ಉದಾರವಾದಿ ಮನಸ್ಸುಗಳು ಸೋತದ್ದೆಲ್ಲಿ?
[ಚಂದ್ರಶೇಖರ ಐಜೂರ್ 2025ರ ಏಪ್ರಿಲ್ 20ರಂದು ದೇವನೂರ ಮಹಾದೇವ ಅವರ ಮನೆಗೆ ಹೋದಾಗ ನಡೆಸಿದ ಮಾತುಕತೆಯ ಒಂದು ತುಣುಕು ನಮ್ಮ ಮರು ಓದಿಗಾಗಿ… ಕೃಪೆ- ಚಂದ್ರಶೇಖರ ಐಜೂರ್ ಅವರ ಫೇಸ್ ಬುಕ್ ಪುಟ ]
ಐಜೂರ್: ಕುವೆಂಪು, ತೇಜಸ್ವಿ, ಲಂಕೇಶರೊಂದಿಗೆ ಇದ್ದವರು, ಗುರುತಿಸಿಕೊಂಡವರೆಲ್ಲ ಕಾಲ ಬದಲಾದಂತೆ ಜಾತಿವಾದಿಗಳಾಗಿ ಬದಲಾದರಲ್ಲ! ಇದು ಹೇಗೆ ಸಾಧ್ಯವಾಯ್ತು ಸಾರ್? ಇದು ಅಷ್ಟು ಸಲೀಸೇ?
ದೇವನೂರ ಮಹಾದೇವ: ಯಾರು ಅಂಥವರು? ಒಂದೆರಡು ಹೆಸರು ಹೇಳಿ?
ಐಜೂರ್: ಖುದ್ದು ಕುವೆಂಪು ಅವರ ಖಾಸ ಶಿಷ್ಯ ಒಬ್ಬರು ಇದ್ದರಲ್ಲಾ ಸಾರ್…
ದೇ.ಮ.: (ಗೊತ್ತಾಯ್ತು ಅನ್ನುವಂತೆ) ನೋಡಿ ಈ ಮಠದ ಕಲ್ಪನೆ ಒಕ್ಕಲಿಗರನ್ನು ಆವರಿಸಿಕೊಳ್ಳುವ ಮುನ್ನ ಅವರಲ್ಲಿ ಹೆಚ್ಚು ಉದಾರವಾದಿ ನಿಲುವುಗಳಿದ್ದವು. ಎಸ್ಸೆಮ್ ಕೃಷ್ಣ ಅವರ ತಂದೆ ಸೋಮನಹಳ್ಳಿ ಮಲ್ಲಯ್ಯ ಅವರಷ್ಟು ಉದಾರವಾದಿಗಳು ನೀವು ಆ ಕಾಲಘಟ್ಟದಲ್ಲಿ ಇನ್ಯಾರಲ್ಲೂ ಕಾಣಲಾರಿರಿ. ಒಂದು ಕಾಲದಲ್ಲಿ ಮಂಡ್ಯ ಜಿಲ್ಲೆಯ ಒಕ್ಕಲಿಗರಲ್ಲಿ ಇದ್ದಷ್ಟು ಉದಾರವಾದಿ, ಜಾತ್ಯತೀತ ನಿಲುವುಗಳು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಅನ್ನುವಂತಿತ್ತು. ಇಂಥ ಉದಾರವಾದಿ ಮನಸ್ಸುಗಳನ್ನು ಬಲಿ ಪಡೆದದ್ದು ಮಾತ್ರ ಮಠಗಳು.
ಐಜೂರ್: ಜಾತಿವಾದಿಗಳಾಗಿದ್ದವರು ಸಲೀಸಾಗಿ ಕೋಮುವಾದಿಗಳಾದರು. ಈಗ ಇದೇ ಮಂಡ್ಯದ ಒಕ್ಕಲಿಗರು ಜಾತಿವಾದ-ಕೋಮುವಾದ ಎರಡಕ್ಕೂ ನೀರು ಗೊಬ್ಬರ ಹಾಕುತ್ತಿದ್ದಾರಲ್ಲಾ ಸಾರ್…
ದೇ.ಮ.: ಇದನ್ನು ನಾವು ಅತಂಕದಿಂದಲೇ ನೋಡಬೇಕಿದೆ. ಮಂಡ್ಯದ ಉದಾರವಾದಿ ಮನಸ್ಸಿನ ಒಕ್ಕಲಿಗರು ಸೋತದ್ದೆಲ್ಲಿ ಅನ್ನುವುದನ್ನು ನೋಡಬೇಕಿದೆ. ಇದಕ್ಕೆ ಮಂಡ್ಯದ ಜಾತಿ ರಾಜಕಾರಣ ಮತ್ತು ಅಲ್ಲಿನ ಮಠಗಳು ಕೊಟ್ಟ ಕೊಡುಗೆಯೇನೂ ಕಮ್ಮಿಯಲ್ಲ.
( ಮೊನ್ನೆ ನಟರಾಜ್ ಹುಳಿಯಾರ್ ಅವರು ದೇವನೂರ ಮಹಾದೇವ ಅವರಿಗೆ ಕೊಡಲೇಬೇಕೆಂದು ಕೆ.ವಿ.ಸುಬ್ಬಣ್ಣ ಅವರು ಅನುವಾದಿಸಿರುವ ರಾಮಮನೋಹರ ಲೋಹಿಯಾರ ‘ರಾಜಕೀಯ ಮಧ್ಯೆ ಬಿಡುವು’ ಪುಸ್ತಕ ನನಗೆ ಕೊಟ್ಟಿದ್ದರು. ಆ ಪುಸ್ತಕ ಕೊಡುವ ನೆಪದಲ್ಲಿ 20.04.2025ರ ಬೆಳಗ್ಗೆ ನಡೆದ ಒಂದು ಚಿಕ್ಕ informal ಮಾತುಕತೆ.)