ಮಹಾದೇವ ಅವರ ”ಎದೆಗೆ ಬಿದ್ದ ಅಕ್ಷರ” ಪುಸ್ತಕ ಬಿಡುಗಡೆ ಕಾರ್ಯಕ್ರಮ -ಪ್ರಜಾವಾಣಿ ವರದಿ

ಇಲ್ಲಿ ನೋಡಿ
ಕೇರಿ ಮಕ್ಕಳಲ್ಲಿ ಅಂಬೇಡ್ಕ‌ರ್ ಹುಡುಕಿ-ವಿದ್ಯಾವಂತ ದಲಿತ ಸಮುದಾಯಕ್ಕೆ ದೇವನೂರ ಮಹಾದೇವ ಕಿವಿಮಾತು
[ಬೆಂಗಳೂರಿನಲ್ಲಿ 3.2.2013ರಂದು ನಡೆದ ದೇವನೂರ ಮಹಾದೇವ ಅವರ “ಎದೆಗೆ ಬಿದ್ದ ಅಕ್ಷರ” ಪುಸ್ತಕ ಬಿಡುಗಡೆ ಸಂದರ್ಭದ -4.2.2013ರ ಪ್ರಜಾವಾಣಿ ವರದಿ]
ಬೆಂಗಳೂರು: `ತಳ ಸಮುದಾಯದ ವಿದ್ಯಾವಂತರು ಪ್ರತಿಮೆ, ವೃತ್ತ, ಮಾರ್ಗ ಹಾಗೂ ಪುಸ್ತಕದಲ್ಲಿ ಅಂಬೇಡ್ಕರ್ ಅವರನ್ನು ಹುಡುಕದೆ ದಲಿತ ಕಾಲೊನಿಗಳಲ್ಲಿ ಅನ್ನ-ವಿದ್ಯೆ ಇಲ್ಲದೆ ಓಡಾಡುವ ಪುಟ್ಟ ಮಕ್ಕಳಲ್ಲಿ ಕಾಣಬೇಕು’ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಕಿವಿಮಾತು ಹೇಳಿದರು.
ದಲಿತ ಸಂಘಟನೆಗಳ ಒಕ್ಕೂಟ ಮತ್ತು ಅಭಿನವ ಸಂಸ್ಥೆ ಜೊತೆಯಾಗಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ “ಸಮಾನತೆಯ ಕನಸು ಕಾಣುತ್ತಾ” ಸಂವಾದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
`ವಿದ್ಯಾವಂತ ದಲಿತರು ಅಂಬೇಡ್ಕರ್ ಅವರ ಪುಸ್ತಕದ ಪೂಜೆ ಇಲ್ಲವೆ ವೃತ್ತಗಳಿಗೆ ಅವರ ಹೆಸರು ಇಡುವಲ್ಲಿಯೇ ಭಾವತೃಪ್ತಿ ಕಾಣುತ್ತಾರೆ. ಅಂಬೇಡ್ಕರ್ ನೆನಪಿನಲ್ಲಿ ಅವರ ಈ ಅನುಯಾಯಿಗಳೆಲ್ಲ ತಾವು ಹುಟ್ಟಿದ ಊರು ನೋಡಬೇಕು. ದಲಿತ ಕಾಲೊನಿಗಳತ್ತ ಹೊರಳಬೇಕು. ಬೀದಿಯಲ್ಲಿ ಅಲೆದಾಡುವ ಪುಟ್ಟ-ಪುಟ್ಟ ಮಕ್ಕಳಲ್ಲಿ ಅಂಬೇಡ್ಕರ್ ಮೊಳಕೆ ಒಡೆಯುವುದನ್ನು ಗಮನಿಸಬೇಕು. ಅಂತಹ ಅಂಬೇಡ್ಕರರಿಗೆ ನೀರು ಎರೆದು ಕಾಪಾಡಬೇಕು’ ಎಂದರು.
`ಆಯಾ ತಾಲ್ಲೂಕಿನ ತಳಸಮುದಾಯದ ವಿದ್ಯಾವಂತರು ತಮ್ಮ ಶಕ್ತಿಗೆ ತಕ್ಕಷ್ಟು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರಬೇಕು. ಇಂತಹ ನಡೆಯಿಂದಲೇ ಸಮಾನತೆ ಕನಸು ಮತ್ತೆ ಕಾಣಬೇಕು’ ಎಂದು ಪ್ರತಿಪಾದಿಸಿದರು.
ವ್ಯಂಗ್ಯಚಿತ್ರದ ವಿಶ್ಲೇಷಣೆ:
ಪಠ್ಯಪುಸ್ತಕದಲ್ಲಿ ಪ್ರಕಟವಾಗಿದ್ದ ಬಸವನಹುಳು ಮೇಲೆ ಅಂಬೇಡ್ಕರ್ ಕುಳಿತ ಶಂಕರ್ ಅವರ ವ್ಯಂಗ್ಯಚಿತ್ರದ ವಿಷಯ ಪ್ರಸ್ತಾಪಿಸಿದ ಅವರು,
`ವ್ಯಂಗ್ಯಚಿತ್ರಕಾರರು ಗೇಲಿ ಮಾಡಿದ್ದು ಜವಾಹರಲಾಲ್ ನೆಹರೂ ಅವರನ್ನೇ ಹೊರತು ಅಂಬೇಡ್ಕರ್ ಅವರನ್ನಲ್ಲ. ಆಳವಾಗಿ ವಿಷಯ ತಿಳಿಯದೆ ವಿರೋಧ ಸಲ್ಲ’ ಎಂದು ತಿಳಿಸಿದರು.
`ಸಂವಿಧಾನದ ಕರಡು ಸಮಿತಿಯಲ್ಲಿದ್ದ ಕೆಲವರು ಕಾಯಿಲೆ ಬಿದ್ದರೆ, ಒಬ್ಬರು ವಿದೇಶಕ್ಕೆ ಹಾರಿದರು. ಇನ್ನೊಬ್ಬರು ರಾಜಕೀಯದಲ್ಲಿ -ಪ್ರಾಯಶಃ ನೆಹರೂ ಅವರೇ ಇರಬೇಕು – ಸಕ್ರಿಯವಾದರು. ಕೊನೆಗೆ ಉಳಿದವರು ಅಂಬೇಡ್ಕರ್ ಒಬ್ಬರೇ. ವಸ್ತುಸ್ಥಿತಿ ಹೀಗಿದ್ದೂ ನೆಹರೂ ಚಾಟಿ ಹಿಡಿದರಲ್ಲ ಎಂಬುದಾಗಿ ಚಿತ್ರದಲ್ಲಿ ಜನ ಸಹ ನಗುತ್ತಿದ್ದಾರೆ. ಕರಡು ಸಮಿತಿ ಸದಸ್ಯರಾಗಿದ್ದ ನೆಹರೂ ಅವರ ವೈಫಲ್ಯವೂ ಚಿತ್ರದಲ್ಲಿ ಪ್ರತಿಬಿಂಬಿತವಾಗಿದೆ’ ಎಂದು ಅಭಿಪ್ರಾಯಪಟ್ಟರು.
`ಅರುಣ್ ಶೌರಿ ಅವರಂತಹ ಸಂಘ ಪರಿವಾರದ ಜನಕ್ಕೆ ಈ ಚಿತ್ರವನ್ನು ಹೀಗೂ ನೋಡಬಹುದು ಎನ್ನುವುದನ್ನು ಕಲಿಸಬೇಕಿದೆ’ ಎಂದು ಹೇಳಿದರು.
ಆಶಿಶ್ ದಲಿತ ವಿರೋಧಿ ಅಲ್ಲ:
`ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಆಶಿಶ್ ನಂದಿ ತಳಸಮುದಾಯದಿಂದ ಬಂದ ಒಬ್ಬ ನೌಕರನಂತೆ ಮಾತನಾಡಿದ್ದಾರೆ. ಆಳದಲ್ಲಿ ಅವರು ದಲಿತ ವಿರೋಧಿ ಅಲ್ಲ. ಅವರ ವಿರುದ್ಧ ಕೇಸು ಬಿದ್ದಿದೆ. ಏನು ಮಾಡುವುದು’ ಎಂದು ಪ್ರಶ್ನೆ ಎತ್ತಿದರು.
`ಇಂದಿನ ದಿನಮಾನದಲ್ಲಿ ನಾವು ಸಂಪೂರ್ಣವಾಗಿ ವ್ಯವಧಾನ ಕಳೆದುಕೊಂಡಿದ್ದೇವೆ. ಮಾಧ್ಯಮದ `ಬೈಟ್’ (ಕಚ್ಚುವುದು) ಹಾವಳಿ ಹೆಚ್ಚಾಗಿದೆ. ಸುದ್ದಿ ಸೃಷ್ಟಿಸಬೇಕೆಂದೇ ಕಾರ್ಯಕ್ಕೆ ಇಳಿಯುವ ಪ್ರವೃತ್ತಿ ತುಂಬಿಕೊಂಡಿದೆ’ ಎಂದು ಮಾಧ್ಯಮ ರಂಗವನ್ನು ಕುಟುಕಿದರು.
ಅಲ್ಪ ತೃಪ್ತಿ ಬೇಡ:
ಸಂವಾದದಲ್ಲಿ ಮಾತನಾಡಿದ `ಪ್ರಜಾವಾಣಿ’ ಸಂಪಾದಕ ಕೆ.ಎನ್‌. ಶಾಂತಕುಮಾರ್, `ಮಾಧ್ಯಮದಲ್ಲಿ ಪ್ರಾತಿನಿಧ್ಯ ಸಿಕ್ಕ ಮಾತ್ರಕ್ಕೆ ತಳಸಮುದಾಯದ ಜನ ಅಲ್ಪ ತೃಪ್ತಿ ಹೊಂದಬಾರದು. ಅದರ ಹೃದಯ ಅಲಂಕರಿಸಬೇಕು. ಅಂದಾಗ ಅಂತಹ ಬಯಕೆಗೆ ಅರ್ಥ ಬರುತ್ತದೆ. ಫಲಶ್ರುತಿ ಸಹ ಪರಿಣಾಮಕಾರಿಯೇ ಆಗಿರುತ್ತದೆ’ ಎಂದು ಪ್ರತಿಪಾದಿಸಿದರು.
`ದೇಶದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಇರುವುದು ತಳಸಮುದಾಯ. ಹೀಗಿದ್ದೂ ಅವರ ಪ್ರಮಾಣಕ್ಕೆ ತಕ್ಕಷ್ಟು ಮಾಧ್ಯಮದಲ್ಲಿ ಸ್ಥಳಾವಕಾಶ ಸಿಕ್ಕಿಲ್ಲ ಎನ್ನುವ ರಾಬಿನ್ ಜೆಫ್ರಿ ಅವರ ಮಾತು ನನ್ನನ್ನು ತಟ್ಟಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗ ಮತ್ತು ಸಹೋದ್ಯೋಗಿಗಳು ನೀಡಿದ ಸಹಕಾರದಿಂದ ದಲಿತ ಸಂಚಿಕೆ ಅರ್ಥಪೂರ್ಣವಾಗಿ ಸಾಕಾರಗೊಳ್ಳಲು ಸಾಧ್ಯವಾಯಿತು’ ಎಂದರು.
`ಮಾಧ್ಯಮ ರಂಗದಲ್ಲಿ ದಲಿತರು ಎಷ್ಟು ಜನ ಇದ್ದಾರೆ ಎನ್ನುವ ಜೆಫ್ರಿ ಅವರ ಮಾತು ಇನ್ನೂ ಕಾಡುತ್ತಿದೆ’ ಎಂದರು.
ವಿಷಯ ಪ್ರಸ್ತಾಪಿಸಿದ ಗುರುಪ್ರಸಾದ್‌ ಕೆರೆಗೋಡು, `ದಲಿತ ಚಳವಳಿಗಳು ಕಾವು ಕಳೆದುಕೊಂಡಿವೆ ಎನ್ನುವ ನೋವು ಕಾಡುವಾಗಲೇ ಮತ್ತೆ ಸಂಘಟನೆ ಕ್ರಿಯಾಶೀಲವಾಗಿದ್ದು ನೆಮ್ಮದಿ ತಂದಿದೆ’ ಎಂದರು.
ಮಾತು- ವಂಚನೆ
`ಸಿಬಿಐ ದಾಳಿ ನಡೆದಾಗ ಈಶ್ವರಪ್ಪ ಮನೆಯಲ್ಲಿ ನೋಟು ಎಣಿಸುವ ಯಂತ್ರ ಸಿಕ್ಕಿತಂತೆ. `ಮನೆಯಲ್ಲಿ ಇದು ಏಕೆ’ ಎಂದು ಕೇಳಿದರೆ, `ಮಕ್ಕಳು ಆಡಲಿಕ್ಕೆ’ ಎಂದು ಅವರು ಉತ್ತರ ಕೊಟ್ಟರಂತೆ. ಇನ್ನೊಂದೆಡೆ ಯಡಿಯೂರಪ್ಪ “ಛೇ, ಏನ್ರೀ ಈ ಶೆಟ್ಟ‌ರ್ ಕುರ್ಚಿಗೆ ಎಷ್ಟೊಂದು ಅಂಟಿಕೊಂಡಿದ್ದಾರೆ. ಅವರಿಗೆ ವಿಪರೀತ ಅಧಿಕಾರ ದಾಹ’ ಎಂದರಂತೆ. ಎರಡೂ ಮಾಧ್ಯಮದಿಂದ ತಿಳಿದಿದ್ದು. ಮಾತು ಎಂದರೆ ವಂಚನೆ ಎಂಬುದಕ್ಕೆ ಇವೆರಡು ತಕ್ಕ ಉದಾಹರಣೆಗಳು’ ಎಂದು ದೇವನೂರ ಮಹಾದೇವ ಗೇಲಿ ಮಾಡಿದರು.