ಒಂದಾನೊಂದು ಕಾಲವಿತ್ತು. ನಾವು ರಸ್ತೆಯಲ್ಲಿ ನಡೆಯುವಾಗ ಎಡವಿಬಿದ್ದರೆ ನೆಲದ ಮೇಲಿನ ಕಲ್ಲಿಗೆ ನಮ್ಮ ಹಣೆ ತಾಗುತ್ತಿತ್ತು. ಈಗ ಕಾಲ ಬದಲಾಗಿದೆ. ನಾವು ಎಡವಿ ಬಿದ್ದರೆ ನಮ್ಮ ಹಣೆಯು ಕಲ್ಲಿಗೆ ತಾಗುವ ಬದಲು, ಯಾವನೋ ಒಬ್ಬ ನಕಲಿ ಪವಾಡ ಪುರುಷ ಅಥವಾ ಹುಸಿ ದೇವಮಾನವರು ಇಲ್ಲವೆ, ಲಜ್ಜೆಗೆಟ್ಟ ಮಠಾಧೀಶರ ಕಾಲಿಗೆ ತಾಗುತ್ತದೆ. ಜನತೆಯ ಮೌಡ್ಯವನ್ನು ಮತ್ತು ಮುಗ್ಧತನವನ್ನು ಬಂಡವಾಳ ಮಾಡಿಕೊಳ್ಳುವುದರ ಜೊತೆಗೆ ಮಿನಿ ಸಾಮ್ರಾಜ್ಯವನ್ನು ನಿರ್ಮಿಸಿಕೊಂಡು, ಈ ನೆಲದ ಕಾನೂನು ಮತ್ತು ಸಂವಿಧಾನವನ್ನು ಮೀರಿದ ಅತೀತರಂತೆ,  ಸಾಮ್ರಾಟರಂತೆ ಬದುಕುತ್ತಿರುವವರು ಒಂದು ಕಡೆಯಾದರೆ, ಕಾವಿಯೊಳಗಿನ ಕಾಮಪುರಾಣವನ್ನು ಬಚ್ಚಿಟ್ಟುಕೊಂಡು, ಸಾರ್ವಜನಿಕವಾಗಿ ಬೆತ್ತಲಾದ ನಂತರ, ಕೋರ್ಟು, ಪೊಲೀಸ್ ಠಾಣೆ ಮೆಟ್ಟಿಲು ಅಲೆಯುತ್ತಿರುವ ಮಹಾನ್ ಸ್ವಾಮಿಗಳು, ಸಂತರು ಇನ್ನೊಂದು ಕಡೆ ಇದ್ದಾರೆ. ನಾವು ಹೇಗೆ ತಿನ್ನಬೇಕು? ಹೇಗೆ ಉಸಿರಾಡಬೇಕು? ಹೇಗೆ ಕುಡಿಯಬೇಕು? ಹೇಗೆ ವಿಸರ್ಜಿಸಬೇಕು? ಎಂಬುದನ್ನು ತಿಳಿಸಿಕೊಡಲು ಆಶ್ರಮದ ಹೆಸರಿನಲ್ಲಿ ಅಂಗಡಿ ತೆರೆದು ದೋಚುತ್ತಿರುವ ಇಂತಹ ಹಗಲು ದರೋಡೆಕೋರರ ನಡುವೆ ನೆಲದ ಸಂಸ್ಕೃತಿಗೆ ಹತ್ತಿರವಾಗಿ ಬದುಕುತ್ತಿರುವ ಅನೇಕ ಮಹನೀಯರೂ ನಮ್ಮ ನಡುವೆ ಇದ್ದಾರೆ. ಇಂತಹವರಲ್ಲಿ ಪಂಜಾಬಿನ ಸಂತ ಬಲ್ಬೀರ್ ಸಿಂಗ್ ಅಲಿಯಾಸ್ ಸೀಚ್ ವಾಲೆ ಬಾಬಾ ಮುಖ್ಯರಾದವರು.
ಪಂಚ ನದಿಗಳ ನಾಡು ಪಂಜಾಬಿನ ಜಲಂಧರ್ ಸಮೀಪ್ ಸೀಚ್ ವಾಲ ಎಂಬ ಊರಿನಲ್ಲಿ ಆಶ್ರಮ, ಬಡ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳನ್ನು ತೆರೆದು ಸಿಖ್ ಸಮುದಾಯದ ಗುರುಗಳಲ್ಲಿ ಒಬ್ಬರಾಗಿರುವ ಸಂತ ಬಲ್ಬೀರ್ ಸಿಂಗ್ ಕಳೆದ 16 ವರ್ಷಗಳ ಹಿಂದೆ ಕೈಗೆತ್ತಿಕೊಂಡ  160 ಕಿಲೊಮೀಟರ್ ಉದ್ದದ ಕಾಳಿಬೆನ್ ನದಿಯ ಶುದ್ಧೀಕರಣ ಯೋಜನೆಯ ಮೂಲಕ ಜಗತ್ತಿನಾದ್ಯಂತ ಗಮನ ಸೆಳದಿದ್ದಾರೆ.

ಸಿಖ್ಖರ ಪವಿತ್ರ ಗ್ರಂಥ “ ಗ್ರಂಥ ಸಾಹಿಬ್” ಪ್ರತಿಪಾದಿಸಿರುವ “ ಗಾಳಿ ನಮ್ಮ ಗುರು” “ ನೀರು ನಮ್ಮ ತಂದೆ” “ ಭೂಮಿ ನಮ್ಮ ತಾಯಿ” ಈ ಮೂರು ತತ್ವಗಳನ್ನು ಅಕ್ಷರಶಃ ಪಾಲಿಸಿಕೊಂಡು, ತನ್ನ ಅನುಯಾಯಿಗಳನ್ನು ಈ ಮಾರ್ಗದಲ್ಲಿ ಕೊಂಡೊಯ್ಯುತ್ತಿರುವ ಅಪರೂಪದ ಸಂತ ಬಲ್ಬೀರ್ ಸಿಂಗ್. ಸುಮಾರು ನಲವತ್ತು ವರ್ಷದ ಹಿಂದೆ ಅಂದರೆ, 1970 ರ ದಶಕದಲ್ಲಿ ಭಾರತಕ್ಕೆ ಕಾಲಿಟ್ಟ ಹಸಿರು ಕ್ರಾಂತಿಯ ಪ್ರಯೋಗ ನಡೆದದ್ದು ಪಂಜಾಬಿನ ನೆಲದಲ್ಲಿ. ಅಧಿಕ ಇಳುವರಿಯ ದಾಹಕ್ಕೆ  ಬಲಿ ಬಿದ್ದ ರೈತ ಸಮುದಾಯ ಹೈಬ್ರಿಡ್ ಬಿತ್ತನೆ ಬೀಜ, ರಸಾಯನಿಕ ಗೊಬ್ಬರ, ಕೀಟನಾಶಕ ಇವುಗಳ ಬಳಕೆಯಿಂದ ಅತ್ಯಧಿಕ ಗೋಧಿ ಮತ್ತು ತರಕಾರಿ ಬೆಳೆ ತೆಗೆಯುವ ರಾಜ್ಯ ಮತ್ತು ಭಾರತದ ಆಹಾರದ ಬುಟ್ಟಿ ಎಂಬ ಕೀರ್ತಿಗೆ ಪಂಜಾಬ್ ಪಾತ್ರವಾಯಿತು ನಿಜ. ಆದರೆ, ಈ ಹುಮ್ಮಸ್ಸು, ಈ ಅಧಿಕ ಇಳುವರಿಯ ಪ್ರಯೋಗ ಬಹುಕಾಲ ನಿಲ್ಲಲಿಲ್ಲ. ನೋಡ ನೊಡುತ್ತಿದ್ದಂತೆ ಪಂಜಾಬಿನ ಫಲವತ್ತಾದ ಭೂಮಿ ಅಧಿಕ ನೀರು, ರಸಾಯನಿಕ ಗೊಬ್ಬರ ಮತ್ತು ಕೀಟನಾಶಕದಿಂದ ಚೌಳು ಭೂಮಿಯಾಯಿತು. ಕೊಳವೆ ಬಾವಿಗಳಿಂದ ವಾಣಿಜ್ಯ ಬೆಳೆಗಳಿಗೆ ನೀರಿನ ದುರ್ಬಳಕೆಯಾಗುತ್ತಿದ್ದಂತೆ, ಅಲ್ಲಿನ ಅಂತರ್ಜಲದ ಮಟ್ಟ ಕುಸಿಯಿತು. ಕೆರೆ, ಬಾವಿಗಳು ಬತ್ತಿಹೋದವು, ನದಿಗಳು ಒಣಗಿ ಹೋಗುವುದರ ಜೊತೆಗೆ  ಹೂಳು ತುಂಬಿಕೊಂಡು, ಹಳ್ಳಿ-ಪಟ್ಟಣಗಳ ಕೊಳಚೆನೀರನ್ನು ಸಾಗಿಸುವ ಗಟಾರಗಳಾಗಿ ಪರಿವರ್ತನೆಗೊಂಡವು. ಇವುಗಳಿಗೆ ಮೌನ ಸಾಕ್ಷಿಯಾಗಿದ್ದ ಸಂತ ಬಲ್ಬೀರ್ ಸಿಂಗ್ ತಾನು ಬದುಕುತ್ತಿರುವ ಜಲಂಧರ್ ನಗರದ ಪ್ರಾಂತ್ಯದಲ್ಲಿ ಬತ್ತಿ ಹೋಗಿದ್ದ ಹಾಗೂ ಸಿಖ್ ಜನಾಂಗದ ಪವಿತ್ರ ನದಿಗಳಲ್ಲಿ ಒಂದಾದ ಕಾಳಿಬೇನ್ ನದಿಗೆ ಮರುರೂಪ ಕೊಡಬೇಕೆಂಬ ಮನಸ್ಸಾಯಿತು. ಆದರೆ ಅದು ಸುಲಭದ ಸಂಗತಿಯಾಗಿರಲಿಲ್ಲ. ಏಕೆಂದರೆ ನದಿಯ ಪಾತ್ರ ವಿಕಾರಗೊಂಡಿತ್ತು. ನದಿಯ ಹೂಳಿನಲ್ಲಿ ಗಿಡ ಗೆಂಟೆಗಳು ಬೆಳೆದಿದ್ದವು.ಇದಲ್ಲದೆ 160 ಕಿಲೊಮೀಟರ್ ಉದ್ದದ ನದಿಯ ತಟದಲ್ಲಿದ್ದ ಗ್ರಾಮಗಳು ಮತ್ತು ಪಟ್ಟಣಗಳ ಕೊಳಚೆ ನೀರನ್ನು ನದಿಗೆ ಹರಿಯ ಬಿಡಲಾಗಿತ್ತು. ಇದು ಸರ್ಕಾರದಿಂದ ಮಾತ್ರ ಮಾಡುವ ಕಾರ್ಯವಾಗಿತ್ತು. ಆದರೆ ಜನತೆಯ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ಇವುಗಳ ಗೈರು ಹಾಜರಿಯಲ್ಲಿ ಯಾವೊಂದು ಸರ್ಕಾರದ ಯೋಜನೆಗಳು ಯಶಸ್ವಿಯಾಗುವುದಿಲ್ಲ ಎಂಬುದನ್ನು ಬಲ್ಬೀರ್ ಸಿಂಗ್ ತಮ್ಮ ಅನುಭವದಿಂದ ಮನಗಂಡಿದ್ದರು. ಈ ಕಾರಣಕ್ಕಾಗಿ ಅವರು ನದಿ ಶುದ್ದೀಕರಣ ಯೋಜನೆಗೆ ಸಿಖ್ಖರ ಧಾರ್ಮಿಕ ಕ್ರಿಯೆಯೊಂದನ್ನು ಮಾದರಿಯಾಗಿ ಮತ್ತು  ಅಸ್ತ್ರವಾಗಿ ಬಳಸಿಕೊಂಡರು. ಪ್ರತಿ ವರ್ಷ ಸಿಖ್ಖರ ಪವಿತ್ರ ಕ್ರೇತ್ರವಾದ ಅಮೃತ್ ಸರ ನಗರದಲ್ಲಿರುವ ಸ್ವರ್ಣ ದೇವಾಲಯದ ಕೊಳವನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ಸಿಖ್ಖರು ಕರ ಸೇವೆ ಮೂಲಕ ಸ್ವಚ್ಛಗೊಳಿಸುವುದನ್ನು ನೋಡಿದ್ದ ಸಂತ ಬಲ್ಬೀರ್ ಸಿಂಗ್ ಅದೇ ಪ್ರಯೋಗವನ್ನು ನದಿ ಶುದ್ಧೀಕರಣಕ್ಕೆ ಬಳಸಿಕೊಂಡರು.

 

ನದಿಯ ತಟದಲ್ಲಿದ್ದ ಪ್ರತಿಯೊಂದು ಗ್ರಾಮ, ಪಟ್ಟಣದ ನಾಗರೀಕರನ್ನು ಮತ್ತು ನದಿ ನೀರಿನಿಂದ ಬೇಸಾಯ ಮಾಡುತ್ತಿದ್ದ ರೈತರ ಮನವೊಲಿಸಿದರು. ತಾವೇ ಸ್ವತಃ ನದಿಗೆ ಇಳಿದು ಕರ ಸೇವೆಯಲ್ಲಿ ಪಾಲ್ಗೊಂಡರು. ವಿರೂಪಗೊಂಡಿದ್ದ ನದಿ ಪಾತ್ರಗಳನ್ನು ಸರಿ ಪಡಿಸಿ, ಅಲ್ಲಲ್ಲಿ ಸೋಪಾನ, ಉದ್ಯಾನವನಗಳನ್ನು ನಿರ್ಮಿಸಿದರು. ಭೂಸೆವೆತ ತಡೆಗಟ್ಟಲು ನದಿಯ ತೀರದುದ್ದಕ್ಕೂ ಗಿಡಗಳನ್ನು ನೆಟ್ಟರು. ಇವುಗಳ ಜೊತೆಗೆ ಅಲ್ಲಿನ ಗ್ರಾಮಗಳ ಮತ್ತು ಪಟ್ಟಣಗಳ ಕೊಳಚೆ ನೀರನ್ನು ತಡೆಗಟ್ಟುವುದು ಅವರಿಗೆ ದೊಡ್ಡ ಸವಾಲಾಗಿತ್ತು.ಪಂಜಾಬ್ ಸರ್ಕಾರದ ಸಹಯೋಗದಲ್ಲಿ ಪ್ರತಿ ಗ್ರಾಮ ಮತ್ತು ಪಟ್ಟಣಗಳಲ್ಲಿ ವ್ಯವಸ್ಥಿತ ರೀತಿಯಲ್ಲಿ ಒಳಚರಂಡಿಗಳನ್ನ ನಿರ್ಮಿಸಿ ಕೊಳಚೆ ನೀರು ಊರಾಚೆಗಿನ ಒಂದು ಬೃಹತ್ ಗುಂಡಿಯಲ್ಲಿ ನಿಲ್ಲುವಂತೆ ವ್ಯವಸ್ಥೆ ರೂಪಿಸಿದರು. ಹೀಗೆ ಶೇಖರವಾದ ಕೊಳಚೆ ನೀರು ನೈಸರ್ಗಿಕವಾಗಿ ತಿಳಿಯಾದ ನಂತರ  ಈ ನೀರನ್ನು ರೈತರು ಕೃಷಿಗೆ ಉಪಯೋಗಿಸುವಂತೆ ಮಾಡಿ, ಕೊಳವೆ ಬಾವಿಗಳ ಅವಲಂಬನೆಯನ್ನು ಕಡಿಮೆ ಮಾಡಿದರು. ಇತ್ತ ಗ್ರಾಮಸ್ಥರ ಸಹಾಯದಿಂದ ಇಡೀ  160 ಕಿಲೊಮೀಟರ್ ಉದ್ದ ಹರಿಯುವ ಕಾಳಿಬೆನ್ ನದಿ ಶುದ್ಧೀಕರಣಗೊಂಡು ಅಲ್ಲಿನ ಜನರ  ಪಾಲಿಗೆ ಜೀವ ನದಿಯಾಗಿ ಪರಿವರ್ತನೆಯಾಯಿತು. ಸತತ ಹದಿನಾರು ವರ್ಷಗಳ ಶ್ರಮ, ಬದ್ಧತೆ, ಪರಿಸರದ ಮೇಲಿನ ಪ್ರೀತಿ ಹಾಗೂ ತನ್ನ ನೈತಿಕತೆ ಮತ್ತು ವೈಯಕ್ತಿಕ ಚಾರಿತ್ರ್ಯ ಇವುಗಳನ್ನು ಮೂಲ ಬಂಡವಾಳವನ್ನಾಗಿ ಮಾಡಿಕೊಂಡು ನದಿಯೊಂದಕ್ಕೆ ಪುನರ್ಜೀವ ಕೊಟ್ಟ ಸಂತ ಬಲಬೀರ್ ಸಿಂಗ್ ರವರು ಎಕೊಬಾಬಾ,  ಸೀಚ್ ವಾಲೆ ಬಾಬಾ, ಮುಂತಾದ ಹೆಸರುಗಳಿಂದ ಪಂಜಾಬ್ ಸೇರಿದಂತೆ  ಉತ್ತರ ಭಾರತದಲ್ಲಿ ಹೆಸರುವಾಸಿಯಾದರು. ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ತಾವು ಹೋದ ಸ್ಥಳಗಳಲ್ಲಿ  ಈ ಮಹಾತ್ಮನ ಕಾರ್ಯವನ್ನು ಗುಣಗಾನ ಮಾಡಿದರು. ಲಂಡನ್ ನಗರದಿಂದ ಪ್ರಕಟವಾಗುವ ಜಗತ್ ಪ್ರಸಿದ್ಧ ನಿಯತಕಾಲಿಕೆ “ ಟೈಮ್ಸ್ ಮ್ಯಾಗಜಿನ್” ಬಲ್ಬೀರ್ ಸಿಂಗ್ ರವರಿಗೆ “ ಹೀರೋ ಆಫ್  ಎನ್ವಿರಾನ್ ಮೆಂಟ್” ಎಂಬ ಜಾಗತಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಈ ಪ್ರಶಸ್ತಿಯನ್ನುಪಡೆದ ಮೊದಲ ಭಾರತೀಯ ಮತ್ತು ಏಷ್ಯಾ ಮೂಲದ ವ್ಯಕ್ತಿ ಎಂಬ ಗೌರವಕ್ಕೆ ಬಾಬಾ ಪಾತ್ರರಾದರು. ಯಾವೊಂದು ಪ್ರಶಸ್ತಿ, ಗೌರವಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದ ಬಾಬಾ ಜಲಂಧರ್, ದೋಬಾ ಪ್ರಾಂತ್ಯದ ರೈತರಿಗೆ ನೀರಿನ ಮಿತಬಳಕೆಯ ಉಪನ್ಯಾಸ ಮಾಡುತ್ತಾ, ಪಂಜಾಬ್ ರಾಜ್ಯದ ಜಲಮೂಲಗಳನ್ನು ರಕ್ಷಿಸುವಲ್ಲಿ ನಿರತರಾಗಿದ್ದಾರೆ. ತಾವು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಆಧುನಿಕ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳು ಹಾಗೂ ಪರಿಸರದ ಪಾಠವನ್ನು ಬೋಧಿಸುವಂತೆ ನೋಡಿಕೊಳ್ಳುತ್ತಿದ್ದಾರೆ.

ಕಳೆದ ಮುವತ್ತು ವರ್ಷಗಳಿಂದ ಗಂಗೆಯನ್ನು ಶುದ್ಧೀಕರಿಸಲು ಹೊರಟು ಹೈರಾಣಾಗಿದ್ದ ನಮ್ಮ ಕೇಂದ್ರ ಸರ್ಕಾರ ಇದೀಗ ಸಂತ ಬಲ್ಬೀರ್ ಸಿಂಗ್ ರವರ ಮಾರ್ಗದರ್ಶನದಲ್ಲಿ ಮುಂದುವರಿಯಲು ನಿರ್ಧರಿಸಿದೆ. ಗಂಗಾ ಶುದ್ಧೀಕರಣ ಯೋಜನೆಯಾದ “ ನಮಾಮಿ ಗಂಗಾ” ಯೋಜನೆಯಲ್ಲಿ ಗಂಗಾ ನದಿಯ ತಟದಲ್ಲಿರುವ  1.600 ಗ್ರಾಮಗಳು ಮತ್ತು ಪಟ್ಟಣಗಳ ಕೊಳಚೆ ನೀರನ್ನು  ಕೃಷಿಗೆ ಮರುಬಳಕೆ ಮಾಡುವ ದೃಷ್ಟಿಯಿಂದ ಒಳಚರಂಡಿ ವ್ಯವಸ್ಥೆ ರೂಪಿಸಲು ನಿರ್ಧರಿಸಲಾಗಿದೆ. ಈಗಾಗಲೇ ಪ್ರಥಮ ಹಂತದ ಯೋಜನೆಗೆ ಇನ್ನೂರು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಪ್ರತಿ ಗ್ರಾಮಕ್ಕೆ ಒಂದು ಕೋಟಿ ರುಪಾಯಿ ಹಣವನ್ನು ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವೆ  ಉಮಾ ಭಾರತಿ ಬಿಡುಗಡೆ ಮಾಡಿದ್ದಾರೆ.
ಯೋಗ ಮತ್ತು ಧ್ಯಾನವನ್ನು  ಕಲಿಸುವುದನ್ನು ಉದ್ಯಮ ಮಾಡಿಕೊಂಡವರ ನಡುವೆ ಘನತೆಯ ಬದುಕನ್ನು ಬದುಕುತ್ತಾ ಭಾರತೀಯ ನೆಲ ಮೂಲ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿರುವ ಸಂತ ಬಲ್ಬೀರ್ ಸಿಂಗ್ ರಂತಹ ಸಂತತಿ ಈ ದೇಶದಲ್ಲಿ ಹೆಚ್ಚಾಗಬೇಕಿದೆ.