ಜಾತಿ ಜನಗಣತಿ: ಎಚ್ಚರಿಕೆ ಬೇಕು-ದೇವನೂರ ಮಹಾದೇವ
[10.4.2025 ಪ್ರಜಾವಾಣಿ, ವಾಚಕರ ವಾಣಿಯಲ್ಲಿ ದೇವನೂರ ಮಹಾದೇವ ಅವರ ಪತ್ರ…]
ಜಾತಿ ಜನಗಣತಿ ವರದಿಯು ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಮಂಡನೆ ಆಗಲಿದೆ ಎಂದು ವರದಿಯಾಗಿದೆ. ಕರ್ನಾಟಕದಲ್ಲಿ ಜಾತಿ ಜನಗಣತಿಯ ವಿಚಾರವು ಮತ್ತೆ ಮತ್ತೆ ಮುನ್ನೆಲೆಗೆ ಬಂದು ಹಿಂದೆ ಸರಿಯುತ್ತಿದ್ದದ್ದು ಈಗ ಒಂದು ನಿರ್ಣಾಯಕ ಹಂತಕ್ಕೆ ಬಂದಿದೆ. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸಬೇಕು. ಎಲ್ಲರಿಗೂ ನ್ಯಾಯ ಸಿಗಬೇಕೆಂಬ ದೃಷ್ಟಿಯಿಂದ ಆದಷ್ಟು ಬೇಗ ಜಾರಿಯಾಗಬೇಕಾದುದು ಅತ್ಯಗತ್ಯ. ಇನ್ನೂ ವಿಳಂಬವಾಗಿದ್ದರೆ ಅನ್ಯಾಯವೇ ಆಗಿಬಿಡುತ್ತಿತ್ತು. ಆದರೆ, ಇಂತಹ ಗಣತಿಯು ವಿಶ್ವಾಸವನ್ನೂ ಮೂಡಿಸಬೇಕು. ಕೆಲವು ಸಮುದಾಯಗಳಿಗೆ ತಮ್ಮ ಸಂಖ್ಯೆಯನ್ನು ಸರಿಯಾಗಿ ಎಣಿಸಿಲ್ಲ ಎನ್ನುವ ಅವಿಶ್ವಾಸ ಇರಬಾರದು. ಶಾಶ್ವತವಾಗಿ ಉಳಿಯುವಂತಹ ಯಾವುದೇ ಕೆಲಸ ಮಾಡುವಾಗ, ಸರ್ವರ ವಿಶ್ವಾಸ ಗಳಿಸುವುದೂ ಮುಖ್ಯ.
ಕರ್ನಾಟಕದಲ್ಲಿ ಈಗಾಗಲೇ ಒಂದು ಜಾತಿ ಜನಗಣತಿ ಆಗಿದೆ. ಮೂಲೆಮೂಲೆಯಲ್ಲಿರುವ, ಇದುವರೆಗೆ ‘ಲೆಕ್ಕಕ್ಕೂ ಸಿಗದೇ ಇದ್ದ’ ಎಷ್ಟೋ ಸಮುದಾಯಗಳನ್ನು ಒಳಗೊಂಡು, ಅವರ ಸ್ಥಿತಿಗತಿಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡು ಈ ಗಣತಿ ನಡೆಸಿದ್ದೇವೆ ಎಂದು ಈ ಗಣತಿ ನಡೆದಾಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್.ಕಾಂತರಾಜ ಅವರು ಹೇಳಿದ್ದಾರೆ. ನೂರಾರು ಕೋಟಿ ರೂಪಾಯಿ ಸಾರ್ವಜನಿಕರ ಹಣ ಖರ್ಚು ಮಾಡಿ ಸಂಗ್ರಹಿಸಿರುವ ಆ ಸಮೀಕ್ಷೆಯ ಸಾರ ಸರ್ಕಾರಕ್ಕೂ ಸಮಾಜಕ್ಕೂ ಅತ್ಯಗತ್ಯ. ಅದನ್ನು ಒಪ್ಪಿಕೊಳ್ಳೋಣ. ಆದರೆ, ಕೆಲವು ಸಮುದಾಯಗಳ ಲೆಕ್ಕ ಸರಿಯಾಗಿ ಮಾಡಿಲ್ಲ ಎಂಬ ಅಪನಂಬಿಕೆ ಇರಬಾರದು. 40 ಲಕ್ಷಕ್ಕೂ ಹೆಚ್ಚು ಜನರ ಎಣಿಕೆ ಆಗಿಲ್ಲ ಎಂಬ ಸುದ್ದಿಯಿದೆ. ಹೀಗಾಗಿ, ಈ ವರದಿಯನ್ನು ಒಪ್ಪಿಕೊಂಡೇ, ಲೆಕ್ಕ ಮಾತ್ರ ಇನ್ನೊಮ್ಮೆ ಮಾಡುವುದು ಇಂದಿನ ಅಗತ್ಯ ಇರಬಹುದು. ಸರ್ಕಾರ ಈ ದಿಸೆಯಲ್ಲಿ ಆಲೋಚಿಸಬೇಕು. ಅದೇ ಸಂದರ್ಭದಲ್ಲಿ- ಇದನ್ನು ಒಂದೆರಡು ತಿಂಗಳಲ್ಲಿ ಮಾಡಿ ಮುಗಿಸುವಷ್ಟು ಮಾನವ ಸಂಪನ್ಮೂಲ ಮತ್ತು ತಂತ್ರಜ್ಞಾನ ಸರ್ಕಾರದ ಬಳಿ ಇದ್ದೇ ಇದೆ. ಹೀಗಾಗಿ, ಎರಡು ತಿಂಗಳಲ್ಲಿ ಜಾತಿ ಜನಗಣತಿ/ಸಮೀಕ್ಷೆಯನ್ನೇ ಮುಗಿಸಬಹುದು. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಂಡು, ಸಾಮಾಜಿಕ ನ್ಯಾಯಕ್ಕೆ ಅತ್ಯಗತ್ಯವಾಗಿರುವ ಈ ವಿಚಾರಕ್ಕೆ ಶಾಶ್ವತ ಪರಿಹಾರ ಕಲ್ಪಿಸುತ್ತದೆ ಎಂದು ಆಶಿಸುತ್ತೇನೆ.
ದೇವನೂರ ಮಹಾದೇವ, ಮೈಸೂರು