‘ದ್ಯಾವನೂರು’ – ಒಂದು ವ್ಯಾಖ್ಯಾನ- ಬಿ.ಕೆ.ಕರಿಗೌಡ
[ಡಾ.ಜಿ.ಎಸ್.ಶಿವರುದ್ರಪ್ಪ ಅವರ ಪ್ರಧಾನ ಸಂಪಾದಕತ್ವದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ಪ್ರಕಟವಾಗುತ್ತಿದ್ದ ‘ಸಾಧನೆ’ ತ್ರೈಮಾಸಿಕದ ಜುಲೈ-ಸೆಪ್ಟೆಂಬರ್ 1976ರ ಸಂಚಿಕೆಯಲ್ಲಿ ಬಿ.ಕೆ.ಕರಿಗೌಡ ಅವರ ‘ದ್ಯಾವನೂರು‘ – ಒಂದು ವ್ಯಾಖ್ಯಾನ ಎಂಬ ಲೇಖನವು ಪ್ರಕಟವಾಗಿದ್ದು, ಅದನ್ನು ಹುಡುಕಿ ನಮ್ಮ ಬನವಾಸಿಗೆ ನೀಡಿದ ಶ್ರೀಧರ. ಆರ್ ಅವರಿಗೆ ಧನ್ಯವಾದಗಳು]
ಮಾನವನ ಸಾಂಘಿಕ ಅಭೀಪ್ಸೆಯ ‘ಗತಿಬಿಂಬ’ವೇ ಸಮಾಜವಾದ್ದರಿಂದ, ಆ ‘ಸಮಕಾಲೀನ’ ಸಮುದಾಯದ ಸಂವಹನದ ಮಾಧ್ಯಮವಾದ ಭಾಷೆಯು ಕೂಡಾ ಆ ಸಮಾಜದಿಂದಲೇ ಸೃಷ್ಟಿಯಾಗುತ್ತದೆ. ಈ ದಿಕ್ಕಿನಲ್ಲಿ ಸಾಹಿತ್ಯ ಸೃಷ್ಟಿಸುವ ಆ ಲೇಖಕನ ಸಮಷ್ಟಿ ಪ್ರಜ್ಞೆ ತನ್ನ ಸಮಾಜದಲ್ಲಿನ ಮೌಲ್ಯಗಳ ಜೊತೆಯಲ್ಲಿ ಸ್ಪಂದಿಸುವುದರ ಜೊತೆಗೆ, ತನ್ನನ್ನು ಜೀವನಾನುಭವಗಳಿಗೆ ಸಮಗ್ರವಾಗಿ ಒಡ್ಡಿಕೊಂಡು ಬದುಕನ್ನು ಶೋಧಿಸಬೇಕಾಗುತ್ತದೆ. ಈ ತಾತ್ವಿಕತೆಯ ವಾಸ್ತವ ಪ್ರಜ್ಞೆಯಲ್ಲಿ ಅರಳಿರುವ ದೇವನೂರ ಮಹಾದೇವ ಅವರ ಈ ಕೃತಿಯನ್ನು ಪ್ರಸ್ತುತ ಸಂದರ್ಭದಲ್ಲಿ ಸಾಹಿತ್ತಿಕವಾಗಿ ಮತ್ತು ಸಾಮಾಜಿಕವಾಗಿ ಇದರ ಸಾಂಸ್ಕೃತಿಕ ಮೌಲ್ಯಗಳನ್ನು ಸಮೀಕ್ಷಿಸಲು ಬಳಸಿಕೊಳ್ಳುತ್ತೇನೆ.
ಯಾವುದೇ ಒಂದು ಸಾಹಿತ್ತಿಕ ಕೃತಿ ಯಶಸ್ಸು ಪಡೆಯಬೇಕಾದರೆ, ಆ ಲೇಖಕನ ಅನುಭವ ಮತ್ತು ಅಭಿವ್ಯಕ್ತಿಗಳ ಶಿಲ್ಪ ಕಾರಣವಾಗುತ್ತದೆ. ಇವೆರಡರ ಮಧ್ಯೆ ಕಂದರ ಏರ್ಪಟ್ಟಿರುವುದೆ ನಮ್ಮ ಬಹುಪಾಲು ಸಾಹಿತಿಗಳ ದುರಂತ. ಆದರೆ ದೇವನೂರರು ಈ ಶಿಲ್ಪವನ್ನು ರೂಢಿಸಿಕೊಂಡಿರುವುದರಿಂದ ಈ ಕೃತಿ ಸಾಮಾಜಿಕವಾಗಿ ಪೂರ್ಣ ಯಶಸ್ಸು ಪಡೆದಿದೆ. ಅಷ್ಟೇ ಅಲ್ಲದೆ, ಇವರಿಗೆ ಕಲಾತ್ಮಕತೆ ರೂಢಿಗತವಾಗಿರುವುದರಿಂದ ಸಾಹಿತ್ತಿಕವಾಗಿಯೂ ಇದರ ಸ್ಥಾನ ಬಹು ಪ್ರಧಾನವಾದುದು. ಇದು ಒಬ್ಬ ನಿಜವಾದ ಕವಿಗೆ ಇರಬೇಕಾದ ಗುಣ ಎಂದರೆ ತಪ್ಪೇನಲ್ಲ.
ಜೀವಂತ ಸಮುದಾಯದೊಡನೆ ಬೆರೆಯದ ಪ್ರತಿಷ್ಟಿತ ವರ್ಗದ ಲೇಖಕನೊಬ್ಬ ಹರಿಜನರ ಬಗ್ಗೆ ಬರೆಯುವುದಕ್ಕಿಂತ, ಆ ಸಮುದಾಯದ ತೀವ್ರವಾದ ಸಂವೇದನೆಗಳನ್ನು ಅನುಭವಿಸಿದ, ಆ ವಲಯದ ಲೇಖಕನೇ ಅದನ್ನು ಬರೆದಾಗ ಹೆಚ್ಚು ಅರ್ಥವಂತಿಕೆ ಪಡೆದುಕೊಳ್ಳಲು ಸಾಧ್ಯ. ಈ ದೃಷ್ಟಿಯಲ್ಲಿ ಈ ಕಥೆಗಳು ‘ಭಾರತಿಪುರ’, ‘ದಾಟು’ ಕಾದಂಬರಿಗಳಿಗಿಂತ ಬಹು ಪಾಲು ಮುಂದೆ ಸಾಗಿವೆ. ದೇವನೂರರವರು ಇದರಲ್ಲಿ ಪಾರಂಪರ್ಯವಾಗಿ ಅಂಟಿಬಂದ ಜಡ್ಡು ಹತ್ತಿದ ಅರ್ಥ ಸತ್ತ ರೂಢಿಗಳ ಬಗ್ಗೆ ಮತ್ತು ಒಂದು ಜನಾಂಗದ ಬದುಕಿನ ಸಂಕೀರ್ಣ ಅವಸ್ಥೆ-ವ್ಯವಸ್ಥೆಯ ಬಗ್ಗೆ ಕೆದಕಿ ಜಾಲಿಸಿ ಅರ್ಥೈಸುವ ಪ್ರಯತ್ನವೊಂದನ್ನು ಇಲ್ಲಿ ಮಾಡಿದ್ದಾರೆ.
ಈ ಕಥಾ ಸಂಕಲನದಲ್ಲಿ, ‘ಏಳು ಪ್ರಸಂಗ’ಗಳಿವೆ. ಆದರೆ ‘ದ್ಯಾವನೂರು’ ಎಂಬ ಕಥೆ ಈ ಸಂಕಲನದಲ್ಲಿ ಇಲ್ಲ. ಈ ಎಲ್ಲಾ ಕಥೆಗಳು ‘ದೇವನೂರಿ’ನ ಸುತ್ತಮುತ್ತಲಿನ ನೆಲೆಗಟ್ಟಿನ ಮೇಲೆ ಹುಟ್ಟಿ ಬೆಳವಣಿಗೆ ಪಡೆಯುವುದರಿಂದ ಈ ಕೃತಿಗೆ ಈ ಹೆಸರು ಅರ್ಥವತ್ತಾಗಿದೆ. ಈ ಎಲ್ಲಾ ಕಥೆಗಳ ಸಮೀಕ್ಷೆಗೆ ಒಳಹೊಕ್ಕುವ ಮೊದಲು ಕಥೆಗಾರರು ಸೂತ್ರಬದ್ಧವಾಗಿ ‘ಪೀಠಿಕೆ’ಯಂತೆ, ಕೋಟ್ ಮಾಡಿರುವ, ‘ಖಂಡವಿದಕೊ ಮಾಂಸವಿದಕೊ, ಗುಂಡಿಗೆಯ ಬಿಸಿರಕ್ತವಿದಕೊ’ ಎಂಬುದರ ಅರ್ಥಗ್ರಹಿಕೆ ಇಲ್ಲಿ ಸೂಕ್ತ. ಈ ವಾಕ್ಯವನ್ನು ಓದುತ್ತಿದ್ದಂತೆಯೇ ಹುಲಿಯ ಮುಂದಿನ ಗೋವಿನ ನಿಸ್ಸಹಾಯಕತನದ, ಸಮರ್ಪಣಭಾವದ ಕಥೆ ನಮ್ಮ ಕಣ್ಮುಂದೆ ಸುಳಿಯುತ್ತದೆ. ಹಾಗೆಯೇ ಇಲ್ಲಿನ ಎಲ್ಲಾ ಕಥೆಗಳಲ್ಲಿ ಯಾವುದೋ ಒಂದು ಜನಾಂಗದ ಅಸಹಾಯಕ ತನದ ಸಂಪೂರ್ಣ ಸಮರ್ಪಣಭಾವ ಘನೀಭವಿಸಿದ್ದರೂ, ಆಂತರ್ಯದಲ್ಲಿ ಮಾತ್ರ ದ್ವೇಷ ರೊಚ್ಚು ಇದ್ದೇ ಇದೆ ಎಂಬುದನ್ನು ಇಲ್ಲಿಯ ಕೆಲವು ಜೀವಂತ ಪಾತ್ರಗಳು ಪ್ರತಿನಿಧಿಸಿವೆ. ಹೀಗೆ ಅಮೂರ್ತವಾಗಿ ಮೋಸಗೊಳಿಸಿರುವ ನಮ್ಮ ‘ಹುಸಿ ಪರಂಪರೆ’, ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಗಾಢಸಂಬಂಧಕ್ಕೆ ಬಿಟ್ಟಿಲ್ಲ. ಈ ಮಾತುಗಳ ಅವಶ್ಯಕತೆ, ಈ ಕಥೆಗಳು ಈ ಜಾಡಿನ ರಚನೆಯೆಂಬುದರ ಸಮರ್ಥನೆಗಾಗಿ ಮಾತ್ರ.
ಈ ಎಲ್ಲಾ ಕಥೆಗಳಲ್ಲಿ ಶೂದ್ರರಲ್ಲಿಯೇ ಇರುವ ಸಾಮಾಜಿಕವಾಗಿ ಮೇಲು ವರ್ಗ ಮತ್ತು ಕೆಳವರ್ಗಗಳ ವೈದೃಶ್ಯವನ್ನು ಇಲ್ಲಿ ಕಾಣಬಹುದು. ಈ ಸಂಗ್ರಹದ ಮೊದಲನೆಯ ಕಥೆಯಾದ, ‘ಮಾರಿಕೊಂಡವರು’ ಕಥೆಯಲ್ಲಿನ ಬೀರ ಕೆಳವರ್ಗದ ದಲಿತ ವ್ಯಕ್ತಿ. ನಮ್ಮ ಸಮಾಜದಲ್ಲಿನ ಹೊಲೆಯರು ಎಷ್ಟೇ ಜೀತಕ್ಕೆ, ಲೈಂಗಿಕ ಸಂಬಂಧಕ್ಕೆ ಬೇರೊಂದು ಜನಾಂಗದ ಅಧೀನಕ್ಕೊಳಗಾಗಿದ್ದರೂ ಒಳಗೆ ಮಾತ್ರ ರೊಚ್ಚು ಇದ್ದೇ ಇರುತ್ತದೆ. ಆದರೆ ಈ ರೊಚ್ಚು ಬಾಹ್ಯದಲ್ಲಿ ಅಸಹಾಯಕ ಸ್ಥಿತಿಯನ್ನು ಪಡೆದುಕೊಂಡಿರುತ್ತದೆ ಎಂಬಂಥ ಒಂದು ವಸ್ತುಸ್ಥಿತಿಯನ್ನು ಪ್ರತಿನಿಧಿಸಲು ಹೊರಟಂಥ ಕಥೆ ಇದು. ಮತ್ತು ಆರ್ಥಿಕ ಸಂಬಂಧಗಳಲ್ಲಿ ನಿರಂತರ ಶೋಷಣೆಗೆ ಒಳಗಾಗಿರುವ ಜನಾಂಗದ ಸ್ಥಿತಿಗತಿಗಳನ್ನು ಇದು ಅಭಿವ್ಯಕ್ತಿಸುತ್ತದೆ. ಗೌಡರ ಮಗ ಕಿಟ್ಟಪ್ಪನಿಗೆ, ಹೊಲೆಯರ ಬೀರ ಮತ್ತು ಅವನ ಪತ್ನಿ ಲಕ್ಷ್ಮಿ ಇಬ್ಬರೂ ತಮ್ಮನ್ನು ದೈಹಿಕವಾಗಿಯೂ ಇಲ್ಲಿ ಮಾರಿಕೊಂಡಿದ್ದಾರೆ. ಇದನ್ನು ಲೇಖಕರ ಬರವಣಿಗೆಯಲ್ಲಿಯೇ ಹೇಳುವುದಾದರೆ, “ಕಿಟ್ಟಪ್ಪ ಕೊಟ್ಟಿರುವ ರಗ್ಗು ಲಕ್ಷ್ಮೀನ ಕವಚಿಕೊಂಡಿದೆ; ಕಿಟ್ಟಪ್ಪ ಕಟ್ಟಿಸಿರುವ ಮನೆ ಇಬ್ಬರನ್ನೂ ಕವಚಿಕೊಂಡಿದೆ”. ಕಿಟ್ಟಪ್ಪ ಲಕ್ಷ್ಮಿಯೊಡನೆ ಹೊಂದಿರುವ ಸಂಬಂಧ ಬೀರನಿಗೆ ಗೊತ್ತು. ಬೀರ ಕುಡಿದಾಗ ಕಿಟ್ಟಪ್ಪ ಬೀರನ ತಲೆಯಲ್ಲಿ ‘ಥರಾವರಿ’ ಮೂಡತೊಡಗಿದರೂ ಮಾರನೆಯ ದಿನ ಬೀರನ ನಿರ್ಧಾರ ಅಸಹಾಯಕ ಸ್ಥಿತಿಗೆ ಬರುತ್ತದೆ. ರಾತ್ರಿ ಲಕ್ಷ್ಮಿಯ ಹತ್ತಿರ ಬೀರ “ನಿನ್ನ ಮಿಂಡ ಬರ್ಲಿ ತೀರ್ಸಿ ಬಿಡುತ್ತೇನೆ” ಎಂದು ಪ್ರತಿಜ್ಞೆ ಮಾಡಿದ್ದವನು, ಬೆಳಿಗ್ಗೆ ತನ್ನ ದಣಿ ಕಿಟ್ಟಪ್ಪನನ್ನು ಎದುರುಗೊಂಡಾಗ ಅವರಿಬ್ಬರ ಯಾದೃಚ್ಚಿಕವಾದ ನಗು ಲಕ್ಷ್ಮಿಗೆ ಭಯಾನಕತೆಯ ವಾತಾವರಣವನ್ನು ಕಲ್ಪಿಸಿ, ಬೀರನ ಅಸಹಾಯಕತನದ ಧ್ವನ್ಯಾರ್ಥವನ್ನು ಈ ಕಥೆ ಪಡೆದುಕೊಳ್ಳುತ್ತದೆ.
ಮಾರಿಕೊಂಡವರು ಧಾಟಿಯಲ್ಲಿಯೇ ಸಾಗುವ ಮತ್ತೊಂದು ಕಥೆ ‘ಗ್ರಸ್ತರು’. ಆದರೆ ಇಲ್ಲಿಯ ಸಮಸ್ಯೆಯೇ ಬೇರೆ. ವಿಚಾರವಂತನಾದ ಒಬ್ಬ ವ್ಯಕ್ತಿ ತನಗೆ ಸರಿಕಾಣದ ಕೆಲವು ನಂಬಿಕೆಗಳ ಬಗ್ಗೆ ವೈಯಕ್ತಿಕ ಪ್ರತಿಕ್ರಿಯೆ ವ್ಯಕ್ತಪಡಿಸಿದಾಗ, ಆ ಸಮಾಜ ಅವನನ್ನು ಅಧಃಪತನಕ್ಕೆ ಕೊಂಡೊಯ್ಯುವ ಕಥೆ ಇದು. ಇದರ ನಾಯಕ ಸಾಮಾಜಿಕವಾಗಿ ಮೇಲುವರ್ಗದವನಾದರೂ ತನ್ನೂರಿನ ಗೌಡರ ಅಧೀನದಲ್ಲಿ ಅದುಮಿಟ್ಟವನು. ಆಳುವ ವರ್ಗಕ್ಕೆ ಗ್ರಸ್ತನಾದ ಗೌಡರು ಸ್ವಾಮಿಗಳ ಕಾಲಿಗೆ ಬಿದ್ದು ಈ ನಾಯಕನಿಗೆ ಕೆಲ್ಸ ಕೊಡ್ಸಿರುತ್ತಾರೆ. ಆಗ ಆ ನಾಯಕ ತನ್ನ ಭಾಷಣವೊಂದರಲ್ಲಿ, ‘ಧರ್ಮ ಕರ್ಮ ಮಠಸ್ವಾಮಿಗಳೆಲ್ಲ ಸೋಗು’ ಅಂತ ಹೇಳಿದ್ದರಿಂದ, ತನ್ನ ಕೆಲ್ಸ ಕಳೆದುಕೊಂಡು ಊರಿಗೆ ಬರುತ್ತಾನೆ. ಆದರೆ ತನ್ನ ಜಮೀನು ಗೌಡರ ಅಸಲು ಬಡ್ಡಿಗೆ ಸಮವಾಗಿ, ಲಕುವದಿಂದ ನರಳುತ್ತಿದ್ದ ತನ್ನ ತಾಯಿಯು ಗ್ರಸ್ತಳಾಗಿ ಪ್ರಾಣಬಿಟ್ಟಾಗ ನಾಯಕನು “ನಾವಿನ್ನೂ ಬದುಕಿದ್ದೀವಾ” ಎಂಬ ಜಿಜ್ಞಾಸೆಯಲ್ಲಿ ಗ್ರಸ್ತನಾಗಿ ಮೂಲೆಗೆ ಕುಸಿದು ಬೀಳುತ್ತಾನೆ.
ವಿದ್ಯಾವಂತನಾದ ಒಬ್ಬ ಮೇಲುವರ್ಗದ ಯುವಕ ಹೊಲೆಯರ ಹುಡುಗಿಯೊಬ್ಬಳನ್ನು ಪ್ರೀತಿಸಿ, ಬಸುರಿಸಿ, ಅವಳೊಡನೆ ಸಂಸಾರಿಸಲೂ ಸಿದ್ಧನಾದಾಗ, ತನ್ನ ಸಮಾಜ, ಎಲ್ಲಕ್ಕಿಂತ ಹೆಚ್ಚಾಗಿ ಮಗಳನ್ನು ಮದುವೆಯಾಗುತ್ತಾನೆ ಎಂದು ತಿಳಿದು ಹಣ ಕೊಟ್ಟು ಓದಿಸಿದ ತನ್ನ ಮಾವ, ಇವೆಲ್ಲವನ್ನು ಎದುರು ಹಾಕಿಕೊಂಡಾಗ ಅವನು ಎದುರಿಸುವ ಅನಾಹುತಗಳನ್ನು, ಸಮಸ್ಯೆಗಳನ್ನು ಸಮಗ್ರಿಸುವ ಕಥೆಯೆಂದರೆ, ‘ಒಂದು ದಹನದ ಕಥೆ,’ ಇಲ್ಲಿಯ ಪ್ರಮುಖ ಸಮಸ್ಯೆಯೆಂದರೆ ನಾಯಕನ ಅಜ್ಜಿ ಸತ್ತಾಗ, ಅವಳನ್ನು ಶವಸಂಸ್ಕಾರ ಮಾಡುವಾಗ ತನ್ನೂರಿನ ಜನಾಂಗ ಮತ್ತು ತನ್ನ ರಕ್ತಸಂಬಂಧಿಗಳು ಬಹಿಷ್ಕರಿಸುವ ರೀತಿಯನ್ನು ನೋಡಿದರೆ ನಮ್ಮ ಸಮಾಜದಲ್ಲಿ ಇಂತಹ ಮೌಢ್ಯತೆಯುಳ್ಳ ಜನ ಇನ್ನೂ ಇದ್ದಾರಲ್ಲ ಅನ್ನಿಸುತ್ತದೆ ! ಹನ್ನೆರಡು ವರ್ಷಗಳ ಕಾಲ ನಗರದಲ್ಲಿ ಅಜ್ಜಿಯೊಡನೆ ಮತ್ತು ಕರೆದುಕೊಂಡು ಬಂದ ಆ ಹೊಲೆಯರ ಹುಡುಗಿಯೊಡನೆ ಸಂಸಾರ ನಡೆಸಿದ ಇವನು, ಅಜ್ಜಿಯ ಸಾಯುವ ಕಾಲದ ಬಯಕೆಯಂತೆ ತನ್ನೂರಿಗೆ ಕರೆದು ತಂದಾಗ, ಅವಳು ಅಲ್ಲಿ ಸಾಯುತ್ತಾಳೆ. ಈ ಅಜ್ಜಿಯು ಜಾತಿಕೆಟ್ಟ ತನ್ನ ಮೊಮ್ಮಗನೊಡನೆ ಹೋದಳಲ್ಲ ಎಂಬುದೇ ಆ ಊರಿನ ಜನಾಂಗಕ್ಕೆ ಇರುವ ದ್ವೇಷ. ಕೊನೆಗೆ ನಾಯಕನೆ ಮನೆಯ ಮುಂದೆ ಇದ್ದಬದ್ದ ಗಳಗಳನ್ನೆಲ್ಲಾ ಜೋಡಿಸಿ ಅದರ ಮೇಲಿಟ್ಟು ಬೆಂಕಿ ತೋರಿಸುತ್ತಾನೆ. “ಊರಿಗೆ ಊರೇ ಅವನ ಹಿಂದೆ ಓಡಿಬರುತ್ತಿರುವಂತೆ ಭಾಸವಾದಾಗ’ ಅವನು ಇದ್ದಬದ್ದ ಬಲವನ್ನೆಲ್ಲಾ ಒಟ್ಟಾಯಿಸಿ ಓಡುವ ಸನ್ನಿವೇಶ ಕಥೆಯ ಶಿಲ್ಪಕ್ಕೆ ಭಂಗತಂದಿದೆ ಅನ್ನಿಸುತ್ತದೆ.
ಜಾತೀಯತೆ ನಮ್ಮ ‘ಹುಸಿ ಪರಂಪರೆ’ ಸೃಷ್ಟಿಸಿದ ಸಂಕೀರ್ಣ ವ್ಯವಸ್ಥೆಗಳಲ್ಲಿ ಒಂದಾಗಿರುವುದರಿಂದ, ಇದರಲ್ಲಿ ಅಂತ್ಯಜರು ಇನ್ನೂ ಒಂದು ಘಟಕವಾಗಿಯೇ ಉಳಿದಿದ್ದಾರೆ. ಇವರಿಗೆ ಬದುಕಿನ ವೈಭವದ ಬಗ್ಗೆ ಚಿಂತನೆ ಬೇಕಿಲ್ಲ. ಹಬ್ಬ ಹರಿದಿನಗಳಲ್ಲಿ ದೊರೆಯುವ ಮನೋರಂಜನೆಯಿಂದಲೇ ಸಂತೃಪ್ತರಾಗಬಲ್ಲರು. ರಾತ್ರಿಯಾಗಿ ಊರಿನ ಜನ ಮನೆಗೆ ತೆರಳಿ, ‘ಹೆಂಡ್ತಿಗೆ ಸೀರೆ ಬಿಚ್ಚಿ ಬೆತ್ತಲೆಮಾಡಿ ನೋಡಿದರೂ’ ಕಾಲದ ಪ್ರಜ್ಞೆಯೂ ಇಲ್ಲದೆ ಕುಣಿಯಬಲ್ಲರು ಎಂಬುದಕ್ಕೆ ‘ಅಮಾಸ’ ಕಥೆಯಲ್ಲಿನ ಮಾರಿಗುಡಿಯ ಜಾತ್ರೆಯ ಸಂದರ್ಭವೇ ಸಾಕು. ಬಹುಶಃ ಇದು ಅವರಿಗೆ ಅನಿವಾರ್ಯ ಅನ್ನಿಸಬಹುದೇನೋ! ‘ಅಮಾಸ’ ಎಂಬುವನು ಈ ಕಥೆಯಲ್ಲಿ ಬರುವ ಹುಡುಗನ ಹೆಸರು. ಆ ಹುಡುಗನಿಗೆ ಆ ಹೆಸರು ಹೇಗೆ ಬಂತು? ಅವನ ತಾಯ್ತಂದೆಗಳಾರು? ಎಂಬ ಪ್ರಶ್ನೆಗಳು ಕಥೆಯಲ್ಲಿ ಹಾಗೆಯೇ ಉಳಿದುಬಿಡುತ್ತವೆ. ಸಾಮಾನ್ಯವಾಗಿ ಅವನು ಮಾರಿಗುಡಿಯ ಕುರಿಯಯ್ಯನ ಹತ್ತಿರ ಇರುತ್ತಿದ್ದರಿಂದ, “ಮಾರಿಗುಡಿಯೆಂದರೆ ಅಮಾಸ, ಅಮಾಸನೆಂದರೆ ಮಾರಿಗುಡಿ” ಎಂಬಷ್ಟು ಮಾತ್ರ ಎಲ್ಲರಿಗೂ ಗೊತ್ತು. ಕುರಿಯಯ್ಯನೆಂಬುವನು ತನ್ನ ಜೀವನ ಪರ್ಯಂತ ಗೌಡರ ಮನೆಯ ಕುರಿಗಳನ್ನು ಕಾಯ್ದು ಅನ್ವರ್ಥ ಹೆಸರನ್ನೊತ್ತು ಮಾರಿಗುಡಿಯ ಮೂಲೆಯೊಂದರಲ್ಲಿ ಈಗ ವಾಸವಾಗಿದ್ದಾನೆ. ಇವನ ಹಸಿವು ಸುಧಾರಿಸಬೇಕಾದರೆ ಮಾರಿಗುಡಿಯ ಪಕ್ಕದಲ್ಲಿದ್ದ ಹಾಸ್ಟೆಲ್‌ನಲ್ಲಿ ಬೆಲ್ಲು ಹೊಡೆದಾಗ, ಅಮಾಸ ಅಲ್ಲಿಗೆ ಹೋಗಿ ಬಂದಾಗಲೇ. ಹೀಗೆ ಇವರಿಬ್ಬರ ಜೀವನವನ್ನು ಕಥೆಗಾರರು ಚಿತ್ರಿಸಿಕೊಂಡು ಬರುತ್ತಾ ಮಾರಿಗುಡಿಯ ಹಬ್ಬದ ಪ್ರಸಂಗಕ್ಕೆ ಬಂದಾಗ ಇನ್ನೂ ಹೆಚ್ಚು ಅರ್ಥವತ್ತಾಗುತ್ತಾರೆ. ಸಾಂಪ್ರದಾಯಿಕವಾಗಿ ಈ ಜನಕ್ಕೆ ಈ ಹಬ್ಬ ನಡೆದು ಬಂದಿದೆ; ಹುಲಿಯಾಸ ಹಾಕಿಕೊಂಡು ಕುಣಿಯುವ ಪ್ರಸಂಗವಂತು ಎದೆಕದಡುವಂಥದ್ದು. ಮರಿಹುಲಿಯಾಸ ಹಾಕಿ ಕುಣಿಯುತ್ತಿದ್ದ ಅಮಾಸನ ಕುಣಿತಕ್ಕೆ ಆಕರ್ಷಿತರಾದ ಗೌಡರು ತನ್ನ ಮನೆಯ ಜೀತದಾಳಿನಿಂದ ಆ ಮರಿಹುಲಿಯಾಸ ಹಾಕಿದ್ದವನು ಅಮಾಸನೆ ಎಂದು ಗೊತ್ತಾದಾಗ, “ಎಲಾ ಇವ್ನ ಆಗ್ಗೆ ಇಷ್ಟು ಬೆಳೆದು ಬಿಟ್ಟವ್ನ” ಎಂಬ ಗೌಡರ ಉದ್ಗಾರ ಅಮಾಸನನ್ನು ಸಮಸ್ಯೆಗೊಡ್ಡಿ, ಅಮಾಸನ ಪಾತ್ರ ಸೃಷ್ಟಿ ಸಾಫಲ್ಯವಾಗುತ್ತದೆ.
ಹಳ್ಳಿಯ ಪಟೇಲನೊಬ್ಬನ ದಬ್ಬಾಳಿಕೆತನದ ಅಭಿವ್ಯಕ್ತಿಯನ್ನೊಳಗೊಂಡ ಮತ್ತೊಂದು ಕಥೆ ‘ಡಾಂಬರು ಬಂದುದು’. ಸುಮಾರು ಎಂಬತ್ತು ಮನೆಗಳಿರುವ ಹಳ್ಳಿಯೊಂದರಲ್ಲಿ ಬಸ್ಸು ಓಡಾಡುವ ರಸ್ತೆಗೆ ಮೂರು ಮೈಲಿ ಇರುವ ದಾರಿಯೊಂದನ್ನು ಟಾರ್ ರಸ್ತೆಯನ್ನಾಗಿ ಮಾಡಲು ಸರ್ಕಾರ ಹಣ ಮಂಜೂರು ಮಾಡಿದಾಗ, ಆ ಊರಿನ ಪಟೇಲನೇ ಕಂಟ್ರಾಕ್ಟರಾಗುತ್ತಾನೆ. ಮಂಜೂರು ಮಾಡಿದ ಹಣದಲ್ಲಿಯೇ ಉಳಿಸಿ ದೇವಸ್ಥಾನವನ್ನು ಊರ್ಜಿತಗೊಳಿಸಲು ನಿರ್ಧರಿಸುವ ಪಟೇಲನಿಗೆ ಜನ ವ್ಯಕ್ತಪಡಿಸುವ ಪ್ರತಿಕ್ರಿಯೆ ನಿಜಕ್ಕೂ ಸೂಕ್ತವಾಗಿದೆ. ಇದು ಎಲ್ಲಾ ಹಳ್ಳಿಗಳಿಗೂ ಅನ್ವಯಿಸತಕ್ಕಂಥ ಕಥೆಯಾಗಿದೆ. ಪಟೇಲನ ಮತ್ತು ಜನರ ಮಧ್ಯೆ ವೈಷಮ್ಯ ಏರ್ಪಟ್ಟಾಗ ಅದು ಸರ್ಕಾರದವರೆಗೂ ಮುಟ್ಟಿ, ರಸ್ತೆಯ ಕೆಲಸ ಅರ್ಧದಲ್ಲಿಯೇ ಅವನತಿಯನ್ನು ಅನುಭವಿಸುತ್ತದೆ. ಛಾವಡಿಯಲ್ಲಿ ಪಟೇಲ ಮತ್ತು ಊರಿನ ಜನ ಸೇರಿಕೊಂಡು ಮಾಡುವ ನ್ಯಾಯದ ಪ್ರಸಂಗವಂತು ಆ ಊರಿನ ಜನಜೀವನದ ವಾತಾವರಣವನ್ನು ತಿಳಿಸುವುದರ ಮೂಲಕ ಕಥೆ ಯಶಸ್ಸನ್ನು ಪಡೆದುಕೊಂಡಿದೆ.
ಈ ಸಂಗ್ರಹದ ಮತ್ತೆರಡು ಕಥೆಗಳಾದ, ‘ದತ್ತ’ ಮತ್ತು ‘ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’ ಕಥೆಗಳು ಈ ಲೇಖಕರ ಸತ್ವಯುತ ಅಭಿವ್ಯಕ್ತಿಗೆ ಸಾಕ್ಷಿಯಾಗಿವೆ. ‘ದತ್ತ’ ಒಂದು ಹಳ್ಳಿಯ ಜನಜೀವನದಲ್ಲಿ ಬಿಳಲು ಬಿಟ್ಟ ಕಥೆ. ಈ ಸಂಪ್ರದಾಯ ನಮ್ಮ ಸಮಾಜದಲ್ಲಿರುವ ಪದ್ಧತಿಯೇ ಆಗಿದೆ. ‘ಹೊಸತಾಗಿ ಹುಟ್ಟಿದೆ ಅಂತ ತಿಳಿದುಕೊಂಡಾದರೂ ಊರಿಗೆ ಬಾ’ ಎಂದು ಮುಂತಾಗಿ ಬರೆದಿದ್ದ ತಂದೆಯ ಪತ್ರದಿಂದ ಆನಂದ ತನ್ನ ತಂಗಿ, ತನ್ನ ತಾಯಿ, ತನ್ನ ಅಣ್ಣ, ಅತ್ತಿಗೆಯವರನ್ನು ಅದರಿಂದ ಮೂಡಿಸಿಕೊಳ್ಳುತ್ತಾ ತನ್ನೂರಿಗೆ ಮರಳಿದಂದಿನಿಂದ ಕಥೆ ಪ್ರಾರಂಭವಾಗುತ್ತದೆ. ಆನಂದ ದತ್ತುವಾಗಿ ಹೋದಾಗ ಏಳು ವರ್ಷದ ಹುಡುಗ, ಈಗ ಪ್ರಬುದ್ಧನಾಗಿ ಬೆಳೆದಿರುವ ಅವನಿಗೆ, ತನ್ನೂರಿನ ಪರಿಚಯ ಮಾಸು ಮಾಸಲು. ಈಗ ಆನಂದ ಈ ಪರಿಸರದವನಾಗಬೇಕಾಗಿದೆ. ಅವನನ್ನು ಮೊದಲು ನೋಡಬೇಕಾದರೆ ಎಣ್ಣೆಯಲ್ಲಿ ಮುಖ ನೋಡಬೇಕೆಂಬ ತನ್ನ ತಾಯ್ತಂದೆಗಳ ನಂಬಿಕೆಗಳ ಬಗ್ಗೆ ಅವನಲ್ಲಿ ಪ್ರತಿಕ್ರಿಯೆ ಇದ್ದರೂ, ಮಾರಿಗುಡಿಯಲ್ಲಿ ಹಿರಿಯರ ಮಧ್ಯೆ ಕೇಂದ್ರ ವ್ಯಕ್ತಿಯಾಗಿದ್ದರೂ ಸ್ತಬ್ಧನಾಗಿಬಿಡುತ್ತಾನೆ. ಅದು ಅಲ್ಲಿ ಅವನಿಗೆ ‘ಮೋಡಿ’ ಅನ್ನಿಸಿ ಈ ಸನ್ನಿವೇಶ ಅವನಿಗೆ ‘ಕೃತಕ’ವೆನಿಸುತ್ತದೆ. ತನ್ನ ಸಾಕುತಂದೆ ಸತ್ತಾಗ ಆನಂದನ ಬಗ್ಗೆ ಅಂದುಕೊಂಡ – ಅಪವಾದಗಳ ಬಗ್ಗೆ ಅವನಲ್ಲಿ ಏನೂ ಪ್ರತಿಕ್ರಿಯೆಯೇ ವ್ಯಕ್ತವಾಗುವುದಿಲ್ಲ. ಒಂದು ರೀತಿಯಲ್ಲಿ ಇವನು, ಮಿತಭಾಷಿ, ಆನಂದ ಮನೆ ತಲುಪಿದ ಮೇಲೆ ಕಥೆ ನಮ್ಮನ್ನು ಇನ್ನೊಂದು ಘಟ್ಟಕ್ಕೆ ಕೊಂಡೊಯ್ಯುತ್ತದೆ. ಕೇವಲ ಒಂಬತ್ತು ದಿನದ ಆಗಂತುಕನಂತೆ ರಾತ್ರಿ ರಾತ್ರಿಯೇ ಪಲಾಯನ ಮಾಡುವ ಅವನ ವ್ಯಕ್ತಿತ್ವ ಆ ವಾತಾವರಣಕ್ಕೆ ಒಗ್ಗದೆ ಹೋದದನ್ನು ಧ್ವನಿಸುತ್ತದೆ. ಮತ್ತು ಮದುವೆಯ ಬಂಧನಕ್ಕೆ ಸಿಕ್ಕಿಸಲು ತನ್ನ ತಂದೆತಾಯಿಗಳು ನಿಶ್ಚಯಿಸಿರುವುದು ಅವನಿಗೆ ಗೊತ್ತಾದಾಗ ತನ್ನ ತಂಗಿಯ ಹತ್ತಿರ ‘ಮದ್ವೆ ಆಗೋಲ್ಲ’ ಎಂಬ ತನ್ನ ನಿರ್ಧಾರವನ್ನು ವ್ಯಕ್ತಪಡಿಸುತ್ತಾನೆ. ಆದರೆ ಅವನಿಗೆ ಅವನ ತಂಗಿಯನ್ನು ನೋಡಿದಾಗ, “ತಮ್ಮನ ಥರ ಈ ಮಣ್ಯಲ್ಲೇ ಮೂಡಿದಂತೆ” ಅನ್ನಿಸುವುದಿಲ್ಲ. ‘ಇವರೆಲ್ಲ ಈ ನೆಲಕ್ಕೆ ಮಾಡಿದವರು’ ಅಂದುಕೊಂಡ ಅವನು ತನ್ನ ತಂಗಿಯ ಹತ್ತಿರ ‘ನಾನು ನಿನಗೆ ಅಣ್ಣ ಅನ್ನಿಸ್ತಾದ?” ಎಂದು ಕೇಳುವ ಪ್ರಶ್ನೆಗೆ, “ನೀನು ನಿಂಗೆ ಅಣ್ಣಾನೆ ಅಲ್ವಾ?” ಎಂಬ ಪ್ರಶ್ನೆಯನ್ನು ಅವಳಿಂದ ಪಡೆದುಕೊಳ್ಳುತ್ತಾನೆ. ಆ ರಾತ್ರಿಯೇ ಮನೆಯಿಂದ ಎದ್ದು ಹೊರಟುಹೋಗಿದ್ದ ಅವನ ಅಸಹಾಯಕ ಸ್ಥಿತಿಯನ್ನು ಕಥೆಗಾರರು ಕೊಟ್ಟ ಬಳಿಕ ತಂಗಿ ಮಾತ್ರ ಇನ್ನೂ ನಿದ್ದೆಯಿಂದ ಎಚ್ಚೆತ್ತಿರಲಿಲ್ಲ’ ಎಂಬ ತೀವ್ರವಾದ ಪರಿಣಾಮದ ಕಡೆಗೆ ಕಥೆಯ ಸಮಸ್ಯೆಯನ್ನು ಧಾಟಿಸುತ್ತಾರೆ.
ಸಮಕಾಲೀನ ಸಮಸ್ಯೆಗಳಲ್ಲಿ ದಟ್ಟವಾದ ಹಸಿವೂ, ದ್ರಾರಿದ್ರ್ಯ, ಜೀತ, ಮೌಡ್ಯಗಳೂ ಒಂದು. ಇಂತಹ ವಸ್ತುವಾಗುಳ್ಳ ಕಥೆ, ‘ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’. ಇದರ ಕೇಂದ್ರ ವ್ಯಕ್ತಿ ಹೊಲೆಯರ ರಂಗಪ್ಪ, ಇವನ ಹಸಿವಿನ ಜೀವಂತ ಕೊಲೆಯೇ ಇದರ ವಸ್ತು. ಇವನ ಸುತ್ತಾ ಇವನ ಮಗನ, ಹೆಂಡತಿಯ ಹಸಿವಿನ ಸಮಸ್ಯೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ ; “ರಂಗಪ್ಪನಿಗೆ ಒಂದು ಜೋಪಡಿ, ಒಂದು ಹೆಂಡತಿ, ಒಂದು ಆರೇಳು ವರ್ಷದ ಹುಡುಗನನ್ನು ಬಿಟ್ಟರೆ ಅವನದೆನ್ನುವ ಆಸ್ತಿ ಏನೂ ಇಲ್ಲ”. ಅವನು ಹುಟ್ಟಿದಾರಭ್ಯದಿಂದ ಆ ಊರಗೌಡರ ಹೊಲದಲ್ಲಿ ಜೀತ ಮಾಡುತ್ತಾ ಬಂದಿರುವನು. “ಅವನು ಮಾಡೋ ಉಳುಮೆಗೆ ಗೌಡರ ಹಟ್ಟಿ ಕಂಬ ನಿಂತಿದೆ” ಎಂಬುದು ಆ ಮೂಡಲ ಸೀಮೆಯ ಅಂಚಿನ ಊರಿನ ಜನರಲೆಲ್ಲಾ ಪ್ರಚಾರದಲ್ಲಿದೆ. ಈ ಕಥೆ ಅನ್ವರ್ಥವಾಗಿದ್ದು, ಕಾಲ, ಸಂಪ್ರದಾಯದ ದೃಷ್ಟಿಯಿಂದಲೂ ಪ್ರಮುಖವಾಗುತ್ತದೆ.
ಗೌಡರು ಕಂಡೀಷನ್ನಾಗಿ ಕೊಟ್ಟಿದ್ದ ನಾಲ್ಕು ಸೇರು ಜೋಳ ಮುಗಿದು, ಮಗು ಹಸಿದಿರುವ ಸುದ್ದಿ ತಿಳಿದ ರಂಗಪ್ಪ, ಗೌಡರ ಮನೆ ಹತ್ತಿರ ಹೋಗಿಬರುತ್ತೇನೆಂದು ತನ್ನ ಹೆಂಡತಿಗೆ ಹೇಳಿ ಹೊರಟಲ್ಲಿಂದ ಅವನ ಜೀತವನ್ನು ನಿರ್ವಿಕಾರವಾಗಿ ಕಥೆಗಾರರು ಆರು ಹಂತಗಳಲ್ಲಿ ಬೆಳಸಿ, ಏಳನೆಯ ಹಂತದಲ್ಲಿ ಅರ್ಥಪೂರ್ಣವಾದ ಆರಂಭದ ಪ್ರಶ್ನೆಯ ಮೂಲಕ ಮುಕ್ತಾಯ ಮಾಡಿದ್ದಾರೆ.
ರಂಗಪ್ಪ ಗೌಡ್ರಮನೆ ತಲುಪುವವರೆಗೂ ಊರೊಟ್ಟಿನ ಕೆಲಸಗಳಲ್ಲಿ ಎದುರು ಮಾತನಾಡದೆ ಭಾಗಿಯಾಗಲೇ ಬೇಕಾಗುತ್ತದೆ. ಸುಸ್ತಾದ ಅವನು ಆರಾಮಾಗಿ ಬದುಕುವ ಶಾಸ್ತ್ರಿಮೇಷ್ಟ್ರ ಮನೆಯಲ್ಲಿ ನೀರು ಕುಡಿಯುವ ಪ್ರಸಂಗವಂತು ವಸ್ತುನಿಷ್ಟವಾಗಿಯೇ ಇದೆ. ಮೇಷ್ಟ್ರ ಮಗಳು ಶಾರದೆ ನೀರು ಹುಯ್ಯುವ ಮತ್ತು ರಂಗಪ್ಪ ಕೈಬೊಗಸೆಮಾಡಿ ಕುಡಿಯುವ ಸನ್ನಿವೇಶ ಶಾಸ್ತ್ರಿಗಳ ಮಡಿವಂತಿಕೆಯನ್ನು ಸೂಚಿಸುತ್ತದೆ. ಲೇಖಕರು ಕಥೆ ಹೇಳುವ ಧಾಟಿ ಒಂದೇ ಆದರೂ ಭಾಷೆ ಹೇಗೆ ಹಂತಹಂತಗಳಲ್ಲಿ ಪಾತ್ರಕ್ಕೆ, ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ ಎಂಬುದಕ್ಕೆ ಈ ಪ್ರಸಂಗ ಮತ್ತು 3ನೆ ಭಾಗದಲ್ಲಿ ರಂಗಪ್ಪನ ಹೆಂಡತಿ ಮಗ ಮಾತನಾಡಿಕೊಳ್ಳುವ ಪ್ರಸಂಗವೇ ಸಾಕ್ಷಿ. ಮತ್ತು ಇವರಿಬ್ಬರ ಸಂಭಾಷಣೆಯು ಪ್ರಾದೇಶಿಕ ವಾತಾವರಣವನ್ನೂ ಕಲ್ಪಿಸುತ್ತದೆ. ಈ ಕಥೆಯ ಸೌಷ್ಟವ ಕೂಡಾ ವಿಶಿಷ್ಟವಾದದ್ದಾಗಿದೆ.
ಲೇಖಕ ಸೃಷ್ಟಿಸುವ ಪದಗಳ ಹಿಂದೆ ಅವನ ವ್ಯಕ್ತಿತ್ವದ ಆಳವಾದ ಮುದ್ರೆ ಯಾವ ಭಾವತನ್ಮಯತೆಗೂ ಇಲ್ಲಿ ಒಳಗಾಗಿಲ್ಲ. ಇದನ್ನು ಕಾಣಬೇಕಾದರೆ, ಈ ಕಥೆಯಲ್ಲಿನ ಗೌಡರ ಮನೆಯ ಭವ್ಯತೆಯನ್ನು ವರ್ಣಿಸುವಲ್ಲಿ, ‘ರಾಚಿತು’ ಎಂಬ ಶಬ್ದ ಮತ್ತು ಗೌಡರ ವ್ಯಕ್ತಿತ್ವವನ್ನು ಪರಿಚಯಿಸುವಲ್ಲಿ, ‘ಗೌಡರ ಮುಚ್ಚಿ ಕಿರುಬನ ತೋರಿಸಬಹುದು ; ಕಿರುಬನ ಮುಚ್ಚಿ ಗೌಡರ ತೋರಿಸಬಹುದು’ ಎಂಬ ಕೆಲವೇ ಮಾತುಗಳಲ್ಲಿ ಹಿಡಿದಿಟ್ಟಿದ್ದಾರೆ.
ರಂಗಪ್ಪನ ಪೂರ್ವ ನಿಯೋಜನೆಯಂತೆ, ಗೌಡರು ನಂಜನಗೂಡಿಗೆ ಹೊರಟು ಹೋಗಿದ್ದಾಗ ಅವರ ಪತ್ನಿಯಿಂದಲೇ, “ನಾವೇ ಮಾನವಾಗಿ ಬದುಕಿಕೊಂಡು ಹೋಗೋದು ಕಷ್ಟ, ಎಲ್ಲಿಂದ ನಿನಗೆ ತರ್ಲಿ, ಬಂದೋನು ಬಂದಿದ್ದೀಯಾ ಒಂದು ಸೌದೆ ಕೊಂಟಿದೆ ವಸಿ ವಡಕೊಟ್ಟು ಹೋಗು” ಎಂಬ ತಿರಸ್ಕಾರ ಮತ್ತು ಅಧಿಕಾರದ ಪುರಸ್ಕಾರ ದೊರೆತಾಗ ಅವನು ಇದ್ದ ಬದ್ದ ಬಲವನ್ನೆಲ್ಲಾ ಕೊಂಟಿಗೆ ತೊಡಗಿಸ ಬೇಕಾಗುತ್ತದೆ. ಕೊಂಟಿನಲ್ಲಿ ಮೂಡುವ ಗೌಡ್ರು, ನರ್ಸಮ್ಮ, ಶಾಸ್ತ್ರಿಮೇಷ್ಟ್ರು- ರವರ ಚಿತ್ರವಂತು ನಮ್ಮ ಕಥಾಸಾಹಿತ್ಯದಲ್ಲಿಯೇ ಅಪೂರ್ವವಾಗಿದೆ.
ಪಕ್ಕದ ಜಗಲಿಯ ಮೇಲೆ ನರ್ಸಮ್ಮ ಮತ್ತು ಗೌಡರ ಹೆಂಡತಿ ಗೌರಮ್ಮ ಇವರ ಸಂಭಾಷಣೆಯಲ್ಲಿ ವ್ಯಕ್ತವಾಗುವ ಎರಡು ವರ್ಗಗಳ ಅಂತರವನ್ನು ಕಂಡುಕೊಳ್ಳಬಹುದು. ರಂಗಪ್ಪನ ಜನಾಂಗ ಜೀತಮಾಡಿದರೂ ಕೂಳಿಲ್ಲದೆ ತೆರಳ ಬೇಕಾಗುತ್ತದೆ. ಆದರೆ ನರ್ಸಮ್ಮನಂತವರು, ‘ಕಾಳು ಕಡ್ಡಿಯನ್ನು ಕೊಳ್ಳದೆ’ ತಿಂದು ಜೀವಿಸುವಂತ ಪಾತ್ರವಾಗಿದ್ದಷ್ಟೇ ಅಲ್ಲ, ಸಮಾಜದ ಪಾತ್ರವೂ ಹೌದು ಎಂಬುದಕ್ಕೆ ನಿದರ್ಶನವಾಗಿದೆ. ಇಲ್ಲಿಯ ಸಮಸ್ಯೆ ಗಂಭೀರವಾಗಿದ್ದು, ನರ್ಸಮ್ಮನ ಪ್ರಸಂಗವನ್ನು ಕಥೆಗಾರರು ಬಂದಣಿಕೆ ಅನ್ನಿಸದಷ್ಟರ ಮಟ್ಟಿಗೆ ಕಥೆಯಲ್ಲಿ ಮೈಗೂಡಿಸಿದ್ದಾರೆ. ಕೊಂಟು, ಕೊಡಲಿಯ ಮುಂದೆ ಕೂತಿದ್ದ ರಂಗಪ್ಪ ಬೆನ್ನಿಗಂಟಿದ ಹೊಟ್ಟೆಯನ್ನು ಹೊತ್ತು ನೆಲಕ್ಕೆ ಕೈಯೂರಿ ಮೇಲೇಳುವ ಚಿತ್ರವಂತು ನಮ್ಮ ಸಮಾಜದಲ್ಲಿರುವ ವಾಸ್ತವತೆಯ ಪ್ರತೀಕವೇ ಆಗಿದೆ. ಇಲ್ಲಿಯ ರಂಗಪ್ಪನ ಸಮಸ್ಯೆ ವೈಯಕ್ತಿಕವಾಗಿ, ಕಥೆಯ ಸಮಸ್ಯೆ ಸಾಮಾಜಿಕ ಸ್ತರದಲ್ಲಿ ನಿಂತು ಕಲಾತ್ಮಕತೆಯ ಶಿಲ್ಪವನ್ನು ದುಡಿಸಿಕೊಂಡಿದೆ.
ಒಟ್ಟಾರೆ ಸಮಕಾಲೀನ ಸಂದರ್ಭದಲ್ಲಿ ಈ ಕಥೆಗಳ ಶ್ರೇಷ್ಠತೆಗೆ ಗಮನಾರ್ಹವಾದ ಕೆಲವು ಅಂಶಗಳನ್ನು ಹೀಗೆ ಸಂಗ್ರಹಿಸಬಹುದು.
(1) ಈ ಎಲ್ಲಾ ಕಥೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ರೊಚ್ಚಿದೆ; ಆದರೆ ಈ ರೊಚ್ಚು ಸಾಮಾಜಿಕ ಸಂದರ್ಭದಲ್ಲಿ ನಿಸ್ಸಹಾಯಕವಾದದ್ದು.
(2) ಈ ಎಲ್ಲಾ ಕಥೆಗಳು ಪರಿಸರದ ವಿರೋದಾಭಾಸಗಳನ್ನು ವ್ಯಾಖ್ಯಾನಿಸುವುದರ ಜೊತೆಗೆ, ಅದರ ಹಿಂದಿರುವ ಕ್ರೂರತರ ಕಾರಣಗಳನ್ನು ಕೂಡಾ ಸಾಂಸ್ಕೃತಿಕವಾಗಿ ದಾಖಲುಪಡಿಸುತ್ತವೆ.
(3) ಈ ಕಥೆಗಳಲ್ಲಿನ ಸಾಂದ್ರತೆ ಮತ್ತು ಸೌಷ್ಠವತೆಗಳು ಆಧುನಿಕ ಸಾಹಿತ್ಯಕ್ಕೆ ಕೊಟ್ಟ ಪ್ರಮುಖ ಕೊಡುಗೆಗಳಾಗಿವೆ.
(4) ಈ ಕಥೆಗಳಲ್ಲಿನ ಆಶಯ ಮತ್ತು ಅಭಿವ್ಯಕ್ತಿಗಳು ಈ ಕಥೆಗಾರರ ಒಂದೇ ಸೃಜನಶೀಲ ವ್ಯಕ್ತಿತ್ವದ ರೇಖೆಯಲ್ಲಿ ಘಟಿಸುವ ಶಿಲ್ಪಗಳಾಗಿವೆ ; ಇವುಗಳ ಈ ಸಂಬಂಧ ಕೂಡಾ ಕನ್ನಡಕ್ಕೆ ಹೊಸತರದ್ದಾಗಿದೆ.
(5) ಇಲ್ಲಿಯ ಕಥೆಗಳ ‘ಬದುಕು’ ಕನ್ನಡ ಸಾಹಿತ್ಯದಲ್ಲಿಯೇ ವಿಶಿಷ್ಟವಾದದ್ದು; ಈ ವಸ್ತುನಿಷ್ಟ ಬದುಕಿನೊಡನೆಯೇ ಮೈದಾಳುವ ಇಲ್ಲಿಯ ಕಲಾತ್ಮಕತೆ ಇನ್ನೂ ಹೆಚ್ಚು ಗಾಢವಾದದ್ದೇ.
ಇಂಥ ಸಮರ್ಥ ಸಾಹಿತ್ಯಸೃಷ್ಟಿಗೆ ಕಾರಣರಾದ ದೇವನೂರ ಮಹಾದೇವ ಅವರು ನಿಜಕ್ಕೂ ಸ್ವಾಗತಾರ್ಹರಾಗಿದ್ದಾರೆ; ಕನ್ನಡ ಸಾಹಿತ್ಯದ ಸಮೃದ್ಧತೆಗೆ ಕಾರಣರಾದ ತೇಜಸ್ವಿ, ಲಂಕೇಶರಂತೆಯೇ ದೇವನೂರರು ಕೂಡಾ ಇನ್ನೂ ಹೆಚ್ಚು ಸಮರ್ಥವಾದದ್ದನ್ನು ಕನ್ನಡಕ್ಕೆ ಕೊಡಬಲ್ಲರು ಎಂಬ ಕುತೂಹಲವನ್ನು ಓದುಗರಲ್ಲಿ ಹುಟ್ಟಿಸಿದ್ದರೆ ಆಶ್ಚರ್ಯವೇನೂ ಅಲ್ಲ.