ಬರುತ್ತಿದೆ, ಬರವೆಂಬ ಭರ್ಜರಿ ಅವಕಾಶ- ನಾಗೇಶ್ ಹೆಗಡೆ
‘ಒಂದು ಮರಕ್ಕಿರುವ ಸದ್ಗುಣಗಳೆಲ್ಲ ನಾವು ವಾಸ ಮಾಡುವ ಮನೆಗೂ ಇರಬೇಕು’- ಹೀಗೆಂದು ವಾಸ್ತುಶಿಲ್ಪ ತಜ್ಞ ಸುಭಾಷ್ ಬಸು ಮೊನ್ನೆ ಬೆಂಗಳೂರಿನ ರಾಜೀವ್ ಗಾಂಧಿ ಗ್ರಾಮೀಣ ಗೃಹ ನಿರ್ಮಾಣ ಸಂಸ್ಥೆಯ ತರಬೇತಿ ಶಿಬಿರದಲ್ಲಿ ವಿವರಿಸುತ್ತಿದ್ದರು. ಬೆಳೆದು ನಿಂತ ಮರ ಯಾರಿಂದ ಏನನ್ನೂ ಕೇಳುವುದಿಲ್ಲ.
ತನಗೆ ಎಟಕುವಷ್ಟು ಸಂಪತ್ತನ್ನೇ ಆಧರಿಸಿ ಬೆಳೆಯುತ್ತದೆ. ಬಿಸಿಲನ್ನು ಹೀರಿಕೊಂಡು ತನಗೆ ಬೇಕಾದ ಶಕ್ತಿಯನ್ನೆಲ್ಲ ತಾನೇ ಉತ್ಪಾದಿಸುತ್ತದೆ. ಮಳೆನೀರನ್ನು ಮೆಲ್ಲಗೆ ನೆಲಕ್ಕೆ ಇಂಗಿಸಿ ಸುತ್ತ ತಂಪು ನೀಡುತ್ತದೆ. ತನ್ನಿಂದ ಇನ್ನೊಂದು ಜೀವಿಗೆ ಪೋಷಕವಾಗುವಂಥ ತ್ಯಾಜ್ಯಗಳನ್ನೇ ಸೃಷ್ಟಿಸುತ್ತದೆ.ಮನುಷ್ಯ ಕಟ್ಟಿಕೊಳ್ಳುವ ಮನೆ, ಬಂಗ್ಲೊ, ಅಪಾರ್ಟ್ಮೆಂಟ್ಗಳು ಇದಕ್ಕೆ ತದ್ವಿರುದ್ಧವಾಗಿರುತ್ತವೆ.
ಅಪಾರ ಶಕ್ತಿಯನ್ನು ವಿನಿಯೋಗಿಸಿ ಸುತ್ತಲ ಹತ್ತೂರುಗಳಿಂದ ಸಾಮಗ್ರಿಗಳನ್ನು ಗುಡ್ಡೆ ಹಾಕಿ ಮನೆ ಕಟ್ಟುತ್ತೇವೆ. ಅದು ಬಿಸಿಲನ್ನು ಪ್ರತಿಫಲಿಸಿ ಸುತ್ತೆಲ್ಲ ಸೆಕೆ ಹಬ್ಬಿಸುತ್ತದೆ. ಘನತ್ಯಾಜ್ಯಗಳನ್ನು ಸುತ್ತೆಲ್ಲ ಸಾಗಹಾಕುತ್ತಿರುತ್ತದೆ. ನೀರನ್ನು ಬಳಸಿ ಕೊಳೆ ಮಾಡಿ ದೂರ ಬಿಸಾಕುತ್ತದೆ. ಅದ್ಭುತವೆಂದು ನಾವು ಕರೆಯುವ ಭರ್ಜರಿ ಅಮೋಘ ಕಟ್ಟಡಗಳೆಲ್ಲ ನಿಸರ್ಗ ವಿರೋಧಿಯೇ ಆಗಿರುತ್ತವೆ.
‘ಪ್ರಕೃತಿಯ ನಿಯಮಗಳನ್ನು ಆದಷ್ಟೂ ಪಾಲಿಸುವಂಥ ಕಟ್ಟಡಗಳು ರೂಪುಗೊಳ್ಳಬೇಕಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಕಟ್ಟಡ ನಿರ್ಮಾಣ ಸಂಶೋಧಕರಾಗಿದ್ದ ಬಸು ಹೇಳುತ್ತಿದ್ದರು. ಅವರು ತಮ್ಮ ಐಡಿಯಾಗಳನ್ನು ಹೇಗಾದರೂ ಮಾಡಿ ಯುವ ಆರ್ಕಿಟೆಕ್ಟ್ಗಳ ತಲೆಯಲ್ಲಿ ತುಂಬಿಸಲು ಯತ್ನಿಸುತ್ತಿದ್ದರು. ಆದರೆ ಅದು ಸುಲಭವಲ್ಲ.
ಚಂದ್ರನಲ್ಲೊ ಮಂಗಳ ಗ್ರಹದಲ್ಲೊ ಮನೆ ಕಟ್ಟುವ ಕನಸು ಕಾಣುತ್ತಿರುವ ನಮ್ಮ ಈಗಿನ ಎಂಜಿನಿಯರ್ಗಳಿಗೆ ಭೂಮಿಯ ಮೇಲಿನ ಮನೆ ಕಟ್ಟುವ ತಂತ್ರಜ್ಞಾನಗಳನ್ನು ನಿಸರ್ಗ ಸ್ನೇಹಿಯಾಗಿ ಬದಲಿಸುವ ಬಗ್ಗೆ ಆದ್ಯತೆ ಕಾಣುತ್ತಿಲ್ಲ. ಭೂಗ್ರಹವನ್ನೇ ಮನೆ ಎಂದು ಭಾವಿಸುವವರು ನಾಳೆ ಏಪ್ರಿಲ್ 22ರಂದು ವಿವಿಧ ದೇಶಗಳಲ್ಲಿ ‘ಅರ್ಥ್ ಡೇ’ಯನ್ನು ಆಚರಿಸಲಿದ್ದಾರೆ.
ಸುಧಾರಿತ ದೇಶಗಳಲ್ಲಿ ಭೂಮಿಯ ಹುಟ್ಟುಹಬ್ಬವನ್ನು ಆಚರಿಸುವ ಉತ್ಸಾಹ ವರ್ಷ ವರ್ಷಕ್ಕೆ ಹೆಚ್ಚುತ್ತಿದೆ. ಪಾಶ್ಚಾತ್ಯ ಮಾಧ್ಯಮಗಳಲ್ಲಿ ಈ ವರ್ಷದ ‘ಭೂದಿನ’ದ ಭರಾಟೆ ಅಭೂತಪೂರ್ವ ಎನಿಸುವಷ್ಟಿದೆ. ಮರುಬಳಕೆಯ ವಸ್ತುಗಳ ಫ್ಯಾಶನ್ ಶೋ, ತೋಟದಲ್ಲಿ ಊಟಮೇಳ, ಶಕ್ತಿ ಮಿತವ್ಯಯದ ಪ್ರದರ್ಶನ, ಶಾಲೆಗಳ ಸುತ್ತ ಖಾದ್ಯವನಗಳ ನಿರ್ಮಾಣ- ಏನೆಲ್ಲ ವೈವಿಧ್ಯಮಯ ಕಾರ್ಯಕ್ರಮಗಳನ್ನು 148 ದೇಶಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಈ ವರ್ಷದ ಆಚರಣೆಗೆ ಅಮೆರಿಕದಲ್ಲಿ ವಿಶೇಷ ಒತ್ತು ಸಿಗಲು ಕಾರಣವೇನೆಂದರೆ ಅಧ್ಯಕ್ಷ ಬರಾಕ್ ಒಬಾಮ ಇದೇ ಸಂದರ್ಭದಲ್ಲಿ ಚೀನಾದ ಅಧ್ಯಕ್ಷರನ್ನು ಆಮಂತ್ರಿಸಿದ್ದಾರೆ. ಬಿಸಿ ಪ್ರಳಯದಿಂದ ಭೂಮಿಯನ್ನು ಬಚಾವು ಮಾಡಲೆಂದು ಪ್ಯಾರಿಸ್ನಲ್ಲಿ ಆರು ತಿಂಗಳ ಹಿಂದೆ ರೂಪಿಸಲಾದ ಒಪ್ಪಂದಕ್ಕೆ ಅಮೆರಿಕ ಮತ್ತು ಚೀನಾ ನಾಳೆ ನ್ಯೂಯಾರ್ಕಿನಲ್ಲಿ ಸಹಿ ಹಾಕಲಿವೆ.
ಬಿಸಿತಾಪಕ್ಕೆ ಶೇ 55ರಷ್ಟು ಹೊಣೆಯಾಗಿರುವ 55 ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದ ನಂತರವೇ ಇತರೆಲ್ಲ ರಾಷ್ಟ್ರಗಳು ತಾವದಕ್ಕೆ ಬದ್ಧತೆ ತೋರುತ್ತೇವೆಂದು ಹೇಳಿದ್ದರಿಂದ ಪ್ಯಾರಿಸ್ ಒಪ್ಪಂದಕ್ಕೆ ಅಸಲೀ ಚಾಲನೆ ನಾಳೆ ಸಿಗಲಿದೆ. ಮುಂದೆ 2020ರಲ್ಲಿ ನಡೆಯಲಿರುವ ‘ಭೂದಿನ’ದ 50ನೇ ವರ್ಷಾಚರಣೆಗೆ ಪೂರ್ವಭಾವಿ ಸಿದ್ಧತೆಗೂ ನಾಳೆ ಚಾಲನೆ ಸಿಗಲಿದೆ.
ಈ ವರ್ಷ ಭೂದಿನದ ಆಚರಣೆಗೆಂದು ‘ಮರ’ವನ್ನೇ ವಿಶೇಷ ಆದ್ಯತೆಯ ವಿಷಯವಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ಒತ್ತುಗುರಿ ನೀಡಲಾಗಿದೆ. 2020ರ ವೇಳೆಗೆ ಭೂಮಿಯ ಮೇಲಿನ ತಲಾ ಪ್ರಜೆಗೆ ಒಂದೊಂದರಂತೆ 780 ಕೋಟಿ ಮರಗಳನ್ನು ಹೊಸದಾಗಿ ಬೆಳೆಸಲು ಭೂದಿನದ ಪ್ರವರ್ತಕರು ಯೋಜನೆ ಹಾಕಿಕೊಂಡಿದ್ದಾರೆ. ಅದಕ್ಕೂ ನಾಳೆ ಚಾಲನೆ ಸಿಗಲಿದೆ.
ನಮ್ಮಲ್ಲಿ ಅಂಥ ಯಾವ ಸಂಭ್ರಮಗಳೂ ಕಾಣುತ್ತಿಲ್ಲ. ಪ್ರತಿವರ್ಷ ಈ ದಿನಗಳಲ್ಲಿ ಶಾಲೆಗಳಿಗೆ ರಜೆ ಇರುವುದರಿಂದ ಏಪ್ರಿಲ್ 22ರಂದು ‘ಭೂದಿನ’ವನ್ನು ಆಚರಿಸಬೇಕು ಎಂಬ ವಿಚಾರ ಅರಿವಿಗೆ ಬರುವುದೇ ಕಮ್ಮಿ. ಇತರ ಇಲಾಖೆಗಳ ಸರ್ಕಾರಿ ಕಾರ್ಯಕ್ರಮಗಳಂತೂ ಜನರನ್ನು ತಟ್ಟುವುದು ಇನ್ನೂ ಕಮ್ಮಿ.
ವಿಪರ್ಯಾಸ ಏನೆಂದರೆ, ಮರದ ಬಗ್ಗೆ ನಮ್ಮೆಲ್ಲರ ಅರಿವು ಮತ್ತು ಕಾಳಜಿ ಹೆಚ್ಚಿದಷ್ಟೂ ಗಿಡ ಮರಗಳ ನಾಶ ಹೆಚ್ಚುತ್ತಿದೆ. ಅರಣ್ಯ ಇಲಾಖೆ ಬೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಮರಗಳು ಬೆಳೆಯುತ್ತಿಲ್ಲ. ‘ಗ್ರೀನ್ ಇಂಡಿಯಾ ಮಿಶನ್’ನ ಅನುದಾನ ಹೆಚ್ಚುತ್ತ ಹೋದಷ್ಟೂ ಮರುಭೂಮಿಯ ವಿಸ್ತೀರ್ಣ ಹೆಚ್ಚುತ್ತಲೇ ಇದೆ.
ನಮ್ಮಲ್ಲಿ ಅಕ್ಟೋಬರ್ ಮೊದಲ ವಾರದ ವನ್ಯಸಪ್ತಾಹದಲ್ಲಿ ಮರಗಳ ಬಗ್ಗೆ ಚಿಂತನೆ ನಡೆಯುತ್ತದೆ. ಹಾಗೆ ನೋಡಿದರೆ ಬಿರು ಬೇಸಿಗೆಯಲ್ಲೇ ಮರಗಳ ಬಗ್ಗೆ ಕಾಳಜಿ ಹೆಚ್ಚಿರಬೇಕು. ಬೀಜ ಸಂಗ್ರಹಿಸುವ, ಕಾಳ್ಗಿಚ್ಚನ್ನು ತಡೆಯುವ, ಸಸಿಗಳಿಗೆ ನೀರುಣಿಸುವಂಥ ಅತ್ಯಗತ್ಯ ಕೆಲಸಗಳು ಮಾರ್ಚ್, ಏಪ್ರಿಲ್ಗಳಲ್ಲೇ ಆಗಬೇಕು.
ಆದರೆ ಮಾರ್ಚ್ 21ರ ‘ವಿಶ್ವ ಅರಣ್ಯ ದಿನ’ದಂದು ನಮಗೆ ಮರಗಳು ನೆನಪಿಗೆ ಬರಲಿಲ್ಲ. ಈಗಂತೂ ಈಗಿನ ಈ ‘ಶತಮಾನದ ಬರಗಾಲ’ದಲ್ಲಿ ನೀರಿಗಾಗಿ ಹೋರಾಡುವವರ ಸುದ್ದಿಗಳ ನಡುವೆ ಮರಗಳತ್ತ ಗಮನ ಹರಿಸಲು ಮಾಧ್ಯಮಗಳಿಗೂ ಬಿಡುವಿಲ್ಲ. ಮರಕ್ಕೂ ಬರಕ್ಕೂ ಇರುವ ಸಂಬಂಧ ನೆನಪಿಗೆ ಬರುವುದೇ ಇಲ್ಲ.
ಅಬ್ದುಲ್ ಕಲಾಂ ನಿರೂಪಿಸಿದರೆಂದು ಹೇಳಲಾಗುವ ಒಂದು ಕಥಾನಕದಲ್ಲಿ 70 ವರ್ಷಗಳ ನಂತರದ ಕೆಲವು ದೃಶ್ಯಗಳು ಬರುತ್ತವೆ. ಅದರಲ್ಲಿ ನೀರಿನ ತತ್ವಾರ ಎಷ್ಟಿದೆಯೆಂದರೆ ಜನರು ಸ್ನಾನ ಮಾಡುವುದನ್ನು ಮರೆತೇ ಬಿಟ್ಟಿದ್ದಾರೆ. ಮಹಿಳೆಯರೂ ನುಣ್ಣಗೆ ತಲೆ ಬೋಳಿಸಿಕೊಂಡಿದ್ದಾರೆ. ನೀರಿನ ಪುಟ್ಟ ಕೊಳಕು ಕೊಳವೊಂದನ್ನು ಸಶಸ್ತ್ರ ಯೋಧರು ಕಾಯುತ್ತಿದ್ದಾರೆ.
ಸಮುದ್ರದ ನೀರನ್ನು ಸಿಹಿನೀರನ್ನಾಗಿ ಮಾಡುವ ಕಾರ್ಖಾನೆಯೊಂದನ್ನು ಬಿಟ್ಟರೆ ಮಿಕ್ಕೆಲ್ಲ ಉದ್ಯಮಗಳೂ ನೆಲ ಕಚ್ಚಿವೆ. ಮಹಾರಾಷ್ಟ್ರದ ಮರಾಠಾವಾಢಾ ಮತ್ತು ಲಾತೂರಿನಂಥ ಕೆಲವು ಭಾಗಗಳಲ್ಲಿ ಆ ಪರಿಸ್ಥಿತಿ ಈಗಲೇ ಬಂದಿದೆ. ಅಲ್ಲಿ ನೀರಿನ ಟ್ಯಾಂಕರ್ಗಳ ಬಿಸಿನೆಸ್ ಬಿಟ್ಟರೆ ಉಳಿದೆಲ್ಲವೂ ಬಹುತೇಕ ನೆಲ ಕಚ್ಚಿವೆ. ಕೃಷಿ ಉತ್ಪನ್ನಗಳ ವಹಿವಾಟು ನಡೆಸುವ ಎಪಿಎಮ್ಸಿಗಳು ಬಿಕೋ ಎನ್ನುತ್ತಿವೆ. ನೀರನ್ನು ಬಳಸುವ ಎಲ್ಲ ಉದ್ಯಮಗಳೂ ಸ್ಥಗಿತಗೊಂಡಿವೆ.
ಕೆಲವೆಡೆ ಒತ್ತಾಯದಿಂದ ಕಾರ್ಖಾನೆಗಳನ್ನು ಬಂದ್ ಮಾಡಿಸಲಾಗಿದೆ. ಬತ್ತುತ್ತಿರುವ ಜಲಾಶಯದ ನೀರನ್ನು ಯಾರೂ ದೋಚದಂತೆ ನಿಷೇಧಾಜ್ಞೆ, ಪೊಲೀಸ್ ಕಾವಲು ಹಾಕಲಾಗಿದೆ. ದಿನನಿತ್ಯದ ದುಡಿಮೆ ಬದಿಗೊತ್ತಿ ನೀರಿಗಾಗಿ ಹೋರಾಡುವುದೇ ಬಹುಪಾಲು ಜನರ ಮೊದಲ ಆದ್ಯತೆಯಾಗಿದೆ. ಭವಿಷ್ಯ ನಾವು ನಿರೀಕ್ಷಿಸಿದ್ದಕ್ಕಿಂತ ವೇಗದಲ್ಲಿ ನಮ್ಮತ್ತ ಸಾಗಿ ಬರುತ್ತಿದೆ.
ಇನ್ನೆರಡು ತಿಂಗಳು ಹೇಗೋ ಕಳೆಯೋಣವೆಂದು ಅವಡುಗಚ್ಚಿ ಇಡೀ ಭಾರತವೇ ಕಾಯುವಂತಿದೆ. ಮಳೆಗಾಲ ಆರಂಭವಾದರೆ ಮತ್ತೆ ಸುದಿನಗಳು ಬಂದಾವೆಯೆ? ಗೊತ್ತಿಲ್ಲ. ಆಗ ಸಂಕಷ್ಟಗಳ ಇನ್ನೊಂದು ಅಲೆ ಬರಬಹುದು. ಅದಕ್ಕೇ ‘ಮಳೆರಾಯನೇ ನಮ್ಮ ಅಸಲೀ ವಿತ್ತಮಂತ್ರಿ’ ಎಂದು ಪ್ರಣವ್ ಮುಖರ್ಜಿ ಅರ್ಥಸಚಿವರಾಗಿದ್ದಾಗ ಹೇಳಿದ್ದರು.
ವರ್ಷ ಕಳೆದಂತೆಲ್ಲ ಈ ವಿತ್ತ ಮಂತ್ರಿ ಬರೀ ‘ನೋವಿತ್ತ ಮಂತ್ರಿ’ ಆಗುತ್ತ ಹೋಗುತ್ತಿದ್ದಾನೆ. ಅವನ ಅನಿಶ್ಚಿತ ವರ್ತನೆಯನ್ನೇ ನಂಬಿ ನಾವು ಭಾರತವನ್ನು ಸೂಪರ್ ಪವರ್ ಆಗಿ ಮಾಡಬೇಕೆಂಬ ಕನಸನ್ನು ಹೆಣೆಯುತ್ತಿದ್ದೇವೆ. ಕೃಷಿ ಕ್ಷೇತ್ರ ಬಿಟ್ಟರೆ ನೀರಿನ ಬೇಡಿಕೆಯ ಎರಡನೆಯ ಅತಿ ದೊಡ್ಡ ಕ್ಷೇತ್ರವೆಂದರೆ ಉದ್ಯಮ.
ಕಳೆದ 15 ವರ್ಷಗಳಲ್ಲಿ ಉದ್ಯಮಗಳ ನೀರಿನ ಬೇಡಿಕೆ ದುಪ್ಪಟ್ಟಾಗಿದೆ. ಮುಂದಿನ 15 ವರ್ಷಗಳಲ್ಲಿ ಅದು ಮೂರು ಪಟ್ಟು ಆಗಲಿದೆ. ಅಥವಾ ಈಗಿನ ಆದ್ಯತೆಗಳನ್ನು ನೋಡಿದರೆ ನೀರಿನ ಬೇಡಿಕೆ ನಾಲ್ಕು ಪಟ್ಟು ಹೆಚ್ಚಾಗಲೂಬಹುದು. ಅದ್ಧೂರಿಯ ಪ್ರಚಾರದೊಂದಿಗೆ ಆರಂಭವಾದ ಮೇಕ್ ಇನ್ ಇಂಡಿಯಾ, ಸ್ಟ್ಯಾಂಡಪ್ ಇಂಡಿಯಾ, ಸ್ಮಾರ್ಟ್ ಸಿಟಿ ಯೋಜನೆಗಳ ಮಹಾರಥಗಳು ನೀರಿಲ್ಲದ ಹಳ್ಳದಲ್ಲಿ ಮುಗ್ಗರಿಸದಂತೆ ಭಾರೀ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಬಿಗಿ ಕ್ರಮಗಳು ಏನೇನು? ಮೊದಲನೆಯದಾಗಿ ಬೋರ್ವೆಲ್ಗಳಿಗೆ ಕಟ್ಟುನಿಟ್ಟಿನ ಲಗಾಮು ಹಾಕಬೇಕು. ಬೆಂಗಳೂರಿನಲ್ಲಿ ಜಿಪಿಎಸ್ ತಂತ್ರ ಅಳವಡಿಸಿ, ಕಸದ ಲಾರಿಗಳು ಎಲ್ಲೆಲ್ಲಿ ಸಂಚರಿಸುತ್ತಿವೆ ಎಂಬುದನ್ನು ದಾಖಲಿಸುವ ತಂತ್ರ ಹಿಂದೊಮ್ಮೆ ಜಾರಿಗೆ ಬಂದಿತ್ತು. ಅಂಥದ್ದೇ ತಂತ್ರವನ್ನು ಬೋರ್ವೆಲ್ ಲಾರಿಗಳಿಗೂ ಅಳವಡಿಸಿ ಅವುಗಳ ಚಲನವಲನದ ಮೇಲೆ ಕಣ್ಣಿಡಲು ಸಾಧ್ಯವಿದೆ.
ಎರಡನೆಯದಾಗಿ, ನೀರಾವರಿ ಪ್ರದೇಶಗಳಲ್ಲಿನ ಬೇಸಾಯದ ಬೆಳೆಗಳ ಮೇಲೆ ನಿಗಾ ಇಡಬೇಕು. ಈಗಂತೂ ಉಪಗ್ರಹ ಆಧಾರಿತ ತಂತ್ರಜ್ಞಾನ ಬಳಸಿ, ‘ಪ್ರಿಸಿಶನ್ ಫಾರ್ಮಿಂಗ್’ (ಕರಾರುವಾಕ್ ಕೃಷಿ) ತಂತ್ರ ರಷ್ಯಾ, ಚೀನಾಗಳಲ್ಲೂ ರೂಢಿಗೆ ಬರುತ್ತಿದೆ. ಬೆಳೆಗಳನ್ನು ಆಕಾಶದಿಂದಲೇ ಸ್ಕ್ಯಾನ್ ಮಾಡಿ, ಅಗತ್ಯಕ್ಕೆ ತಕ್ಕಷ್ಟೇ ನೀರು, ಗೊಬ್ಬರ ನೀಡಬಲ್ಲ ವಿಧಾನಗಳು ಆಗಲೇ ರೂಪುಗೊಂಡಿವೆ.
ನಮ್ಮಲ್ಲಿ ಕಡೇ ಪಕ್ಷ ಕಬ್ಬು, ಭತ್ತ ಬೆಳೆಯುವವರು ಎಷ್ಟು ದೊಡ್ಡ ಪ್ರಮಾಣದಲ್ಲಿ ಅನಗತ್ಯವಾಗಿ ನೀರನ್ನು ಆವಿಯಾಗಿಸಿ ಆಕಾಶಕ್ಕೆ ಕಳಿಸುತ್ತಿದ್ದಾರೆ ಎಂಬುದನ್ನು ಗುರುತಿಸಲು ಅದೇ ತಂತ್ರಜ್ಞಾನವನ್ನು ದುಡಿಸಿಕೊಳ್ಳಬಹುದು. ನೀರನ್ನು ಮಿತವಾಗಿ ಬಳಸುವ ಕ್ಷೇತ್ರಗಳನ್ನು ಗುರುತಿಸಿ ಅಲ್ಲಿನ ರೈತರಿಗೆ ಮಾತ್ರ ಸರ್ಕಾರದ ಸಹಾಯಧನ ಸಿಗುವಂತಾಗಬೇಕು.
ಉದ್ಯಮಗಳು ಕೊಳಕು ನೀರನ್ನು ನದಿಗಳಿಗೆ ಸುರಿಯದಂತೆ ತಡೆಯಲು ಡಾ. ಮಾಧವ ಗಾಡ್ಗೀಳರು ತುಂಬ ಸುಲಭವಾದ ಉಪಾಯವೊಂದನ್ನು ದಶಕದ ಹಿಂದೆಯೇ ಸಲಹೆ ಮಾಡಿದ್ದರು. ಕಾರ್ಖಾನೆಗಳು ಶುದ್ಧ ನೀರನ್ನು ನದಿಯ ಕೆಳ ಹರಿವಿನಿಂದ ಮೇಲೆತ್ತಿಕೊಳ್ಳಬೇಕು. ಬಳಸಿದ ನೀರನ್ನು ನದಿಯ ಮೇಲು ಭಾಗದಲ್ಲಿ ಹರಿಬಿಡುವಂತೆ ಕಾನೂನನ್ನು ಬದಲಿಸಬೇಕು.
ಬಳಸಿ ಚೆಲ್ಲಿದ ನೀರನ್ನೇ ಅವರು ಮತ್ತೆ ಬಳಸುವಂತಾದರೆ ಮಾತ್ರ ನದಿಗಳು ಸಾಕಷ್ಟು ಶುದ್ಧವಾಗಿರುತ್ತವೆ. ಜರ್ಮನಿಯಂಥ ದೇಶದಲ್ಲಿ ಒಂದೊಂದು ಹನಿ ನೀರೂ 70-80 ಬಾರಿ ಬಳಕೆಗೆ ಬರುತ್ತವೆಂದು ನಾವು ಕೇಳಿದ್ದೇವೆ. ಜಪಾನಿನಲ್ಲಿ ಪ್ರತಿಯೊಂದು ವಸ್ತುವಿನ ಉತ್ಪಾದನೆಗೂ ವರ್ಷ ಕಳೆದಂತೆ ಕಮ್ಮಿ ಶಕ್ತಿ, ಕಮ್ಮಿ ನೀರು ಬಳಕೆಯಾಗುವಂತೆ ಸಂಶೋಧನೆಗಳು ನಡೆಯುತ್ತವೆಂದೂ ಕೇಳಿದ್ದೇವೆ. ನಮ್ಮಲ್ಲಿ ಆ ನಿಟ್ಟಿನಲ್ಲಿ ಸಂಶೋಧನೆಗಳೇ ಕಮ್ಮಿ.
ಪ್ರತಿ ಜಿಲ್ಲೆಯಲ್ಲಿ ಒಂದಾದರೂ ಗ್ರಾಮದಲ್ಲಿ ಸರ್ಕಾರದ್ದೇ ವೆಚ್ಚದಲ್ಲಿ ಪ್ರತಿ ಮನೆಯಲ್ಲೂ ಮಳೆಕೊಯ್ಲು, ಬಿಸಿಲಿನ ವಿದ್ಯುತ್ತು, ಸೋಲಾರ್ ಕುಕ್ಕರ್, ಸಮುದ್ರ ದಡದಲ್ಲಾದರೆ ಗಾಳಿಯಂತ್ರ, ಉಪ್ಪುನೀರನ್ನು ಸಿಹಿಮಾಡುವ ಸಾಧನಗಳ ಮಾದರಿ ಸ್ಥಾಪಿಸಿ, ಕೃಷಿಯಲ್ಲಿ ನೀರಿನ ಮಿತವ್ಯಯ ಸಾಧಿಸುವ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಿ, ಚರಂಡಿ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವ ‘ಗ್ರೇ ವಾಟರ್’ ಯೋಜನೆ ಆರಂಭಿಸಿ, ಊರ ಸುತ್ತ ನೆನಪಿನ ಅರಣ್ಯ ಬೆಳೆಸುವಂತೆ ಊರಿನ ಜನರನ್ನೇ ಪ್ರೋತ್ಸಾಹಿಸಬೇಕು.
ಜೊತೆಗೆ, ಸುಭಾಷ್ ಬಸು ವಿವರಿಸುವಂಥ ಒಂದೆರಡು ಆದರ್ಶ ಮನೆಗಳನ್ನು ನಿರ್ಮಿಸಿ ಪ್ರವಾಸೀ ತಾಣವನ್ನಾಗಿ ಮಾಡಬೇಕು. ಇಂಥ ಯೋಜನೆಗಳನ್ನು ಆರಂಭಿಸಲು ಬಿಡುವೇ ಇಲ್ಲದಂತೆ ಇಡೀ ಆಡಳಿತ ಯಂತ್ರವೇ ಬರ ನಿರ್ವಹಣೆ ಕೆಲಸಗಳಲ್ಲಿ ತೊಡಗಿದಂತೆ ನಮಗೆ ಭಾಸವಾಗುತ್ತಿದೆ. ಅದು ಭ್ರಮೆಯಷ್ಟೇ. ಅಸಲೀ ಸಂಗತಿ ಏನೆಂದರೆ, ಆಡಳಿತ ಯಂತ್ರದ ಜಡತ್ವದಿಂದಾಗಿಯೇ ಬರ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ತೀವ್ರವಾಗುತ್ತಿದೆ.
ಇಷ್ಟಾಗಿಯೂ ಈ ವರ್ಷದ ಬರವನ್ನು ನಾವೆಲ್ಲ ಸ್ವಾಗತಿಸಬೇಕಿದೆ. ಅದು ನಮಗೊಂದು ಹೊಸ ಅವಕಾಶವನ್ನು ಒದಗಿಸುತ್ತಿದೆ. ಸರ್ಕಾರಗಳು ಪರಿಸರಸ್ನೇಹಿ ಕಾರ್ಯಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ, ಪ್ಯಾರಿಸ್ ಒಪ್ಪಂದಕ್ಕೆ ಕಟಿಬದ್ಧ ಆಗುವಂತೆ ಒತ್ತಾಯಿಸುವುದೇ ಈ ವರ್ಷದ ‘ಭೂದಿನ’ದ ಆದ್ಯತೆಯಾಗಬೇಕು ಎಂದು ಅರ್ಥ್ ಡೇ ಕಾರ್ಯಕ್ರಮಗಳ ಅಂತರರಾಷ್ಟ್ರೀಯ ಸಂಘಟಕರು ಒತ್ತಾಯಿಸಿದ್ದಾರೆ.
ನಮ್ಮ ಆದ್ಯತೆಗಳನ್ನು ಬದಲಿಸಿಕೊಂಡರೆ ಬರ ನಿರ್ವಹಣೆಯ ವಿಧಾನಗಳೇ ಪ್ರವಾಹ ನಿಯಂತ್ರಣದ ಸಾಧನಗಳಾಗಿಯೂ ಕೆಲಸ ಮಾಡುತ್ತವೆ. ಒಣ ಜಲಾಶಯಗಳಲ್ಲಿ ಹೂಳೆತ್ತುವ ಕೆಲಸವೂ ಭವ್ಯ ಭಾರತದ ನಿರ್ಮಾಣದ ಕೆಲಸವೇ ಆಗುತ್ತದೆ.
ಇಂದಿಗೆ ನೂರು ವರ್ಷಗಳ ಹಿಂದೆ 1916ರಲ್ಲಿ ಗತಿಸಿದ ಪರ್ಸಿವಲ್ ಲೊವೆಲ್ ಎಂಬ ಖಗೋಳತಜ್ಞ ಇಲ್ಲಿ ನೆನಪಾಗುತ್ತಾನೆ. ಆತ ಆಗಿನ ಕಾಲದ ಮಬ್ಬು ದೂರದರ್ಶಕವನ್ನು ಹಿಡಿದು ಮಂಗಳ ಗ್ರಹವನ್ನು ಸ್ಕ್ಯಾನ್ ಮಾಡುತ್ತಿದ್ದ. ಅಲ್ಲೆಲ್ಲ ಆತನಿಗೆ ಬತ್ತಿದ ಹಳ್ಳಗಳು ಕಾಣುತ್ತಿದ್ದವು. ಧ್ರುವ ಪ್ರದೇಶದಿಂದ ಗೀರು ಗುರುತುಗಳು ಹೊರಟಂತೆ ಕಾಣುತ್ತಿತ್ತು.
ಬರಗಾಲವನ್ನು ಹಿಮ್ಮೆಟ್ಟಿಸುವಲ್ಲಿ ವಿಫಲರಾದ ಮಂಗಳ ನಿವಾಸಿಗಳು ತೀರ ಹತಾಶ ಸ್ಥಿತಿಯಲ್ಲಿ ಧ್ರುವ ಪ್ರದೇಶದ ಹಿಮಗಡ್ಡೆಯಿಂದ ಕಾಲುವೆಗಳನ್ನು ಕೊರೆಯಲು ಯತ್ನಿಸಿದಂತೆ ಕಾಣುತ್ತದೆ ಎಂದು ಆತ 1906ರಲ್ಲಿ ವರದಿ ಮಾಡಿದ. ಅವನ ವರದಿಯನ್ನು ಆಧರಿಸಿ, ‘ಮಂಗಳ ಲೋಕದಲ್ಲಿ ನೀರು ಮುಗಿಯತೊಡಗಿದೆ; ಅಲ್ಲಿನ ಹತಾಶ ಹಸುರು ಜೀವಿಗಳು ಭೂಮಿಗೆ ದಾಳಿ ಇಡಲಿದ್ದಾರೆ’ ಎಂದು ರೇಡಿಯೊ ರೂಪಕವೊಂದು ಪ್ರಸಾರವಾಗಿ ನ್ಯೂಯಾರ್ಕಿನ ಜನರು ಕಂಗಾಲು ಬಿದ್ದಿದ್ದರು. ಇಂದು ಮಂಗಳ ಜೀವಿಗಳ ಬದಲು ಬರಗಾಲವೇ ನಮ್ಮತ್ತ ದಾಳಿಗೆ ಬಂದಿದೆ. ನಾವು ಮಂಗಳನತ್ತ ಹೋಗಲು ಸಿದ್ಧತೆ ನಡೆಸಿದ್ದೇವೆ.