ಮಾಯ್ಕಾರ ಮಾದೇವ ಮತ್ತು ವೈಕಂ ಪ್ರಶಸ್ತಿ: ಗಟ್ಟಿಯಾದ ದಕ್ಷಿಣದ ಸಂಬಂಜ-ಅಶ್ವಿನಿ ಬೋಧ್

‌[ಜನವರಿ 2025ರ ‘ಸಂವಾದ’ ಮಾಸಿಕದಲ್ಲಿ ಪ್ರಕಟವಾದ ಬರಹ. ನಮ್ಮ ಮರು ಓದಿಗಾಗಿ…]

ಚಾರಿತ್ರಿಕ ವೈಕಂ ಸತ್ಯಾಗ್ರಹಕ್ಕೆ ನೂರು ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ  ತಮಿಳುನಾಡು ಸರ್ಕಾರ ಶುರು ಮಾಡಿರುವ ಪ್ರಶಸ್ತಿಯು ಮೊಟ್ಟ ಮೊದಲಿಗೆ  ಕನ್ನಡ  ನೆಲದ ಸಾಕ್ಷಿಪ್ರಜ್ಞೆ ಎನಿಸಿರುವ ಸಾಹಿತಿ ಮತ್ತು ಹೋರಾಟಗಾರರಾದ ದೇವನೂರ ಮಹಾದೇವರವರಿಗೆ ಸಂದಿರುವುದು ಮಹತ್ವದ ವಿಚಾರ. ಈ ನಿಟ್ಟಿನಲ್ಲಿ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ದಕ್ಷಿಣ ಭಾರತದ ಹೊಸ ಸಾಂಸ್ಕೃತಿಕ ಎಚ್ಚರದ ಮಹಾಂದೋಲನಕ್ಕೆ ಮುನ್ನುಡಿ ಬರೆದಿವೆ. ಈ ಸಂದರ್ಭದಲ್ಲಿ ನಾವು ವೈಕಂ ಸತ್ಯಾಗ್ರಹದ ಬಗ್ಗೆ ಅಧ್ಯಯನ ಮಾಡಬೇಕಾದ ಅಗತ್ಯವಿದೆ.

 “ಅಸ್ಪೃಶ್ಯರು ದೇವಸ್ಥಾನಕ್ಕೆ ಹೋಗುವ ರಸ್ತೆಗಳಲ್ಲಿ ಹಾದು ಹೋದರೆ ರಸ್ತೆಗಳು ಅಶುದ್ಧವಾಗುತ್ತವೆ ಎಂದು ಅವರು ವಾದಿಸುತ್ತಾರೆ. ವೈಕಂನ ದೇವತೆ ಅಥವಾ ಬ್ರಾಹ್ಮಣರು ಕೇವಲ ಅಸ್ಪೃಶ್ಯರ ಉಪಸ್ಥಿತಿಯಿಂದ ಅಪವಿತ್ರರಾಗಿದ್ದಾರೆಯೇ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ಅವರು ವೈಕಂನ ದೇವರು ಅಶುದ್ಧನಾಗುತ್ತಾನೆ ಎಂದು ನಂಬಿದರೆ, ಆಗ ಅವನು ದೇವರಾಗಲು ಸಾಧ್ಯವಿಲ್ಲ.  ಅದು ಕೇವಲ ಕಲ್ಲು,  ಕೊಳಕು ಬಟ್ಟೆಗಳನ್ನು ತೊಳೆಯಲು ಮಾತ್ರ ಬಳಸಲ್ಪಡುವಂತದ್ದು.” -ಪೆರಿಯಾರ್

ಏನಿದು ವೈಕಂ ಸತ್ಯಾಗ್ರಹ ? 

ಸರಿಯಾಗಿ ಶತಮಾನದ ಹಿಂದೆ ಕೇರಳದ ತಿರುವಾಂಕೂರು ಜಿಲ್ಲೆಗೆ ಸೇರಿರುವ ವೈಕಂ ಎಂಬ ಊರಿನಲ್ಲಿ ನಡೆದ ಹೋರಾಟವಿದು. ರಾಜಪ್ರಭುತ್ವವಿದ್ದ ವೈಕಂ ಪಟ್ಟಣದಲ್ಲಿದ್ದ ಐತಿಹಾಸಿಕ ಮಹಾದೇವನ ದೇವಾಲಯಕ್ಕೆ ಅಲ್ಲಿನ ಶೂದ್ರರು ಹಾಗು ಅಸ್ಪೃಶ್ಯರ ಪ್ರವೇಶವನ್ನು ನಿಷೇಧಿಸಲಾಗಿತ್ತು ಮತ್ತು ದೇವಾಲಯದ ಸುತ್ತಲಿನ ಬೀದಿಗಳು ಕೂಡ ಕೇವಲ ಬ್ರಾಹ್ಮಣರು ಮತ್ತು ರಾಜ ಮನೆತನದ ಸದಸ್ಯರಿಗೆ ಮಾತ್ರ ಮೀಸಲಾಗಿದ್ದವು. ಈ ಪ್ರತ್ಯೇಕತೆಯು ನೂರಾರು ವರ್ಷಗಳ ಕಾಲ ನಡೆದುಕೊಂಡು ಬಂದಿತ್ತು. 1805-06ರಲ್ಲಿ ಈಳವ ಜಾತಿಯ ಇನ್ನೂರು ಯುವಕರು ಇದರ ವಿರುದ್ದ ಬಂಡೆದ್ದರು. ಅವರೆಲ್ಲರೂ ಮಹಾದೇವನ ದೇವಸ್ಥಾನವನ್ನು ಪ್ರವೇಶಿಸಲು ಪ್ರಯತ್ನಿಸಿ  ವಿಫಲವಾದರು. ಆದರೆ, ದೇವಾಲಯ ಪ್ರವೇಶದ ಚಳವಳಿಯೊಂದು ಗರಿಗಟ್ಟಿತು. ನಾರಾಯಣ ಗುರುಗಳ ರೂಪದಲ್ಲಿ ಕ್ರಾಂತಿಯೊಂದು ಮೈತಾಳುವ ಐವತ್ತು ವರ್ಷಗಳ ಮುನ್ನವೇ ಕೇರಳ ಜಾತೀಯತೆಯ ವಿರುದ್ಧದ ದೊಡ್ಡ ಹೋರಾಟಕ್ಕೆ ಸಾಕ್ಷಿಯಾಗಿತ್ತು.

ದಿನೇದಿನೇ  ಬೆಳೆಯುತ್ತಿರುವ ಚಳವಳಿಯ ಬಿಸಿ ದೇವಾಲಯದ ಆಡಳಿತ ವರ್ಗಕ್ಕೆ ತಲೆನೋವಾಗಿ ಪರಿಣಮಿಸಿತು. ಅವರೆಲ್ಲರೂ ಒಟ್ಟುಗೂಡಿ ಅಂದಿನ ದಿವಾನ ಆಗಿದ್ದ ಕ್ರೂರಿ ವೇಲುಥಂಪಿಯನ್ನು ಸಂಪರ್ಕಿಸಿದರು. ದೇವಾಲಯ ಪ್ರವೇಶದ ಚಳವಳಿಯನ್ನು ನಿಗ್ರಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ದಿವಾನ ಭರವಸೆ ನೀಡಿದನು.

ಪ್ರಭುತ್ವದ ಅಡೆತಡೆಗಳ ನಡುವೆಯೂ ಚಳವಳಿಯು ವೇಗಪಡೆದುಕೊಂಡಿತು. ಈಳವರ ಆಧ್ಯಾತ್ಮಿಕ ಹಸಿವು ಜಾತಿ ಅಪಮಾನದ ಜೊತೆ ಸೇರಿ ಕ್ರಾಂತಿಗೆ ಕಾತರಿಸಿತು. ಯುವಕರು ಪೂರ್ವದ ಬಾಗಿಲಿನ ಮೂಲಕ ದೇವಾಲಯವನ್ನು ಪ್ರವೇಶಿಸಲು ತಯಾರಿ ನಡೆಸಿದರು. ಆದರೆ, ದಿವಾನ ಥಂಪಿ ಚಳವಳಿಗಾರರನ್ನು ಸದೆಬಡಿಯಲು ಬೇರೊಂದು ದಾರಿಯನ್ನು ರೂಪಿಸಿದ್ದನು. ದೇವಸ್ಥಾನದಿಂದ 150 ಮೀಟರ್ ದೂರದಲ್ಲಿದ್ದ “ದಲ್ವಕುಲಂ” ಎಂಬ ಕೊಳದ ಬಳಿ ತನ್ನ ನಂಬಿಕಸ್ಥ ನಾಯರ್ ಜಾತಿಯವರಾದ ಕುಂಜು ಕುಟ್ರುತಿ ಪಿಳ್ಳೈ ಮತ್ತು ವೈಕಂನ ಪಾಪನವ ಪಿಳ್ಳೈ ನೇತೃತ್ವದಲ್ಲಿ ಡಜನ್ ಗಟ್ಟಲೆ ಶಸ್ತ್ರ ಸಜ್ಜಿತ ಸೈನಿಕರನ್ನು ನಿಲ್ಲಿಸಿದನು.

ವೈಕಂ ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ಭಕ್ತರು ದಲ್ವಾ ಕುಲಂನಲ್ಲಿ ಸ್ನಾನಮಾಡುವುದು ಸಂಪ್ರದಾಯವಾಗಿತ್ತು. ಈಳವ ಯುವಕರು ದೇವಾಲಯದ ಕಡೆಗೆ ತಮ್ಮ ಶಾಂತಿಯುತ ಮೆರವಣಿಗೆಯನ್ನು ಪ್ರಾರಂಭಿಸಿದಾಗ, ಕುಂಜುಕುಟ್ರಿ ಪಿಳ್ಳೈ ಕಡೆಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಇದರ ಪರಿಣಾಮವಾಗಿ ನಿರಾಯುಧರಾದ ಹತ್ತಾರು ಚಳವಳಿಗಾರರು ಸಾವನ್ನಪ್ಪಿದರು ಮತ್ತು ಹಲವರಿಗೆ ಗಾಯವಾಯಿತು. ಮೃತದೇಹಗಳನ್ನು ಕೊಳಕ್ಕೆ ಎಸೆಯಲಾಯಿತು.ಇ ದು “ದಲ್ವಕುಲಂ ಹತ್ಯಾಕಾಂಡ” ಎಂದು ಕರೆಯಲ್ಪಟ್ಟಿತು. ಇದು ಕೇರಳದ ಇತಿಹಾಸದಲ್ಲಿ ಕಪ್ಪು ಅಧ್ಯಾಯವಾಗಿ ದಾಖಲಾಯಿತು ಹಾಗು ಮುಂದೆ ಎರಡು ದಶಕಗಳ ನಂತರ ನಡೆದ ʼವೈಕಂ ಸತ್ಯಾಗ್ರಹʼಕ್ಕೆ ಮುನ್ನುಡಿಯಾಯಿತು.

ವೈಕಂನಲ್ಲಿ ನಡೆದ ಆಧ್ಯಾತ್ಮಿಕ ಹಸಿವಿನ ಅಹಿಂಸಾ ಚಳವಳಿಯೊಂದು ನರಮೇಧವಾಗಿ ದನಿಯಿಲ್ಲದವರ ಬದುಕುಗಳನ್ನು ಮುಕ್ಕಿದ್ದರ ಹಿಂದೆ ಶತಮಾನಗಳ ವೈದಿಕ ಧಾರ್ಮಿಕ ಪ್ರತಿಕ್ರಾಂತಿ ಇದೆ. ಇದಾದ ನಂತರ ಕೇರಳದಲ್ಲಿ ಹಲವು ವರ್ಷಗಳವರೆಗೂ ಬ್ರಾಹ್ಮಣ್ಯದ ವಿರುದ್ದ, ಜಾತಿ ತಾರತಮ್ಯದ ವಿರುದ್ಧ ಹೋರಾಟಗಳು ನಡೆದವು. ಸಾರ್ವಜನಿಕ ಸ್ಥಳಗಳು ಎಲ್ಲಾ ಜಾತಿ, ಧರ್ಮ, ಲಿಂಗದ ಜನರಿಗೂ ಸೇರಿದವು ಎಂಬ ಸ್ವಾಭಿಮಾನದ, ಘನತೆಯ, ಸಮಾನತೆಯ, ನ್ಯಾಯದ ಅಂಶಗಳನ್ನಿಟ್ಟುಕೊಂಡು ಹೋರಾಟಗಳು ಮುಂದುವರೆಯುತ್ತಲೇ ಬಂದವು.

ಈ ಅರಿವಿನ ಭಾಗವಾಗಿ ವೈಕಂ ಸತ್ಯಾಗ್ರಹವು 1924-25ರಲ್ಲಿ ಅಹಿಂಸಾತ್ಮಕ ಚಳವಳಿಯಾಗಿ ಮತ್ತೆ ರೂಪತಾಳಿತು. ಇದು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ಧ ನಡೆದ ಭಾರತದ ಆರಂಭಿಕ ಜನ ಚಳವಳಿಗಳಲ್ಲಿ ಪ್ರಮುಖವಾದುದು. ಈ ಚಳವಳಿಯ ಪ್ರಮುಖ ನಾಯಕರು ಕೆ.ಕೇಳಪ್ಪನ್, ಟಿ.ಕೆ.ಮಾಧವನ್, ಮತ್ತು ಕೆ.ಪಿ.ಕೇಶವ ಮೆನನ್. ಭಾರತದ ಬಹುಮುಖ್ಯ ದ್ರಾವಿಡ ಹೋರಾಟಗಾರ ಪೆರಿಯಾರ್‌ ರಾಮಸ್ವಾಮಿ ಅವರ ಭಾಗವಹಿಸುವಿಕೆಯಿಂದ ವೈಕಂ ಚಳವಳಿ ತಮಿಳುನಾಡಿನ ಭಾಗವಾಯಿತು. ಮತ್ತು ಗಾಂಧೀಜಿಯವರ ಬೆಂಬಲವೂ ಸಿಕ್ಕಿದ್ದರಿಂದ ಇದೊಂದು ರಾಷ್ಟ್ರೀಯ ಚಳವಳಿಯಾಗಿ ಚರಿತ್ರಾರ್ಹವಾಯಿತು. ಈ ಎರಡೂ ಕಾರಣಗಳಿಂದ ಈ ಚಳವಳಿಗೆ ದೇಶವ್ಯಾಪಿ ಸಾರ್ವಜನಿಕ ಬೆಂಬಲ ವ್ಯಕ್ತವಾಯಿತು. ವೈಕಂ ಸತ್ಯಾಗ್ರಹವು ತಕ್ಷಣವೇ ತನ್ನ ಉದ್ದೇಶಗಳನ್ನು ಸಾಧಿಸದಿದ್ದರೂ ಭಾರತದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಭವಿಷ್ಯದ ಚಳವಳಿಗಳಿಗೆ ಅಡಿಪಾಯವನ್ನು ಹಾಕಿತು.

ವೈಕಂ ಮತ್ತು ಪೆರಿಯಾರ್‌:

ವೈಕಂ ಚಳವಳಿಗೆ ಪೆರಿಯಾರರ ಕೊಡುಗೆ ಅಪಾರವಾದುದು. ಅವರ ಕಾರಣಕ್ಕೆ ಚಳವಳಿ ಬಿರುಸಾಗಿ ಸಾಗುತ್ತದೆ. ವೈಕಂ ಚಳವಳಿಯ ಕಾರಣಕ್ಕೆ ಯಾರಾದರೂ ಹೆಚ್ಚು ಸಲ ಸೆರೆಮನೆವಾಸಕ್ಕೆ ಹೋಗಿದ್ದಾರೆ ಎಂದರೆ ಅದು ಪೆರಿಯಾರರು. ಇವರು ಜೈಲಿನಲ್ಲಿ ಕಳೆದ 74 ದಿನಗಳು ಸೇರಿದಂತೆ ಒಟ್ಟು 141 ದಿನಗಳನ್ನು ವೈಕಂ ಹೋರಾಟದಲ್ಲಿ ಕಳೆದರು ಎಂದು ದಾಖಲೆಗಳು ತಿಳಿಸುತ್ತವೆ.

ಇನ್ನೂ ವಿಶೇಷ ಎಂದರೆ ಪೆರಿಯಾರರು ಜೈಲಿಗೆ ಹೋದಾಗ ಅವರ ಹೋರಾಟವನ್ನು ಅವರ ಮಡದಿ ನಾಗಮ್ಮಾಯಿ ಮತ್ತು ಸಹೋದರಿಯಾದ ಕಣ್ಣಮ್ಮಾಳ್‌ ಅವರು ಮುಂದುವರೆಸುತ್ತಾರೆ. ಇವರ ಜೊತೆಗೆ ವೈಕಂ ಹೋರಾಟಗಾರರ ಮನೆಯ ಮಹಿಳೆಯರು ಸಹ ಕೈಜೋಡಿಸುವುದು ಬಹಳ ವಿಶೇಷ ಸಂಗತಿ. ಮತ್ತು ಆಧ್ಯಾತ್ಮಿಕ ಹೋರಾಟದಲ್ಲಿ ಮಹಿಳೆಯರ ಕೊಡುಗೆಯನ್ನು ವೈಕಂ ಸತ್ಯಾಗ್ರಹ ಸಾರುತ್ತದೆ.

ನಂತರದ ದಿನಗಳಲ್ಲಿ ವೈಕಂ ಪ್ರದೇಶಕ್ಕೆ ಭೇಟಿ ನೀಡುವ ಗಾಂಧೀಜಿ ಅಹಿಂಸಾತ್ಮಕವಾಗಿ ನಡೆಯುತ್ತಿದ್ದ ಸತ್ಯಾಗ್ರಹಕ್ಕೆ ತಮ್ಮ ಬೆಂಬಲ ಸೂಚಿಸಿ ಮಹಾದೇವನ ದೇವಸ್ಥಾನದಲ್ಲಿ ಪೂಜೆಮಾಡುತ್ತಿದ್ದ ಸವರ್ಣೀಯರ ಜೊತೆ ಮತ್ತು ತಿರುವಾಂಕೂರಿನ ರೀಜೆಂಟ್ ಮಹಾರಾಣಿ ಸೇತುಲಕ್ಷ್ಮಿಬಾಯಿ ಜೊತೆಗೆ ಮಧ್ಯಸ್ಥಿಕೆಯ ಮಾತುಕತೆಗಳನ್ನು ನಡೆಸುತ್ತಾರೆ. ಗಾಂಧೀಜಿ ಆ ಬ್ರಾಹ್ಮಣರ ಜೊತೆ ಮಾತುಕತೆ ನಡೆಸಲು ಹೋದಾಗ ಅವರನ್ನು ಹೊರಗೆ ಜಗುಲಿಯ ಮೇಲೆ ಕೂರಿಸಿ ತಾವು ಮನೆಯ ಒಳಗೆ ಕೂತು ಮಾತನಾಡಿಸಿ ಕಳಿಸುತ್ತಾರೆ. ಅಸ್ಪೃಶ್ಯರಿಗೆ ಪ್ರವೇಶ ನಿಷಿದ್ಧವಾಗಿದ್ದ ನಾಲ್ಕು ರಸ್ತೆಗಳಲ್ಲಿ ಮೂರು ರಸ್ತೆಗಳನ್ನು ಗಾಂಧೀಜಿಯವರ ಮಾತುಕತೆಯ ನಂತರ ತೆರೆಯಲಾಗುತ್ತದೆ. ಆದರೆ ಇದು ಪೆರಿಯಾರರಿಗೆ ಸರಿಕಾಣುವುದಿಲ್ಲ. ಇದು ನಮ್ಮ ಸಾಮಾಜಿಕ ನ್ಯಾಯದ ಪ್ರಶ್ನೆ, ಸಮಾನತೆಯ ಪ್ರಶ್ನೆ. ಎಲ್ಲಾ ರಸ್ತೆಗಳು ಎಲ್ಲರಿಗೂ ಮುಕ್ತವಾಗಿ ಓಡಾಡಲು ಲಭ್ಯವಾಗಬೇಕು. ಅಲ್ಲಿಯವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂಬ ಅಚಲ ನಿರ್ಧಾರವನ್ನು ವ್ಯಕ್ತಪಡಿಸುತ್ತಾರೆ. ಕೊನೆಗೆ ಹೋರಾಟ ನವೆಂಬರ್ 30, 1925ರಂದು ಯಶಸ್ವಿಯಾಗಿ ಕೊನೆಗಾಣುತ್ತದೆ.  ಆ ಪ್ರದೇಶದ ಎಲ್ಲರೂ ಎಲ್ಲಾ ರಸ್ತೆಗಳಲ್ಲಿ ಓಡಾಡುವ ಹಕ್ಕನ್ನು ವೈಕಂ ಸತ್ಯಾಗ್ರಹ ಸಾಧಿಸುತ್ತದೆ.

ನವೆಂಬರ್ 29, 1925ರಂದು ವೈಕಂ ಸತ್ಯಾಗ್ರಹದ ವಿಜಯೋತ್ಸವದ ಸಂದಂರ್ಭದಲ್ಲಿ ಮಾಡಿದ ಕೊನೆಯ ಭಾಷಣದಲ್ಲಿ ಪೆರಿಯಾರ್  ಮಾತನಾಡುತ್ತಾ ಹೀಗೆ ಹೇಳುತ್ತಾರೆ :

“ಸತ್ಯಾಗ್ರಹದ ಉದ್ದೇಶವು ನಾಯಿಗಳು ಮತ್ತು ಹಂದಿಗಳಂತಹ ಪ್ರಾಣಿಗಳಿಗೆ ತೆರೆದಿರುವ ಬೀದಿಗಳಿಗೆ ಪ್ರವೇಶವನ್ನು ಪಡೆಯುವುದಷ್ಟೇ ಅಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿ ಸಹಜೀವಿಗಳ ನಡುವೆ ಯಾವುದೇ ವ್ಯತ್ಯಾಸ ಇರಬಾರದು. ನಾವು ಈಗ ಬೀದಿಗಾಗಿ ಗೆದ್ದಿರುವ ಅದೇ ಸ್ವಾತಂತ್ರ್ಯವನ್ನು ದೇವಸ್ಥಾನದ ಒಳಗೂ ಖಾತ್ರಿಪಡಿಸುವುದು ನಮ್ಮ ಜವಾಬ್ದಾರಿಯಾಗಿದೆ.” ಎನ್ನುತ್ತಾರೆ.

(“The Satyagraha’s motive is not to gain access to the streets open to animals like dogs and pigs. But there shouldn’t be any difference between fellow human beings in public life. It is our responsibility to ensure the same freedom inside the temple that we have now won for the street.”)

ಪೆರಿಯಾರ್ ಇದನ್ನು “ಮನುಷ್ಯರ ಸಮಸ್ಯೆ” ಎಂದು ನೋಡಿದರೆ,  ಮಹಾತ್ಮ ಗಾಂಧಿಯವರು ಇದನ್ನು ಮುಖ್ಯವಾಗಿ “ಧರ್ಮದ ಸಮಸ್ಯೆ” ಎಂದು ನೋಡಿದರು.

ವೈಕಂ ಸತ್ಯಾಗ್ರಹ ಕೇರಳ ಮತ್ತು ತಮಿಳುನಾಡುಗಳಲ್ಲಿ ಹೋರಾಟದ ರಹದಾರಿಯೊಂದನ್ನು ತೆರೆಯುತ್ತದೆ. ಜಾತಿಯ ಕಾರಣಕ್ಕೆ ದೇವಾಲಯಗಳಿಗೆ ಪ್ರವೇಶ ಇಲ್ಲದಿದ್ದ ಬಹಳಷ್ಟು ಪ್ರದೇಶಗಳ ಜನರು ವೈಕಂ ಮಾದರಿಯ ಹೋರಾಟವನ್ನು ಕೈಗೆತ್ತಿಕೊಳ್ಳುತ್ತಾರೆ. ಅವುಗಳಲ್ಲಿ ಗುರುವಾಯೂರು ಸತ್ಯಾಗ್ರಹ ಪ್ರಮುಖವಾದುದು. ಕೇರಳದ ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಕೆಳಜಾತಿಯ ಜನರ ಪ್ರವೇಶಕ್ಕೆ ಅವಕಾಶಕ್ಕಾಗಿ ಒತ್ತಾಯಿಸಿ 1931ರಲ್ಲಿ ನಡೆದ ಚಳವಳಿಯಲ್ಲಿ ವೈಕಂ ಚಳವಳಿಯ ಮುಂಚೂಣಿಯಲ್ಲಿದ್ದ ಕೆ.ಕೇಳಪ್ಪನ್ ಮತ್ತು ಮನ್ನತ್ತು ಪದ್ಮನಾಭನ್ ಮುಖ್ಯ ಹೋರಾಟಗಾರರಾಗಿ ಭಾಗವಹಿಸುತ್ತಾರೆ.

ವೈಕಂ ಸತ್ಯಾಗ್ರಹದ ನಂತರ ಸುಸೀಂದ್ರಂ (1926), ಮೈಲಾಡುತುರೈ (ಹಿಂದಿನ ಮಾಯಾವರಂ) (1927), ಈರೋಡ್ (1929) ಮತ್ತು ಮಧುರೈ ದೇವಸ್ಥಾನ ಪ್ರವೇಶ ಚಳವಳಿ (1931-32)ಗಳು ನಡೆದು ಯಶಸ್ವಿಯಾಗುತ್ತವೆ. ಈ ಚಳವಳಿಗಳ ನೇತೃತ್ವವನ್ನು ಬಹುತೇಕ ಅಂದಿನ ಕಾಂಗ್ರೆಸ್ ನಾಯಕರು ವಹಿಸಿದ್ದು ವಿಶೇಷ.

ಇವೆಲ್ಲಾ ಹೋರಾಟಗಳು ಮಹಾರಾಷ್ಟ್ರದ ಮಹಾಡ್‌ ಹೋರಾಟ ನಡೆದ ಸಂದರ್ಭದಲ್ಲಿಯೇ ನಡೆದದ್ದು ಇನ್ನೂ ವಿಶೇಷ. ಅಲ್ಲಿ ಬಾಬಾಸಾಹೇಬ್‌ ಅಂಬೇಡ್ಕರರು ಅಸ್ಪೃಶ್ಯರಿಗೆ ಹಿಂದೂ ದೇವತೆಗಳ ಪೂಜೆಯ ಅಗತ್ಯವಿಲ್ಲವೆಂದು ಸಾರಿದರೂ ಅವರ ಸಾಮಾಜಿಕ ಆತ್ಮಗೌರವಕ್ಕಾಗಿ ಮಹಾಡ್‌ ಸತ್ಯಾಗ್ರಹ ಕೈಗೊಳ್ಳುತ್ತಾರೆ. ಇದು ಭಾರತದ ಬಹುದೊಡ್ಡ ದೇವಸ್ಥಾನ ಪ್ರವೇಶ ಚಳವಳಿಯಾಗಿದೆ.

ಇಂದಿಗೂ ನಡೆಯುತ್ತಿರುವ ದೇವಸ್ಥಾನ ಪ್ರವೇಶ ಚಳವಳಿಗಳು:

ಈ ದೇವಸ್ಥಾನ ಪ್ರವೇಶದ ಚಳವಳಿಗಳು ಇವತ್ತಿಗೂ ನಡೆಯುತ್ತಿರುವುದನ್ನು ನೋಡಿದರೆ ಭಾರತದ ಜಾತಿವ್ಯವಸ್ಥೆ ಎಷ್ಟು ಗಟ್ಟಿಯಾದುದು ಎಂದು ಅರ್ಥವಾಗುತ್ತದೆ. ಈಗೀಗ ಹಿಂದೂಗಳೊಳಗಿನ ಅಸ್ಪೃಶ್ಯ ಶೂದ್ರರನ್ನು ದೇವಸ್ಥಾನಗಳ ಒಳಗೆ ಬಿಟ್ಟುಕೊಳ್ಳುವ ವ್ಯವಸ್ಥೆ ಅವರನ್ನೆ ಮುಂದಿಟ್ಟುಕೊಂಡು ದಲಿತರನ್ನು ಹೊರಗೆ ನಿಲ್ಲಿಸುವ ಪರಿಪಾಠ ಬೆಳೆಸಿಕೊಂಡಿದೆ. ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸುವ ಅಥವಾ ಪ್ರವೇಶಿಸಿದ ದಲಿತರನ್ನು ಕೊಲ್ಲುವ, ಹಲ್ಲೆ ಮಾಡುವ ನೂರಾರು ಪ್ರಕರಣಗಳು ನಡೆಯುತ್ತಿವೆ.

ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ಆಚರಣೆಗಳನ್ನು ನಿಷೇಧಿಸಿದೆ. ಸಂವಿಧಾನದ ಆರ್ಟಿಕಲ್‌ 14 ಸಮಾನತೆಯಿಂದ ಜೀವಿಸುವ ಹಕ್ಕನ್ನು ನೀಡಿದೆ. ಸಮಾನತೆ, ಸ್ವಾತಂತ್ರ್ಯ, ಘನತೆಯ ಮೌಲ್ಯಗಳನ್ನು ಭಾರತದ ಜನತೆ ಪಾಲಿಸಬೇಕು ಎಂದು ಹೇಳುತ್ತದೆ. ಆದರೆ ಇದಾವುದೂ ಜಾತ್ಯಸ್ಥ ಸಮಾಜದ ಜನರಿಗೆ ಅರ್ಥವಾಗದೆ ಇರುವುದು, ಅರ್ಥವಾದರೂ ಜಾತಿಮದದಲ್ಲಿ ಜಾಣ ಕುರುಡುತನವನ್ನು ಸಾಧಿಸುವುದನ್ನು ಕಾಣಬಹುದು. ಕರ್ನಾಟಕದ ದಲಿತ ಸಂಘರ್ಷ ಸಮಿತಿಯ ಹೋರಾಟಗಾರರು ಕಳೆದ ಐವತ್ತುವರ್ಷಗಳಲ್ಲಿ ಊರೂರು, ಕೇರಿಕೇರಿಗಳನ್ನು ತಲುಪಿ ಘನತೆಯ, ಸಮಾನತೆ ಪಾಠ ಮಾಡಿರುವ ಕಾರಣಕ್ಕೆ ದೇಶದ ಬಹುಜನರು ದೇವಾಲಯ ಪ್ರವೇಶ, ಸಮಾನಶಿಕ್ಷಣದಂತಹ ವಿಷಯಗಳನ್ನು ಭಿನ್ನವಾಗಿ ಕಾಣುವ ಹಾಗೂ ಜಾತಿ ತಾರತಮ್ಯದ ಮುಕ್ತಿಗಾಗಿ ಹೋರಾಟ ಮಾಡುವ ಶಕ್ತಿ ಸಂಚಯಿಸಿಕೊಂಡಿದ್ದಾರೆ.

ದೇವನೂರ ಮಹಾದೇವರಿಗೆ ವೈಕಂ ಪ್ರಶಸ್ತಿ:ಅವೈದಿಕ ಹೋರಾಟದ ಹೊಸಹಾದಿ:

ವೈಕಂ ಸತ್ಯಾಗ್ರಹಕ್ಕೆ ನೂರು ವರ್ಷಗಳು ತುಂಬಿದ ಕಾರಣಕ್ಕಾಗಿ ಒಂದು ಪ್ರಶಸ್ತಿಯನ್ನು ಸ್ಥಾಪಿಸುವುದಾಗಿ ಕಳೆದ ವರ್ಷ ಪ್ರಕಟಿಸಿದ್ದ ತಮಿಳುನಾಡು ಸರ್ಕಾರ ಮೊದಲ ಪ್ರಶಸ್ತಿಯನ್ನು ಕೇರಳ ಸರ್ಕಾರದ ಜೊತೆಗೂಡಿ ಕರ್ನಾಟಕದ ಸಾಕ್ಷಿಪ್ರಜ್ಞೆ ದೇವನೂರ ಮಹಾದೇವ ಅವರಿಗೆ ನೀಡಿರುವುದು ದಕ್ಷಿಣ ಭಾರತದ ಅವೈದಿಕ ಹೋರಾಟಕ್ಕೆ ದೊಡ್ಡಮೈಲಿಗಲ್ಲಾಗಿದೆ. ಇದೇ ಸಂದರ್ಭದಲ್ಲಿ ಪೆರಿಯಾರರ ನೆನಪಿನ ಸ್ಮಾರಕವನ್ನೂ ನಿರ್ಮಿಸಿರುವುದು ಈ ಸಂಬಂಧದ ಮಹತ್ವವನ್ನು ಹೆಚ್ಚಿಸಿದೆ. ಯಾವ ಪ್ರಶಸ್ತಿ ಬಂದರೂ ಮೊದಲಿಗೆ ನಿರಾಕರಿಸುವ ದೇವನೂರ ಮಹಾದೇವ ʼವೈಕಂ ಪ್ರಶಸ್ತಿʼಯನ್ನು ಸ್ವೀಕರಿಸಿರುವುದು ಸಹ ಈ ಹೋರಾಟದ ಭಾಗವೇ ಆಗಿದೆ.

ಕರ್ನಾಟಕದ ಸಾಮಾಜಿಕ ಚಳವಳಿಗಳಲ್ಲಿ ಬಹುಮುಖ್ಯವಾದ ದಲಿತ ಚಳವಳಿಯನ್ನು ಮುನ್ನಡೆಸಿದ ದೇವನೂರರು ಸೃಜನಶೀಲ ಸಾಹಿತ್ಯದಲ್ಲಿಯೂ ದೇಶವ್ಯಾಪಿ ಹೆಸರು ಮಾಡಿದವರು. ದಲಿತ ಸಂವೇದನೆಯ ಸಾಹಿತ್ಯ ನಿರ್ಮಿತಿಯ ರೂಪಕಾತ್ಮಕ ಮಾದರಿಯೊಂದನ್ನು ಸೃಷ್ಟಿಸಿದ ಅವರು ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜಕಾರಣದಲ್ಲಿ ಬಹುಮುಖ್ಯ ಪಾತ್ರವಹಿಸಿದರು. ರಾಜ್ಯ ರೈತಸಂಘ ಮತ್ತು ದಲಿತ ಸಂಘರ್ಷ ಸಮಿತಿಗಳನ್ನು ಒಟ್ಟುಗೂಡಿಸಿ ಜನರ ಸಂಕಷ್ಟಗಳಿಗೆ ಹೊಸಕಾಲದ ಪ್ರತಿಭಟನಾತ್ಮಕ ನೆಲೆಯೊಂದನ್ನು ಕಂಡುಕೊಳ್ಳಲು ಶ್ರಮಿಸಿದರು. ಈ ಹಿನ್ನೆಲೆಯಲ್ಲಿ ಅವರು ಮುಂಚೂಣಿಯಲ್ಲಿದ್ದ ಸರ್ವೋದಯ ಕರ್ನಾಟಕ ರಾಜಕೀಯ ಪಕ್ಷ ಹಾಗೂ ಜನಾಂದೋಲನಗಳ ಮಹಾಮೈತ್ರಿ- ರಾಜ್ಯದ ಸಾಮಾಜಿಕ ಹೋರಾಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದವು. ಈ ಹೋರಾಟದ ಭಾಗವಾಗಿ ಫ್ಯಾಸಿಸ್ಟ್‌ ಶಕ್ತಿಗಳನ್ನು ಸೋಲಿಸುವ ಬಹುಜನರ ಇಚ್ಛಾಶಕ್ತಿ ಸಫಲಗೊಂಡಿತಲ್ಲದೆ ರಾಷ್ಟ್ರ ರಾಜಕಾರಣಕ್ಕೆ ದೊಡ್ಡ ಸಂದೇಶವನ್ನು ನೀಡಿತು. ಇತರ ರಾಜ್ಯಗಳು ಕರ್ನಾಟಕದ ಈ ಮಾದರಿಯನ್ನು ಅಧ್ಯಯನ ಮಾಡುವಂತಾಯಿತು.

ದೇವನೂರರು ತಮ್ಮ ರಾಜಕೀಯ- ಸಾಂಸ್ಕೃತಿಕ ಹೋರಾಟದ ಭಾಗವಾಗಿ ಬರೆದ ʼಆರ್‌ಎಸ್‌ಎಸ್‌ ಆಳ- ಅಗಲʼ ಕಿರುಪುಸ್ತಿಕೆಯು ಕೋಮುವಾದಿ ರಾಜಕಾರಣದ ಬಣ್ಣ ಬಯಲು ಮಾಡಿತಲ್ಲದೆ, ಫ್ಯಾಸಿಸ್ಟ್‌ ಶಕ್ತಿಗಳ ವಿರುದ್ಧ ಅಭಿಪ್ರಾಯ ರೂಪಿಸಿಕೊಳ್ಳುವ, ವಿರೋಧಿಸುವ ಹಾಗೂ ಅವರ ವಿರುದ್ಧ ಸಂಘಟಿತರಾಗುವ ಹೊಸದಾರಿಗಳನ್ನು ಕಾಣಿಸಿತು. ಕೆಲವೇ ತಿಂಗಳುಗಳಲ್ಲಿಇಂಗ್ಲಿಷ್‌ ಸೇರಿದಂತೆ ಇತರೆ ರಾಜ್ಯಗಳ ಭಾಷೆಗಳಿಗೆ ತರ್ಜುಮೆಗೊಂಡು ಲಕ್ಷಾಂತರ ಜನ ಓದಿದ ಈ ಪುಸ್ತಿಕೆ ದೇವನೂರರು ಬರೆದ ಕಾರಣಕ್ಕೇ ಬಹುಮುಖ್ಯ ಎಂದೆನಿಸಿತು.

ದೇವನೂರ ಮಹಾದೇವರು ವೈಕಂ ಪ್ರಶಸ್ತಿ ಸ್ವೀಕರಿಸುವ ಹೊತ್ತಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್‌ ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ರವರಿಗೆ ತಾವು ಬರೆದ ʼಆರ್‌ಎಸ್‌ಎಸ್‌ ಆಳ ಅಗಲʼ ಕೃತಿಯನ್ನು ನೀಡಿದ್ದು ಕರ್ನಾಟಕದ ದಶಕಗಳ ಸಾಂಸ್ಕೃತಿಕ ಎಚ್ಚರವು ತಮಿಳುನಾಡಿನ ದ್ರಾವಿಡ ಚಳವಳಿ ಹಾಗೂ ಕೇರಳದ ಜಾತಿ ವಿನಾಶ ಚಳವಳಿಯನ್ನು ಬೆಸೆಯಬಲ್ಲದು ಎಂಬ ಸಂದೇಶವಾಗಿದೆ. ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ದೇವನೂರರು ದಕ್ಷಿಣದ ನಾಲ್ಕೂ ರಾಜ್ಯಗಳ ಸಾಂಸ್ಕೃತಿಕ ಎಚ್ಚರವು ಮುಂಬರುವ ವಿರಾಟ್‌ ಫ್ಯಾಸಿಸ್ಟ್‌ ಶಕ್ತಿಗಳನ್ನು ಎದಿರುಗೊಳ್ಳುವ ಸಂಕಲ್ಪಿತ ಹೋರಾಟದ ಆಶಯವನ್ನು ಒಡನಾಡಿಗಳೊಂದಿಗೆ ವ್ಯಕ್ತಪಡಿಸಿದ್ದಾರೆ.  ಐದು ದಶಕಗಳ ದಲಿತ ಹೋರಾಟ, ಕರ್ನಾಟಕದ ಸಾಮಾಜಿಕ ಪರಿಸರದಲ್ಲಿ ಉಂಟುಮಾಡಿರುವ ಎಚ್ಚರದ ಹಿಂದೆ ಆಂದ್ರ, ತಮಿಳುನಾಡು, ಕೇರಳ ರಾಜ್ಯಗಳ ಜಾತಿವಿನಾಶದ ಚಳವಳಿಗಳ ಪ್ರಭಾವ ಇಲ್ಲದಿಲ್ಲ. ಇದೀಗ ಈ ಕಾಲದ ಹೊಸ ಎಚ್ಚರದ ಹೋರಾಟಕ್ಕೆ ಈ ಮೂರೂ ರಾಜ್ಯಗಳು ಕರ್ನಾಟಕದ ಮಾದರಿಯನ್ನು ಅನುಸರಿಸುತ್ತಿರುವುದರ ಹಿಂದೆ ದೇವನೂರ ಮಹಾದೇವ ಅವರ ಶ್ರಮವಿದೆ ಹಾಗೂ ಅವರಂತೆ ನಾಡಿನ ಅಸಂಖ್ಯ ಚಳವಳಿಗಾರರ ಕೊಡುಗೆಯಿದೆ.

ಪೆರಿಯಾರರ ಹೋರಾಟದ ಆಶಯಗಳನ್ನು ಹೊತ್ತು ಐವತ್ತು ವರ್ಷ ಸಾಗಿದ ದಲಿತ ಸಂಘರ್ಷ ಸಮಿತಿಯ ಮುಂಚೂಣಿಯ ಕಾರ್ಯಕರ್ತರೊಬ್ಬರಿಗೆ ಪೆರಿಯಾರರ ಆಶಯಗಳ ಪ್ರಶಸ್ತಿ ಸಿಕ್ಕಿರುವುದು ಈ ಕಾಲದ ದೊಡ್ಡ ಸಂದೇಶವಾಗಿದೆ. ಈ ʼಸಂಬಂಜವನ್ನು ದೊಡ್ಡದುʼ ಮಾಡುವ ಅವಕಾಶವನ್ನು ಕನ್ನಡಿಗರು ಬಿಟ್ಟು ಕೊಡಬಾರದು.

ಈಗ ಕರ್ನಾಟಕಕ್ಕೆ ಸಂದಿರುವ ವೈಕಂ ಪ್ರಶಸ್ತಿ ದಕ್ಷಿಣ ಭಾರತದ ಒಗ್ಗಟ್ಟಿನ ಇನ್ನೊಂದು ಮಜಲಿಗೆ ಪುಷ್ಟಿ ನೀಡುತ್ತಿದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಈ ಹೊಸ ಒಡಬಂಡಿಕೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತೋರಬಹುದಾದ ಪ್ರಬುದ್ಧತೆಯ ಸಾಧ್ಯತೆಗಳನ್ನು ಹೇಳುತ್ತಿದೆ. ಪ್ರಸ್ತುತ ಭಾರತ ಎದುರಿಸುತ್ತಿರುವ ಕೋಮುವಾದಿ, ಆರ್ಥಿಕ ಹಾಗೂ ಸಾಮಾಜಿಕ ದಾಳಿಯನ್ನು ಸಂವಿಧಾನಾತ್ಮಕ ಹೋರಾಟದಿಂದ ಹಿಮ್ಮೆಟ್ಟಿಸುವ ಕೂಡು ಚಳವಳಿಗೆ ʼವೈಕಂ ಪ್ರಶಸ್ತಿʼ ದಾರಿ ಮಾಡಿಕೊಟ್ಟಿದೆ.