ಇನ್ನಷ್ಟು ಪ್ರಶಸ್ತಿಗಳು ಅರಸಿ ಬರಲಿ…

(“ಸಂವಾದ” ಜನವರಿ 2025 ರ ಮಾಸ ಪತ್ರಿಕೆಯಲ್ಲಿ ಸಂಪಾದಕರ ನುಡಿಗಳು)
ಕನ್ನಡದ ಕಥೆಗಳ ದಿಕ್ಕು ದೆಸೆಗಳನ್ನು ಬದಲಿಸಿದ ಕಥಾ ಗಾರುಡಿಗ ದೇವನೂರ ಮಹಾದೇವ. ಕನ್ನಡದ ಸಮಕಾಲೀನ ಬರಹಗಾರರಲ್ಲಿ ಸಮಾಜದ ಆಗುಹೋಗುಗಳಿಗೆ ಜನಪರ ನೆಲೆಯಲ್ಲಿ ಸ್ಪಂದಿಸುವ ಗುಣ ಹೊತ್ತ ಹಿರೀಕ ಇವರು. ದಲಿತ ಮತ್ತು ದುಡಿವ ಜಗತ್ತಿನ ಬಹುದೊಡ್ಡ ಶಕ್ತಿ- ಕಥೆ ಹೇಳುವುದಾಗಿದೆ. ಇದು ಶ್ರಮ ಪರಿಹಾರದ ಬಹುಮುಖ್ಯ ಮಾರ್ಗ. ಈ ಶಕ್ತಿಯನ್ನು ಸಮರ್ಥವಾಗಿ ಎದೆಗಿಳಿಸಿಕೊಂಡು ಸಮಾಜದ ಅಂಕುಡೊಂಕುಗಳನ್ನು ತಿದ್ದಲು ದೇವನೂರರು ಕೊಟ್ಟ ಮಹತ್ತರ ಕಾಣ್ಕೆ ಇದಾಗಿದೆ. ಇದರಿಂದಾಗಿಯೇ ಅವರ ನುಡಿ-ನಡೆ-ಬರೆಹ ಎಲ್ಲವೂ ಕಥಾ ಲೋಕದ ಕೊಂಡಿಗಳಾಗಿಯೇ ಇವೆ.
ಬರೆವಣಿಗೆಯನ್ನು ತಮ್ಮ ಕೀರ್ತಿಗೆ ಪತಾಕೆಯಾಗಿಸಿಕೊಂಡವರ ನಡುವೆ ಜೀವನದುದ್ದಕ್ಕೂ ಹೋರಾಟದ ಜೊತೆಗೆ ಬರೆದು ಬದುಕುತ್ತಿರುವವರು ದೇವನೂರರು. ಒಡಲಾಳದ ಸಾಕವ್ವ, ಕುಸುಮಬಾಲೆಯ ಕುಸುಮ, ಚನ್ನ, ಕುರಿಯಯ್ಯ, ಜೋತಮ್ಮದೀರು, ಯಾಡ, ಅಮಾಸ, ಲಚುಮಿ, ಬೀರ, ಕಿಟ್ಟಪ್ಪ ಹಾಗೂ ದಲಿತ ಸಂಘರ್ಷ ಸಮಿತಿಯ ಪಾತ್ರಗಳು ಕನ್ನಡ ಸಾಹಿತ್ಯವಿರುವವರೆಗೂ ಬದುಕಿರುತ್ತವೆ. ಅವರ ಕಥೆಗಳು ಕಿವಿಗಿಳಿಯುವುದು ಮಾತ್ರವಲ್ಲ ಎದೆಗಿಳಿದು ಕರುಳು ತಟ್ಟುತ್ತವೆ. ದಲಿತ ಸಂಘರ್ಷ ಸಮಿತಿಯ ಮುಂಚೂಣಿ ನಾಯಕರಾದ ದೇವನೂರರು ಅನ್ಯಾಯದ ಪರ ರಾಜಿಯಾಗದೇ ಜನಪರವಾಗಿ ಎಲ್ಲಾ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳುವುದರ ಮೂಲಕ ನ್ಯಾಯ ಯಾವುದೆಂದು ತೋರಿಸಿಕೊಟ್ಟವರು. ಇಂತಹ ನುಡಿಗಾರುಡಿಗನಿಗೆ ವೈಕಂ ಪ್ರಶಸ್ತಿ ಬಂದಿರುವುದು ಆ ಪ್ರಶಸ್ತಿಗೆ ಒಂದು ಶೋಭೆ ತಂದುಕೊಟ್ಟಂತಾಗಿದೆ. ಅವರಿಗೆ ಆ ಪ್ರಶಸ್ತಿ ಲಭಿಸಿರುವುದು ದಸಂಸವೂ ಸೇರಿದಂತೆ ಕರ್ನಾಟಕದ ಜನಪರ ಚಳವಳಿಗಳೆಲ್ಲಕ್ಕೂ ಲಭಿಸಿದಂತಾಗಿದೆ. ಇಂತಹ ಹತ್ತಾರು ಪ್ರಶಸ್ತಿಗಳು ಅವರನ್ನು ಅರಸಿ ಬರಲಿ… ಈ ಜೀವ ಹೀಗೆಯೇ ಸಮಸಮಾಜಕ್ಕೆ ಮಿಡಿಯುತ್ತಿರಲಿ.
– ಸಂಪಾದಕರು, ಸಂವಾದ