮೀಪದ ಕೆರೆಗಳನ್ನು ಸೇರುತ್ತದೆ. ಕೆರೆಹಳ್ಳಿ ಕೆರೆಯಲ್ಲಿ ಅಳವಡಿಸಿರುವ 6 ಸಾವಿರ ಅಶ್ವ ಶಕ್ತಿ ಯಂತ್ರಗಳು ತಮ್ಮಡಹಳ್ಳಿ ಕೆರೆ ತುಂಬಿಸುತ್ತವೆ. ಅಲ್ಲಿಂದ ನಂಜೇದೇವನಪುರ -ಕಾಳನಹುಂಡಿ-ಮಾಲಂಗೆರೆಗಳಿಗೆ ನೀರಿನ ಭಾಗ್ಯ ಸಿಗುತ್ತಿದೆ. ತಮ್ಮಡಹಳ್ಳಿ ಕೆರೆಯಿಂದಲೆ ಇನ್ನೊಂದು ಭಾಗದ ಬಲಚವಾಡಿ-ತೆರಕಣಾಂಬಿ-ಉತ್ತೂರು- ಕಿಲಿಗೆರೆ-ಮೇಲೂರು- ನರಸಮಂಗಲ – ಅಮಚವಾಡಿ ಸೇರಿ ಹಲವು ಕೆರೆಗಳು ಮೈದುಂಬುತ್ತಿವೆ. ಒಟ್ಟು 267 ಕೋಟಿ ರೂ ಖರ್ಚಾದರೂ, ಒಂದೂವರೆ ವರ್ಷದಲ್ಲಿ ಇಪ್ಪತ್ತು ಕೆರೆ ವ್ಯಾಪ್ತಿಯ ಎಪ್ಪತ್ತರಿಂದ ಎಂಬತ್ತು ಊರುಗಳಲ್ಲಿ ಆಗಿರುವ ಗುಣಾತ್ಮಕ ಪರಿಣಾಮಗಳ ದೃಷ್ಟಿಯಲ್ಲಿ ನೋಡಿದರೆ ಅದೇನು ದೊಡ್ಡ ಮೊತ್ತವಲ್ಲ. ಬಹುಶಃ, ಯೋಜನೆ ಕೈಗೂಡದಿದ್ದರೆ ಈ ಭಾಗದ ಜನ,ಜಾನುವಾರುಗಳ ಸ್ಥಿತಿ ಉತ್ತರ ಕರ್ನಾಟಕಕ್ಕಿಂತ ಭೀಕರವಾಗಿರುತ್ತಿತ್ತು. ಈಗ ಊರಿನ ಜನ,ಜಾನುವಾರುಗಳ ಅಗತ್ಯಕ್ಕೆ ಸಾಕಷ್ಟು ನೀರು ದೊರೆಯುತ್ತಿದೆ. ಬತ್ತಿದ್ದ ಎಷ್ಟೋ ಕೊಳವೆ ಬಾವಿಗಳು ಅಂತರ್ಜಲ ವೃದ್ಧಿಸಿ ಮರುಜೀವ ಪಡೆದಿವೆ. ಕೆರೆ ಕೆಳಗಿನ ಭೂಮಿಯಲ್ಲಿ ಕೃಷಿ ಸಾಧ್ಯವಾಗುತ್ತಿದೆ. ಉತ್ತಿ,ಬಿತ್ತುವ ಉಸಾಬರಿಯೆ ಬೇಡ; ನಗರದಲ್ಲಿ ಕೂಲಿಯಾಗುವುದೆ ವಾಸಿ ಎನ್ನುತ್ತಿದ್ದವರ ಬದುಕಿನಲ್ಲಿ ಕೊಂಚ ಭರವಸೆ ಮೂಡಿದೆ.
–
ನಮ್ಮ ಹಿರಿಯರು ಇಂಥ ಘನ ಆದರ್ಶದಿಂದಲೆ ಊರಿಗೊಂದು ಕೆರೆ ಕಟ್ಟಿದರು. ಕೆರೆ ಉಳಿವಿಗಾಗಿ ಹಾರವಾದವರ ಹೇರಳ ಕತೆಗಳು ಜನಪದದಲ್ಲಿವೆ. ಆದರೀಗ,ಕೆಲವರ ಪಾಲಿಗೆ ಕೆರೆಗಳು ಹೆಚ್ಚಿನ ಲಾಭಕ್ಕೆ ಮಾರಿಕೊಳ್ಳುವ ಸರಕುಗಳು.ಒತ್ತುವರಿ,ಕಬಳಿಕೆಯ ದುರಾಸೆಗೆ ನೂರಾರು ಕೆರೆಗಳು ಈಡಾಗಿವೆ. ಹೂಳೆತ್ತುವುದು,ದಂಡೆ ಎತ್ತರಿಸುವುದು, ಪುನರುಜ್ಜೀವನಗೊಳಿಸುವುದೆ ಮುಂತಾದ ಕಾಮಗಾರಿಗಳು ಅಧಿಕಾರಸ್ಥ ಜನರಿಗೆ ಬರದಲ್ಲೂ ಲಾಭಕರ ಒಳ ಬಾಗಿಲುಗಳನ್ನು ತೆರೆದಿಟ್ಟಿವೆ. ಅತ್ಯಂತ ಕಡಿಮೆ ಮಳೆ ಪ್ರದೇಶದಲ್ಲಿ ಬರಪರಿಹಾರ ಕಾಮಗಾರಿ ಹೆಸರಲ್ಲಿ ನೀರಿಂಗಿಸುವ,ಹೂಳೆತ್ತುವ,ಕೃಷಿ ಹೊಂಡ ನಿರ್ಮಿಸುವ;ಸಾಲು ಸಾಲು ಕೊಳವೆ ಬಾವಿ ಕೊರೆಸುವ ಯೋಜನೆಗಳನ್ನು ಸಾರಾಸಗಟು ಅನುಷ್ಠಾನ ಗೊಳಿಸಿ, ಕೋಟಿಗಟ್ಟಲೆ ಹಣ ಕರಗಿಸಿದ್ದಕ್ಕೆ ಅನೇಕ ಉದಾಹರಣೆಗಳಿವೆ. ಇಂಥಲ್ಲೀಗ,ಕೆರೆ ತುಂಬಿದರೆ,ಅದು ಸುತ್ತಲಿನ ಹಲವು ಊರಿನ ಅಸಹನೀಯ ವಾತಾವರಣವನ್ನು ;ಜನ ಜೀವನವನ್ನು ಸಹ್ಯಗೊಳಿಸಬಲ್ಲುದೆನ್ನುವುದಕ್ಕೆ ಹಲವು ನಿದರ್ಶನಗಳು ಸೃಷ್ಟಿಯಾಗಿವೆ. ‘ಬೋರ್ವೆಲ್ ಬೇಡ. ನಮ್ಮೂರ ಕೆರೆಗೆ ನೀರು ತುಂಬಿಸಿಕೊಡಿ ಸಾಕು’ ಎಂಬ ಜಾಗೃತ ಒತ್ತಾಯ ಹಲವು ಗ್ರಾಮಗಳಿಂದ ಕೇಳಿಬರಲಾರಂಭಿಸಿದೆ.
–
ಅಂದ ಹಾಗೆ, ಗುರುಸ್ವಾಮಿ ಮೂಲತಃ ಕೃಷಿಕರು.ಮೂರು ದಶಕದ ಹಿಂದೆ ಸ್ನಾತಕೋತ್ತರ ಪದವಿ ಮುಗಿಸಿ ಕೃಷಿಯಲ್ಲಿ ನೆಲೆನಿಲ್ಲುವ ಕನಸು ಕಂಡು,
ಕಾಳನಹುಂಡಿಯ ತಮ್ಮ ಜಮೀನಿನಲ್ಲಿ ಅನೇಕ ಪ್ರಯೋಗ ಮಾಡಿದರು.ಆಗಲ್ಲಿ ನೂರೈವತ್ತು-ಇನ್ನೂರು ಅಡಿಗೆಲ್ಲ ನೀರು ಸಿಗುತ್ತಿತ್ತಂತೆ. ಕ್ರಮೇಣ ಅಂತರ್ಜಲ ಕುಸಿಯಿತು. ಕೊಳವೆ ಬಾವಿಗಳು ಹೆಚ್ಚಿದವು.ತಮ್ಮ ಭೂಮಿಯಲ್ಲೆ ಬರ ಪರಿಣಾಮಗಳನ್ನು ಕಂಡರು. ಕೃಷಿ ಜತೆಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅವರನ್ನು ಆರ್ಥಿಕ ಮುಗ್ಗಟ್ಟೇನೂ ಕಾಡಲಿಲ್ಲ. ಆದರೂ,‘ಕೆರೆಗಳಿಗೆ ನೀರು ತುಂಬಿಸದಿದ್ದರೆ ಜಿಲ್ಲೆಯ ಭವಿಷ್ಯ ಭೀಕರವಾಗಲಿದೆ’ ಎಂಬುದನ್ನು ಆಗಲೇ ಅರಿತರು. ಹೇಮಾವತಿಯಿಂದ ನಾಗಮಂಗಲ ಮತ್ತು ತುಮಕೂರಿನ ಕೆಲವು ಕೆರೆ ತುಂಬಿಸಿರುವ ಸಂಗತಿ ಮತ್ತು ಈ ಸಂಬಂಧದ ಲೋಕಜ್ಞಾನ ಅವರ ಅರಿವನ್ನು ವಿಸ್ತರಿಸಿತು. ಅಧಿಕಾರಸ್ಥರಿಗೆ ‘ಅಸಾಧ್ಯ’ಎನ್ನಿಸಿದ್ದು ಇವರಿಗೆ ‘ಖಂಡಿತಾ ಸಾಧ್ಯ’ಎನ್ನಿಸಲು ಇದೇ ಕಾರಣ. ಕೊನೆಗೂ ಗುರುಸ್ವಾಮಿ ಹಠ ಗೆದ್ದಿತು.
–
ಆದರೀಗ, ‘ಯಶಸ್ಸಿಗೆ ಹಲವು ಅಪ್ಪಂದಿರು’.ಆಗ,‘ಅಸಾಧ್ಯ’ಎಂದವರೇ ಈಗ ಯಶಸ್ಸಿನ ಗರಿಮೆಯನ್ನು ತಮ್ಮ ಕಿರೀಟಕ್ಕೆ ಸಿಕ್ಕಿಸಿಕೊಳ್ಳಲು ಮೇಲಾಟ ನಡೆಸುತ್ತಿದ್ದಾರೆ. ಕೆರೆ ತುಂಬಿಸುವ ಕಾರ್ಯ ಕ್ರಮ ಕೂಡ ಎಲ್ಲೆಡೆ ಯಶಸ್ವಿ ಪ್ರಯೋಗವೆನ್ನಿಸಿಕೊಳ್ಳುತ್ತಿದೆ.‘ಈ ಪ್ರಯತ್ನಕ್ಕಾಗಿ ನನ್ನ ದುಡಿಮೆಯಲ್ಲಿ ಹತ್ತನ್ನೆರಡು ಲಕ್ಷಗಳನ್ನು; ಸಾಕಷ್ಟು ಸಮಯವನ್ನು ಖರ್ಚು ಮಾಡಿದ್ದೇನೆ. ಕೆಲವು ಗೆಳೆಯರು ಕರೆದಾಗಲೆಲ್ಲ ಬಂದು ಬೆಂಬಲ ತುಂಬಿದರು. ಬರದ ನೆಲದಲ್ಲಿ ಹಸಿರು ಭರವಸೆ ಅರಳುತ್ತಿರುವುದನ್ನು ನೋಡಿದರೆ ಅದೆಲ್ಲ ಸಾರ್ಥಕವಾಯಿತೆನ್ನಿಸುತ್ತದೆ’ ಎನ್ನುತ್ತಾರೆ ಗುರುಸ್ವಾಮಿ. ಒಂದೊಂದು ಪ್ರದೇಶದಲ್ಲೂ ಇಂಥ ಕಾಳಜಿಯುಳ್ಳವರು ಒಬ್ಬೊಬ್ಬರಿದ್ದರೆ, ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಜಲಸಂಪನ್ಮೂಲ ಕ್ರೋಢೀಕರಿಸಿಕೊಳ್ಳುವುದು ಕಷ್ಟವೇನಲ್ಲ. ಅದಕ್ಕಾಗಿ,ಅಭಿವೃದ್ಧಿ-ಬರ ಪರಿಹಾರದ ನೆಪದಲ್ಲಿ ಎತ್ತೆತ್ತಲೊ ಹರಿದು-ಹಂಚಿ ಹೋಗುವ ಯೋಜನೆಗಳನ್ನು;ಅವುಗಳ ಬಾಬ್ತಿನ ಬೃಹತ್ ಮೊತ್ತವನ್ನು ಒಡ್ಡು ಕಟ್ಟಿ ತಡೆದು ನಿಜ ಅಭಿವೃದ್ಧಿಯತ್ತ ತಿರುಗಿಸುವ, ಆ ಮೂಲಕ ಜನರ ಬದುಕು ಹಸನುಗೊಳಿಸುವ ನಿಜ ಇಚ್ಛಾಶಕ್ತಿಯುಳ್ಳವರ ಸಂತತಿ ಹೆಚ್ಚಬೇಕು.
—