ಬರ ನೀಗಿಸಲು ಮಳೆ ನೀರು ಸಂಗ್ರಹವೊಂದೇ ಪರಿಹಾರ-ಸಂದರ್ಶನ- ಹಮೀದ್ ಕೆ.

ಬರ ಮತ್ತು ನೀರಿನ ತತ್ವಾರದಿಂದ ಇಡೀ ದೇಶ ತತ್ತರಿಸಿದೆ. ರಾಜ್ಯದ 137 ತಾಲ್ಲೂಕುಗಳು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಿಸಿದೆ. ನೀರಿನ ಬವಣೆ ನೀಗಿಸಲು ಏನು ಮಾಡಬಹುದು ಎಂಬ ಪ್ರಶ್ನೆಯನ್ನು ಇರಿಸಿಕೊಂಡು ಭಾರತೀಯ ವಿಜ್ಞಾನ ಸಂಸ್ಥೆಯೊಳಗೆ (ಐಐಎಸ್‍ಸಿ) ಇರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಹಿರಿಯ ವಿಜ್ಞಾನಿ ಎ.ಆರ್.ಶಿವಕುಮಾರ್ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

ನವೀಕರಿಸಬಹುದಾದ ಇಂಧನ ಮತ್ತು ಮಳೆ ನೀರು ಬಳಕೆ ಬಗ್ಗೆ ಕಳೆದ 35 ವರ್ಷಗಳಿಂದ ಕೆಲಸ ಮಾಡುತ್ತಿರುವ ಶಿವಕುಮಾರ್ ಅವರ ಅತ್ಯುತ್ತಮ ಆವಿಷ್ಕಾರಕ್ಕೆ 2001ರಲ್ಲಿ ಕೇಂದ್ರ ಸರ್ಕಾರದ ಪ್ರಶಸ್ತಿ ಬಂದಿದೆ. ಈ ಎರಡು ಕ್ಷೇತ್ರಗಳಿಗೆ ಸಂಬಂಧಿಸಿ ಅವರು ಹಲವು ಪೇಟೆಂಟ್‌ಗಳನ್ನೂ ಹೊಂದಿದ್ದಾರೆ.

* ದೇಶದ ವಿವಿಧ ಭಾಗಗಳಲ್ಲಿ ಬರ ಇದೆ, ಕುಡಿಯುವ ನೀರಿಗೂ ಕಷ್ಟವಾಗಿದೆ. ಈಗ ಏನು ಪರಿಹಾರ?
ನಮ್ಮ ಸಮಸ್ಯೆ ಇರುವುದೇ ಇಲ್ಲಿ. ನೀರೇ ಇಲ್ಲದಿದ್ದಾಗ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ಬರಗಾಲ ಬರದಂತೆ ನೋಡಿಕೊಳ್ಳುವ ಕೆಲಸವನ್ನು ನೀರಿದ್ದಾಗ ಮಾಡಬೇಕೇ ಹೊರತು ನೀರೇ ಇಲ್ಲದಿದ್ದಾಗ ಅಲ್ಲ. ನೀರಿನ ಬಗ್ಗೆ ಪ್ರತಿಯೊಬ್ಬರಿಗೂ ತಾತ್ಸಾರ ಇದೆ. ನೀರಿನ ಮೌಲ್ಯವನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ.

* ಈ ತಾತ್ಸಾರಕ್ಕೆ ಕಾರಣ ಏನು?
ಹಿಂದೆಲ್ಲ ಹೇಗಿತ್ತು ಎಂದರೆ ನೀರಿನ ಜವಾಬ್ದಾರಿ ನಮ್ಮದೇ ಆಗಿತ್ತು. ದೂರದ ಬಾವಿಗಳು, ಕೆರೆಗಳು, ಕಟ್ಟೆಗಳಿಂದ ನಾವು ನೀರು ತರುತ್ತಿದ್ದೆವು. ನಾನು ಚಿಕ್ಕವನಾಗಿದ್ದಾಗ ಎರಡು ಬಿಂದಿಗೆ ಸಿಹಿ ನೀರು, ಹತ್ತು ಬಿಂದಿಗೆ ಉಪ್ಪು ನೀರು ತಾರದೇ ಹೆತ್ತವರು ನಮ್ಮನ್ನು ಶಾಲೆಗೆ ಹೋಗುವುದಕ್ಕೇ ಬಿಡುತ್ತಿರಲಿಲ್ಲ. ಆದರೆ ಈಗ ನೀರು ಕೊಡುವ ಜವಾಬ್ದಾರಿಯನ್ನು ಬೇರೆಯವರು ವಹಿಸಿಕೊಂಡು ಬಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಜಲ ಮಂಡಳಿ ನೀರು ಕೊಟ್ಟರೆ, ಬೇರೆ ನಗರಗಳಲ್ಲಿ ಮುನಿಸಿಪಾಲಿಟಿಯವರು ನೀರು ಕೊಡುತ್ತಾರೆ. ಗ್ರಾಮಗಳಲ್ಲಿ ನೀರು ಪೂರೈಸುವ ಹೊಣೆ ಗ್ರಾಮ ಪಂಚಾಯ್ತಿಯದ್ದಾಗಿದೆ. ನಾವೇ ನೀರು ತರುತ್ತಿದ್ದಾಗ ಯಾರು ಹೇಳದೇ ಇದ್ದರೂ ಅದನ್ನು ನಾವು ಮಿತವಾಗಿ ಬಳಸುತ್ತಿದ್ದೆವು. ಈಗ ಯಾರೋ ನೀರು ಪೂರೈಸುತ್ತಾರೆ. ಅದಕ್ಕೆ ತಕ್ಕ ಬೆಲೆಯನ್ನೂ ನಾವು ಕೊಡುವುದಿಲ್ಲ. ಹಾಗಾಗಿ ಬಳಕೆಗೆ ಮಿತಿಯೇ ಇಲ್ಲ ಎಂಬಂತಾಗಿದೆ.

ಬೆಂಗಳೂರಿನಂತಹ ನಗರದಲ್ಲಿ ದಿನಕ್ಕೆ ಎರಡು-ಮೂರು ಸಾವಿರ ಲೀಟರ್ ನೀರು ಬಳಸುವ ಮನೆಗಳು ನನಗೆ ಗೊತ್ತಿವೆ. ಅದೇ ಹೊತ್ತಿಗೆ, ದಿನಕ್ಕೆ 400-500 ಲೀಟರ್ ನೀರಷ್ಟೇ ಬಳಸುವ ಮನೆಗಳೂ ಇವೆ. ನನ್ನ ಮನೆಯ ದಿನದ ನೀರಿನ ಬಳಕೆ 400 ಲೀಟರ್ ಮಾತ್ರ. ನನ್ನ ಮನೆಗೆ ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್‍ಎಸ್‌ಬಿ) ನೀರಿನ ಸಂಪರ್ಕವೇ ಇಲ್ಲ.

* ಹೊರಗಿನ ನೀರಿನ ಸಂಪರ್ಕವೇ ಇಲ್ಲದೆ ಹೇಗೆ?
ನಾವು ಸಂಪೂರ್ಣವಾಗಿ ಮಳೆ ನೀರನ್ನು ಅವಲಂಬಿಸಿದ್ದೇವೆ. ಕಳೆದ 20 ವರ್ಷಗಳಿಂದ ಮಳೆ ನೀರು ಬಿಟ್ಟು ಬೇರೆ ನೀರನ್ನು ಉಪಯೋಗಿಸಿಲ್ಲ. ಇಂದಿಗೂ ನನ್ನ ಮನೆಯಲ್ಲಿ ಸಂಗ್ರಹವಾದ ಮಳೆ ನೀರು ಇದೆ.

* ನಗರಗಳ ಜನರು ತಮ್ಮ ನೀರನ್ನು ತಾವೇ ಕಂಡುಕೊಳ್ಳಲು ಸಾಧ್ಯವೇ?
ನೀರು ನಮ್ಮದೇ ಜವಾಬ್ದಾರಿ ಎಂದು ಈಗ ನಾವು ಬಾವಿ ತೆಗೆದರೆ ನೀರು ಬರಲ್ಲ. ಪರಿಸರಕ್ಕೆ ನಾವು ಮಾಡಿರುವ ಹಾನಿ ಅಪಾರವಾದುದು. ಕೆರೆ ಕಟ್ಟೆಗಳೆಲ್ಲ ಬತ್ತಿ ಹೋಗಿವೆ. ಕೊಳವೆ ಬಾವಿಗಳ ನೀರು ತಳಕಂಡಿದೆ. ಇದನ್ನು ಮರುಪೂರಣ ಮಾಡದೆ ನಮಗೆ ನೀರು ದೊರೆಯುವುದಕ್ಕೆ ಸಾಧ್ಯವೇ ಇಲ್ಲ. ಇದನ್ನು ಮರುಪೂರಣ ಮಾಡಲು ಇರುವ ಒಂದೇ ದಾರಿ ಎಂದರೆ ಮಳೆ ನೀರು ಸಂಗ್ರಹ.

* ನಗರಗಳಲ್ಲಿಯೂ ಮಳೆ ನೀರಿನ ಮೂಲಕ ಅಂತರ್ಜಲ ಮರುಪೂರಣ ಮಾಡಬಹುದೇ?
ಮಳೆ ನೀರು ಸಂಗ್ರಹ ಬಹಳ ಸುಲಭ. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ವಿಧಾನಗಳನ್ನು ಬಳಸಿಕೊಂಡು ಮಳೆ ನೀರು ಸಂಗ್ರಹ ಮಾಡಬಹುದು. ಬೆಂಗಳೂರಿನಂತಹ ನಗರದಲ್ಲಿ ಅಂತರ್ಜಲ ಮರುಪೂರಣ ಕಷ್ಟ. ಬೆಂಗಳೂರಿನಲ್ಲಿ 40, 50 ಅಡಿ, ಗರಿಷ್ಠ ಅಂದರೆ 80 ಅಡಿಯಷ್ಟು ಮಾತ್ರ ಮಣ್ಣಿನ ಪದರ ಇದೆ. ಅದರ ಕೆಳಗೆ ಕಲ್ಲು… ಇಡೀ ನಗರ ದೊಡ್ಡ ಬಂಡೆಯ ಮೇಲೆ ಕೂತಿದೆ. ಹಾಗಾಗಿ ಅಂತರ್ಜಲ ಮರುಪೂರಣ ಸ್ವಲ್ಪ ಕಷ್ಟ. ಬಂಡೆಯಲ್ಲಿ ಇರುವ ಬಿರುಕುಗಳ ಮೂಲಕವಷ್ಟೇ ಮರುಪೂರಣ ಸಾಧ್ಯ. ಅದನ್ನು ಬಹಳ ವಿಕೇಂದ್ರೀಕೃತವಾಗಿ ಮಾಡಬೇಕಾಗುತ್ತದೆ. ಹಾಗಾಗಿ ನಾವು ಮಳೆ ನೀರನ್ನು ಹಿಡಿದಿಟ್ಟು ಬಳಸಬೇಕು.

* ಬೆಂಗಳೂರು ಬಿಟ್ಟು ಬೇರೆ ಕಡೆ…
ಅಂತರ್ಜಲ ಮರುಪೂರಣಕ್ಕೆ ಪ್ರತಿಯೊಬ್ಬರೂ ಅವಕಾಶ ಮಾಡಿಕೊಳ್ಳಬೇಕು. ಆದರೆ ಮನೆ, ಕಟ್ಟಡಗಳನ್ನು ಕಟ್ಟುವಾಗ ಈ ಬಗ್ಗೆ ಯಾರೂ ಯೋಚಿಸುವುದಿಲ್ಲ. ಪ್ರತಿ ಮನೆ ಹೊರಗೂ ಒಂದು ಇಂಗುಗುಂಡಿ ಮಾಡಿ ನಮ್ಮ ಕೊಳವೆ ಬಾವಿಗಳು, ಕೆರೆಗಳು ಮರುಪೂರಣ ಆಗಲಿ ಎಂದು ನಮ್ಮ ಜನಪ್ರತಿನಿಧಿಗಳೂ ಚಿಂತಿಸುವುದಿಲ್ಲ.

* ಕೋಟ್ಯಂತರ ಜನರಿಗೆ ಕುಡಿಯುವ ನೀರಿಲ್ಲ. ನೀರಿನ ಸಮಸ್ಯೆ ಎದುರಿಸಲು ಮಳೆ ನೀರನ್ನೇ ನಾವು ಆಶ್ರಯಿಸಬೇಕೇ?
ಮಳೆ ನೀರು ಬಿಟ್ಟು ಬೇರೆ ನೀರು ತರುತ್ತೇವೆ ಎಂದು ಇಡೀ ಪ್ರಪಂಚದಲ್ಲಿ ಯಾರಾದರೂ ಹೇಳಿದರೆ ಅದು ಶುದ್ಧ ಸುಳ್ಳು.

‌* ಎಲ್ಲರಿಗೂ ನೀರು ಕೊಡುವುದು ಹೇಗೆ?
ಬೆಂಗಳೂರನ್ನೇ ಉದಾಹರಣೆಯಾಗಿ ಇಟ್ಟುಕೊಂಡು ಹೇಳುತ್ತೇನೆ. ಬೆಂಗಳೂರು ಈಗ 800 ಚದರ ಕಿಲೊ ಮೀಟರ್‌ನಷ್ಟು ವ್ಯಾಪಿಸಿದೆ. ನನ್ನಲ್ಲಿ ಬೆಂಗಳೂರಿನ ಕಳೆದ ನೂರು ವರ್ಷಗಳ ಮಳೆಯ ಅಂಕಿ ಅಂಶ ಇದೆ. ಇಲ್ಲಿ ಸರಾಸರಿ ವರ್ಷಕ್ಕೆ ಮಳೆಯಿಂದ 23 ಟಿಎಂಸಿಯಷ್ಟು ನೀರು ಭೂಮಿಗೆ ಬೀಳುತ್ತದೆ. ಅದನ್ನು ಪೂರ್ಣವಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯ ಇಲ್ಲ. ಅರ್ಧದಷ್ಟು ಬಳಸಿಕೊಂಡರೂ 11 ಟಿಎಂಸಿ ನೀರು ದೊರೆಯುತ್ತದೆ.

ಕಾವೇರಿಯಿಂದ ಬೆಂಗಳೂರಿಗೆ ಪೂರೈಕೆಯಾಗುವ ನೀರು 19 ಟಿಎಂಸಿ. ಆದರೆ ಈ ನೀರನ್ನು ಎಲ್ಲರಿಗೂ ನೀಡುತ್ತಿಲ್ಲ. ಬಿಡಿಎ ಹೇಳುವಂತೆ, ಇಲ್ಲಿ 20 ಲಕ್ಷ ಮನೆಗಳಿವೆ. ಬಿಡಬ್ಲ್ಯುಎಸ್‍ಎಸ್‌ಬಿ ಪ್ರಕಾರ ಇಲ್ಲಿ 8.5 ಲಕ್ಷ ಮನೆಗಳಿಗೆ ಮಾತ್ರ ಕಾವೇರಿ ನೀರು ಪೂರೈಕೆ ಇದೆ. ಸದಾಶಿವನಗರ, ಜಯನಗರ ಮುಂತಾದ ಕಾವೇರಿ ನೀರು ಪೂರೈಕೆ ಇರುವ ಪ್ರದೇಶಗಳಲ್ಲಿ ಒಂದೊಂದು ಮನೆಯಲ್ಲಿ ಎರಡು ಸಾವಿರ ಲೀಟರ್ ನೀರು ಬಳಸುತ್ತಾರೆ. ತಿಂಗಳಿಗೆ 60 ಸಾವಿರ ಲೀಟರ್ ನೀರು!

ಇದನ್ನು ಬದಲಾಯಿಸಿ. ಎಲ್ಲ ಮನೆಗಳಿಗೂ ಅತ್ಯಂತ ಮಿತ ದರದಲ್ಲಿ ನೀರು ಕೊಡಿ. ಆದರೆ ದಿನಕ್ಕೆ 500 ಲೀಟರ್ ಮಾತ್ರ ಕೊಡಿ. ಬಿಡಬ್ಲ್ಯುಎಸ್‍ಎಸ್‌ಬಿ ಈಗ ಒಂದು ಸಾವಿರ ಲೀಟರ್ ನೀರಿಗೆ ವಿಧಿಸುವ ಶುಲ್ಕ ₹ 8. ಈ ಹಣಕ್ಕೆ ಒಂದು ಬಾಟಲಿ ನೀರೂ ಸಿಗುವುದಿಲ್ಲ. ಪ್ರತಿ ಮನೆಗೂ ಅದೇ ದರದಲ್ಲಿ ಮುಂದೆಯೂ ನೀರು ಪೂರೈಸಿ. ಆದರೆ 500 ಲೀಟರ್‌ಗಿಂತ ಹೆಚ್ಚು ನೀರು ಬೇಕಿರುವವರಿಂದ ಹೆಚ್ಚು ಹಣ ಪಡೆದುಕೊಳ್ಳಿ. ಹೆಚ್ಚು ಅಂದರೆ, ₹ 8 ಬದಲು ₹ 16 ಅಲ್ಲ. ನೀರನ್ನು ದುಬಾರಿಯಾಗಿಸಿ.

ಸಾವಿರ ಲೀಟರ್‌ಗೆ ₹ 200-300  ಪಡೆದುಕೊಳ್ಳಿ. ಆಗ ಜನರಿಗೆ ನೀರಿನ ಮೌಲ್ಯ ಅರ್ಥವಾಗುತ್ತದೆ. ಜನರೇ ಮಳೆ ನೀರು ಸಂಗ್ರಹಿಸಲು, ತಮ್ಮ ಬಾವಿ, ಕೊಳವೆ ಬಾವಿ ಮರುಪೂರಣ ಮಾಡಲು ಮನಸ್ಸು ಮಾಡುತ್ತಾರೆ. ಜತೆಗೆ, ನೀರು ಎಂಬುದು ನೈಸರ್ಗಿಕ ಸಂಪನ್ಮೂಲ. ಅದರ ಸಮಾನ ವಿತರಣೆ ಬಹಳ ಮುಖ್ಯ.

* ರಾಜ್ಯದಲ್ಲಿ ಲಕ್ಷಾಂತರ ಕೊಳವೆ ಬಾವಿಗಳಿವೆ, ಅವುಗಳಲ್ಲಿ ಬಹಳಷ್ಟು ಬತ್ತಿವೆ. ಕೊಳವೆ ಬಾವಿ ಕ್ರಾಂತಿಯ ಬಗ್ಗೆ ಏನು ಹೇಳುತ್ತೀರಿ?
ಕೊಳವೆ ಬಾವಿ ನಮ್ಮದಾಗಿರಬಹುದು. ಆದರೆ ನೀರು ನಮ್ಮದು ಮಾತ್ರ ಅಲ್ಲ. ಅದು ಎಲ್ಲರ ನೀರು. ಕೊಳವೆ ಬಾವಿಯಿಂದ ನೀರು ತೆಗೆಯುವವರು ಮಳೆ ನೀರಿನ ಮೂಲಕ ಅದನ್ನು ಮರುಪೂರಣ ಮಾಡಬೇಕು.

* ಕೆರೆಗಳ ಅವನತಿಯು ನೀರು ಸಂಗ್ರಹ ಮತ್ತು ಅಂತರ್ಜಲ ಮರುಪೂರಣಕ್ಕೆ ದೊಡ್ಡ ಹೊಡೆತ ಅಲ್ಲವೇ?
ಕೆರೆಗಳು ಎರಡು ರೀತಿಯಲ್ಲಿ ಸಹಕಾರಿ. ಒಂದು ಅವು ಅಂತರ್ಜಲ ಮರುಪೂರಣ ಮಾಡುತ್ತವೆ. ಮತ್ತೊಂದು ಸುತ್ತಲಿನ ಪರಿಸರವನ್ನು ತಣ್ಣಗಿಡುತ್ತವೆ. ನೀರು ಮತ್ತು ಭೂಮಿ ಬರೇ ಮನುಷ್ಯರಿಗಷ್ಟೇ ಅಲ್ಲ.

ಗಿಡ, ಮರ, ಪ್ರಾಣಿ, ಪಕ್ಷಿಗಳಿಗೂ ಸೇರಿದ್ದು. ಆದರೆ ಈಗ ಪಟ್ಟಣ ಪ್ರದೇಶದಲ್ಲಿರುವ ಕೆರೆಗಳು ಕಲುಷಿತಗೊಂಡಿವೆ. ಒಳಚರಂಡಿ ನೀರು, ಕಸ ಕೆರೆ ಸೇರುವುದರಿಂದ ಕೆರೆಯ ತಳಭಾಗದಲ್ಲಿ ಒಂದು ಪದರವೇ ರೂಪುಗೊಂಡಿದೆ. ಅದು ನೀರು ಇಂಗುವುದನ್ನು ತಡೆಯುತ್ತದೆ. ಜತೆಗೆ ಕೆರೆಗಳ ನೀರು ಬಳಕೆಗೆ ಅಯೋಗ್ಯವಾಗಿದೆ.

ಕೆರೆ ಸಂರಕ್ಷಣೆಗೆ ಮೂರು ಕ್ರಮಗಳನ್ನು ಕೈಗೊಂಡರೆ ಸಾಕು. ಮೊದಲನೆಯದಾಗಿ, ಕೆರೆಗೆ ಒಳಚರಂಡಿ ನೀರು ಹರಿಯದಂತೆ ನೋಡಿಕೊಳ್ಳಬೇಕು. ಎರಡನೆಯದಾಗಿ, ಅದಕ್ಕೆ ಯಾರೂ ಕಸ ಹಾಕದಂತೆ, ಒತ್ತುವರಿ ಮಾಡದಂತೆ ತಡೆಯಬೇಕು. ಮೂರನೆಯದಾಗಿ, ಹಿಂದೆ ಕೆರೆಗೆ ಹರಿದು ಬರುತ್ತಿದ್ದ ನೀರಿನ ಎಲ್ಲ ಕಾಲುವೆಗಳನ್ನು ಮೊದಲಿನ ರೂಪಕ್ಕೆ ತರಬೇಕು. ಹೀಗಾದರೆ ಕೆರೆ ಸುತ್ತಮುತ್ತಲಿನ ಎಲ್ಲ ಕೊಳವೆ ಬಾವಿ, ಬಾವಿಗಳಲ್ಲಿ ನೀರು ಬರುತ್ತದೆ.

* ಎತ್ತಿನಹೊಳೆ ಸೇರಿದಂತೆ ದೂರದಿಂದ ನೀರು ತರುವ, ನದಿ ತಿರುಗಿಸುವ ಯೋಜನೆಗಳ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ. ಇದು ನೀರಿನ ಬವಣೆ ನೀಗಿಸಲು ಎಷ್ಟು ಉಪಯುಕ್ತ?
ಎತ್ತಿನಹೊಳೆಯ ಬಗ್ಗೆ ಅಥವಾ ಬೇರೆ ಯಾವುದೇ ಯೋಜನೆ ಬಗ್ಗೆ ನಾನು ಮಾತನಾಡುವುದಿಲ್ಲ. ಬೆಂಗಳೂರಿನಲ್ಲಿರುವ 20 ಲಕ್ಷ ಕಟ್ಟಡಗಳಲ್ಲಿ 5 ಅಡಿ ಅಗಲ, 6 ಅಡಿ ಉದ್ದ, 5 ಅಡಿ ಆಳದ ಗುಂಡಿಗಳನ್ನು ಮಾಡಿಸಿ, ಮಳೆ ನೀರು ಸಂಗ್ರಹಿಸಿ. ಇದು ಬಹಳ ಕಡಿಮೆ ವೆಚ್ಚದಲ್ಲಿ ಆಗುವ ಕೆಲಸ. ಇಷ್ಟು ಮಾಡಿದರೆ ಬೆಂಗಳೂರಿನ ಯಾವ ರಸ್ತೆಯಲ್ಲಿಯೂ ಪ್ರವಾಹ ಉಂಟಾಗುವುದಿಲ್ಲ.

ನೀರಿಗೆ ಬರ ಬರುವುದೂ ಇಲ್ಲ. ಯಾಕೆಂದರೆ, ಪ್ರತಿ ಮನೆಯಲ್ಲಿಯೂ ಐದು ಸಾವಿರ ಲೀಟರ್ ನೀರು ಸಂಗ್ರಹ ಇದ್ದೇ ಇರುತ್ತದೆ. ಬೆಂಗಳೂರಿನಲ್ಲಿ ಇರುವ ಅಷ್ಟೂ ಕೆರೆಗಳಿಗಿಂತ ಹೆಚ್ಚು ನೀರು ಇಲ್ಲಿ ಸಂಗ್ರಹವಾಗಿರುತ್ತದೆ. ಇದು ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯಂತ ಹೆಚ್ಚು ಪರಿಣಾಮಕಾರಿ ವಿಧಾನ. ಎಲ್ಲಿಂದಲೋ ತರುವ ನೀರು ಮರೀಚಿಕೆ. ಅದಕ್ಕಿಂತ ನಮ್ಮ ಮನೆ ಬಾಗಿಲಿಗೆ ಬರುವ ನೀರನ್ನೇ ಬಳಸೋಣ.

* ರಾಜ್ಯದ ಮಳೆಯೇ ಆಗದ ಸ್ಥಳಗಳಲ್ಲಿ ಏನು ಮಾಡಬಹುದು?
ಇದು ತಪ್ಪು ತಿಳಿವಳಿಕೆ. ಅತಿ ಕಡಿಮೆ ಮಳೆಯಾಗುವ ಮೊಳಕಾಲ್ಮುರಿನಂತಹ ಪ್ರದೇಶದಲ್ಲೂ ವರ್ಷಕ್ಕೆ 400-500 ಮಿ.ಮೀ. ಮಳೆಯಾಗುತ್ತದೆ. ಇದು ರಾಜಸ್ತಾನದ ಕೆಲವು ಭಾಗಗಳಲ್ಲಿ ಆಗುವ ಮಳೆಗಿಂತ ಎರಡು ಪಟ್ಟಿಗಿಂತಲೂ ಹೆಚ್ಚು. ಅಲ್ಲಿ ಅವರಿಗೆ ನೀರಿನ ಸಮಸ್ಯೆ ಇಲ್ಲ. ಯಾಕೆಂದರೆ ಅವರಿಗೆ ಮಳೆ ನೀರಿನ ಬಳಕೆ ರೂಢಿಯಾಗಿಬಿಟ್ಟಿದೆ.

ಇಸ್ರೇಲ್‌ನಲ್ಲಿ ವರ್ಷಕ್ಕೆ 50-60 ಮಿ.ಮೀ. ಮಳೆಯಾಗುತ್ತದೆ. ನೂರು ಮಿ.ಮೀ. ಮಳೆಯಾಗಿಬಿಟ್ಟರೆ ಅದು ಅವರಿಗೆ ಅತ್ಯುತ್ತಮ ಮಳೆಯ ವರ್ಷ.  400-500 ಮಿ.ಮೀ. ಮಳೆ ಕಡಿಮೆಯೇ? ಇದು ನಮಗೆ ನೀರಿನ ಮೌಲ್ಯದ ಬಗ್ಗೆ ಅರಿವಿಲ್ಲ ಎಂಬುದನ್ನು ತೋರಿಸುತ್ತದೆ.

* 400 ಮಿ.ಮೀ. ಮಳೆ ಬಂದಾಗಲೂ ನೀರಿನ ಸ್ವಾವಲಂಬನೆ ಸಾಧ್ಯವೇ?
ಹೌದು. ಇಷ್ಟು ಮಳೆಯಾಗುವಲ್ಲಿ ಕೂಡ ಒಂದು ಚಿಕ್ಕ ನಿವೇಶನದಲ್ಲಿ 40-50 ಸಾವಿರ ಲೀಟರ್ ನೀರು ಸಂಗ್ರಹಿಸಬಹುದು. ಇದರಲ್ಲಿ ಮುಕ್ಕಾಲು ಭಾಗ ಬಳಕೆ ಮಾಡಿದರೂ ಇಡೀ ವರ್ಷ ಬಳಸಿ ಉಳಿಯುವಷ್ಟು ನೀರು ಸಂಗ್ರಹವಾಗುತ್ತದೆ.