ಹೆಸರಾಂತ ನಿಸರ್ಗ ವಿಜ್ಞಾನಿ ಡೇವಿಡ್ ಅಟೆನ್‌ಬರೊ ನಮಗೊಂದು ಕೌತುಕದ ವಿಡಿಯೊ ದೃಶ್ಯವನ್ನು ತೋರಿಸುತ್ತಾರೆ: ನೀರಿನ ಪುಟ್ಟ ಮಡುವೊಂದು ಆಫ್ರಿಕದ ಉರಿ ಬಿಸಿಲಲ್ಲಿ ಒಣಗುತ್ತಿದೆ. ನೂರಾರು ಮರಿಗಪ್ಪೆಗಳು ಮುಷ್ಟಿನೀರಲ್ಲಿ ವಿಲವಿಲ ಪರದಾಡುತ್ತಿವೆ.
ಇನ್ನೊಂದರ್ಧ ಗಂಟೆಯಲ್ಲಿ ಅವೆಲ್ಲ ಸತ್ತೇ ಹೋಗಬಹುದು. ಪಕ್ಕದಲ್ಲೇ ಒಂದೊಂದೂವರೆ ಮೀಟರ್ ಆಚೆಗೆ ಇನ್ನೊಂದು ಕೊಳದಲ್ಲಿ ನೀರಿದೆ.
ಪೊದೆಯಲ್ಲಿದ್ದ ಬೊಗಸೆಗಾತ್ರದ ಕಪ್ಪೆಯೊಂದು (ಬುಲ್ ಫ್ರಾಗ್) ಅತ್ತ ಇತ್ತ ನೋಡುತ್ತ, ಏನೋ ನಿರ್ಧಾರಕ್ಕೆ ಬಂದಂತೆ ನೀರಿದ್ದ ಹೊಂಡಕ್ಕೆ ಜಿಗಿಯುತ್ತದೆ. ಹಿಮ್ಮೊಗ ಈಜುತ್ತ, ತೆವಳುತ್ತ ಕೊಳದ ಅಂಚಿಗೆ ಬಂದು ಹಿಂಗಾಲುಗಳಿಂದ ಹಳ್ಳ ತೋಡಲು ತೊಡಗುತ್ತದೆ.
ಕೆಸರನ್ನು ಅತ್ತ ಇತ್ತ ತಳ್ಳುತ್ತ ಪುಟ್ಟದೊಂದು ಕಾಲುವೆಯನ್ನು ನಿರ್ಮಿಸುತ್ತ ಅದೆಷ್ಟೊ ಹೊತ್ತಿನ ನಂತರ ಒಣ ಹೊಂಡದತ್ತ ನೀರನ್ನು ಹರಿಸುತ್ತದೆ. ನೀರಿಗಾಗಿ ಪರದಾಡಿ ದಣಿದಿದ್ದ ಮರಿಗಪ್ಪೆಗಳು ಮತ್ತೆ ಗೆಲುವಾಗುತ್ತವೆ. ತನ್ನ ಮರಿಗಳನ್ನು ಉಳಿಸಲೆಂದು ಅಪ್ಪಕಪ್ಪೆ ನಡೆಸುವ ಸಾಹಸ ಅದು.
ರಾಯಚೂರಿನ ಉಷ್ಣಸ್ಥಾವರವನ್ನು ತಂಪು ಮಾಡಬೇಕಿದ್ದ ನೀರು ತಮಗೇ ಬೇಕೆಂದು ಆಂಧ್ರದ ರೈತರು ಮೊನ್ನೆ ನೀರಿನ ಕಟ್ಟೆಯನ್ನು ಒಡೆಯುತ್ತಿರುವ ಚಿತ್ರವನ್ನು ನೋಡಿದಾಗ ಅಥವಾ ಪಂಜಾಬಿನ ಸಾಲುಸಾಲು ಬುಲ್‌ಡೋಜರ್‌ಗಳು ಹರಿಯಾಣಾದತ್ತ ಹೋಗುತ್ತಿದ್ದ ನೀರಾವರಿ ಕಾಲುವೆಯನ್ನು ಮುಚ್ಚಲೆಂದು ಗಿಡಮರಗಳನ್ನು, ಮಣ್ಣುಕಲ್ಲುಗಳನ್ನು ತರಿದು ತುಂಬುತ್ತಿದ್ದಾಗ ನಮಗೆ ಮನುಷ್ಯಲೋಕದ ಹೊಸಹೊಸ ಮಗ್ಗುಲುಗಳು ಕಣ್ಣಿಗೆ ಕಟ್ಟುತ್ತವೆ.
ಮಹಾರಾಷ್ಟ್ರದ ನಾಂದೇಡದ ಹಳ್ಳಿಯೊಂದಕ್ಕೆ ಎಲ್ಲೋ ಐದಾರು ದಿನಗಳಿಗೊಮ್ಮೆ ಟ್ಯಾಂಕರ್ ಬರುತ್ತದೆ. ಆ ಊರಿಗೆ ಬೇರೆ ಜಲಮೂಲವೇ ಇಲ್ಲ. ಟ್ಯಾಂಕರ್ ಬಂದೀತೆಂಬ ನಿರೀಕ್ಷೆಯಿಂದ ಊರ ಹೊರವಲಯದಲ್ಲಿ ಕಾದಿದ್ದ ಹತ್ತಾರು ಯುವಕರು ಅದು ಬರುತ್ತಲೇ ಜಗ್ಗಿ ಮೇಲೆ ಹತ್ತಿ ಕುಳಿತೊ, ನಿಂತೊ, ಜೋತಾಡುತ್ತಲೊ ಹಳ್ಳಿಯ ಮಧ್ಯೆ ಬರುತ್ತಾರೆ.
ಅಲ್ಲಿರುವ ಹೆಂಗಸರು, ಮಕ್ಕಳು ಮನೆಮನೆಯಿಂದ ಹಸುರು, ನೀಲಿ ಬಣ್ಣದ ಉದ್ದುದ್ದ ಪೈಪುಗಳನ್ನು ಮಿಂಚಿನ ವೇಗದಲ್ಲಿ ಎಳೆದು ತರುತ್ತಾರೆ. ಈ ಮೊದಲೇ ಟ್ಯಾಂಕರಿನ ಮೇಲೇರಿ ಕೂತಿರುವ ಯುವಕರು ಅದರ ನೆತ್ತಿಯ ಮೇಲಿನ ಮುಚ್ಚಳ ತೆಗೆದು ಪೈಪೋಟಿಯಲ್ಲಿ ಬಣ್ಣದ ಪೈಪುಗಳ ಒಂದು ತುದಿಯನ್ನು ನೀರಿನಲ್ಲಿ ಅದ್ದುತ್ತಾರೆ.
ರಸ್ತೆಯ ಮೇಲೆ ನಿಂತವರು ಪೈಪಿನ ಇನ್ನೊಂದು ತುದಿಗೆ ಬಾಯಿ ಹಚ್ಚಿ ನೀರನ್ನು ಸೆಳೆಯುತ್ತಿರುತ್ತಾರೆ. ನೂರಕ್ಕೂ ಹೆಚ್ಚು ಪೈಪ್‌ಗಳು ಸುತ್ತಲಿನ 200-300 ಕೊಡ, ಬಕೆಟ್, ತಪ್ಪಲೆ, ಪಿಪಾಯಿಗಳಿಗೆ ನೀರು ಸುರಿಯುತ್ತವೆ. ಟ್ಯಾಂಕರ್ ಬರೀ ನಾಲ್ಕು ನಿಮಿಷಗಳಲ್ಲಿ ಬರಿದಾಗುತ್ತದೆ.
ನೀರಿಗಾಗಿ ಸರ್ಕಸ್, ನೀರಿಗಾಗಿ ನಾಟಕ, ನೀರಿಗಾಗಿ ಕೋರ್ಟುಕಟ್ಟೆ, ನೀರಿಗಾಗಿ ರಾಜಕೀಯ, ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡುವ ದಿನಗಳಿವು. ವರ್ಷ ಕಳೆದಂತೆಲ್ಲ ಇಂಥ ದಿನಗಳು ಹೆಚ್ಚುತ್ತಲೇ ಹೋಗುತ್ತವೆ. ಏಕೆಂದರೆ ನಾವೆಲ್ಲ ಹೆದರಿ ಹೈರಾಣಾಗುವಂಥ ಚಿತ್ರಣಗಳನ್ನು ಪವನ ವಿಜ್ಞಾನಿಗಳು ಕೊಡುತ್ತಿದ್ದಾರೆ.
ಉತ್ತರ ಗೋಲಾರ್ಧದ ಈ ವರ್ಷದ ಚಳಿಗಾಲದ ತಾಪಮಾನ ಹಿಂದಿನ ದಾಖಲೆಗಳನ್ನೆಲ್ಲ ಅಳಿಸಿ ಹಾಕಿಸುವಷ್ಟು ಮೇಲೇರಿತ್ತು. ಕಳೆದ ಫೆಬ್ರುವರಿಯಲ್ಲಿ ಭೂಮಿಯ ಸರಾಸರಿ ಉಷ್ಣತೆ ಎಷ್ಟು ಮೇಲೇರಿತ್ತು ಎಂದರೆ, ಆ ಏರಿಕೆಗೆ ಸಮನಾದ ಹಳೇ ದಾಖಲೆ ಏನಾದರೂ ಇದೆಯೇ ಎಂದು ಪರೀಕ್ಷಿಸಲು ವಿಜ್ಞಾನಿಗಳು ಭೂಮಿಯ 65 ಲಕ್ಷಗಳ ಹಿಂದಿನ ಚರಿತ್ರೆಗಳನ್ನು ತಿರುವಿ ಹಾಕಿ ಕೈ ತಿರುವಿದರು.
ಈಚಿನ ಪ್ಯಾರಿಸ್ ಶೃಂಗಸಭೆಯಲ್ಲಿ ‘ಭೂತಾಪ 2ಡಿಗ್ರಿ ಸೆಲ್ಸಿಯಸ್ ಏರದಂತೆ ತಡೆಯುತ್ತೇವೆ’ ಎಂದು ಎಲ್ಲ 196 ದೇಶಗಳ ಮುಖಂಡರು ಸಹಿ ಹಾಕಿದ್ದು ಅದರ ಶಾಯಿ ಒಣಗುವ ಮೊದಲೇ 1.95 ಡಿಗ್ರಿ ಹೆಚ್ಚಳ ಕಂಡು ಬಂದಿದೆ. ಈ ಪರಿಯ ತಾಪ ವಿಕೋಪಕ್ಕೆ ಎಲ್‌ನೈನೊ ವಿದ್ಯಮಾನವೇ ಕಾರಣವಾಗಿದ್ದು ಈ ಏರಿಕೆ ತಾತ್ಕಾಲಿಕವೆಂದು ಕೆಲವು ತಜ್ಞರು ಹೇಳುತ್ತಿದ್ದಾರೆ ನಿಜ.
ಆದರೆ ಎಲ್‌ನೈನೊ ಪರಿಣಾಮದಿಂದಾಗಿ ಭೂಮಧ್ಯರೇಖೆಗುಂಟ ಅರಣ್ಯ ಮತ್ತು ಕೃಷಿ ಭೂಮಿ ಒಣಗಿ ನಿಂತಿವೆ. ಇಂಡೊನೇಷ್ಯನಿಂದ ಹಿಡಿದು ಥಾಯ್ಲೆಂಡ್‌ವರೆಗೆ ಅನೇಕ ದೇಶಗಳಲ್ಲಿ ವ್ಯಾಪಕ ಕಾಳ್ಗಿಚ್ಚು ಹಬ್ಬಿದೆ. ವಾತಾವರಣಕ್ಕೆ ಇಂಗಾಲದ ಹೆಚ್ಚಿನ ಹೊರೆ ಸೇರ್ಪಡೆಯಾಗುತ್ತ, ತಾಪಮಾನ ಜ್ವಾಲೆಗೆ ತುಪ್ಪ ಸುರಿದಂತಾಗುತ್ತಿದೆ.
ಉಷ್ಣತೆ ಹೆಚ್ಚಿದಂತೆಲ್ಲ ನೀರಿನ ಬಳಕೆ ಹೆಚ್ಚುತ್ತದೆ. ನೀರಿನ ಬಳಕೆ ಹೆಚ್ಚಿದಂತೆಲ್ಲ ಆವಿಯಾಗುವ ಪ್ರಮಾಣವೂ ಹೆಚ್ಚುವುದರಿಂದ ಅದು ವಾತಾವರಣದ ಕಾವನ್ನು ಹೆಚ್ಚಿಸುತ್ತ ಹೋಗುತ್ತದೆ. ನೀರಿನ ಅತಿ ಬಳಕೆ ಎಲ್ಲಿ, ಹೇಗೆ ಆಗುತ್ತಿದೆ ಎಂಬುದನ್ನು ಯಾರೇನೂ ಹೊಸದಾಗಿ ವಿವರಿಸಬೇಕಾಗಿಲ್ಲ. ನೂರು ವರ್ಷಗಳ ಹಿಂದೆ ಪ್ರಪಂಚದ ಜನಸಂಖ್ಯೆ 120 ಕೋಟಿ ಇದ್ದುದು 250ಕ್ಕೆ, 400ಕ್ಕೆ, 520ಕ್ಕೆ ಏರಿ ಈಗ 720 ಕೋಟಿ ದಾಟಿದೆ.
ಈ ಎಲ್ಲ ದೇಹಗಳೂ ಓಡಾಡುವ ನೀರಿನ ಮೂಟೆಗಳೇ ತಾನೆ? ಈ ಜನಕೋಟಿಗೆ ಬೇಕಿದ್ದ ಹಸು, ಹೋರಿ, ಹಂದಿ, ಕುರಿ, ಮೇಕೆಗಳ ಸಂಖ್ಯೆಗಳೂ ಏರುತ್ತ ಹೋಗಿದ್ದು ಅವೂ ನೀರಿನ ಮೂಟೆಗಳೇ ತಾನೆ? ಅದಕ್ಕಿಂತ ಮುಖ್ಯ ವಿಷಯ ಏನೆಂದರೆ ನಾವು ಬಳಸುವ ಎಲ್ಲ ವಸ್ತುಗಳೂ- ಬಟ್ಟೆ, ಕಾಗದ, ಪಾತ್ರೆ, ಪ್ಲಾಸ್ಟಿಕ್, ಪಾದರಕ್ಷೆ, ಬಲ್ಬ್, ಛತ್ರಿ, ಸಿಮ್‌ಕಾರ್ಡ್, ಸ್ಕೂಲ್‌ಬ್ಯಾಗ್, ಪೇಯ, ಪೇಸ್ಟು, ಗೋಡೆಬಣ್ಣ ಇವೆಲ್ಲವೂ ತಯಾರಿಕೆಯ ಹಂತದಲ್ಲೇ ಸಾಕಷ್ಟು ನೀರು ಕುಡಿದಿರುತ್ತವೆ.
ಅಷ್ಟೇ ಅಲ್ಲ, ನಾವು ನಿರ್ಮಿಸಿಕೊಂಡ ಮಹಡಿ ಮನೆ, ರಸ್ತೆ, ಶಾಲೆ, ರೈಲು, ಕ್ರೀಡಾಂಗಣ, ಆಸ್ಪತ್ರೆ, ಕಾರ್ಖಾನೆ ಇವೆಲ್ಲವೂ ಅಪಾರ ಪ್ರಮಾಣದಲ್ಲಿ ನೀರು ಕುಡಿದಿವೆ. ಅವಕ್ಕೆ ಬಳಕೆಯಾದ ನೀರು ಮಲಿನವಾಗಿ, ಬಳಕೆಗೆ ಸಿಗದಂತೆ ಆವಿಯಾಗಿ ಹೋಗಿ ಉಷ್ಣತೆಯನ್ನು ಹೆಚ್ಚಿಸುತ್ತದೆ.
ಒಂದು ಕಿಲೊ ಸಕ್ಕರೆ, ಒಂದು ಲೀಟರ್ ಹಾಲು, ಒಂದು ಕಿಲೊ ಮಾಂಸ ಎಷ್ಟೆಷ್ಟು ನೀರು ಕುಡಿದಿರುತ್ತದೆ ಎಂಬುದನ್ನು ಲೆಕ್ಕ ಹಾಕಿ, ನಮ್ಮನಮ್ಮ ‘ನೀರಹೆಜ್ಜೆ’ (ವಾಟರ್ ಫುಟ್‌ಪ್ರಿಂಟ್) ದಿನದಿನಕ್ಕೆ ಎಷ್ಟೆಷ್ಟು ದೊಡ್ಡದಾಗುತ್ತಿದೆ ಎಂಬ ಕೋಷ್ಟಕಗಳು ಸಿದ್ಧವಾಗಿವೆ. ಅದೇ ರೀತಿ ಒಂದು ಕಿಲೊ ಕರೆನ್ಸಿ ನೋಟು ಎಷ್ಟು ಟಿಎಮ್‌ಸಿ ನೀರನ್ನು ಬಳಸಿ ಚೆಲ್ಲುತ್ತದೆ ಎಂದು ಯಾರೂ ಹೇಳಿಲ್ಲ ಏಕೊ.
ಏಕೆಂದರೆ ನಾವು ಅಭಿವೃದ್ಧಿಯ ಹೊಸ ಹೊಸ ಮೆಟ್ಟಿಲನ್ನು ಏರುತ್ತ ಹೋದಷ್ಟೂ ಜಲಾಶಯಗಳ ಮಟ್ಟ ಹಾಗೂ ಅಂತರ್ಜಲದ ಮಟ್ಟ ಕೆಳಕೆಳಕ್ಕೆ ಇಳಿಯುತ್ತ ಹೋಗುತ್ತದೆ. ಹಾಗೆಯೇ ಜಲಾಶಯಗಳ ಹೂಳಿನ ಮಟ್ಟ, ಶ್ರೀಮಂತರ ನೀರಿನ ಬಳಕೆಯ ಮಟ್ಟ ಹಾಗೂ ಅಂಚಿನಲ್ಲಿರುವವರ ಕಷ್ಟ ಎಲ್ಲವೂ ಹೆಚ್ಚುತ್ತ ಹೋಗುತ್ತದೆ.
ಈಗ ತುಸು ವಿಜ್ಞಾನಕ್ಕೆ ಬರೋಣ. ಏನೆಲ್ಲವನ್ನೂ ಸೃಷ್ಟಿಸಬಲ್ಲ ವಿಜ್ಞಾನಿಗಳು ನೀರನ್ನು ಸೃಷ್ಟಿಸಲಾರರೆ? ಅದು ತೀರಾ ಸುಲಭ! ಜಲಜನಕದ ಎರಡು ಕಣಗಳಿಗೆ ಆಮ್ಲಜನಕದ ಒಂದು ಕಣವನ್ನು ಸೇರಿಸಿ ಕಡ್ಡಿ ಗೀರಿದರೆ ಸಾಕು. ಭುಗ್ಗೆಂದು ಜ್ವಾಲೆ ಎದ್ದು, ಕ್ಷಣಾರ್ಧದಲ್ಲಿ ನೀರಾಗುತ್ತದೆ. ಜಲಜನಕವಂತೂ ಸ್ಫೋಟಕ ಅನಿಲ, ಆಮ್ಲಜನಕ ಅಗ್ನಿಮಿತ್ರ ಅನಿಲ. ಅವೆರಡೂ ಸೇರಿ ಉರಿದಾಗ ಉಳಿಯುವ ಶೇಷವೇ ನೀರು.
ಹಾಗಿದ್ದರೆ ದೊಡ್ಡ ದೊಡ್ಡ ಶಾಖೋತ್ಪನ್ನ ಸ್ಥಾವರಗಳಲ್ಲಿ ಕೊಳಕು ಕಲ್ಲಿದ್ದಲ ಬದಲು ಜಲಜನಕವನ್ನೇ ಇಂಧನವನ್ನಾಗಿ ಉರಿಸಿ ವಿದ್ಯುತ್ತನ್ನೂ ನೀರನ್ನೂ ಪಡೆಯಬಹುದಲ್ಲ? ತಾಂತ್ರಿಕವಾಗಿ ಅದು ತೀರ ಸಲೀಸು ಕೆಲಸವೇನೊ ಹೌದು. ಆದರೆ ಜಲಜನಕವನ್ನು ಎಲ್ಲಿಂದ ತರುತ್ತೀರಿ? ನೆಲದಾಳದಲ್ಲಿ ತಾನಾಗಿ ಅದು ಸೃಷ್ಟಿಯಾಗುವುದಿಲ್ಲ.
ನಮಗೆ ಬೇಕಿದ್ದರೆ ತಿಪ್ಪೆಗುಂಡಿಗಳಿಂದ ಹೊಮ್ಮುವ ಮೀಥೇನ್ ಅನಿಲದಿಂದ ಅದನ್ನು ದುಬಾರಿ ವೆಚ್ಚದಲ್ಲಿ ಪ್ರತ್ಯೇಕಿಸಿ ಬಳಸಬೇಕು. ನೆಲದಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಅದು ಸೃಷ್ಟಿಯಾದರೂ ಅತ್ಯಂತ ಹಗುರ ಅನಿಲವಾದ್ದರಿಂದ ಸೀದಾ ಬಾಹ್ಯಾಕಾಶಕ್ಕೆ ಹೊರಟೇ ಹೋಗುತ್ತದೆ. ಜಲಜನಕದ ಉತ್ಪಾದನೆ ತುಂಬ ದುಬಾರಿ; ಸಮುದ್ರದ ನೀರಿನಿಂದ ಉಪ್ಪಿನಂಶವನ್ನು ತೆಗೆಯುವುದೂ ಅಷ್ಟೇ ದುಬಾರಿ. ಹಾಗಿದ್ದರೆ ನೀರಿನ ಸಮಸ್ಯೆಗೆ ಪರಿಹಾರವೇ ಇಲ್ಲವೆ?
ಜಾಗತಿಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವವರಿಗೆ ಕೊಡಲಾಗುವ ‘ಬ್ಲೂ ಪ್ಲಾನೆಟ್’ ಪ್ರಶಸ್ತಿ ವಿಜೇತ ಪರಿಸರ ತಜ್ಞ ಗುಸ್ತಾವ್ ಸ್ಪೆಥ್ ಹೇಳುವ ಈ ಮಾತುಗಳನ್ನು ಕೇಳೋಣ: ‘ಜೀವಿವೈವಿಧ್ಯ ನಾಶ, ಪರಿಸರ ನಾಶ ಮತ್ತು ತಾಪಮಾನ ಏರಿಕೆ ಈ ಮೂರೇ ಜಗತ್ತಿನ ಅತಿ ದೊಡ್ಡ ಸಮಸ್ಯೆ ಎಂದು ನಾನು ಭಾವಿಸಿದ್ದೆ. ಇನ್ನು 30 ವರ್ಷಗಳಲ್ಲಿ ವಿಜ್ಞಾನ ಈ ಮೂರೂ ಸಮಸ್ಯೆಗಳನ್ನು ಬಗೆಹರಿಸಿಯೇ ತೀರುತ್ತದೆ ಎಂದು ಅಂದುಕೊಂಡಿದ್ದೆ. ಆದರೆ ಈ ಮೂರರಲ್ಲಿ ಯಾವುದೂ ನಿಜವಾದ ಸಮಸ್ಯೆ ಅಲ್ಲವೇ ಅಲ್ಲವೆಂದು ಈಗ ಗೊತ್ತಾಗುತ್ತಿದೆ.
ನಮ್ಮೆಲ್ಲರ ದುರಾಸೆ, ಅತಿಸ್ವಾರ್ಥ ಮತ್ತು ನಿರಾಸಕ್ತಿಯೇ ಜಗತ್ತಿನ ಸಂಕಟಕ್ಕೆ ಕಾರಣಗಳೆಂದು ಇದೀಗ ಗೊತ್ತಾಗುತ್ತಿದೆ. ಮನುಷ್ಯನಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಪರಿವರ್ತನೆಯಾದರೆ ಮಾತ್ರ ಇದನ್ನು ಪರಿಹರಿಸಬಹುದೇನೊ. ಅದು ಹೇಗೆಂದು ನಮಗಂತೂ ಗೊತ್ತಿಲ್ಲ.’
ಯಾರಿಗಾದರೂ ಗೊತ್ತಿದ್ದರೆ ತಿಳಿಸಬಹುದು. ದಾಖಲೆಯ ಮಟ್ಟಿಗೆ ಹೇಳುವುದಾದರೆ ಈಗ ರಾಷ್ಟ್ರದಾದ್ಯಂತ ನಡೆದ ‘ಸಾಂಸ್ಕೃತಿಕ ಹೋಳಿ’ ಹಬ್ಬವೇ ಅತ್ಯಂತ ಹೆಚ್ಚು ಪ್ರಮಾಣದ ನೀರನ್ನು ಮಲಿನ ಮಾಡಿ ಬಿಸಾಕಿದೆ. ಬೆಂಗಳೂರಿನ ಪೂರ್ಣಪ್ರಮತಿ ಶಾಲೆಯಲ್ಲಿ ಮಾತ್ರ ಪ್ರಾಯೋಗಿಕವಾಗಿ ಪಾಲಕರು, ಮಕ್ಕಳೆಲ್ಲ ಸೇರಿ ‘ಒಣ ಹೋಳಿಹಬ್ಬ’ವನ್ನು ಆಚರಿಸಿದರು. ನೀರಿನ ಮಿತಬಳಕೆ, ಕೆಮಿಕಲ್‌ರಹಿತ ಬಣ್ಣಗಳ ಬಳಕೆಯ ಮಹತ್ವವನ್ನು ನಾಳಿನ ಪೀಳಿಗೆಗೆ ಹಬ್ಬಗಳ ಮೂಲಕವೇ ತಿಳಿಸಬೇಕೆಂಬ ಅಂಥ ತುಡಿತಗಳು ಬೇರೆಲ್ಲಾದರೂ ಕಂಡರೆ ತಿಳಿಸಬಹುದು.
ಮೊನ್ನೆ ಮಾರ್ಚ್ 22ರಂದು ಬೆಂಗಳೂರಿನ ಎರಡು ಮೂರು ಕಡೆ (ಮಾತ್ರ) ‘ವಿಶ್ವ ಜಲ ದಿನ’ವನ್ನು ಆಚರಿಸಲಾಯಿತು. ಅಂದರೆ ಮಾಮೂಲಿನಂತೆ ಭಾಷಣ, ವಿಚಾರ ಸಂಕಿರಣಗಳು ನಡೆದವು. ಇತರ ದೊಡ್ಡ ನಗರಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಮಟ್ಟದಲ್ಲಿ ಅದೂ ಆಗಿರಲಿಲ್ಲವೇನೊ. ಶಿಕ್ಷಣ ಇಲಾಖೆಗೆ ಅವೆಲ್ಲ ಲೆಕ್ಕಕ್ಕೇ ಬಂದಿರಲಿಕ್ಕಿಲ್ಲ.
ಜಲದಿನ ಒಂದೇ ಅಲ್ಲ, ಮಾರ್ಚ್ 21ರಂದು ಅರಣ್ಯ ದಿನ, 22ರಂದು ಜಲದಿನ, 23ರಂದು (ನಿನ್ನೆ) ಪವನ ವಿಜ್ಞಾನ ದಿನ ಹೀಗೆ ಮೂರು ಮಹತ್ವದ ದಿನಗಳು ಸಾಲಾಗಿ ಪ್ರತಿವರ್ಷ ಬರುತ್ತವೆ. ಈ ಮೂರಕ್ಕೂ ಪರಸ್ಪರ ನೇರ ತಳಕು ಇರುವುದಿಂದ ವಿಶ್ವಸಂಸ್ಥೆ ಇವನ್ನು ಸಾಲಾಗಿ ಇಟ್ಟಿದೆ.
ನೀರಿನ ಅಭಾವದ ಬಿಸಿ ನೇರವಾಗಿ ತಟ್ಟತೊಡಗಿದ್ದರಿಂದ ಸರಿ, ಅದೊಂದಕ್ಕಾದರೂ ಈ ವರ್ಷ ಕೆಲವರು ಗಮನ ಹರಿಸಿದ್ದು ಒಳ್ಳೆಯದೇ ಆಯಿತು. ಆದರೆ ಒಬ್ಬ ಅರಣ್ಯ ಸಚಿವರು, ಒಂದೂವರೆ ಗಂಟೆಯ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಸಾಕೆ? ಸರ್ಕಾರದ ಎಲ್ಲ ಸಚಿವರಿಗೂ ಎಲ್ಲ ಇಲಾಖೆಗೂ ನೀರಿನೊಂದಿಗೆ ಸಂಬಂಧ ಇದ್ದೇ ಇದೆ.
ಕೃಷಿ, ಪಶುಸಂಗೋಪನೆ, ರೇಷ್ಮೆ, ನೀರಾವರಿ, ಗಣಿ, ಇಂಧನ, ಉದ್ಯಮ, ಪ್ರವಾಸೋದ್ಯಮ, ಶಿಕ್ಷಣ ಹೀಗೆ ಅಷ್ಟೊಂದು ಇಲಾಖೆಗಳಿಗೆ ನೀರಿನ ಅಭಾವದ ಅಥವಾ ಮಾಲಿನ್ಯದ ಬಿಸಿ ತಟ್ಟುತ್ತಿರುವಾಗ, ವಿಧಾನ ಸಭೆಯ ಅಧಿವೇಶನದಲ್ಲಿ ಒಂದಿಡೀ ದಿನವನ್ನು ಅದರ ಸಂಬಂಧ ಚರ್ಚೆಗೆ ಮೀಸಲಿಡಬಾರದೆ?
ಸದನದಲ್ಲಿ ದಿನಾ ನೀರಿನ ವಾಗ್ವಾದ ನಡೆಯುತ್ತಲೇ ಇರುತ್ತದೆ, ಈ ಬಾರಿ ಮುಂಗಡಪತ್ರದಲ್ಲೂ ನೀರಿನ ಉಳಿತಾಯಕ್ಕೆ ಸಾಕಷ್ಟು ಒತ್ತು ಕೊಡಲಾಗಿದೆ; ಅದಕ್ಕೆ ‘ಪ್ರತ್ಯೇಕ ಚರ್ಚೆ ಯಾಕೆ?’ ಎಂದು ಶಾಂತಿನಗರದ ಶಾಸಕ ಹ್ಯಾರಿಸ್ ಕೇಳುತ್ತಾರೆ. ಅದು ಹಾಗಲ್ಲ. ಪ್ರತಿಯೊಂದು ಇಲಾಖೆಯೂ ನೀರಿನ ಮಿತವ್ಯಯಕ್ಕೆ, ಸಂರಕ್ಷಣೆಗೆ, ಶುದ್ಧಿಗೆ ತಾನೇನೇನು ಕ್ರಮ ಕೈಗೊಳ್ಳುತ್ತೇನೆ ಎಂಬುದರ ಬಗ್ಗೆ ಪ್ರತ್ಯೇಕ (ಶ್ವೇತಪತ್ರ ಅಲ್ಲದಿದ್ದರೆ) ಶಪಥಪತ್ರವನ್ನು ಹೊರಡಿಸಬೇಕು.
ಡಿಸೆಂಬರಿನ ಪ್ಯಾರಿಸ್ ಸಮ್ಮೇಳನಕ್ಕೆ ತುಸು ಮುಂಚೆ ಎಲ್ಲ ದೇಶಗಳಿಗೂ ವಿಶ್ವಸಂಸ್ಥೆ ಅಂಥದ್ದೊಂದು ಸವಾಲು ಹಾಕಿತ್ತು: ‘ನೀವು ಯಾವ ಯಾವ ರೀತಿಯಲ್ಲಿ ಇಂಗಾಲದ ಪ್ರಮಾಣವನ್ನು ತಗ್ಗಿಸಲಿದ್ದೀರಿ ಎಂದು ತಿಳಿಸುವ ಶಪಥಪತ್ರದೊಂದಿಗೆ ಶೃಂಗಸಭೆಗೆ ಬನ್ನಿ’ ಎಂದು ಹೇಳಿತ್ತು.
ಭಾರತದ ಪತ್ರವನ್ನು ಎಲ್ಲರೂ ಶ್ಲಾಘಿಸಿದ್ದರು. ಅದೇರೀತಿ ಕರ್ನಾಟಕದ ಮುಖ್ಯಮಂತ್ರಿಯವರು ನೀರಿನ ಕುರಿತು ಅಂಥದ್ದೇ ಪ್ರಶ್ನೆಯನ್ನು ಎಲ್ಲ ಇಲಾಖೆಗಳಿಗೆ ಕಳಿಸಿ, ಉತ್ತರ ತರಿಸಿ ವಿಶೇಷ ಜಲ ಮುಂಗಡಪತ್ರವನ್ನು ಚರ್ಚಿಸಿದರೆ ಅದು ರಾಷ್ಟ್ರಕ್ಕೇ ಒಂದು ಮಾದರಿಯಾಗಬಹುದು.
ಶಾಂತಸಾಗರದ ಮಾರ್ಷಲ್ ದ್ವೀಪ ರಾಷ್ಟ್ರದಲ್ಲಿ ನೀರಿಗಾಗಿಯೇ ತುರ್ತುಸ್ಥಿತಿಯನ್ನು ಘೋಷಿಸಲಾಗಿದೆ. ಇಲ್ಲೂ ಅಂಥ ಸ್ಥಿತಿ ಬರುವವರೆಗೆ ನಾವು ಕಾಯಬೇಕೆ?