ಮಾರುಕಟ್ಟೆ ಮತ್ತು ಅಭಿವೃದ್ಧಿ -ಎಂ.ಚಂದ್ರ ಪೂಜಾರಿ

            market
ಸ್ವಾತಂತ್ರ್ಯ ನಂತರ ಅನುಸರಿಸಿದ ಅಭಿವೃದ್ಧಿ ಮಾದರಿಯಿಂದ ಬಡತನ, ಅಸಮಾನತೆಗಳು ನಿವಾರಣೆಯಾಗಿಲ್ಲವೆಂದು ತೊಂಬತ್ತರ ನಂತರ ಮಾರುಕಟ್ಟೆ ನಿರ್ದೇಶಿತ ಅಭಿವೃದ್ಧಿ ಜಾರಿಗೆ ಬಂದಿದೆ. ಮಾರುಕಟ್ಟೆ ನಿರ್ದೇಶಿತ ಅಭಿವೃದ್ಧಿ ಜಾರಿಗೆ ಬಂದ ನಂತರ ಸರಕುಸೇವೆಗಳ ಉತ್ಪಾದನೆ ಹೆಚ್ಚಿದೆ. ಸಾರಿಗೆ ಸಂಪರ್ಕಗಳು ವೃದ್ಧಿಯಾಗಿವೆ. ಮೆಡಿಕಲ್ ಎಂಜೀನಿಯರ್ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ. ಟಿವಿ ಚ್ಯಾನಲ್‍ಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲರ ಕೈಗೂ ಮೊಬೈಲ್‍ಗಳು ಬಂದಿವೆ. ಮಾಲ್‍ಗಳು ಮಲ್ಟಿಫ್ಲೆಕ್ಸ್‍ಗಳು ಜಿಲ್ಲಾ ಕೇಂದ್ರಗಳಲ್ಲೂ ತಲೆ ಎತ್ತಿವೆ. ಸುಮಾರು ಮೂವತ್ತರಿಂದ ನಲ್ವತ್ತು ಕೋಟಿಯಷ್ಟು ಜನರು ಮಧ್ಯಮ ವರ್ಗದ ಜೀವನ ಅನುಭವಿಸುತ್ತಿದ್ದಾರೆ. ಐವತ್ತು ಕುಟುಂಬಗಳ ಸ್ವಾಧೀನ ದೇಶದ ಒಟ್ಟು ಉತ್ಪನ್ನದ ಮೂರನೇ ಒಂದರಷ್ಟು ಸಂಪತ್ತು ಸಂಗ್ರಹವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಎಂದರೆ ಬಡವರೇ ತುಂಬಿರುವ ದೇಶ ಎನ್ನುವ ಚಿತ್ರಣವನ್ನು ಮಸುಕುಗೊಳಿಸುವ ಪ್ರಯತ್ನಗಳು ನಡೆದಿವೆ. ಹೀಗೆ ತೊಂಬತ್ತರ ನಂತರ ನಮ್ಮಲ್ಲೊಂದು ಸಮೃದ್ದಿಯ ಲೋಕ ಸೃಷ್ಟಿಯಾಗಿದೆ.
ಇದೇ ಸಂದರ್ಭದಲ್ಲಿ ಇದಕ್ಕೆ ಸಂಪೂರ್ಣವಾಗಿ ವಿರುದ್ಧವಾದ ಮತ್ತೊಂದು ಲೋಕ ಕೂಡ ಸೃಷ್ಟಿಯಾಗಿದೆ. ಈ ಲೋಕದಲ್ಲಿ ಸರಿ ಸುಮಾರು ಇನ್ನೂರಮೂವತ್ತು ಮಿಲಿಯ ಜನರು ಮೂರು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ದೇಶ, ರಾಜ್ಯದ ಸಂಪತ್ತು ಹೆಚ್ಚಾದಂತೆ ಬಡವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ತೊಂಬತ್ತರ ನಂತರ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿವೆ. ತಳಹಂತದ ಶಿಕ್ಷಣ ನೀಡುವುದು ಸರಕಾರದ ಜವಾಬ್ದಾರಿಯಾದರೆ ಉನ್ನತ ಶಿಕ್ಷಣದ ಜವಾಬ್ದಾರಿಯನ್ನು ಖಾಸಗಿಯವರಿಗೆ ಒಪ್ಪಿಸಲಾಗಿದೆ. ಇದರಿಂದಾಗಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಇನ್ನೂ ಕೂಡ ಶೇಕಡ ಇಪ್ಪತೈದು ದಾಟಿಲ್ಲ. ಇನ್ನು ಆರೋಗ್ಯ ಕ್ಷೇತ್ರದ ಸ್ಥಿತಿಗತಿಯನ್ನು ಹೇಳುವುದೇ ಬೇಡ. ವಿಶ್ವಬ್ಯಾಂಕ್ ವರದಿ ಪ್ರಕಾರ ಸಬ್ ಸಹರಾ ಆಫ್ರಿಕಾ ದೇಶಗಳಲ್ಲಿ ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇಕಡಾ 24ರಷ್ಟಿದ್ದರೆ ಭಾರತದಲ್ಲಿ ಕಡಿಮೆ ತೂಕದ ಮಕ್ಕಳ ಪ್ರಮಾಣ ಶೇಕಡಾ ನಲ್ವತ್ತೇಳರಷ್ಟಿದೆ. ಭಾರತದ ಶೇಕಡಾ 72ರಷ್ಟು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ನಮ್ಮ ದೇಶದ ಸರಿ ಅರ್ಧದಷ್ಟು ಮಕ್ಕಳು ಮತ್ತು ಹೆಚ್ಚು ಕಡಿಮೆ ಅಷ್ಟೇ ಪ್ರಮಾಣದ ವಯಸ್ಕರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೀಗೆ ಮಾರುಕಟ್ಟೆ ಅಭಿವೃದ್ಧಿಯಿಂದ ಸಮೃದ್ಧಿ ಮತ್ತು ಕೊರತೆಯ ಎರಡು ಲೋಕಗಳು ಏಕಕಾಲದಲ್ಲಿ ಸೃಷ್ಟಿಯಾಗಿವೆ. ಇಂತಹ ಎರಡು ವಿಭಿನ್ನ ಲೋಕಗಳು ಏಕೆ ಸೃಷ್ಟಿಯಾಗಿವೆಯೆಂದು ಅರ್ಥವಾಗಬೇಕಾದರೆ ಮಾರುಕಟ್ಟೆಯ ಮೂಲತತ್ತ್ವಗಳು ಅರ್ಥವಾಗಬೇಕು.
ಮಾರುಕಟ್ಟೆಯನ್ನು ಸ್ಥಳದಲ್ಲಿ ರೂಪದಲ್ಲಿ ಕಲ್ಪಿಸಿ ಕೊಂಡರೆ ಮನೆಯಿಂದ ದೂರದಲ್ಲಿ ಮಾರುಕಟ್ಟೆ ಇದೆಯೆನ್ನುವ ಚಿತ್ರಣ ಇದೆ. ಇದು ಕೇವಲ ದೂರದ ಪ್ರಶ್ನೆ ಮಾತ್ರವಲ್ಲ. ಮನೆ ಅಥವಾ ಸಮುದಾಯದಲ್ಲಿ ಪರಿಗಣಿಸುವ ಹಲವು ಸಂಗತಿಗಳು – ಲಿಂಗ, ವಯಸ್ಸು, ಜಾತಿ, ಧರ್ಮ ಇತ್ಯಾದಿಗಳು ಮಾರುಕಟ್ಟೆಯಲ್ಲಿ ಪರಿಗಣನೆಗೆ ಬರುವುದಿಲ್ಲ. ಇವುಗಳು ಮಾರುಕಟ್ಟೆಯಲ್ಲಿ ಮಹತ್ವ ಪಡೆಯದಿರುವುದರಿಂದ ಮಾರುಕಟ್ಟೆಯಲ್ಲಿ ಸಮಾನತೆ ಇದೆ ಎನ್ನುವ ಚಿತ್ರಣ ಇದೆ. ಇದೇ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಇಷ್ಟ ಇದ್ದರೆ ಮಾರುವ ಕಷ್ಟವಾದರೆ ಮಾರದಿರುವ ಸ್ವಾತಂತ್ರ್ಯ ಕೂಡ ಇದೆ ಎನ್ನುವ ಕಲ್ಪನೆ ಇದೆ. ಹೀಗೆ ಮಾರುಕಟ್ಟೆ ಚರಿತ್ರೆಯಿಂದ ಬಂದ ಹಲವು ಬಂಧನಗಳಿಂದ ನಿಮ್ಮನ್ನು ಮುಕ್ತಗೊಳಿಸಿ ಪರಿಪೂರ್ಣ ವ್ಯಕ್ತಿಯಾಗಿನ್ನಾಗಿಸುತ್ತದೆ. ಮಾರುಕಟ್ಟೆ ವ್ಯಕ್ತಿಗಳನ್ನು ಸಮುದಾಯದ ಪ್ರಭಾವದಿಂದ ಬೇರ್ಪಡಿಸಿದಂತೆ ಸರಕುಸೇವೆಗಳನ್ನು ಕೂಡ ಅವುಗಳ ಸ್ಥಾನಮಾನಗಳಿಂದ ಕಿತ್ತು ಕೇವಲ ಸರಕನ್ನಾಗಿಸುತ್ತದೆ. ದೇವರು, ಮನುಷ್ಯರು ಮತ್ತು ಪ್ರಾಣಿಗಳಿಗೆ ಬಳಸುವ ಪಾತ್ರಗಳ ನಡುವೆ ಮನೆಯಲ್ಲಿ ತುಂಬಾ ಅಂತರವಿದೆ. ಮನೆಯಲ್ಲಿ ವ್ಯಕ್ತಿಗಳಂತೆ ವಸ್ತುಗಳು ಕೂಡ ವಿವಿಧ ಸ್ಥಾನಮಾನಗಳನ್ನು ಹೊಂದಿವೆ. ಆದರೆ ಮಾರುಕಟ್ಟೆಯಲ್ಲಿ ಎಲ್ಲ ಪಾತ್ರಗಳು ಕೇವಲ ಸರಕುಗಳು ಮಾತ್ರ. ಸರಕುಸೇವೆಗಳ ಬೇಡಿಕೆ ಪೂರೈಕೆಗಳು ಅವುಗಳ ಮೌಲ್ಯ ತೀರ್ಮಾನಿಸುತ್ತವೆ. ಪಾತ್ರೆಗೆ ಅನ್ವಯವಾಗುವ ನಿಯಮ ಎಲ್ಲ ಸರಕುಸೇವೆಗಳಿಗೂ ಅನ್ವಯವಾಗುತ್ತದೆ. ಅಂದರೆ ಸಂಸ್ಕøತಿಯಿಂದ ವಸ್ತುಗಳಿಗೆ ಬಂದ ಸ್ಥಾನಮಾನಗಳಿಂದ ಬೇರ್ಪಡಿಸಿ ವಸ್ತುಗಳನ್ನು ಪರಿಪೂರ್ಣ ಸರಕುಗಳನ್ನಾಗಿಸಿ ಅವುಗಳ ಮೌಲ್ಯ ತೀರ್ಮಾನವಾಗುತ್ತದೆ.
ಇಂತಹ ಮಾರುಕಟ್ಟೆ ತತ್ತ್ವಗಳು ಆರ್ಥಿಕ ಕ್ಷೇತ್ರದ ವ್ಯವಹಾರಗಳಿಗೆ ಸೀಮಿತವಾದರೆ ಸಮಸ್ಯೆ ಇಲ್ಲ. ಆದರೆ ಇದೇ ಮಾರುಕಟ್ಟೆ ತತ್ತ್ವಗಳು ಮನೆಗೆ, ಸಮುದಾಯಕ್ಕೆ ಬಂದರೆ ಸಮಸ್ಯೆ ಶುರುವಾಗುತ್ತದೆ. ಮಾರುಕಟ್ಟೆ ತತ್ತ್ವಗಳು ಮನೆಗೆ ಬಂದರೆ ತಂದೆ ತಾಯಿ, ಅಣ್ಣತಮ್ಮ, ಅಕ್ಕತಂಗಿ ಸಂಬಂಧಗಳು ಲಾಭ ನಷ್ಟದ ಸಂಬಂಧಗಳಾಗುತ್ತವೆ. ತಂದೆ ಮಕ್ಕಳಿಗೆ ಶಿಕ್ಷಣ ನೀಡುವಾಗ ಯಾರು ಮುಂದೆ ತನ್ನನ್ನು ಚೆನ್ನಾಗಿ ನೋಡಿಕೊಳ್ಳಬಹುದೆನ್ನುವ ಲೆಕ್ಕಚಾರ ಆದ್ಯತೆ ಪಡೆಯಬಹುದು. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎನ್ನುವ ನಂಬಿಕೆ ಬಲವಾಗಿರುವ ಸಮಾಜದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಮೇಲೆ ಪಾಲಕರು ಕರ್ಚು ಮಾಡಲು ಹಿಂದೆಮುಂದೆ ನೋಡಬಹುದು. ಮಾರುಕಟ್ಟೆಯಲ್ಲಿ ಅಪರಿಚಿತರು ಪರಿಚಿತರಾದಂತೆ ಮಾರುಕಟ್ಟೆ ತತ್ತ್ವ ಮನೆಗೆ, ಸಮುದಾಯಕ್ಕೆ ಬಂದರೆ ಪರಿಚಿತರು ಅಪರಿಚಿತರಾಗುತ್ತಾರೆ. ಮಾರುಕಟ್ಟೆ ತತ್ತ್ವ ಅನುಸಾರ ಶಿಕ್ಷಣ, ಆರೋಗ್ಯ ಕ್ಷೇತ್ರಗಳು ನಡೆದಾಗ ಶಿಕ್ಷಣ ಸಂಸ್ಥೆಗಳು ಸ್ಕಿಲ್ ಉತ್ಪಾದಿಸಿ ಪೂರೈಸುವ ಫ್ಯಾಕ್ಟರಿಗಳಾಗುತ್ತವೆ, ಆಸ್ಪತ್ರೆಗಳು ಹೆಲ್ತ್ ಫ್ಯಾಕ್ಟರಿಗಳಾಗುತ್ತವೆ. ರೋಗಿಯ ಅಗತ್ಯಗಳು ಇಲ್ಲಿ ಲೆಕ್ಕಕ್ಕಿಲ್ಲ. ತಕ್ಷಣ ಆಪರೇಶನ್ ಮಾಡದಿದ್ದರೆ ಸತ್ತೇ ಹೋಗಬಹುದಾದ ರೋಗಿಗಳು ಕಟ್ಟಬೇಕಾದ ಫೀಸು ಕಟ್ಟದಿದ್ದರೆ ಆಪರೇಶನ್ ನಡೆಯುವುದಿಲ್ಲ.
ಇದಕ್ಕೆ ವ್ಯತಿರಿಕ್ತವಾಗಿ ಕೇಳಿದಷ್ಟು ಫೀಸು ಕೊಡಲು ರೆಡಿ ಇರುವವರನ್ನು ಯಾವುದೇ ರೋಗವಿಲ್ಲದಿದ್ದರೂ ಒಳರೋಗಿಗಳಾಗಿ ಸೇರಿಸಿಕೊಂಡು ಪಂಚತಾರಾ ಸೌಲಭ್ಯ ನೀಡಲು ಆಸ್ಪತ್ರೆಗಳು ರೆಡಿ ಇರುತ್ತವೆ. ಮಾರುಕಟ್ಟೆ ನಿಯಮ ಪ್ರಕಾರ ಆರೋಗ್ಯ ಕ್ಷೇತ್ರ ನಡೆದರೆ ಮೇಲಿನ ಅವಾಂತರಗಳನ್ನು ದಿನಾ ನೋಡಬೇಕು ಮತ್ತು ತೊಂಬತ್ತರ ನೋಡುತ್ತಿದ್ದೇವೆ ಕೂಡ. ಇಲ್ಲಿ ಮನುಷ್ಯತ್ವ, ಸೇವೆ, ಅನುಕಂಪ ಇತ್ಯಾದಿ ಮೌಲ್ಯಗಳಿಗೆ ಮೂರು ಕಾಸಿನ ಬೆಲೆ ಇರುವುದಿಲ್ಲ. ತೊಂಬತ್ತರ ನಂತರ ಮಾರುಕಟ್ಟೆ ತತ್ತ್ವಗಳು ವಸತಿ, ಕುಡಿಯುವ ನೀರು, ನೈರ್ಮಲ್ಯ ಇತ್ಯಾದಿ ಸಾಮಾಜಿಕ ಮೂಲಸೌಕರ್ಯಗಳ ಪೂರೈಕೆಯನ್ನು ನಿರ್ಧರಿಸುತ್ತಿವೆ. ಇವುಗಳಿಗೆ ನಿಗದಿಯಾದ ಮಾರುಕಟ್ಟೆ ಬೆಲೆ ನೀಡಲು ಶಕ್ತಿ ಇಲ್ಲದವರು ಈ ಎಲ್ಲ ಸಾಮಾಜಿಕ ಮೂಲಸೌಕರ್ಯಗಳಿಂದ ವಂಚಿತರಾಗುತ್ತಾರೆ. ಆರೋಗ್ಯ, ಶಿಕ್ಷಣ, ವಸತಿ, ಕುಡಿಯುವ ನೀರು, ನೈರ್ಮಲ್ಯ ಇತ್ಯಾದಿ ಮೂಲಸೌಕರ್ಯಗಳಿಂದ ವಂಚಿತರಾದವರು ದುಡಿದು ಗಳಿಸುವ ಶಕ್ತಿಯಿಂದಲೇ ವಂಚಿತರಾಗುತ್ತಾರೆ.
ಮೇಲೆ ಚರ್ಚಿಸಿದ ವಿಚಾರಗಳು ಮಾರುಕಟ್ಟೆಯನ್ನು ನಕರಾತ್ಮಕವಾಗಿ ಬಿಂಬಿಸುತ್ತಿವೆ. ಇದು ಮಾರುಕಟ್ಟೆಯ ಸಮಸ್ಯೆಯಲ್ಲ. ಮಾರುಕಟ್ಟೆ ಆಚರಣೆಗೆ ಬರುವ ಪರಿಸರ ಮತ್ತು ಮಾರುಕಟ್ಟೆಯನ್ನು ನಾವು ಕಟ್ಟಿಕೊಳ್ಳುವ ವಿಧಾನದ ಸಮಸ್ಯೆ ಇವು. ಭೂಮಿ, ಬಂಡವಾಳ, ಉತ್ತಮ ಶಿಕ್ಷಣವುಳ್ಳವರ ಮಾರುವ ಮತ್ತು ಖರೀದಿಸುವ ಶಕ್ತಿಗೂ ಈ ಮೂರರಲ್ಲಿ ಒಂದೂ ಇಲ್ಲದವರ ಮಾರುವ ಮತ್ತು ಖರೀದಿಸುವ ಶಕ್ತಿಗೂ ಭೂಮಿ ಆಕಾಶದ ಅಂತರವಿದೆ. ನಮ್ಮ ಸಮಾಜದಲ್ಲಿ ಭೂಮಿ, ಬಂಡವಾಳ, ಉತ್ತಮ ಶಿಕ್ಷಣಗಳು ಕೆಲವರಲ್ಲೇ ಕ್ರೋಢೀಕರಣಗೊಂಡಿವೆ. ಸಮಾಜದ ಬಹುತೇಕರು ಮೇಲಿನ ಸಂಪನ್ಮೂಲಗಳಿಂದ ವಂಚಿತರಾಗಿದ್ದಾರೆ. ಇಂತವರು ತಮ್ಮ ಮೂರು ಹೊತ್ತಿನ ಊಟಕ್ಕೆ ತಮ್ಮ ಶ್ರಮ ಮಾರಿ ಬದುಕುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ. ಈ ಬಗೆಯ ಶ್ರೇಣೀಕೃತ ಸಮಾಜದಲ್ಲಿ ಮಾರುಕಟ್ಟೆ ಮಾರುವ ಖರೀದಿಸುವ ಸ್ವಾತಂತ್ರ್ಯ ನೀಡುತ್ತಿದೆ ಎನ್ನುವ ಹೇಳಿಕೆಯನ್ನು ಮುಖಬೆಲೆಯಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ. ತಮ್ಮ ದುಡಿಮೆಯನ್ನು ಮಾರಿ ಬದುಕುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲದವರಿಗೆ ಇಷ್ಟ ಇದ್ದರೆ ಮಾರುವ ಕಷ್ಟವಾದರೆ ಮಾರಾದಿರುವ ಸ್ವಾತಂತ್ರ್ಯ ಇದೆಯೆನ್ನಲಾಗುವುದಿಲ್ಲ. ಅವರ ದುಡಿತದಿಂದ ಬರುವ ಆದಾಯ ಅವರ ಅಸ್ತಿತ್ವವನ್ನೇ ನಿರ್ಧರಿಸುತ್ತದೆ. ಆದುದರಿಂದ ಕಡಿಮೆ ಸಂಬಳ ನಿಗದಿಯಾಗಿದೆಯೆಂದು ಮೇಸ್ಟ್ರುಗಳು, ದಾದಿಗಳು, ಮಾಲ್‍ಗಳಲ್ಲಿ, ಫ್ಯಾಕ್ಟರಿಗಳಲ್ಲಿ ದುಡಿಯುವವರು, ಡ್ರೈವರ್‍ಗಳು ತಮ್ಮ ಶ್ರಮ ಮಾರದಿರಲು ಸಾಧ್ಯವಾಗುವುದಿಲ್ಲ.
ಇದೇ ಸ್ಥಿತಿ ಸಣ್ಣಪುಟ್ಟ ವ್ಯಾಪಾರಿಗಳು, ಕೃಷಿಕರು, ಉತ್ಪಾದಕರದ್ದು ಕೂಡ. ಸಣ್ಣ ಕೃಷಿಕರು ಅಥವಾ ಉತ್ಪಾದಕರು ತಾವು ಬೆಳೆದ ಅಡಿಕೆಯನ್ನೋ ಅಥವಾ ತರಕಾರಿಯನ್ನೋ ಅಥವಾ ಕೃಷಿಯೇತರ ಉತ್ಪನ್ನವನ್ನೋ ಮಾರಲೆಂದು ಮಾರ್ಕೆಟ್ ಒಯ್ದರೆ ಅಲ್ಲಿ ಸರಕಿಗೆ ಅವರು ಆಪೇಕ್ಷಿಸಿದ ಬೆಲೆ ಇಲ್ಲವೆಂದು ಮಾರಾದೆ ವಾಪಾಸ್ಸು ಬರುವ ಸ್ಥಿತಿಯಲ್ಲಿ ಅವರಿಲ್ಲ. ಏಕೆಂದರೆ ಮರುದಿನ ಅವರ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು, ಮಗಳ ಸ್ಕೂಲ್ ಫೀ ತುಂಬಬೇಕು, ಇವಲ್ಲಕ್ಕಿಂತಲೂ ಮುಖ್ಯವಾಗಿ ಊಟಕ್ಕೆ ಅಕ್ಕಿ ಖರೀದಿಸಬೇಕು. ಈ ಎಲ್ಲ ಕರ್ಚುಗಳನ್ನು ಭರಿಸಲು ಮಾರ್ಕೆಟ್‍ಗೆ ತಂದ ಸರಕನ್ನು ಸಿಕ್ಕಿದ ಬೆಲೆಗೆ ಮಾರುವುದು ಬಿಟ್ಟರೆ ಬೇರೆ ದಾರಿಯೇ ಅವರಿಗಿರುವುದಿಲ್ಲ. ಹೀಗೆ ಸಣ್ಣಪುಟ್ಟ ಕೃಷಿಕರು, ಉತ್ಪಾದಕರು, ವ್ಯಾಪಾರಿಗಳು ಇಷ್ಟವಾದರೆ ಮಾರುವ ಕಷ್ಟವಾದರೆ ಮಾರಾದಿರುವ ಸ್ವಾತಂತ್ರ್ಯ ಹೊಂದಿಲ್ಲ. ಮಾರುಕಟ್ಟೆ ನಿಗದಿ ಪಡಿಸಿದ ಬೆಲೆ ಅವರಿಗೆ ಒಪ್ಪಿಗೆಯಾಗಲಿ ಆಗದಿರಲಿ ಅವರು ತಮ್ಮ ಸರಕುಸೇವೆಗಳನ್ನು ಮಾರುವ ಅಥವಾ ಖರೀದಿಸುವ ಅನಿವಾರ್ಯತೆ ಇದೆ. ಹೀಗೆ ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯವಿದೆ, ಸಮಾನತೆಯಿದೆ ಎನ್ನುವ ಕಲ್ಪನೆಗಳು ವಾಸ್ತವಲ್ಲ. ಆದುದರಿಂದ ಮಾರುಕಟ್ಟೆ ನಿರ್ದೇಶಿತ ಅಭಿವೃದ್ಧಿ ಜಾರಿಗೆ ಬಂದ ಕೂಡಲೇ ಬಡತನ, ಅಸಮಾನತೆಗಳು ನಿವಾರಣೆಯಾಗುವುದಿಲ್ಲ.
ಮೇಲಿನ ಪರಿಸರದ ಸಮಸ್ಯೆಯೊಂದಿಗೆ ಮಾರುಕಟ್ಟೆ ತತ್ತ್ವಗಳು ಎಲ್ಲಿ ಅನ್ವಯವಾಗಬೇಕು ಮತ್ತು ಎಲ್ಲಿ ಅನ್ವಯವಾಗಬಾರದೆಂದು ತೀರ್ಮಾನಿಸುವುದು ನಮ್ಮ ಸರಕಾರಗಳು. ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಜನರು ಮತ ಚಲಾಯಿಸಿ ಸರಕಾರಗಳನ್ನು ಚುನಾಯಿಸುವುದರಿಂದ ಮತ್ತು ಚುನಾವಣೆಯಲ್ಲಿ ತಳಸ್ತರದೇ ಜನರೇ ಹೆಚ್ಚು ಪಾಲುಗೊಳ್ಳುವುದರಿಂದ ಸರಕಾರ ಮಾರುಕಟ್ಟೆಯನ್ನು ಬಡವರಿಗೆ ಅನುಕೂಲಕರವಾಗಿ ಕಟ್ಟಿಕೊಳ್ಳಬಹುದು ಎನ್ನುವ ಮುಗ್ದ ತಿಳುವಳಿಕೆ ಬಹುತೇಕರ ಪ್ರಜ್ಞೆಯ ಭಾಗವಾಗಿದೆ. ಈ ಬಗೆಯ ಅಪಕಲ್ಪನೆ ಜನರಲ್ಲಿ ಮನೆ ಮಾಡಿರುವುದರ ಹಿಂದೆ ಸರಕಾರ ಮತ್ತು ಮಾಧ್ಯಮಗಳ ಪಾತ್ರವೂ ಇದೆ. ನಮ್ಮ ಸಂಪನ್ಮೂಲದ ಅತ್ಯಲ್ಪ ಪ್ರಮಾಣವನ್ನು ತಳಸ್ತರದ ಜನರಿಗೆ ವಿವಿಧ ಬಡತನ ನಿವಾರಣ ಕಾರ್ಯಕ್ರಮಗಳ ರೂಪದಲ್ಲಿ ಸರಕಾರ ನೀಡುತ್ತಿದೆ. ಇಂತಹ ಬಡತನ ನಿವಾರಣ ಕಾರ್ಯಕ್ರಮಗಳು ಚುನಾವಣೆಯಲ್ಲಿ ಮತ್ತು ಮಾಧ್ಯಮಗಳಲ್ಲಿ ಅತೀ ಹೆಚ್ಚಿನ ಮಹತ್ವ ಪಡೆಯುತ್ತಿವೆ. ಇದೇ ಸಂದರ್ಭದಲ್ಲಿ ನಮ್ಮ ಸಂಪನ್ಮೂಲದ ಬಹುದೊಡ್ಡ ಪಾಲು ಶ್ರೀಮಂತರು ಮತ್ತು ಮಧ್ಯಮ ವರ್ಗದ ಪಾಲಾಗುತ್ತಿದೆ. ಆದರೆ ಇವುಗಳ ಮೇಲೆ ಮಾಧ್ಯಮಗಳಲ್ಲಿ ವಿಶೇಷ ಚರ್ಚೆಯೇ ನಡೆಯುವುದಿಲ್ಲ. ಈ ಎಲ್ಲ ಕಾರಣಗಳಿಂದ ಬಡವರು ಸರಕಾರದ ಕೃಪೆಯಲ್ಲಿ ಬದುಕುತ್ತಿದ್ದಾರೆ ಮತ್ತು ಅನುಕೂಲಸ್ಥರು ಮಾರುಕಟ್ಟೆಯಲ್ಲಿ ವ್ಯವಹರಿಸಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆನ್ನುವ ಅಪಕಲ್ಪನೆಯನ್ನು ನಮ್ಮಲ್ಲಿ ಮನೆ ಮಾಡಿದೆ. ಆದರೆ ವಾಸ್ತವ ಬೇರೆಯೇ ಇದೆ.
ಬಡವರು ಮತ ಹಾಕಿ ಚುನಾಯಿಸಿದ ಸರಕಾರಗಳು ಬಡವರ ಹಿಡಿತಕ್ಕಿಂತ ಹೆಚ್ಚು ಅನುಕೂಲಸ್ಥರ ಹಿಡಿತದಲ್ಲಿವೆ. ಇದರಿಂದಾಗಿ ಮಾರುಕಟ್ಟೆ ಕೂಡ ಅನುಕೂಲಸ್ಥರಿಗೆ ಅನುಕೂಲವಾಗುವ ಹಾಗೆ ಮತ್ತು ತಳಸ್ತರದ ಜನರಿಗೆ ಅನಾನುಕೂಲವಾಗುವ ಹಾಗೆ ಕಟ್ಟಿಕೊಳ್ಳಲಾಗಿದೆ. ಇವರು ಕಟ್ಟಿಕೊಂಡ ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಕಡಿಮೆ ಪೂರೈಕೆ ಇರುವ ಭೂಮಿ, ಹಣಕಾಸು, ಪ್ರಾಕೃತಿಕ ಸಂಪನ್ಮೂಲಗಳ ವ್ಯವಹಾರಗಳು ಮಾರುಕಟ್ಟೆ ನಿಯಮದಿಂದ ಹೊರಗಿದ್ದರೆ ಬೇಡಿಕೆಗಿಂತ ಹೆಚ್ಚು ಪೂರೈಕೆ ಇರುವ ಶ್ರಮ ವ್ಯವಹಾರ ಮಾರುಕಟ್ಟೆ ನಿಯಮದೊಳಗಿದೆ. ಕೆಲವೊಂದು ಉದಾಹರಣೆಗಳನ್ನು ನೋಡಿದರೆ ಮೇಲಿನ ಅಂಶ ಹೆಚ್ಚು ಸ್ಪಷ್ಟವಾಗಬಹುದು.
ಮೊದಲಿಗೆ ಹಣಕಾಸು ಮಾರುಕಟ್ಟೆಯನ್ನು ಪರಿಶೀಲಿಸುವ. ಸಾಲದ ಬೇಡಿಕೆ ಪೂರೈಕೆಗಳು ಬಡ್ಡಿದರವನ್ನು ತೀರ್ಮಾನಿಸಬೇಕು. ಸಾಲದ ಬೇಡಿಕೆ ಹೆಚ್ಚಾದಾಗ ಬಡ್ಡಿದರ ಹೆಚ್ಚಾಗಬೇಕು ಮತ್ತು ಕಡಿಮೆಯಾದಾಗ ಕಡಿಮೆಯಾಗಬೇಕು. ಆದರೆ ನಮ್ಮಲ್ಲಿ ಆ ರೀತಿ ಆಗುತ್ತಿಲ್ಲ. ಸಾಲದ ಮಾರುಕಟ್ಟೆಯಲ್ಲಿ ಸರಕಾರ ಮಧ್ಯಪ್ರವೇಶಿಸಿ ಸಾಲದ ಎರಡು ಮಾರುಕಟ್ಟೆಗಳನ್ನು ಸೃಷ್ಟಿಸಿದೆ. ಒಂದು ಮಾರುಕಟ್ಟೆ ನಿಯಮನುಸಾರ ಕೆಲಸ ಮಾಡಿದರೆ ಮತ್ತೊಂದು ಮಾರುಕಟ್ಟೆಯಲ್ಲಿ ಸರಕಾರ ಮಧ್ಯಪ್ರವೇಶ ಮಾಡಿ ಬಡ್ಡಿದರವನ್ನು ಹಿಡಿತದಲ್ಲಿಟ್ಟುಕೊಂಡಿದೆ. ವಿಚಿತ್ರವೆಂದರೆ ಸರಕಾರದ ಹಿಡಿತದಲ್ಲಿರುವ ಸಾಲದ ಮಾರುಕಟ್ಟೆಯ ಹೆಚ್ಚಿನ ಭಾಗ ದೊಡ್ಡ ಉದ್ದಿಮೆ ಹಾಗು ದೊಡ್ಡ ಕೃಷಿಕರಿಗೆ ಹೋದರೆ ಸಣ್ಣ ಭಾಗ ಪ್ರಜಾಪ್ರಭುತ್ವದಲ್ಲಿ ಕಡಿಮೆ ಪ್ರತಿನಿಧಿತ್ವವುಳ್ಳವರಿಗೆ ಹೋಗುತ್ತಿದೆ. ಅಷ್ಟುಮಾತ್ರವಲ್ಲ ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿತ್ವ ಇಲ್ಲದ ತಳಸ್ತರದ ಜನರನ್ನು ಮಾರುಕಟ್ಟೆ ನಿಯಮನುಸಾರ ವ್ಯವಹರಿಸಲು ಒತ್ತಾಯಿಸಲಾಗುತ್ತಿದೆ. ಇವರ ಸಾಲದ ಬೇಡಿಕೆ ಹೆಚ್ಚಿರುವುದರಿಂದ ಸರಕಾರೇತರ ಮೂಲಗಳ ಸಾಲದ ಬಡ್ಡಿದರಗಳು ಕೂಡ ಹೆಚ್ಚಾಗಿವೆ. ಪ್ರಜಾಪ್ರಭುತ್ವದ ಮೇಲೆ ಹಿಡಿತಹೊಂದಿರುವ ಮೇಲ್ವರ್ಗ ಹೆಚ್ಚು ಸರಕಾರಿ ಸಾಲ ಪಡೆಯುವುದು ಮಾತ್ರವಲ್ಲ, ಪಡೆದ ಸಾಲವನ್ನು ಸಂದಾಯ ಮಾಡುವುದರಲ್ಲೂ ಹಿಂದಿದೆ. ಹಾಗೆಂದು ಕಠಿಣ ಕಾನೂನು ಕ್ರಮ ಕೈಗೊಂಡು ಇವರ ಸಾಲ ವಸೂಲಿ ಮಾಡುವ ಬದಲು ಕೋಟಿಗಟ್ಟಲೆ ರೂಗಳ ಸಾಲವನ್ನು ಮನ್ನಾ ಮಾಡಲಾಗುತ್ತಿದೆ. ಕೃಷಿಕರ ಸಣ್ಣಪುಟ್ಟ ಸಾಲವನ್ನು ಸರಕಾರ ಮನ್ನಾ ಮಾಡುವಾಗ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಕೆಡುತ್ತಿದೆಯೆಂದು ಕಿರುಚಾಡುವ ಮಾಧ್ಯಮಗಳು ಉದ್ದಿಮೆಗಳು ಮಾಡಿರುವ ಲಕ್ಷಕೋಟಿಗಿಂತಲೂ ಹೆಚ್ಚಿನ ಸಾಲವನ್ನು ಮನ್ನಾ ಮಾಡುವಾಗ ಮಾತೇ ಆಡುವುದಿಲ್ಲ.
ಎರಡು ವಿಧದ ಸಾಲದ ಮಾರುಕಟ್ಟೆ ಇದ್ದಂತೆ ಎರಡು ವಿಧದ ಭೂಮಾರುಕಟ್ಟೆಗಳಿವೆ. ಬಡವರು ಮತ್ತು ತಳಮಧ್ಯಮ ವರ್ಗದವರು ಮನೆ ಕಟ್ಟಿಸಲು ಒಂದು ಸಣ್ಣ ತುಂಡು ಜಾಗ ಖರೀದಿಸುವಾಗ ಮಾರುಕಟ್ಟೆ ದರ ನೀಡಬೇಕು. ವರ್ಷದಿಂದ ವರ್ಷ ವಸತಿ ಬೇಡಿಕೆ ಹೆಚ್ಚಾದಂತೆ ಭೂಮಿ ಬೆಲೆ ಕೂಡ ಏರುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಉದ್ದಿಮೆಗಳಿಗೆ ಅತ್ಯಂತ ಅಗ್ಗದ ಬೆಲೆಯಲ್ಲಿ ಭೂಮಿ ಲಭ್ಯವಾಗುತ್ತಿದೆ. ಉದ್ದಿಮೆಗಳಿಗೆ ಭೂಮಿ ನೀಡಲು ಸರಕಾರವೇ ಭೂಬ್ಯಾಂಕ್ ಸ್ಥಾಪಿಸುತ್ತಿದೆ. ಉದ್ದಿಮೆಗಳಿಗೆ ಕಡಿಮೆ ಬೆಲೆಯಲ್ಲಿ ಭೂಮಿ ಒದಗಿಸುವ ಉದ್ದೇಶದಿಂದ ಭೂಸ್ವಾಧೀನ ಮಸೂದೆಯನ್ನು ತಿದ್ದುಪಡಿ ಮಾಡಲು ಸರಕಾರ ಹಿಂದೇಟು ಹಾಕುವುದಿಲ್ಲ. ಇಷ್ಟ ಇದ್ದರೆ ಮಾರುವ ಇಲ್ಲವಾದರೆ ದೂರ ನಿಲ್ಲುವ ಭೂಮಾಲೀಕರ ಮಾರುಕಟ್ಟೆ ಸ್ವಾತಂತ್ರ್ಯ ಉದ್ದಿಮೆಗಳಿಗೆ ಭೂಮಿ ನೀಡುವ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ. ಹೆಚ್ಚುಕಡಿಮೆ ಇದೇ ನೀತಿ ಕಲ್ಲಿದ್ದಲು, ತೈಲ, ಕಬ್ಬಿಣ ಅದಿರು ಇತ್ಯಾದಿ ಪ್ರಾಕೃತಿಕ ಸಂಪನ್ಮೂಲಗಳ ಮಾರುಕಟ್ಟೆಯಲ್ಲೂ ಕೆಲಸ ಮಾಡುತ್ತಿದೆ.
ಅತ್ಯಂತ ಕಡಿಮೆ ಬೆಲೆಗೆ ಭೂಮಿ, ಹಣಕಾಸುಗಳು ಮೇಲ್ವರ್ಗಕ್ಕೆ ಪೂರೈಕೆಯಾಗುವಂತೆ ಇವುಗಳ ಮಾರುಕಟ್ಟೆಯನ್ನು ಕಟ್ಟಿಕೊಳ್ಳಲಾಗಿದೆ. ಆದರೆ ಶ್ರಮ ಮಾರುಕಟ್ಟೆಯಲ್ಲಿ ದುಡಿಯುವ ವರ್ಗದ ಸಂಬಳ ಸಂಪೂರ್ಣವಾಗಿ ಬೇಡಿಕೆ ಪೂರೈಕೆಗಳ ಮೇಲೆ ನಿಂತಿದೆ. ನಮ್ಮಲ್ಲಿ ಭೂಮಿ, ಹಣಕಾಸು ಇಲ್ಲದ ಜನರಸಂಖ್ಯೆ ಹೆಚ್ಚಿರುವುದರಿಂದ ದುಡಿಯುವ ಜನರ ಪೂರೈಕೆ ಕೂಡ ಹೆಚ್ಚಿದೆ. ಪೂರೈಕೆ ಹೆಚ್ಚಿರುವುದರಿಂದ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುವವರನ್ನು ಪಡೆಯಲು ಅನುಕೂಲವಾಗುವ ರೀತಿಯಲ್ಲಿ (ಒಪ್ಪಂದ, ಹೊರಗುತ್ತಿಗೆ, ತಾತ್ಕಾಲಿಕ ನೇಮಕಾತಿ ಇತ್ಯಾದಿ ಕ್ರಮಗಳ ಮೂಲಕ) ಶ್ರಮ ಮಾರುಕಟ್ಟೆಯನ್ನು ರೂಪಿಸಲಾಗಿದೆ. ಹೀಗೆ ನಮ್ಮಲ್ಲಿ ಚಾರಿತ್ರಿಕವಾಗಿ ನಮ್ಮಲ್ಲಿದ್ದ ಸಾಮಾಜಿಕ, ಆರ್ಥಿಕ, ಮಾರುಕಟ್ಟೆ ಅಭಿವೃದ್ಧಿಯಿಂದ ಸಮೃದ್ಧಿ ಮತ್ತು ಕೊರತೆಯ ಎರಡು ಲೋಕಗಳು ಏಕಕಾಲದಲ್ಲಿ ಸೃಷ್ಟಿಯಾಗಿವೆ. ಮಾರುಕಟ್ಟೆ ಅಭಿವೃದ್ಧಿಯಿಂದ ಸಮೃದ್ಧಿ ಮತ್ತು ಕೊರತೆಯ ಎರಡು ಲೋಕಗಳು ಏಕಕಾಲದಲ್ಲಿ ಸೃಷ್ಟಿಯಾಗಿವೆ. ಸಾಂಸ್ಕೃತಿಕ  ಹಾಗು ರಾಜಕೀಯ ಅಸಮಾನತೆಗಳನ್ನು ಯಥಾರೀತಿಯಲ್ಲಿರಿಸಿಕೊಂಡು ಮಾರುಕಟ್ಟೆ ನಿರ್ದೇಶಿತ ಅಭಿವೃದ್ಧಿಯನ್ನು ಜಾರಿಗೊಳಿಸಲಾಗಿದೆ. ಇಂತಹ ಪರಿಸರಲ್ಲಿ ಮಾರುಕಟ್ಟೆ ತತ್ತ್ವವನ್ನು ಅನುಕೂಲಸ್ಥರಿಗೆ ಅನ್ವಯಿಸಿ ತಳಸ್ತರದ ಜನರ ನೆರವಿಗೆ ಸರಕಾರ ನಿಲ್ಲುತ್ತಿದ್ದರೆ ಮಾರುಕಟ್ಟೆ ಸೃಷ್ಟಿಸುವ ಅವಾಂತರಗಳನ್ನು ಸಹಿಸುವ ಶಕ್ತಿ ತಳಸ್ತರದ ಜನರಿಗೆ ಬರುತ್ತಿತ್ತು. ಆದರೆ ಆ ರೀತಿ ಮಾಡುವ ಬದಲು ಮಾರುಕಟ್ಟೆಯನ್ನು ಮೇಲ್ವರ್ಗ ಜನರಿಗೆ ಅನುಕೂಲವಾಗುವ ಹಾಗೆ ಮತ್ತು ಬಡಜನರಿಗೆ ಅನಾನುಕೂಲ ಆಗುವ ಹಾಗೆ ಕಟ್ಟಿಕೊಳ್ಳಲಾಗಿದೆ. ಇದರಿಂದ ಬಡವರ ಬದುಕು ಅಸಹನೀಯವಾಗಿದೆ.
ಈ ಸಮಸ್ಯೆಗೆ ಪರಿಹಾರ ಮಾರುಕಟ್ಟೆಯಲಿಲ್ಲ; ಮಾರುಕಟ್ಟೆಯನ್ನು ರೂಪಿಸುವ ಪ್ರಜಾಪ್ರಭುತ್ವದಲ್ಲಿದೆ. ಇಂದು ಆಚರಣೆಯಲ್ಲಿ ಪ್ರಜಾಪ್ರಭುತ್ವ ತುಂಬಾ ಸೀಮಿತರೂಪದ್ದಾಗಿದೆ. ನಮ್ಮ ಸಮಾಜದ ಬಹುತೇಕರು ಈ ಪ್ರಜಾಪ್ರಭುತ್ವದಲ್ಲಿ ಪ್ರತಿನಿಧಿತ್ವ ಹೊಂದಿಲ್ಲ. ಮಹಿಳೆಯರು, ಅಲ್ಪಸಂಖ್ಯಾತರು, ಸಣ್ಣಪುಟ್ಟ ಹಿಂದುಳಿದ ಜಾತಿಗಳು ಅವರ ಜನಸಂಖ್ಯೆಯ ಕಾಲುಭಾಗದಷ್ಟು ಪ್ರತಿನಿಧಿತ್ವ ಹೊಂದಿಲ್ಲ. ದಲಿತಬುಡಕಟ್ಟುಗಳು ಅವರ ಜನಸಂಖ್ಯೆಗೆ ಅನುಗುಣವಾದ ಪ್ರತಿನಿಧಿತ್ವ ಹೊಂದಿದ್ದಾರೆ. ಆದರೆ ದಲಿತಬುಡಕಟ್ಟುಗಳ ಪ್ರತಿನಿಧಿಗಳನ್ನು ಚುನಾಯಿಸುವಲ್ಲಿ ದಲಿತಬುಡಕಟ್ಟೇತರ ಜನರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಆದುದರಿಂದ ದಲಿತಬುಡಕಟ್ಟು ಪ್ರತಿನಿಧಿಗಳ ತಮ್ಮ ಜನರ ಆಸಕ್ತಿಗಳನ್ನು ಪ್ರತಿನಿಧಿಸುವುದಕ್ಕಿಂತ ಹೆಚ್ಚು ದಲಿತಬುಡಕಟ್ಟೇತರ ಜನರ ಆಸಕ್ತಿಗಳನ್ನು ಪ್ರತಿನಿಧಿಸುವ ಅನಿವಾರ್ಯತೆ ಇದೆ. ಹೀಗೆ ನಮ್ಮ ಪ್ರಜಾಪ್ರಭುತ್ವ ತುಂಬಾ ಸಂಕುಚಿತವಾಗಿದೆ. ಅಲ್ಪಸಂಖ್ಯೆಯಲ್ಲಿರುವ ಮೇಲ್ವರ್ಗದ ಆಸಕ್ತಿಗಳನ್ನು ಪ್ರತಿನಿಧಿಸುವ ಪ್ರಜಾಪ್ರಭುತ್ವ ತನ್ನ ಆಸಕ್ತಿಯನ್ನು ಪ್ರತಿನಿಧಿಸುವ ಮಾರುಕಟ್ಟೆಯನ್ನು ಕಟ್ಟಿಕೊಂಡಿದೆ. ಈ ವ್ಯವಸ್ಥೆಯಲ್ಲಿ ಅನಾನುಕೂಲಸ್ಥರು ಮಾರುಕಟ್ಟೆ ದರದಲ್ಲಿ ಖರೀದಿಸಿ ಅನುಭವಿಸಿದರೆ ಅನುಕೂಲಸ್ಥರು ಸರಕಾರದ ಕೃಪೆಯಲ್ಲಿ ಬದುಕುತ್ತಿದ್ದಾರೆ. ಪ್ರಜಾಪ್ರಭುತ್ವದ ಗುಣಮಟ್ಟವನ್ನು ಸುಧಾರಿಸುವುದು ಮಾತ್ರ ಈ ಸಮಸ್ಯೆಗೆ ದೂರಗಾಮಿ ಪರಿಹಾರ. ಸಮಾಜದ ಎಲ್ಲರೂ ಮುಕ್ತವಾಗಿ ಪ್ರಜಾಪ್ರಭುತ್ವದಲ್ಲಿ ಭಾಗವಹಿಸಲು ಸಾಧ್ಯವಾದರೆ ಮುಕ್ತ ಪ್ರಜಾಪ್ರಭುತ್ವ ಆಚರಣೆಗೆ ಬರಬಹುದು. ಮುಕ್ತ ಪ್ರಜಾಪ್ರಭುತ್ವ ಆಚರಣೆಗೆ ಬಂದರೆ ಮುಕ್ತ ಮಾರುಕಟ್ಟೆ ಕಾರ್ಯರೂಪಕ್ಕೆ ಬರಬಹುದು.