ದೇಶಪ್ರೇಮದ ಹೆಸರಲ್ಲಿ ಬ್ಲ್ಯಾಕ್‌ಮೇಲ್‌-ದೇವನೂರ ಮಹಾದೇವ ಆಕ್ರೋಶ

[ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡರ ಬಂಧನ ಹಾಗೂ ‘ದೇಶದ್ರೋಹ’ದ ಆಪಾದನೆಯನ್ನು ಖಂಡಿಸಿ ಮೈಸೂರಿನ ಗಾಂಧಿಚೌಕದಲ್ಲಿ ಜಂಟಿ ಕ್ರಿಯಾ ಸಮಿತಿ 29.3.2015 ಗುರುವಾರ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ದೇವನೂರ ಮಹಾದೇವ ಮಾತನಾಡಿದರು.-ಪ್ರಜಾವಾಣಿ ವಾರ್ತೆ]
 ಮೈಸೂರು: ದೇಶಪ್ರೇಮದ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌ ಮಾಡಲಾಗುತ್ತಿದ್ದು, ನೈಜ ರಾಷ್ಟ್ರಾಭಿಮಾನಿಗಳ ಧ್ವನಿ ಕ್ಷೀಣವಾಗಿದೆ ಎಂದು ಸಾಹಿತಿ ದೇವನೂರ ಮಹಾದೇವ ಕಳವಳ ವ್ಯಕ್ತಪಡಿಸಿದರು.

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡರ ಬಂಧನ ಹಾಗೂ ‘ದೇಶದ್ರೋಹ’ದ ಆಪಾದನೆಯನ್ನು ಖಂಡಿಸಿ ಇಲ್ಲಿನ ಗಾಂಧಿಚೌಕದಲ್ಲಿ ಜಂಟಿ ಕ್ರಿಯಾ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಭುತ್ವಕ್ಕೆ ಬೇಡವಾದ ವಿಚಾರವನ್ನು ಯಾರೂ ಮಾತನಾಡುವಂತಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ. ಪ್ರಭುತ್ವ ಹಾಗೂ ಅವರ ಸಿದ್ಧಾಂತ ವಿರೋಧಿಸುವವರ ಬಗೆಗೆ ಅಸಹನೆ ಹೆಚ್ಚಾಗುತ್ತಿದೆ. ಇದು ಅಸಹಿಷ್ಣುತೆಗೆ ಕಾರಣವಾಗುತ್ತಿದೆ. ಇದರಿಂದ ದೇಶದಲ್ಲಿ ತಾಲಿಬಾನ್‌, ಹಿಟ್ಲರ್‌ ಸಂಸ್ಕೃತಿ ಹುಟ್ಟಿಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶ ವಿರೋಧಿ ಘೋಷಣೆ ಕೂಗಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಎಂಬ ಸುದ್ದಿ ದೃಶ್ಯ ಮಾಧ್ಯಮವೊಂದರಲ್ಲಿ ಪ್ರಕಟವಾಗಿದೆ. ಆದರೆ, ದೇಶದ ಮೂಲನಿವಾಸಿಗಳು, ದೇಶಪ್ರೇಮಿಗಳ ಮೇಲೆ ರಾಷ್ಟ್ರದ್ರೋಹದ ಆರೋಪ ಹೊರಿಸಲಾಗಿದೆ. ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದರು.

ಹೈದರಾಬಾದ್‌ ಕೇಂದ್ರೀಯ ವಿವಿ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆಯ ಹಿಂದಿನ ಸಂಕಟ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಅರ್ಥವಾಗಿಲ್ಲ. ಹೀಗಾಗಿ, ಸಂಸತ್ತಿನಲ್ಲಿ ಅವರು ಭಾವಾವೇಶದಿಂದ ಮಾತನಾಡಿದ್ದಾರೆ. ರೋಹಿತ್‌ ಆತ್ಮಹತ್ಯೆಗೆ ಕಾರಣಗಳೇ ಇಲ್ಲ ಎಂಬ ನಿರ್ಧಾರಕ್ಕೆ ಬರುವುದು ಸರ್ಕಾರದ ಕ್ರೌರ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ಇದು ಭ್ರಮಾವಾದಿಗಳು ಹಾಗೂ ವಾಸ್ತವವಾದಿಗಳ ಸಂಘರ್ಷದ ಕಾಲ. ರಾಷ್ಟ್ರಭಕ್ತಿಯ ನೆಪದಲ್ಲಿ ಧರ್ಮದ ವಿಚಾರಗಳನ್ನು ಬಿತ್ತುವ ಹುನ್ನಾರ ನಡೆಯುತ್ತಿದೆ. ಎಡಪಂಥೀಯ ಮತ್ತು ಪ್ರಗತಿಪರರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಗುಡಿ ಕಟ್ಟುವುದೇ ರಾಷ್ಟ್ರಪ್ರೇಮ ಎನ್ನುವುದಾದರೆ ಗಾಂಧೀಜಿಯನ್ನು ರಾಷ್ಟ್ರದ್ರೋಹಿ ಪಟ್ಟಿಗೆ ಸೇರಿಸುತ್ತೀರಾ ಎಂದು ಪ್ರಶ್ನಿಸಿದರು.

ವಿಶ್ವವಿದ್ಯಾಲಯದ ಬಗೆಗೆ ಆರೋಪ ಮಾಡುತ್ತ ವಿದ್ಯಾರ್ಥಿಗಳ ಕನಸು ಹಾಗೂ ಭವಿಷ್ಯವನ್ನು ಹೊಸಕಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ವಿಚಾರಗಳಲ್ಲಿ ಸರ್ಕಾರ ತಳೆಯುವ ದ್ವಿಮುಖ ನೀತಿ ದೇಶವನ್ನು ಹಾಳು ಮಾಡುತ್ತಿದೆ. ಅಸಹಿಷ್ಣುತೆಯ ಹೆಸರಲ್ಲಿ ಎಷ್ಟು ಮಂದಿಯನ್ನು ಬಲಿ ತೆಗೆದುಕೊಳ್ಳಲು ಸಾಧ್ಯ? ನಿಮಗೆ ಎಷ್ಟು ತಲೆಗಳು ಬೇಕು ಹೇಳಿ ನಾವು ಬಂದು ನಿಲ್ಲುತ್ತೇವೆ ಎಂದು ಆಕ್ರೋಶ ಹೊರಹಾಕಿದರು.

ರಂಗಕರ್ಮಿ ಪ್ರೊ.ಎಸ್‌.ಆರ್‌. ರಮೇಶ್‌, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ಬಸವರಾಜು, ಎಐಡಿವೈಒ ರಾಜ್ಯ ಉಪಾಧ್ಯಕ್ಷೆ ಉಮಾದೇವಿ, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌, ಎಸ್‌ಡಿಪಿಐ ಮುಖಂಡ ದೇವನೂರ ಪುಟ್ಟನಂಜಯ್ಯ, ಸಮತಾ ವೇದಿಕೆಯ ರತಿರಾವ್‌ ಪಾಲ್ಗೊಂಡಿದ್ದರು.

[ಮೈಸೂರಿನ ಗಾಂಧಿ ಚೌಕದಲ್ಲಿ ಎಡಪಕ್ಷಗಳ ಜಂಟಿ ಕ್ರಿಯಾ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಖಂಡನಾ ಸಭೆಯಲ್ಲಿ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ, ದೇವನೂರ ಮಹಾದೇವ ಭಾಗವಹಿಸಿದ್ದರು]